ಹೈದರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ 3ರಂದು ಸರ್ಕಾರಿ ಮಟ್ಟದಲ್ಲಿ ಜಯಂತಿ ಆಚರಿಸುವುದು ಹಾಗೂ ಅವರ ಜನ್ಮ ಸ್ಮಾರಕ ವೀರಸೌಧವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ ಹಾಗೂ ಅಧಿಕಾರಿಗಳು ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಸಂಘ-ಸಂಸ್ಥೆಗಳ ಒಕ್ಕೂಟದ ಮುಖಂಡ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, “ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಸ್ವಾಮಿ ರಾಮಾನಂದ ತೀರ್ಥರ ಕೊಡುಗೆ ಮಹತ್ವದ್ದಾಗಿದೆ. ಅವರ ಜನ್ಮದಿನವಾದ ಅಕ್ಟೋಬರ್ 3ರೊಳಗೆ ವೀರಸೌಧವನ್ನು ಅಭಿವೃದ್ಧಿಪಡಿಸಿ, ಸರ್ಕಾರದಿಂದಲೇ ಜಯಂತಿ ಆಚರಿಸುವ ಮೂಲಕ ಸ್ವಾಮಿ ರಾಮಾನಂದ ತೀರ್ಥರಿಗೆ ಗೌರವ ಸಲ್ಲಿಸಬೇಕು” ಎಂದು ಒತ್ತಾಯಿಸಿದರು.
ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವನ್ನು ಸರ್ಕಾರಿ ಜಯಂತಿಯಾಗಿ ಆಚರಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಸಂಘ-ಸಂಸ್ಥೆಗಳ ಒಕ್ಕೂಟದ ಮುಖಂಡರು ಹಾಗೂ ಹೋರಾಟಗಾರರಾದ ವಿನೋದ ಖೇಡ, ಲಾಯಪ್ಪ ಇಂಗಳೆ, ಅನಿಲ ಇಕ್ಕಡೆ, ಎನ್. ಸುರೇಶಕುಮಾರ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಬಿ ಪಾಟೀಲ, ಜಿಲ್ಲಾಧಿಕಾರಿ ಡಾ. ಆನಂದ ಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಇದೇ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17ರಂದು ವಿಜಯಪುರ ಜಿಲ್ಲಾ 371ಜೆ ಹೋರಾಟ ಸಮಿತಿಯಿಂದ ವೀರಸೌಧದಲ್ಲಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಹುನಗುಂದ–ಇಳಕಲ್ಗೆ ನೀರಾವರಿ ಪಂಪ್ಸೆಟ್ಗಳಿಗೂ ಸೇರಿ ನಿರಂತರ ಗುಣಮಟ್ಟದ ವಿದ್ಯುತ್: ವಿಜಯಾನಂದ ಕಾಶಪ್ಪನವರ
ವೀರಸೌಧ ವೀಕ್ಷಣೆ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ ಮಾತನಾಡಿ, “ಸರ್ಕಾರದಿಂದ ಸ್ವಾಮಿ ರಾಮಾನಂದ ತೀರ್ಥರ ಜಯಂತಿ ಆಚರಣೆ ಹಾಗೂ ವೀರಸೌಧದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ರವಿ ಶಿರಗುಪ್ಪಿ, ಸ್ವಾಮಿ ರಾಮಾನಂದ ತೀರ್ಥರ ವಂಶಸ್ಥರಾದ ರಂಗರಾವ ಖೇಡಗಿಕರ, ಅಶೋಕ ಅಲ್ಲಾಪುರ, ಪ್ರದೀಪ ದೇಶಪಾಂಡೆ, ಶಂಕರ ಕಡಗೂಡ, ಪ್ರಕಾಶ ಹಿರೇಕುರಬರ, ರಂಗನಾಥ ತೋರ್ಪೆ ಸೇರಿದಂತೆ ನಗರಸಭೆ ಹಾಗೂ ಸ್ಥಳೀಯ ಅಧಿಕಾರಿಗಳು ಇದ್ದರು.




