ಸಿನಿಮಾಗಳಲ್ಲಿ ಖಡಕ್ ಐಎಎಸ್, ಐಪಿಎಸ್ ಅಧಿಕಾರಿಗಳ ಪಾತ್ರ ನೋಡಿದಾಗ, ಇಂಥ ಅಧಿಕಾರಿಗಳು ನಿಜ ಜೀವನದಲ್ಲೂ ಇದ್ದರೆ ಎಷ್ಟು ಚಂದ ಎಂದು ಸಹಜವಾಗೇ ಅಂದುಕೊಳ್ಳುತ್ತೇವೆ. ಮಹಾರಾಷ್ಟ್ರದಲ್ಲಿ ಅಂಥದ್ದೊಂದು ವ್ಯಕ್ತಿತ್ವ ಇದೆ. ಹೆಸರು ತುಕಾರಾಮ್ ಮುಂಢೆ. ನಿಯಮ ಮೀರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದು, ರಾಜಕೀಯ ಒತ್ತಡಕ್ಕೆ ಬಗ್ಗದೆ ಕರ್ತವ್ಯ ನಿರ್ವಹಿಸುವುದು, ಕ್ರಿಮಿನಲ್‌ಗಳ ಹೆಡೆಮುರಿಕಟ್ಟುವುದು ಅವರ ಕೆಲಸದ ಶೈಲಿ. ಇದೇ ಕಾರಣಕ್ಕೆ 21 ವರ್ಷಗಳ ತಮ್ಮ ಐಎಎಸ್ ಸೇವೆಯಲ್ಲಿ 20ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾಗಿದ್ದಾರೆ. ಈಗ ಆಹಾರ ಮತ್ತು ಔಷಧ ಆಡಳಿತದ ಆಯುಕ್ತರಾಗಿರುವ ಅವರು, ಆಹಾರ ಕಲಬೆರಕೆ ಮತ್ತು ಅಕ್ರಮ ಗುಟ್ಕಾ ವಿರುದ್ಧ ಆರಂಭಿಸಿರುವ ಕಾರ್ಯಾಚರಣೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
2005ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ತುಕಾರಾಮ್ ಮುಂಢೆ ಕಳೆದ 20 ವರ್ಷಗಳಲ್ಲಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಮತ್ತು ವಿವಿಧ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಒಂದೇ ಹುದ್ದೆಯಲ್ಲಿ ಹೆಚ್ಚು ಕಾಲ ಉಳಿದಿರುವುದು ಅವರ ಸೇವಾ ಜೀವನದಲ್ಲೇ ಅಪರೂಪ. ಪದೇಪದೇ ವರ್ಗಾವಣೆಯಾದರೂ ಪ್ರತಿಯೊಂದು ಹುದ್ದೆಯಲ್ಲೂ ತಮ್ಮದೇ ಆದ ಆಡಳಿತ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಒತ್ತಡಕ್ಕೆ ಮಣಿಯದಿರುವುದೇ ಅವರ ವರ್ಗಾವಣೆಗಳಿಗೆ ಪ್ರಮುಖ ಕಾರಣ ಎಂದು ಅವರ ಬೆಂಬಲಿಗರು ಹೇಳುತ್ತಾರೆ. ಆದರೂ ಕೆಲವರು, ಅತಿಯಾದ ಕಠಿಣ ಕಾರ್ಯವೈಖರಿ ಹಲವು ಸಂದರ್ಭಗಳಲ್ಲಿ ಅನಗತ್ಯ ಸಂಘರ್ಷಕ್ಕೆ ಕಾರಣವಾಗಿದೆ ಎಂದೂ ವಾದಿಸುತ್ತಾರೆ.

1975ರ ಜೂನ್ 3ರಂದು ಬೀಡ್ ಜಿಲ್ಲೆಯ ತಾಡ್‌ಸೊನ್ನಾ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಅವರು, ಗ್ರಾಮೀಣ ವಾತಾವರಣದಲ್ಲೇ ಬೆಳೆದರು. ಜಿಲ್ಲಾ ಪಂಚಾಯಿತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರು, ಕುಟುಂಬದ ಕೃಷಿ ಕೆಲಸಗಳಲ್ಲೂ ಕೈಜೋಡಿಸುತ್ತಿದ್ದರು. ಗ್ರಾಮೀಣ ಭಾರತದ ಅನೇಕ ಮಕ್ಕಳ ಬಾಲ್ಯದಂತೆ ಅವರ ಜೀವನದಲ್ಲೂ ಓದು ಮತ್ತು ಕೃಷಿ ಕೆಲಸ ಎರಡೂ ಜೊತೆಜೊತೆಯಾಗಿ ಸಾಗಿದ್ದವು.
ಆ ಗ್ರಾಮೀಣ ಬದುಕಿನ ಅನುಭವವೇ ಮುಂದೆ ಆಡಳಿತದಲ್ಲಿ ಎದುರಾಗುವ ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ನೆರವಾಯಿತು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕ ಮುಂಢೆ ಅವರು 2004ರಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ 20ನೇ ರ‍್ಯಾಂಕ್ ಗಳಿಸಿದರು. ಇದರೊಂದಿಗೆ 2005ರ ಬ್ಯಾಚ್‌ನಲ್ಲಿ ಐಎಎಸ್‌ಗೆ ಸೇರುವ ಅವಕಾಶ ಪಡೆದರು. ಒಂದು ಸಣ್ಣ ಗ್ರಾಮದ ಶಾಲೆಯಿಂದ ದೇಶದ ಅತ್ಯಂತ ಪ್ರಮುಖ ಆಡಳಿತ ಸೇವೆಗಳಲ್ಲಿ ಒಂದಾದ ಐಎಎಸ್‌ಗೆ ಅವರ ಪಯಣ ಆರಂಭವಾಯಿತು.
2014ರಲ್ಲಿ ಸೋಲಾಪುರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವಧಿ ಮುಂಢೆ ಅವರ ವೃತ್ತಿಜೀವನದ ಅತ್ಯಂತ ಗಮನಾರ್ಹ ಹಂತಗಳಲ್ಲಿ ಒಂದು. ಆಗ ಜಿಲ್ಲೆ ದೀರ್ಘಕಾಲದ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು. ಜಲಯುಕ್ತ ಶಿವಾರ್ ಯೋಜನೆಯಡಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡ ಅವರ ಆಡಳಿತ, ನೀರಿನ ಟ್ಯಾಂಕರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು. ಇದರಿಂದ ಅವರಿಗೆ ‘ಮಹಾರಾಷ್ಟ್ರದ ವಾಟರ್ ಮ್ಯಾನ್’ ಎಂಬ ಹೆಸರು ಬಂತು. ನಂತರ ನವಿ ಮುಂಬೈ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಿದಾಗಲೂ ಅವರ ಕಾರ್ಯಶೈಲಿಯಲ್ಲಿ ಬದಲಾವಣೆಯಾಗಲಿಲ್ಲ. ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಂಡ ಅವರು, ಆಸ್ತಿ ತೆರಿಗೆ ಸಂಗ್ರಹ ವ್ಯವಸ್ಥೆಯನ್ನೂ ಸುಧಾರಿಸಲು ಮುಂದಾದರು. ಕಚೇರಿಯಲ್ಲಿ ಕುಳಿತು ಕಡತಗಳ ಮೂಲಕವೇ ನಗರದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಕ್ಕಿಂತ, ಅವುಗಳನ್ನು ನೇರವಾಗಿ ಕಣ್ಣಾರೆ ನೋಡಬೇಕು ಎಂಬ ನಿಲುವು ಅವರದ್ದಾಗಿತ್ತು.
ಅದರ ಭಾಗವಾಗಿ ಅವರು ಮುಂಜಾನೆ ‘ವಾಕ್ ವಿತ್ ಕಮಿಷನರ್’ ಎಂಬ ತಪಾಸಣೆಗಳನ್ನು ನಡೆಸುತ್ತಿದ್ದರು. ನಗರದ ವಿವಿಧ ಪ್ರದೇಶಗಳಿಗೆ ತೆರಳಿ ಅಲ್ಲಿನ ನಾಗರಿಕ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುತ್ತಿದ್ದರು. ರಸ್ತೆ, ಸ್ವಚ್ಛತೆ, ಅಕ್ರಮ ನಿರ್ಮಾಣ ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ವರದಿಗಳ ಮೂಲಕ ಮಾತ್ರ ತಿಳಿದುಕೊಳ್ಳದೆ, ಸ್ಥಳಕ್ಕೇ ತೆರಳಿ ಪರಿಶೀಲಿಸುವ ಅವರ ಈ ಶೈಲಿ ಗಮನ ಸೆಳೆದಿತ್ತು.
FDA ಆಯುಕ್ತರಾಗಿ ಮುಂಢೆ ಅವರ ಪ್ರಸ್ತುತ ಅವಧಿ ಈಗಾಗಲೇ ಮುಂಬೈನ ಆಹಾರ ಉದ್ಯಮದ ಮೇಲೆ ಪರಿಣಾಮ ಬೀರಿದೆ. ನೂರ್ ಮೊಹಮ್ಮದಿ ಹೋಟೆಲ್, ಶಾಲಿಮಾರ್ ರೆಸ್ಟೋರೆಂಟ್, ಕೆ. ರುಸ್ತಮ್ & ಕೋ., ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ವಿಲ್ಲಿಂಗ್ಡನ್ ಸ್ಪೋರ್ಟ್ಸ್ ಕ್ಲಬ್ ಮತ್ತು ಜುಹು ಜಿಮ್ಖಾನಾ ಸೇರಿದಂತೆ ಹಲವು ಪ್ರಸಿದ್ಧ ಸಂಸ್ಥೆಗಳು FDA ತಪಾಸಣೆಗೆ ಒಳಪಟ್ಟಿವೆ. ಈ ಸಂಸ್ಥೆಗಳಲ್ಲಿ ಗಂಭೀರ ಸ್ವಚ್ಛತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಕೆಲವು ಕಡೆ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಕೆಲವು ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ತಪಾಸಣೆ ವೇಳೆ ಕೀಟಗಳ ಹಾವಳಿ, ಕಳಪೆ ಸ್ವಚ್ಛತೆ, ಆಹಾರವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸದಿರುವುದು ಮತ್ತು ಅಗತ್ಯ ದಾಖಲೆಗಳ ಕೊರತೆ ಸೇರಿದಂತೆ ಹಲವು ಲೋಪಗಳು ಪತ್ತೆಯಾಗಿವೆ ಎಂದು FDA ಅಧಿಕಾರಿಗಳು ತಿಳಿಸಿದ್ದಾರೆ. ತಪಾಸಣೆಗೆ ಒಳಪಟ್ಟ ಹಲವು ಸಂಸ್ಥೆಗಳು ನಂತರ ಲೋಪಗಳನ್ನು ಸರಿಪಡಿಸುವ ಕ್ರಮಗಳನ್ನು ಕೈಗೊಂಡಿವೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಬಳಿಕ ಮುಂಢೆ ಅವರ ಗಮನ ಜನರ ಆರೋಗ್ಯದೆಡೆಗೂ ಬಿತ್ತು. ಆಹಾರದಿಂದ ಔಷಧದವರೆಗೆ ನಿಯಮ ಉಲ್ಲಂಘನೆಗಳ ವಿರುದ್ಧವೂ ಇಲಾಖೆ ಇದೀಗ ಕ್ರಮಕ್ಕೆ ಮುಂದಾಗಿದೆ.
ಇದರ ಭಾಗವಾಗಿ ಇಂದು (ಆಗಸ್ಟ್ 12) ಮಹಾರಾಷ್ಟ್ರದ ಆಯುರ್ವೇದ ಔಷಧ ತಯಾರಿಕಾ ಘಟಕಗಳ ವಿರುದ್ಧ ರಾಜ್ಯವ್ಯಾಪಿ ತಪಾಸಣೆ ಆರಂಭಿಸಲಾಗಿದೆ. ರಾಜ್ಯದಲ್ಲಿ ಪರವಾನಗಿ ಹೊಂದಿರುವ 434 ಆಯುರ್ವೇದ ಔಷಧ ತಯಾರಿಕಾ ಘಟಕಗಳನ್ನು ಪರಿಶೀಲಿಸಲಾಗುತ್ತಿದ್ದು, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ, 1940, ಔಷಧ ಮತ್ತು ಸೌಂದರ್ಯವರ್ಧಕ ನಿಯಮಗಳು, 1945 ಹಾಗೂ ಶೆಡ್ಯೂಲ್ ‘ಟಿ’ಯಲ್ಲಿರುವ ಉತ್ತಮ ತಯಾರಿಕಾ ಪದ್ಧತಿ (GMP) ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ 135 ತಯಾರಿಕಾ ಘಟಕಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಔಷಧಗಳ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದಾದ ಗಂಭೀರ ಉಲ್ಲಂಘನೆಗಳ ಹಿನ್ನೆಲೆಯಲ್ಲಿ 10 ಘಟಕಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗಿದೆ. ತಪಾಸಣೆ ವೇಳೆ ಕೆಲವು ಘಟಕಗಳಲ್ಲಿ ಅರ್ಹ ತಾಂತ್ರಿಕ ಸಿಬ್ಬಂದಿ ಇಲ್ಲದಿರುವುದು, ಗುಣಮಟ್ಟ ನಿಯಂತ್ರಣ ವ್ಯವಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು, ಅಗತ್ಯ ಪರೀಕ್ಷಾ ಉಪಕರಣಗಳ ಕೊರತೆ, ಅಸ್ವಚ್ಛ ವಾತಾವರಣ, ತಪ್ಪಾದ ಲೇಬಲಿಂಗ್ ಹಾಗೂ ಔಷಧದ ಬ್ಯಾಚ್ ಮತ್ತು ಕಚ್ಚಾ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದು ಪತ್ತೆಯಾಗಿದೆ.

ಇಂಥ ಲೋಪಗಳು ನಿಯಮ ಉಲ್ಲಂಘನೆಯ ಪ್ರಶ್ನೆಯಲ್ಲ. ಔಷಧದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುವುದರಿಂದ ಅಂತಿಮವಾಗಿ ಅದರ ಹೊರೆ ಬೀಳುವುದು ಔಷಧ ಸೇವಿಸುವ ಸಾಮಾನ್ಯ ಜನರ ಮೇಲೆಯೇ. ಇದೇ ಕಾರಣಕ್ಕೆ ಮುಂಢೆ ಅವರ ಇತ್ತೀಚಿನ ಕಾರ್ಯಾಚರಣೆಯನ್ನು ಕೇವಲ ದಾಳಿ ಅಥವಾ ತಪಾಸಣೆಗಳ ಸರಣಿ ಎಂದು ನೋಡುವುದಕ್ಕಿಂತ, ಆಹಾರ ಮತ್ತು ಔಷಧ ಸುರಕ್ಷತಾ ವ್ಯವಸ್ಥೆಯನ್ನು ಕಟ್ಟುನಿಟ್ಟುಗೊಳಿಸುವ ಪ್ರಯತ್ನವಾಗಿಯೂ ನೋಡಲಾಗುತ್ತಿದೆ. ಹೋಟೆಲ್ ಆಗಿರಲಿ, ಆಹಾರ ಉತ್ಪಾದನಾ ಘಟಕವಾಗಿರಲಿ ಅಥವಾ ಔಷಧ ತಯಾರಿಕಾ ಕಂಪನಿಯಾಗಿರಲಿ.. ನಿಯಮ ಉಲ್ಲಂಘನೆಯಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ಇಲಾಖೆ ರವಾನಿಸುತ್ತಿದೆ.
ಇದನ್ನೂ ಓದಿ: ಸಿನಿಮಾ ವಿಶೇಷ | ʼಬಾಲನ್: ದಿ ಬಾಯ್ʼ- ತಾಯಿಯ ಪ್ರೀತಿ ಎಲ್ಲವನ್ನೂ ಸಮರ್ಥಿಸಬಹುದೇ?
ಆದರೆ ಮುಂಢೆ ಅವರ ಕಾರ್ಯವೈಖರಿ ಎಷ್ಟು ಜನಪ್ರಿಯವಾಗಿದೆಯೋ, ಅಷ್ಟೇ ವಿವಾದಕ್ಕೂ ಕಾರಣವಾಗಿದೆ. ಅವರ ಕಠಿಣ ಕ್ರಮಗಳು ರಾಜಕಾರಣಿಗಳು, ವ್ಯಾಪಾರಿಗಳು ಮತ್ತು ಆಡಳಿತದ ಕೆಲ ವರ್ಗಗಳ ಅಸಮಾಧಾನಕ್ಕೆ ಕಾರಣವಾಗಿವೆ. ಕೆಲವು ಜಾರಿ ಕ್ರಮಗಳ ಬಗ್ಗೆ ನ್ಯಾಯಾಲಯಗಳಲ್ಲೂ ಪ್ರಶ್ನೆಗಳು ಎದ್ದಿವೆ. ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜತೆಗೆ, ಅವುಗಳನ್ನು ಎಲ್ಲರಿಗೂ ಸಮಾನವಾಗಿ ಮತ್ತು ಕಾನೂನುಬದ್ಧ ರೀತಿಯಲ್ಲಿ ಜಾರಿಗೊಳಿಸುವ ಅಗತ್ಯವಿದೆ ಎಂಬ ಸೂಚನೆಗಳು ನ್ಯಾಯಾಲಯದಿಂದ ಬಂದಿವೆ.
ಮುಂಢೆ ಅವರ ವೃತ್ತಿಜೀವನದಲ್ಲಿ ಇಂತಹ ವಿರೋಧಗಳು ಅವರಿಗೆ ಹೊಸದೇನಲ್ಲ. ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ವರ್ಗಾವಣೆಯಾಗುತ್ತಲೇ ಬಂದರೂ, ತಮ್ಮ ಕೆಲಸದ ಶೈಲಿಯನ್ನು ಬದಲಿಸಿಕೊಂಡಿಲ್ಲ. ವರ್ಗಾವಣೆಗಳು ಅವರ ಹುದ್ದೆಯನ್ನು ಬದಲಾಯಿಸಿವೆ, ಆದರೆ ಕೆಲಸ ಮಾಡುವ ರೀತಿಯನ್ನು ಬದಲಾಯಿಸಿಲ್ಲ ಎನ್ನುವುದು ಅವರ ವೃತ್ತಿಜೀವನವನ್ನು ವಿವರಿಸುವ ಮಾತಾಗಬಹುದು. ಇಂದು ಅವರ ಹೆಸರು ಮತ್ತೆ ಸುದ್ದಿಯಲ್ಲಿರುವುದಕ್ಕೆ ಕಾರಣವೂ ಅದೇ. ಈ ಬಾರಿ ಅವರು ಜನರ ದಿನನಿತ್ಯದ ಬದುಕಿನ ಅತ್ಯಂತ ಮೂಲಭೂತ ಅಗತ್ಯವಾದ ಆಹಾರ ಮತ್ತು ಔಷಧದ ಸುರಕ್ಷತೆಯ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಮುಂದೆ ಈ ಕಾರ್ಯಾಚರಣೆ ಎಷ್ಟು ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ಮೇಲೆ ಕೈಗೊಳ್ಳುವ ಕ್ರಮಗಳು ಎಷ್ಟರ ಮಟ್ಟಿಗೆ ಶಾಶ್ವತ ಬದಲಾವಣೆ ತರುತ್ತವೆ ಎಂಬುದೇ ಕುತೂಹಲದ ಸಂಗತಿ.




