ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಬೆಳಕಿನ ಅಧ್ಯಾಯ
ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾರ್ಥಿ–ಯುವಜನರ ಪ್ರತಿಭಟನೆಗಳು ಭಾರತದ ಸಮಕಾಲೀನ ರಾಜಕೀಯದಲ್ಲಿ ಗಮನಾರ್ಹ ಬೆಳವಣಿಗೆಯಾಗಿ ಹೊರಹೊಮ್ಮಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳು, ಚುನಾವಣಾ ಆಯೋಗದ ನಿಷ್ಪಕ್ಷಪಾತದ ಕುರಿತ ಪ್ರಶ್ನೆಗಳು ಹಾಗೂ ಪ್ರತಿಭಟನೆಯ ಹಕ್ಕಿನ ಮೇಲಿನ ನಿರ್ಬಂಧಗಳು ಈ ಆಂದೋಲನದ ಕೇಂದ್ರ ವಿಷಯಗಳಾಗಿವೆ. ಈ ಬೆಳವಣಿಗೆಯ ವಿಶೇಷತೆ ಎಂದರೆ ವಿದ್ಯಾರ್ಥಿಗಳು ಕೇವಲ ಶಿಕ್ಷಣ, ಶುಲ್ಕ, ಪರೀಕ್ಷೆ ಅಥವಾ ಉದ್ಯೋಗದ ಪ್ರಶ್ನೆಗಳಿಗಾಗಿ ಬೀದಿಗಿಳಿದಿಲ್ಲ. ಬದಲಾಗಿ, ಮತದಾನದ ಹಕ್ಕು, ಸಾಂವಿಧಾನಿಕ ಸಂಸ್ಥೆಗಳ ಹೊಣೆಗಾರಿಕೆ, ಸಾರ್ವಜನಿಕ ಪ್ರತಿಭಟನೆಯ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭವಿಷ್ಯದ ಪ್ರಶ್ನೆಗಳನ್ನು ತಮ್ಮ ರಾಜಕೀಯ ಹೋರಾಟದ ಕೇಂದ್ರಕ್ಕೆ ತಂದಿದ್ದಾರೆ.
ದೆಹಲಿಯ ಯುವಜನರು ತಮ್ಮ ಭವಿಷ್ಯದ ಕುರಿತ ಪ್ರಶ್ನೆಗಳನ್ನು ಚುನಾವಣಾ ಹಕ್ಕು ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ಕುರಿತ ಪ್ರಶ್ನೆಗಳೊಂದಿಗೆ ಜೋಡಿಸಿದ್ದಾರೆ.
ದೇಶದಲ್ಲಿ ವಿದ್ಯಾರ್ಥಿ ಚಳವಳಿಗಳು ಬಹಳಷ್ಟು ಬಾರಿ ತಮ್ಮ ಸಂಘಟನೆಗಳ ಸೈದ್ಧಾಂತಿಕ ಬೇಲಿಗಳನ್ನು ಹಾಕಿಕೊಂಡಿವೆ. ಇತ್ತೀಚಿನ ದೆಹಲಿ ಆಂದೋಲನ ನಿರ್ದಿಷ್ಟ ಜನತಾಂತ್ರಿಕ ಬೇಡಿಕೆಗಳ ಸುತ್ತ ಆ ಗಡಿಗಳನ್ನು ಭಾಗಶಃ ಮೀರುವ ಪ್ರಯತ್ನವಾಗಿ ಕಾಣುತ್ತದೆ.
ಆದರೆ ಈ ಒಗ್ಗಟ್ಟು ಎಷ್ಟು ಕಾಲ ಉಳಿಯುತ್ತದೆ? ಅದು ಚುನಾವಣಾ ಹಕ್ಕಿನ ಪ್ರಶ್ನೆಯಾಚೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ನ್ಯಾಯದ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಬಹುದೇ? ಇವು ಇನ್ನೂ ಉತ್ತರ ಸಿಗಬೇಕಿರುವ ಪ್ರಶ್ನೆಗಳು.
ಕಾಲೇಜಿನ ಊಟದ ಶುಲ್ಕ ಏರಿಕೆ ವಿರುದ್ಧ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ಇಡೀ ರಾಜ್ಯದ ಸರ್ಕಾರವನ್ನೇ ಉರುಳಿಸಿತು. ಅಷ್ಟೇ ಅಲ್ಲ, ದೇಶವ್ಯಾಪಿ ರಾಜಕೀಯ ಬದಲಾವಣೆಗೆ ನಾಂದಿ ಹಾಡಿತು. ಇದು 1973–74ರಲ್ಲಿ ಗುಜರಾತ್‌ನಲ್ಲಿ ನಡೆದ ಐತಿಹಾಸಿಕ ‘ನವನಿರ್ಮಾಣ ಚಳವಳಿ’ಯ ಕಥೆ.
ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು, ಜನಸಾಮಾನ್ಯರನ್ನು ಒಗ್ಗೂಡಿಸಿದರು. ಅವರ ಹೋರಾಟ ಅಂದಿನ ಮುಖ್ಯಮಂತ್ರಿ ಚಿಮನ್‌ಭಾಯ್ ಪಟೇಲ್ ಅವರ ರಾಜೀನಾಮೆಗೆ ಕಾರಣವಾಯಿತು. ಮುಂದೆ ಜಯಪ್ರಕಾಶ್ ನಾರಾಯಣ್ ನೇತೃತ್ವದ ಬಿಹಾರದ ‘ಸಂಪೂರ್ಣ ಕ್ರಾಂತಿ’ಗೂ ಸ್ಫೂರ್ತಿಯಾಯಿತು.
ಕಾಲೇಜೊಂದರಿಂದ ಹೊತ್ತಿದ ಕಿಡಿ
1973ರ ಅಂತ್ಯದಲ್ಲಿ ಗುಜರಾತ್ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಬರಗಾಲ, ಆಹಾರ ಧಾನ್ಯಗಳ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ಕಂಗೆಡಿಸಿದ್ದವು. ಅಡುಗೆ ಎಣ್ಣೆ, ಧಾನ್ಯಗಳ ಬೆಲೆ ಗಗನಕ್ಕೇರಿತ್ತು. ಕಾಳಸಂತೆ ಮತ್ತು ಭ್ರಷ್ಟಾಚಾರದ ಆರೋಪಗಳು ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚಿಸಿದ್ದವು.
ಇಂತಹ ಸಂದರ್ಭದಲ್ಲಿ ಅಹಮದಾಬಾದ್‌ನ ಎಲ್.ಡಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ ಊಟದ ಶುಲ್ಕ ಏರಿಕೆಯನ್ನು ವಿರೋಧಿಸಿದರು. 1973ರ ಡಿಸೆಂಬರ್‌ನಲ್ಲಿ ಆರಂಭವಾದ ಅಸಮಾಧಾನ 1974ರ ಜನವರಿಯಲ್ಲಿ ತೀವ್ರ ಪ್ರತಿಭಟನೆಯಾಗಿ ಮಾರ್ಪಟ್ಟಿತು.
ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲು ಪೊಲೀಸರು ಕಾಲೇಜಿನೊಳಗೆ ಪ್ರವೇಶಿಸಿದರು. ಲಾಠಿ ಪ್ರಹಾರ ನಡೆಸಿ, ವಿದ್ಯಾರ್ಥಿಗಳನ್ನು ಬಂಧಿಸಿದರು. ಈ ಕ್ರಮ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು.
ಶೀಘ್ರದಲ್ಲೇ ಪ್ರತಿಭಟನೆ ಅಹಮದಾಬಾದ್‌ನ ಇತರ ಕಾಲೇಜುಗಳಿಗೂ ವ್ಯಾಪಿಸಿತು. ಜನವರಿ 11ರಂದು ವಿದ್ಯಾರ್ಥಿಗಳು ‘ನವನಿರ್ಮಾಣ ಯುವಜನ ಸಮಿತಿ’ ರಚಿಸಿದರು. ಹೋರಾಟಕ್ಕೆ ಸಂಘಟಿತ ಸ್ವರೂಪ ನೀಡಿದರು.
ವಿದ್ಯಾರ್ಥಿಗಳ ಹೋರಾಟ ಜನಾಂದೋಲನ ಆಗಿದ್ದು ಹೇಗೆ?
ಆರಂಭದಲ್ಲಿ ವಿದ್ಯಾರ್ಥಿಗಳ ಬೇಡಿಕೆ ಊಟದ ಶುಲ್ಕ ಕಡಿತಕ್ಕೆ ಸೀಮಿತವಾಗಿತ್ತು. ಆದರೆ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನಸಾಮಾನ್ಯರು ಪ್ರತಿಭಟನೆಗೆ ಕೈಜೋಡಿಸಿದರು. ವ್ಯಾಪಾರಿಗಳು, ಕಾರ್ಮಿಕರು, ಸರ್ಕಾರಿ ನೌಕರರು, ವಕೀಲರು ಮತ್ತು ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದವು.
1974ರ ಜನವರಿ 10ರಂದು ನಡೆದ ಬಂದ್ ಗುಜರಾತ್‌ನ ರಾಜಕೀಯ ವಾತಾವರಣವನ್ನೇ ಬದಲಿಸಿತು. ನಂತರ ಪ್ರತಿಭಟನೆ ವಡೋದರಾ, ಸೂರತ್, ರಾಜ್‌ಕೋಟ್ ಸೇರಿದಂತೆ ವಿವಿಧ ನಗರಗಳಿಗೆ ವ್ಯಾಪಿಸಿತು. ಊಟದ ಶುಲ್ಕದ ವಿರುದ್ಧ ಆರಂಭವಾದ ಹೋರಾಟ, ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧದ ಜನಾಂದೋಲನವಾಗಿ ಬದಲಾಯಿತು.
ಪ್ರತಿಭಟನೆ ಹಲವು ಕಡೆ ಹಿಂಸಾಚಾರಕ್ಕೂ ತಿರುಗಿತು. ಪೊಲೀಸ್ ಗೋಲಿಬಾರ್, ಲಾಠಿ ಪ್ರಹಾರ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮತ್ತು ಸಾವು-ನೋವುಗಳು ಸಂಭವಿಸಿದವು. ಇದು ಚಳವಳಿಯ ಮತ್ತೊಂದು ಕರಾಳ ಮುಖವಾಗಿತ್ತು.
ಮುಖ್ಯಮಂತ್ರಿ ರಾಜೀನಾಮೆ, ವಿಧಾನಸಭೆ ವಿಸರ್ಜನೆ
ಹೋರಾಟ ತೀವ್ರಗೊಂಡಂತೆ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಚಿಮನ್‌ಭಾಯ್ ಪಟೇಲ್ ರಾಜೀನಾಮೆಗೆ ಒತ್ತಾಯ ಹೆಚ್ಚಾಯಿತು.ವಿದ್ಯಾರ್ಥಿಗಳ ಒತ್ತಡ, ಜನರ ಆಕ್ರೋಶ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ 1974ರ ಫೆಬ್ರವರಿ 9ರಂದು ಚಿಮನ್‌ಭಾಯಿ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಆಡಳಿತ ಜಾರಿಯಾಯಿತು.ಆದರೆ ವಿದ್ಯಾರ್ಥಿಗಳು ಹೋರಾಟ ನಿಲ್ಲಿಸಲಿಲ್ಲ. ವಿಧಾನಸಭೆಯನ್ನೇ ವಿಸರ್ಜಿಸಬೇಕೆಂದು ಪಟ್ಟುಹಿಡಿದರು.
ಹಿರಿಯ ವಿರೋಧ ಪಕ್ಷದ ನಾಯಕ ಮೊರಾರ್ಜಿ ದೇಸಾಯಿ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದರು. ಶಾಸಕರ ರಾಜೀನಾಮೆಗಳು ಹೆಚ್ಚಾದವು. ಅಂತಿಮವಾಗಿ ಮಾರ್ಚ್ 15ರಂದು ವಿಧಾನಸಭೆ ವಿಸರ್ಜಿಸಲಾಯಿತು. 1975ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತು. ವಿದ್ಯಾರ್ಥಿಗಳ ಹೋರಾಟ ರಾಜ್ಯದ ಅಧಿಕಾರ ಸಮೀಕರಣವನ್ನೇ ಬದಲಿಸಿತ್ತು.
ಬಿಹಾರದಲ್ಲಿ ಭುಗಿಲೆದ್ದ ‘ಸಂಪೂರ್ಣ ಕ್ರಾಂತಿ’
ಗುಜರಾತ್ ಚಳವಳಿಯ ಯಶಸ್ಸು ಬಿಹಾರದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಯಿತು. 1974ರ ಮಾರ್ಚ್‌ನಲ್ಲಿ ಬಿಹಾರದ ವಿದ್ಯಾರ್ಥಿಗಳು ಬೆಲೆ ಏರಿಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ನಾಯಕತ್ವ ವಹಿಸುವಂತೆ ಆಹ್ವಾನಿಸಿದರು. ಅಹಿಂಸಾತ್ಮಕ ಹೋರಾಟವಾಗಿರಬೇಕು ಮತ್ತು ಬಿಹಾರಕ್ಕೆ ಸೀಮಿತವಾಗಬಾರದು ಎಂಬ ಷರತ್ತಿನೊಂದಿಗೆ ಜೆಪಿ ಒಪ್ಪಿಕೊಂಡರು. ಮುಂದೆ ಈ ಹೋರಾಟ ‘ಸಂಪೂರ್ಣ ಕ್ರಾಂತಿ’ಯಾಗಿ ರೂಪುಗೊಂಡಿತು. ಕೇವಲ ಸರ್ಕಾರ ಬದಲಿಸುವುದಲ್ಲ; ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನೇ ಪರಿವರ್ತಿಸುವುದು ಅದರ ಗುರಿಯಾಗಿತ್ತು.
ಚಳವಳಿಯ ಯಶಸ್ಸು ಮತ್ತು ಅದರ ಮಿತಿಗಳು
ಗುಜರಾತ್‌ನ ನವನಿರ್ಮಾಣ ಚಳವಳಿ ಎರಡು ಪ್ರಮುಖ ಸತ್ಯಗಳನ್ನು ಸಾಬೀತುಪಡಿಸಿತು. ಜನತೆಯ ಅಸಮಾಧಾನಕ್ಕೆ ಸಂಘಟಿತ ರೂಪ ನೀಡಿದರೆ ಸರ್ಕಾರವನ್ನು ಕೆಳಗಿಳಿಸಬಹುದು. ವಿದ್ಯಾರ್ಥಿ ಚಳವಳಿಗಳು ಕೇವಲ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳಿಗೆ ಸೀಮಿತವಾಗಬೇಕಿಲ್ಲ. ಅವು ದೇಶದ ರಾಜಕೀಯ ದಿಕ್ಕನ್ನೇ ಬದಲಿಸಬಲ್ಲವು ಎಂಬ ಸತ್ಯ ಸಾಬೀತಾಯಿತು. ಅಂದು ಈ ವಿದ್ಯಾರ್ಥಿ-ಜನಾಂದೋಲನಗಳನ್ನು ಬೆಂಬಲಿಸಿದ ಆರೆಸ್ಸೆಸ್- ಜನಸಂಘ- ಸಂಘಪರಿವಾರ ಕಳೆದ ಹನ್ನೆರಡು ವರ್ಷಗಳಿಂದ ವಿದ್ಯಾರ್ಥಿಗಳು ರಾಜಕಾರಣದಲ್ಲಿ ತೊಡಗಬಾರದೆಂದು ತುತ್ತೂರಿ ಊದುತ್ತ ಬಂದಿವೆ.
ಇದನ್ನೂ ಓದಿ ಅಡ್ಡಂಡ ಕಾರ್ಯಪ್ಪನವರ ನಾಟಕದ ವಿವಾದ: ಗೋಡ್ಸೆ ವೈಭವೀಕರಣದ ಹಿಂದೆ ಮನುವಾದಿ ರಾಜಕೀಯದ ನೆರಳು
ಗುಜರಾತ್‌ನಿಂದ ಬಿಹಾರಕ್ಕೆ ವ್ಯಾಪಿಸಿದ ಜನಾಂದೋಲನಗಳು ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ದೇಶವ್ಯಾಪಿ ವಿರೋಧಕ್ಕೆ ಬಲ ನೀಡಿದವು. 1975ರ ತುರ್ತು ಪರಿಸ್ಥಿತಿಗೆ ಮುನ್ನದ ರಾಜಕೀಯ ಬಿಕ್ಕಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದವು.
ಒಂದು ಕಾಲೇಜಿನ ಊಟದ ಶುಲ್ಕದ ಪ್ರಶ್ನೆ ದೇಶದ ಪ್ರಜಾಪ್ರಭುತ್ವದ ಭವಿಷ್ಯದ ಪ್ರಶ್ನೆಯಾಗಿ ಬೆಳೆದದ್ದು ನವನಿರ್ಮಾಣ ಚಳವಳಿಯ ಐತಿಹಾಸಿಕ ಮಹತ್ವ. ಗುಜರಾತ್ ವಿದ್ಯಾರ್ಥಿಗಳು ಹೊತ್ತಿಸಿದ ಹೋರಾಟದ ಕಿಡಿ, ಬಿಹಾರದ ‘ಸಂಪೂರ್ಣ ಕ್ರಾಂತಿ’ ಮೂಲಕ ರಾಷ್ಟ್ರ ರಾಜಕಾರಣವನ್ನೇ ವ್ಯಾಪಿಸಿತು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ವಿದ್ಯಾರ್ಥಿ ಶಕ್ತಿಯ ಸಾಮರ್ಥ್ಯ ಮತ್ತು ಜನಾಂದೋಲನಗಳ ಸಂಕೀರ್ಣತೆಯನ್ನು ನೆನಪಿಸುವ ಅಧ್ಯಾಯವಾಗಿ ಉಳಿಯಿತು

ಡಿ ಉಮಾಪತಿ
ʼಈ ದಿನ.ಕಾಮ್ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.




