ಪಾಲಕರಲ್ಲಿ ಖಾಸಗಿ ಶಾಲೆಗಳತ್ತ ಹೆಚ್ಚುತ್ತಿರುವ ಒಲವಿನ ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ವಿವಿಧ ಜಾಗೃತಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ 1,752 ಪ್ರಾಥಮಿಕ, 186 ಪ್ರೌಢಶಾಲೆ ಸೇರಿ ಒಟ್ಟು 1,983 ಸರ್ಕಾರಿ ಶಾಲೆಗಳಿವೆ. ಕಳೆದ 5 ಶೈಕ್ಷಣಿಕ ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಇಳಿಮುಖವಾಗಿರುವುದು ಸ್ಪಷ್ಟವಾಗಿದೆ. ಖಾಸಗಿ ಶಾಲೆಗಳತ್ತ ಪಾಲಕರ ಒಲವು, ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹಾಗೂ ಜನನ ಪ್ರಮಾಣದಲ್ಲಿನ ಇಳಿಕೆ ಈ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ 2021 -22ನೇ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆ ಶಾಲೆಗಳಲ್ಲಿ (ಒಂದರಿಂದ ಹತ್ತನೇ ತರಗತಿವರೆಗೆ ) ಒಟ್ಟು 2,77424 ವಿದ್ಯಾರ್ಥಿಗಳು ದಾಖಲಾಗಿದ್ದರು. 1,34,916 ಗಂಡು ಮಕ್ಕಳು ಹಾಗೂ 1,42,508 ಹೆಣ್ಣು ಮಕ್ಕಳು ಸೇರಿದ್ದರು. ಆದರೆ, ಈ ಸಂಖ್ಯೆ ಪ್ರತಿವರ್ಷ ಕುಸಿಯುತ್ತಾ 2025- 26ರಲ್ಲಿ 2,26,604ಕ್ಕೆ ತಲುಪಿದೆ. ಅಂದರೆ, ಐದು ವರ್ಷಗಳಲ್ಲಿ ಒಟ್ಟು 50,820 ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ. ಪ್ರತಿ ವರ್ಷ ಸರಾಸರಿ 12ರಿಂದ 14 ಸಾವಿರದಷ್ಟು ಇಳಿಕೆಯಾಗಿರುವ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣದಿಂದ ಶಿಕ್ಷಣ ಇಲಾಖೆಯ ಕಾರ್ಯ ಪದ್ಧತಿಯನ್ನು ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಅನೇಕ ಉಚಿತ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಗಮನಾರ್ಹವಾಗಿದೆ.
ಅನೇಕ ಪಾಲಕರು ಇಂಗ್ಲೀಷ್ ಮಾಧ್ಯಮ ಶಿಕ್ಷಣದ ಸಲುವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಕುಸಿಯಲು ಬಹುಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಸಮಸ್ಯೆ ತಡೆಗೆ ಶಿಕ್ಷಣ ಇಲಾಖೆ ಸಮಗ್ರ ಕಾರ್ಯ ಯೋಜನೆ ರೂಪಿಸುವ ಅಗತ್ಯವಿದೆ.

“ಸರ್ಕಾರಿ ಶಾಲೆಗಳು ಇಂದು ಶಿಕ್ಷಣ ಇಲಾಖೆಯ ಹೊಸಹೊಸ ಪ್ರಯೋಗಗಳ ವೇದಿಕೆಯಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಪ್ರಯೋಗಗಳ ನೇರ ಪರಿಣಾಮವನ್ನು ಮಕ್ಕಳು ಅನುಭವಿಸುತ್ತಿದ್ದಾರೆ. 2010ರಿಂದ 2026ರವರೆಗೆ ಒಂದರಿಂದ ಮೂರನೇ ತರಗತಿವರೆಗೆ ‘ನಲಿಕಲಿ’ ಪದ್ಧತಿಯಲ್ಲಿ ಒಬ್ಬನೇ ಶಿಕ್ಷಕರು ಬೋಧನೆ ನಡೆಸುವ ವ್ಯವಸ್ಥೆ ಜಾರಿಯಲ್ಲಿತ್ತು. ಇದೇ ಅವಧಿಯಲ್ಲಿ ನಾಲ್ಕೈದು ಬಾರಿ ಪಠ್ಯಕ್ರಮ ಬದಲಾವಣೆಯೂ ನಡೆದಿದೆ. ಒಬ್ಬ ಶಿಕ್ಷಕರಿಂದ ಮೂರು ತರಗತಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಸಾಧ್ಯ ಎಂಬುದನ್ನು ಶಿಕ್ಷಣ ಇಲಾಖೆಗೆ ಮನವರಿಕೆ ಮಾಡಲು ಬರೋಬ್ಬರಿ 16 ವರ್ಷಗಳು ಬೇಕಾಯಿತು” ಎಂದು ಸರ್ಕಾರಿ ಶಾಲೆಯ ಉಳಿವಿನ ಕುರಿತು ಕಾಳಜಿ ಹೊಂದಿರುವ ವರ್ಗ ಬೇಸರ ವ್ಯಕ್ತಪಡಿಸುತ್ತಿದೆ.
ಶಿಕ್ಷಣ ಇಲಾಖೆ ಈಗಾಗಲೇ ದಾಖಲಾತಿ ಹೆಚ್ಚಿಸಲು ಶಾಲಾ ದಾಖಲಾತಿ ಅಭಿಯಾನ, ಮನೆ ಮನೆ ಭೇಟಿ, ಶಾಲಾ ಆರಂಭೋತ್ಸವ ಸೇರಿದಂತೆ ನಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ದೊರೆಯುತ್ತಿಲ್ಲ. ಜಿಲ್ಲೆಯ ಸರ್ಕಾರಿ ಶಾಲೆಗಳ ಮೇಲೆ ಮತ್ತೆ ಜನರ ವಿಶ್ವಾಸ ಮೂಡಿಸಲು ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಮೂಲ ಸೌಕರ್ಯ ವೃದ್ಧಿ ಅಗತ್ಯವಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿರುವ ಕೆಲವು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳಿದ್ದರೂ ಶಿಕ್ಷಕರಿಲ್ಲ. ಕೆಲವಡೆ ಶಿಕ್ಷಕರು ಇರುವಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಇನ್ನು ಕೆಲವಡೆ ಶಿಕ್ಷಕರು ಮತ್ತು ಮೂಲ ಸೌಲಭ್ಯಗಳು ಇರುವಲ್ಲಿ ಮಕ್ಕಳು ಇಲ್ಲದಿರುವುದು ಕಂಡುಬರುತ್ತಿದೆ.
ಈ ಕುರಿತಾಗಿ ಈದಿನ. ಕಾಮ್ ಜೊತೆ ಮಾತನಾಡಿದ ಡಿ ಡಿ ಪಿ ಐ ವಿ ವಿ ಸಾಲಿಮಠ, ʼಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಶಿಕ್ಷಣ ವ್ಯವಸ್ಥೆ ಜಾರಿಯಾಗಿದ್ದು, 396 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನೂ ಆರಂಭಿಸಲಾಗುತ್ತಿದೆ. ದಾಖಲಾತಿ ಆಂದೋಲನದ ಮೂಲಕ ಮಕ್ಕಳ ಸೇರ್ಪಡೆಗೆ ವಿಶೇಷ ಒತ್ತು ನೀಡಲಾಗಿದೆ. ಆದಾಗ್ಯೂ, ಖಾಸಗಿ ಶಾಲೆಗಳಿಗೆ ಹೊಸ ಅನುಮತಿ ಸೇರಿದಂತೆ ವಿವಿಧ ಕಾರಣಗಳಿಂದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆʼ ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಕೇವಲ ಶಿಕ್ಷಣ ಇಲಾಖೆಯ ಜವಾಬ್ದಾರಿಯಲ್ಲ. ಜನಪ್ರತಿನಿಧಿಗಳು, ಶಾಲಾ ಶಿಕ್ಷಕರು, ಪಾಲಕರು ಹಾಗೂ ಜನಸಾಮಾನ್ಯರು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಸೌಕರ್ಯ ಹಾಗೂ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ಸಮುದಾಯದ ಸಹಭಾಗಿತ್ವ ಮತ್ತು ಜವಾಬ್ದಾರಿಯುತ ಸಹಕಾರದಿಂದ ಮಾತ್ರ ಸರ್ಕಾರಿ ಶಾಲೆಗಳನ್ನು ಬಲಪಡಿಸಿ, ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು




