ಅತ್ತ ಧಗೆ, ಇತ್ತ ದಾಹ: ತುಂಬಿದ ಕೆರೆಕಟ್ಟೆಗಳಿದ್ದರೂ ಕುಡಿಯುವ ನೀರಿಗೆ ಹಾಹಾಕಾರ!

Date:

ʼಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನʼ ಎನ್ನುವ ಗಾದೆಯಂತೆ ಊರಿನ ಕೂಗಳತೆಯಲ್ಲೇ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದರೂ ಬೀದರ್‌ನ ಹೊಕ್ರಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾವಲಗಾಂವ್‌ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅತ್ತ ಪೋದರೆ ಬೇಸಿಗೆ ಬಿಸಿಲಿನ ಧಗೆ, ಇತ್ತ ಪೋದರೆ ಒಣಗಿದ ಗಂಟಲಿಗೆ ನೀರಿಲ್ಲ, ಇನ್ನೆತ್ತ ಪೋಗುವುದು? ಎನ್ನುವಂತಾಗಿದೆ ಅವರ ಪರಿಸ್ಥಿತಿ.

- Advertisement -

ಸದ್ಯ ಬೇಸಿಗೆ ಇರುವುದರಿಂದ ಬಯಲುಸೀಮೆಯಲ್ಲಿ ನೀರಿನ ತತ್ವಾರ ಸಾಮಾನ್ಯ ಎಂದು ಎಣಿಸಿದರೆ, ಬಹುಶಃ ತಪ್ಪು. ಔರಾದ್‌ ತಾಲೂಕಿನ ಮಹಾರಾಷ್ಟ್ರ ರಾಜ್ಯದ ಗಡಿ ಅಂಚಿನಲ್ಲಿರುವ ಬಾವಲಗಾಂವ್‌ ಗ್ರಾಮದಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲ, ವರ್ಷಪೂರ್ತಿ ನೀರಿನ ಬವಣೆ ಇದ್ದೇ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ, ಸಮಸ್ಯೆ ಕಣ್ಣೆದುರಿಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ‘ಊರು ಉರಿದರೂ ಹನುಮಪ್ಪ ಹೊರಗೆ’ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ. ಸಾಮಾನ್ಯರ ಬವಣೆ ನೀಗಬೇಕಿದ್ದವರು ಜಾಣ ಕುರುಡು, ಜಾಣ ಕಿವುಡರಾಗಿ ಕಾಲ ಕಳೆಯುತ್ತಿದ್ದಾರೆ.

ಪ್ರತಿ ವರ್ಷ ಬೇಸಿಗೆಯಲ್ಲಿ ಜಿಲ್ಲೆಯ ಅತಿ ಹೆಚ್ಚು ಕುಡಿಯುವ ನೀರಿನ ಅಭಾವ ಎದುರಾಗುವುದು ಔರಾದ್-ಕಮಲನಗರ ತಾಲೂಕಿನಲ್ಲಿ. ಸದ್ಯ ನೀರಿನ ತತ್ವಾರ ಎದುರಿಸಲು ಅವಶ್ಯಕವಿರುವ ಗ್ರಾಮ ಮತ್ತು ತಾಂಡಾಗಳಲ್ಲಿ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಖಾಸಗಿ ಬೋರವೆಲ್‌ ಬಾಡಿಗೆ ಪಡೆಯುವುದು, ಟ್ಯಾಂಕರ್‌ ನೀರು ಪೂರೈಸುವ ವ್ಯವಸ್ಥೆ ಏನೋ ಮಾಡುತ್ತಿದೆ. ಆದರೆ, ಬವಣೆ ತಪ್ಪಿಸಲು ಶಾಶ್ವತ ಯೋಜನೆ ರೂಪಿಸಬೇಕಾದ ಆಡಳಿತ ವ್ಯವಸ್ಥೆ ತಾತ್ಕಾಲಿಕ ಪರಿಹಾರ ಹುಡುಕುವಲ್ಲಿಯೂ ಹೆಣಗಾಡುತ್ತಿದೆ.

ʼಗ್ರೌಂಡ್‌ ರಿಪೋರ್ಟ್‌ಗಾಗಿ ಈದಿನʼ ತಂಡ ಬಾವಲಗಾಂವ್‌ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಅಲ್ಲಿ ನಮ್ಮನ್ನು ಸ್ವಾಗತಿಸಿದ್ದು ₹1 ಕೋಟಿಗೂ ಅಧಿಕ ವೆಚ್ಚದ ಜೆಜೆಎಂ ಯೋಜನೆಯ ಬೃಹತ್‌ ನಾಮಫಲಕ. ಈ ಗ್ರಾಮದ 731 ಮನೆಗಳಿಗೆ ನಲ್ಲಿ ಮುಖಾಂತರ ʼಗಂಗೆʼ ಹರಿದಿದೆ ಎಂಬ ನನ್ನ ಊಹೆ ಗ್ರಾಮದೊಳಗೆ ಹೆಜ್ಜೆಯಿಟ್ಟಾಗ ಹುಸಿಯಾಗಿತ್ತು. ಜೊತೆಗೆ ಅಚ್ಚರಿ ಸಂಗತಿಯೊಂದು ನನಗೆ ಬೇಸರ ಮೂಡಿಸಿತು.

WhatsApp Image 2026 04 07 at 1.37.11 PM
ಮನೆ-ಮನೆಗೆ ಅಳವಡಿಸಿರುವ ಖರೀದಿ ನೀರಿನ ಪೈಪ್

ನೀರಿನ ಸಮಸ್ಯೆ ಈ ಊರನ್ನೂ ಬಿಟ್ಟಿಲ್ವಾ? ಎಂದುಕೊಳ್ಳುತ್ತಿದ್ದ ನನಗೆ, ʼನಮ್ಮ ಊರಿನಲ್ಲಿ ಇರುವ ಸರ್ಕಾರ ಹಾಕಿರುವ ನಲ್ಲಿ ನೀರು ಯಾವುದಕ್ಕೂ ಸಾಲಲ್ಲ.‌ ಅದಕ್ಕೆ ಊರಿನ ಅರ್ಧಕ್ಕಿಂತ ಹೆಚ್ಚಿನ ಕುಟುಂಬಗಳು ಖರೀದಿ ನೀರಿನ ಮೇಲೆ ಜಿಂದಗಿ ಮಾಡ್ಲಾತರ್‌” ಎಂದು ಸ್ಥಳೀಯರೊಬ್ಬರು ಹೇಳಿದ್ದು ಕೊಂಚ ಯೋಚನೆಗೆ ತಳ್ಳಿತು.

“ನೀರು ಖರೀದಿ ಅಂದ್ರೆ, ನಿಮ್ಮ ಪಂಚಾಯತ್‌ ಇರುವ ಹೊಕ್ರಾಣ ಗ್ರಾಮದಲ್ಲಿ ಖರೀದಿಸುವ ಹಾಗೇ ಇಲ್ಲಿಯೂ ಹಾಗೇ ನಾ?” ಎಂದೆ.

“ಹೌದು, ನಮ್ಮೂರಿನಲ್ಲಿಯೂ ಪ್ರತಿಯೊಂದು ಮನೆಗೂ ಪ್ರೈವೇಟ್‌ ಬೋರ್‌ವೆಲ್ ಅವರಿಂದ ಪೈಪ್‌ ಮೂಲಕ ನೀರು ಖರೀದಿ ಇದೆ. ಪ್ರತಿಯೊಬ್ಬರು ತಿಂಗಳಿಗೆ 200-250 ಕೊಟ್ಟು ಖರೀದಿ ತಕೋತಿವಿ. ಇದು ಬಿಟ್ರೆ ಬೇರೆ ಪರಿಹಾರ ಇಲ್ಲ” ಎಂದು ಗ್ರಾಮಸ್ಥರಾದ ಶಿವರಾಜ ಕುಂಟೆ ಹೇಳತೊಡಗಿದರು.

ಗ್ರಾಮದ ಕೆಲ ಬಡಾವಣೆಯಲ್ಲಿ ಸುತ್ತಾಡುವ ವೇಳೆ ಪ್ರತಿ ಮನೆಗೂ ಖರೀದಿ ನೀರಿನ ಪೈಪ್‌ ಜೋತು ಬಿದ್ದಿರುವುದನ್ನು ಕಂಡ ನನಗೆ, ʼಅದೇ ಗ್ರಾ.ಪಂ.ವ್ಯಾಪ್ತಿಯ ಹೊಕ್ರಾಣ ಗ್ರಾಮಸ್ಥರು ಕಂಡುಕೊಂಡ ಉಪಾಯದಂತೆ ಈ ಊರಿನ ಜನರಿಗೂ ಖರೀದಿ ನೀರೇ ಗತಿಯಾಗಿದೆʼ ಎಂದೆನಿಸಿತು. ʼಮನೆ-ಮನೆಗೆ ಗಂಗೆʼ ಎಂಬ ಜಲ ಜೀವನ್‌ ಮಿಷನ್ ನಿರೀಕ್ಷೆಯಂತೆ ಸಾಕಾರಗೊಳ್ಳದ ಹಿನ್ನೆಲೆ ಜನರೇ ತಮ್ಮ ಸ್ವಂತ ಹಣದಿಂದ ತಾತ್ಕಾಲಿಕ ಯೋಜನೆ ರೂಪಿಸಿಕೊಂಡಿದ್ದಾರೆಯೇʼ ಎಂಬಂತೆ ಭಾಸವಾಗಿತ್ತು.

ʼಗ್ರಾಮದ ಸಮೀಪದಲ್ಲಿರುವ ತೋಟಗಳಲ್ಲಿ ಖಾಸಗಿಯವರ ಬೋರ್‌ವೆಲ್ ಇವೆ. ನಾವೇ ಪೈಪ್‌ ಖರೀದಿಸಿ ನೀರಿನ ಕನೆಕ್ಷನ್‌ ತಕೊಂಡಿವಿ, ಊರಿನ ಅರ್ಧಕ್ಕಿಂತ ಹೆಚ್ಚು ಜನರ ಮನೆಗೆ ಖರೀದಿ ನೀರಿನ ಪೈಪ್‌ಲೈನ್ ಇದೆ. ತಿಂಗಳಿಗೆ 200-250 ಹಣ ಕೊಡ್ತೀವಿ. ಪಂಚಾಯತ್‌ ಅವರು ನಮಗೆ ನೀರು ಕೊಡಲ್ಲ, ಹೀಗಾಗಿ ಅವರು ನೀರಿನ ತೆರಿಗೆ ಕಟ್ಟುವಂತೆ ಕೇಳೋದೇ ಇಲ್ಲ” ಎಂದು ಗ್ರಾಮದ ಯುವ ಮುಖಂಡ ರಾಮೇಶ್ವರ ಯರಪಲ್ಲೆ ಅವರು ಹೇಳಿಕೊಂಡರು.

“ನಿಮ್ಮ ಊರಲ್ಲಿ ನೀರಿನ ಸಮಸ್ಯೆ ಇದೆಯಂತೆ, ಮತ್ತೆ ಹೋಟೆಲ್‌ಗೆ ನೀರು ಹೇಗೆ ಸಪ್ಲೈ ಮಾಡ್ತೀರಾ” ಎಂದು ಗ್ರಾಮದ ಹೋಟೆಲ್‌ ಮಾಲೀಕರೊಬ್ಬರಿಗೆ ಪ್ರಶ್ನಿಸಿದೆ. ʼಏನು ಮಾಡುವುದು ಸರ್‌, ಹಲವು ವರ್ಷಗಳಿಂದ ಹೋಟೆಲ್‌ಗೆ ಖರೀದಿ ನೀರೇ ಇದೆ. ಪ್ರತಿ ವರ್ಷಕ್ಕೆ ₹5 ಸಾವಿರ ತಕೋತಾರೆ. ಊರಿನ ಪಕ್ಕದಲ್ಲೇ ಕೆರೆ ಇದ್ದರೂ ಊರಿನ ಜನರಿಗೆ ಕುಡಿಯುವ ನೀರಿನ ತಾಪತ್ರಯ ಮಾತ್ರ ಮುಗಿಯೋ ಹಾಗೇ ಕಾಣ್ತಿಲ್ಲ” ಎಂದು ಗೋಳು ತೋಡಿಕೊಂಡರು.‌

WhatsApp Image 2026 04 07 at 1.36.43 PM

ಬಾವಲಗಾಂವ್‌ ಗ್ರಾಮದಲ್ಲಿ 600ಕ್ಕೂ ಅಧಿಕ ಕುಟುಂಬಗಳಿವೆ. ಸುಮಾರು 4-5 ಸಾವಿರದಷ್ಟು ಜನಸಂಖ್ಯೆ ಇದೆ. 2022ರ ಸುಮಾರಿಗೆ ಗ್ರಾಮದಲ್ಲಿ ₹1.18 ಕೋಟಿ ವೆಚ್ಚದಿಂದ ‌ಜಲ ಜೀವನ್ ಮಿಷನ್‌ ಯೋಜನೆ ಅಡಿಯಲ್ಲಿ ಕಾಮಗಾರಿ ಶುರು ಮಾಡಲಾಗಿದೆ. ಶೇ100 ರಷ್ಟು ಕೆಲಸ ಪೂರ್ಣಗೊಂಡಿದ್ದು ಪೇಪರ್‌ಗಳಲ್ಲೇ ಇದೆ ಹೊರತು ಯಾರೊಬ್ಬರ ಮನೆಯ ನಲ್ಲಿಗೂ ಹನಿ ನೀರು ಹರಿದಿಲ್ಲ ಎಂಬುದು ಅಲ್ಲಿನ ವಸ್ತುಸ್ಥಿತಿ ಕನ್ನಡಿಯಂತೆ ತೋರಿಸಿತು. ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜೆಜೆಎಂ ಕಾಮಗಾರಿ ಮಕಾಡೆ ಮಲಗಿಕೊಂಡಿದೆ. ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಔರಾದ್‌ ಮತಕ್ಷೇತ್ರದಲ್ಲಿ ಒಟ್ಟು 36 ಕೆರೆಗಳಿವೆ, ಅದರಲ್ಲೂ ಔರಾದ್ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 17 ಕೆರೆಗಳಿವೆ. ಈ ಪೈಕಿ ಬಾವಲಗಾಂವ್‌ ಕೆರೆ ಬೃಹತ್‌ ವಿಸ್ತೀರ್ಣದಲ್ಲಿದೆ. ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಕೆರೆ ಒಡೆದು ಅಪಾರ ಬೆಳೆ ಹಾನಿಯಾಗಿತ್ತು. ಆಗ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಕೆರೆ ಒಡೆಯುವಷ್ಟು ಮಳೆಯಾದರೂ ಸಮರ್ಪಕ ಬಳಕೆಯ ಕೊರತೆಯಿಂದ ಜನರಿಗೆ ನೀರು ದಕ್ಕದೇ ಇರುವುದು ವೈರುಧ್ಯವೇ ಸರಿ.

ಕಮಲನಗರ ತಾಲೂಕಿನ ಮಾಳೆಗಾಂವ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಂದಿಕೇರಾ, ಮಾಳೆಗಾಂವ್‌ ತಾಂಡಾ ಸೇರಿದಂತೆ ಸುತ್ತಲಿನ ತಾಂಡಾಗಳಲ್ಲಿ ಜಲಮೂಲ ಬತ್ತಿ ಹೋಗಿ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.

ಹಂದಿಕೇರಾ ಗ್ರಾಮದಲ್ಲಿ ಪ್ರತಿ ಸಲ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಸುಮಾರು 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇಲ್ಲಿನ ಜನರಿಗೆ ಈ ಬಾರಿಯೂ ನೀರಿನ ಬವಣೆ ತಪ್ಪಿಲ್ಲ. ಅಂತರ್ಜಲ ಕುಸಿತ ಹಿನ್ನೆಲೆ ಗ್ರಾಮದ 5 ಕೊಳವೆಬಾವಿಗಳಲ್ಲಿ ಮೂರರಲ್ಲಿ ನೀರು ಪಾತಾಳ ಕಂಡಿದೆ. ಉಳಿದ ಬೋರ್‌ವೆಲ್‌ನಲ್ಲಿಯೂ ನೀರಿನ ಮಟ್ಟ ತಗ್ಗಿದೆ. ಇನ್ನು ಹೊರವಲಯದ ಬಾವಿಯಿಂದ ಬರುವ ನೀರು ಕುಡಿಯೋಕೆ ಯೋಗ್ಯವಲ್ಲ. ಇದರಿಂದ ಗ್ರಾಮಸ್ಥರು ನೀರಿಗಾಗಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

“ನಮ್ಮೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಕಮಲನಗರ ತಾಲೂಕು ಪಂಚಾಯತ್‌ ಇಒ ಅವರಿಗೆ ಭೇಟಿ ಮಾಡಿ ಹೊಸ ಕೊಳವೆಬಾವಿ ಕೊರೆಸುವಂತೆ ಮನವಿ ಸಲ್ಲಿಸಲಾಗಿದೆ. ಎರಡು ತಿಂಗಳಾದರೂ ಯಾರೊಬ್ಬರೂ ಇತ್ತ ಇಣುಕಿ ನೋಡಿಲ್ಲ. ಕಳೆದ ವರ್ಷದ ನೀರಿನ ಅಭಾವ ಉಂಟಾದಾಗ ಹೊಸ ಬೋರೆವೆಲ್ ಕೊರೆಸುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ನೀರಿನ ಬವಣೆ ನೀಗಿಸಬೇಕು” ಎಂದು ಗ್ರಾಮಸ್ಥ ಅಮೂಲ ಬಿರಾದರ್‌ ಆಗ್ರಹಿಸಿದ್ದಾರೆ.

ಮಾಳೆಗಾಂವ್‌ ತಾಂಡಾ ಸೇರಿದಂತೆ ನಾನಾ ಕಡೆ ಜಲ ಜೀವನ್‌ ಮಿಷನ್‌ ಕಾಮಗಾರಿ ಕೈಗೊಂಡರೂ ಇಂದಿಗೂ ಜನರ ದಾಹ ತಣಿಸಿಲ್ಲ. ಮನೆ-ಮನೆಗೆ ಅಳವಡಿಸಿದ ನೀರಿನ ಸಂಪರ್ಕ ಕಲ್ಪಿಸುವ ನಲ್ಲಿಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಕಾಮಗಾರಿ ಬಿಲ್‌ ಪಾವತಿಸಿಕೊಳ್ಳಲು ಗುತ್ತಿಗೆದಾರರು ಫೋಟೊಗಾಗಿ ಒಂದೆರಡು ಹನಿ ನೀರು ಹರಿಸಿ ಕೈತೊಳೆದುಕೊಂಡಿದ್ದಾರೆ. ಮಾಳೆಗಾಂವ್‌ ತಾಂಡಾದಲ್ಲಿ ಸುಮಾರು 150ಕ್ಕೂ ಅಧಿಕ ಮನೆಗಳಿವೆ. ತಾಂಡಾ ನಿವಾಸಿಗಳಿಗೆ ನೀರಿನ ಬವಣೆ ನೀಗಿಸುವ ಬಗ್ಗೆ ಗ್ರಾಮಾಡಳಿತ ಅಣಿಯಾಗಬೇಕಿದೆ.

WhatsApp Image 2026 04 07 at 7.45.24 PM
ಕಮಲನಗರ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ ಮಹಿಳೆಯರು ನೀರಿಗಾಗಿ ಕಾಯುತ್ತಿರುವುದು

‌ಕೋಟ್ಯಂತರ ಅನುದಾನದ ಹೊಳೆ ಹರಿಸಿ ಬೃಹತ್ ಯೋಜನೆಗಳು ರೂಪಿಸಿದರೂ ನಿರೀಕ್ಷಿತ ಫಲಿತಾಂಶಗಳನ್ನು ಕಾಣುತ್ತಿಲ್ಲ. ಬದಲಾಗಿ ಇರುವ ವ್ಯವಸ್ಥೆಯನ್ನು ಹಾಳುಗೆಡವಿ ಅವಾಂತರಗಳನ್ನು ಸೃಷ್ಟಿಸುತ್ತಿರುವ ಅದೆಷ್ಟೋ ಯೋಜನೆಗಳು ನಮ್ಮ ಕಣ್ಣ ಮುಂದಿವೆ. ಸಾಂಪ್ರದಾಯಿಕ ನೀರು ನಿರ್ವಹಣಾ ಪದ್ಧತಿಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯು ಮುಖ್ಯವಾಗಿದೆ. ಆದರೆ, ಇವುಗಳೆಲ್ಲವೂ ನಮಗೀಗ ನಗಣ್ಯ ಎನಿಸಿಬಿಟ್ಟಿವೆ. ಕೆರೆ, ಕಟ್ಟೆ, ಕಾಲುವೆ, ಬಾವಿಗಳ ನಿರ್ವಹಣೆ ಅದೆಷ್ಟು ಮುಖ್ಯವೆಂಬುದನ್ನು ನಮ್ಮ ಹಳ್ಳಿಗರು ಇಂದಿಗೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ. ಅದಕ್ಕೆ ಆಡಳಿತ ವ್ಯವಸ್ಥೆಯೂ ಕೈಜೋಡಿಸಿ ಸಂರಕ್ಷಣೆಗೆ ಮುಂದಾದರೆ ಯಾವ ಹಳ್ಳಿಯನ್ನು ನೀರಿನ ಬರ ಬಾಧಿಸುವುದಿಲ್ಲ.

“ಅಧಿಕಾರಿಗಳು, ಗುತ್ತಿಗೆದಾರರು ಸೇರಿಕೊಂಡು ಜೆಜೆಎಂ ಯೋಜನೆಯನ್ನು ಸಂಪೂರ್ಣ ಹಳ್ಳ ಹಿಡಿಸಿದ್ದಾರೆ. ʼಮನೆ-ಮನೆಗೆ ಗಂಗೆʼ ಘೋಷಿಸಿದ ಗ್ರಾಮಗಳಲ್ಲಿ ನಾನು ಪರಿಶೀಲನೆ ಮಾಡಿಸಿದ್ದು, ಕೆಲ ಗ್ರಾಮಗಳನ್ನು ಹೊರತುಪಡಿಸಿ ಬಹುತೇಕ ಕಡೆ ಸಂಪೂರ್ಣ ಕಾಮಗಾರಿಗಳು ಕಳಪೆಯಾಗಿವೆ. ಕೆಲವೊಂದು ಕಡೆ ಒಂದು ಬಾರಿಯೂ ನೀರು ಹರಿಸದೇ ಕಾಮಗಾರಿ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮವಾಗಬೇಕು” ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ.

ಇದನ್ನೂ ಓದಿ: ಬೀದರ್‌ | ಸಮಾನತೆ ಸಿದ್ಧಾಂತದ ಪ್ರತಿಪಾದಕ ಬಾಬು ಜಗಜೀವನ್ ರಾಮ್ : ಸಚಿವ ರಹೀಂ ಖಾನ್

ಕಳೆದ ಬಾರಿ ಬೀದರ್‌ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಔರಾದ್‌-ಕಮಲನಗರ ತಾಲೂಕಿನಲ್ಲಿ, ಆದರೆ ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ ನೀರಿನ ತತ್ವಾರ ತಪ್ಪುತ್ತಿಲ್ಲ. ನೀರಿನ ಸಂರಕ್ಷಣೆ ಕೈಗೊಳ್ಳದಿರುವುದರಿಂದ ಪರಿಸ್ಥಿತಿ ತೀರಾ ಬಿಗಡಾಯಿಸುತ್ತಿದೆ. ಸಹಜ ಜಲ ಸಂಪತ್ತು ಸಾಕಷ್ಟಿದ್ದರೂ ಪ್ರತಿ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದು ಮಾಮೂಲಿ.

ಜಿಲ್ಲಾದ್ಯಂತ ಇರುವ ಪುರಾತನ ಬಾವಿ, ಕೆರೆ-ಕಟ್ಟೆ, ಕಾಲುವೆ ಸೇರಿ ಜಲಮೂಲಗಳ ಅಂಕಿ-ಅಂಶಗಳ ಪಟ್ಟಿ ಸಿದ್ಧಪಡಿಸಿ, ಅವುಗಳ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸುವುದು ಒಳಿತು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...