ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಬಸ್‌ನಲ್ಲಿನ ನೂಕುನುಗ್ಗಲಿನ ವಿಚಾರವಾಗಿ ಮಹಿಳೆಯೊಂದಿಗೆ ಜಗಳ ಮಾಡಿಕೊಂಡ ವ್ಯಕ್ತಿ, ಬಸ್‌ನಿಂದ ಇಳಿದ ಬಳಿಕವೂ ವಾಗ್ವಾದ ಮುಂದುವರಿಸಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗುತ್ತಿದ್ದಂತೆ, ಮಹಿಳೆಯೆಂಬ ಪರಿವೆಯಿಲ್ಲದೆ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಆಕೆಯ ಮುಖ ಹಾಗೂ ದೇಹದ ಭಾಗಗಳಿಗೆ ಹಿಗ್ಗಾಮುಗ್ಗಾ ಬಡಿದಿದ್ದಾನೆ. ಬಳಿಕ ಕಾಲಿನಿಂದಲೂ ಒದ್ದು ಹಲ್ಲೆ ನಡೆಸಿದ್ದಾನೆ.
ಜನನಿಬಿಡ ಪ್ರದೇಶದಲ್ಲೇ ನಡೆದ ಘಟನೆಯಿಂದ ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನೊಂದ ಮಹಿಳೆಯಿಂದ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



