ಮಹಾತ್ಮ ಗಾಂಧೀಜಿ ಪಾಲ್ಗೊಂಡಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ₹100 ಕೋಟಿ ವೆಚ್ಚದಲ್ಲಿ ಬೃಹತ್ ಗಾಂಧೀಜಿ ಸ್ಮಾರಕ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಶುಕ್ರವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವೂಡೇ ಪಿ.ಕೃಷ್ಣ ಅವರಿಗೆ ‘ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಮುಂದಿನ ವರ್ಷದ ಆಯವ್ಯಯದಲ್ಲಿ ಸ್ಮಾರಕ ನಿರ್ಮಾಣದ ಕುರಿತು ಘೋಷಿಸಲಾಗುವುದು. ಗಾಂಧೀಜಿ ಭೇಟಿ ನೀಡಿದ ಎಲ್ಲ ಜಿಲ್ಲೆಗಳಲ್ಲಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸಲಾಗುವುದು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಗಾಂಧೀಜಿ ಅವರ ಹೆಸರು ಮತ್ತು ತತ್ವಗಳನ್ನು ಅಳಿಸುವ ಪ್ರಯತ್ನಗಳ ನಡುವೆ ರಾಜ್ಯ ಸರ್ಕಾರ ಅವರ ವಿಚಾರಗಳನ್ನು ಉಳಿಸುವ ಕೆಲಸ ಮಾಡಲಿದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಗಾಂಧೀಜಿ ಅವರ ಪ್ರತಿಮೆಗಳು ಸ್ಥಾಪನೆಯಾಗಿವೆ. ವಿಶ್ವವಿದ್ಯಾಲಯಗಳಲ್ಲಿ ಅವರ ಚಿಂತನೆಗಳ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ. ವಿಶ್ವದ ಹಲವು ನಾಯಕರು ಗಾಂಧೀಜಿ ಅವರನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ ಎಂದರು.
ಗಾಂಧೀಜಿ ನಿಧನರಾದಾಗ ವಿಶ್ವಸಂಸ್ಥೆಯ ಕಟ್ಟಡದ ಮೇಲೆ ಎಲ್ಲ ರಾಷ್ಟ್ರಗಳ ಧ್ವಜಗಳನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಗಿತ್ತು. ಆದರೆ ಉದ್ಯೋಗ ಖಾತ್ರಿ ಯೋಜನೆಯಿಂದ ಗಾಂಧೀಜಿ ಅವರ ಹೆಸರನ್ನು ಏಕೆ ತೆಗೆಯಲಾಯಿತು ಎಂಬುದು ಅರ್ಥವಾಗುತ್ತಿಲ್ಲ. ಯೋಜನೆಯಲ್ಲಿ ಗಾಂಧೀಜಿ ಅವರ ಹೆಸರು ಇದ್ದರೆ ಏನು ತೊಂದರೆಯಾಗುತ್ತಿತ್ತು ಎಂಬ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದರು.
ಗಾಂಧೀಜಿ ಅವರನ್ನು ಒಪ್ಪಿಕೊಂಡ ಕುಟುಂಬ ಮತ್ತು ಅವರನ್ನು ಒಪ್ಪದೆ ಕೊಂದ ಕುಟುಂಬದ ನಡುವೆ ಸಂಘರ್ಷಗಳು ನಡೆಯುತ್ತಿವೆ. ಗಾಂಧೀಜಿ ಅವರ ಹೆಸರು ಮತ್ತು ತತ್ವಗಳನ್ನು ಅಳಿಸುವವರ ನಡುವೆ ರಾಜ್ಯ ಸರ್ಕಾರ ಅವರ ವಿಚಾರಗಳನ್ನು ಉಳಿಸುವ ಕೆಲಸ ಮಾಡಲಿದೆ ಎಂದು ಶಿವಕುಮಾರ್ ಹೇಳಿದರು.



