ಬಿಹಾರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಮತ್ತಷ್ಟು ತೀವ್ರಗೊಂಡಿದ್ದು, ಪಕ್ಷದ ರಾಜ್ಯ ಘಟಕದ ವಿರುದ್ಧ ಸೆಪ್ಟೆಂಬರ್ 8ರಂದು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿ ಸಮೀಪ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಮೇರೆಗೆ 29 ನಾಯಕರಿಗೆ ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಶಿಸ್ತು ಸಮಿತಿ ಅಧ್ಯಕ್ಷ ಕಪಿಲ್‌ದೇವ್ ಪ್ರಸಾದ್ ಯಾದವ್ ಅವರು ನೋಟಿಸ್‌ಗಳನ್ನು ಜಾರಿ ಮಾಡಿದ್ದು, ನಾಯಕರ ವಿರುದ್ಧ ‘ಪಕ್ಷ ವಿರೋಧಿ ಚಟುವಟಿಕೆ’ ಮತ್ತು ಶಿಸ್ತು ಉಲ್ಲಂಘನೆಯ ಆರೋಪ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಕ್ಷದ ನೀತಿ, ಶಿಸ್ತು ಹಾಗೂ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದ್ದು, ಇದು ಗಂಭೀರ ಶಿಸ್ತುಭಂಗಕ್ಕೆ ಸಮಾನವಾಗಿದೆ ಎಂದು ಸಮಿತಿ ಹೇಳಿದೆ.
ನೋಟಿಸ್ ಸ್ವೀಕರಿಸಿದ ದಿನದಿಂದ 72 ಗಂಟೆಗಳ ಒಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ನಾಯಕರಿಗೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರ ಸಲ್ಲಿಸದಿದ್ದರೆ ಅಥವಾ ಉತ್ತರ ತೃಪ್ತಿಕರವಾಗಿಲ್ಲದಿದ್ದರೆ, ಪಕ್ಷದ ನಿಯಮಗಳಡಿ ಏಕಪಕ್ಷೀಯವಾಗಿ ಶಿಸ್ತು ಕ್ರಮ ಕೈಗೊಳ್ಳಲು ಸಮಿತಿಗೆ ಅಧಿಕಾರವಿದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ನೋಟಿಸ್ ಪಡೆದವರಲ್ಲಿ ಮಾಜಿ ಶಾಸಕರಾದ ಅನಿಲ್ ಸಿಂಗ್ ಮತ್ತು ಪೂನಂ ದೇವಿ, ಮಾಜಿ ಸಿವಾನ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಧುಶೇಖರ್ ಪಾಂಡೆ, ಮಾಜಿ ಪಶ್ಚಿಮ ಚಂಪಾರಣ್ ಜಿಲ್ಲಾ ಅಧ್ಯಕ್ಷ ಭರತ್ ಭೂಷಣ್ ದುಬೆ, ಮಾಜಿ ಮಧೇಪುರಾ ಜಿಲ್ಲಾಧ್ಯಕ್ಷ ಸತ್ಯೇಂದ್ರ ಯಾದವ್ ಹಾಗೂ ಮಾಜಿ ಔರಂಗಾಬಾದ್ ಜಿಲ್ಲಾಧ್ಯಕ್ಷ ಮೃತ್ಯುಂಜಯ್ ಸಿಂಗ್ ಸೇರಿದ್ದಾರೆ.
ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಬಿಹಾರದ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲಾವರು ಅವರನ್ನು ಸ್ಥಾನದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿ ಅಸಮಾಧಾನಿತ ನಾಯಕರ ಗುಂಪೊಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು. ಪಕ್ಷದ ಸಂಘಟನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನೂ ಮಾಡಲಾಗಿತ್ತು.
ಈ ಕ್ರಮವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಬಳಿಕ ಪಕ್ಷದೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರಲ್ಲಿ ಕೆಲವರು ಫೆಬ್ರವರಿ 18ರಂದು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರು.
ತಮ್ಮನ್ನು ಉಚ್ಚಾಟಿಸುವ ಮೊದಲು ಎಐಸಿಸಿ ಶಿಸ್ತು ಸಮಿತಿಯ ಅನುಮೋದನೆ ಪಡೆಯಬೇಕಾಗಿತ್ತು. ಆದರೆ, ರಾಜ್ಯ ಘಟಕಕ್ಕೆ ಅಂತಹ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಉಚ್ಚಾಟಿತ ನಾಯಕರು ಪ್ರಶ್ನಿಸಿದ್ದರು.
ಇದಲ್ಲದೆ, ಒಂಬತ್ತು ಉಚ್ಚಾಟಿತ ನಾಯಕರನ್ನೂ ಒಳಗೊಂಡಂತೆ 47 ಕಾಂಗ್ರೆಸ್ ನಾಯಕರಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದರು. ಪಕ್ಷದ ಸಂಘಟನೆಯಲ್ಲಿ ಭ್ರಷ್ಟಾಚಾರವಿದೆ ಎಂದು ಆರೋಪಿಸಿದ್ದ ಅವರು, ರಾಜ್ಯ ಘಟಕ ತನ್ನ ಅಧಿಕಾರದ ಮಿತಿಯನ್ನು ಮೀರಿದೆ ಎಂದು ದೂರಿದ್ದರು.
ಇದನ್ನೂ ಓದಿ: ಬಡ ದಲಿತ vs ಶ್ರೀಮಂತ ದಲಿತ ನಾಯಕ; ಬಿಹಾರದಲ್ಲಿ ಮೀಸಲಾತಿ ಲಾಭ ಯಾರ ಪಾಲಿಗೆ?
ತಮ್ಮ ಅಹವಾಲುಗಳನ್ನು ಮಂಡಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ, ಸಮಯಾವಕಾಶ ನೀಡಲಿಲ್ಲ ಎಂದು ಅಸಮಾಧಾನಿತರು ಆರೋಪಿಸಿದ್ದರು. ಕಳೆದ ವರ್ಷ ನವೆಂಬರ್ 3ರಂದು ಪಾಟ್ನಾದ ಹೋಟೆಲ್‌ನಲ್ಲಿ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿದ್ದಾಗ, ವಿಧಾನಸಭಾ ಚುನಾವಣೆ ಬಳಿಕ ತಮ್ಮ ಅಹವಾಲುಗಳನ್ನು ಆಲಿಸುವ ಭರವಸೆ ನೀಡಲಾಗಿತ್ತು ಎಂದೂ ಅವರು ತಿಳಿಸಿದ್ದರು.
ಆದರೆ, ರಾಜ್ಯ ಕಾಂಗ್ರೆಸ್ ನಾಯಕತ್ವವು ಈ ಆರೋಪಗಳನ್ನು ತಳ್ಳಿಹಾಕಿತ್ತು. ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಾಯಕರು ಈಗಾಗಲೇ ಉಚ್ಚಾಟಿತರಾಗಿದ್ದು, ಸಂಘಟನೆಯನ್ನು ಬಲಪಡಿಸುವಂತೆ ಕೇಂದ್ರ ನಾಯಕತ್ವ ರಾಜ್ಯ ಘಟಕಕ್ಕೆ ಸೂಚಿಸಿದೆ ಎಂದು ಪಕ್ಷ ಹೇಳಿತ್ತು. ಉಚ್ಚಾಟಿತ ನಾಯಕರು ತಮ್ಮ ಅಹವಾಲುಗಳನ್ನು ಬಿಹಾರ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಚರ್ಚಿಸಬೇಕು ಎಂದು ದೆಹಲಿಯ ಹಿರಿಯ ನಾಯಕರು ಸೂಚಿಸಿದ್ದರೂ, ಅವರು ಅದನ್ನು ನಿರಾಕರಿಸಿದ್ದರು ಎಂದು ರಾಜ್ಯ ಘಟಕ ತಿಳಿಸಿತ್ತು.





