ಭಾರತದ ಕೇಂದ್ರೀಯ ಬ್ಯಾಂಕ್ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ (RBI), ದೇಶವು ಹೆಚ್ಚಿನ ಬೆಳವಣಿಗೆಯತ್ತ ಸಾಗುತ್ತಿದೆ ಮತ್ತು ಕಡಿಮೆ ಹಣದುಬ್ಬರವನ್ನು ಎದುರಿಸುತ್ತಿದೆ. ಇದು, ‘ಗೋಲ್ಡಿಲಾಕ್ಸ್’ ಕ್ಷಣ ಎಂದು ಬಣ್ಣಿಸಿದೆ. ಇಂತಹ ಬಣ್ಣನೆ ಏನೂ ಹೊಸತಲ್ಲ. ಆರ್‌ಬಿಐ ಆಗ್ಗಾಗ್ಗೆ ಈ ರೀತಿ ಹೇಳುತ್ತಲೇ ಇರುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಜಗತ್ತನ್ನೇ ಸಂಕಷ್ಟಕ್ಕೆ ದೂಡಿದೆ. ಇದಕ್ಕೆ ಭಾರತವೇನೂ ಹೊರತಾಗಿಲ್ಲ. ಭಾರತದ ಬೆಳವಣಿಗೆಗೆ ಈ ಬಿಕ್ಕಟ್ಟು ಅನಿರೀಕ್ಷಿತ ಆಘಾತ ನೀಡಿದೆ. ಆರ್‌ಬಿಐ ಬಣ್ಣಿಸಿರುವ ‘ಗೋಲ್ಡಿಲಾಕ್ಸ್’ ಆಶಾವಾದವನ್ನು ಅಲ್ಪಕಾಲಿಕವೆಂದು ಎತ್ತಿ ತೋರಿಸಿದೆ.
ಜಾಗತಿಕ ಇಂಧನ ಬಿಕ್ಕಟ್ಟಿನ ಪರಿಣಾಮವು ಭಾರತೀಯ ರೂಪಾಯಿಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ರೂಪಾಯಿ ಮೌಲ್ಯವು ದಾಖಲೆಯ ಕುಸಿತ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಸುಮಾರು 10% ರಷ್ಟು ಕುಸಿದಿದೆ. ಪ್ರಸ್ತುತ, 96 ರೂ.ಗಳ ಗಡಿ ದಾಟಿದೆ. ಮಧ್ಯಪ್ರಾಚ್ಯದ ಸಂಘರ್ಷವು ಎಷ್ಟು ಕಾಲ ಮುಂದುವರಿಯುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ರೂಪಾಯಿ ಮೌಲ್ಯವು ಮತ್ತಷ್ಟು ಕುಸಿಯಬಹುದು ಎಂದು ಅನೇಕ ತಜ್ಞರು ಅಂದಾಜಿಸಿದ್ದಾರೆ.
ಜಾಗತಿಕ ಇಕ್ವಿಟಿ ಸಂಶೋಧನಾ ಸಂಸ್ಥೆಯಾದ ಬರ್ನ್‌ಸ್ಟೈನ್ ಪ್ರಕಾರ, ಒಂದು ವೇಳೆ ಯುದ್ಧವು 2026ರ ಬಹುಭಾಗದವರೆಗೆ ಮುಂದುವರಿದರೆ, ಅದು ರೂಪಾಯಿಯ ಮೇಲೆ ‘ದುರಂತ’ದ ಪರಿಣಾಮ ಬೀರಬಹುದು. ಡಾಲರ್ ಎದುರು ರೂಪಾಯಿ ಮೌಲ್ಯವು 110ರ ಗಡಿ ದಾಟಬಹುದು. ಅಂತೆಯೇ, ಯುದ್ಧವು ಬೇಗನೆ ಕೊನೆಗೊಂಡರೂ ಸಹ, ಭವಿಷ್ಯದಲ್ಲಿ ಭಾರತದ ಎದುರು ಕಷ್ಟದ ದಿನಗಳಿವೆ. ಕರೆನ್ಸಿಯ ನಿರಂತರ ದೌರ್ಬಲ್ಯವು ಪ್ರತಿಯೊಂದರ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು; ಇದು ಗ್ರಾಹಕರಿಗೆ ಬೆಲೆ ಏರಿಕೆಯ ಹೊಡೆತ, ಕಂಪನಿಗಳ ಲಾಭಾಂಶದಲ್ಲಿ ಕುಸಿತ, ಸರ್ಕಾರದ ದೊಡ್ಡ ಮಟ್ಟದ ಹಣಕಾಸು ಕೊರತೆ ಮತ್ತು ಷೇರು ಮಾರುಕಟ್ಟೆಗೆ ಬರುವ ಬಂಡವಾಳದ ಹರಿವನ್ನೂ ಕಡಿತಗೊಳಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ಹಣದ ಹೊರಹರಿವಿನ ನಡುವೆ ಭಾರತದ ಪ್ರಮುಖ ಷೇರು ಮಾರುಕಟ್ಟೆ ಸೂಚ್ಯಂಕಗಳು ಕಳೆದ ಮೂರು ತಿಂಗಳಲ್ಲಿ ಸುಮಾರು 12% ರಷ್ಟು ಕುಸಿದಿವೆ. ಇದು ‘ವೆಲ್ತ್ ಎಫೆಕ್ಟ್’ (ಆಸ್ತಿಗಳ ಮೌಲ್ಯ ಹೆಚ್ಚಾದಾಗ ಹೆಚ್ಚು ಖರ್ಚು ಮಾಡುವ ಪ್ರವೃತ್ತಿ) ಅನ್ನು ಕುಂಠಿತಗೊಳಿಸಿದೆ.
ಜೊತೆಗೆ, ಯುದ್ಧವು ದೇಶದ ಹಣದುಬ್ಬರ ಮತ್ತು ಬೆಳವಣಿಗೆಯ ಮುನ್ನೋಟದ ಮೇಲೆ ನಕಾರಾತ್ಮಕವಾಗಿ ಪ್ರಭಾವ ಬೀರಲು ಪ್ರಾರಂಭಿಸಿದೆ. ಹೆಚ್ಚಿನ ಆಮದು ಮತ್ತು ರವಾನೆ ವೆಚ್ಚಗಳು ಹಾಗೂ ಗಲ್ಫ್ ದೇಶಗಳಲ್ಲಿ ವಾಸಿಸುವ 1 ಕೋಟಿ ಭಾರತೀಯರಿಂದ ಬರುವ ಹಣದ ಹರಿವಿನಲ್ಲಿ ಭಾರೀ ಪ್ರಮಾಣದ ಕಡಿತವಾಗಲಿದೆ. ಇದೆಲ್ಲವೂ, ದೇಶದ ಆರ್ಥಿಕತೆಯ ಮೇಲೆ ಗಣನೀಯ ಪರಿಣಾಮ ಬೀರಬಹುದು ಎಂದು ಭಾರತದ ಹಣಕಾಸು ಸಚಿವಾಲಯವು ತನ್ನ ಇತ್ತೀಚಿನ ಮಾಸಿಕ ಪರಾಮರ್ಶೆಯಲ್ಲಿ ತಿಳಿಸಿದೆ.
2026-27ನೇ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (GDP) 7% ಮಟ್ಟದಲ್ಲಿ ವಿಸ್ತರಿಸಲಿದೆ ಎಂದು ಈ ಹಿಂದೆ ಮುನ್ಸೂಚನೆ ನೀಡಲಾಗಿತ್ತು. ಆದರೆ, ಗಲ್ಫ್ ರಾಷ್ಟ್ರಗಳಲ್ಲಿನ ಬಿಕ್ಕಟ್ಟು ಈ ಬೆಳವಣಿಗೆಯನ್ನು 1% ರಷ್ಟು ಕುಗ್ಗಿಸಬಹುದು ಎಂದು ಅಂದಾಜಿಸಲಾಗಿದೆ. ಇದು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಭಾರತದ ಮಹತ್ವಾಕಾಂಕ್ಷೆಗೆ ಪೆಟ್ಟುಕೊಡುತ್ತದೆ ಎಂದು ಹೇಳಲಾಗಿದೆ.
ಈಗಾಗಲೇ ಹಣದುಬ್ಬರದ ಪರಿಣಾಮಗಳು ಜನರನ್ನು ಮುಟ್ಟಿವೆ. ಆಹಾರ ಪದಾರ್ಥಗಳ ಬೆಲೆಗಳು ಏರಲು ಪ್ರಾರಂಭಿಸಿವೆ. ಆದರೂ, ಸಂಘರ್ಷವು ಇದುವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆ ಏರಿಕೆಗೆ ಕಾರಣವಾಗಿಲ್ಲ. ಪೆಟ್ರೋಲ್ ಬೆಲೆಯಲ್ಲಿನ ಸ್ಥಿರತೆಗೆ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯೇ ಕಾರಣವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪೆಟ್ರೋಲ್ ಬೆಲೆಗಳು ಏರಲಿವೆ ಎಂದು ಹಲವರು ವಾದಿಸುತ್ತಿದ್ದಾರೆ.
ಮುಖ್ಯವಾಘಿ, ಇಂಧನ ಬೆಲೆ ಏರಿಕೆಯಾಗದೇ ಇದ್ದರೂ, ಇಂಧನ ಕೊರತೆಯ ಆಘಾತವು ಬಹುಮುಖಿಯಾಗಿ ಪರಿಣಾಮ ಬೀರುತ್ತಿದೆ. ಭಾರತವು ಕಚ್ಚಾ ತೈಲದ ವಿಶ್ವದ ಮೂರನೇ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಭಾರತದ ಆಮದುಗಳ ಪೈಕಿ 60% ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಮತ್ತು 90%ಗೂ ಹೆಚ್ಚು ಎಲ್‌ಪಿಜಿಗಳು ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತವೆ. ಈಗ, ಇದೇ ಪ್ರದೇಶದಲ್ಲಿ ಉದ್ವಿಗ್ನತೆ ಇರುವುದರಿಂದ, ಯುದ್ಧವು ಮುಂದುವರೆದರೆ, ಬಿಕ್ಕಟ್ಟು ಮತ್ತಷ್ಟು ತೀವ್ರವಾಗಲಿದೆ.
ಅಂತೆಯೇ, ಭಾರತವು ತನ್ನ ರಸಗೊಬ್ಬರ ಆಮದಿನ ನಾಲ್ಕನೇ ಒಂದು ಭಾಗವನ್ನೂ ಕೂಡ ಮಧ್ಯಪ್ರಾಚ್ಯ ದೇಶಗಳಿಂದಲೇ ತರಿಸಿಕೊಳ್ಳುತ್ತದೆ. ಈ ಆಮದಿನಲ್ಲಿನ ವ್ಯತ್ಯಯವು ದೇಶದ ಬೃಹತ್ ಕೃಷಿ ಆರ್ಥಿಕತೆಗೆ ಸಮಸ್ಯೆಗಳನ್ನು ಉಂಟುಮಾಡಲಿದೆ. ವಿಶೇಷವಾಗಿ, ಮುಂಬರುವ ಬಿತ್ತನೆ ಹಂಗಾಮಿನಲ್ಲಿ ‘ಎಲ್ ನಿನೋ’ ಹವಾಮಾನ ವೈಪರೀತ್ಯ ಎದುರಾಗುವ ಸಾಧ್ಯತೆ ಇದ್ದು, ಇದರ ಜೊತೆಗೆ, ರಸಗೊಬ್ಬರ ಕೊರತೆಯು ಕೃಷಿಯನ್ನು ಭೀರಕವಾಗಿ ಕಾಡಲಿದೆ ಎಂದು ‘ಕೇರ್ ಎಡ್ಜ್ ರೇಟಿಂಗ್ಸ್’ ತಿಳಿಸಿದೆ.
ಕ್ಯಾಪಿಟಲ್ ಎಕನಾಮಿಕ್ಸ್‌ನ ಶಿಲನ್ ಶಾ ಮತ್ತು ಮಾರ್ಕ್ ವಿಲಿಯಮ್ಸ್ ಅವರ ಪ್ರಕಾರ, “ಭಾರತದ ಆರ್ಥಿಕತೆಯು ಈಗಾಗಲೇ ಪರಿಣಾಮಗಳನ್ನು ಎದುರಿಸುತ್ತಿದೆ. ಎಲ್‌ಪಿಜಿ ಕೊರತೆಯಿಂದ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಮುಚ್ಚುತ್ತಿವೆ. ಆಹಾರ ಸಂಸ್ಕರಣಾ ಕಾರ್ಖಾನೆಗಳು, ಸೆರಾಮಿಕ್ಸ್ ಉದ್ಯಮಗಳೂ ಸಂಕಷ್ಟಕ್ಕೆ ಸಿಲುಕಿವೆ. ಬಿಕ್ಕಟ್ಟು ಮುಂದುವರೆದರೆ, ‘ಅತಿ ದೊಡ್ಡ ಮಟ್ಟದ ಸ್ಥಗಿತತೆ ಮತ್ತು ಹಣದುಬ್ಬರ ಉಂಟಾಗಲಿದೆ.”
“ರೆಸ್ಟೋರೆಂಟ್‌ಗಳು ಮುಚ್ಚುತ್ತಿರುವುದು ಮತ್ತು ಮನೆಗಳಲ್ಲಿ ನೈಸರ್ಗಿಕ ಅನಿಲದ ಕೊರತೆ ಇರುವುದು ಕುಂಠಿತ ಬೆಳವಣಿಗೆಯನ್ನು ಈಗಾಗಲೇ ತೋರಿಸುತ್ತಿದೆ” ಎಂದು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ತಿಳಿಸಿದ್ದಾರೆ.
ಇನ್ನೂ ಕೆಟ್ಟ ಪರಿಸ್ಥಿತಿಯ ಮುನ್ಸೂಚನೆಗಳು ಕಾಣಿಸುತ್ತಿವೆ. ಕೆಲವು ಘಟನಾವಳಿಗಳು ಕೋವಿಡ್ ಕಾಲದ ಲಾಕ್‌ಡೌನ್ ಪರಿಣಾಮಗಳನ್ನು ನೆನಪಿಸುತ್ತಿವೆ. ಎಲ್‌ಪಿಜಿ ಪೂರೈಕೆಯ ಸಮಸ್ಯೆಯಿಂದಾಗಿ ಮುಂಬೈನಂತಹ ದೊಡ್ಡ ನಗರಗಳಿಂದ ಕೆಲವು ವಲಸೆ ಕಾರ್ಮಿಕರು ಮರಳಿ ಹೋಗುತ್ತಿದ್ದಾರೆ. ಕಾರ್ಮಿಕರ ಲಭ್ಯತೆ ಕಡಿಮೆಯಾಗಿ ಕೂಲಿ ಬೆಲೆಗಳು ಏರಲು ಪ್ರಾರಂಭಿಸಿದರೆ, ಆರ್ಥಿಕತೆಗೆ ಪೂರೈಕೆಯ ಕಡೆಯಿಂದ ಸಮಸ್ಯೆಗಳು ಉಂಟಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸ್ನೂಪ್‌ಗೇಟ್ ರಹಸ್ಯ: ಸುಪ್ರೀಂ ಕೋರ್ಟ್‌ನಲ್ಲಿ ಬಲವಂತವಾಗಿ ಹೂತುಹೋಯ್ತಾ ಮೋದಿಯ ‘ಆ’ ಸಿಡಿ ಪ್ರಕರಣದ ಸತ್ಯ?
ಸರ್ಕಾರವು ಈ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ 62 ಸಾವಿರ ಕೋಟಿ ರೂ. ಮೌಲ್ಯದ ‘ಆರ್ಥಿಕ ಸ್ಥಿರೀಕರಣ ನಿಧಿ’ಯನ್ನು ಪ್ರಸ್ತಾಪಿಸಿದೆ. ಜೊತೆಗೆ, ಆಹಾರ ಮತ್ತು ರಸಗೊಬ್ಬರ ಸಬ್ಸಿಡಿಗಳಿಗಾಗಿ ಹೆಚ್ಚುವರಿ ಖರ್ಚು ಮಾಡಲು ಅನುಮೋದನೆ ಕೋರಿದೆ. ಆದರೆ, ಕೋವಿಡ್ ಸಮಯದಲ್ಲಿಯೂ ಸರ್ಕಾರವು 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು. ಆದರೆ, ಆದನ್ನು ಎಲ್ಲಿ? ಯಾವಾಗ? ಯಾರಿಗೆ ಬಳಸಲಾಯಿತು ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಈಗ, ಘೋಷಿಸಲಾಗಿರುವ ನಿಧಿಯ ಬಳಕೆಯೂ ಕೋವಿಡ್ ಕಾಲದಂತೆಯೇ ಆಗಬಹುದು ಎಂಬ ಟೀಕೆಗಳೂ ಇವೆ. ಆದರೂ ಸಹ, ಎದುರಾಗಿರುವ ಬಿಕ್ಕಟ್ಟಿಗೆ ಹೋಲಿಸಿದರೆ, ಘೋಷಿಸಲಾಗಿರುವ ನಿಧಿಯು ‘ತೀರಾ ಕಡಿಮೆ’ ಎನ್ನುತ್ತದೆ ‘ಬರ್ನ್‌ಸ್ಟೈನ್’ ವರದಿ.
ಸವಾಲುಗಳ ನಡುವೆಯೂ ಆಶಾವಾದಕ್ಕೆ ಅವಕಾಶವಿದೆ. ರೂಪಾಯಿ ಮೌಲ್ಯ ಕುಸಿತವು ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡಬಹುದು. ಆದರೆ, ಟ್ರಂಪ್ ಅವರ ಸುಂಕಗಳು ಮತ್ತು ಬೆದರಿಕೆಗೆ ಹೆದರಿ, ಮೋದಿ ಸರ್ಕಾರವು ಅಮೆರಿಕ ಜೊತೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡಂತೆ, ಮುಂದೆಯೂ ಮತ್ತಷ್ಟು ಎಡವಟ್ಟುಗಳನ್ನು ಮಾಡಿಕೊಳ್ಳಬಹುದು ಎಂಬ ಕಳವಳವೂ ದೇಶವಾಸಿಗಳಲ್ಲಿದೆ.
ಸದ್ಯಕ್ಕೆ, ಭಾರತವು ತನ್ನ ಇಂಧನ ವಲಯದ ದುರ್ಬಲತೆಗಳಿಗೆ ತಕ್ಷಣದ ಮತ್ತು ದೀರ್ಘಾವಧಿಯ ಕಾರ್ಯತಂತ್ರವನ್ನು ರೂಪಿಸಲು ಈ ಬಿಕ್ಕಟ್ಟು ಒಂದು ‘ಎಚ್ಚರಿಕೆಯ ಗಂಟೆ’ಯಾಗಿದೆ ಎಂದು ಸುಬ್ರಮಣಿಯನ್ ಹೇಳುತ್ತಾರೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಆರಂಭಿಸಿದ ಯುದ್ಧವು ಇರಾನ್ ಅನ್ನು ಪ್ರಭಾವಿಸುದಕ್ಕಿಂತ ಜಾಗತಿಕ ಪರಿಣಾಮಗಳನ್ನೇ ಹೆಚ್ಚು ಸೃಷ್ಟಿಸಿದೆ. ಭಾರತವು ಯುದ್ಧದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಯಾಗದಿದ್ದರೂ, ಮೂಗು ತೂರಿಸದಿದ್ದರೂ, ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳದಿದ್ದರೂ ಯುದ್ಧದ ಪರಿಣಾಮವನ್ನು ಎದುರಿಸುತ್ತಿದೆ. ಆರ್ಥಿಕವಾಗಿ ಸೋಲುತ್ತಿದೆ!



