ಪತಿಯ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪತ್ನಿ ಹಾಗೂ ಆಕೆಯ ಪ್ರಿಯಕರರಿಗೆ ಮದುವೆಯಾಗಲು ಒಂದು ದಿನದ ಪೆರೋಲ್ ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.
ಬೆಳಗಾವಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೂಡಲಗಿ ತಾಲೂಕಿನ ಭೈರನಟ್ಟಿಯ ನಿವಾಸಿಗಳಾದ ಶ್ರೀಧರ್ ಮತ್ತು ಸಿದ್ದವ್ವ ಅಲಿಯಾಸ್ ಪ್ರಿಯಾಂಕಾ ಜಗಮಟ್ಟಿ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಮದುವೆಯಾಗಲು 90 ದಿನಗಳ ಪೆರೋಲ್ ನೀಡುವಂತೆ ಅವರು ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರ ಪೀಠ, ಕೈದಿಗಳು ಮದುವೆಯಾಗಲು ಕಾನೂನಿನಲ್ಲಿ ಯಾವುದೇ ನಿಷೇಧವಿಲ್ಲ. ಕೇವಲ ನೈತಿಕತೆಯ ಆಧಾರದ ಮೇಲೆ ಅವರ ಕಾನೂನುಬದ್ಧ ಹಕ್ಕನ್ನು ನಿರಾಕರಿಸಲಾಗದು ಎಂದು ಸ್ಪಷ್ಟಪಡಿಸಿತು.
ಕೈದಿಗಳು ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪೆರೋಲ್ ನೀಡುವುದು ಅಪರಾಧಿಗಳ ಸುಧಾರಣೆ ಮತ್ತು ಪುನರ್ವಸತಿಯ ಪ್ರಮುಖ ಭಾಗವಾಗಿದೆ. ಜೈಲಿನಲ್ಲಿ ಅರ್ಜಿದಾರರ ನಡವಳಿಕೆ ಬಗ್ಗೆ ಯಾವುದೇ ಪ್ರತಿಕೂಲ ವರದಿ ಇಲ್ಲದ ಹಿನ್ನೆಲೆಯಲ್ಲಿ ಮದುವೆಯಾಗಲು ಒಂದು ದಿನದ ಪೆರೋಲ್ ನೀಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಬೆಳಗ್ಗೆ 10ರಿಂದ ಸಂಜೆ 5ರವರೆಗೆ
ಮದುವೆ ನಿಗದಿಪಡಿಸುವ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಾತ್ರ ಪೆರೋಲ್ ನೀಡಬೇಕು. ಮದುವೆ ಸಮಾರಂಭದ ವೇಳೆ ಜೈರ್ಲ ಸೂಕ್ತ ಪೊಲೀಸ್ ಸಿಬ್ಬಂದಿಯಿಂದ ಭದ್ರತೆ ಒದಗಿಸಬೇಕು. ಸಂಜೆ 5 ಗಂಟೆಯೊಳಗೆ ಇಬ್ಬರೂ ಬೆಳಗಾವಿ ಕಾರಾಗೃಹಕ್ಕೆ ಮರಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಪತಿಯ ಕೊಲೆ ಪ್ರಕರಣದಲ್ಲಿ ಶಿಕ್ಷೆ
ಶ್ರೀಧರ್ ಜೊತೆಗೂಡಿ ಸಿದ್ದವ್ವ ತನ್ನ ಪತಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಇಬ್ಬರೂ ಬೆಳಗಾವಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.



