ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಪ್ಯಾಲೆಸ್ತೀನಿನ ಕವಿ ಮೊಸಾಬ್ ಅಬು ತೋಹಾ ಅವರ ʼಚಂದಿರʼ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಹೆಚ್ ಭಾಗ್ಯ.
ಅವಳು ಡಾಂಬರು ರಸ್ತೆಯ ಮೇಲೆ ಬಿದ್ದಿರುವಳು.
ಅವಳ ಪುಟಾಣಿ ಹೊಟ್ಟೆ, ಪುಟ್ಟ ಎದೆ, ಹಣೆ, ಕೈಗಳು, ಥಣ್ಣನೆಯ ಪಾದಗಳು ಹಾಗೆ ಹಾಗೇ ಬಿದ್ದಿವೆ.
ಹಸಿದ ಬೆಕ್ಕೊಂದು ಎದುರಾಗಿದೆ.
ಸುತ್ತಮುತ್ತಲ ಮನೆಗಳಿಗೆ ಬಾಂಬ್ ಬಿದ್ದಿದ್ದು
ಲೋಹದ ಚೂರುಗಳು ಅಲ್ಲೇ ರಿಂಗಣಗುಣಿದಿವೆ.
ಹಸಿದ ಬೆಕ್ಕು ಅವಳನ್ನು ನಿಟ್ಟಿಸುತ್ತಿದೆ.
ಅವಳ ಗಾಯಗಳಿನ್ನೂ ಹಸಿಯಾಗಿವೆ.
ಹಸಿವೋ ಹಸಿವು.
ಅವಳ ತಂದೆ ಅವಳ ಪಕ್ಕದಲ್ಲೇ ಅಂಗಾತ ಬಿದ್ದಿದ್ದಾನೆ.
ಅವನ ಬ್ಯಾಕ್ ಪ್ಯಾಕ್ ನಲ್ಲಿ
ಆ ಹುಡುಗಿಯ ಅಚ್ಚುಮೆಚ್ಚಿನ ಕ್ಯಾಂಡಿ ಹಾಗೂ ಗೊಂಬೆ ಇದೆ.
ಅವಳು ಅಲ್ಲಿ ಲಾಲಿಪಪ್ ತಿನ್ನಲು ಕಾಯುತ್ತಿದ್ದಳು.
ಬೆಕ್ಕು ಸಮೀಪಿಸುತ್ತಿದೆ
ಮಾಂಸ ನೆಕ್ಕಲು,
ರಸ್ತೆಯನ್ನೂ ಬಾಂಬ್ ಉಡಾಯಿಸಿದೆ
ಮಾಂಸವೂ ಇಲ್ಲ,ಹುಡುಗಿಯೂ ಇಲ್ಲ
ತಂದೆಯೂ ಇಲ್ಲ, ಬೆಕ್ಕೂ ಇಲ್ಲ.
ಯಾರೂ ಹಸಿದಿಲ್ಲ.
ಮೇಲಿರುವ ಚಂದಿರ
ಚಂದಿರನೇ ಅಲ್ಲ.




