ಹೆದ್ದಾರಿಗಳಲ್ಲಿ ಅಥವಾ ಜನದಟ್ಟಣೆಯ ರಸ್ತೆಯಲ್ಲಿ ಸುಗಮವಾಗಿ ಓಡುತ್ತಿದ್ದ ಕಾರುಗಳು ಏಕಾಏಕಿ ನಿಂತುಹೋಗುವ ಆತಂಕಕಾರಿ ದೂರುಗಳು ಇತ್ತೀಚೆಗೆ ಮಿತಿಮೀರಿವೆ. ಪೆಟ್ರೋಲ್ ಟ್ಯಾಂಕ್‌ನಲ್ಲಿ ಶೇಖರವಾದ ನೀರು, ತುಕ್ಕು ಮತ್ತು ಫಂಗಸ್‌ನ ಲೋಳೆ ನೇರವಾಗಿ ಇಂಧನ ಪಂಪ್ ಮತ್ತು ಸೂಕ್ಷ್ಮವಾದ ಫ್ಯೂಯಲ್ ಇಂಜೆಕ್ಟರ್‌ಗಳನ್ನು ಪ್ರವೇಶಿಸುತ್ತವೆ. ಇಂಜೆಕ್ಟರ್‌ಗಳ ರಂಧ್ರಗಳು ಕೂದಲಿನಷ್ಟೇ ಸಣ್ಣದಿರುವುದರಿಂದ ಅವು ಬೇಗನೆ ಬ್ಲಾಕ್ ಆಗುತ್ತವೆ. ಈ ಹಂತದಲ್ಲಿ ಎಂಜಿನ್‌ಗೆ ಇಂಧನ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡು, ಚಲಿಸುತ್ತಿರುವ ವಾಹನಗಳು ನಡುರಸ್ತೆಯಲ್ಲೇ ನಿಲ್ಲುತ್ತಿವೆ. ಇದರಿಂದ ಅಪಘಾತಗಳ ಭೀತಿಯೂ ಎದುರಾಗಿದೆ
ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸಿದ ಮೇಲೆ ವಾಹನ ಮಾಲೀಕರು ಇತ್ತೀಚೆಗೆ ಹೊಸ ತಲೆನೋವಿಗೆ ಗುರಿಯಾಗುತ್ತಿದ್ದಾರೆ. ಇಂಧನ ಆಮದು ವೆಚ್ಚ ಕಡಿಮೆ ಮಾಡುವುದು ಹಾಗೂ ಹಸಿರು ಇಂಧನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿತರಣೆಗೆ ಹೆಚ್ಚು ಆದ್ಯತೆ ನೀಡುತ್ತಿದೆ.. ಆದರೆ, ಈ ಮಹತ್ವದ ಬದಲಾವಣೆಯು ವಾಹನಗಳ ಎಂಜಿನ್ ಮತ್ತು ಪೆಟ್ರೋಲ್ ಟ್ಯಾಂಕ್‌ಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿರುವ ದೂರುಗಳು ದೇಶಾದ್ಯಂತ ವ್ಯಾಪಕವಾಗಿ ಕೇಳಿಬರುತ್ತಿವೆ. ವಾಹನಗಳ ಟ್ಯಾಂಕ್‌ಗಳಲ್ಲಿ ಕಪ್ಪು ಫಂಗಸ್ ಜಮೆಯಾಗುವುದು, ಒಳಗಿನಿಂದಲೇ ತುಕ್ಕು ಹಿಡಿಯುವುದು ಸೇರಿದಂತೆ ಹಲವು ತಾಂತ್ರಿಕ ದೋಷಗಳು ದಿನನಿತ್ಯದ ವಾಹನ ಬಳಕೆಯನ್ನು ದುಸ್ತರಗೊಳಿಸಿವೆ. ಗ್ಯಾರೇಜುಗಳಿಗೂ ಇಂತಹ ಸಮಸ್ಯೆ ಹೊತ್ತು ಬರುವ ವಾಹನಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.
ಈ ಎಲ್ಲ ಸಮಸ್ಯೆಗಳ ಮೂಲವನ್ನು ಅರಿಯುವ ಮುನ್ನ ‘ಎಥೆನಾಲ್’ ಎಂದರೇನು ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಎಥೆನಾಲ್ (ಸರಳವಾಗಿ ಹೇಳಬೇಕೆಂದರೆ ಒಂದು ರೀತಿಯ ಆಲ್ಕೋಹಾಲ್) ಎಂಬುದು ನವೀಕರಿಸಬಹುದಾದ ಜೈವಿಕ ಇಂಧನ. ಇದನ್ನು ಪ್ರಮುಖವಾಗಿ ಕಬ್ಬು, ಬೆಲ್ಲದ ಕಾಕಂಬಿ, ಮುಸುಕಿನ ಜೋಳ ಮತ್ತು ಹಾಳಾದ ಕೃಷಿ ಧಾನ್ಯಗಳನ್ನು ಹುದುಗಿಸುವ (Fermentation) ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ. ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆ ತಗ್ಗಿಸಲು ಹಾಗೂ ಇಂಗಾಲದ ಹೊರಸೂಸುವಿಕೆ ನಿಯಂತ್ರಿಸಲು ಪೆಟ್ರೋಲ್‌ನೊಂದಿಗೆ ಎಥೆನಾಲ್ ಬೆರೆಸಲಾಗುತ್ತದೆ. ಪ್ರಸ್ತುತ ದೇಶಾದ್ಯಂತ ಶೇಕಡಾ 10ರಿಂದ 20ರಷ್ಟು (E10 ಮತ್ತು E20) ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಇದು ಪರಿಸರಕ್ಕೆ ಪೂರಕವಾದರೂ, ಹಳೆಯ ವಿನ್ಯಾಸದ ವಾಹನಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.
ಪ್ರಸ್ತುತ ಗ್ರಾಹಕರು ಮತ್ತು ಮೆಕ್ಯಾನಿಕ್‌ಗಳಿಂದ ಪ್ರಮುಖವಾಗಿ ಕೇಳಿಬರುತ್ತಿರುವ ಅತಿ ದೊಡ್ಡ ದೂರು ಎಂದರೆ ಪೆಟ್ರೋಲ್ ಟ್ಯಾಂಕ್ ಮತ್ತು ಎಂಜಿನ್‌ನ ಲೋಹದ ಭಾಗಗಳಲ್ಲಿ ತ್ವರಿತವಾಗಿ ತುಕ್ಕು ಹಿಡಿಯುತ್ತಿರುವುದು. ಎಥೆನಾಲ್ ಮೂಲತಃ ಗಾಳಿಯಲ್ಲಿರುವ ತೇವಾಂಶವನ್ನು ತನ್ನತ್ತ ಸೆಳೆದುಕೊಳ್ಳುವ ಅಥವಾ ಹೀರಿಕೊಳ್ಳುವ ನೈಸರ್ಗಿಕ ಗುಣವನ್ನು ಹೊಂದಿದೆ. ಪೆಟ್ರೋಲ್ ಟ್ಯಾಂಕ್‌ಗಳಲ್ಲಿ ಇಂಧನ ದೀರ್ಘಕಾಲದವರೆಗೆ (ಉದಾಹರಣೆಗೆ ಒಂದು ವಾರಕ್ಕೂ ಹೆಚ್ಚು ಕಾಲ) ಹಾಗೆಯೇ ನಿಂತಾಗ, ಎಥೆನಾಲ್ ತೇವಾಂಶವನ್ನು ಹೀರಿಕೊಂಡು ನೀರಿನ ಅಂಶವನ್ನು ಸೃಷ್ಟಿಸುತ್ತದೆ. ಈ ನೀರು ಪೆಟ್ರೋಲ್ ಗಿಂತ ಭಾರವಾಗಿರುವ ಕಾರಣ ಇಂಧನದಿಂದ ಬೇರ್ಪಟ್ಟು ಟ್ಯಾಂಕ್‌ನ ತಳಭಾಗದಲ್ಲಿ ಶೇಖರಣೆಯಾಗುತ್ತದೆ. ಇದರಿಂದಾಗಿ ಲೋಹದ ಟ್ಯಾಂಕ್‌ಗಳು ಒಳಭಾಗದಿಂದಲೇ ವೇಗವಾಗಿ ತುಕ್ಕು ಹಿಡಿಯುತ್ತಿವೆ.
ಟ್ಯಾಂಕ್‌ಗಳಲ್ಲಿ ಕೇವಲ ತುಕ್ಕು ಹಿಡಿಯುವಿಕೆ ಮಾತ್ರವಲ್ಲದೆ ‘ಕಪ್ಪು ಫಂಗಸ್’ ಅಥವಾ ಅಂಟು ಲೋಳೆಯಂತಹ ವಿಲಕ್ಷಣ ವಸ್ತು ಜಮೆಯಾಗುತ್ತಿರುವುದು ವಾಹನ ಮಾಲೀಕರನ್ನು ದಂಗುಬಡಿಸಿದೆ. ಎಥೆನಾಲ್ ಮತ್ತು ನೀರಿನ ಅಂಶ ಒಟ್ಟಾಗಿ ಸೇರಿಕೊಂಡಾಗ, ಅಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಅತ್ಯಂತ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದಾಗಿ ಕಪ್ಪು ಬಣ್ಣದ ಫಂಗಸ್ ರೀತಿಯ ಜಿಗುಟಾದ ಪದರವು ಟ್ಯಾಂಕ್‌ನೊಳಗೆ ಸೃಷ್ಟಿಯಾಗುತ್ತದೆ. ಈ ಜಿಗುಟಾದ ಲೋಳೆಯು ಪೆಟ್ರೋಲ್ ಹರಿಯುವ ಪೈಪ್‌ಗಳು ಹಾಗೂ ಫ್ಯೂಯಲ್ ಫಿಲ್ಟರ್‌ಗಳನ್ನು ಸಂಪೂರ್ಣವಾಗಿ ಕಟ್ಟಿಕೊಳ್ಳುವಂತೆ ಮಾಡಿ, ಎಂಜಿನ್‌ಗೆ ಇಂಧನ ಪೂರೈಕೆಯಾಗುವ ಮಾರ್ಗವನ್ನು ತಡೆಯುತ್ತಿದೆ.
ಇದನ್ನು ಓದಿದ್ದೀರಾ? ನೀಟ್ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಮಣ್ಣಿನ ಮಗನ ಜಾಣಮೌನ: ಎಚ್‌ಡಿಕೆಗೆ ನೆಟ್ಟಿಗರ ತರಾಟೆ
ವಾಹನಗಳ ಮೈಲೇಜ್ ಗಣನೀಯವಾಗಿ ತಗ್ಗತೊಡಗಿದೆ ಎಂಬುದು ಗ್ರಾಹಕರ ಮತ್ತೊಂದು ಪ್ರಮುಖ ಅಸಮಾಧಾನಕ್ಕೆ ಕಾರಣವಾಗಿದೆ. ವೈಜ್ಞಾನಿಕವಾಗಿ ನೋಡುವುದಾದರೆ, ಶುದ್ಧ ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್ ಶೇಕಡಾ 30ರಷ್ಟು ಕಡಿಮೆ ಶಕ್ತಿಯ ಸಾಂದ್ರತೆಯನ್ನು ಹೊಂದಿದೆ. ಅಂದರೆ, ನೀವು ಹಾಕಿಸುವ ಒಂದು ಲೀಟರ್ ಶುದ್ಧ ಪೆಟ್ರೋಲ್‌ನಿಂದ ಸಿಗುವ ಮೈಲೇಜ್ ಮತ್ತು ಎಥೆನಾಲ್ ಬೆರೆತ ಪೆಟ್ರೋಲ್‌ನಿಂದ ಸಿಗುವ ಮೈಲೇಜ್‌ಗೆ ಸ್ಪಷ್ಟ ವ್ಯತ್ಯಾಸವಿದೆ. ಎಂಜಿನ್‌ಗೆ ಸಮಾನ ಶಕ್ತಿ ಉತ್ಪಾದಿಸಲು ಹೆಚ್ಚು ಇಂಧನದ ಅಗತ್ಯ ಬೀಳುತ್ತದೆ. ಏರುತ್ತಿರುವ ಇಂಧನ ಬೆಲೆಗಳ ನಡುವೆ, ಈ ಮೈಲೇಜ್ ಕುಸಿತವು ದ್ವಿಚಕ್ರ ಹಾಗೂ ಕಾರು ಸವಾರರ ಜೇಬಿಗೆ ನೇರವಾಗಿ ಕತ್ತರಿ ಹಾಕುತ್ತಿದೆ.
ಹೆದ್ದಾರಿಗಳಲ್ಲಿ ಅಥವಾ ಜನದಟ್ಟಣೆಯ ರಸ್ತೆಯಲ್ಲಿ ಸುಗಮವಾಗಿ ಓಡುತ್ತಿದ್ದ ಕಾರುಗಳು ಏಕಾಏಕಿ ನಿಂತುಹೋಗುವ ಆತಂಕಕಾರಿ ದೂರುಗಳು ಇತ್ತೀಚೆಗೆ ಮಿತಿಮೀರಿವೆ. ಪೆಟ್ರೋಲ್ ಟ್ಯಾಂಕ್‌ನಲ್ಲಿ ಶೇಖರವಾದ ನೀರು, ತುಕ್ಕು ಮತ್ತು ಫಂಗಸ್‌ನ ಲೋಳೆ ನೇರವಾಗಿ ಇಂಧನ ಪಂಪ್ ಮತ್ತು ಸೂಕ್ಷ್ಮವಾದ ಫ್ಯೂಯಲ್ ಇಂಜೆಕ್ಟರ್‌ಗಳನ್ನು ಪ್ರವೇಶಿಸುತ್ತವೆ. ಇಂಜೆಕ್ಟರ್‌ಗಳ ರಂಧ್ರಗಳು ಕೂದಲಿನಷ್ಟೇ ಸಣ್ಣದಿರುವುದರಿಂದ ಅವು ಬೇಗನೆ ಬ್ಲಾಕ್ ಆಗುತ್ತವೆ. ಈ ಹಂತದಲ್ಲಿ ಎಂಜಿನ್‌ಗೆ ಇಂಧನ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡು, ಚಲಿಸುತ್ತಿರುವ ವಾಹನಗಳು ನಡುರಸ್ತೆಯಲ್ಲೇ ನಿಲ್ಲುತ್ತಿವೆ. ಇದರಿಂದ ಅಪಘಾತಗಳ ಭೀತಿಯೂ ಎದುರಾಗಿದೆ.
ಈ ಎಲ್ಲ ಅನಿರೀಕ್ಷಿತ ತಾಂತ್ರಿಕ ದೋಷಗಳಿಂದಾಗಿ ವಾಹನಗಳ ನಿರ್ವಹಣೆ ಹಾಗೂ ಸರ್ವೀಸಿಂಗ್ ವೆಚ್ಚ ದಿಢೀರನೆ ದುಪ್ಪಟ್ಟಾಗಿದೆ. ಫ್ಯೂಯಲ್ ಪಂಪ್ ಸುಟ್ಟುಹೋಗುವುದು, ಟ್ಯಾಂಕ್ ಅನ್ನು ವಾಹನದಿಂದ ಕೆಳಗಿಳಿಸಿ ಆಸಿಡ್ ಬಳಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು, ಹಾಳಾದ ಇಂಜೆಕ್ಟರ್‌ಗಳ ಬದಲಾವಣೆ – ಇವೆಲ್ಲವೂ ಸಾಕಷ್ಟು ಸಮಯ ಮತ್ತು ಸಾವಿರಾರು ರೂಪಾಯಿ ಹಣ ಬೇಡುವ ದುಬಾರಿ ಪ್ರಕ್ರಿಯೆಗಳಾಗಿವೆ. ಹಿಂದೆ ಕೇವಲ ಎಂಜಿನ್ ಆಯಿಲ್ ಬದಲಾವಣೆ ಹಾಗೂ ಸಾಮಾನ್ಯ ಸರ್ವೀಸ್‌ಗೆ ಸೀಮಿತವಾಗಿದ್ದ ಮಧ್ಯಮ ವರ್ಗದ ವಾಹನ ಮಾಲೀಕರು, ಇಂದು ಅನಿವಾರ್ಯವಾಗಿ ಇಂಧನ ವ್ಯವಸ್ಥೆಯ ದುರಸ್ತಿಗೆ ಹೆಚ್ಚಿನ ಹಣ ಸುರಿಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಥೆನಾಲ್ ಮಿಶ್ರಣವು ಸರ್ಕಾರದ ಉತ್ತಮ ಹೆಜ್ಜೆಯಾಗಿದ್ದರೂ, ಪ್ರಸ್ತುತ ವಾಹನ ಮಾಲೀಕರ ಮೇಲಾಗುತ್ತಿರುವ ಆರ್ಥಿಕ ಹೊರೆಯ ಬಗ್ಗೆಯೂ ಸರ್ಕಾರ ಮತ್ತು ತೈಲ ಕಂಪನಿಗಳು ತುರ್ತಾಗಿ ಗಮನಹರಿಸಬೇಕಿದೆ. ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ವಾಹನಗಳಲ್ಲಿ ಎಥೆನಾಲ್ ಮಿಶ್ರಿತ ಇಂಧನಕ್ಕೆ ಹೊಂದಿಕೊಳ್ಳುವ ಬಿಡಿಭಾಗಗಳನ್ನು ಅಳವಡಿಸಲಾಗುತ್ತಿದೆ; ಆದರೆ ರಸ್ತೆಯಲ್ಲಿರುವ ಕೋಟ್ಯಂತರ ಹಳೆಯ ವಾಹನಗಳ ಗತಿ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ. ಪೆಟ್ರೋಲಿಯಂ ಕಂಪನಿಗಳು ತೇವಾಂಶ ತಡೆಯುವ ವಿಶೇಷ ‘ಆಂಟಿ-ರಸ್ಟ್ ಅಡಿಟಿವ್ʼಗಳನ್ನು ಪೆಟ್ರೋಲ್‌ನಲ್ಲಿ ಬೆರೆಸುವ ಮೂಲಕ, ಗ್ರಾಹಕರ ಈ ಸಂಕಷ್ಟಕ್ಕೆ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕಿದೆ.




