ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹಾಲಿ ಮುಖ್ಯಮಂತ್ರಿಗಳು 600 ಕೋಟಿ ರೂ. ಬೃಹತ್ ಸುಫಾರಿ ಡೀಲ್ ನೀಡಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಂಡು ಹಾಲಿ ಮುಖ್ಯಮಂತ್ರಿ ಒಂದರ ಮೇಲೊಂದರಂತೆ ಅನೇಕ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಈ 600 ಕೋಟಿ ರೂ. ಡೀಲ್ ಸಹ ಅದರದ್ದೇ ಒಂದು ಭಾಗವಾಗಿದೆ” ಎಂದು ಆರೋಪಿಸಿದ್ದಾರೆ.
ಇನ್ನು, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯ ಶೈಲಿಯನ್ನು ತೀವ್ರವಾಗಿ ಖಂಡಿಸಿದ ಕುಮಾರಸ್ವಾಮಿ, “ಸ್ಟಿಂಗ್ ಆಪರೇಷನ್ ನಡೆಸಿದ ಅಸಲಿ ಪಾತಕಿಗಳಿಗೆ ಮುಂಜಾಗ್ರತೆಯಾಗಿ ನಿರೀಕ್ಷಣಾ ಜಾಮೀನು ಸಿಗುವಂತೆ ಸರ್ಕಾರ ಸಹಾಯ ಮಾಡುತ್ತಿದೆ. ಈ ಕೃತ್ಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದ ನಿರಪರಾಧಿಗಳನ್ನು ಕರೆದು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ” ಎಂದು ದೂರಿದ್ದಾರೆ.
ತಮ್ಮ ಪಕ್ಷದ ಯುವಕರು ಮತ್ತು ಕಾರ್ಯಕರ್ತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದ ಕುಮಾರಸ್ವಾಮಿ, “ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಿ, ಅವರು ಕೇಳಿದ ಉಪಕರಣಗಳು ಹಾಗೂ ವಿವರಗಳನ್ನು ಒದಗಿಸಿ” ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.




