ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದ್ದು, ಹಳೆ ಹಣಕಾಸಿನ ವೈಷಮ್ಯಕ್ಕೆ ಸೇಡು ತೀರಿಸಿಕೊಳ್ಳಲು ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಮೂಲಕ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿರುವುದು ಬೆಳಗಾವಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಗಾಂಧಿನಗರದ ಸರ್ವೇಶ ಕಂಗ್ರಾಳಕರ ಕೊಲೆಯಾದ ಯುವಕ. ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರಥ ರಜಪೂತ ಹಾಗೂ ಅರುಣ ಹುಲ್ಲೋಳಿ ಬಂಧಿತ ಆರೋಪಿಗಳು.
2025ರಲ್ಲಿ ಹಣಕಾಸಿನ ವಿಚಾರವಾಗಿ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸರ್ವೇಶ, ಶಶಿ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಬಳಿಕ ಇಬ್ಬರ ನಡುವೆ ದ್ವೇಷ ಬೆಳೆದಿತ್ತು. ಇದೇ ಹಳೆ ವೈಷಮ್ಯವನ್ನು ಮನಸ್ಸಿನಲ್ಲಿಟ್ಟುಕೊಂಡ ಶಶಿ, ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.
ಸಂಚಿನ ಭಾಗವಾಗಿ ಇನ್‌ಸ್ಟಾಗ್ರಾಂ ಮೂಲಕ ಹನಿಟ್ರ್ಯಾಪ್‌ಗೆ ಸರ್ವೇಶನನ್ನು ಸೆಳೆದು, ಬಳಿಕ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಮಾರ್ಗದರ್ಶನದಲ್ಲಿ ಮಾಳಮಾರುತಿ ಸಿಪಿಐ ಬಿ.ಆರ್.
ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸರ್ವೇಶನನ್ನು ಹನಿಟ್ರ್ಯಾಪ್‌ಗೆ ಸೆಳೆದಿದ್ದ ಯುವತಿ ಯಾರು? ಆಕೆಯ ಪಾತ್ರವೇನು? ಪ್ರಕರಣದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.
ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸರ್ವೇಶನ ಕೊಲೆ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಪ್ರಕರಣದ ಉಳಿದ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ತಿಳಿಸಿದ್ದಾರೆ.



