ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಡಿಜಿಟಲೀಕರಣದ ಬಳಿಕ ಹೆಸರು, ವಯಸ್ಸು ಹಾಗೂ ವಿಳಾಸದಲ್ಲಿ ಕಂಡುಬಂದಿರುವ ಅನುಮಾನಗಳನ್ನು ಪರಿಶೀಲಿಸುವ ಕಾರ್ಯ ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಚುರುಕುಗೊಂಡಿದೆ. ಅನುಮಾನಾಸ್ಪದವಾಗಿ ಗುರುತಿಸಲ್ಪಟ್ಟ ಮತದಾರರಿಗೆ ನೋಟಿಸ್ ಜಾರಿಗೊಳಿಸಿ, ಸೂಕ್ತ ದಾಖಲೆಗಳ ಆಧಾರದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮತದಾರರ ನೋಂದಣಾಧಿಕಾರಿ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಹಶೀಲ್ದಾರ್ ಕಚೇರಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ನಿಗದಿಪಡಿಸಿದ ಸ್ಥಳಗಳಲ್ಲಿ ಈಗಾಗಲೇ ವಿಚಾರಣೆ ಆರಂಭಿಸಲಾಗಿದೆ. ಮೊದಲ ಹಂತದ ವಿಚಾರಣೆಯಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿ ಅರ್ಹತೆ ದೃಢಪಟ್ಟಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಲಾಗುವುದು ಎಂದರು.
ಮೊದಲ ವಿಚಾರಣೆಯ ನಂತರವೂ ಅಗತ್ಯ ದಾಖಲೆಗಳನ್ನು ಸಲ್ಲಿಸದ ಅಥವಾ ಪರಿಶೀಲನೆ ಅಗತ್ಯವಿರುವ ಮತದಾರರಿಗೆ ಎರಡನೇ ನೋಟಿಸ್ ನೀಡಿ ಮತ್ತೊಮ್ಮೆ ವಿಚಾರಣೆ ನಡೆಸಲಾಗುವುದು. ಅರ್ಹತೆ ದೃಢಪಟ್ಟ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾಹಿತಿ ನೀಡಿದ್ದು, ಎಸ್ಐಆರ್ ಡಿಜಿಟಲೀಕರಣದ ಬಳಿಕ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ, ಪೂರ್ವಜರ ಹೆಸರು ಕೂಡ ದಾಖಲಾಗದವರು ಮತ್ತು ಹೆಸರು, ವಯಸ್ಸು ಮತ್ತು ವಿಳಾಸದ ಕುರಿತು ಅನುಮಾನವಿರುವ ಮತದಾರರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಹುನಗುಂದ ತಾಲ್ಲೂಕಿನಲ್ಲಿ 356 ಹಾಗೂ ಇಳಕಲ್ ತಾಲ್ಲೂಕಿನಲ್ಲಿ 7,166 ಸೇರಿ ಒಟ್ಟು 7,522 ಮತದಾರರು ಈ ಪರಿಶೀಲನಾ ವ್ಯಾಪ್ತಿಯಲ್ಲಿದ್ದಾರೆ. ಹುನಗುಂದದಲ್ಲಿ 355 ಹಾಗೂ ಇಳಕಲ್ನಲ್ಲಿ 6,373 ಮಂದಿ ಸೇರಿದಂತೆ ಒಟ್ಟು 6,728 ಮತದಾರರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನೂ 794 ಮಂದಿಗೆ ನೋಟಿಸ್ ನೀಡುವುದು ಬಾಕಿ ಇದೆ ಎಂದು ತಿಳಿಸಿದರು.
ಈವರೆಗೆ ಹುನಗುಂದ ತಾಲ್ಲೂಕಿನ 304 ಹಾಗೂ ಇಳಕಲ್ ತಾಲ್ಲೂಕಿನ 631 ಸೇರಿ ಒಟ್ಟು 935 ಮತದಾರರ ವಿಚಾರಣೆ ಪೂರ್ಣಗೊಂಡಿದೆ. ಸೂಕ್ತ ದಾಖಲೆ ಸಲ್ಲಿಸಿದ 588 ಮಂದಿಯನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ದಾಖಲೆಗಳು ಸಮರ್ಪಕವಾಗಿಲ್ಲದ 346 ಪ್ರಕರಣಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಜಿಲ್ಲಾ ಚುನಾವಣಾಧಿಕಾರಿಗೆ ಕಳುಹಿಸಲಾಗಿದ್ದು, ಇನ್ನೂ 6,587 ಮತದಾರರ ವಿಚಾರಣೆ ಬಾಕಿ ಇದೆ ಎಂದು ತಹಶೀಲ್ದಾರ್ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಉಪಸ್ಥಿತರಿದ್ದರು. ದಾಖಲೆ ಆಧಾರಿತ ಪರಿಶೀಲನೆಗೆ ಒತ್ತು ನೀಡಲಾಗಿದ್ದು, ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಿಂದ ಹೊರಗುಳಿಯದಂತೆ ವಿಚಾರಣೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.




