ಒಂದೆಡೆ ಎಲಾನ್ ಮಸ್ಕ್ ಸಂಪತ್ತು ಶತ ಲಕ್ಷ ಕೋಟಿಯತ್ತ ದಾಪುಗಾಲು ಹಾಕುತ್ತಿದ್ದರೆ, ಅವರದೇ ನೆಲವಾದ ಅಮೆರಿಕದಲ್ಲಿ ಕೋಟ್ಯಂತರ ನಿವಾಸಿಗಳು ಕ್ರೆಡಿಟ್ ಕಾರ್ಡ್, ಶೈಕ್ಷಣಿಕ ಹಾಗೂ ಗಗನಕ್ಕೇರಿರುವ ವೈದ್ಯಕೀಯ ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕ ಅಸ್ಥಿರತೆಯಿಂದ ನರಳುತ್ತಿದ್ದಾರೆ. ಇನ್ನು ಜಾಗತಿಕ ಮಟ್ಟದಲ್ಲಿ ವಾಸ್ತವವನ್ನು ಗಮನಿಸಿದರೆ, ಪ್ರಪಂಚದಾದ್ಯಂತ ಸುಮಾರು 70 ಕೋಟಿಗೂ ಹೆಚ್ಚು ಜನ ಇಂದಿಗೂ ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಮತ್ತು ಈ ಪೈಕಿ ಆಫ್ರಿಕಾ ಖಂಡವೊಂದರಲ್ಲೇ 40 ಕೋಟಿಗೂ ಅಧಿಕ ಮಂದಿ ತುತ್ತು ಅನ್ನಕ್ಕೂ ಪರದಾಡುವಂತಹ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ
ಜಗತ್ತಿನ ಅತ್ಯಂತ ಸಿರಿವಂತ ಉದ್ಯಮಿ, ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ ಅವರ ಒಟ್ಟು ಸಂಪತ್ತು ಶೀಘ್ರದಲ್ಲೇ ಶತ ಲಕ್ಷ ಕೋಟಿಯ ಸಮೀಪಕ್ಕೆ ತಲುಪಲಿದೆ ಎಂದು ಇತ್ತೀಚಿನ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಅಂದಾಜಿಸಿವೆ. ವರದಿಗಳ ಪ್ರಕಾರ ಅವರ ಬಳಿ ಸರಿಸುಮಾರು 95 ಲಕ್ಷ ಕೋಟಿ ರೂಪಾಯಿಗಳಷ್ಟು ಅಗಾಧವಾದ ಐಶ್ವರ್ಯವಿದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೇವಲ ಒಬ್ಬ ವೈಯಕ್ತಿಕ ಉದ್ಯಮಿ ಹೊಂದಿರುವುದು ಆಧುನಿಕ ಆರ್ಥಿಕ ವ್ಯವಸ್ಥೆಯ ಅತಿ ದೊಡ್ಡ ವಿಸ್ಮಯ ಮಾತ್ರವಲ್ಲ, ಅನೇಕ ಗಂಭೀರವಾದ ಚರ್ಚೆಗಳನ್ನೂ ಹುಟ್ಟುಹಾಕಿದೆ. ಮಸ್ಕ್ ಅವರ ಈ ಕಲ್ಪನಾತೀತ ಆರ್ಥಿಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಸಂಪತ್ತಿನ ಹಂಚಿಕೆ ಮತ್ತು ಆರ್ಥಿಕ ಅಸಮಾನತೆಯ ಕುರಿತು ಹೊಸ ವಿಶ್ಲೇಷಣೆಗೆ ನಾಂದಿ ಹಾಡಿದೆ.
ಮಸ್ಕ್ ಅವರ ಈ ಅಗಾಧ ಸಂಪತ್ತಿನ ಗಾತ್ರವನ್ನು ನಮ್ಮ ನಾಡಿನ ಆರ್ಥಿಕತೆಗೆ ಹೋಲಿಸಿ ನೋಡಿದಾಗ ಮಾತ್ರ ಇದರ ನೈಜ ಸ್ವರೂಪ ಅರ್ಥವಾಗುತ್ತದೆ. ನಮ್ಮ ಕರ್ನಾಟಕ ರಾಜ್ಯದ ಪ್ರಸ್ತುತ ವಾರ್ಷಿಕ ಬಜೆಟ್ ಗಾತ್ರ ಸುಮಾರು ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಆಶ್ಚರ್ಯಕರ ಸಂಗತಿಯೆಂದರೆ, ಎಲಾನ್ ಮಸ್ಕ್ ಅವರ ಈ 95 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಬಳಸಿದರೆ, ರಾಜ್ಯದ ಏಳು ಕೋಟಿಗೂ ಹೆಚ್ಚು ಜನತೆಯ ಮೇಲೆ ಯಾವುದೇ ರೀತಿಯ ನೇರ ಅಥವಾ ಪರೋಕ್ಷ ತೆರಿಗೆಯನ್ನು ವಿಧಿಸದೆ, ಇಡೀ ಕರ್ನಾಟಕ ರಾಜ್ಯವನ್ನು ಸರಿಸುಮಾರು 20 ವರ್ಷಗಳ ಕಾಲ ಅತ್ಯಂತ ಸುಲಭವಾಗಿ ಮುನ್ನಡೆಸಬಹುದು. ಹಾಗೆಯೆ 53 ಲಕ್ಷ ಕೋಟಿ ಆಯವ್ಯಯವಿರುವ 150 ಕೋಟಿ ಜನಸಂಖ್ಯೆಯ ಭಾರತವನ್ನು ತೆರಿಗೆಗಳಿಲ್ಲದೆ ಒಂದೂವರೆ ವರ್ಷ ಪೋಷಿಸಬಹುದು. ಇದು ಕೇವಲ ಅಂಕಿ-ಅಂಶಗಳ ರೋಚಕ ಹೋಲಿಕೆಯಲ್ಲ, ಜಾಗತಿಕ ಮಟ್ಟದಲ್ಲಿ ಖಾಸಗಿ ಸಂಪತ್ತು ಹೇಗೆ ಬೆಳೆಯುತ್ತಿದೆ ಎಂಬುದರ ಒಂದು ಉದಾಹರಣೆಯಾಗಿದೆ.
ಈತನ ಸಂಪತನ್ನು ಇನ್ನೂ ಹೋಲಿಕೆ ಮಾಡಿದರೆ ಆತ ನಿತ್ಯ ಒಂದು ಕೋಟಿಯನ್ನು 23,500 ವರ್ಷಗಳ ಕಾಲ ಖರ್ಚು ಮಾಡಬಹುದು. ಐಪಿಎಲದದಾನ್ನು 17 ಸಾವಿರ ವರ್ಷಗಳ ಕಾಲ ಪ್ರಾಯೋಜಿಸಬಹುದು.500 ರೂಪಾಯಿ ನೋಟುಗಳಾಗಿ ಪರಿವರ್ತಿಸಿ ಲಂಬವಾಗಿ ಜೋಡಿಸಿದರೆ, ರಾಶಿಯು ಸುಮಾರು 2.37 ಲಕ್ಷ ಕುತುಬ್ ಮಿನಾರ್ಗಳನ್ನು ಒಂದರ ಮೇಲೊಂದು ಇರಿಸುವಷ್ಟು ಎತ್ತರವಾಗಿರುತ್ತದೆ. 500 ರೂ. ನೋಟುಗಳಾಗಿ ಪರಿವರ್ತಿಸಿ ಒಂದರ ಮೇಲೊಂದರಂತೆ ಜೋಡಿಸಿದರೆ, 95 ಲಕ್ಸಂಷ ಕೋಟಿ ಸಂಪತ್ತು ಸುಮಾರು 17,200 ಕಿ.ಮೀ ಎತ್ತರಕ್ಕೆ ಏರುತ್ತದೆ, ಇದು ಭೂಮಿಯ ವ್ಯಾಸವನ್ನು ಭೂಮಿಯಿಂದ 4,400 ಕಿ.ಮೀ.ಗಿಂತ ಹೆಚ್ಚು ಮೀರುವಷ್ಟು ಇರುತ್ತದೆ. ಇದಿಷ್ಟೆ ಅಲ್ಲ ಇಂತಹ ನೂರಾರು ನೈಜ ಉದಾಹರಣೆಗಳು ಸಿಗುತ್ತವೆ.
ಭಾರತದ ಮಟ್ಟಿಗೆ ಹೇಳುವುದಾದರೆ, ನಮ್ಮ ದೇಶದ ಅತಿ ದೊಡ್ಡ ಸಿರಿವಂತರಾದ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ಮತ್ತು ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತಿಗೆ ಹೋಲಿಸಿದರೂ ಎಲಾನ್ ಮಸ್ಕ್ ಬಹು ಎತ್ತರದಲ್ಲಿ ನಿಲ್ಲುತ್ತಾರೆ. ಭಾರತದ ಆರ್ಥಿಕತೆಯ ಬಹುದೊಡ್ಡ ಶಕ್ತಿಗಳೆಂದೇ ಪರಿಗಣಿಸಲಾಗುವ ಈ ಇಬ್ಬರೂ ದಿಗ್ಗಜರ ವೈಯಕ್ತಿಕ ಸಂಪತ್ತು ತಲಾ 10 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ಇನ್ನೂ ದಾಟಿಲ್ಲ. ಅಂದರೆ, ಭಾರತದ ಈ ಇಬ್ಬರು ಅತಿದೊಡ್ಡ ಕುಬೇರರ ಒಟ್ಟು ಸಂಪತ್ತನ್ನು ಒಟ್ಟುಗೂಡಿಸಿದರೂ, ಅದು ಮಸ್ಕ್ ಅವರ ಐಶ್ವರ್ಯದ ಕಾಲು ಭಾಗದಷ್ಟೂ ಆಗುವುದಿಲ್ಲ. ಇದು ಅಮೆರಿಕನ್ ಟೆಕ್ ಕಂಪನಿಗಳ ಜಾಗತಿಕ ಪ್ರಾಬಲ್ಯ ಮತ್ತು ಮಾರುಕಟ್ಟೆಯ ಮೇಲಿರುವ ಅವರ ಪ್ರಭಾವವನ್ನು ನಿಚ್ಚಳವಾಗಿ ತೋರಿಸುತ್ತದೆ.
ಇಷ್ಟೊಂದು ಸಂಪತ್ತಿನ ಗಳಿಕೆಯ ಹಿಂದಿನ ನೈತಿಕತೆಯನ್ನು ನಾವು ವಿಮರ್ಶಿಸಬೇಕಾದ ತುರ್ತು ಅಗತ್ಯವಿದೆ. ಒಬ್ಬ ವ್ಯಕ್ತಿ ಇಷ್ಟೊಂದು ಅಗಾಧವಾದ ಸಂಪತ್ತನ್ನು ಕ್ರೋಢೀಕರಿಸುವುದು ನೈತಿಕವಾಗಿ ಸರಿಯೇ ಎಂಬುದು ಚಿಂತಕರು ಕೇಳುತ್ತಿರುವ ದೊಡ್ಡ ಪ್ರಶ್ನೆ. ಜಗತ್ತಿನ ಬಹುಪಾಲು ಜನಸಂಖ್ಯೆ ಇಂದಿಗೂ ಸುಸಜ್ಜಿತ ವಸತಿ, ಶಿಕ್ಷಣ, ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗಾಗಿ, ದಿನದ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವಾಗ, ಕೇವಲ ಒಬ್ಬ ವ್ಯಕ್ತಿಯ ಬಳಿ ಇಡೀ ದೇಶವನ್ನೇ ದಶಕಗಳ ಕಾಲ ಮುನ್ನಡೆಸುವಷ್ಟು ಹಣ ಇರುವುದು ಊಹಿಸಲೂ ಅಸಾಧ್ಯವಾದ ಅಸಮಾನತೆಯನ್ನು ಪ್ರತಿಬಿಂಬಿಸುತ್ತದೆ. ಲಕ್ಷಾಂತರ ಶ್ರಮಿಕ ವರ್ಗದ ದುಡಿಮೆಯ ಬಹುಪಾಲು ಲಾಭ ಕೇವಲ ಕೆಲವೇ ಕೆಲವು ಕೈಗಳನ್ನು ಸೇರುತ್ತಿರುವುದು ಪ್ರಸ್ತುತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ನೈತಿಕ ಲೋಪವನ್ನು ಎತ್ತಿ ತೋರಿಸುತ್ತದೆ.
ಒಂದೆಡೆ ಮಸ್ಕ್ ಅವರ ಸಂಪತ್ತು ಶತ ಲಕ್ಷ ಕೋಟಿಯತ್ತ ದಾಪುಗಾಲು ಹಾಕುತ್ತಿದ್ದರೆ, ಅವರದೇ ನೆಲವಾದ ಅಮೆರಿಕದಲ್ಲಿ ಕೋಟ್ಯಂತರ ನಿವಾಸಿಗಳು ಕ್ರೆಡಿಟ್ ಕಾರ್ಡ್, ಶೈಕ್ಷಣಿಕ ಹಾಗೂ ಗಗನಕ್ಕೇರಿರುವ ವೈದ್ಯಕೀಯ ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕ ಅಸ್ಥಿರತೆಯಿಂದ ನರಳುತ್ತಿದ್ದಾರೆ. ಇನ್ನು ಜಾಗತಿಕ ಮಟ್ಟದಲ್ಲಿ ವಾಸ್ತವವನ್ನು ಗಮನಿಸಿದರೆ, ಪ್ರಪಂಚದಾದ್ಯಂತ ಸುಮಾರು 70 ಕೋಟಿಗೂ ಹೆಚ್ಚು ಜನ ಇಂದಿಗೂ ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಮತ್ತು ಈ ಪೈಕಿ ಆಫ್ರಿಕಾ ಖಂಡವೊಂದರಲ್ಲೇ 40 ಕೋಟಿಗೂ ಅಧಿಕ ಮಂದಿ ತುತ್ತು ಅನ್ನಕ್ಕೂ ಪರದಾಡುವಂತಹ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ.
ಇದನ್ನು ಓದಿದ್ದೀರಾ? 43ರ ಗಾರ್ಡನ್ನಿಂದ 17ರ ಮೊರಾವರೆಗೆ: ಫಿಫಾ ವಿಶ್ವಕಪ್ನ ಅಚ್ಚರಿಯ ಸಂಗತಿಗಳು
ಇದಕ್ಕಿಂತಲೂ ಕರುಣಾಜನಕ ಹಾಗೂ ಆತಂಕಕಾರಿ ಸಂಗತಿಯೆಂದರೆ, ಅತ್ಯಾಧುನಿಕ ತಂತ್ರಜ್ಞಾನ ಮೆರೆಯುತ್ತಿರುವ ಈ ಜಗತ್ತಿನಲ್ಲಿ ಪ್ರತಿದಿನ ಸರಿಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಕನಿಷ್ಠ ಒಪ್ಪತ್ತಿನ ಊಟವಿಲ್ಲದೆ, ತೀವ್ರ ಅಪೌಷ್ಟಿಕತೆಯಿಂದಾಗಿ ಅಸುನೀಗುತ್ತಿದ್ದಾರೆ. ಇಷ್ಟೊಂದು ಭೀಕರವಾದ ಹಸಿವು ಮತ್ತು ಬಡತನ ಜಗತ್ತಿನಲ್ಲಿ ತಾಂಡವವಾಡುತ್ತಿರುವಾಗಲೂ, 95 ಲಕ್ಷ ಕೋಟಿ ರೂಪಾಯಿಗಳ ಒಡೆಯರಾದ ಎಲಾನ್ ಮಸ್ಕ್ ತಮ್ಮ ಒಟ್ಟು ಸಂಪತ್ತಿನ ಶೇಕಡಾ ಒಂದರಷ್ಟನ್ನೂ (ತೀರಾ ಅತ್ಯಲ್ಪ ಪ್ರಮಾಣ) ನೈಜ ಸಾಮಾಜಿಕ ಕಲ್ಯಾಣಕ್ಕೆ, ಬಡತನ ನಿರ್ಮೂಲನೆಗೆ ಅಥವಾ ಹಸಿವು ಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ ಮೀಸಲಿಟ್ಟಿಲ್ಲ; ಬದಲಾಗಿ ಅವರ ಬಹುಪಾಲು ದೇಣಿಗೆಗಳು ಕೇವಲ ತೆರಿಗೆ ವಿನಾಯಿತಿಯ ಲೆಕ್ಕಾಚಾರದ ಟ್ರಸ್ಟ್ಗಳಿಗೆ ಮಾತ್ರ ಸೀಮಿತವಾಗಿವೆ ಎಂಬುದು ಬಂಡವಾಳಶಾಹಿ ವ್ಯವಸ್ಥೆಯ ಕ್ರೂರ ವಿಪರ್ಯಾಸವನ್ನು ಹಾಗೂ ಸಂಪತ್ತಿನ ಅಮಾನವೀಯ ಕ್ರೋಢೀಕರಣವನ್ನು ಬಟಾಬಯಲು ಮಾಡುತ್ತದೆ.
ಸಾಮಾಜಿಕ ದೃಷ್ಟಿಕೋನದಿಂದ ನೋಡಿದಾಗ, ಈ ಮಟ್ಟದ ಸಂಪತ್ತಿನ ಅಸಮಾನತೆಯು ಸಮಾಜದಲ್ಲಿ ಆಳವಾದ ಕಂದಕವನ್ನು ಸೃಷ್ಟಿಸುತ್ತದೆ. ಶ್ರೀಮಂತರು ರಾತ್ರೋರಾತ್ರಿ ಮತ್ತಷ್ಟು ಶ್ರೀಮಂತರಾಗುತ್ತಿದ್ದರೆ, ಜನಸಾಮಾನ್ಯರು ಹಣದುಬ್ಬರ ಮತ್ತು ಬೆಲೆ ಏರಿಕೆಯ ಬಿಸಿಯಲ್ಲಿ ಅದೇ ಸ್ಥಿತಿಯಲ್ಲಿ ಉಳಿಯುವ ಅಥವಾ ಮತ್ತಷ್ಟು ಬಡವರಾಗುವ ಅಪಾಯವಿರುತ್ತದೆ. ಸಂಪತ್ತಿನ ಈ ತೀವ್ರತರವಾದ ಕೇಂದ್ರೀಕರಣದಿಂದಾಗಿ ಸಮಾಜದಲ್ಲಿ ಶಿಕ್ಷಣ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಒಟ್ಟಾರೆ ಜೀವನಮಟ್ಟದಲ್ಲಿ ತಾರತಮ್ಯಗಳು ಮಿತಿಮೀರಿ ಹೆಚ್ಚಾಗುತ್ತವೆ. ಸಮಾಜದಲ್ಲಿನ ಈ ಆರ್ಥಿಕ ಅಸಮತೋಲನವು ಭವಿಷ್ಯದಲ್ಲಿ ಸಾಮಾಜಿಕ ಅಶಾಂತಿ, ಅಪರಾಧಗಳ ಹೆಚ್ಚಳ ಹಾಗೂ ವರ್ಗ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.
ಇನ್ನು ಇದರ ರಾಜಕೀಯ ಸಾಧಕ-ಬಾಧಕಗಳನ್ನು ಗಮನಿಸಿದರೆ, ಇಷ್ಟೊಂದು ಹಣ ಹೊಂದಿರುವ ವ್ಯಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬೀರಬಹುದಾದ ಪ್ರಭಾವ ಅತ್ಯಂತ ಆತಂಕಕಾರಿಯಾಗಿದೆ. ಅಗಾಧ ಸಂಪತ್ತು ಹೊಂದಿರುವ ಉದ್ಯಮಿಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸರ್ಕಾರದ ನೀತಿ-ನಿಯಮಗಳನ್ನು, ತೆರಿಗೆ ಕಾನೂನುಗಳನ್ನು ತಮ್ಮ ಕಂಪನಿಗಳ ಲಾಭಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಜೊತೆಗೆ, ‘ಎಕ್ಸ್’ (ಟ್ವಿಟರ್) ನಂತಹ ಬೃಹತ್ ಜಾಗತಿಕ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಮೂಲಕ ಜನರ ಅಭಿಪ್ರಾಯಗಳನ್ನು ಬದಲಾಯಿಸುವ, ರಾಜಕೀಯ ನಿರೂಪಣೆಗಳನ್ನು ಸೃಷ್ಟಿಸುವ ಮತ್ತು ಪ್ರಮುಖ ಚುನಾವಣೆಗಳ ಮೇಲೆ ಪ್ರಭಾವ ಬೀರುವ ಅಪಾಯವೂ ಇರುತ್ತದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಬಹುದೊಡ್ಡ ಸವಾಲಾಗಿದೆ.
ಮಸ್ಕ್ನಂತಹ ಬೃಹತ್ ಕಾರ್ಪೊರೇಟ್ ಕಂಪನಿಗಳು ಕೆಲವೊಮ್ಮೆ ಅಧಿಕ ಲಾಭದಾಸೆಯಿಂದ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ, ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸುವ ಮೂಲಕ ಪೈಪೋಟಿಯನ್ನು ಇಲ್ಲವಾಗಿಸಿ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಾಶಮಾಡುವ ಪ್ರವೃತ್ತಿಯನ್ನು ಹೊಂದಿರುತ್ತವೆ. ಅದರೊಟ್ಟಿಗೆ, ಮಸ್ಕ್ ಅವರ ಈ ಬೃಹತ್ ಸಂಪತ್ತು ಕೇವಲ ಷೇರು ಮಾರುಕಟ್ಟೆಯ ಅಸ್ಥಿರ ಮೌಲ್ಯವನ್ನು ಆಧರಿಸಿರುತ್ತದೆಯೇ ಹೊರತು, ಬ್ಯಾಂಕಿನಲ್ಲಿರುವ ಭದ್ರವಾದ ನಗದು ಹಣವಲ್ಲ. ಮಾರುಕಟ್ಟೆ ದಿಢೀರ್ ಕುಸಿದಾಗ ಈ ಸಂಪತ್ತೂ ಕರಗುತ್ತದೆ. ಆದರೆ ಈ ಕೃತಕ ಆರ್ಥಿಕ ಮೌಲ್ಯವೇ ಅವರಿಗೆ ಜಗತ್ತನ್ನೇ ಆಳುವ ಪರೋಕ್ಷ ಅಧಿಕಾರವನ್ನು ನೀಡಿರುವುದು ವಿಪರ್ಯಾಸ.
ಎಲಾನ್ ಮಸ್ಕ್ 95 ಲಕ್ಷ ಕೋಟಿ ರೂಪಾಯಿಯ ಜಾಗತಿಕ ಸಂಪತ್ತಿನ ಹಂಚಿಕೆಯಲ್ಲಿರುವ ಮೂಲಭೂತ ದೋಷವನ್ನೂ ಎಚ್ಚರಿಕೆಯ ಗಂಟೆಯಂತೆ ಎತ್ತಿ ತೋರಿಸುತ್ತದೆ. ಕೇವಲ ಒಬ್ಬ ವ್ಯಕ್ತಿಯ ಬಳಿ ಇಷ್ಟು ಬೃಹತ್ ಹಣ ಕೇಂದ್ರೀಕೃತವಾಗುವುದಕ್ಕಿಂತ, ಆ ಸಂಪತ್ತಿನ ಒಂದು ಭಾಗವಾದರೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೂ, ಬಡತನ ನಿರ್ಮೂಲನೆಗೂ ಬಳಕೆಯಾಗುವಂತಹ ಕಠಿಣ ನೀತಿಗಳನ್ನು ಸರ್ಕಾರಗಳು ರೂಪಿಸಬೇಕಿದೆ. ಸಂಪತ್ತು ಸೃಷ್ಟಿಯಾಗಬೇಕು, ಆದರೆ ಅದು ಬೆರಳೆಣಿಕೆಯ ಜನರ ಸ್ವತ್ತಾಗದೆ, ಸಮಾನತೆಯ ಮತ್ತು ಸುಭದ್ರ ಸಮಾಜ ನಿರ್ಮಾಣಕ್ಕೆ ದಾರಿಯಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.





