ಏಕದಿನ ಕ್ರಿಕೆಟ್ ಮಹಾ ಅನಿಶ್ಚಿತತೆಗಳ ಆಟ. 2023ರ ವಿಶ್ವಕಪ್ ಫೈನಲ್ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದೆ. ಟೂರ್ನಮೆಂಟ್ ಆರಂಭದಲ್ಲೇ ಎರಡು ಮ್ಯಾಚ್ ಸೋತಿದ್ದ ಆಸ್ಟ್ರೇಲಿಯಾ ಆರನೆ ಬಾರಿ ಕಪ್ ಗೆದ್ದಿದೆ. ಟೂರ್ನಿಯುದ್ದಕ್ಕೂ ಒಂದು ಪಂದ್ಯ ಕೂಡ ಸೋಲದಿದ್ದ ಭಾರತ, ಫೈನಲ್‌ನಲ್ಲಿ ಸೋತು ಕಪ್ ಕೈಚೆಲ್ಲಿದೆ.
ಏಷ್ಯಾ ಕಪ್ ಗೆಲುವಿನೊಂದಿಗೆ ಭಾರಿ ಆತ್ಮವಿಶ್ವಾಸದಿಂದ ವಿಶ್ವಕಪ್ ಪ್ರವೇಶಿಸಿದ್ದ ಭಾರತ ತಂಡವು, ಆರಂಭದಿಂದಲೂ ಅತ್ಯುತ್ತಮವಾಗಿ ಆಡುತ್ತಿತ್ತು. ಆಡಿದ ಪ್ರತಿ ಪಂದ್ಯವನ್ನೂ ಗೆಲ್ಲುವುದರೊಂದಿಗೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಬ್ಯಾಟಿಂಗ್‌ನಲ್ಲಿ ತಂಡ ಅತ್ತುತ್ತಮ ಫಾರ್ಮ್‌ನಲ್ಲಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದರು. ಶುಭ್‌ಮನ್ ಗಿಲ್ ಅವರಿಗೆ ಸಾಥ್ ನೀಡುತ್ತಾ, ಉತ್ತಮ ಅಡಿಪಾಯ ಹಾಕಿಕೊಡುತ್ತಿದ್ದರು. ಗಿಲ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟ್ಸ್‌ಮನ್ ಆಗಬಹುದೆಂದು ಹಲವರು ಟೂರ್ನಮೆಂಟ್ ಆರಂಭಕ್ಕೂ ಮುನ್ನ ಭವಿಷ್ಯ ನುಡಿದಿದ್ದರು. ಆದರೆ, ಗಿಲ್ ಗಾಯಾಳುವಾಗಿ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನು ಕೆ ಎಲ್ ರಾಹುಲ್. ಕಳೆದ ಕೆಲವು ಟೂರ್ನಮೆಂಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆ ಎಲ್ ರಾಹುಲ್ ಕ್ರೀಡಾಭಿಮಾನಿಗಳಿಂದ ವಿಪರೀತ ಗೇಲಿಗೊಳಗಾಗಿದ್ದರು. ರಾಹುಲ್ ತಮ್ಮ ಪ್ರಭಾವ ಬಳಸಿ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ ಎನ್ನುವ ಟೀಕೆಯೂ ಕೇಳಿಬಂದಿತ್ತು. ಆದರೆ, ವಿಶ್ವಕಪ್ ಆರಂಭವಾದಾಗಿನಿಂದ ರಾಹುಲ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡಿದ್ದರು. ವಿಕೆಟ್‌ಗಳ ಹಿಂದೆಯೂ ಕ್ಯಾಚ್‌ಗಳ ಮೂಲಕ ಮತ್ತು ನಿಖರ ಅಂದಾಜಿನ ಮೂಲಕ ಡಿಆರ್‌ಎಸ್ ತೆಗೆದುಕೊಳ್ಳಲು ತಂಡಕ್ಕೆ ನೆರವಾಗುತ್ತಿದ್ದರು.
2023ರ ವಿಶ್ವಕಪ್ ಉದ್ದಕ್ಕೂ ಒಂದೇ ರೀತಿಯ ಆಟವಾಡಿದ ಬ್ಯಾಟ್ಸ್‌ಮನ್ ಎಂದರೆ, ಅದು ಕೊಹ್ಲಿ. ಈ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ ಎನ್ನಿಸಿಕೊಂಡರು. ಇವರ ಜೊತೆಗೆ ಶ್ರೇಯಸ್ ಅಯ್ಯರ್ ಕೂಡ ತಮ್ಮ ಮಿಂಚಿನ ಬ್ಯಾಟಿಂಗ್‌ನಿಂದ ತಂಡದ ಬಲ ಎನ್ನಿಸಿದ್ದರು.
ಬೌಲಿಂಗ್‌ನಲ್ಲೂ ಭಾರತದ ಫಾರ್ಮ್ ಅತ್ಯುತ್ತಮವಾಗಿತ್ತು. ಗಾಯಾಳುವಾದ ಹಾರ್ದಿಕ್ ಪಾಂಡ್ಯ ಬದಲಿಗೆ ತಂಡ ಸೇರಿದ ಮೊಹಮದ್ ಶಮಿ ಆಗಮನದಿಂದ ತಂಡದ ಬೌಲಿಂಗ್ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿತ್ತು. ಮೂರು ಬಾರಿ ಐದು ವಿಕೆಟ್‌ಗಳನ್ನು ಕಬಳಿಸಿದ ಶಮಿ, ಟೂರ್ನಮೆಂಟ್‌ನ ಬೌಲರ್‌ಗಳಲ್ಲಿ ಅಗ್ರಸ್ಥಾನವನ್ನೂ ಪಡೆದರು. ಅವರ ಜೊತೆಗೆ ಬುಮ್ರಾ, ಕುಲದೀಪ್ ಯಾದವ್, ಜಡೇಜಾ ಅವರು ಸೇರಿ ಎದುರಾಳಿ ತಂಡಗಳ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲವರಾಗಿದ್ದರು. ಇವರೆಲ್ಲರ ಪರಿಶ್ರಮದಿಂದ ಲೀಗ್ ಹಂತದಲ್ಲಿ ಒಂದೂ ಪಂದ್ಯ ಸೋಲದೇ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ, ಸೆಮೀಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ, ಫೈನಲ್ ಪ್ರವೇಶಿಸಿತ್ತು. ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಸೋತಿದ್ದ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ಫೈನಲ್‌ನಲ್ಲಿ ಭಾರತದ ಎದುರಾಳಿಯಾಗಿತ್ತು.
ಈ ಬಾರಿಯ ವಿಶ್ವಕಪ್ ಭಾರತದ್ದೇ ಎಂದು ವಿಶ್ವದ ಬಹುತೇಕ ಕ್ರೀಡಾ ತಜ್ಞರು, ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ನೆಪಮಾತ್ರಕ್ಕೆ ಪಂದ್ಯ ನಡೆದು ಫಲಿತಾಂಶ ಬರಬೇಕು ಎನ್ನುವಷ್ಟರ ಮಟ್ಟಿಗೆ ಕೆಲವರು ಮಾತಾಡುತ್ತಿದ್ದರು. ಭಾರತ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಲಿದೆ ಎಂದೇ ಸ್ವದೇಶಿ ಕ್ರಿಕೆಟ್ ಪ್ರಿಯರು ಭಾವಿಸಿದ್ದರು. ಆದರೆ, ಫೈನಲ್‌ನಲ್ಲಿ ಎಲ್ಲರ ನಿರೀಕ್ಷೆಗಳು ಹುಸಿಯಾದವು. ಪಂಡಿತರ ಲೆಕ್ಕಾಚಾರಗಳು ತಲೆಕೆಳಗಾದವು. ಆಸ್ಟ್ರೇಲಿಯಾಗೆ ಭಾರತ ಸುಲಭ ತುತ್ತಾಯಿತು.
ಇದನ್ನು ಓದಿದ್ದೀರಾ? ವಿಶ್ವಕಪ್ ಫೈನಲ್ | ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರು: 6ನೇ ಬಾರಿಗೆ ಆಸೀಸ್ ಚಾಂಪಿಯನ್
ಮೊಟೆರಾದ ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಮೊತ್ತ ಕಲೆಹಾಕುವುದು ಕಷ್ಟ. ಹೀಗಾಗಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗಲೇ ಆಸ್ಟ್ರೇಲಿಯಾ ಅರ್ಧ ಗೆದ್ದಿತ್ತು. ಅಂಥ ಪಿಚ್‌ನಲ್ಲೂ ತಮ್ಮ ಎಂದಿನ ಆಟವಾಡಿದವರು ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಾತ್ರ. ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ನಿರ್ಣಾಯಕ ಪಂದ್ಯದಲ್ಲಿ ವಿಫಲರಾಗಿ ಕೈ ಚೆಲ್ಲಿದರು. ಇದೇ ತಂಡ ಸೋಲಲು ಪ್ರಮುಖ ಕಾರಣವಾಯಿತು.
AUSTRALIA ARE THE 2023 CHAMPIONS!
1987
1999
2003
2007
2015
𝟐𝟎𝟐𝟑A cricketing nation like no other 🙇#CWC23 #CWC23Final #INDvAUS pic.twitter.com/XSTG7hLGNl
— ESPNcricinfo (@ESPNcricinfo) November 19, 2023
ಅದಕ್ಕೆ ವಿರುದ್ಧವಾಗಿ ಆಡಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಿದರು. ಮೂರು ವಿಕೆಟ್ ಪತನವಾಗುತ್ತಿದ್ದಂತೆ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಆಡಿದರು. ಭಾರತದ ಬೌಲರ್‌ಗಳು ಆರಂಭದಲ್ಲಿ ಮೇಲುಗೈ ಸಾಧಿಸಿದರೂ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಿಧಾನಕ್ಕೆ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮೊಹಮದ್ ಶಮಿ ಸೇರಿದಂತೆ ವೇಗದ ಬೌಲರ್‌ಗಳಾಗಲಿ, ಕುಲ್‌ದೀಪ್, ಜಡೇಜಾ ಮುಂತಾದ ಸ್ಪಿನ್ನರ್‌ಗಳಾಗಲಿ ಯಾವ ಮ್ಯಾಜಿಕ್ ಅನ್ನೂ ಮಾಡಲಿಲ್ಲ.
ಪ್ರತಿ ಪಂದ್ಯ, ಪ್ರತಿ ಬಾಲ್, ಪ್ರತಿ ವಿಕೆಟ್, ಪ್ರತಿ ಬೌಂಡರಿ ಕೂಡ ಕ್ರಿಕೆಟ್‌ನಲ್ಲಿ ನಿರ್ಣಾಯಕ ಎನ್ನುವುದನ್ನು ಆಸ್ಟ್ರೇಲಿಯಾ ಚೆನ್ನಾಗಿ ಅರಿತುಕೊಂಡಿದೆ ಎನ್ನುವುದಕ್ಕೆ ಅದು ಫೈನಲ್‌ನಲ್ಲಿ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮಾಡಿದ ರೀತಿಯೇ ನಿದರ್ಶನ. ಆಫ್ಘಾನಿಸ್ತಾನದಂಥ ದುರ್ಬಲ ತಂಡದ ವಿರುದ್ಧ ಕಡಿಮೆ ಮೊತ್ತಕ್ಕೆ ಏಳು ವಿಕೆಟ್ ಕಳೆದುಕೊಂಡಿದ್ದಾಗ ಗ್ಲೆನ್ ಮ್ಯಾಕ್ಸ್‌ವೆಲ್ ಏಕಾಂಗಿಯಾಗಿ 201 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದ್ದು ಆಸ್ಟ್ರೇಲಿಯಾ ಇವತ್ತು ಕಪ್ ಎತ್ತಿಹಿಡಿಯುವಲ್ಲಿಗೆ ತಲುಪಿಸಿತು. ಟೂರ್ನಿಯುದ್ದಕ್ಕೂ ಸೋಲದಿದ್ದ ಭಾರತ ಫೈನಲ್‌ನಲ್ಲಿ ಸೋಲುವ ಮೂಲಕ ಕಪ್ ಕಳೆದುಕೊಂಡಿದೆ.
ಈ ಸುದ್ದಿ ಓದಿದ್ದೀರಾ: ವಿಶ್ವಕಪ್ ಫೈನಲ್ | ಕೋಟ್ಯಂತರ ಭಾರತೀಯರ ಕನಸು ನುಚ್ಚು ನೂರು: 6ನೇ ಬಾರಿಗೆ ಆಸೀಸ್ ಚಾಂಪಿಯನ್
ದಕ್ಷಿಣಾ ಆಫ್ರಿಕಾದಂತೆ ಭಾರತ ಕೂಡ ನಿರ್ಣಾಯಕ ಪಂದ್ಯಗಳಲ್ಲಿ ದಿಢೀರ್ ಕುಸಿತ ಕಂಡು ಸೋಲುವುದಕ್ಕೆ ಒಂದು ಇತಿಹಾಸವೇ ಇದೆ. ವಿಶ್ವಕಪ್ ಫೈನಲ್‌ನಲ್ಲಿ ಅದು ಮತ್ತೊಮ್ಮೆ ಪುನರಾವರ್ತನೆಯಾಗಿದೆ. ಒಂದೂ ಪಂದ್ಯ ಸೋಲದೇ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಭಾರತ ತಂಡಕ್ಕೆ ಮಾಜಿ ಆಟಗಾರ ಯುವರಾಜ್ ಸಿಂಗ್, ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಅದು ಘಟಿಸಿಯೇ ಹೋಗಿದೆ. ಆರನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವಕಪ್ ಎತ್ತಿಹಿಡಿದಿದೆ.
2011ರಲ್ಲಿ ಸ್ವದೇಶದಲ್ಲೇ ನಡೆದ ವಿಶ್ವಕಪ್‌ನಲ್ಲಿ ಗೆದ್ದಿದ್ದ ಭಾರತ, ಈಗ ಅಂಥ ಅವಕಾಶವನ್ನು ಕಳೆದುಕೊಂಡಿದೆ.
ಪಿಚ್ ಪರಿಸ್ಥಿತಿ, ದಿಢೀರ್ ಕುಸಿತ ಇದೆಲ್ಲ ಏನೇ ಇದ್ದರೂ, ಭಾರತ ಸೋತಿದೆ; ಕ್ರಿಕೆಟ್ ಗೆದ್ದಿದೆ.