ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನೋಡಿ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಕ್ರಿಕೆಟ್ ದಂತಕಥೆ ಅಲನ್ ಬಾರ್ಡರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್‌ನ ದಂತಕಥೆ ಬ್ರಿಯಾನ್ ಲಾರಾಗೆ ವೈಭವ್ ಅವರನ್ನು ಹೋಲಿಸಿರುವ ಅಲನ್ ಬಾರ್ಡರ್, ಹೊಗಳಿಕೆಗೆ ಮೈಮರೆಯದಂತೆ ಕಿವಿಮಾತು ಹೇಳಿದ್ದಾರೆ.
“ವೈಭವ್ ಭವಿಷ್ಯದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ಕ್ರಿಕೆಟಿಗನಾಗುತ್ತಾನೋ ಇಲ್ಲವೋ ಎಂದು ನಾನು ಈಗಲೇ ಊಹಿಸಲು ಸಾಧ್ಯವಿಲ್ಲ. ಆದರೆ ಅವನ ಬ್ಯಾಟಿಂಗ್‌ನಲ್ಲಿ ನಾನು ಬ್ರಿಯಾನ್ ಲಾರಾ ಅವರ ಝಲಕ್ ಅನ್ನು ಸ್ಪಷ್ಟವಾಗಿ ನೋಡಬಲ್ಲೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೂಮ್ರಾ ಎದುರು 15ರ ಪೋರ ವೈಭವ್ ಸಿಕ್ಸರ್‌ಗಳ ಆರ್ಭಟ; ಮರುಕಳಿಸಿದ ಸಚಿನ್-ಖಾದಿರ್ ನೆನಪು
“ವೈಭವ್ ಒಬ್ಬ ಅದ್ಭುತ ಆಟಗಾರ ಹಾಗೂ ಅದ್ಭುತ ಪ್ರತಿಭೆ ಹೊಂದಿರುವ ಆಟಗಾರ. ಕೇವಲ 14-15 ವರ್ಷದ ವಯಸ್ಸಿನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಇಷ್ಟು ಬಲವಾಗಿ ಚೆಂಡನ್ನು ಹೊಡೆಯುವುದನ್ನು ನಾನು ನೋಡಿಲ್ಲ. ಮೈದಾನದ ಎಲ್ಲ ಮೂಲೆಗಳಿಗೂ ಚೆಂಡನ್ನು ಅಟ್ಟುವ ಸಾಮರ್ಥ್ಯ ಅವನಿಗಿದೆ” ಎಂದು ಅಲನ್ ಬಾರ್ಡರ್ ಶ್ಲಾಘಿಸಿದ್ದಾರೆ.
ವೈಭವ್ ಅವರನ್ನು ಹೊಗಳಿರುವುದು ಮಾತ್ರವಲ್ಲದೆ ಕೆಲವು ಸಲಹೆಗಳನ್ನೂ ಬಾರ್ಡರ್ ನೀಡಿದ್ದಾರೆ. “ವೈಭವ್ ಈಗ ತನ್ನ ರಕ್ಷಣಾತ್ಮಕ ಆಟವನ್ನು ಇನ್ನಷ್ಟು ಬಿಗಿಗೊಳಿಸಲು ಕಲಿಯಬೇಕು. ಪವರ್ ಹಿಟ್ಟಿಂಗ್ ಜೊತೆಗೆ ಬಲವಾದ ಡಿಫೆನ್ಸ್ ಇದ್ದರೆ ಮಾತ್ರ ಉನ್ನತ ಮಟ್ಟದಲ್ಲಿ ಸುದೀರ್ಘ ವೃತ್ತಿಜೀವನವನ್ನು ಕಾಣಲು ಸಾಧ್ಯ. ಹಾಗೆಯೇ ಅತಿಯಾದ ಹೊಗಳಿಕೆಗೆ ಮೈಮರೆಯದೆ ತಂತ್ರಗಾರಿಕೆಯನ್ನು ಉತ್ತಮಪಡಿಸಿಕೊಳ್ಳಿ” ಎಂದು ಕಿವಿಮಾತು ಹೇಳಿದರು.
ಕ್ರಿಕೆಟ್ ಜಗತ್ತಿನ ದಿಗ್ಗಜರೊಬ್ಬರು ದೇಶದ ಎಳೆಯ ಪ್ರತಿಭೆಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿರುವುದು ಹಾಗೂ ಬ್ರಿಯಾನ್ ಲಾರಾರಂತಹ ಶ್ರೇಷ್ಠ ಆಟಗಾರನಿಗೆ ಹೋಲಿಸಿರುವುದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.





