BRICS ವೇದಿಕೆಯಲ್ಲಿ ಭಾರತದ ವಿರೋಧಾಭಾಸ; ಅತ್ತ ಚೀನಾ- ಇತ್ತ ಅಮೆರಿಕ; ಇರಾನ್ ವಿಚಾರದಲ್ಲೂ ದ್ವಂದ್ವ

Date:

BRICS+ ವೇದಿಕೆಯ ಅಧ್ಯಕ್ಷತೆ ಕುರ್ಚಿಯಲ್ಲಿ ಭಾರತ ಕುಳಿತಿದೆ. ಈ ಹೊತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ವಿರೋಧಾಭಾಸಗಳು ಇನ್ನಷ್ಟು ಸ್ಪಷ್ಟವಾಗಿವೆ. ಒಂದೆಡೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ರಕ್ಷಣಾ–ತಂತ್ರಜ್ಞಾನ ಸಹಭಾಗಿತ್ವ, ಮತ್ತೊಂದೆಡೆ ರಷ್ಯಾ–ಚೀನಾ–ಇರಾನ್ ಜೊತೆಗೆ BRICS ಮತ್ತು Global South ರಾಜಕಾರಣ; ಚಾಬಹಾರ್ ಬಂದರಿಗಾಗಿ ಇರಾನ್ ಬೇಕು, ಆದರೆ ಅಮೆರಿಕದ ನಿರ್ಬಂಧಗಳನ್ನೂ ಮೀರಿ ನಿಲ್ಲಲಾಗದ ಸ್ಥಿತಿ. NAMನ ‘ವ್ಯೂಹಾತ್ಮಕ ಸ್ವಾಯತ್ತತೆ’ಯಿಂದ Multi-Alignment ಕಡೆಗೆ ಬಂದ ಭಾರತದ ನಡೆ ಸಮತೋಲನದ ರಾಜತಂತ್ರವೇ ಅಥವಾ ದ್ವಂದ್ವ ನೀತಿಯೇ?

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 12-13ರಂದು 18ನೇ BRICS ಶೃಂಗಸಭೆ ನಡೆಯುತ್ತಿದೆ. ಇದು ಕೇವಲ ಮತ್ತೊಂದು ಬಹುಪಕ್ಷೀಯ ರಾಜತಾಂತ್ರಿಕ ಸಭೆಯಲ್ಲ. ಈ ಸಭೆಯು ಭಾರತದ ಆಧುನಿಕ ವಿದೇಶಾಂಗ ನೀತಿಗೆ ಅತ್ಯಂತ ಸಂಕೀರ್ಣವಾದ ತಾಂತ್ರಿಕ ಮತ್ತು ಭೌಗೋಳಿಕ ರಾಜಕೀಯ ಪರೀಕ್ಷೆಯೂ ಆಗಿದೆ. ಪ್ರಸ್ತುತ ಜಾಗತಿಕ ರಾಜಕೀಯ ವ್ಯವಸ್ಥೆಯು ಅಮೆರಿಕ ನೇತೃತ್ವದ ಹಳೆಯ ಏಕಧ್ರುವೀಯ ಮಾದರಿಯಿಂದ ಬಹುಧ್ರುವೀಯ ವ್ಯವಸ್ಥೆಯತ್ತ ವೇಗವಾಗಿ ಧಾವಿಸುತ್ತಿದೆ. ಇಂತಹ ಸಂದರ್ಭದಲ್ಲಿ, ‘ಭಾರತ ಯಾವ ಶಕ್ತಿ ಶಿಬಿರದ ಬದಿಯಲ್ಲಿ ನಿಂತಿದೆ’ ಎಂಬ ಸರಳ ಪ್ರಶ್ನೆಗಿಂತ— ‘ಭಾರತ ಎಷ್ಟು ವಿರೋಧಾಭಾಸದೊಂದಿಗೆ ಏಕಕಾಲದಲ್ಲಿ ತನ್ನ ರಾಜತಾಂತ್ರಿಕ ಮತ್ತು ಸಮತೋಲನದ ಸ್ಥಿತಿಯನ್ನು ಕಾಯ್ದುಕೊಳ್ಳಬಲ್ಲದು?’ ಎಂಬ ಪ್ರಶ್ನೆಯೇ ಪ್ರಮುಖವಾಗಿ ಕಾಣಿಸಿಕೊಂಡಿದೆ.

- Advertisement -

ಅಂದಹಾಗೆ, ಬ್ರಿಕ್ಸ್‌ ಒಕ್ಕೂಟವು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮತ್ತು ಉದಯೋನ್ಮುಖ ಆರ್ಥಿಕತೆಗಳನ್ನು ಹೊಂದಿರುವ ಪ್ರಮುಖ ರಾಷ್ಟ್ರಗಳ ಜಾಗತಿಕ ಒಕ್ಕೂಟ. ಆದರೆ, ಬ್ರಿಕ್ಸ್‌ನಲ್ಲಿ ಮೋದಿ ಆಡಳಿತದ ಭಾರತದ ಪಾತ್ರ ದುರ್ಬಲಗೊಂಡಿದೆ. ಬ್ರಿಕ್ಸ್‌ನಿಂದ ಭಾರತ ಒಂದು ಹೆಜ್ಜೆ ಹೊರಗಿಟ್ಟಿದೆ ಎಂಬಂತೆ ಜಗತ್ತು ನೋಡುತ್ತಿದೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ; ಭಾರತವು ಒಂದೆಡೆ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನೊಳಗೊಂಡ Quad ಒಕ್ಕೂಟದಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಅಮೆರಿಕದೊಂದಿಗೆ ರಕ್ಷಣಾ ತಂತ್ರಜ್ಞಾನ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ಸಂಶೋಧನೆ, ಇಂಡೋ-ಪೆಸಿಫಿಕ್ ಭದ್ರತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಸಂಬಂಧ ದಿನದಿಂದ ದಿನಕ್ಕೆ ಗಾಢವಾಗುತ್ತಿದೆ. ಆದರೆ, ಇನ್ನೊಂದು ಕಡೆ, ರಷ್ಯಾದೊಂದಿಗಿನ ದಶಕಗಳ ಕಾಲದ ಆಳವಾದ ರಕ್ಷಣಾ ಮತ್ತು ಸಾಮರಸ್ಯದ ಬಾಂಧವ್ಯ ಕ್ಷೀಣಿಸುತ್ತಿದೆ. ರಷ್ಯಾದ ತೈಲ ಖರೀದಿಗೂ ಭಾರತವು ಅಮೆರಿಕದ ಅಪ್ಪಣೆ ಪಡೆಯುವಂತಾಗಿದೆ. ಇನ್ನು, ಚೀನಾದೊಂದಿಗೆ ಗಡಿ ಭಾಗದಲ್ಲಿ ತೀವ್ರ ಭಿನ್ನಾಭಿಪ್ರಾಯ ಮತ್ತು ಉದ್ವಿಗ್ನತೆಯಿದ್ದು, ಉಭಯ ರಾಷ್ಟ್ರಗಳ ಹೊಂದಾಣಿಕೆ ಜಠಿಲವಾಗಿದೆ. ಚೀನಾ ಮೇಲುಗೈ ಸಾಧಿಸುತ್ತಿದೆ. ಇದೇ ಸಮಯದಲ್ಲಿ, ಅಮೆರಿಕದ ದಮನಕಾರಿ ದಾಳಿ, ಕಠಿಣ ಆರ್ಥಿಕ ನಿರ್ಬಂಧಗಳಿಗೆ ಒಳಗಾಗಿರುವ ಇರಾನ್ ಪರವಾಗಿ ನಿಲುವು ತೆಗೆದುಕೊಳ್ಳುವಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದೆ. ಇದೆಲ್ಲವೂ, ಬ್ರಿಕ್ಸ್‌ನಲ್ಲಿ ಭಾರತದ ಪಾತ್ರವನ್ನು ಪ್ರಶ್ನೆಗಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ವಿದೇಶಾಂಗ ನೀತಿಯ ಪ್ರಸ್ತುತ ನಿಲುವು

ಬ್ರಿಕ್ಸ್‌ನಲ್ಲಿ ಭಾರತದ ಪಾತ್ರ ಡೋಲಾಯಮಾನವಾಗಿರುವ ನಡುವೆಯೂ, 2026ರ BRICS ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ಆದರೆ, ಭಾರತವು ಇಂದು ಎರಡು ದೊಡ್ಡ ಶಕ್ತಿಕೇಂದ್ರಗಳಲ್ಲಿ ಒಂದನ್ನು ಆರಿಸಿಕೊಳ್ಳುವ ಸರಳ ಸ್ಥಿತಿಯಲ್ಲಿಲ್ಲ. ಬದಲಾಗಿ, ಪರಸ್ಪರ ವಿರುದ್ಧ ಹಿತಾಸಕ್ತಿ ಹೊಂದಿರುವ ಹಲವು ಶಕ್ತಿಕೇಂದ್ರಗಳೊಂದಿಗೆ ಬಾಂಧವ್ಯ ಕಾಯ್ದುಕೊಳ್ಳುತ್ತಲೇ ತನ್ನ ರಾಷ್ಟ್ರೀಯ ಮತ್ತು ಭೌಗೋಳಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ.

ಈ ಅನಿವಾರ್ಯ ಪರಿಸ್ಥಿತಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ‘Non-Western, but not Anti-Western’ (ಪಾಶ್ಚಿಮಾತ್ಯೇತರ, ಆದರೆ ಪಾಶ್ಚಿಮಾತ್ಯ ವಿರೋಧಿಯಲ್ಲ) ಎಂದು ವ್ಯಾಖ್ಯಾನ ನೀಡಿದ್ದಾರೆ. ಆದರೆ, ಈ ಸಿದ್ಧಾಂತವು ಕಾಗದದಲ್ಲಿ ಆಕರ್ಷಕವಾಗಿ ಕಂಡರೂ, ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಮತ್ತು ಇರಾನ್ ವಿಚಾರಕ್ಕೆ ಬಂದಾಗ ಕೇಂದ್ರ ಸರ್ಕಾರದ ಆಡಳಿತಾತ್ಮಕ ಮತ್ತು ರಾಜತಾಂತ್ರಿಕ ವಿರೋಧಾಭಾಸಗಳು ತೀವ್ರವಾಗಿ ಬಹಿರಂಗಗೊಳ್ಳುತ್ತವೆ.

BRICS ಒಕ್ಕೂಟದ ಮೂಲ ಮತ್ತು ವಿಕಸನ

BRICSನ ಮೂಲ ಇತಿಹಾಸವನ್ನು ಗಮನಿಸಿದರೆ, ಇದು ಯಾವುದೇ ಸೈದ್ಧಾಂತಿಕ ಅಥವಾ ಮಿಲಿಟರಿ ಘೋಷಣೆಯಿಂದ ಆರಂಭವಾದ ಒಕ್ಕೂಟವಲ್ಲ. 2001ರಲ್ಲಿ Goldman Sachs ಸಂಸ್ಥೆಯ ಅರ್ಥಶಾಸ್ತ್ರಜ್ಞ ಜಿಮ್ ಓ’ನೀಲ್ ಅವರು ಬ್ರಿಜಿಲ್, ರಷ್ಯಾ, ಭಾರತ ಹಾಗೂ ಚೀನಾ ದೇಶಗಳ ಆರ್ಥಿಕ ಬೆಳವಣಿಗೆಯ ಭವಿಷ್ಯದ ಸಾಮರ್ಥ್ಯವನ್ನು ವಿವರಿಸಲು ‘BRIC’ ಎಂಬ ಆರ್ಥಿಕ ವರ್ಗೀಕರಣ ಪದವನ್ನು ಪ್ರಥಮ ಬಾರಿಗೆ ಬಳಸಿದರು. ಮುಂಬರುವ ದಶಕಗಳಲ್ಲಿ ಈ ನಾಲ್ಕು ದೇಶಗಳು ಜಾಗತಿಕ ಜಿಡಿಪಿ ಮತ್ತು ವ್ಯಾಪಾರದಲ್ಲಿ ಅತಿದೊಡ್ಡ ಪಾಲು ಪಡೆಯಲಿವೆ ಎಂಬುದು ಅವರ ಮೂಲ ಲೆಕ್ಕಾಚಾರವಾಗಿತ್ತು.

ಆದರೆ, ಈ ಆರ್ಥಿಕ ವರ್ಗೀಕರಣವು ಬಹುಬೇಗನೆ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ವೇದಿಕೆಯಾಗಿ ಮಾರ್ಪಟ್ಟಿತು. 2006ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ BRIC (ಬ್ರೆಜಿಲ್, ರಷ್ಯಾ, ಭಾರತ, ಚೀನಾ) ರಾಷ್ಟ್ರಗಳ ವಿದೇಶಾಂಗ ಸಚಿವರು ಸಭೆ ನಡೆಸಿದರು. ಬ್ರಿಕ್ಸ್‌ ಒಕ್ಕೂಟ ಆರಂಭಿಸಿದರು. ಆದರೆ, ಅದು ಪ್ರಬಲವಾಗಿ ಅನುಷ್ಠಾನಗೊಂಡಿರಲಿಲ್ಲ.

2008ರ ಜಾಗತಿಕ ಹಣಕಾಸು ಬಿಕ್ಕಟ್ಟು ‘ಬ್ರಿಕ್ಸ್‌’ಗೆ ಪ್ರಮುಖ ಪ್ರೇರಕ ಶಕ್ತಿಯಾಯಿತು. ಆ ಸಂದರ್ಭದಲ್ಲಿ, ಅಮೆರಿಕ ಮತ್ತು ಯುರೋಪಿನ ಸಾಲ ಮಾರುಕಟ್ಟೆಯಿಂದ ಉಂಟಾದ ಬಿಕ್ಕಟ್ಟಿನ ಬೆಲೆಯನ್ನು (ದಂಡ) ಇಡೀ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳು ತೆರಬೇಕಾಯಿತು. ಐಎಂಎಫ್‌, ವರ್ಲ್ಡ್‌ ಬ್ಯಾಂಕ್‌ ಮುಂತಾದ Bretton Woods ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಮತಾಧಿಕಾರವಿಲ್ಲ ಎಂಬ ಹಳೆಯ ಅಸಮಾಧಾನ ಇದರೊಂದಿಗೆ ಮತ್ತಷ್ಟು ತೀವ್ರವಾಯಿತು. ಇದಕ್ಕೆ, ಬಲವಾದ ಪರ್ಯಾಯ ರೂಪಿಸಲು, ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಪ್ರಾಬಲ್ಯಕ್ಕೆ (IMF, ವಿಶ್ವ ಬ್ಯಾಂಕ್) ಪರ್ಯಾಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಬಲಪಡಿಸಲು, ಜಾಗತಿಕ ಹಣಕಾಸು ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು 2009ರ ಜೂನ್‌ನಲ್ಲಿ ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ ಮೊದಲ BRIC ನಾಯಕರ ಶೃಂಗಸಭೆ ಅಧಿಕೃತವಾಗಿ ನಡೆಯಿತು. ತದನಂತರ, ದಕ್ಷಿಣ ಆಫ್ರಿಕಾ ಸೇರ್ಪಡೆಯಾಗುವುದರೊಂದಿಗೆ ಇದು BRICS ಆಗಿ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡಿತು.

image 197

ಕಳೆದೊಂದು ದಶಕದಲ್ಲಿ ಬ್ರಿಕ್ಸ್‌ಗೆ ಇರಾನ್, ಯುಎಇ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ ಹಾಗೂ ಸೌದಿ ಅರೇಬಿಯಾಗಳು ಸೇರಿಕೊಂಡಿವೆ. ಪ್ರಸ್ತುತ ಒಟ್ಟು 11 ಸದಸ್ಯ ರಾಷ್ಟ್ರಗಳ ಬಲ ಬ್ರಿಕ್ಸ್‌ನಲ್ಲಿದೆ. ಈ ಒಕ್ಕೂಟವು ಸದಸ್ಯ ರಾಷ್ಟ್ರಗಳ ಅಭಿವೃದ್ಧಿ ಯೋಜನೆಗಳಿಗೆ ಸಾಲ ನೀಡಲು ‘New Development Bank’ (NDB) ಅನ್ನು ಸ್ಥಾಪಿಸಿದೆ.

ಆರ್ಥಿಕ ಸಂಸ್ಥೆಗಳ ನಿರ್ಮಾಣದಲ್ಲಿ ಭಾರತದ ಪಾತ್ರ

2009ರ ಮೊದಲ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ BRICS ಎಂದರೆ ಅಮೆರಿಕ ವಿರೋಧಿ ರಾಜಕೀಯ ವೇದಿಕೆಗಿಂತಲೂ, ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಪ್ರಭಾವವನ್ನು ಹೆಚ್ಚಿಸುವ ಸಾಧನವಾಗಿತ್ತು. ಜಾಗತಿಕ ವ್ಯವಸ್ಥೆಯನ್ನು ಧ್ವಂಸಗೊಳಿಸುವುದಕ್ಕಿಂತ ಅದನ್ನು ಸುಧಾರಿಸುವುದು ಮುಖ್ಯ ಎಂಬುದು ಅವರ ದೃಷ್ಟಿಕೋನವಾಗಿತ್ತು. ಇದನ್ನೇ ಭಾರತವು ನಿರಂತರವಾಗಿ ‘ಸುಧಾರಿತ ಬಹುಪಕ್ಷೀಯತೆ’ (Reformed Multilateralism) ಎಂದು ಕರೆಯಿತು.

2012ರ ನವದೆಹಲಿ ಶೃಂಗಸಭೆಯಲ್ಲೇ New Development Bank (NDB) ಸ್ಥಾಪನೆಯ ಕಲ್ಪನೆಯನ್ನು ಭಾರತವೇ ಬ್ರಿಕ್ಸ್‌ ಮುಂದಿಟ್ಟಿತು. 2014ರಲ್ಲಿ ಬ್ರಿಜಿಲ್‌ನ ಫೋರ್ಟಲೆಜಾದಲ್ಲಿ  ನಡೆದ ಶೃಂಗಸಭೆಯಲ್ಲಿ ಇದರ ಅಧಿಕೃತ ಒಪ್ಪಂದಕ್ಕೆ ಸಹಿ ಬಿತ್ತು. 100 ಬಿಲಿಯನ್ ಡಾಲರ್ ಬಂಡವಾಳ ಮಿತಿಯ ಈ ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ ಭಾರತದ ಕೆ.ವಿ ಕಾಮತ್ ನೇಮಕಗೊಂಡರು. ಸಾಲದ್ದಕ್ಕೆ 100 ಬಿಲಿಯನ್ ಡಾಲರ್ ಗಾತ್ರದ ‘ತುರ್ತು ಆರ್ಥಿಕ ಮೀಸಲು ನಿಧಿ’ (CRA) ವ್ಯವಸ್ಥೆಯನ್ನು ರೂಪಿಸಿ, ಸದಸ್ಯ ರಾಷ್ಟ್ರಗಳಿಗೆ ವ್ಯವಹಾರ ಅಥವಾ ಪಾವತಿ ಬಿಕ್ಕಟ್ಟು ಎದುರಾದಾಗ ನೆರವಾಗುವ ಸಂವಿಧಾನ ನಿರ್ಮಿಸಲಾಯಿತು. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಈ ಸಂಸ್ಥೆಗಳ ಅನುಷ್ಠಾನ ಮುಂದುವರಿಯಿತು.

NAMನಿಂದ Multi-Alignmentಗೆ ತಾಂತ್ರಿಕ ಬದಲಾವಣೆ

ಶೀತಲ ಸಮರದ ಅವಧಿಯಲ್ಲಿ ಜವಾಹರಲಾಲ್ ನೆಹರೂ ನೇತೃತ್ವದಲ್ಲಿ ಭಾರತವು ‘ಅಲಿಪ್ತ ಚಳುವಳಿ’ಯ (Non-Aligned Movement – NAM) ಪ್ರಮುಖ ಹರಿಕಾರನಾಗಿತ್ತು. NAM ಎಂದರೆ ಕೇವಲ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದಿಂದ ಸಮಾನ ಅಂತರ ಕಾಯ್ದುಕೊಳ್ಳುವುದಷ್ಟೇ ಅಲ್ಲ, ಬದಲಾಗಿ ಯಾವುದೇ ಮಿಲಿಟರಿ ಒಕ್ಕೂಟಕ್ಕೆ ಸೇರದೆ ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ತಕ್ಕಂತೆ ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ‘ವ್ಯೂಹಾತ್ಮಕ ಸ್ವಾಯತ್ತತೆ’ ಆಗಿತ್ತು.

ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಈ ನೀತಿಯು ಹೆಚ್ಚಿನ ಆರ್ಥಿಕ ವ್ಯವಹಾರಪರ ರೂಪ ಪಡೆಯಿತು. ಅಮೆರಿಕದೊಂದಿಗೆ ಐತಿಹಾಸಿಕ ಅಣು ಒಪ್ಪಂದ ಮಾಡಿಕೊಳ್ಳುತ್ತಲೇ, BRICSನಲ್ಲಿ ರಷ್ಯಾ ಮತ್ತು ಚೀನಾ ಜೊತೆ ಭಾರತ ಹಿತಾಸಕ್ತಿ ಹಂಚಿಕೊಂಡಿತು. ಇನ್ನು ನರೇಂದ್ರ ಮೋದಿ ಅವರ ಅವಧಿಯಲ್ಲಿ ಈ ವ್ಯವಸ್ಥೆಯು ‘ಬಹುಪಕ್ಷೀಯತೆ’ಗೆ ಜಾರಿತು. ಇಂದಿನ ಭಾರತ ಒಂದೇ ಸಮಯದಲ್ಲಿ Quad, BRICS, SCO ಹಾಗೂ G20ಯಲ್ಲಿದೆ. ಅಮೆರಿಕ, ರಷ್ಯಾ, ಇಸ್ರೇಲ್, ಇರಾನ್, ಸೌದಿ ಅರೇಬಿಯಾ ಹಾಗೂ ಯುಎಇ ದೇಶಗಳೊಂದಿಗೆ ವಿಷಯಾಧಾರಿತವಾಗಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಆದರೆ, ನಿಲುವು ತಳೆಯುವ ವಿಚಾರ ಬಂದಾಗ ನುಣುಚಿಕೊಳ್ಳುತ್ತಿದೆ ಅಥವಾ ಅಮೆರಿಕ ಪರವಾದ ಧೋರಣೆಯನ್ನು ಹೊಂದುತ್ತಿದೆ.

brics

ಡಾಲರ್ ಮತ್ತು ಡಿಜಿಟಲ್ ಪಾವತಿಗಳ ನಿಲುವು

ರಷ್ಯಾ ಮತ್ತು ಚೀನಾ ದೇಶಗಳು BRICS ಅನ್ನು ಅಮೆರಿಕನ್ ಡಾಲರ್ ಮತ್ತು SWIFT ವ್ಯವಸ್ಥೆಯ ವಿರುದ್ಧ ಸಂಪೂರ್ಣ ಪರ್ಯಾಯ ಸೈನ್ಯಾತ್ಮಕ ಮೈತ್ರಿಯಾಗಿ ರೂಪಿಸಲು ಬಯಸುತ್ತಿವೆ. ಆದರೆ, ಭಾರತದ ನಿಲುವು ತೀರಾ ವಿಭಿನ್ನವಾಗಿದೆ. ಭಾರತಕ್ಕೆ ಪಾಶ್ಚಿಮಾತ್ಯ ಹಣಕಾಸು ಸಂಸ್ಥೆಗಳ ವಿರುದ್ಧ ನಿಲುವು ತೆಗೆದುಕೊಳ್ಳುವ ಇಚ್ಛಾಶಕ್ತಿಯಿಂದ ದೂರ ಉಳಿದಿದೆ.

ಡಾಲರ್-ಮುಕ್ತೀಕರಣ (de-dollarisation) ವಿಚಾರದಲ್ಲಿಯೂ ಭಾರತವು ‘ಜಂಟಿ BRICS ಕರೆನ್ಸಿ’ ತರುವುದನ್ನು ಬೆಂಬಲಿಸುತ್ತಿಲ್ಲ. ಬದಲಾಗಿ, ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಮತ್ತು ‘ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ;ಗಳಿಗೆ (CBDC) ಒತ್ತು ನೀಡುತ್ತಿದೆ. 2026ರ BRICS ಅಧ್ಯಕ್ಷತೆ ಹೊಂದಿರುವ ಭಾರತವು ಸದಸ್ಯ ರಾಷ್ಟ್ರಗಳ ಡಿಜಿಟಲ್ ಕರೆನ್ಸಿಗಳನ್ನು ಸಂಪರ್ಕಿಸಿ ಪಾವತಿ ಸುಲಭಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಎದುರು ಆರ್‌ಬಿಐ ಮುಂದಿಟ್ಟಿದೆಯೇ ಹೊರತು, ಡಾಲರ್‌ ವಿರೋಧಿ ನೀತಿಯ ಪರವಾಗಿಲ್ಲ. ತನ್ನ ಈ ನಿರ್ಧಾರವನ್ನು ಭಾರತವು “ಡಾಲರ್ ಇಲ್ಲದ ಜಗತ್ತು ಬೇಕಿಲ್ಲ, ಡಾಲರ್ ಮಾತ್ರವೇ ಆಳದ ಜಗತ್ತು ಬೇಕಿದೆ” ಎಂದು ಹೇಳಿಕೊಳ್ಳುತ್ತಿದೆ.

BRICS+ ವಿಸ್ತರಣೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು

ಬ್ರಿಕ್ಸ್‌ – 2024ರಲ್ಲಿ ಇರಾನ್, UAE, ಈಜಿಪ್ಟ್, ಇಥಿಯೋಪಿಯಾ ಮತ್ತು 2025ರಲ್ಲಿ ಇಂಡೋನೇಷ್ಯಾ ಹಾಗೂ 2026ರ ಹೊತ್ತಿಗೆ ಸೌದಿ ಅರೇಬಿಯಾಗಳನ್ನು ಒಳಗೊಂಡಿದ್ದು, ಈಗ 11 ಪ್ರಮುಖ ಸದಸ್ಯ ರಾಷ್ಟ್ರಗಳನ್ನು ಹೊಂದಿರುವ BRICS+ ಆಗಿ ವಿಸ್ತರಿಸಿದೆ. ಇದರಿಂದ, ಒಕ್ಕೂಟದ ಜಾಗತಿಕ ಆರ್ಥಿಕ ತೂಕ ಹೆಚ್ಚಿದ್ದರೂ, ಆಂತರಿಕ ಏಕತೆ ಮತ್ತು ಒಮ್ಮತದ ನಿರ್ಧಾರ ಕಷ್ಟಕರವಾಗಿದೆ.

ಪರಸ್ಪರ ವಿರೋಧಿ ಭದ್ರತಾ ಹಿತಾಸಕ್ತಿ ಹೊಂದಿರುವ ಇರಾನ್ ಮತ್ತು ಯುಎಇ ಒಂದೇ ವೇದಿಕೆಯಲ್ಲಿದ್ದಾಗ ಸಂಘರ್ಷಗಳು ಬಹಿರಂಗಗೊಂಡಿವೆ. 2026ರ ಮೇ 14-15ರಂದು ನವದೆಹಲಿಯಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಸಚಿವರ ಸಭೆಯಲ್ಲಿ ಇರಾನ್ ಮೇಲಿನ ದಾಳಿಗಳ ವಿಚಾರದಲ್ಲಿ ಯುಎಇ ಮತ್ತು ಇರಾನ್ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ, ಜಂಟಿ ಪ್ರಕಟಣೆ ಹೊರಡಿಸಲು ಸಾಧ್ಯವಾಗಲಿಲ್ಲ.

ಇರಾನ್ ಪ್ರಶ್ನೆ ಮತ್ತು ಚಾಬಹಾರ್ ಬಂದರು

ಭಾರತಕ್ಕೆ ಇರಾನ್ ಎಂದರೆ ಕೇವಲ ತೈಲ ಸರಬರಾಜುದಾರ ದೇಶವಲ್ಲ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಹೊರತುಪಡಿಸಿ ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ವಾಣಿಜ್ಯ ಪ್ರವೇಶ ಪಡೆಯಲು ಇರಾನ್ ಅತ್ಯಂತ ಪ್ರಮುಖ ಭೌಗೋಳಿಕ ಹೆಬ್ಬಾಗಿಲು. ಇದರ ಕೇಂದ್ರಬಿಂದುವೇ ಚಾಬಹಾರ್ ಬಂದರು.

2024ರ ಮೇ 13ರಂದು ‘ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್’ ಮತ್ತು ಇರಾನ್‌ನ ‘ಪೋರ್ಟ್ಸ್ ಅಂಡ್ ಮ್ಯಾರಿಟೈಮ್ ಆರ್ಗನೈಸೇಷನ್’ ನಡುವೆ ಶಹೀದ್ ಬೆಹೆಷ್ಟಿ ಟರ್ಮಿನಲ್ ನಿರ್ವಹಣೆಗಾಗಿ 10 ವರ್ಷಗಳ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪಾಕಿಸ್ತಾನದ ಗ್ವಾದರ್ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿರುವಾಗ, ಚಾಬಹಾರ್ ಬಂದರು ಭಾರತಕ್ಕೆ ಕಾರ್ಯತಂತ್ರದ ನೆಲೆಯಾಗಿದೆ.

ಆದರೆ, 2025-26ರಲ್ಲಿ ಅಮೆರಿಕವು ತನ್ನ ನಿರ್ಬಂಧಗಳ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲು ಮುಂದಾದಾಗ, ಭಾರತವು ಅಮೆರಿಕದೊಂದಿಗೆ ಮಾತುಕತೆ ನಡೆಸಿ ವಿನಾಯಿತಿ ಪಡೆಯಬೇಕಾಯಿತು. ಭಾರತಕ್ಕೆ ತನ್ನ ರಾಷ್ಟ್ರೀಯ ಭದ್ರತೆಗಾಗಿ ಇರಾನ್ ಬಂದರು ಬೇಕು, ಆದರೆ ಆ ಬಂದರು ನಡೆಸಲು ಅಮೆರಿಕದ ಒಪ್ಪಿಗೆಯೂ ಬೇಕು! ಇದು ಭಾರತದ ವಿದೇಶಾಂಗ ನೀತಿಯ ದ್ವಂದ್ವ ಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.

SCO ನಿರ್ಣಯಗಳು ಮತ್ತು ರಾಜತಾಂತ್ರಿಕ ಬದಲಾವಣೆ

ಇರಾನ್ ಮೇಲಿನ ಅಮೆರಿಕ-ಇಸ್ರೇಲ್‌ನ ಮಿಲಿಟರಿ ದಾಳಿಗಳ ವಿಚಾರದಲ್ಲಿ ಭಾರತದ ನಿಲುವು ಕಾಲಕ್ಕೆ ತಕ್ಕಂತೆ ಬದಲಾಗಿದೆ. 2025ರ ಜೂನ್‌ನಲ್ಲಿ ಇಸ್ರೇಲ್-ಇರಾನ್ ಘರ್ಷಣೆಯ ಸಂದರ್ಭದಲ್ಲಿ ಎಸ್‌ಸಿಒ ಹೊರಡಿಸಿದ ಖಂಡನಾ ಹೇಳಿಕೆಯಿಂದ ಭಾರತ ದೂರ ಉಳಿದಿತ್ತು. ಇಸ್ರೇಲ್ ಜೊತೆಗಿನ ರಕ್ಷಣೆ, ತಂತ್ರಜ್ಞಾನ ಹಾಗೂ ಗುಪ್ತಚರ ಸಂಬಂಧಗಳ ಕಾರಣದಿಂದ ಭಾರತ ಆ ನಿರ್ಧಾರ ತಳೆದಿತ್ತು.

ಆದರೆ, 2026ರ ಆಗಸ್ಟ್-ಸೆಪ್ಟೆಂಬರ್‌ನ ಬಿಷ್ಕೆಕ್ ಎಸ್‌ಸಿಒ ಶೃಂಗಸಭೆಯಲ್ಲಿ ಭಾರತವು ‘ಬಿಷ್ಕೆಕ್‌ ಡಿಕ್ಲರೇಷನ್‌’ಗೆ ಒಪ್ಪಿಗೆ ನೀಡಿತು. ಅದರಲ್ಲಿ ಇರಾನ್ ಪ್ರದೇಶದ ಮೇಲಿನ ಸೇನಾ ದಾಳಿಗಳನ್ನು ಖಂಡಿಸಿ ಅಂತಾರಾಷ್ಟ್ರೀಯ ಕಾನೂನಿನ ಅನುಸಾರ ಪರಿಹಾರಕ್ಕೆ ಒತ್ತು ನೀಡಲಾಗಿತ್ತು. ಪಶ್ಚಿಮ ಏಷ್ಯಾದ ಯುದ್ಧವು ಹಾರ್ಮುಜ್ ಜಲಸಂಧಿಯ ನಾವಿಕರ ಭದ್ರತೆ, ತೈಲ ಆಮದು ಹಾಗೂ ಭಾರತದ ರೂಪಾಯಿ ಮೌಲ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದರಿಂದ ಭಾರತ ತನ್ನ ಸಮಯೋಚಿತ (ಪ್ರಾಗ್‌ಮ್ಯಾಟಿಕ್) ನಿಲುವು ಪ್ರದರ್ಶಿಸಿತು.

image 199

ಸಂಕೀರ್ಣ ಸಮತೋಲನ ಮತ್ತು ವ್ಯಾಪಾರ ಸವಾಲುಗಳು

ಭಾರತದ ಪಶ್ಚಿಮ ಏಷ್ಯಾ ನೀತಿಯು ‘ಹಗ್ಗದ ಮೇಲಿನ ನಡಿಗೆ’ಯಾಗಿದೆ. ಭಾರತಕ್ಕೆ ಚಾಬಹಾರ್‌ ಬಂದರಿಗಾಗಿ ಇರಾನ್ ಬೇಕು, ಕ್ಷಿಪಣಿ-ಡ್ರೋನ್ ತಂತ್ರಜ್ಞಾನಕ್ಕಾಗಿ ಇಸ್ರೇಲ್ ಬೇಕು, ಉದ್ಯೋಗ, ವ್ಯಾಪಾರ ಮತ್ತು ಕೋಟ್ಯಂತರ ಡಾಲರ್ ಹೂಡಿಕೆಗಾಗಿ ಯುಎಇ ಮತ್ತು ಸೌದಿ ಅರೇಬಿಯಾಗಳು ಬೇಕು. ಈ ಯಾವುದೇ ಒಂದು ದೇಶವನ್ನು ಬೆಂಬಲಿಸಿ ಮತ್ತೊಂದನ್ನು ಎದುರುಹಾಕಿಕೊಳ್ಳುವುದು ಭಾರತೀಯ ಹಿತಾಸಕ್ತಿಗೆ ಮಾರಕ. ಆದರೆ, ಕೆಲವು ಸೂಕ್ಷ್ಮ ಸಂದರ್ಭಗಳಲ್ಲಿಯೂ ಕನಿಷ್ಠ ಖಂಡನೆ ಅಥವಾ ಆಕ್ಷೇಪಣೆಗಳನ್ನೂ ಎತ್ತದಿರುವುದೂ ಕೂಡ ಭಾರತದ ವಿದೇಶಾಂಗ ನೀತಿಗೆ ಮಾರಕ ಎಂಬುದನ್ನು ಮೋದಿ ಸರ್ಕಾರ ಬದಿಗೊತ್ತಿದೆ.

ವಾಣಿಜ್ಯಿಕವಾಗಿ ನೋಡಿದರೆ, 2025-26ರ ಸಾಲಿನಲ್ಲಿ ಭಾರತವು ಇರಾನ್‌ಗೆ 7.9 ಲಕ್ಷ ಮೆಟ್ರಿಕ್ ಟನ್‌ ಬಾಸುಮತಿ ಅಕ್ಕಿ (5,424 ಕೋಟಿ ರೂ. ಮೌಲ್ಯ) ಮತ್ತು ಬೃಹತ್ ಪ್ರಮಾಣದ ಔಷಧಿ ರಫ್ತು ಮಾಡಿದೆ. ಆದರೆ, ಇರಾನ್‌ ಮೇಲಿನ ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್‌ ಜೊತೆಗಿನ ವ್ಯವಹಾರದಲ್ಲಿ ಅಡಚಣೆ ಉಂಟಾದಾಗ ಭಾರತೀಯ ರೈತರು ಮತ್ತು ರಫ್ತುದಾರರು ನಷ್ಟ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿಯೂ ಭಾರತವು ಸ್ಪಷ್ಟ ನಿಲುವು ಅಥವಾ ವಿರೋಧವನ್ನು ಎತ್ತದೇ ಇರುವುದು ಭಾರತದ ವಿರೋಧಾಬಾಸಕ್ಕೆ ಸಾಕ್ಷಿಯಾಗಿವೆ. ಚೀನಾವು ಅಮೆರಿಕನ್ ನಿರ್ಬಂಧಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಇರಾನ್ ಜೊತೆ ಪರ್ಯಾಯ ಹಣಕಾಸು ವ್ಯವಸ್ಥೆಯಲ್ಲಿ ವ್ಯಾಪಾರ ನಡೆಸುತ್ತಿದ್ದರೂ, ಭಾರತವು ಆ ಧೈರ್ಯ ತೋರಲಿಲ್ಲ.

ಚೀನಾ ಸವಾಲು ಮತ್ತು BRICS ಶೃಂಗಸಭೆಯ ಪರೀಕ್ಷೆ

BRICS ವೇದಿಕೆಯಲ್ಲಿ ಭಾರತಕ್ಕೆ ಪ್ರಮುಖ ಆಂತರಿಕ ಸವಾಲೆಂದರೆ ಚೀನಾ. ಗಲ್ವಾನ್ ಘರ್ಷಣೆಯ ನಂತರ ಗಡಿ ಭಾಗದಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಮಾತ್ರವಲ್ಲದೆ, ಅರುಣಾಚಲ ಪ್ರದೇಶದಲ್ಲಿ ಭಾರತದ ಭೂಭಾಗವನ್ನು ಚೀನಾ ಅತಿಕ್ರಿಮಿಸಿಕೊಂಡಿದೆ. ಆದರೂ, ಮೋದಿ ಸರ್ಕಾರ ಚೀನಾ ವಿರುದ್ಧವೂ ಮಾತನಾಡಿಲ್ಲ. ಸಂಪೂರ್ಣ ಮೌನಕ್ಕೆ ಶರಣಾಗಿದೆ. ಮಾತ್ರವಲ್ಲ, 2025-26ರ ಆರ್ಥಿಕ ವರ್ಷದಲ್ಲಿ ಚೀನಾದಿಂದ ಭಾರತ 132 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ.

ಸದ್ಯಕ್ಕೆ, ಚೀನಾವನ್ನು ಎದುರಿಸಲು ಭಾರತಕ್ಕೆ Quad ಬೇಕು, ಅದೇ ಸಮಯದಲ್ಲಿ ಜಾಗತಿಕ ದಕ್ಷಿಣ (Global South) ವೇದಿಕೆಯನ್ನು ಸಂಪೂರ್ಣವಾಗಿ ಚೀನಾಗೆ ಬಿಟ್ಟುಕೊಡದಿರಲು BRICS ಸಹ ಬೇಕು.

ಪ್ರಸ್ತುತ, ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯ ಯಶಸ್ಸು ಕೇವಲ ಜಂಟಿ ಪ್ರಕಟಣೆ ಹೊರಡಿಸುವುದರಲ್ಲಷ್ಟೇ ಇಲ್ಲ. ಅದು ಮೂರು ಪ್ರಮುಖ ಸವಾಲುಗಳನ್ನು ಹೇಗೆ ಎದುರಿಸುತ್ತದೆ ಎಂಬುದರ ಮೇಲೆ ನಿಂತಿದೆ:

  1. BRICS ಅನ್ನು ಅಮೆರಿಕ ವಿರೋಧಿ ತೀವ್ರಗಾಮಿ ವೇದಿಕೆಯಾಗದಂತೆ ತಡೆಯುವುದು.
  2. Global South ದೇಶಗಳಿಗೆ ಮೂಲಸೌಕರ್ಯ, ಡಿಜಿಟಲ್ ಪಾವತಿ ಮತ್ತು ಸಾಲ ಸುಧಾರಣೆಯಂತಹ ನೈಜ ಸಹಾಯ ನೀಡುವುದು.
  3. ಇರಾನ್-ಯುಎಇ, ಭಾರತ-ಚೀನಾ ಮುಂತಾದ ತೀವ್ರ ಭಿನ್ನಾಪ್ರಾಯಗಳ ನಡುವೆಯೂ ಒಕ್ಕೂಟ ಒಡೆಯದಂತೆ ಕಾಯ್ದುಕೊಳ್ಳುವುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ವಿಜಯಪುರ | ಅಂತಿಮ ಮತದಾರರ ಪಟ್ಟಿ ಪ್ರಕಟ: ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು...

ಆಸ್ಕರ್‌ 2027 | ಇವೇ, ರೇಸ್‌ನಲ್ಲಿರುವ 9 ಬಹುನಿರೀಕ್ಷಿತ ಸಿನಿಮಾಗಳು!

2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್‌ಗೆ ಈಗಿನಿಂದಲೇ ಕೌಂಟ್‌ಡೌನ್ ಆರಂಭವಾಗಿದೆ....