ಹಾಸನ ಮಣ್ಣಿನ ಹೆಣ್ಣು ದನಿಗಳು | ಕೃಷಿಯನ್ನೇ ಖುಷಿಯಾಗಿಸಿಕೊಂಡಿರುವ- ಹೇಮಾ ಅನಂತ್

Date:

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…

”ನನ್ನ ತೋಟವೇ ನನ್ನ ಸಿಲಬಸ್, ನನ್ನ ಪಠ್ಯ ಪುಸ್ತಕ. ನಾನು ನಿತ್ಯವೂ ಓದುತ್ತೇನೆ. ಒಂದೊಂದು ಬೆಳೆಯೂ ಒಂದೊಂದು ಪಾಠ, ಒಂದೊಂದು ಪರೀಕ್ಷೆ. ನಾನು ಪರಿಶ್ರಮದಿಂದ ಓದಿ ಶೇಕಡಾ ಎಂಭತ್ತರಿಂದ ತೊಂಭತ್ತು ಅಂಕಗಳನ್ನು ಪಡೆಯಲು ಪ್ರಯತ್ನ ಮಾಡುತ್ತೇನೆ ಹಾಗೂ ಪಡೆಯುತ್ತಲೇ ಬಂದಿದ್ದೇನೆ. ನಾನು ನಿರಂತರ ವಿದ್ಯಾರ್ಥಿ. ನನ್ನ ಕಲಿಕೆ ಇಂದಿಗೂ ನಿಂತಿಲ್ಲ. ನಾನು ಓದುತ್ತಿರುವ ಕೋರ್ಸ್‌ನಲ್ಲಿ- ಭಾಷೆ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರದ ಜೊತೆಜೊತೆಗೆ ಮಾರುಕಟ್ಟೆ, ವೈದ್ಯಕೀಯ, ಸಾಮಾಜಿಕ ವಿಚಾರ, ರಾಜಕೀಯ ವಿಚಾರ ಎಲ್ಲವೂ ಇದೆ. ಯಾವುದೇ ಒಬ್ಬ ವಿದ್ಯಾರ್ಥಿ ತನ್ನ ಕೃಷಿಭೂಮಿ ಎಂಬ ಪಠ್ಯವನ್ನು ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿದಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ ಶೇಕಡಾ ತೊಂಭತ್ತಕ್ಕೂ ಹೆಚ್ಚು ಅಂಕಗಳನ್ನು ಗಳಿಸಬಹುದು. ನಾನು ರೈತಳು, ನಾನು ಕೃಷಿ ವಿದ್ಯಾರ್ಥಿನಿ” ಎಂದು ಹೇಳುತ್ತಾರೆ ಹೇಮಾ ಅನಂತ್!

- Advertisement -

ನಮ್ಮ ನಡುವಿನ ಹಾಸನ ಮಣ್ಣಿನ ಹೆಣ್ಣುಮಗಳು. ಹೇಮಾ ಹುಟ್ಟಿದ್ದು 1964ರಲ್ಲಿ ಊಟಿಯಲ್ಲಿ. ಹೋಟೆಲ್ ಉದ್ಯಮ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಶ್ರೀಯುತ ಕೃಷ್ಣಪ್ಪ ಹಾಗೂ ಯಶೋಧ ಅವರ ಮೊದಲ ಮಗಳಿವರು. ದ್ವಿತೀಯ ಪಿಯುಸಿ ಮುಗಿಸಿ ವೈದ್ಯಕೀಯ ಕೋರ್ಸ್ ಓದಲು ತಯಾರಿ ನಡೆಸುತಿದ್ದ ಹದಿನೆಂಟು ವರ್ಷದ ಹೇಮಾ ಅವರಿಗೆ ಹಾಸನದ ಅನಂತರಾಜು ಎಂಬ ಎಂಜಿನಿಯರ್ ಅವರೊಡನೆ ವಿವಾಹವಾಗಿ ಅವಿಭಕ್ತ ಕೃಷಿ ಕುಟುಂಬ ಸೇರುತ್ತಾರೆ. ಉದ್ಯೋಗನಿಮಿತ್ತ ಊರೂರು ಸಂಚರಿಸುತ್ತಿದ್ದ ಪತಿಯ ಜೊತೆಗೆ ಗುಂಡ್ಲುಪೇಟೆ, ಬೆಳಗಾಂ, ಮಂಗಳೂರಿಗೆ ಸಂಚರಿಸಿದ ಹೇಮಾ ಅವರು ಕೊನೆಯಲ್ಲಿ ನೆಲೆ ನಿಂತಿದ್ದು ಅರಸೀಕೆರೆಯಲ್ಲಿ. ತಾತನ ಕಾಲದಲ್ಲಿ ಕೊಂಡಿದ್ದ ಹಾಸನ ತಾಲ್ಲೂಕಿನ ಗೌರಿಪುರದ ಮೂವತ್ತು ಎಕರೆ ಭೂಮಿಯನ್ನು ಹೇಮಾ ಅವರ ಮಡಿಲಿಗೆ ಹಾಕಿದ ತಂದೆ ಕೃಷ್ಣಪ್ಪನವರು, ನೀನು ಈ ಭೂಮಿಯಲ್ಲಿ ಕೃಷಿ ಮಾಡಬೇಕೆಂದು ಪ್ರೀತಿಯ ಆದೇಶದ ಜೊತೆಗೆ ಸ್ಫೂರ್ತಿಯನಿತ್ತರು. ಅಪ್ಪನ ಆಸೆಯನ್ನು, ಹೊಸ ಕನಸನ್ನು ಹೊತ್ತು ಅರಸೀಕೆರೆಯಿಂದ ಗೌರಿಪುರಕ್ಕೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಹೇಮಾ ಅವರನ್ನು ಟೀಕಿಸಿದವರೇ ಹೆಚ್ಚು. ”ಗರಿಕೆ ಕೂಡ ಬೆಳೆಯದ ಈ ಬರಡು ಭೂಮಿಲಿ ಬೆಳೆ ಬೆಳೆಯೋ ಆಸೆ ಬಿಟ್ಟು ಬೇರೆ ಕೆಲಸ ಮಾಡವ್ವ” ಎಂದವರೇ ಎಲ್ಲ. ಆದರೂ ವಿಶ್ವಾಸ ಕಳೆದುಕೊಳ್ಳದ ಹೇಮಾ ಅವರು ತಮ್ಮ ಹೊಲದ ಸುತ್ತ ದನ ಕಾಯುತಿದ್ದ ಹಿರಿಯ ಜೀವಿಗಳಿಗೆ ವೀಳ್ಯದೆಲೆ, ಬ್ರೆಡ್ಡು, ಬಿಸ್ಕತ್ತು, ಜ್ಯೂಸು ನೀಡುತ್ತಾ ಮಾತಿಗೆ ಕೂರುತ್ತಾರೆ. ಇದೇ ಸಮಯಕ್ಕೆ ಅವರ ತಂದೆಯವರು ‘ನೀನು ಏನಾದರೂ ಮಾಡು, ನಿನ್ನ ತೋಟದಲ್ಲಿ ನಿನಗೆ ನಷ್ಟವಾದರೆ ಪ್ರತಿದಿನಕ್ಕೆ 500 ರೂ. ಕೂಲಿಯನ್ನು ನಾನು ಕೊಡುತ್ತೇನೆ’ ಎಂದು ಹೇಳಿ ಬೆನ್ನೆಲುಬಾಗಿ ನಿಂತಿದ್ದನ್ನು ಇಂದಿಗೂ ಸ್ಮರಿಸುತ್ತಾರೆ- ತಮ್ಮ 27ನೆಯ ವಯಸ್ಸಿನಲ್ಲಿ ಕೃಷಿ ಪ್ರಾರಂಭಿಸಿದ ಹೇಮಾ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇದನ್ನು ಓದಿದ್ದೀರಾ?: ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

Advertisements

ತಂದೆಯ, ಮಾವನವರ ಹಾಗೂ ತನ್ನ ಹೊಲದ ಸುತ್ತಲಿನ ಹಿರಿಯರ ಅನುಭವ, ಮಾರ್ಗದರ್ಶನ ಪಡೆದ ಅವರು ಮೊದಲಿಗೆ 120 ರೂ.ಗಳನ್ನು ತೊಡಗಿಸಿ ಎರಡು ಎಕರೆ ಭೂಮಿಯಲ್ಲಿ ಹುರುಳಿ, ರಾಗಿ, ಎಳ್ಳು ಬೆಳೆಯುತ್ತಾರೆ. ಮೊದಲ ಬೆಳೆಯಲ್ಲಿ 450 ರೂ.ಗಳ ಆದಾಯವನ್ನು ಪಡೆದಾಗ ಹೇಮಾ ಅವರ ಸಂತೋಷಕ್ಕೆ ಪಾರವೇ ಇಲ್ಲ! ಅದೇ ಹಣವನ್ನು ಬಂಡವಾಳವನ್ನಾಗಿಸಿಕೊಂಡು ಆಲೂಗೆಡ್ಡೆ ಬೆಳೆದ ಹೇಮಾ ಅವರು, ಅದರಿಂದ ಮೂರು ಲಕ್ಷ ಆದಾಯ ಪಡೆದಾಗ ಕೃಷಿ ನಷ್ಟದ ಕ್ಷೇತ್ರ ಅಲ್ಲವೇ ಅಲ್ಲ ಎಂಬ ತೀರ್ಮಾನಕ್ಕೆ ಬಂದವರು, ಇಂದಿಗೂ ಕೃಷಿಯನ್ನೇ ಬದುಕಾಗಿಸಿಕೊಂಡಿದ್ದಾರೆ. ನರ್ಸರಿಗೆ ಸಸಿ ತರಲು ಹೋದರೆ- ಯಾರೂ ಕೊಂಡುಕೊಂಡು ಹೋಗದೇ ಇರುವ ತರಕಾರಿ ಸಸಿಯನ್ನೇ ತಂದು ಬೆಳೆದು ಲಾಭ ಗಳಿಸುವ ಹೇಮಾ ಅವರು ಯುವರೈತರಿಗೆ ಸ್ಫೂರ್ತಿ.

ಹೇಮಾ ಅವರು ಸಾಮಾನ್ಯ ರೈತರಿಗಿಂತ ಭಿನ್ನ. ಮೊದಲಿಗೆ 50 ತೆಂಗಿನ ಸಸಿಗಳನ್ನು ಹೊರಗಿನಿಂದ ತಂದು ತೋಟದಲ್ಲಿ ಹಾಕಿ, ಮುಂದಿನ ಸಾವಿರಾರು ತೆಂಗಿನ ಸಸಿಗಳನ್ನು ಸ್ವತಃ ಬೆಳೆಸಿ ತೋಟ ಮಾಡಿಕೊಂಡವರು. ಮೊದಲಿಗೆ ಒಂದು ನಾಟಿ ಹಸು ತಂದು, ಮೂವತ್ತು ಎಕರೆ ಬರಡು ಭೂಮಿಯನ್ನು ಮೃದುವಾಗಿಸಲು, ಫಲವತ್ತಾಗಿಸಲು ಸಗಣಿ ಗೊಬ್ಬರದ ಅಗತ್ಯತೆಯ ಬಗ್ಗೆ ಹಿರಿಯರಿಂದ ತಿಳಿದು ಅಂದಿನಿಂದ ಹೆಚ್ಚು ದನಗಳನ್ನು ಸಾಕುವ ನಿರ್ಧಾರಕ್ಕೆ ಬಂದರು. ಅರಸೀಕೆರೆಯಿಂದ ಗೌರಿಪುರಕ್ಕೆ ಬರುವಾಗ ದಾರಿಯಲ್ಲಿ ಕಂಡ ಕಸಾಯಿಖಾನೆಗೆ ಒಯ್ಯುತ್ತಿದ್ದ ಹಸುವನ್ನು ಎರಡು ಸಾವಿರಕ್ಕೆ ಖರೀದಿಸಿ, ತಮ್ಮ ತೋಟಕ್ಕೆ ಸೇರಿಸಿ ಪೋಷಿಸಿದಾಗ 7 ಲೀಟರ್ ಹಾಲು ನೀಡಿದ್ದನ್ನು ಬಹಳ ಸಂತೋಷದಿಂದ ಹೇಳುತ್ತಾರೆ. ಹೀಗೆ ಕಸಾಯಿಖಾನೆ ಸೇರಬೇಕಿದ್ದ ಎಷ್ಟೋ ದನಕರುಗಳಿಗೆ ಹೇಮಾ ಅವರ ತೋಟ ಇಂದಿಗೂ ಆಶ್ರಯ ತಾಣವಾಗಿದೆ. ಆಲೂಗೆಡ್ಡೆಯಿಂದ ಪಡೆದ ಲಾಭ ಮೂರು ಲಕ್ಷ ರೂಪಾಯಿಗಳಿಂದ ಮಾರುತಿ ವ್ಯಾನ್ ಖರೀದಿಸುವುದರ ಜೊತೆಗೆ, ಕೃಷಿಗೆ ಅಗತ್ಯವಾದ ಎಲ್ಲ ಸಲಕರಣೆಗಳನ್ನು ಕೊಂಡು ಸಂಪೂರ್ಣ ಕೃಷಿಕರಾದರು. ಅರಸೀಕೆರೆಯ ಬ್ಯಾಂಕಿನಿಂದ 10 ಸಾವಿರ ಸಾಲವನ್ನು ಪಡೆದ ಇವರು ಆಲೂಗೆಡ್ಡೆಯ ಲಾಭದ ಹಣವನ್ನೂ ಸೇರಿಸಿ ತನ್ನ 30 ಎಕರೆ ತೋಟಕ್ಕೆ ಬೇಲಿಯನ್ನು ಮಾಡಿಕೊಂಡು, ಬೋರ್ವೆಲ್ ಹಾಕಿಕೊಂಡು ಕೃಷಿ ಉದ್ಯಮದತ್ತ ದಾಪುಗಾಲಿಟ್ಟರು.

ಇದನ್ನು ಓದಿದ್ದೀರಾ?: ಸಮಾಜ ಸ್ಪಂದನಶೀಲೆ- ಸೌಭಾಗ್ಯ ಸಿ. 

ಹಾಸನದಲ್ಲಿ ನಿರ್ಮಿಸಿದ ತಮ್ಮ ಮನೆಗೆ ‘ರೆಡ್ ರೋಸ್’ ಎಂದು ಹೆಸರಿಟ್ಟಾಗ ಅವರ ತಂದೆ- ‘ರೆಡ್ ರೋಸ್ ಎಂದು ಸುಮ್ಮನೆ ಹೆಸರಿಟ್ಟರೆ ಸಾಲದು, ಅದಕ್ಕೆ ಸಾಂಕೇತಿಕವಾಗಿ ಏನನ್ನಾದರೂ ಮಾಡಬೇಕು’ ಎಂದು ಪ್ರೇರಣೆ ನೀಡಿದಾಗ, ತನ್ನ ತೋಟದಲ್ಲಿ ರೆಡ್ ರೋಸ್ ಬೆಳೆಯುವ ತೀರ್ಮಾನ ಮಾಡಿ, ಬೆಂಗಳೂರಿಗೆ ಹೋಗಿ ‘ಮುಳ್ಳಾ ಬ್ರೀಡ್’ ಎಂಬ ಕೆಂಪು ಗುಲಾಬಿಯ 500 ಸಸಿಗಳನ್ನು ತಂದು ತಮ್ಮ ತೋಟದಲ್ಲಿ ಬೆಳೆಸಿದರು. 500ರಿಂದ 10 ಸಾವಿರಕ್ಕೆ ಹೆಚ್ಚಿದ ಕೆಂಪು ಗುಲಾಬಿ ಗಿಡಗಳು ಹೇಮಾ ಅವರಿಗೆ ‘ಗುಲಾಬಿ ಹೇಮಕ್ಕ’ ಎಂಬ ಕೀರ್ತಿಯನ್ನು ತಂದುಕೊಟ್ಟವು. ಪತ್ರಿಕೆ, ರೇಡಿಯೋ, ಟಿವಿಯಲ್ಲಿ ಹೇಮಾ ಅನಂತ್ ಅವರ ಸಂದರ್ಶನಗಳು ಮೂಡಿ ಬಂದವು. ನಿತ್ಯವೂ ಬೆಳಗಿನ ಮಾರುಕಟ್ಟೆಗೆ 2 ಸಾವಿರ ಗುಲಾಬಿ ಕಳಿಸುತಿದ್ದ ಹೇಮಾ ಅವರಿಗೆ ಒಂದು ಹೂವಿಗೆ 1.80 ರೂ. ಸಿಗುತಿತ್ತು. ಮಾರುಕಟ್ಟೆಗೆ ಕಳಿಸಲಾಗದ ಮಧ್ಯಾಹ್ನದ ನಂತರ ಅರಳುವ ಹೂಗಳಿಂದ ಗುಲ್ಕನ್ ಹಾಗೂ ರೋಸ್ ಪೌಡರ್ ಎಂಬ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಅಲ್ಲಿಯೂ ಯಶಸ್ಸು ಗಳಿಸಲಾರಂಭಿಸಿದರು. ಒಣಗಿದ ಒಂದು ಕೆಜಿ ಗುಲಾಬಿ ಎಸಳುಗಳನ್ನು 400 ರೂ.ಗಳಿಗೆ ಮಾರುತಿದ್ದ ಹೇಮಾ ಅವರ ಪಾಲಿಗೆ ಬರಿಭೂಮಿ ಪುಣ್ಯಭೂಮಿಯಾಯಿತು!

ಹತ್ತು ವರ್ಷಗಳ ಕಾಲ ಗುಲಾಬಿ ಕೃಷಿ ಮಾಡಿದ ಅವರೀಗ ವರ್ಜಿನ್ ಕೋಕೋನಟ್ ಎಣ್ಣೆಯ ಉದ್ಯಮಕ್ಕೆ ಇಳಿದಿದ್ದು ಮತ್ತೊಂದು ತಿರುವು. ಅಮೆರಿಕಾದಲ್ಲಿದ್ದ ತನ್ನ ತಂಗಿಯ ಮನೆಗೆ ಹೋದಾಗ, ಒಂದು ಲೀಟರ್ ತೆಂಗಿನಕಾಯಿ ಎಣ್ಣೆ ಸಿಕ್ಕಿದರೆ ಅಲ್ಲಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಮಾಡುವುದನ್ನು ನೋಡಿ, ಆ ಎಣ್ಣೆಯ ಮಹತ್ವದ ಬಗ್ಗೆ ಅಧ್ಯಯನ ನಡೆಸುತ್ತಾರೆ. ಭಾರತಕ್ಕೆ ಹಿಂದಿರುಗಿ ಸ್ನೇಹಿತರೊಬ್ಬರ ಮಾರ್ಗದರ್ಶನದಂತೆ ಕೇರಳಕ್ಕೆ ತೆರಳಿ ಹತ್ತು ದಿನದ ತರಬೇತಿ ಪಡೆದು, ಶ್ರೀಲಂಕಾಕ್ಕೆ ಹೋಗಿ ಮತ್ತಷ್ಟು ಮಾಹಿತಿ ಪಡೆದು, ದೊಡ್ಡ ಮಟ್ಟದಲ್ಲಿ ಶುದ್ಧ ತೆಂಗಿನಕಾಯಿ ಎಣ್ಣೆಯ ಉತ್ಪಾದನೆ ಶುರು ಮಾಡಿದ್ದು ರೈತರಿಗೆ ಪಾಠ. ‘ರೈತ ಬೆಳೆ ಬೆಳೆದರಷ್ಟೇ ಸಾಲದು, ಅದನ್ನು ಯಾವ ರೂಪದಲ್ಲಿ ಗ್ರಾಹಕರಿಗೆ ತಲುಪಿಸಿದರೆ ತನಗೆ ಹೆಚ್ಚಿನ ಲಾಭ ಸಿಗುವುದೆಂದು ಯೋಚಿಸಬೇಕು’ ಎಂದು ಹೇಮಾ ಕಿವಿಮಾತು ಹೇಳುತ್ತಾರೆ.

ಇದನ್ನು ಓದಿದ್ದೀರಾ?: ಉದ್ದಿಮೆ ಕ್ಷೇತ್ರದಲ್ಲಿ ಜಿಲ್ಲೆಯ ಹೆಣ್ಣುಮಕ್ಕಳು

ಇವರ ಭೂಮಿಯಲ್ಲಿಯೇ ಬೆಳೆದ ಪದಾರ್ಥಗಳಿಂದಲೇ ಸಿದ್ಧಪಡಿಸುವ ತೆಂಗಿನಕಾಯಿ ಎಣ್ಣೆ, ಅರಿಶಿನ ಪುಡಿ, ಮೆಣಸು, ತರಕಾರಿ, ಹಣ್ಣು, ಹಾಲು, ಕೋಳಿ ಮೊಟ್ಟೆ, ತೆಂಗಿನಕಾಯಿ, ರಾಗಿಹಿಟ್ಟನ್ನು ನೇರವಾಗಿ ಗ್ರಾಹಕರು ಮನೆಗೆ ಬಂದು ಕೊಂಡುಕೊಳ್ಳುತ್ತಾರೆ. ಬೆಳೆದವರ ಬಳಿಗೆ ಗ್ರಾಹಕರು ಬರಬೇಕು ಎಂಬ ಪರಿಕಲ್ಪನೆ ಇವರದು. ಇಲ್ಲಿ ಇನ್ನೂ ವಿಶೇಷವೆಂದರೆ ತರಕಾರಿ, ಹಣ್ಣು ಇನ್ನಿತರೆ ಪದಾರ್ಥಗಳ ಬೆಲೆಯನ್ನು ಹಾಕಿರುವ ಫಲಕವನ್ನು ತೂಗಿ ಹಾಕಿರುತ್ತಾರೆ. ಆ ಬೆಲೆ ನೋಡಿ ಗ್ರಾಹಕರೇ ತರಕಾರಿ, ಹಣ್ಣು ತೂಕ ಹಾಕಿಕೊಂಡು ಹುಂಡಿಯಲ್ಲಿ ಹಣ ಹಾಕಿ ಹೋಗುತ್ತಾರೆ! ಮಧ್ಯವರ್ತಿಯನ್ನು ನಂಬುವ ಬದಲು ಗ್ರಾಹಕರನ್ನೇ ನಂಬುತ್ತೇನೆ ಎನ್ನುವ ಇವರ ಈ ಹೊಸ ಮನೆ ಮಾರುಕಟ್ಟೆ ಪದ್ಧತಿಗೆ 2017-18ನೇ ಸಾಲಿನಲ್ಲಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ ನೀಡುವ ‘ಅತ್ಯುತ್ತಮ ತೋಟಗಾರಿಕಾ ಮಹಿಳೆ’ ಪ್ರಶಸ್ತಿ ಸಿಕ್ಕಿದೆ. ತೋಟದ ಕೆಲಸಕ್ಕಾಗಿ ಬರುವವರನ್ನು ನನ್ನ ಸಹ ಕೆಲಸಗಾರರೆನ್ನುವ ಹೇಮಾ ಅವರು, ಬಹಳ ಪ್ರೀತಿ, ಗೌರವದಿಂದ ಅವರನ್ನು ನಡೆಸಿಕೊಳ್ಳುವುದರಿಂದ, ನಮ್ಮದೇ ತೋಟ ಎಂಬ ಭಾವನೆ ಅವರಲ್ಲೂ ಬೆಳೆದಿದೆ. ‘ಕಾರ್ಮಿಕರನ್ನು ಬದಲಾಯಿಸುವ ಬದಲಾಗಿ ನಿತ್ಯವೂ ಅದೇ ಕಾರ್ಮಿಕರಿಗೆ ಕೆಲಸ ನೀಡುವುದರಿಂದ ಅವರಿಗೆ ಆ ತೋಟದ ಮಣ್ಣಿನ ಗುಣಧರ್ಮ, ಜವಾಬ್ದಾರಿ, ಪ್ರೀತಿ ಹೆಚ್ಚುತ್ತದೆ. ಇದು ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ’ ಎನ್ನುತ್ತಾರೆ. ತೋಟದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೂ ಇವರು ನೆರವಾಗಿದ್ದಾರೆ. ಪಿಯುಸಿ, ಪದವಿ ಪಡೆದ ವಿದ್ಯಾವಂತರೂ ಕೂಡ ಇಲ್ಲಿ ಕೆಲಸಕ್ಕಾಗಿ ಬರುವುದು ಇಲ್ಲಿ ಸಿಗುವ ಪ್ರೀತಿ ಹಾಗೂ ಗೌರವದಿಂದ.

ಇದನ್ನು ಓದಿದ್ದೀರಾ?: ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಬಳಸಲಾಗದ ಬಟ್ಟೆಗಳನ್ನು ಎಸೆಯದೆ ಕತ್ತರಿಸಿದ ಸಣ್ಣ ಸಣ್ಣ ಚೂರುಗಳನ್ನು, ಕಾಗದದ ಚೂರುಗಳನ್ನು, ರಟ್ಟುಗಳನ್ನು, ಬಿಸಾಡಬಹುದಾದ ಪ್ಲಾಸ್ಟಿಕ್ ಬಾಟಲಿ, ಬಟ್ಟಲುಗಳಿಗೆ ತುಂಬಿ- ಮಣ್ಣಿನ ಸಹಾಯವೇ ಇಲ್ಲದೆ ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸುತ್ತಾರೆ. ಗಿಡಗಳನ್ನು ತಿನ್ನಲು ಬರುವ ಹುಳುಗಳ ಮೇಲೆ ಅನ್ನದ ಗಂಜಿಯನ್ನು ಸಿಂಪಡಿಸಿ ರಾಸಾಯನಿಕ ಮುಕ್ತ ಕೀಟನಾಶಕಗಳನ್ನು ಪರಿಚಯಿಸುತ್ತಾರೆ. ತೆಂಗಿನ ಎಣ್ಣೆ ತಯಾರಿಸುವಾಗ ಸಿಗುವ ಕಾಯಿಯ ನೀರನ್ನು, ತೋಟದಲ್ಲಿ ಕಳಿತು ಬಿದ್ದ ಹೆರಳೆಕಾಯಿ, ನಿಂಬೆಹಣ್ಣು, ಇನ್ನಿತರ ಸಿಟ್ರಸ್ ಹಣ್ಣುಗಳನ್ನು ಡಬ್ಬಿಯಲ್ಲಿ ತುಂಬಿ ಕೊಳೆಯಿಸಿ ಕಳೆನಾಶಕವಾಗಿ ಬಳಸುವ ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. ತೆಂಗಿನಕಾಯಿಯ ನೀರಿನಿಂದ ಬೆಲ್ಲ, ಸಕ್ಕರೆ ತಯಾರಿಸಿದ್ದಾರೆ. ಹಾಗೆಯೇ ಕಾಯಿ ನೀರನ್ನು ತರಕಾರಿ ಗಿಡಗಳಿಗೆ ಹನಿ ನೀರಾವರಿಯಾಗಿ ನೀಡಿದಾಗ, ಕೋಳಿ ಮರಿಗಳಿಗೆ ಕುಡಿಯಲು ನೀಡಿದಾಗ, ಬಹಳ ಸೊಂಪಾಗಿ ಬೆಳೆದು ಹೆಚ್ಚು ಫಲ ನೀಡಿದವು. ಇವರ ಈ ಪ್ರಯೋಗಕ್ಕಾಗಿ ರಾಷ್ಟ್ರಮಟ್ಟದ ‘ಇನ್ನೋವೇಟಿವ್ ಫಾರ್ಮರ್’ ಎಂಬ ಪ್ರಶಸ್ತಿ ಕೂಡ ದೊರೆತಿದೆ. ಕರು ಹಾಕಿದಾಗ ಹತ್ತಾರು ದಿನಗಳ ಕಾಲ ಕುಡಿಯಲು ಬಳಸದ ಆ ಹಾಲನ್ನು ಕೂಡ ತರಕಾರಿ ಗಿಡಗಳು ಹಾಗೂ ಕೋಳಿಮರಿಗಳಿಗೆ ನೀಡುವ ಹೇಮಾ ಅವರು ಧನಾತ್ಮಕ ಫಲಿತಾಂಶ ಪಡೆದಿದ್ದಾರೆ. ತಮ್ಮದೇ ಹಲವು ಪ್ರಯೋಗಗಳಿಂದ  ಕೃಷಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಹೇಮಾ ನಿತ್ಯ ಪ್ರಯೋಗಶೀಲರು. 

FARM
ಹೇಮಾ ಅನಂತ್

ಅವರ ಜೊತೆ ಕುಳಿತು ಮಾತನಾಡುತ್ತಿದ್ದರೆ ಅವರು ಹೇಳುವ ಒಂದೊಂದು ವಿಷಯಕ್ಕೂ ಅಚ್ಚರಿಯಾಗದೆ ಇರಲು ಸಾಧ್ಯವೇ ಇಲ್ಲ. ಇವೆಲ್ಲವೂ ರೈತ ಒಬ್ಬ ಬೆಳೆಗಾರ ಮಾತ್ರವಲ್ಲ ವಿಜ್ಞಾನಿ, ತಂತ್ರಜ್ಞಾನಿ ಕೂಡ ಎಂಬುದನ್ನೂ ಸಾಬೀತುಪಡಿಸುತ್ತವೆ. ಅಮೇರಿಕದಂತಹ ಮುಂದುವರೆದ ದೇಶಗಳಲ್ಲಿ ರೈತನಿಗೆ ತಲೆಬಾಗಿ ಗೌರವಿಸುತ್ತಾರೆ. ರೈತನನ್ನು ಅದೃಷ್ಟವಂತನೆಂದು ಶ್ಲಾಘನೆ ಮಾಡುತ್ತಾರೆ ಎನ್ನುವ ಹೇಮಾ, ನಮ್ಮ ದೇಶದಲ್ಲಿಯೂ ರೈತರನ್ನು ಗೌರವಿಸುವ ಸಂಸ್ಕೃತಿಯೊಂದು ಬೆಳೆಯಬೇಕಿದೆ ಎನ್ನುತ್ತಾರೆ. ರೈತರು ತನ್ನ ಭೂಮಿಯ ಪ್ರತಿ ಕೆಲಸವನ್ನೂ ಕೂಡ ಆನಂದಿಸಬೇಕು ಎನ್ನುವ ಇವರು, ತನ್ನ ತೋಟದಲ್ಲಿ ಬೆಳೆಯುವ ಒಂದು ಕಳೆಗಿಡವೂ ಕೂಡ ನನಗೆ ಪಾಠ ಹೇಳುವ ಸಲುವಾಗಿಯೇ ಬಂದಿದೆ ಎಂದು ಭಾವಿಸುವವರು!

ಇದನ್ನು ಓದಿದ್ದೀರಾ?: ಐತಿಹಾಸಿಕ ಮಹಿಳೆಯರು ಮತ್ತು ಹಾಸನ ಜಿಲ್ಲೆ

ಹಲವು ಗೌರವ, ಸನ್ಮಾನಗಳನ್ನು ಸ್ವೀಕರಿಸಿರುವ, ಕಳೆದ 35 ವರ್ಷಗಳಿಂದ ಅವಿರತ ಕೃಷಿಯಲ್ಲಿ ತೊಡಗಿರುವ ಹೇಮಾ ಅನಂತ್ 2008-09ನೇ ಸಾಲಿನಲ್ಲಿ ಬೆಂಗಳೂರು ಕೃಷಿವಿಜ್ಞಾನ ಕಾಲೇಜು ಡಾ. ಎಂ.ಹೆಚ್.ಮರಿಗೌಡ ಅವರ ಹೆಸರಿನಲ್ಲಿ ನೀಡುವ ‘ಅತ್ಯುತ್ತಮ ಕೃಷಿ ಮಹಿಳೆ’ ಪ್ರಶಸ್ತಿ, ದೆಹಲಿಯ ಕೃಷಿ ವಿಜ್ಞಾನ ಸಂಸ್ಥೆಯ ‘ಪ್ರಗತಿಪರ ಕೃಷಿಕ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಕೆಲ ಕಾಲ ಹಾಸನದ ಹಾಪ್ಕಾಮ್ಸ್ ನಿರ್ದೇಶಕರು ಸಹ ಆಗಿದ್ದರು. ‘ನನಗೆ ನಾನೇ ಯಾರಿಗಾದರೂ ಏನನ್ನಾದರೂ ಕೊಡುವ ಒತ್ತಡ ಮತ್ತು ಬದ್ಧತೆಗೆ ಆಗಾಗ ಒಳಗಾಗುತ್ತೇನೆ, ಆಗ ನಾನು ಕೆಲಸ ಮಾಡಲೇಬೇಕಾಗುತ್ತದೆ’ ಎನ್ನುವ ಹೇಮಾ ಅವರು- ‘ಬದ್ಧತೆಯೇ ನನ್ನ ಯಶಸ್ಸಿನ ಗುಟ್ಟು’ ಎನ್ನುತ್ತಾರೆ.

-ಮಮತಾ ಪ್ರಭು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Bhalki Ground Report | ಮುಸ್ಲಿಮರ ಮತ ಹಕ್ಕಿಗೆ ಕನ್ನ: ಬಗೆದಷ್ಟು ಬಯಲಾಗ್ತಿದೆ ‘ಫಾರ್ಮ್-7’ರ ಸಂಚು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರ ಬಿ.ಖಂಡ್ರೆ ಅವರು ಪ್ರತಿನಿಧಿಸುವ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ ʼನೀರೋʼ; ಭಾರತ ಉರಿಯುತ್ತಿರುವಾಗ ಭಜನೆ ಮಾಡಿದ ʼಮೋದಿʼ!

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ,...

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...