ಮಳೆಯ ಕಾರಣ 11 ಓವರ್‌ಗಳಿಗೆ ಸೀಮಿತವಾಗಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಅದ್ಭುತ ಕ್ಷಣವೊಂದು ಸೃಷ್ಟಿಯಾಯಿತು. ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ವಿಶ್ವದ ಶ್ರೇಷ್ಠ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾಗೆ ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ವೈಭವ್ ಅವರ ಈ ಆಟವು 37 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಆಡಿದ ಐತಿಹಾಸಿಕ ಪಂದ್ಯವನ್ನು ನೆನಪಿಸಿತು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಗುವಾಹಟಿಯ ಬಾರ್ಸಾಪರಾ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಈ ಅಚ್ಚರಿಯ ಆಟವನ್ನು ಕಣ್ತುಂಬಿಕೊಂಡರು. ಬೂಮ್ರಾ ಎಸೆದ ಮೊದಲ ಚೆಂಡನ್ನು ವೈಭವ್ ಸಾಮಾನ್ಯ ಬೌಲರ್‌ನ ಎಸೆತದಂತೆ ಸುಲಭವಾಗಿ ಸಿಕ್ಸರ್‌ಗಟ್ಟಿದರು. ಆನಂತರ ಆ ಯುವಕನನ್ನು ಕಟ್ಟಿಹಾಕಲು ಬೂಮ್ರಾ ತಮ್ಮ ಪ್ರಸಿದ್ಧ ‘ಸ್ಲೋವರ್’ (ನಿಧಾನಗತಿಯ) ಎಸೆತ ಹಾಕಿದರು. ಆದರೆ ಅದನ್ನು ಮೊದಲೇ ಅರಿತ ವೈಭವ್, ಯಾವುದೇ ಭಯವಿಲ್ಲದೆ ಮತ್ತೊಂದು ಭಾರಿ ಸಿಕ್ಸರ್ ಸಿಡಿಸಿದರು. ಇದನ್ನು ನೋಡಿ ಬೂಮ್ರಾ ಅವರೇ ಆಶ್ಚರ್ಯದಿಂದ ನಕ್ಕರು. ಈ ಪಂದ್ಯದಲ್ಲಿ ವೈಭವ್ ಕೇವಲ 14 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿಯೊಂದಿಗೆ 39 ರನ್ ಗಳಿಸಿ ಮಿಂಚಿದರು.
ಈ ದೃಶ್ಯವು 1989ರಲ್ಲಿ ಪಾಕ್‌ನ ಪೇಶಾವರದಲ್ಲಿ ನಡೆದ ಆ ಪಂದ್ಯವನ್ನು ನೆನಪಿಸುವಂತಿತ್ತು. ಅಂದು 16 ವರ್ಷದ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ಶ್ರೇಷ್ಠ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿದ್ದರು. ಅಂದು ಸಚಿನ್ 18 ಎಸೆತಗಳಲ್ಲಿ 53 ರನ್ ಬಾರಿಸಿ, ದಿಗ್ಗಜ ಬೌಲರ್‌ಗೆ ಕಿಂಚಿತ್ತೂ ಹೆದರದೆ ಆಡಿದ್ದರು. ಅಂದು ಸಚಿನ್ ತೋರಿಸಿದ ಅದೇ ದಿಟ್ಟತನವನ್ನು ಇಂದು ಗುವಾಹಟಿಯಲ್ಲಿ ಬೂಮ್ರಾ ಎದುರು ವೈಭವ್ ಪ್ರದರ್ಶಿಸಿದ್ದಾರೆ.
ಇದನ್ನು ಓದಿದ್ದೀರಾ? ಇಂಗ್ಲೆಂಡಿನಲ್ಲಿ ವಾಸ | ತನ್ನನ್ನು ‘ವಿದೇಶಿ ಆಟಗಾರ’ ಎಂದು ಹೇಳುವವರಿಗೆ ಕೊಹ್ಲಿ ಕೊಟ್ಟ ಉತ್ತರವೇನು?
ತಮ್ಮ ಈ ಆಟದ ಮೂಲಕ ವೈಭವ್ ಬಿಸಿಸಿಐ ಆಯ್ಕೆ ಸಮಿತಿಗೆ ಗಟ್ಟಿ ಸಂದೇಶ ನೀಡಿದ್ದಾರೆ. ಐಪಿಎಲ್ ಮುಗಿದ ತಕ್ಷಣ ನಡೆಯುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಈ ಯುವಕನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿಭೆ ಇದ್ದರೆ ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ವೈಭವ್ ಸಾಬೀತುಪಡಿಸಿದ್ದಾರೆ.
ಈ ರೋಚಕ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (ಔಟಾಗದೆ 77) ಮತ್ತು ವೈಭವ್ ಅವರ ಅಬ್ಬರದ ಆಟದಿಂದ ರಾಜಸ್ಥಾನ್ 11 ಓವರ್‌ಗಳಲ್ಲಿ 3 ವಿಕೆಟ್‌ಗೆ 150 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ ತಂಡ 123/9 ರನ್ ಮಾತ್ರ ಗಳಿಸಿ, 27 ರನ್‌ಗಳಿಂದ ಸೋಲು ಕಂಡಿತು. ಈ ಜಯದೊಂದಿಗೆ ರಾಜಸ್ಥಾನ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.




