ಸಿನಿಮಾ ವಿಶೇಷ | ʼಬಾಲನ್: ದಿ ಬಾಯ್ʼ- ತಾಯಿಯ ಪ್ರೀತಿ ಎಲ್ಲವನ್ನೂ ಸಮರ್ಥಿಸಬಹುದೇ?

Date:

ಚಿತ್ರ ಮುಗಿದ ಮೇಲೂ ಉಳಿಯುವ ಪ್ರಶ್ನೆ ಒಂದೇ; ಒಬ್ಬ ತಾಯಿ ತನ್ನ ಮಗನನ್ನು ಉಳಿಸಲು ಎಷ್ಟು ದೂರ ಹೋಗಬಹುದು? ಮತ್ತು ಆ ಪ್ರಯಾಣದಲ್ಲಿ ಮತ್ತೊಬ್ಬರ ಬದುಕು ನಾಶವಾದರೆ ಅದನ್ನು ನಾವು ಕ್ಷಮಿಸಬಹುದೇ?

- Advertisement -

ಮಲಯಾಳಂ ಚಿತ್ರರಂಗ ಇತ್ತೀಚಿನ ವರ್ಷಗಳಲ್ಲಿ ಭಾವನಾತ್ಮಕತೆ ಮತ್ತು ವಾಸ್ತವಿಕತೆಯನ್ನು ಬೆರೆಸಿ ಗಮನಾರ್ಹ ಚಿತ್ರಗಳನ್ನು ಕೊಟ್ಟಿದೆ. ಮಂಜುಮ್ಮೆಲ್ ಬಾಯ್ಸ್ ಮೂಲಕ ಗಮನ ಸೆಳೆದ ನಿರ್ದೇಶಕ ಚಿದಂಬರಂ ಅವರ ಬಾಲನ್: ದಿ ಬಾಯ್ ಕೂಡ ಅಂತಹ ಪ್ರಯತ್ನ. ಆದರೆ ಇದು ಕೇವಲ ತಾಯಿ–ಮಗನ ಸೆಂಟಿಮೆಂಟ್ ಸಿನಿಮಾ ಅಲ್ಲ. ಪ್ರೀತಿ, ಗುರುತು, ಅಸ್ತಿತ್ವ ಮತ್ತು ಸಮಾಜದ ತೀರ್ಪುಗಳ ನಡುವಿನ ಸಂಘರ್ಷವನ್ನು ಪ್ರಶ್ನಿಸುವ ಚಿತ್ರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಕಥೆ ಜೈಲಿನಲ್ಲಿ ಆರಂಭವಾಗುತ್ತದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆ ತನ್ನ ಪುಟ್ಟ ಮಗನೊಂದಿಗೆ ಜೈಲಿನಲ್ಲೇ ಬದುಕುತ್ತಿದ್ದಾಳೆ. ಬಿಡುಗಡೆಯಾದ ನಂತರ ಅವಳು ಮಗನೊಂದಿಗೆ ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾಳೆ. ಹೆಸರು ಬದಲಾಗುತ್ತದೆ, ಊರು ಬದಲಾಗುತ್ತದೆ, ಗುರುತು ಬದಲಾಗುತ್ತದೆ. ತಾಯಿ ಕೆಲವೊಮ್ಮೆ ಒಂದು ಹೆಸರಿನಲ್ಲಿ, ಮತ್ತೆ ಮತ್ತೊಂದು ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಾಳೆ. ಮಗನಿಗೂ ಪ್ರತಿ ಸ್ಥಳದಲ್ಲೂ ಹೊಸ ಹೆಸರು. ಆದರೆ ಭಯ ಮಾತ್ರ ಬದಲಾಗುವುದಿಲ್ಲ. ತನ್ನ ಭೂತಕಾಲ ಮಗನ ಭವಿಷ್ಯವನ್ನು ಹಾಳು ಮಾಡಬಾರದು ಎಂಬ ಕಾರಣಕ್ಕೆ ಅವಳು ನಿರಂತರ ಓಟದಲ್ಲಿರುತ್ತಾಳೆ. ಪ್ರತಿ ಹೊಸ ಸ್ಥಳದಲ್ಲೂ ಹೊಸ ಕಥೆಯನ್ನು ಸೃಷ್ಟಿಸುತ್ತಾಳೆ. ಮಗುವಿಗೆ ಅದೇ ಕಥೆಯೇ ಸತ್ಯವಾಗಿ ಕಾಣುತ್ತದೆ. ಈ ನಿರಂತರ ಬದಲಾವಣೆಯ ನಡುವೆ ತಾಯಿ–ಮಗನ ಬಾಂಧವ್ಯ ಮಾತ್ರ ಅಚಲವಾಗಿ ನಿಲ್ಲುತ್ತದೆ.

Balan Song 1 768x461 1

ಕೊನೆಗೆ ಒಂದು ವೃದ್ಧ ಮಹಿಳೆಯ ಆರೈಕೆಗಾರ್ತಿಯಾಗಿ ಕೆಲಸ ಸಿಕ್ಕಾಗ ಅವರ ಬದುಕಿಗೆ ಸ್ವಲ್ಪ ಸ್ಥಿರತೆ ಸಿಗುವಂತೆ ಕಾಣುತ್ತದೆ. ಬಾಲನ್ ಶಾಲೆಗೆ ಹೋಗಲು ಆರಂಭಿಸುತ್ತಾನೆ. ಆದರೆ, ಅವರು ಇನ್ನು ಮುಂದೆ ಓಡಬೇಕಾಗಿಲ್ಲ ಎಂದು ಭಾವಿಸುವ ಕ್ಷಣದಲ್ಲೇ ಪರಿಸ್ಥಿತಿ ಮತ್ತೊಮ್ಮೆ ತಿರುವು ಪಡೆಯುತ್ತದೆ.

ಚಿತ್ರದ ಅತ್ಯಂತ ಬಲವಾದ ಅಂಶ ತಾಯಿ ಮತ್ತು ಮಗನ ಸಂಬಂಧ. ಮಗುವಿಗೆ ತನ್ನ ತಾಯಿಯೇ ಜಗತ್ತು. ಅವಳ ಮಾತುಗಳೇ ಸತ್ಯ, ಅವಳ ಕಥೆಗಳೇ ಅವನ ಇತಿಹಾಸ. ಹೊಸ ಹೆಸರುಗಳೊಂದಿಗೆ ಬದುಕುವ ಮಗುವಿನ ಗೊಂದಲ ಮತ್ತು ತಾಯಿಯ ಮೇಲಿನ ಅವನ ಅಚಲ ನಂಬಿಕೆಯನ್ನು ನಿರ್ದೇಶಕ ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರದಲ್ಲಿ ಮಗ ಕೇವಲ ತಾಯಿಯನ್ನು ಅನುಸರಿಸುವ ಮಗುವಲ್ಲ; ಅವಳ ಭಯ, ಅವಳ ಸುಳ್ಳು ಮತ್ತು ಅವಳ ಹೋರಾಟದ ಸಹಯಾತ್ರಿಯೂ ಹೌದು. ಮಗು ತನ್ನ ತಾಯಿಯನ್ನು ಪ್ರಶ್ನಿಸದೆ ನಂಬುವುದು, ಅದೇ ಸಮಯದಲ್ಲಿ ಅವನೊಳಗೆ ಬೆಳೆಯುತ್ತಿರುವ ಅನಿಶ್ಚಿತತೆಯನ್ನು ಚಿತ್ರ ಸೂಕ್ಷ್ಮವಾಗಿ ತೋರಿಸುತ್ತದೆ. ಈ ಬಾಂಧವ್ಯವೇ ಚಿತ್ರದ ಹೃದಯ.

ಫರ್ಜಾನಾ ಪಾಲತಿಂಗಲ್ ಅವರ ಅಭಿನಯ ಚಿತ್ರದ ಜೀವಾಳ. ಹೆಚ್ಚು ಸಂಭಾಷಣೆಗಳಿಲ್ಲದೆ ಕಣ್ಣುಗಳ ಮೂಲಕವೇ ಭಯ, ಪ್ರೀತಿ ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ನಿಶ್ಶಬ್ದತೆಯಲ್ಲಿಯೇ ಚಿತ್ರದ ಹೆಚ್ಚಿನ ಭಾವನೆ ಅಡಗಿದೆ. ಬಾಲನ್ ಪಾತ್ರದಲ್ಲಿ ಆದಿಶೇಷನ್ ಕೆ.ಆರ್. ಮತ್ತು ನಂತರದ ಹಂತದಲ್ಲಿ ಮುಹಮ್ಮದ್ ಝಿನಾನ್ ಇಬ್ಬರೂ ಮನಮುಟ್ಟುವ ಅಭಿನಯ ನೀಡಿದ್ದಾರೆ. ಟೋವಿನೋ ಥಾಮಸ್ ಅವರ ಪಾತ್ರ ಚಿಕ್ಕದಾಗಿದ್ದರೂ ಕಥೆಗೆ ಮಹತ್ವದ ತಿರುವು ನೀಡುತ್ತದೆ. ಅವರ ಉಪಸ್ಥಿತಿ ಚಿತ್ರಕ್ಕೆ ಹೊಸ ಆಯಾಮವನ್ನು ತಂದಿದೆ.

cr 20260803 f70906720664df23

ತಾಂತ್ರಿಕವಾಗಿ ಚಿತ್ರ ಅತ್ಯಂತ ಸಮರ್ಥವಾಗಿದೆ. ಶೈಜು ಖಾಲಿದ್ ಅವರ ಛಾಯಾಗ್ರಹಣ ಕೇರಳದ ಅರಣ್ಯ ಪ್ರದೇಶಗಳ ಏಕಾಂತವನ್ನು ಮಾತ್ರವಲ್ಲ, ಪಾತ್ರಗಳ ಒಳಗಿನ ಏಕಾಂತವನ್ನೂ ಹಿಡಿದಿಟ್ಟಿದೆ. ವಿವೇಕ್ ಹರ್ಷಣ್ ಅವರ ಸಂಕಲನ ಮೊದಲಾರ್ಧದಲ್ಲಿ ಕುತೂಹಲವನ್ನು ಉಳಿಸುತ್ತದೆ. ಸುಶಿನ್ ಶ್ಯಾಮ್ ಅವರ ಹಿನ್ನೆಲೆ ಸಂಗೀತ ಭಾವನಾತ್ಮಕ ಕ್ಷಣಗಳನ್ನು ಮತ್ತಷ್ಟು ಗಾಢಗೊಳಿಸುತ್ತದೆ. ವಿಶೇಷವಾಗಿ ಥಕ್ಕೋಲ್ ಹಾಡಿನ ಬಳಕೆ ತಾಯಿ–ಮಗನ ಸಂಬಂಧವನ್ನು ಇನ್ನಷ್ಟು ಹೃದಯಸ್ಪರ್ಶಿಯಾಗಿಸುತ್ತದೆ. ಒಟ್ಟಾರೆ ತಾಂತ್ರಿಕ ತಂಡ ಚಿತ್ರದ ವಾತಾವರಣವನ್ನು ಸೂಕ್ಷ್ಮವಾಗಿ ನಿರ್ಮಿಸಿದೆ.

ಆದರೆ ಸಿನಿಮಾ ಮುಗಿದ ನಂತರ ಮನಸ್ಸಿನಲ್ಲಿ ಉಳಿಯುವುದು ಕೇವಲ ಭಾವನಾತ್ಮಕತೆ ಅಲ್ಲ; ಕೆಲವು ಅಸ್ವಸ್ಥಗೊಳಿಸುವ ಪ್ರಶ್ನೆಗಳು.

ಈ ಮಹಿಳೆ ಯಾಕೆ ತನ್ನ ಗುರುತನ್ನು ಮರೆಸಿಕೊಂಡು ಬದುಕಬೇಕಾಯಿತು? ಅವಳಿಗೆ ಸಮಾಜದ ಮೇಲೆ ನಂಬಿಕೆಯೇ ಇರಲಿಲ್ಲವೇ? ಚಿತ್ರದಲ್ಲಿ ಟಿಫನ್ ಸೆಂಟರ್ ಮಾಲೀಕ ಮತ್ತು ವೃದ್ಧ ಮಹಿಳೆ ಅವಳನ್ನು ಮಾನವೀಯತೆಯಿಂದ ನೋಡುತ್ತಾರೆ. ಅವಳಿಗೆ ಇರಲು ವ್ಯವಸ್ಥೆಯನ್ನೂ ಮಾಡಿಕೊಡುತ್ತಾರೆ. ಹಾಗಿದ್ದಾಗಲೂ ಅವಳ ನಿರಂತರ ಓಟದ ಹಿಂದಿನ ಭಯ ಎಷ್ಟು ನ್ಯಾಯಸಮ್ಮತ?

ಬಹುಶಃ ಅವಳು ಸಮಾಜವನ್ನು ನಂಬದಿದ್ದುದಕ್ಕಿಂತ ಹೆಚ್ಚು, ಸಮಾಜದ ತೀರ್ಪಿಗೆ ಹೆಚ್ಚು ಹೆದರಿದ್ದಾಳೆ. ಅಪರಾಧಕ್ಕೆ ಶಿಕ್ಷೆ ಅನುಭವಿಸಿದ ವ್ಯಕ್ತಿಯನ್ನು ಸಮಾಜ ನಿಜವಾಗಿಯೂ ಕ್ಷಮಿಸುತ್ತದೆಯೇ ಎಂಬ ಪ್ರಶ್ನೆಯನ್ನು ಸಿನಿಮಾ ನಮ್ಮ ಮುಂದೆ ಇಡುತ್ತದೆ. ಜೈಲಿನಿಂದ ಬಿಡುಗಡೆಯಾದರೂ ಆಕೆಯ ಶಿಕ್ಷೆ ಮುಗಿದಿಲ್ಲ. ಅವಳು ತನ್ನ ಗುರುತನ್ನೇ ಅಳಿಸಿಕೊಳ್ಳುವ ಮಟ್ಟಿಗೆ ಬದುಕಬೇಕಾಗಿದೆ. ಇದು ವೈಯಕ್ತಿಕ ಭಯವೋ ಅಥವಾ ಸಾಮಾಜಿಕ ಒತ್ತಡವೋ ಎಂಬುದು ಮುಕ್ತ ಪ್ರಶ್ನೆಯಾಗಿ ಉಳಿಯುತ್ತದೆ.

ಇದಕ್ಕಿಂತ ದೊಡ್ಡ ಪ್ರಶ್ನೆ ಶರ್ಲಿ ಎಂಬ ಮಾನಸಿಕ ಅಸ್ವಸ್ಥತೆಯಿರುವ ಹುಡುಗಿಯ ಕುರಿತದ್ದು. ತನ್ನ ಅಪರಾಧವನ್ನು ಮರೆಮಾಚಲು ಅವಳ ಗುರುತನ್ನು ಬಳಸಿಕೊಳ್ಳುವುದು, ಕೊಲೆಯ ಹೊಣೆಯನ್ನು ಅವಳ ಮೇಲೆ ಬೀಳುವಂತೆ ಮಾಡುವುದು‌. ಇಲ್ಲಿ ಒಬ್ಬ ತಾಯಿಯ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ತನ್ನ ಮಗನನ್ನು ರಕ್ಷಿಸುವ ಹೆಸರಿನಲ್ಲಿ ಮತ್ತೊಬ್ಬ ನಿರಪರಾಧಿ ಮಹಿಳೆಯ ಬದುಕನ್ನು ಹಾಳುಮಾಡುವುದು ಯಾವ ನೈತಿಕತೆಯಲ್ಲೂ ಸಮರ್ಥನೀಯವಾಗುವುದಿಲ್ಲ. ಇಲ್ಲಿ ಪ್ರೀತಿ ಮತ್ತು ನ್ಯಾಯ ಒಂದಕ್ಕೊಂದು ವಿರುದ್ಧವಾಗಿ ನಿಲ್ಲುತ್ತವೆ.

balantheboy17818768491781876870

ಇಲ್ಲಿಯೇ ಚಿತ್ರದ ದೊಡ್ಡ ಸಾಧನೆ ಅಡಗಿದೆ. ನಿರ್ದೇಶಕ ತಾಯಿಯನ್ನು ದೇವತೆಯಾಗಿ ಚಿತ್ರಿಸುವುದಿಲ್ಲ. ಅವಳು ಪ್ರೀತಿಸುವ ವ್ಯಕ್ತಿ; ಆದರೆ ಅದೇ ಸಮಯದಲ್ಲಿ ತಪ್ಪುಗಳನ್ನು ಮಾಡುವ ವ್ಯಕ್ತಿಯೂ ಹೌದು. ಅವಳು ರಕ್ಷಿಸುತ್ತಾಳೆ, ಸುಳ್ಳು ಹೇಳುತ್ತಾಳೆ, ಹೆದರುತ್ತಾಳೆ ಮತ್ತು ಕೆಲವೊಮ್ಮೆ ಇನ್ನೊಬ್ಬರಿಗೆ ಅನ್ಯಾಯವೂ ಮಾಡುತ್ತಾಳೆ. ಈ ಸಂಕೀರ್ಣತೆಯೇ ಪಾತ್ರವನ್ನು ಜೀವಂತವಾಗಿಸುತ್ತದೆ. ಪ್ರೀತಿ ಯಾವಾಗ ನೈತಿಕ ಮಿತಿಗಳನ್ನು ದಾಟುತ್ತದೆ ಎಂಬ ಪ್ರಶ್ನೆಯನ್ನು ಸಿನಿಮಾ ನಮ್ಮ ಮುಂದೆ ನೇರವಾಗಿ ಇಡುತ್ತದೆ.

ನನ್ನ ದೃಷ್ಟಿಯಲ್ಲಿ ಚಿತ್ರದ ಅತ್ಯಂತ ಕಾಡುವ ಕ್ಷಣ ಕೊನೆಯ ದೃಶ್ಯದಲ್ಲಿದೆ. ತಾಯಿ ಮತ್ತು ಮಗ ಮತ್ತೆ ಒಂದಾಗುತ್ತಾರೆ. ಸಾಮಾನ್ಯವಾಗಿ ಇದು ಭಾವನಾತ್ಮಕ ಸಂತೋಷದ ಅಂತ್ಯವಾಗಿರಬೇಕಿತ್ತು. ಆದರೆ ಆ ಕ್ಷಣದಲ್ಲೇ ಅವನು ಕೇಳುವ ಪ್ರಶ್ನೆ ಇಡೀ ಚಿತ್ರದ ಅರ್ಥವನ್ನೇ ಬದಲಾಯಿಸುತ್ತದೆ:

“ಅಮ್ಮ ನಮ್ಮ ಮುಂದಿನ ಕಥೆ ಏನು?”

ಈ ಪ್ರಶ್ನೆಯಲ್ಲಿ ಮಗುವಿನ ಆಯಾಸ, ಗೊಂದಲ ಮತ್ತು ಅಸ್ತಿತ್ವದ ಹುಡುಕಾಟ ಅಡಗಿದೆ. ಅವನು ನಿಜವಾಗಿ ಕೇಳುವುದು “ನಾನು ಯಾರು?” ಮತ್ತು “ನಾವು ಎಲ್ಲಿಗೆ ಸೇರಿದ್ದೇವೆ?” ಎಂಬುದನ್ನು. ಇಷ್ಟು ವರ್ಷ ತಾಯಿ ಅವನನ್ನು ರಕ್ಷಿಸಿದ್ದಾಳೆ. ಆದರೆ ಅವನಿಗೆ ಒಂದು ಮನೆ, ಒಂದು ವಿಳಾಸ, ಒಂದು ಸ್ಥಿರ ಗುರುತು ಮತ್ತು ಒಂದು ನೆಲೆ ಸಿಕ್ಕಿದೆಯೇ?

ಈ ಕಾರಣದಿಂದ ಚಿತ್ರದ ಅಂತ್ಯವನ್ನು ನಾನು ಸಂತೋಷದ ಅಂತ್ಯವೆಂದು ನೋಡುವುದಿಲ್ಲ. ತಾಯಿ ಮತ್ತು ಮಗ ಒಂದಾಗಿದ್ದಾರೆ. ಆದರೆ ಅವರ ಬದುಕಿನ ಮೂಲ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅವರು ಇನ್ನೂ ತಮ್ಮ ಭೂತಕಾಲದ ನೆರಳಿನಿಂದ ಸಂಪೂರ್ಣವಾಗಿ ಮುಕ್ತರಾಗಿಲ್ಲ. ಅ ಹುಡುಗನ ಪ್ರಶ್ನೆ ಮನುಷ್ಯನಿಗೆ ಕೇವಲ ಪ್ರೀತಿಯಷ್ಟೇ ಸಾಕಾಗುವುದಿಲ್ಲ; ತನ್ನದು ಎಂದು ಹೇಳಿಕೊಳ್ಳಬಹುದಾದ ಒಂದು ಗುರುತು ಮತ್ತು ಒಂದು ನೆಲೆಯೂ ಬೇಕು ಎಂಬ ಸತ್ಯವನ್ನು ನೆನಪಿಸುತ್ತದೆ.

ಒಟ್ಟಾರೆ ಬಾಲನ್: ದಿ ಬಾಯ್ ಒಂದು ಸುಂದರ ಆದರೆ ಅಸ್ವಸ್ಥಗೊಳಿಸುವ ಸಿನಿಮಾ. ಇದು ತಾಯಿಯ ಪ್ರೀತಿಯನ್ನು ಕೊಂಡಾಡುತ್ತದೆ. ಅದೇ ಸಮಯದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆಯುವ ತಪ್ಪುಗಳನ್ನೂ ಪ್ರಶ್ನಿಸುತ್ತದೆ. ಪ್ರೀತಿ, ಅಪರಾಧಪ್ರಜ್ಞೆ, ಗುರುತು ಮತ್ತು ವಿಮೋಚನೆಯ ನಡುವಿನ ಗಡಿಗಳು ಎಷ್ಟು ಸಂಕೀರ್ಣ ಎಂಬುದನ್ನು ನೆನಪಿಸುತ್ತದೆ. ಚಿತ್ರವು ಉತ್ತರಗಳನ್ನು ಕೊಡುವುದಿಲ್ಲ. ಬದಲಿಗೆ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಬಿತ್ತುತ್ತದೆ.

ಚಿತ್ರ ಮುಗಿದ ಮೇಲೂ ಉಳಿಯುವ ಪ್ರಶ್ನೆ ಒಂದೇ: ಒಬ್ಬ ತಾಯಿ ತನ್ನ ಮಗನನ್ನು ಉಳಿಸಲು ಎಷ್ಟು ದೂರ ಹೋಗಬಹುದು? ಮತ್ತು ಆ ಪ್ರಯಾಣದಲ್ಲಿ ಮತ್ತೊಬ್ಬರ ಬದುಕು ನಾಶವಾದರೆ ಅದನ್ನು ನಾವು ಕ್ಷಮಿಸಬಹುದೇ?

ಈ ಪ್ರಶ್ನೆಗಳೇ ಬಾಲನ್: ದಿ ಬಾಯ್ ಅನ್ನು ಸಾಮಾನ್ಯ ಭಾವನಾತ್ಮಕ ಚಿತ್ರದಿಂದ ಗಂಭೀರ ಮಾನವೀಯ ಚರ್ಚೆಯನ್ನಾಗಿ ರೂಪಿಸುತ್ತವೆ. ಅದಕ್ಕಾಗಿಯೇ ಸಿನಿಮಾ ಮುಗಿದ ಮೇಲೂ ಅದು ಮನಸ್ಸಿನಲ್ಲಿ ಮುಂದುವರೆಯುತ್ತದೆ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...