ಈ ದಿನ ಸಂಪಾದಕೀಯ | ದೇಶಕ್ಕಿಂತ ದೊಡ್ಡವರೇ ಮೋದೀಜೀ?

Date:

ಮೂರನೆಯ ಸಲ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಅದರ ಪ್ರಶ್ನಾತೀತ ಪರಮೋಚ್ಚ ನಾಯಕ ನರೇಂದ್ರ ಮೋದಿಯವರೂ ಮುಗಿಲಿನಲ್ಲೇ ವಿಹರಿಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತತೆ ಹೊಂದಿರುವ ಚುನಾವಣಾ ಆಯೋಗವನ್ನು ಕೈವಶ ಮಾಡಿಕೊಂಡಿದೆ ಮೋದಿ ಸರ್ಕಾರ. ದೇಶಕ್ಕಿಂತ ಸರ್ಕಾರವೇ ದೊಡ್ಡದೆಂದು ಭ್ರಮಿಸಿದ್ದಾರೆ. ಹಾಗೆಯೇ ನಡೆದುಕೊಳ್ಳುತ್ತಲೂ ಇದ್ದಾರೆ. ದೇಶ ಮೊದಲು ಎಂಬುದು ಘೋಷಣೆಗಷ್ಟೇ ಸೀಮಿತವಾಗಿದೆ.

- Advertisement -

ದೇಶವೆಂದರೆ ಭೂಪಟ ಮಾತ್ರವಲ್ಲ, ಕೇವಲ ಭೌಗೋಳಿಕ ವಿಸ್ತೀರ್ಣವೂ ಅಲ್ಲ. ದೇಶವೆಂದರೆ ಅಲ್ಲಿ ಜೀವಿಸುವ ಜನಸಮೂಹಗಳು. ಅವರ ಬದುಕು ಬವಣೆಗಳು- ನೋವು ನಲಿವುಗಳು. ಜನಗಣಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿಧಾತ….ಎಂಬ ನಮ್ಮ ರಾಷ್ಟ್ರಗೀತೆಯ ಅಧಿನಾಯಕ ಮತ್ತು ಭಾರತ ಭಾಗ್ಯವಿಧಾತ ಜನಸಮೂಹವಲ್ಲದೆ ಮತ್ತೇನೂ ಅಲ್ಲ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ಕಟ್ಟಿದ ನಾಯಕರು ಜನತಂತ್ರವನ್ನು ಆರಿಸಿಕೊಂಡರು. ಎಲ್ಲ 140 ಕೋಟಿ ಜನರೂ ಒಟ್ಟಾಗಿ ಸರ್ಕಾರ ನಡೆಸುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಗಳಲ್ಲಿ  ಜನರಿಂದ ಆಯ್ಕೆಯಾದ ಸರ್ಕಾರ ದೇಶವನ್ನು ನಡೆಸುತ್ತದೆ. ಐದು ವರ್ಷಗಳಿಗೆ ಆಯ್ಕೆಯಾದರೂ ಸರಿ, ಮತ್ತೆ ಮತ್ತೆ 25 ವರ್ಷಗಳ ಕಾಲ ಆಯ್ಕೆಯಾಗುತ್ತಲೇ ಇದ್ದರೂ ಸರಿ. ದೇಶವನ್ನು ನಡೆಸುವ ಸರ್ಕಾರ ದೇಶದ ಒಡೆತನ ಹೊಂದಿರುವುದಿಲ್ಲ. ಪ್ರತಿಯಾಗಿ ತಾನು ಕ್ಷಣಕ್ಷಣಕ್ಕೂ ಜನತೆಗೆ ಉತ್ತರದಾಯಿ ಎಂಬುದನ್ನು ಮರೆಯುವಂತಿಲ್ಲ. ಆದರೆ ಪಕ್ಷಗಳು ಈ ಮಾತನ್ನು ಮರೆಯುತ್ತವೆ. ತಾವು ಸರ್ಕಾರ ರಚಿಸಿದಾಕ್ಷಣ ದೇಶದ-ರಾಜ್ಯದ ಒಡೆತನವೇ ತನ್ನ ಕೈಗೆ ಬಂದಂತೆ ವರ್ತಿಸುತ್ತದೆ. ಇಂತಹ ಪಕ್ಷಗಳು ಮತ್ತು ಸರ್ಕಾರಗಳ ನಾಯಕರಿಗೆ ಕೂಡ ಈ ಮಾಲೀಕತ್ವದ ಮದ ಮಿದುಳಿಗೆ ಏರುತ್ತದೆ. ಅಧಿಕಾರದ ಅಮಲಿನಲ್ಲಿ ಮೈಮರೆಯುತ್ತಾರೆ. ಅವರನ್ನು ಭ್ರಮೆಯ ಮುಗಿಲಿನಿಂದ ಮತ್ತೆ ವಾಸ್ತವತೆಯ ನೆಲಕ್ಕೆ ಇಳಿಸಬೇಕೆಂದರೆ ಚುನಾವಣೆಗಳು ಬರಬೇಕು. ಅವರ ನಿಜಸ್ವರೂಪ ಜನತೆಗೆ ಅರ್ಥವಾಗಿದ್ದರೆ ಸೋಲಿಸುತ್ತಾರೆ. ಜನರ ಮಿದುಳುಗಳಿಗೆ ದ್ವೇಷದ ವಿಷ ಹಿಂಡಿದ್ದರೆ, ಅವು ಮರಗಟ್ಟುತ್ತವೆ.

ಮೂರನೆಯ ಸಲ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಅದರ ಪ್ರಶ್ನಾತೀತ ಪರಮೋಚ್ಛ ನಾಯಕ ನರೇಂದ್ರ ಮೋದಿಯವರೂ ಮುಗಿಲಿನಲ್ಲೇ ವಿಹರಿಸುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತತೆ ಹೊಂದಿರುವ ಚುನಾವಣಾ ಆಯೋಗವನ್ನು ಕೈವಶ ಮಾಡಿಕೊಂಡಿದೆ ಮೋದಿ ಸರ್ಕಾರ. ದೇಶಕ್ಕಿಂತ ಸರ್ಕಾರವೇ ದೊಡ್ಡದೆಂದು ಭ್ರಮಿಸಿದ್ದಾರೆ. ಹಾಗೆಯೇ ನಡೆದುಕೊಳ್ಳುತ್ತಲೂ ಇದ್ದಾರೆ. ದೇಶ ಮೊದಲು ಎಂಬುದು ಘೋಷಣೆಗಷ್ಟೇ ಸೀಮಿತವಾಗಿದೆ. 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಚುನಾವಣೆಗಳ ನಟ್ಟನಡುವೆ ಇರುವ ದಿನಗಳಿವು. ಕೇರಳ, ಅಸ್ಸಾಮ್ ನಲ್ಲಿ ಮತದಾನ ಮುಗಿದಿದೆ. ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ. ತಮಿಳುನಾಡು ನಾಳೆ ಒಂದೇ ಹಂತದಲ್ಲಿ ಮತದಾನ ಮಾಡಲಿದೆ.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಈ ನೀತಿ ಸಂಹಿತೆಯ ಪ್ರಕಾರ ಸರ್ಕಾರಿ ಯಂತ್ರದ ದುರ್ಬಳಕೆ ಸಲ್ಲದು. ಆಳುವ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಮತೂಕದ ಸ್ಪರ್ಧೆ ಇರಬೇಕು ಎಂಬುದು ಜನತಂತ್ರದ ಆಶಯ. ಇದನ್ನು ಆಗು ಮಾಡುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ಅಧಿಕಾರ ಹಿಡಿದವರು ಚುನಾವಣಾ ಆಯೋಗವನ್ನು ನಿಯಂತ್ರಿಸುತ್ತ ಬಂದಿದ್ದಾರೆ. ಕೆಲವರು ಕನಿಷ್ಠ ನಿಯಂತ್ರಿಸಿರಬಹುದು. ಕೆಲವರು ಕೈವಶ ಮಾಡಿಕೊಂಡಿರಬಹುದು. ಶೇಷನ್ ಮತ್ತು ಲಿಂಗ್ಡೋ ಅವಧಿಗಳ ವಿನಾ ಉಳಿದೆಲ್ಲ ಅವಧಿಗಳು ಗರಿಷ್ಠ ಮತ್ತು ಕನಿಷ್ಠ ಸರ್ಕಾರಿ ನಿಯಂತ್ರಣ ಎದುರಿಸಿವೆ. ಕಳೆದ ಹನ್ನೆರಡು ವರ್ಷಗಳಲ್ಲಿ ಬೆನ್ನು ಮೂಳೆ ಕಳೆದುಕೊಂಡಿರುವ ಚುನಾವಣಾ ಆಯೋಗ ಆಳುವ ಪಕ್ಷದ ಊಳಿಗಕ್ಕೆ ಬಿದ್ದಿದೆ. ಚುನಾವಣೆಗಳಲ್ಲಿ ಸರ್ಕಾರಿ ಯಂತ್ರದ ದುರ್ಬಳಕೆ ಸಲ್ಲದು ಎಂದೆವಲ್ಲ, ಅದು ಎಷ್ಟು ನಿಜದಲ್ಲಿ ಗಂಭೀರವೆಂದರೆ ಸರ್ಕಾರಿ ಯಂತ್ರ ದುರ್ಬಳಕೆ ಮಾಡಿದರೆಂದೇ ಲೋಕಸಭೆಗೆ ಇಂದಿರಾಗಾಂಧೀ ಅವರ ಆಯ್ಕೆಯನ್ನು ಅಲಹಾಬಾದ್ ಹೈಕೋರ್ಟು ಅಸಿಂಧುಗೊಳಿಸಿತ್ತು. ಕುರ್ಚಿ ಉಳಿಸಿಕೊಳ್ಳಲು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದ್ದರು ಇಂದಿರಾ. ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಗಳಲ್ಲಿ ದೇಶದ ಜನ ಅವರನ್ನು ಕಸದ ಬುಟ್ಟಿಗೆ ಎಸೆದದ್ದೂ, ತರುವಾಯ ಅನತಿಕಾಲದಲ್ಲೇ ಮತ್ತೆ ಆರಿಸಿದ್ದೂ ಈಗ ಇತಿಹಾಸ.

ಪ್ರಧಾನಮಂತ್ರಿ ಮೋದಿಯವರು ಇಂತಹ ಯಾವುದೇ ನೀತಿಸಂಹಿತೆಯನ್ನು ಲೆಕ್ಕಕ್ಕೆ ಇಟ್ಟುಕೊಂಡಂತೆ ತೋರುವುದಿಲ್ಲ. ಇದೇ 17ರಂದು ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣಾ ಮಸೂದೆ ಬಿದ್ದು ಹೋಯಿತು. ಮರುದಿನ ರಾತ್ರಿ ಅವರು ದೇಶವನ್ನು ಉದ್ದೇಶಿಸಿ ಮಾತಾಡಿದರು. ಕ್ಷೇತ್ರ ಮರುವಿಂಗಡಣಾ ಮಸೂದೆಯ ಸೋಲನ್ನು ಮಹಿಳಾ ಮೀಸಲಾತಿ ಮಸೂದೆಯ ಸೋಲೆಂದು ಸುಳ್ಳು ಹೇಳಿದರು. ಪ್ರತಿಪಕ್ಷಗಳು ಭ್ರೂಣ ಹತ್ಯೆಯ ಅಪರಾಧಿಗಳೆಂದು ಸಾರಿದರು. ಪ್ರತಿಪಕ್ಷಗಳಿಗೆ ಪಾಠ ಕಲಿಸುವಂತೆ ಕರೆ ನೀಡಿದರು. ನಿಮಿಷಕ್ಕೆ ಎರಡು ಸಲದಂತೆ ಕಾಂಗ್ರೆಸ್ ಹೆಸರು ಎತ್ತಿ ಹಳಿದರು. ಡಿಎಂಕೆ, ತೃಣಮೂಲ ಕಾಂಗ್ರೆಸ್ ಪಕ್ಷಗಳನ್ನು ನಿಂದಿಸಿದರು. ಸ್ತ್ರೀವಿರೋಧಿಗಳೆಂದು ಜರೆದರು. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಪಕ್ಷಗಳನ್ನು ಮತದಾರರು ಸೋಲಿಸುವರು ಎಂದರು. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಪ್ರತಿಪಕ್ಷಗಳಿಗೆ ಇಲ್ಲದ ಅನುಕೂಲವನ್ನು ಪ್ರಧಾನಿಯವರು ಬಳಸಿಕೊಂಡು ಅವುಗಳ ವಿರುದ್ಧ ಮೇಲುಗೈ ಪಡೆಯುವ ಈ ಸನ್ನಾಹವಿದು. ನಿಯಮಗಳ ಪ್ರಕಾರ ಚುನಾವಣೆಗಳ ನಡುವೆ ನಡೆದ ಈ ಭಾಷಣಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿತ್ತು. ಅವರ ಭಾಷಣವನ್ನು ಚುನಾವಣಾ ಆಯೋಗ ಮುಂಚಿತವಾಗಿಯೇ ತರಿಸಿಕೊಂಡು ಪರಿಶೀಲಿಸಬೇಕಿತ್ತು. ಪ್ರತಿಪಕ್ಷಗಳನ್ನು ನಿಂದಿಸುವ ಉಲ್ಲಂಘನೆಯ ಅಂಶಗಳನ್ನು ತೆಗೆದು ಹಾಕಬೇಕಿತ್ತು. ಆಯೋಗ ಇದ್ಯಾವುದನ್ನೂ ಮಾಡಿಲ್ಲ.

ದೂರದರ್ಶನ ಮತ್ತು ಆಕಾಶವಾಣಿ, ಸಂಸತ್ ಟೀವಿ, ಮತ್ತಿತರೆ ಸರ್ಕಾರಿ ಸಂಸ್ಥೆಗಳು ಈ ಭಾಷಣಕ್ಕೆ ವೇದಿಕೆಗಳಾಗಿ ಬಳಕೆಯಾದವು. ದೂರದರ್ಶನ ಮತ್ತು ಆಕಾಶವಾಣಿ ಸರ್ಕಾರಿ ಸಂಸ್ಥೆಗಳು. ಜನರ ತೆರಿಗೆ ಹಣದಲ್ಲಿ ನಡೆಯುವಂತಹವು. ಮೋದಿಯವರು ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಉಲ್ಲಂಘನೆ ಇದೇ ಮೊದಲಲ್ಲ, ಇದು ಕೊನೆಯದೂ ಆಗುವ ಸಾಧ್ಯತೆ ಇಲ್ಲ. ದೇಶದಲ್ಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಇಂತಹ ಉಲ್ಲಂಘನೆಗಳು ಹಲವು ಸಲ ನಡೆದಿವೆ. 2019ರಲ್ಲಿ ಪ್ರಧಾನಿ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಅವರಿಂದ ಜರುಗಿದ್ದ ಉಲ್ಲಂಘನೆ ಕೇಂದ್ರ ಚುನಾವಣಾ ಆಯೋಗದ ಮುಂದಿತ್ತು. ಆಯುಕ್ತರಲ್ಲಿ ಒಬ್ಬರಾಗಿದ್ದ ಅಶೋಕ್ ಲವಾಸ ಈ ಉಲ್ಲಂಘನೆಯನ್ನು ಮುಚ್ಚಿ ಹಾಕಲು ನಿರಾಕರಿಸಿದ್ದರು. ಅವರಿಗೆ ಕಲಿಸಲಾದ ‘ಪಾಠ’ ಯಾವುದೇ ಆಯುಕ್ತರು ಸುಲಭಕ್ಕೆ ಮರೆಯುವಂತಹುದಲ್ಲ. ಅತ್ಯಂತ ಸರಳವಾಗಿ ಹೇಳಬೇಕೆಂದರೆ ಲವಾಸ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸ್ಥಿತಿಯನ್ನು ನಿರ್ಮಿಸಲಾಯಿತು. ತಮ್ಮ ದಿಟ್ಟ ಕಠೋರ ನಿಲುವಿನ ಫಲಿತವನ್ನು ಅವರು ಆನಂತರವೂ ಅನುಭವಿಸಬೇಕಾಗಿ ಬಂದಿತ್ತು.

2019ರ ಚುನಾವಣೆಗಳಲ್ಲಿ ‘ನಮೋ ಟೀವಿ’ ಚಾನೆಲ್ ಆರಂಭವನ್ನು ಚುನಾವಣಾ ಆಯೋಗ ಕಡೆಗಣಿಸಿತ್ತು. 2019ರ ಫೆಬ್ರವರಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಪುಲ್ವಾಮ ದಾಳಿ ಮತ್ತೊಂದು ಉದಾಹರಣೆ. ಪಾಕಿಸ್ತಾನ ಭಯೋತ್ಪಾದಕ ನಿರ್ದೇಶಿತ ಈ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ತಿಂಗಳೊಪ್ಪತ್ತಿನಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರು ಈ ಸಂಗತಿಯನ್ನು ಚುನಾವಣಾ ಪ್ರಚಾರ ಭಾಷಣಕ್ಕೆ ದುರುಪಯೋಗ ಮಾಡಿಕೊಂಡರು. ಫುಲ್ವಾಮಾ ಹುತಾತ್ಮರ ಹೆಸರಿನಲ್ಲಿ ಮತಯಾಚನೆ ಮಾಡಿದ್ದರು! ಇದು ಚುನಾವಣಾ ನೀತಿಸಂಹಿತೆಯ ನಿಚ್ಚಳ ಉಲ್ಲಂಘನೆ. ಆದರೆ ಚುನಾವಣಾ ಆಯೋಗ ಕಮಕ್ ಕಿಮಕ್ ಎನ್ನಲಿಲ್ಲ. ಒಂದು ರಾಜ್ಯದ ಮತದಾನದ ದಿನ, ಆ ಮತದಾರರನ್ನು ಪ್ರಭಾವಿಸಲು ಮತ್ತೊಂದು ರಾಜ್ಯಕ್ಕೆ ಹೋಗಿ ಚುನಾವಣಾ ಭಾಷಣ ಮಾಡುವುದು ಮೋದಿಯವರು ಅನುಸರಿಸಿಕೊಂಡು ಬಂದಿರುವ ಇನ್ನೊಂದು ತಂತ್ರ. ಇದು ಕೂಡ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ.

ಮೋದಿಯವರು ಇದೇ 18ರಂದು ಮಾಡಿರುವ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನೂ ಚುನಾವಣಾ ಆಯೋಗ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಅವರಿಗೆ ಒಂದು ನೋಟಿಸ್ ನೀಡುವ ಕನಿಷ್ಠ ಕ್ರಮವನ್ನೂ ಜರುಗಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಂಗಳವಾರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆದದ್ದು ತಪ್ಪು. ಖರ್ಗೆಯವರಿಗೆ ತಡಮಾಡದೆ ನೋಟಿಸ್ ನೀಡಿದೆ ಆಯೋಗ. ಆದರೆ, ಈ ತುರ್ತನ್ನು ಮೋದಿಯವರ ಉಲ್ಲಂಘನೆ ಕುರಿತು ತೋರಲಿಲ್ಲ. ಪ್ರಜ್ಞಾವಂತ ನಾಗರಿಕರು ಆಯೋಗಕ್ಕೆ ಪತ್ರ ಬರೆದು ದೂರಿದ್ದಾರೆ. ಇಂದು ಸುಪ್ರೀಮ್ ಕೋರ್ಟಿನಲ್ಲೂ  ಅರ್ಜಿ ದಾಖಲಾಗಿದೆ. ಕಡೆಗೂ ತನ್ನ ನಿಷ್ಕ್ರಿಯತೆ ಮುರಿದಿರುವ ಆಯೋಗ, ದೂರನ್ನು ಪರಿಶೀಲಿಸುವುದಾಗಿ ಹೇಳಿ ‘ಮಹದುಪಕಾರ’ ಮಾಡಿದೆ.

ಚುನಾವಣಾ ನೀತಿ ಸಂಹಿತೆಯ ಸೆಕ್ಷನ್ ಏಳರ 1 (ಎ), 1 (ಬಿ) ಹಾಗೂ ನಾಲ್ಕನೆಯ ನಿಯಮಗಳ ಉಲ್ಲಂಘನೆಯ ಉಲ್ಲಂಘನೆಯಿದು. ಚುನಾವಣೆಗಳಲ್ಲಿ ಬಿಜೆಪಿ ಪರ ತಿರುಗಿಸುವ ಯಾವ ಅವಕಾಶವನ್ನೂ ಕೈಚೆಲ್ಲುವುದಿಲ್ಲ ಎಂಬ ಗಂಭೀರ ಆರೋಪಗಳನ್ನು ಎದುರಿಸಿದೆ ಚುನಾವಣಾ ಆಯೋಗ. ಈ ಆರೋಪಗಳು ಸುಳ್ಳೆಂದು ಸಾಬೀತು ಮಾಡಬೇಕು. ಸಾಂವಿಧಾನಿಕ ಸ್ವಾಯತ್ತತೆ ಹೊಂದಿದ ಸಂಸ್ಥೆ ತಾನೆಂದು ಜನರ ಮುಂದೆ ರುಜುವಾತು ಮಾಡಿಕೊಳ್ಳಬೇಕು. ಜನತೆಯ ವಿಶ್ವಾಸವನ್ನು ಮರಳಿ ಗಳಿಸಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...