ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೊಠಡಿಯಲಿ ವಶಪಡಿಸಿಕೊಂಡ ಮೊಬೈಲ್ ಫೋನ್‌ನಲ್ಲಿ ಹಲವಾರು ಅಶ್ಲೀಲ ವೀಡಿಯೊಗಳು ಇರುವುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಆದರೆ ಪೆನ್ ಡ್ರೈವ್‌ನಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಇವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ವಿಭಾಗದ ಬ್ಯಾರಕ್‌ಗಳಲ್ಲಿ ನಡೆಸಿದ ಹಠಾತ್ ತಪಾಸಣೆಯ ನಂತರ ವಶಪಡಿಸಿಕೊಂಡ ವಸ್ತುಗಳನ್ನು ನಂತರ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಕಳೆದ ತಿಂಗಳು ರೇವಣ್ಣ ಕೇಂದ್ರ ಕಾರಾಗೃಹದೊಳಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುತ್ತಿರುವುದು ಕಂಡುಬಂದಿತ್ತು. ನಂತರ ಹೊರಬಂದ ವೀಡಿಯೊದಲ್ಲಿ ಅವರು ಸಾಮಾನ್ಯ ಉಡುಪಿನಲ್ಲಿ ಫೋನ್‌ನಲ್ಲಿ ಯಾರೊಂದಿಗಾದರೂ ಮಾತನಾಡುತ್ತಿರುವುದು ಕಂಡುಬಂದಿತ್ತು.
ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ತಂಡ ನಡೆಸಿದ ತಪಾಸಣೆಯಲ್ಲಿ ಮೊಬೈಲ್ ಫೋನ್, ಚಾರ್ಜರ್, ಪೆನ್ ಡ್ರೈವ್ ಮತ್ತು ನೋಟ್‌ಬುಕ್ ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ನಿಷೇಧಿತ ವಸ್ತುಗಳು ಹೇಗೆ ಒಳ ಪ್ರವೇಶಿಸಿದವು ಎಂಬುದರ ಕುರಿತು ತನಿಖೆ ಮುಂದುವರಿದಿದೆ.





