ಶ್ರೀಮಂತರ ರಾಜಕಾಲುವೆ ಒತ್ತುವರಿಯಿಂದಾಗಿ ಇಡೀ ಬೆಂಗಳೂರು ಮಳೆಗೆ ಮುಳುಗುತ್ತದೆ, ಕೃತಕ ಪ್ರವಾಹ ಸೃಷ್ಟಿಯಾಗಿ ಜನರ ಜೀವ ಹೋಗುತ್ತದೆ. ಇದು ಇಡೀ ನಗರದ ಪರಿಸರಕ್ಕೆ ಕಂಟಕ ತರುವ ಕ್ರಿಮಿನಲ್ ಅಪರಾಧ. ಆದರೆ ಅಲ್ಲಿ ಸರ್ಕಾರ ಮೃದು ಧೋರಣೆ ತಳೆಯುತ್ತದೆ. ಇತ್ತ, ಫುಟ್‌ಪಾತ್ ಮೇಲೆ ನಾಲ್ಕು ಹಣ್ಣು ಮಾರುವ ಬಡವರ ಹೊಟ್ಟೆಪಾಡಿನ ವ್ಯಾಪಾರವನ್ನು ಮಾತ್ರ ಸರ್ಕಾರ ‘ಮಹಾಪರಾಧ’ ಎಂಬಂತೆ ಬಿಂಬಿಸುತ್ತದೆ.
ಇತ್ತೀಚೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬೆಂಗಳೂರಿನಲ್ಲಿ ವರ್ಷಕ್ಕೆ ಸುಮಾರು 300 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಸಾಯುತ್ತಿದ್ದಾರೆ, ಹಾಗಾಗಿ ಫುಟ್‌ಪಾತ್ ಮುಕ್ತಗೊಳಿಸುವುದು ನಮ್ಮ ನೈತಿಕ ಜವಾಬ್ದಾರಿ ಎಂದು ಮಾತನಾಡಿದ್ದಾರೆ. ವರ್ಷಕ್ಕೆ 300 ಜನ ಸಾಯುತ್ತಿರುವುದು ನಿಜಕ್ಕೂ ಆಘಾತಕಾರಿ ಮತ್ತು ಗಂಭೀರವಾದ ವಿಷಯವೇ. ಆದರೆ, ಸಚಿವರ ಈ ‘ನೈತಿಕ ಕಾಳಜಿ’ ಕೇವಲ ಬಡ ವ್ಯಾಪಾರಿಗಳನ್ನು ನೋಡಿದಾಗ ಮಾತ್ರ ಏಕೆ ಜಾಗೃತವಾಗುತ್ತದೆ ಎನ್ನುವುದೇ ಇಲ್ಲಿರುವ ಯಕ್ಷಪ್ರಶ್ನೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿ 110 ನಿಮಿಷಕ್ಕೆ ಒಂದು ರಸ್ತೆ ಅಪಘಾತ ಸಂಭವಿಸುತ್ತಿದೆ ಮತ್ತು ಪ್ರತಿ 10 ಗಂಟೆಗೆ ಒಬ್ಬ ಅಮಾಯಕ ರಸ್ತೆಯಲ್ಲೇ ಜೀವ ಕಳೆದುಕೊಳ್ಳುತ್ತಿದ್ದಾನೆ! ದೇಶದಲ್ಲೇ ರಸ್ತೆ ಅಪಘಾತ ಮತ್ತು ಸಾವುಗಳಲ್ಲಿ ನಮ್ಮ ಸಿಲಿಕಾನ್ ಸಿಟಿ ಎರಡನೇ ಅತ್ಯಂತ ಕೆಟ್ಟ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ.
ವರ್ಷವೊಂದರಲ್ಲೇ 4,769 ಅಪಘಾತಗಳು ನಡೆದು, ಬರೋಬ್ಬರಿ 894 ಜನ ಹೆಣವಾಗಿ, 4,022 ಜನ ಆಸ್ಪತ್ರೆ ಸೇರಿದ್ದಾರೆ. ಈ ಭೀಕರ ಸಾವುಗಳಿಗೆ ನರಕಸದೃಶ ರಸ್ತೆ ಗುಂಡಿಗಳು, ಸಿಗ್ನಲ್‌ಗಳ ಕೊರತೆ, ಅವೈಜ್ಞಾನಿಕ ರಸ್ತೆ ನಿರ್ಮಾಣ, ಮುರಿದು ಬಿದ್ದ ಫುಟ್‌ಪಾತ್ ಸ್ಲ್ಯಾಬ್‌ಗಳು ಮತ್ತು ಬಿಬಿಎಂಪಿಯ ಭ್ರಷ್ಟಾಚಾರ ಕಾರಣವೇ ಹೊರತು ಫುಟ್‌ಪಾತ್ ಮೇಲಿರುವ ಬಡ ವ್ಯಾಪಾರಿಗಳಲ್ಲ, ರಸ್ತೆಗಳನ್ನು ಸರಿಪಡಿಸಲಾಗದ ಸರ್ಕಾರ, ತನ್ನ ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಡೀ ಅಪಘಾತಗಳ ಹೊಣೆಯನ್ನು ಬಡವರ ಮೇಲೆ ಹೊರಿಸಿ, ಈ ಭೀಕರ ಅಂಕಿ-ಅಂಶಗಳನ್ನು ಬಡವರ ವಿರುದ್ಧದ ಅಸ್ತ್ರವಾಗಿ ಬಳಸುತ್ತಿರುವುದು ಜಿಗುಪ್ಸೆ ತರಿಸುತ್ತದೆ. ಈ ಕಾನೂನು ಮತ್ತು ಪ್ರಭುತ್ವ ಎನ್ನುವುದು ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಕಾವಲು ನಾಯಿ” ಎಂದು ಕಾರ್ಲ್ ಮಾರ್ಕ್ಸ್ ಅಂದೇ ಹೇಳಿದ್ದರು. ಅದಕ್ಕೆ ನಮ್ಮ ಬೆಂಗಳೂರಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ನಗರದಲ್ಲಿ ಕೋಟಿ ಕೋಟಿ ಲೂಟಿ ಹೊಡೆದು, ನೂರಾರು ಎಕರೆ ರಾಜಕಾಲುವೆಗಳನ್ನು, ಕೆರೆ ಅಂಗಳಗಳನ್ನು ನುಂಗಿ ನೀರು ಕುಡಿದು ನಿಂತಿರುವ ಬೃಹತ್ ಟೆಕ್ ಪಾರ್ಕ್‌ಗಳು, ಐಷಾರಾಮಿ ಮಾಲ್‌ಗಳು ಮತ್ತು ಪ್ರಭಾವಿ ಬಿಲ್ಡರ್‌ಗಳ ಅರಮನೆಗಳ ಮುಂದೆ ಇದೇ ಬಿಬಿಎಂಪಿಯ ಬುಲ್ಡೋಜರುಗಳು ಸೈಲೆಂಟ್ ಆಗಿಬಿಡುತ್ತವೆ. ಅಲ್ಲಿಗೆ ಹೋದರೆ ನಮ್ಮ ಅಧಿಕಾರಿಗಳಿಗೆ ಕಾನೂನಿನ ನೆನಪಾಗುತ್ತದೆ, ನೋಟಿಸ್ ನೀಡಲು ವರ್ಷಗಟ್ಟಲೆ ಬೇಕಾಗುತ್ತದೆ, ಸರ್ವೇಯ ನಾಟಕ ನಡೆಯುತ್ತದೆ. ಕೊನೆಗೆ ಅವರು ಕೋರ್ಟಿನಿಂದ ತಡೆಯಾಜ್ಞೆ ತರಲು ವ್ಯವಸ್ಥೆಯೇ ಪರೋಕ್ಷವಾಗಿ ದಾರಿ ಮಾಡಿಕೊಡುತ್ತದೆ.
ಇದನ್ನೂ ಓದಿ: ಅಭಿವೃದ್ಧಿ ಹೆಸರಲ್ಲಿ ಬಡವರ ಹೊಟ್ಟೆಗೆ ಪೆಟ್ಟು; ‘ಫುಟ್‌ಪಾತ್ ತೆರವು ಅಭಿಯಾನ’ಕ್ಕೆ ಬೀದಿಬದಿ ವ್ಯಾಪಾರಿಗಳ ಬದುಕು ಬಲಿ
ಶ್ರೀಮಂತರ ರಾಜಕಾಲುವೆ ಒತ್ತುವರಿಯಿಂದಾಗಿ ಇಡೀ ಬೆಂಗಳೂರು ಮಳೆಗೆ ಮುಳುಗುತ್ತದೆ, ಕೃತಕ ಪ್ರವಾಹ ಸೃಷ್ಟಿಯಾಗಿ ಜನರ ಜೀವ ಹೋಗುತ್ತದೆ. ಇದು ಇಡೀ ನಗರದ ಪರಿಸರಕ್ಕೆ ಕಂಟಕ ತರುವ ಕ್ರಿಮಿನಲ್ ಅಪರಾಧ. ಆದರೆ ಅಲ್ಲಿ ಸರ್ಕಾರ ಮೃದು ಧೋರಣೆ ತಳೆಯುತ್ತದೆ. ಇತ್ತ, ಬದುಕಲು ಬೇರೆ ದಾರಿಯಿಲ್ಲದೆ ಫುಟ್‌ಪಾತ್ ಮೇಲೆ ನಾಲ್ಕು ಹಣ್ಣು ಮಾರುವ ಬಡವನ ಹೊಟ್ಟೆಪಾಡಿನ ವ್ಯಾಪಾರವನ್ನು ಮಾತ್ರ ಸರ್ಕಾರ ‘ಮಹಾಪರಾಧ’ ಎಂಬಂತೆ ಬಿಂಬಿಸಿ, ಅವರ ಬದುಕನ್ನು ಬೀದಿಗೆ ತಳ್ಳುತ್ತಿದೆ. ಇದಕ್ಕಿಂತ ದೊಡ್ಡ ವರ್ಗ ತಾರತಮ್ಯ ಮತ್ತೊಂದಿದೆಯೇ?
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ವಿಧಿ 14ರಲ್ಲಿ ‘ಕಾನೂನಿನ ಮುಂದೆ ಎಲ್ಲರೂ ಸಮಾನರು’ ಎಂದರು. ಆದರೆ ಬೆಂಗಳೂರಿನಲ್ಲಿ ಕೆರೆ ನುಂಗಿದ ಶ್ರೀಮಂತನಿಗೊಂದು ಕಾನೂನು, ಕೆರೆ ಪಕ್ಕ ತರಕಾರಿ ಮಾರುವ ಬಡವನಿಗೊಂದು ಕಾನೂನು ಚಾಲ್ತಿಯಲ್ಲಿದೆ. ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ‘ಗೌರವಾನ್ವಿತವಾಗಿ ಬದುಕುವ ಮತ್ತು ಜೀವನೋಪಾಯ ಕಂಡುಕೊಳ್ಳುವ ಹಕ್ಕಿದೆ’ ಎಂದು ಸುಪ್ರೀಂ ಕೋರ್ಟ್ ನೂರಾರು ಬಾರಿ ಹೇಳಿದೆ. ಪರ್ಯಾಯ ವ್ಯವಸ್ಥೆ ಮಾಡದೆ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಸಂವಿಧಾನಕ್ಕೆ ಬಗೆಯುವ ದ್ರೋಹವಲ್ಲವೇ?

ಬಡವರ ರಕ್ಷಣೆಗಾಗಿಯೇ ಸಂಸತ್ತು ‘ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ವ್ಯಾಪಾರ ನಿಯಂತ್ರಣ) ಕಾಯ್ದೆ, 2014’ ಅನ್ನು ತಂದಿತು. ಈ ಕಾಯ್ದೆಯ ಸೆಕ್ಷನ್ 3(3) ರ ಪ್ರಕಾರ, ನಗರದಲ್ಲಿ ಸಮೀಕ್ಷೆ ನಡೆಸಿ ಎಲ್ಲ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪರ್ಯಾಯ ವ್ಯಾಪಾರ ವಲಯಗಳನ್ನು ಕಲ್ಪಿಸುವವರೆಗೆ ಯಾರನ್ನೂ ಒಕ್ಕಲೆಬ್ಬಿಸುವಂತಿಲ್ಲ. ಬಿಬಿಎಂಪಿಯು 30,000 ವ್ಯಾಪಾರಿಗಳನ್ನು ಗುರುತಿಸಿ, 230 ಕ್ಕೂ ಹೆಚ್ಚು ವೆಂಡಿಂಗ್ ಜೋನ್‌ಗಳನ್ನು ಪಟ್ಟಿ ಮಾಡಿ ವರ್ಷಗಳೇ ಕಳೆದರೂ, ಇದುವರೆಗೆ ಒಂದೇ ಒಂದು ವಲಯವನ್ನು ಅಧಿಕೃತವಾಗಿ ಜಾರಿ ಮಾಡಿಲ್ಲ, ಒಬ್ಬರಿಗೂ ಐಡಿ ಕಾರ್ಡ್ ಕೊಟ್ಟಿಲ್ಲ, ಶಾಸನಬದ್ಧ ಸಮಿತಿಗಳನ್ನೇ ರಚಿಸದೆ, ಕಾಯ್ದೆಯನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ನಡೆಸುತ್ತಿರುವ ಈ ಒಕ್ಕಲೆಬ್ಬಿಸುವಿಕೆ ಕಾನೂನುಬಾಹಿರ ಮತ್ತು ಅಸಂವಿಧಾನಿಕ.
ಚುನಾವಣೆ ಬಂದಾಗ ಇದೇ ಬೀದಿ ಬದಿ ವ್ಯಾಪಾರಿಗಳ ಮತಗಳಿಗಾಗಿ ಅವರ ಕಾಲಿಗೆ ಬಿದ್ದು ಭರವಸೆಗಳ ಮಹಾಪೂರ ಹರಿಸುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು, ಆರ್ಥಿಕ ನೀತಿಗಳ ವಿಷಯಕ್ಕೆ ಬಂದರೆ ಒಂದೇ ತಟ್ಟೆಯ ಚೂರುಗಳು! ಅಧಿಕಾರದಲ್ಲಿ ಯಾರೇ ಇರಲಿ, ಬಂಡವಾಳಶಾಹಿಗಳ ಒಲೈಕೆಗಾಗಿ ಬಡವರನ್ನು ‘ಅತಿಕ್ರಮಣಕಾರರು’ ಎಂದು ಬಿಂಬಿಸಿ ಅವರ ಹೊಟ್ಟೆಯ ಮೇಲೆ ಹೊಡೆಯುವ ಇವರ ದ್ವಂದ್ವ ನಿಲುವು, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಅತಿ ದೊಡ್ಡ ವಿಡಂಬನೆ ಮತ್ತು ಶೋಷಣೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಇನ್ನೊಂದು ಫ್ಲೈಓವರ್ ಬೇಡ; ಸಮಗ್ರ ಪುನರ್‌ಅಭಿವೃದ್ಧಿ ಬೇಕು
ಇದೆಲ್ಲದರ ನಡುವೆ ಸಚಿವ ಕೃಷ್ಣ ಬೈರೇಗೌಡ ಅವರು ಮತ್ತೊಂದು ಸೂತ್ರವನ್ನು ಮುಂದಿಟ್ಟಿದ್ದಾರೆ: “ವ್ಯಾಪಾರಿಗಳು ಮುಖ್ಯ ರಸ್ತೆ ಬಿಟ್ಟು ಒಳರಸ್ತೆಗಳಿಗೆ ಹೋಗಿ ವ್ಯಾಪಾರ ಮಾಡಲಿ, ಒಳಗಿನ ರಸ್ತೆಗಳೆಲ್ಲಾ ವೆಂಡಿಂಗ್ ಜೋನ್‌ಗಳೇ” ಎಂದು. ಎಂತಹ ಆಡಳಿತಾತ್ಮಕ ದಿವಾಳಿತನ. ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳು ಅಗಲವಾಗಿರುತ್ತವೆ, ಆದರೆ ವಸತಿ ಪ್ರದೇಶಗಳ ಒಳರಸ್ತೆಗಳು ಕಿರಿದಾಗಿದ್ದು, ಅನೇಕ ಕಡೆ ಫುಟ್‌ಪಾತ್‌ಗಳೇ ಇರುವುದಿಲ್ಲ. ಹಾಗಿರುವಾಗ ವ್ಯಾಪಾರಿಗಳನ್ನು ಒಳರಸ್ತೆಗಳಿಗೆ ತಳ್ಳಿದರೆ, ಅಲ್ಲಿನ ಪಾದಚಾರಿಗಳ ಗತಿಯೇನು? ಅಂದರೆ, ಕಾರುಗಳಲ್ಲಿ ಓಡಾಡುವ ಶ್ರೀಮಂತರು ಬಳಸುವ ಮುಖ್ಯ ರಸ್ತೆಗಳ ಪಾದಚಾರಿಗಳಿಗೆ ಮಾತ್ರ ಸುರಕ್ಷತೆ ಬೇಕು, ಒಳರಸ್ತೆಗಳಲ್ಲಿ ನಡೆಯುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸುರಕ್ಷಿತ ನಡಿಗೆಯ ಹಕ್ಕಿಲ್ಲವೇ? ಇದು ಸಮಸ್ಯೆಯನ್ನು ಬಗೆಹರಿಸುವ ಕ್ರಮವಲ್ಲ, ಬದಲಿಗೆ ಸಮಸ್ಯೆಯನ್ನು ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ವರ್ಗಾಯಿಸುವ ಚಾಣಾಕ್ಷ ತಂತ್ರ ಅಷ್ಟೆ. ಬಂಡವಾಳಶಾಹಿ ನಗರ ಕೇಂದ್ರಗಳಿಂದ ಬಡ ಶ್ರಮಿಕರನ್ನು ಕತ್ತಲಿಗೆ ತಳ್ಳುವ ಸಂಚಿದು.

ನಾವು ಜಾಗತಿಕ ನಗರಗಳ ಉದಾಹರಣೆಗಳನ್ನು ನೋಡುವುದಾದರೆ, ಬಂಡವಾಳಶಾಹಿಯ ಕೇಂದ್ರವಾದ ನ್ಯೂಯಾರ್ಕ್ ಆಗಲಿ ಅಥವಾ ಜಗತ್ಪ್ರಸಿದ್ಧ ಪ್ರವಾಸಿ ನಗರವಾದ ಬ್ಯಾಂಕಾಕ್ ಆಗಲಿ, ಎಲ್ಲೂ ಬೀದಿ ಬದಿ ವ್ಯಾಪಾರವನ್ನು ಕ್ರಿಮಿನಲ್ ಅಪರಾಧ ಎಂದು ನೋಡಿ ಬಡವರನ್ನು ಓಡಿಸಿಲ್ಲ. ಬದಲಿಗೆ ಅವುಗಳನ್ನು ಸೂಕ್ತವಾಗಿ ನಿಯಂತ್ರಿಸಿ, ನಗರದ ಸಂಸ್ಕೃತಿ ಮತ್ತು ಆರ್ಥಿಕತೆಯ ಭಾಗವಾಗಿಸಿಕೊಳ್ಳಲಾಗಿದೆ. ಇನ್ನು ನಮ್ಮದೇ ದೇಶದ ಒಡಿಶಾದ ಭುವನೇಶ್ವರ ನಗರವು 2014ರ ಕಾಯ್ದೆಯನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಿ, ಸುಂದರವಾದ ಅಧಿಕೃತ ‘ವ್ಯಾಪಾರ ವಲಯ’ಗಳನ್ನು ನಿರ್ಮಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಮುಂಬೈ ಮತ್ತು ದೆಹಲಿ ಹೈಕೋರ್ಟ್‌ಗಳು ಕೂಡ ‘ಟೌನ್ ವೆಂಡಿಂಗ್ ಕಮಿಟಿ’ ಇಲ್ಲದೆ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಕಾನೂನುಬಾಹಿರ ಎಂದು ತೀರ್ಪು ನೀಡಿವೆ. ಹೀಗಿರುವಾಗ, ಬೆಂಗಳೂರನ್ನು ಜಾಗತಿಕ ನಗರ ಮಾಡುವ ಕನಸು ಕಾಣುವ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದ ಆಡಳಿತ ವ್ಯವಸ್ಥೆಗೆ ಭುವನೇಶ್ವರದ ಮಾದರಿ ಏಕೆ ಕಣ್ಣಿಗೆ ಕಾಣುತ್ತಿಲ್ಲ? ಮುಂಬೈ-ದೆಹಲಿ ಕೋರ್ಟ್‌ಗಳ ಆದೇಶಗಳು ಏಕೆ ಅರ್ಥವಾಗುತ್ತಿಲ್ಲ? ಸಿಂಗಾಪುರದ ಕನಸು ಕಾಣುವ ನಮ್ಮ ಬುಲ್ಡೋಜರುಗಳಿಗೆ ಕೇವಲ ಬಡವರ ತಳ್ಳುಗಾಡಿಗಳು ಮಾತ್ರ ಕಾಣಿಸುತ್ತವೆಯೇ ಹೊರತು, ಕಾನೂನಿನ ಚೌಕಟ್ಟು ಕಾಣಿಸುವುದಿಲ್ಲವೇ?
ಪಾದಚಾರಿಗಳ ಸುರಕ್ಷಿತ ನಡಿಗೆಯ ಹಕ್ಕನ್ನು ಯಾರೂ ನಿರಾಕರಿಸುತ್ತಿಲ್ಲ. ಆದರೆ ನಗರದ ಸೌಂದರ್ಯೀಕರಣದ ಹೆಸರಿನಲ್ಲಿ ಬಡವರ ಹೊಟ್ಟೆಯನ್ನು ಸೀಳಿ ಪಡೆಯುವ ‘ಶಿಸ್ತು’ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಬೀದಿ ಬದಿ ವ್ಯಾಪಾರ ಮಾಡುವವರಲ್ಲಿ ಬಹುಪಾಲು ಜನ ದಲಿತರು, ಹಿಂದುಳಿದವರು ಮತ್ತು ಮಹಿಳೆಯರಾಗಿದ್ದಾರೆ. ಬಾಬಾಸಾಹೇಬರ ಸಾಮಾಜಿಕ ನ್ಯಾಯದ ನೀತಿಯ ಪ್ರಕಾರ, ಈ ಶೋಷಿತ ವರ್ಗಗಳಿಗೆ ರಾಜ್ಯ ಸರ್ಕಾರ ವಿಶೇಷ ರಕ್ಷಣೆ ನೀಡಬೇಕಿತ್ತು.
ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿ. ಮೊದಲು ರಾಜಕಾಲುವೆ ಮತ್ತು ಕೆರೆಗಳನ್ನು ನುಂಗಿ ಕುಳಿತಿರುವ ಕಾರ್ಪೊರೇಟ್ ಬಿಲ್ಡರ್‌ಗಳು ಮತ್ತು ಪ್ರಭಾವಿಗಳ ಅಕ್ರಮ ಕಟ್ಟಡಗಳ ಮೇಲೆ ನಿಮ್ಮ ಬುಲ್ಡೋಜರ್‌ಗಳು ಮುಲಾಜಿಲ್ಲದೆ ಚಲಿಸಲಿ. ಅದಾದ ನಂತರ, 2014ರ ಕಾಯ್ದೆಯ ಪ್ರಕಾರ ಟೌನ್ ವೆಂಡಿಂಗ್ ಕಮಿಟಿಗಳನ್ನು ರಚಿಸಿ, ಬಡ ವ್ಯಾಪಾರಿಗಳಿಗೆ ಅಧಿಕೃತ ಗುರುತಿನ ಚೀಟಿ ಹಾಗೂ ಗೌರವಾನ್ವಿತ ವ್ಯಾಪಾರ ವಲಯಗಳನ್ನು ಕಲ್ಪಿಸಿಕೊಡಿ. ಸಮಾಜದ ಕಟ್ಟಕಡೆಯ ಮನುಷ್ಯನ ಹಿತವನ್ನು ಕಾಯುವುದೇ ಸಂವಿಧಾನದ ಆಶಯ. ಬಡವರ ಬದುಕುವ ಹಕ್ಕನ್ನು ಕಸಿದುಕೊಂಡು ಕಟ್ಟುವ ‘ಗ್ಲೋಬಲ್ ಸಿಟಿ’ ಕೇವಲ ಕಾಂಕ್ರೀಟ್ ಕಾಡಾಗುತ್ತದೆಯೇ ಹೊರತು, ಮಾನವೀಯತೆಯ ನಗರವಾಗಲು ಸಾಧ್ಯವಿಲ್ಲ ಎಂಬುದಷ್ಟೆ ನಾನೊಬ್ಬ ನ್ಯಾಯವಾದಿಯಾಗಿ ಆಗ್ರಹಿಸುವುದು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



