ಅನ್ನಭಾಗ್ಯ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಹತ್ವಾಕಾಂಕ್ಷಿ ಯೋಜನೆ. ರಾಜ್ಯದ ಪ್ರತಿಯೊಬ್ಬ ಬಡವರೂ ಹಸಿವು ಮುಕ್ತ ಆಗಬೇಕು ಎನ್ನುವುದು ಅವರ ಧ್ಯೆಯ. ಆದರೆ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಗೆ ಮತ್ತು ಬಡಪಾಯಿಗಳ ಹಸಿವಿನೊಂದಿಗೆ ಕಳ್ಳಾಟ ಆಡಿರುವ ಸನ್ನಿವೇಶವೊಂದು ವಿಜಯನಗರದ ಕೂಡ್ಲಿಗಿಯಲ್ಲಿ ಜರುಗಿದೆ.
ಕಳೆದ 3 ತಿಂಗಳಿಂದ 4 ಗ್ರಾಮಗಳ ಜನರ ಹೆಬ್ಬೆಟ್ಟು ಗುರುತು ಪಡೆದು, 200 ಕ್ವಿಂಟಲ್ ಪಡಿತರ ಕೊಡದೇ ವಂಚನೆ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
4 ಗ್ರಾಮಗಳಿಗೆ 3 ತಿಂಗಳಿಂದ ಸಿಕ್ಕಿಲ್ಲ ರೇಷನ್!
ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಪ್ರತಿ ಗ್ರಾಮದ ಜನರಿಗೂ ಪಡಿತರ ವಿತರಣೆ ಮಾಡುತ್ತದೆ. ಈ ಯೋಜನೆಯ ಯಶಸ್ವಿಗೆ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತವೆ. ಆದರೆ ಈ ನ್ಯಾಯಬೆಲೆ ಅಂಗಡಿಯಲ್ಲಿ ಬರೀ ಅನ್ಯಾಯವೇ ನಡೆದುಹೋಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜರ್ಮಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.
ಜರ್ಮಲಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಹರವದಿ, ಗೆದ್ದಲಗಟ್ಟೆ ಮತ್ತು ದಿಬ್ಬದಹಳ್ಳಿ ಗ್ರಾಮಗಳು ಬರುತ್ತವೆ. ಈ ಗ್ರಾಮಗಳ ಜನರಿಗೆ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಿಂದ ರೇಷನ್ ವಿತರಣೆ ಮಾಡಿಲ್ಲ. ಜನರನ್ನು ಕರೆಸಿಕೊಂಡು ಕೇವಲ ಅವರ ಹೆಬ್ಬೆರಳು ಗುರುತು ಪಡೆದು ಬರಿಗೈಯಲ್ಲೇ ವಾಪಸ್ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಈ ದಿನ.ಕಾಮ್ ತಂಡ ಈ 4 ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಆಗ ಗ್ರಾಮಸ್ಥರು ನೀಡಿದ ಹೇಳಿಕೆಗಳು ಅಧಿಕಾರಿ ವರ್ಗದವರ ಗೋಲ್‌ಮಾಲ್ ಬಯಲುಮಾಡಿವೆ.
ಜರ್ಮಲಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ದಿಬ್ಬದಹಳ್ಳಿ ನಿವಾಸಿ ರಂಗಪ್ಪ ಅವರು ಮಾತನಾಡಿ, “ಒಂದೂರಿಗೆ ರೇಷನ್ ಕೊಟ್ಟರೆ ಮತ್ತೊಂದು ಊರಿಗೆ ಕೊಡುತ್ತಿಲ್ಲ. ʼಪ್ರತಿ ತಿಂಗಳ ಪಡಿತರವನ್ನು ಏಕೆ ಕೊಡುತ್ತಿಲ್ಲʼ ಎಂದು ಪ್ರಶ್ನಿಸಿದರೆ ಬೇಗನೇ ತರಿಸಿ ಕೊಡುತ್ತೇವೆಂದು ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಸಬೂಬು ಹೇಳುತ್ತಿದ್ದಾರೆ” ಎಂದರು.
ಹರವದಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಮಾತನಾಡಿ, “ಮೊದಲು ಜರ್ಮಲಿ ಗ್ರಾಮಕ್ಕೆ ಹೋಗಿ ಎಲ್ಲರೂ ಪಡಿತರ ತರುತ್ತಿದ್ದೆವು. ಸೊಸೈಟಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲರೂ ಸೇರಿ ಒಂದು ಮೀಟಿಂಗ್ ಮಾಡಿ, ʼಕರಡಿಗಳ ಹಾವಳಿ ಇರುವುದರಿಂದ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಗೆ ಬರುವುದು ಬೇಡ. ಹಳ್ಳಿಗಳಿಗೆ ಹೋಗಿ ಸಿಬ್ಬಂದಿಯೇ ರೇಷನ್ ಕೊಡಲಿʼ ಎಂದು ನಿರ್ಧಾರ ಕೈಗೊಂಡರು. ಆದರೂ ಗ್ರಾಮಸ್ಥರೆಲ್ಲರೂ ಸೇರಿ ವಾಹನ ಬಾಡಿಗೆಗೆ ಪ್ರತಿ ಮನೆಯಿಂದ 10 ರೂಪಾಯಿ ಕೊಡುತ್ತಿದ್ದೆವು. ಈಗ ಆ ರೇಷನ್ ಕೂಡ ಹಂಚಿಕೆ ಮಾಡುತ್ತಿಲ್ಲ. ಯಾಕೆ ಅಂತ ಕೇಳಿದರೆ, ʼಹಿಂದೆ ಇದ್ದ ಸೆಕ್ರೆಟರಿ ಗಾದಿಲಿಂಗಪ್ಪ ಅವರು 85 ಕ್ವಿಂಟಲ್ ಅಕ್ಕಿಯನ್ನು ಶಾರ್ಟೇಜ್ ಉಳಿಸಿ ಹೋಗಿದ್ದಾರೆ. ಆ ಕಾರಣಕ್ಕಾಗಿ ಎಲ್ಲ ಗ್ರಾಮಗಳಿಗೂ ಪಡಿತರ ವಿತರಣೆ ಮಾಡಲಾಗುತ್ತಿಲ್ಲʼವೆಂದು ಹಾಲಿ ಸೆಕ್ರೆಟರಿ ಸುನಿಲ್ ಅವರು ಸಬೂಬು ನೀಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
ಸೊಸೈಟಿಯ ಮಾಜಿ ಅಧ್ಯಕ್ಷ ಜ್ಯೋತಿಲಿಂಗಪ್ಪ ಅವರು ಕೂಡ ಗಂಭೀರ ಆರೋಪ ಮಾಡಿದ್ದು, “ನಮ್ಮ ಅವಧಿಯಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸಿದ್ದೇವೆ. ಆದರೆ ಕಳೆದ 3 ತಿಂಗಳಿಂದ ಜನರಿಗೆ ಪಡಿತರ ವಿತರಣೆ ಮಾಡಿಲ್ಲ. ಈಗಿರುವ ಸೆಕ್ರೆಟರಿಯನ್ನು ಕೇಳಿದರೆ, ಹಿಂದೆ ಇದ್ದ ಅಧಿಕಾರಿ ಗಾದಿಲಿಂಗಪ್ಪ 200 ಕ್ವಿಂಟಾಲ್ ಅಕ್ಕಿ ಹಗರಣ ಮಾಡಿ ಹೋಗಿದ್ದಾರೆ. ಅದಕ್ಕೆ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಿಕೆ ನೀಡ್ತಿದ್ದಾರಂತೆ. ಸೊಸೈಟಿಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಎಲ್ಲರೂ ಸೇರಿಕೊಂಡು ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಹವರದಿ ಗ್ರಾಮದ ಹೋರಾಟಗಾರ ಹಾಗೂ ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಗಿರೀಶ್ ಅವರು ಗಂಭೀರ ಆರೋಪ ಮಾಡಿದ್ದು, “ಪಡಿತರ ವಿತರಣೆಯಲ್ಲಿ ದೊಡ್ಡ ಹಗರಣವೇ ನಡೆದಿದೆ. ಪ್ರಭಾವಿಗಳ ಕುಮ್ಮಕ್ಕಿನಿಂದ ಅಸಲಿ ವಿಷಯ ಹೊರಹಾಕುತ್ತಿಲ್ಲ. ಭ್ರಷ್ಟಾಚಾರವನ್ನೇ ಕಾಯಕ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು, ಸ್ಥಳೀಯ ಭ್ರಷ್ಟರ ಜತೆ ಸೇರಿ ವಂಚನೆ ಮಾಡುತ್ತಿದ್ದಾರೆ. ಈಗಾಗಲೇ ಈ ಕುರಿತು ಕೂಡ್ಲಿಗಿ ತಹಶೀಲ್ದಾರ್ ನೇತ್ರಾ ಅವರಿಗೆ ದೂರು ನೀಡಲಾಗಿದ್ದು, ಫುಡ್ ಇನ್‌ಸ್ಪೆಕ್ಟರ್ ಜತೆಗೆ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
“ಈಗಾಗಲೇ 4 ಗ್ರಾಮಗಳ ಜನರು, ನಮಗೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದನ್ನು ಪ್ರಶ್ನಿಸಿದರೆ ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ” ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಇದನ್ನೂ ಓದಿದ್ದೀರಾ? ಗದಗ | ಬುದ್ಧನ ಶಾಂತಿ ಮಂತ್ರ ಇಂದಿನ ಜಗತ್ತಿಗೆ ಅನಿವಾರ್ಯ: ಸಚಿವ ಎಚ್. ಕೆ. ಪಾಟೀಲ
ಈ ಬೆಳವಣಿಗೆಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಬೇಲಿಯೇ ಎದ್ದು ಹೊಲ ಮೇಯ್ದ ಹಾಗಿದೆ. ಸರ್ಕಾರ ಕೊಟ್ಟರೂ ಅಧಿಕಾರಿಗಳು ಮತ್ತು ಭ್ರಷ್ಟರು ಸೇರಿ ಜನರಿಗೆ ರೇಷನ್ ಕೊಡದೆ ಮೋಸ ಮಾಡುತ್ತಿದ್ದಾರೆ. ಅಧಿಕಾರದಲ್ಲಿರುವವರ ಭ್ರಷ್ಟಾಚಾರ ದಾಹಕ್ಕೆ ಬಡವರು, ನಿರ್ಗತಿಕರ ಹೊಟ್ಟೆ ಹೊಡೆಯುವಂತಾಗಿದೆ. ಇನ್ನುಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನೊಂದವರಿಗೆ ನ್ಯಾಯ ಒದಗಿಸಲು ಮನಸು ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



