ಐಪಿಎಲ್ 2026ರ ಪಂದ್ಯಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಳಂಬವನ್ನು ತಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಮೂರು ಗಂಟೆಗಳಲ್ಲಿ ಮುಗಿಯಬೇಕಾದ ಪಂದ್ಯಗಳು ಈ ಋತುವಿನಲ್ಲಿ ನಾಲ್ಕು ಗಂಟೆಗಳನ್ನೂ ಮೀರುತ್ತಿವೆ. ಇದು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಸ್ಲೋ ಓವರ್-ರೇಟ್‌ಗಾಗಿ ಬಿಸಿಸಿಐ ದಂಡ ವಿಧಿಸುತ್ತಿದ್ದರೂ ಸಹ, ಪಂದ್ಯಗಳ ವಿಳಂಬವು ನಿರಂತರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
‘ಮಿಡ್-ಡೇ’ ಪತ್ರಿಕೆಯ ತಮ್ಮ ಅಂಕಣದಲ್ಲಿ ಈ ಬಗ್ಗೆ ಬರೆದಿರುವ ಗವಾಸ್ಕರ್, “ಪಂದ್ಯದ ನಡುವೆ ಅನಗತ್ಯವಾಗಿ ಅತಿ ಹೆಚ್ಚು ಜನರು ಮೈದಾನ ಪ್ರವೇಶಿಸುತ್ತಿರುವುದು ಈ ವಿಳಂಬಕ್ಕೆ ಒಂದು ಮುಖ್ಯ ಕಾರಣ” ಎಂದು ಬೆಟ್ಟು ಮಾಡಿದ್ದಾರೆ. ಬೌಂಡರಿ ಬಳಿ ಇರುವ ಫೀಲ್ಡರ್‌ಗೆ ನೀರಿನ ಬಾಟಲಿ ನೀಡಲು ಮೀಸಲು ಆಟಗಾರರು ಪದೇ ಪದೇ ಮೈದಾನಕ್ಕೆ ಬರುವುದನ್ನು ಅವರು ಆಕ್ಷೇಪಿಸಿದ್ದಾರೆ. “ಇದನ್ನು ಖಂಡಿತವಾಗಿಯೂ ಅನುಮತಿಸಬಾರದು. ಪಂದ್ಯ ನಡೆಯುತ್ತಿರುವಾಗ ಮೈದಾನದಲ್ಲಿ 11ಕ್ಕಿಂತ ಹೆಚ್ಚು ಆಟಗಾರರು ಇರುವುದನ್ನು ಇದು ಸೂಚಿಸುತ್ತದೆ,” ಎಂದು ಅವರು ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?
ಸ್ಟ್ರಾಟೆಜಿಕ್ ಟೈಮ್-ಔಟ್ (Strategic Time-out) ಸಮಯದಲ್ಲಿ ಮೈದಾನದಲ್ಲಿ ಕಂಡುಬರುವ ಗೊಂದಲದ ಬಗ್ಗೆಯೂ ಗವಾಸ್ಕರ್ ಕಿಡಿಕಾರಿದ್ದಾರೆ. “ಟೈಮ್-ಔಟ್ ಸಂದರ್ಭದಲ್ಲಿ ಇನ್ನೂ ಬ್ಯಾಟಿಂಗ್‌ಗೆ ಬರದ ಆಟಗಾರರು ಸೇರಿದಂತೆ ಅರ್ಧ ಡಜನ್ ಜನರು ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಮಿತಿ ಮೀರಿದ ನಡವಳಿಕೆ. ನೀರು ತರುವ ಇಬ್ಬರು ಮೀಸಲು ಆಟಗಾರರು ಮತ್ತು ಇಬ್ಬರು ಕೋಚಿಂಗ್ ಸ್ಟಾಫ್ ಹೊರತುಪಡಿಸಿ, ಬೇರೆ ಯಾರಿಗೂ ಮೈದಾನದ ಒಳಗೆ ಪ್ರವೇಶ ನೀಡಬಾರದು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗವಾಸ್ಕರ್ ಅವರು ಹಿರಿಯ ವೀಕ್ಷಕ ವಿವರಣೆಗಾರ ರಿಚಿ ಬೆನೋ ಅವರ ಮಾತೊಂದನ್ನು ನೆನಪಿಸಿಕೊಂಡು ಹೀಗೆ ಹೇಳಿದ್ದಾರೆ: “ಕ್ರಿಕೆಟ್ ಮೈದಾನ ಒಂದು ಪವಿತ್ರವಾದ ಜಾಗ. ಅಲ್ಲಿ ಆಟಗಾರರು ಹಾಗೂ ಅಂಪೈರ್‌ಗಳಿಗೆ ಮಾತ್ರ ಪ್ರವೇಶವಿರಬೇಕು. ಇದರ ಜೊತೆಗೆ, ಬಿಸಿಸಿಐನ ದೊಡ್ಡ ಅಧಿಕಾರಿಗಳು ಕೂಡ ಬೌಂಡರಿ ಗೆರೆಯನ್ನು ದಾಟಿ ಮೈದಾನದೊಳಗೆ ಬರಬಾರದು. ಆ ಮೂಲಕ ಮೈದಾನದ ಗೌರವವನ್ನು ಎಲ್ಲರೂ ಕಾಪಾಡಬೇಕು” ಎಂದು ಅವರು ಕೇಳಿಕೊಂಡಿದ್ದಾರೆ.
ವಿಳಂಬವನ್ನು ತಡೆಗಟ್ಟಲು ಕಠಿಣ ನಿಯಮಗಳ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಅವರು, “ಬ್ಯಾಟರ್‌ಗಳು ಈಗಾಗಲೇ ಡಗೌಟ್‌ನಲ್ಲಿ ಸಿದ್ಧರಿರುವುದರಿಂದ, ಅವರಿಗೆ ನೀಡಲಾಗುವ 2 ನಿಮಿಷಗಳ ಸಮಯವನ್ನು 1 ನಿಮಿಷಕ್ಕೆ ಇಳಿಸಬೇಕು. ಒಂದು ವೇಳೆ ಬ್ಯಾಟರ್ ಬೌಲರ್ ಎದುರಿಸಲು ವಿಳಂಬ ಮಾಡಿದರೆ, ಎಚ್ಚರಿಕೆಯ ನಂತರ ‘ಪೆನಾಲ್ಟಿ ರನ್’ (ದಂಡದ ರನ್) ವಿಧಿಸಬೇಕು” ಎಂದು ಮಹತ್ವದ ಸಲಹೆ ನೀಡಿದ್ದಾರೆ.





