ಏನಿದು ‘ಮಮದಾನಿ ತೆರಿಗೆ’ ಎಂದರೆ ನ್ಯೂಯಾರ್ಕ್‌ನಲ್ಲಿ ಅತ್ಯಂತ ಶ್ರೀಮಂತರು 47 ಕೋಟಿ ರೂಪಾಯಿಗಿಂತ (5 ಮಿಲಿಯನ್ ಡಾಲರ್) ಹೆಚ್ಚು ಬೆಲೆಬಾಳುವ ಎರಡನೇ ಅಥವಾ ಮೂರನೇ ಬಂಗಲೆಗಳನ್ನು, ಪೆಂಟ್ ಹೌಸ್‌ಗಳನ್ನು ಖರೀದಿಸಿ ವರ್ಷಗಟ್ಟಲೆ ಖಾಲಿ ಬಿಟ್ಟಿರುತ್ತಾರೆ. ಕೇವಲ ಪ್ರತಿಷ್ಠೆಗಾಗಿ ಅಥವಾ ಹೂಡಿಕೆಗಾಗಿ ಹೀಗೆ ಖಾಲಿ ಬಿಟ್ಟಿರುವ ಐಷಾರಾಮಿ ಮನೆಗಳ ಮೇಲೆ ‘ಅಧಿಭಾರ’ (ಸರ್ಛಾರ್ಜ್) ವಿಧಿಸುವ ಕಠಿಣ ಕಾನೂನನ್ನು ಮಮದಾನಿ ಜಾರಿಗೆ ತಂದಿದ್ದಾರೆ. ಇದರಿಂದ ಪ್ರತಿ ವರ್ಷ ಸುಮಾರು 500 ಮಿಲಿಯನ್ ಡಾಲರ್(47,650 ಕೋಟಿ) ಆದಾಯ ನಿರೀಕ್ಷಿಸಲಾಗಿದೆ.
“ಚುನಾವಣೆಯಲ್ಲಿ ಗೆದ್ದರೆ ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಿ, ಸಾಮಾನ್ಯ ಜನರ ಬದುಕಿನ ವೆಚ್ಚವನ್ನು ಕಡಿಮೆ ಮಾಡುತ್ತೇನೆ” ಎಂದು ಪ್ರಚಾರದ ವೇಳೆ ಭರವಸೆ ನೀಡಿದ್ದ ಭಾರತೀಯ ಮೂಲದ ನ್ಯೂಯಾರ್ಕ್ ಮೇಯರ್ ಜ಼ೊಹ್ರಾನ್ ಮಮದಾನಿ, ಈಗ ನುಡಿದಂತೆ ಆ ಮಾತನ್ನು ಉಳಿಸಿಕೊಂಡಿದ್ದಾರೆ. ಸಿರಿವಂತರ ಜೇಬಿಗೆ ಕತ್ತರಿ ಹಾಕುವ ಮೂಲಕ ನಗರದ ಬೊಕ್ಕಸ ತುಂಬಿಸುವ ಅವರ ಈ ದಿಟ್ಟ ಹೆಜ್ಜೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ನ್ಯೂಯಾರ್ಕ್ ನಗರವು ಸದ್ಯ 51,363 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಕೊರತೆಯನ್ನು ಎದುರಿಸುತ್ತಿದೆ. ಸರಳವಾಗಿ ಹೇಳಬೇಕೆಂದರೆ, ನಮ್ಮ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚ (51,304 ಕೋಟಿ ರೂ.) ಗಿಂತಲೂ ಇದು ತುಸು ಹೆಚ್ಚು! ಇಷ್ಟು ದೊಡ್ಡ ರಂಧ್ರವನ್ನು ಮುಚ್ಚಲು ಮಮದಾನಿ ಅವರು ಕಂಡುಕೊಂಡ ದೊಡ್ಡ ಅಸ್ತ್ರವೇ ಈ ನೂತನ ತೆರಿಗೆ ನೀತಿ. ಈ ತೆರಿಗೆ ನೀತಿಯನ್ನು ‘ಪೀಡ್-ಅ-ತೆರೆ’ (Pied-à-terre) ಎಂದು ಕರೆದರೂ ‘ಮಮದಾನಿ ತೆರಿಗೆ’ ಎಂದು ಎಲ್ಲಡೆ ಮೆಚ್ಚುಗೆ ಗಳಿಸುತ್ತಿದೆ.
ಏನಿದು ‘ಮಮದಾನಿ ತೆರಿಗೆ’ ಎಂದರೆ ನ್ಯೂಯಾರ್ಕ್‌ನಲ್ಲಿ ಅತ್ಯಂತ ಶ್ರೀಮಂತರು 47 ಕೋಟಿ ರೂಪಾಯಿಗಿಂತ (5 ಮಿಲಿಯನ್ ಡಾಲರ್) ಹೆಚ್ಚು ಬೆಲೆಬಾಳುವ ಎರಡನೇ ಅಥವಾ ಮೂರನೇ ಬಂಗಲೆಗಳನ್ನು, ಪೆಂಟ್ ಹೌಸ್‌ಗಳನ್ನು ಖರೀದಿಸಿ ವರ್ಷಗಟ್ಟಲೆ ಖಾಲಿ ಬಿಟ್ಟಿರುತ್ತಾರೆ. ಕೇವಲ ಪ್ರತಿಷ್ಠೆಗಾಗಿ ಅಥವಾ ಹೂಡಿಕೆಗಾಗಿ ಹೀಗೆ ಖಾಲಿ ಬಿಟ್ಟಿರುವ ಐಷಾರಾಮಿ ಮನೆಗಳ ಮೇಲೆ ‘ಅಧಿಭಾರ’ (ಸರ್ಛಾರ್ಜ್) ವಿಧಿಸುವ ಕಠಿಣ ಕಾನೂನನ್ನು ಮಮದಾನಿ ಜಾರಿಗೆ ತಂದಿದ್ದಾರೆ. ಇದರಿಂದ ಪ್ರತಿ ವರ್ಷ ಸುಮಾರು 500 ಮಿಲಿಯನ್ ಡಾಲರ್(47,650 ಕೋಟಿ) ಆದಾಯ ನಿರೀಕ್ಷಿಸಲಾಗಿದೆ.
ಮಮದಾನಿ ತೆರಿಗೆಗೆ ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾಥಿ ಹೊಚುಲ್ ಕೂಡ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. “ಜಗತ್ತಿನ ಮೂಲೆಮೂಲೆಯ ಬಿಲಿಯನೇರ್‌ಗಳು, ರಷ್ಯಾದ ಶ್ರೀಮಂತ ಉದ್ಯಮಿಗಳು ಇಲ್ಲಿ ಆಸ್ತಿ ಖರೀದಿಸಿ ಬೆಲೆ ಏರಿಸುತ್ತಿದ್ದಾರೆ. ಇವರು ನಗರದ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದರಿಂದ, ನಗರದ ಅಭಿವೃದ್ಧಿಗೆ ಹೆಚ್ಚು ತೆರಿಗೆ ಕಟ್ಟುವುದು ನ್ಯಾಯಸಮ್ಮತ” ಎಂದು ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಐರ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾಗೆ ಸೋಲುಣಿಸಿದ ಭಾರತೀಯ ಸಂಜಾತ ‘ಜೈ ಮೂಂದ್ರ’
ಈ ತೆರಿಗೆಯನ್ನು ಅತ್ಯಂತ ಜಾಣ್ಮೆಯಿಂದ ಎರಡು ಹಂತಗಳಲ್ಲಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ಆಸ್ತಿಗಳ ಮೌಲ್ಯಮಾಪನ ಹಳೆಯ ಕಾಲದ್ದಾಗಿದ್ದು, ನೈಜ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ದಾಖಲಾಗಿದೆ. ಹಾಗಾಗಿ ಮೊದಲ ಎರಡು ವರ್ಷ (2026-2028), 1 ಮಿಲಿಯನ್ ಡಾಲರ್‌ಗಿಂತ (17.80 ಕೋಟಿ) ಹೆಚ್ಚಿನ ಮೌಲ್ಯದ ಮನೆಗಳಿಗೆ ಶೇ. 4 ರಿಂದ ಶೇ. 6.5ರಷ್ಟು ವಾರ್ಷಿಕ ತೆರಿಗೆ ವಿಧಿಸಲಾಗುತ್ತದೆ. ಎರಡನೇ ಹಂತದಲ್ಲಿ, ಅಂದರೆ 2028-29ರ ವೇಳೆಗೆ, ನಗರದ ಎಲ್ಲಾ ಆಸ್ತಿಗಳ ಮೌಲ್ಯವನ್ನು ಇಂದಿನ ನೈಜ ಮಾರುಕಟ್ಟೆ ಬೆಲೆಗೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ಆಗ ಆಸ್ತಿಯ ಅಧಿಕೃತ ಬೆಲೆ ದಿಢೀರ್ ಏರಿಕೆಯಾಗುವುದರಿಂದ, ತೆರಿಗೆ ದರವನ್ನು ಶೇ. 0.8 ರಿಂದ ಶೇ. 1.3ಕ್ಕೆ ಇಳಿಸಿ ಸರಿದೂಗಿಸಲಾಗುತ್ತದೆ ಎಂದು ಬಜೆಟ್ ದಾಖಲೆಗಳು ಹೇಳುತ್ತವೆ.
ಮಮದಾನಿಯ ಜನಮೆಚ್ಚುಗೆ ತೆರಿಗೆ ನೀತಿಯಿಂದಾಗಿ ಸಿರಿವಂತ ಉದ್ಯಮಿಗಳು, ಶತಕೋಟ್ಯಾಧೀಶರು, ಕಾರ್ಪೊರೇಟ್ ಕುಳಗಳ ಕಣ್ಣು ಕೆಂಪಗಾಗಿದೆ. ಪ್ರಮುಖವಾಗಿ ‘ಸಿಟಾಡೆಲ್’ ಕಂಪನಿಯ ಸಿಇಒ, ಕುಬೇರ ಕೆನ್ ಗ್ರಿಫಿನ್ ಅವರು ಮಮದಾನಿ ವಿರುದ್ಧ ತಿರುಗಿಬಿದ್ದಿದ್ದಾರೆ. 2019ರಲ್ಲಿ 238 ಮಿಲಿಯನ್ ಡಾಲರ್(22,657.6 ಕೋಟಿ ರೂ.) ಕೊಟ್ಟು ಅವರು ಖರೀದಿಸಿದ್ದ ಪೆಂಟ್‌ಹೌಸ್‌ನ ಆಸ್ತಿ ತೆರಿಗೆ ಈಗ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಲಿದೆ. 2028ರ ವೇಳೆಗೆ ಅವರು ವಾರ್ಷಿಕ ಸುಮಾರು 4 ಮಿಲಿಯನ್ ಡಾಲರ್ (ಸುಮಾರು 33 ಕೋಟಿ ರೂ.) ಕೇವಲ ಆಸ್ತಿ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ರೊಚ್ಚಿಗೆದ್ದಿರುವ ಗ್ರಿಫಿನ್, “ನನ್ನ ವ್ಯವಹಾರ ಮತ್ತು ಉದ್ಯೋಗಗಳನ್ನು ನ್ಯೂಯಾರ್ಕ್‌ನಿಂದ ಬೇರೆಡೆಗೆ ಎತ್ತಂಗಡಿ ಮಾಡುತ್ತೇನೆ” ಎಂದು ಸರ್ಕಾರಕ್ಕೆ ನೇರ ಬೆದರಿಕೆ ಹಾಕಿದ್ದಾರೆ.ಆದರೆ ಟ್ರಂಪ್‌ಗೆ ಸವಾಲು ಹಾಕುವ ಮಮದಾನಿ ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವವರಲ್ಲ.
ಶ್ರೀಮಂತರ ಎಷ್ಟೇ ವಿರೋಧ, ಬೆದರಿಕೆಗಳಿದ್ದರೂ, ‘ಖಾಲಿ ಬಿದ್ದಿರುವ ಸಿರಿವಂತರ ಮನೆಗಳಿಗೆ ತೆರಿಗೆ’ ಎಂಬ ಈ ಪರಿಕಲ್ಪನೆ ಈಗ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಭಾರತದ ಬೆಂಗಳೂರು, ಮುಂಬಯಿ ಮತ್ತು ದೆಹಲಿಯಂತಹ ಮಹಾನಗರಗಳಲ್ಲೂ ಶ್ರೀಮಂತರು ಕೋಟ್ಯಂತರ ರೂಪಾಯಿ ಮೌಲ್ಯದ ಫ್ಲಾಟ್‌ಗಳನ್ನು ಕೇವಲ ಹೂಡಿಕೆಗಾಗಿ ಖರೀದಿಸಿ ಬೀಗ ಹಾಕಿರುತ್ತಾರೆ. ಹಾಗಾಗಿ, ನಮ್ಮಲ್ಲೂ ಇಂತಹ ಕಠಿಣ ಆಸ್ತಿ ತೆರಿಗೆಯನ್ನು ತಂದರೆ, ಆ ಬೃಹತ್ ಹಣದಿಂದ ನಗರದ ಟ್ರಾಫಿಕ್, ರಸ್ತೆ, ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಅದ್ಭುತವಾಗಿ ಅಭಿವೃದ್ಧಿಪಡಿಸಬಹುದು ಎಂಬ ಕೂಗು ಈಗ ಬಲವಾಗಿ ಕೇಳಿಬರುತ್ತಿದೆ.




