ಫೈನಲ್‌ ಪಂದ್ಯದಲ್ಲಿ ಆಡಿಸುವುದಿಲ್ಲ ಎಂದು 48 ಗಂಟೆ ಮೊದಲೇ ಗೊತ್ತಿತ್ತು; ಮೌನ ಮುರಿದ ಆರ್‌ ಅಶ್ವಿನ್

ಆರ್ ಅಶ್ವಿನ್
R Ashwin

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಆಡಿಸಿದಿರುವ ಬಗ್ಗೆ ಭಾರತ ತಂಡದ ಅನುಭವಿ ಸ್ಪಿನ್ನರ್ ಆರ್‌ ಅಶ್ವಿನ್ ಮೌನ ಮುರಿದಿದ್ದಾರೆ.

“ಫೈನಲ್ ಪಂದ್ಯಕ್ಕೆ ನನಗೆ ಸ್ಥಾನ ಸಿಗುವುದಿಲ್ಲ ಎಂಬ ವಿಷಯ ಎರಡು ದಿನಗಳ ಮೊದಲೇ ಗೊತ್ತಿತ್ತು” ಎಂದು ಟೆಸ್ಟ್ ಕ್ರಿಕೆಟ್‌ನ ವಿಶ್ವದ ನಂ.1 ಬೌಲರ್ ಆರ್‌ ಅಶ್ವಿನ್ ಬಹಿರಂಗಪಡಿಸಿದ್ದಾರೆ.

“ಸತ್ಯ ಹೇಳಬೇಕೆಂದರೆ ಫೈನಲ್ ಪಂದ್ಯದಲ್ಲಿ ಆಟವಾಡಬೇಕೆಂಬ ಆಸೆ ನನಗೂ ಇತ್ತು. ದುರದೃಷ್ಟವಶಾತ್ ನನಗೆ ಅವಕಾಶ ಸಿಗಲಿಲ್ಲ. ಫೈನಲ್ ಪಂದ್ಯದ ಆಡುವ 11ರ ಬಳಗದಿಂದ ನಾನು ಹೊರಗುಳಿಯಲಿದ್ದೇನೆ ಎಂಬುದು ನನಗೆ 2 ದಿನ ಮೊದಲೇ ತಿಳಿದಿತ್ತು. ಆದರೆ, ನನ್ನ ಗುರಿ ಏನಿದ್ದರೂ ತಂಡಕ್ಕೆ ಯಾವುದಾದರೂ ರೀತಿಯಲ್ಲಿ ನೆರವಾಗಿ ಟ್ರೋಫಿ ಗೆಲ್ಲುವಂತೆ ಮಾಡಬೇಕು ಎಂಬುದಾಗಿತ್ತು. ಭಾರತ ತಂಡ ಫೈನಲ್ ಪ್ರವೇಶಿಸಲು ನನ್ನ ಕೊಡುಗೆಯೂ ಇದೆ. ಕೊನೆಯ ಬಾರಿ ಆಡಿದ್ದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ನಾನು 4 ವಿಕೆಟ್ ಪಡೆದಿದ್ದೆ. 2018-19ರ ನಂತರ ವಿದೇಶಿ ಪಿಚ್‌ಗಳಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ. ನನ್ನ ಕೊಡುಗೆಯಿಂದಲೂ ಭಾರತ ತಂಡ ಹಲವು ಪಂದ್ಯಗಳು ಗೆದ್ದಿವೆ. ಜೀವನದಲ್ಲಿ ನೀವು ಯಾವುದೇ ಅನುಭವಗಳನ್ನು ಎದುರಿಸಿದರೂ, ನೀವು ಅವುಗಳನ್ನು ಗೆಲ್ಲಬೇಕು” ಎಂದು ಆರ್‌ ಅಶ್ವಿನ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಹಾಲು ಕಳಪೆ ಗುಣಮಟ್ಟದ್ದು ಎಂದು ವಿವಾದ ಸೃಷ್ಟಿಸಿದ ಕೇರಳ ಸಚಿವೆ

“ನನಗೀಗ 36 ವರ್ಷ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಯಾವುದು ಕೋಪ ತರಿಸುತ್ತದೆಯೋ ಅದೇ ಹೆಚ್ಚು ಆನಂದವನ್ನೂ ನೀಡುತ್ತದೆ. ಈ ವಯಸ್ಸಿನಲ್ಲಿ ನಾನು ನನಗೆ ಸಂತೋಷ ನೀಡುವ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ. ಹಿರಿಯರು ಮತ್ತು ಮಾಜಿ ಕ್ರಿಕೆಟಿಗರು ನನಗೆ ಸಂದೇಶ ಕಳುಹಿಸುತ್ತಲೇ ಇರುತ್ತಾರೆ. ನಾನು ಅವರಿಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ. ಯಾಕೆಂದರೆ ಅವರ ದೃಷ್ಟಿಯಲ್ಲಿ ನಾನು ಇನ್ನೂ ಚಿಕ್ಕವನಾಗಿದ್ದೇನೆ. ಅವರ ಸಲಹೆಗಳು ನನಗೆ ಬೇಕು” ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಆಯ್ಕೆ ಮಂಡಳಿ ಅಶ್ವಿನ್‌ ಅವರನ್ನು ಕೈಬಿಟ್ಟು ನಾಲ್ವರು ವೇಗಿಗಳಿಗೆ ಮಣೆ ಹಾಕಿತ್ತು. ಒಬ್ಬರು ಮಾತ್ರ ಸ್ಪಿನ್ನರ್ ಇದ್ದರು. ಆದರೆ ಅಶ್ವಿನ್ ಜಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವೇಗಿ ಉಮೇಶ್ ಯಾದವ್, 2 ವಿಕೆಟ್ ಮಾತ್ರ ಕಬಳಿಸಿದರು. ಇದೇ ವರ್ಷ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 25 ವಿಕೆಟ್ ಉರುಳಿಸಿದ್ದ ಅಶ್ವಿನ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಲಂಡನ್‌ನ ಓವಲ್ ಮೈದಾನದಲ್ಲಿ ಜೂನ್‌ 7 ರಿಂದ 11ರವರೆಗೆ ನಡೆದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತು. ಇದಕ್ಕೆ ಭಾರಿ ಬೆಲೆತೆತ್ತ ರೋಹಿತ್ ಶರ್ಮಾ ಪಡೆ 209 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಸತತ 2ನೇ ಬಾರಿಯೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.

ಡಬ್ಲ್ಯಟಿಸಿ ಫೈನಲ್ ಮುಗಿಸಿದ ಬೆನ್ನಲ್ಲೆ ತಾಯ್ನಾಡಿಗೆ ಬಂದಿಳಿದ ಆರ್ ಅಶ್ವಿನ್, ನೇರವಾಗಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡರು. ಪ್ರಸ್ತುತ ನಡೆಯುತ್ತಿರುವ ಟಿಎನ್‌ಪಿಎಲ್‌ ಲೀಗ್‌ನಲ್ಲಿ ದಿಂಡುಗಲ್ ಡ್ರಾಗನ್ಸ್ ತಂಡವನ್ನು ಅಶ್ವಿನ್ ಮುನ್ನಡೆಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಅಶ್ವಿನ್ ಎರಡು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here