- ವಿದ್ಯಾರ್ಥಿ ಹಾಗೂ ಪೋಷಕರ ಕೌನ್ಸೆಲಿಂಗ್ ನಡೆಸಲಾಗಿದೆ : ಮುಝಾಫರ್ ನಗರ ಜಿಲ್ಲಾಧಿಕಾರಿ
- ವಿಕಲ ಚೇತನೆಯಾದ್ದರಿಂದ ವಿದ್ಯಾರ್ಥಿಗಳ ಬಳಿ ಹೊಡೆಸಿದ್ದೆ : ವೈರಲ್ ವಿಡಿಯೋ ಬಳಿಕ ಶಿಕ್ಷಕಿ ಹೇಳಿಕೆ
ಮುಸ್ಲಿಂ ವಿದ್ಯಾರ್ಥಿಯೋರ್ವನ ಕಪಾಳಕ್ಕೆ ಬಾರಿಸುವಂತೆ ಇತರೆ ವಿದ್ಯಾರ್ಥಿಗಳಿಗೆ ಸೂಚಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಉತ್ತರ ಪ್ರದೇಶದ ಮುಝಾಫರ್ ನಗರದಲ್ಲಿರುವ ನೇಹಾ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ಬಳಿಕ ದೇಶಾದ್ಯಂತ ಸುದ್ದಿಯಾಗಿತ್ತು.
ವಿದ್ಯಾರ್ಥಿಯ ಪೋಷಕರ ದೂರಿನ ಮೇರೆಗೆ ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಇಂದು ಬೆಳಗ್ಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಮುಝಾಫರ್ ನಗರ ಜಿಲ್ಲಾಧಿಕಾರಿ ಅರವಿಂದ್ ಮಲ್ಲಪ್ಪ ಬಂಗಾರಿ ಹೇಳಿಕೆ ನೀಡಿದ್ದಾರೆ.
‘ಘಟನೆಯ ವಿಡಿಯೋ ವೈರಲಾಗುವುದಕ್ಕಿಂತ ಮುಂಚೆ ವಿದ್ಯಾರ್ಥಿಯ ಪೋಷಕರು ದೂರು ನೀಡಲು ಆಸಕ್ತಿ ತೋರಿರಲಿಲ್ಲ. ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ಬಳಿಕ ಶನಿವಾರ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಎಫ್‌ಐಆರ್ ದಾಖಲಾಗಿದೆ. ಜಿಲ್ಲೆಯ ಬಾಲ ಕಲ್ಯಾಣ ಸಮಿತಿಯವರು ವಿದ್ಯಾರ್ಥಿ ಹಾಗೂ ಪೋಷಕರ ಕೌನ್ಸೆಲಿಂಗ್ ನಡೆಸಿದ್ದಾರೆ. ಬಾಲ ನ್ಯಾಯ ಕಾಯ್ದೆಯ ಅನ್ವಯ ವಿದ್ಯಾರ್ಥಿಯ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ. ಪ್ರಕರಣ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಅರವಿಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಹೇಳಿಕೆ ನೀಡಿರುವ ಶಿಕ್ಷಕಿ ತೃಪ್ತ ತ್ಯಾಗಿ, ‘ತಾನು ವಿಕಲ ಚೇತನೆಯಾದ್ದರಿಂದ ವಿದ್ಯಾರ್ಥಿಗಳ ಬಳಿ ಹೊಡೆಸಿದ್ದೆ. ವಿಡಿಯೋವನ್ನು ತಪ್ಪಾಗಿ ಪ್ರಚಾರಗೈಯ್ಯಲಾಗಿದೆ. ಓದಲು ಆಸಕ್ತಿ ತೋರದಿದ್ದ ಹಿನ್ನೆಲೆಯಲ್ಲಿ ಪೋಷಕರು ದೂರುತ್ತಿದ್ದರು’ ಎಂದು ತಿಳಿಸಿದ್ದಾರೆ.
ಈ ಘಟನೆಯು ಸೋಷಿಯಲ್ ಮೀಡಿಯಾಗಳ ಮೂಲಕ ವೈರಲ್ ಆಗಿರುವುದರಿಂದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು(ಎನ್‌ಸಿಪಿಸಿಆರ್) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ, ಘಟನೆಯ ಸಂಬಂಧ ಹರಿದಾಡುತ್ತಿರುವ ವಿಡಿಯೋ ಹಂಚಿಕೊಳ್ಳಬಾರದು. ಇದು ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಆದೇಶ ಹೊರಡಿಸಿದೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿದ್ಯಾರ್ಥಿಯ ಪೋಷಕರು, ‘ಶಾಲೆಯು ತನ್ನ ಮಗನ ಎಲ್ಲ ಪ್ರವೇಶ ಶುಲ್ಕವನ್ನು ಮರುಪಾವತಿಸಿದೆ. ಮಗ ಇನ್ನು ಮುಂದೆ ಆ ಶಾಲೆಯಲ್ಲಿ ಓದುವುದಿಲ್ಲ. ಬೇರೆ ಶಾಲೆಯಲ್ಲಿ ಓದಿಸುವಂತೆ ಜಿಲ್ಲಾಡಳಿತವು ಸೂಚಿಸಿದೆ. ಘಟನೆಯಿಂದ ಮಗ ತುಂಬಾ ನೊಂದುಕೊಂಡಿದ್ದಾನೆ. ಶಿಕ್ಷಕಿಯು ವಿದ್ಯಾರ್ಥಿಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಬಯಸಿದ್ದರು’ ಎಂದು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಝಾಫರ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್, ‘ಮುಸ್ಲಿಂ ವಿದ್ಯಾರ್ಥಿಯ ಜೊತೆಗೆ ನಡೆದ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ಆ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಬಾಲಕನಿಗೆ ವಿದ್ಯಾರ್ಥಿಗಳಿಂದ ಹೊಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನೆಟ್ಟಿಗರು ಖಂಡಿಸಿದ್ದರು. ಶಿಕ್ಷಕಿ ತೃಪ್ತ ತ್ಯಾಗಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಬಂಧಿಸುವಂತೆ ಒತ್ತಾಯಿಸಿದ್ದರು.