ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಂಡಾಯದ ಬಿಸಿಯನ್ನು ತಣಿಸುವುದಕ್ಕೆ ನಾಮಪತ್ರ ಹಿಂಪಡೆಯುವುದಕ್ಕಿದ್ದ ದಿನದ ಕೊನೆಯ ಕ್ಷಣದವರೆಗೆ ಕಾಂಗ್ರೆಸ್‌ಗೆ ಆಗಿರಲಿಲ್ಲ. ಕಾಂಗ್ರೆಸ್‌ನ ಹೈಕಮಾಂಡ್, ನಿಯೋಗ, ಶಾಮನೂರು ಕುಟುಂಬದ ಯಾವುದೇ ಮನವೊಲಿಕೆಯ ಯತ್ನಕ್ಕೆ ಸೊಪ್ಪು ಹಾಕದ ಕ್ಷೇತ್ರದ ಕಾಂಗ್ರೆಸ್‌ನ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿ ಉಳಿಯುತ್ತೇನೆ ಎಂದು ಹಠಕ್ಕೆ ಬಿದ್ದಿದ್ದರು. ಆದರೆ ಈಗ ಮುಖ್ಯಮಂತ್ರಿಯವರ ಪ್ರಯತ್ನದಿಂದ ಸಾಧಿಕ್, ಪಕ್ಷವೇ ಮುಖ್ಯ ಎಂದಿದ್ದಲ್ಲದೆ, ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಮಾ.27ರಂದು ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಸಾಧಿಕ್ ಅವರನ್ನು ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಕರೆದುಕೊಂಡು ಹೋಗಿ ಸಮಾಧಾನ ಪಡಿಸಿದ್ದಾರೆ. ʼಉಪ ಚುನಾವಣೆಯ ಗೆಲುವು ಮುಖ್ಯವಾಗಿದೆ. ಎರಡು ಕ್ಷೇತ್ರಗಳನ್ನು ಗೆಲ್ಲಬೇಕಾಗಿದೆ. ಬಂಡಾಯದಿಂದ ಪಕ್ಷಕ್ಕೆ ಸಮಸ್ಯೆಯಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸೋಣʼ ಎಂದು ಸಾಧಿಕ್ ಪೈಲ್ವಾನ್ ಅವರನ್ನು ಸಿದ್ದರಾಮಯ್ಯ ಸಮಾಧಾನ ಪಡಿಸಿದ್ದಾರೆ. ಸಿಎಂ ಮಾತಿಗೆ ಸಾಧಿಕ್ ಕೂಡ ಸಮ್ಮತಿ ಸೂಚಿಸಿದ್ದಾರೆ.
ಏ.09ಕ್ಕೆ ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯುವುದಕ್ಕೆ ಮಾ.26 ಕೊನೆಯ ದಿನವಾಗಿತ್ತು. ಅಲ್ಪಸಂಖ್ಯಾತರು ಸೇರಿ 11 ಪಕ್ಷೇತರರು ನಾಮಪತ್ರ ಹಿಂಪಡೆದಿದ್ದಾರೆ. ಸದ್ಯ, ಈಗ 31 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಅಲ್ಪ ಸಂಖ್ಯಾತರ ಮತಗಳು ಹೆಚ್ಚಿರುವ ದಾವಣಗೆರ ದಕ್ಷಿಣ ಕ್ಷೇತ್ರದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ, ಆ ಪೈಕಿ 14 ಅಭ್ಯರ್ಥಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಕಳೆದ ನಾಲ್ಕು ಚುನಾವಣೆಗಳಲ್ಲಿ ಗೆಲ್ಲುವುದಕ್ಕೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಕೂಡ ಮಹತ್ವದ ಪಾತ್ರವಹಿಸಿವೆ. ಹಾಗಾಗಿ ಈಗ ಅಲ್ಪಸಂಖ್ಯಾತ ಸಮದಾಯದವರಲ್ಲಿ ಕಾಂಗ್ರೆಸ್ ವಿರುದ್ಧ ಸೃಷ್ಟಿಯಾಗಿರುವ ಅಸಮಾಧಾನ ಚುನಾವಣೆಯಲ್ಲಿ ಭಾರಿ ಹೊಡೆತ ನೀಡಬಹುದೇ ಎನ್ನುವ ರಾಜಕೀಯ ಚರ್ಚೆಗಳಿತ್ತು. ಈಗ ಸಿಎಂ ಸಿದ್ದರಾಮಯ್ಯ ಅವರು ಸಾಧಿಕ್ ಅವರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೇ, ಸಾಧಿಕ್ ಅವರ ನಿರ್ಧಾರಕ್ಕೆ ಮುಸ್ಲಿಮರು ಒಪ್ಪುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಅವರನ್ನು ಮನವೊಲಿಸುವುದಕ್ಕೆ ಸಚಿವ ಜಮೀರ್ ಅಹ್ಮದ್ ಅವರಿಗೆ ಜವಾಬ್ದಾರಿ ಕೊಡಲಾಗಿತ್ತು. ಆದರೂ, ಜಮೀರ್ ಇದಕ್ಕೆ ನಿರಾಸಕ್ತಿ ತೊರಿ, ಕೇರಳ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ಪಕ್ಷದಿಂದಲೇ ಕೇಳಿ ಬರುತ್ತಿದೆ. ನಾಮಪತ್ರ ಹಿಂಪಡೆಯುವುದಕ್ಕೆ ಇದ್ದ ದಿನವಿಡೀ ಸಾದಿಕ್ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಯತ್ನಿಸಿದ್ದರು. ಸಾದಿಕ್‌ರ ಸಹೋದರ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಆಪ್ತ ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಎ.ನಾಗರಾಜ ಸೇರಿ ಅನೇಕರು ಭೇಟಿ ನೀಡಿ, ಮನವೊಲಿಕೆ ಯತ್ನ ನಡೆಸಿದ ಮೇಲೂ ಸಾಧಿಕ್ ತಾವು ಹಿಡಿದ ಪಟ್ಟನ್ನು ಬಿಟ್ಟಿರಲಿಲ್ಲ. ಮುಸ್ಲಿಂ ಸಮುದಾಯದ ಯುವ ಮುಖಂಡರು, ಹಿರಿಯರು ಸಾದಿಕ್‌ರ ಮನೆ ಬಳಿ ಜಮಾಯಿಸಿ, ‘ಗೋ ಬ್ಯಾಕ್ ಕಾಂಗ್ರೆಸ್’ ಎಂಬ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರಸಂಗವೂ ನಡೆಯಿತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಕರೆ ಮಾಡಿ ಸಾದಿಕ್‌ಗೆ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದರು. ಮನವೊಲಿಸುವುದಕ್ಕೆ ತೆರಳಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್ ಮತ್ತು ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಅವರ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಸಾಧಿಕ್ ಅವರ ಬಂಡಾಯ ಸ್ಪರ್ಧೆ ಕಾಂಗ್ರೆಸ್ ಪಕ್ಷದ ಅಧಿಕೃತ ಚಿಹ್ನೆಯಿಂದ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರ ಸ್ಪರ್ಧೆಗೆ ಬಹಳ ದೊಡ್ಡ ಸವಾಲು ಎದುರಾಗಿತ್ತು. ಆದರೆ ಸವಾಲನ್ನು ಭೇದಿಸುವಲ್ಲಿ ಕಾಂಗ್ರೆಸ್ ಪ್ರಾಥಮಿಕವಾಗಿ ಯಶಸ್ವಿಯಾಗಿದೆ.
ಇನ್ನು, ಶಾಮನೂರು ಶಿವಶಂಕರಪ್ಪ ಚುನಾವಣಾ ರಾಜಕೀಯಕ್ಕೆ ಇಳಿದ ಮೇಲೆ ಚುನಾವಣೆಯಿಂದ ಚುನಾವಣೆಗೆ ಮತಗಳ ಅಂತರ ಏರಿಳಿತವಾಗಿರಬಹುದು ವಿನಃ ಸೋಲು ಅನುಭವಿಸಿಲ್ಲ. ಇದಕ್ಕೆ ಅಹಿಂದ ಮತಗಳ ಪಾತ್ರ ಬಹಳ ದೊಡ್ಡದಿದೆ. ಒಟ್ಟು 2,31,674 ಮತದಾರರಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವೂ ಅಲ್ಪಸಂಖ್ಯಾತ ಮತದಾರರದ್ದೇ ಆಗಿದೆ. 64,246 ಮುಸ್ಲಿಮರು, 37,845 ಲಿಂಗಾಯತರು, 31,729 ಎಸ್.ಟಿ ನಾಯಕ ಸಮುದಾಯದವರು, 21, 106 ಎಸ್.ಸಿ ಸಮುದಾಯದವರು, 16,854 ಕುರುಬ ಸಮುದಾಯದವರು, 14,868 ಮರಾಠ ಸಮುದಾಯದವರು, 8,352 ಉಪ್ಪಾರ ಸಮುದಾಯದವರು, 5,386 ಜೈನ ಸಮುದಾಯದವರು ಹಾಗೂ 23,300 ಇತರೆ ಸಮುದಾಯಕ್ಕೆ ಸೇರಿದವರಿದ್ದಾರೆ. ಲಿಂಗಾಯತ ಸಮುದಾಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹೆಚ್ಚಾಗಿ ಈವರೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಗೆಲ್ಲಿಸುತ್ತಾ ಬಂದಿದ್ದಾರೆ. ಆದರೆ, ಈಗ ಲಿಂಗಾಯತ ಸಮುದಾಯ ಮತ್ತು ಹಿಂದುಳಿದ ವರ್ಗದ ಮತಗಳು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೀಳುತ್ತವೆ ಎಂಬ ಲೆಕ್ಕಾಚಾರದಲ್ಲಿ ವಿಶ್ಲೇಷಣೆ ಮಾಡಿದರೂ, ಈ ಬಾರಿ ಮುಸ್ಲಿಂ ಮತಗಳು ಕೊಂಚ ಮಟ್ಟಿಗೆ ಸಾಧಿಕ್ ಕಡೆಗೆ ವಾಲಬಹುದು ಎನ್ನುವ ಅಭಿಪ್ರಾಯವಿತ್ತು. ಈಗ ಸ್ವತಃ ಸಾಧಿಕ್, ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲಿದ್ದಾರೆ. ಇದು ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ : ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು
ಕಾಂಗ್ರೆಸ್ ಊಹಿಸಿದಂತೆ ಸಮರ್ಥ್ ಗೆಲುವು ತುಂಬಾ ಸುಲಭವೇನು ಇರಲಿಲ್ಲ. ಉಪ ಚುನಾವಣೆಯಲ್ಲಿ ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷವೇ ಗೆಲ್ಲುವ ವಾಡಿಕೆ ಇರುವುದರಿಂದ ಕಾಂಗ್ರೆಸ್ ಧೈರ್ಯದಲ್ಲಿತ್ತು. ಹಿಂದುಳಿದ ವರ್ಗಗಳ ಮತಗಳು ತಮ್ಮ ಪಾಲಿಗೆ ಬರುವುದು ನಿಶ್ಚಿತ ಎನ್ನುವ ಮನಸ್ಥಿತಿಯಲ್ಲಿ ಇದ್ದಿತ್ತು. ಸಣ್ಣ ಭಯವೂ ಇತ್ತು. ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಅಲ್ಪಸಂಖ್ಯಾತ ಸಮುದಾಯದ ಮತಗಳು ಈ ಬಾರಿ ಕೊಂಚ ಮಟ್ಟಿಗೆ ವಿಮುಖವಾಗುವ ಲಕ್ಷಣ ಕಂಡಿತ್ತು. ಮತ್ತು ಈ ಬಾರಿ ಬಿಜೆಪಿ ಪಕ್ಷದಿಂದ ಹಿಂದುಳಿದ ವರ್ಗದ ಅಭ್ಯರ್ಥಿ ಕಣದಲ್ಲಿರುವುದು ಕೂಡ ಕಾಂಗ್ರೆಸ್‌ಗೆ ಸಣ್ಣ ಹೊಡೆತ ಬೀಳಬಹುದು ಎನ್ನುವ ಚರ್ಚೆಯೂ ಇತ್ತು. ಕೊನೆಗೂ ಕುಟುಂಬ ರಾಜಕಾರಣಕ್ಕೆ ಶರಣಾಗಿ ಬಂಡಾಯ ಅಭ್ಯರ್ಥಿಯನ್ನು ಸಮಾಧಾನ ಪಡಿಸಿ, ಅನುಕಂಪದ ಆಧಾರದಲ್ಲಿ ಮತ ಕೇಳುವುದಕ್ಕೆ ಕಾಂಗ್ರೆಸ್ ಮುಂದಾಗಿದೆ.
ಒಟ್ಟಿನಲ್ಲಿ, ತನ್ನ ಪಾಲಿಗೆ ಈವರೆಗೆ ವರದಾನವಾಗಿದ್ದ ಅಲ್ಪಸಂಖ್ಯಾತ ಮತಗಳನ್ನು ವಿಮುಖವಾಗದಂತೆ ಮತ್ತು ಮೇಲ್ನೋಟಕ್ಕೆ ಕಾಣಿಸುತ್ತಿರುವ ಶಾಮನೂರು ಕುಟುಂಬದ ಮೇಲಿನ ಅಸಮಾಧಾನವನ್ನು ಬದಿಗೆ ಸರಿಸುವುದಕ್ಕೆ ಬೇಕಾಗಿ ತಂತ್ರ, ಕುತಂತ್ರ ಹೆಣೆದು ಚುನಾವಣೆಯಲ್ಲಿ ಪ್ರಾಥಮಿಕವಾಗಿ ಗೆದ್ದಿದೆ. ಆದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ʼಕುಟುಂಬ ರಾಜಕಾರಣʼದ ವಿಷಯ ಮುಂದಿಟ್ಟು ಮಾಡಲಿರುವ ಪ್ರಚಾರದ ಸವಾಲನ್ನು ಹೇಗೆ ಎದುರಿಸುತ್ತದೆ ಎನ್ನುವ ಕುತೂಹಲವಂತೂ ಸೃಷ್ಟಿಯಾಗಿದೆ.
ದಾವಣಗೆರೆ ಉಪಚುನಾವಣೆ | ಬಂಡಾಯದ ಬಿಸಿ ತಣಿಸುವಲ್ಲಿ ಸೋತು ಗೆದ್ದ ಕಾಂಗ್ರೆಸ್
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




