“ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶ ತನ್ನ ಹಾದಿಯನ್ನು ಕಳೆದುಕೊಂಡಿದೆ ಎಂದು ನನಗೆ ಅನಿಸುತ್ತದೆ. ಆದರೆ ಇತಿಹಾಸ ಗಮನಿಸಿದರೆ, ದೇಶ ಹಾದಿ ತಪ್ಪಿದಾಗಲೆಲ್ಲ ಮತ್ತೆ ತನ್ನ ಸರಿ ದಾರಿಗೆ ಮರಳಿದೆ. ಆ ಶಕ್ತಿ ಭಾರತಕ್ಕಿದೆ. ನಾವು ತಪ್ಪುಗಳನ್ನು ಮಾಡುತ್ತೇವೆ, ಅವುಗಳಿಂದ ಪಾಠ ಕಲಿಯುತ್ತೇವೆ. ಅದು ದೇಶದ ಬೆಳವಣಿಗೆಯಲ್ಲೂ ಪ್ರತಿಫಲಿಸಿದೆ” ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಶಿ ಹೇಳಿದ್ದಾರೆ.
‘ದಿ ಹಿಂದೂ’ಗೆ ನೀಡಿದ ಸಂದರ್ಶನದಲ್ಲಿ ರಾಮಮಂದಿರದ ದೇಣಿಗೆ ಅವ್ಯವಹಾರದ ಆರೋಪಗಳಿಂದ ಹಿಡಿದು ಬದರಿನಾಥ್‌ನಲ್ಲಿ ಸಂಗೀತ ಕಾರ್ಯಕ್ರಮ, ಹಿಮಾಲಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು, SIR ಹಾಗೂ ಜಂತರ್ ಮಂತರ್‌ನಲ್ಲಿ ನಡೆದ ಯುವಜನರ ಪ್ರತಿಭಟನೆ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ಮಾತನಾಡಿದ್ದಾರೆ. ದೇಶದ ಆಡಳಿತ, ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ, ಪರಿಸರ ಸಂರಕ್ಷಣೆ, ಬಿಜೆಪಿ ಬದಲಾಗಿರುವ ಸ್ವರೂಪ ಹಾಗೂ ಯುವಜನರ ಅಸಮಾಧಾನದ ಕುರಿತು ಹಲವು ಮಹತ್ವದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ರಾಮಮಂದಿರ ಟ್ರಸ್ಟ್‌ನ ಹೊಣೆ ಸರ್ಕಾರದ್ದು
ದೇಶದಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದ್ದು, ಅದು ಸಮಾಜದ ಒಳಭಾಗದವರೆಗೂ ತಲುಪಿದೆ. ರಾಮಮಂದಿರ ನಿರ್ಮಾಣದ ಆಂದೋಲನಕ್ಕೆ ಬಿಜೆಪಿ ಬೆಂಬಲ ನೀಡಿತ್ತು. ರಾಮಮಂದಿರವನ್ನು ನ್ಯಾಯಾಲಯದ ಮೂಲಕವಲ್ಲ, ಪರಸ್ಪರ ಒಮ್ಮತದ ಮೂಲಕ ನಿರ್ಮಿಸಬೇಕು ಎಂಬುದು ತಮ್ಮ ನಿಲುವಾಗಿತ್ತು. ಆದರೆ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಯಿತು. ಹಲವು ವರ್ಷಗಳ ವಿಚಾರಣೆಯ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ಭೂಮಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸುವಂತೆ ನ್ಯಾಯಾಲಯ ಸೂಚಿಸಿತು. “ಟ್ರಸ್ಟ್ ಅನ್ನು ಯಾರು ರಚಿಸುತ್ತಾರೆ? ಸರ್ಕಾರವೇ. ಹೀಗಾಗಿ ಟ್ರಸ್ಟ್‌ನಲ್ಲಿ ಏನೇ ನಡೆಯುತ್ತಿದ್ದರೂ ಅದರ ಹೊಣೆ ಸರ್ಕಾರದ್ದೇ ಆಗಿದೆ ಎಂದು ಜೋಶಿ ಹೇಳಿದ್ದಾರೆ.
‘ಬದರಿನಾಥ್ ಸಾಮಾನ್ಯ ಸ್ಥಳವಲ್ಲ’
ಉತ್ತರಾಖಂಡದ ಬದರಿನಾಥ್ ದೇಗುಲದ ಸಮೀಪ ಸಂಗೀತ ಕಾರ್ಯಕ್ರಮ ಆಯೋಜಿಸಿರುವ ಕುರಿತು ಜೋಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬದರಿನಾಥ್ ಸಾಮಾನ್ಯ ಸ್ಥಳವಲ್ಲ. ಆದಿ ಶಂಕರಾಚಾರ್ಯರು ಈ ಸ್ಥಳವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡಿದ್ದರು. ಉತ್ತರ ಮತ್ತು ದಕ್ಷಿಣ ಭಾರತದ ಧಾರ್ಮಿಕ ಸಂಪ್ರದಾಯಗಳನ್ನು ಬೆಸೆಯುವ ಉದ್ದೇಶದಿಂದ ಅಲ್ಲಿನ ಆಚರಣೆಗಳನ್ನು ರೂಪಿಸಿದ್ದರು. ಇಂದಿಗೂ ಬದರಿನಾಥ್ ದೇವಾಲಯದ ರಾವಲ್ ಅಥವಾ ಮುಖ್ಯ ಅರ್ಚಕರು ಕೇರಳದಿಂದ ಬರುತ್ತಾರೆ. ಹಿಮಾಲಯ ಅತ್ಯಂತ ಸೂಕ್ಷ್ಮ ಪ್ರದೇಶ ಎಂಬುದನ್ನು ನಮ್ಮ ಪೂರ್ವಜರು ಅರಿತಿದ್ದರು. ಧ್ವನಿಯೂ ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಬದರಿನಾಥ್‌ನಲ್ಲಿ ಶಂಖ ಊದುವುದಕ್ಕೂ ನಿರ್ಬಂಧವಿತ್ತು. ದೊಡ್ಡ ಪ್ರಮಾಣದ ಜನಸಂದಣಿಯನ್ನು ಕೂಡ ತಪ್ಪಿಸಲಾಗುತ್ತಿತ್ತು. ಕವಿ ಕಾಳಿದಾಸರು ಹಿಮಾಲಯವನ್ನು ‘ದೇವತಾತ್ಮ’ ಎಂದು ಕರೆದಿದ್ದರು. ಆದರೆ ಇಂದು ಅದರ ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಸ್ವರೂಪಕ್ಕೆ ಏನು ಮಾಡಲಾಗಿದೆ? ಹಿಮಾಲಯದ ದೈವಿಕ ಆತ್ಮಕ್ಕೆ ನಾವು ಏನು ಮಾಡಿದ್ದೇವೆ? ಬಹುಮಹಡಿ ಪಾರ್ಕಿಂಗ್ ನಿರ್ಮಿಸಿದ್ದೇವೆ. ಡಿಜೆ ಮಾದರಿಯ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಪ್ರವಾಸೋದ್ಯಮದಿಂದ ಹಣ ಬರುತ್ತದೆ ಎಂಬುದು ಸರಿ. ಆದರೆ ಭಾರತ ಎಂದಿಗೂ ತಾಯಿ ಪ್ರಕೃತಿಯನ್ನು ಮಾರಾಟ ಮಾಡಿಲ್ಲ” ಎಂದು ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
‘ಹಿಮಾಲಯ ಮಗುವಿನಂತೆ; ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆ ಹಾಕಬೇಡಿ’
ಹಿಮಾಲಯದಲ್ಲಿ ರಸ್ತೆ, ಪ್ರವಾಸೋದ್ಯಮ, ಯಾತ್ರಾ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆ ವಿಸ್ತರಿಸುತ್ತಿರುವ ಬಗ್ಗೆ ಜೋಶಿ ಎಚ್ಚರಿಕೆ ನೀಡಿದ್ದಾರೆ. ಹಿಮಾಲಯ ವಿಶ್ವದ ಅತ್ಯಂತ ಸೂಕ್ಷ್ಮ ಪರ್ವತ ಪ್ರದೇಶ. ಅದು ಮಗುವಿನಂತೆ. ಒಂದು ಮಗುವಿನ ಶಾಲಾ ಬ್ಯಾಗ್‌ನಲ್ಲಿ ಅದು ಹೊತ್ತುಕೊಳ್ಳಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಭಾರ ಹಾಕಲು ಸಾಧ್ಯವಿಲ್ಲ. ಹಿಮಾಲಯದ ವಿಷಯದಲ್ಲೂ ಇದೇ ಅನ್ವಯಿಸುತ್ತದೆ. ಹಿಮಾಲಯದ ಸೂಕ್ಷ್ಮತೆಯನ್ನು ಪರಿಗಣಿಸದೆ ಜೋಶಿಮಠವನ್ನು ಸ್ವಿಟ್ಜರ್ಲೆಂಡ್‌ನಂತೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ . ಸ್ವಿಟ್ಜರ್ಲೆಂಡ್‌ನಲ್ಲಿ ಹಿಮಾಲಯದಂತಹ ಸೂಕ್ಷ್ಮ ಪರ್ವತ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ಅರಾವಳಿ ಪರ್ವತಗಳು ಮತ್ತು ಸರ್ಕಾರದ ನೀತಿ
ಶಿವನ ಸುತ್ತಲಿನ ವಿವಿಧ ಜೀವಿಗಳ ಸಹಬಾಳ್ವೆಯನ್ನು ಉದಾಹರಣೆಯಾಗಿ ನೀಡಿದ ಅವರು, ಶಿವನ ನಂದಿ, ಪಾರ್ವತಿಯ ಸಿಂಹ, ಕುತ್ತಿಗೆಯ ಹಾವು, ಗಣೇಶನ ಮೂಷಿಕ ಹಾಗೂ ಕಾರ್ತಿಕೇಯನ ನವಿಲು.. ಎಲ್ಲವೂ ಒಂದೇ ಪರಿಸರದಲ್ಲಿ ಬದುಕುತ್ತವೆ. ಹಿಮಾಲಯವೂ ಸಹಬಾಳ್ವೆಯ ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ. ಹಿಮಾಲಯ ತಂದೆಯಾದರೆ ಭಾರತ ತಾಯಿ. ತಂದೆಯನ್ನು ಉಳಿಸುವ ಹೆಸರಿನಲ್ಲಿ ತಾಯಿಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಜೋಶಿ ಹೇಳಿದ್ದಾರೆ.
ಬ್ರಿಟಿಷರ ಆಡಳಿತದ ಅವಧಿಯಲ್ಲಿ ಹರಿದ್ವಾರದಲ್ಲಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾಪ ಬಂದಾಗ ಮದನ್ ಮೋಹನ್ ಮಾಳವೀಯ ಅವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಜೋಶಿ ನೆನಪಿಸಿಕೊಂಡಿದ್ದಾರೆ. ಗಂಗೆಯ ನೀರು ಅಂತ್ಯಸಂಸ್ಕಾರ ನಡೆಯುವ ವಾರಾಣಸಿಗೆ ತಲುಪಬೇಕು ಹಾಗೂ ನೀರು ಶುದ್ಧವಾಗಿರಬೇಕು ಎಂಬುದನ್ನು ಖಚಿತಪಡಿಸಲು ಬ್ರಿಟಿಷ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಪರಿಸ್ಥಿತಿ ಈಗ ಭಿನ್ನವಾಗಿದೆ ಎಂದಿದ್ದಾರೆ.
‘ಮೂಲ ತತ್ವಗಳು ದುರ್ಬಲವಾದರೆ ಒಪ್ಪಲಾಗದು’
ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಅವರೊಂದಿಗೆ ಬಿಜೆಪಿ ಸಣ್ಣ ಸಂಘಟನೆಯಾಗಿದ್ದ ಕಾಲದಿಂದ ಕೆಲಸ ಮಾಡಿರುವ ಜೋಶಿ, ಇಂದಿನ ಬಿಜೆಪಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಮಾತನಾಡಿದ್ದಾರೆ. ಕಾಲಕ್ಕೆ ಅನುಗುಣವಾಗಿ ಪಕ್ಷದ ನೀತಿಗಳು ಮತ್ತು ಕಾರ್ಯವಿಧಾನಗಳು ಬದಲಾಗುವುದು ಸಹಜ. ಆದರೆ ಅಗತ್ಯಕ್ಕಿಂತ ಹೆಚ್ಚು ಬದಲಾವಣೆಗಳಾದರೆ ಅಥವಾ ಮೂಲ ತತ್ವಗಳು ದುರ್ಬಲವಾಗಲು ಆರಂಭಿಸಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತಾವು ಹಿಂದೆ ಹೊಂದಿದ್ದ ತತ್ವಗಳಿಂದ ದೂರವಾಗಿಲ್ಲ ಎಂದು ಹೇಳಿರುವ ಜೋಶಿ, ಪ್ರಸ್ತುತ ದೇಶದ ಪರಿಸ್ಥಿತಿಯ ಕುರಿತು ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
‘ಪ್ರತಿ ಸರ್ಕಾರವೂ ಅಧಿಕಾರದಲ್ಲಿ ಉಳಿಯಲು ಬಯಸುತ್ತದೆ’
SIR ಕುರಿತು ಮಾತನಾಡಿದ ಜೋಶಿ, ಪ್ರತಿಯೊಂದು ಸರ್ಕಾರವೂ ಅಧಿಕಾರದಲ್ಲಿ ಉಳಿಯಲು ಬಯಸುತ್ತದೆ ಎಂಬುದು ಕಟು ಸತ್ಯ. ಸಂವಿಧಾನವು ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ನಡೆಸಲು ಅವಕಾಶ ನೀಡಿದ್ದರೂ, ಇಂದಿರಾ ಗಾಂಧಿ ಅವರ ಅವಧಿಯಲ್ಲಿ ಹಾಗೂ ನಂತರ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲೂ ಈ ಪ್ರಕ್ರಿಯೆಗಳು ಮುಂದೂಡಲ್ಪಟ್ಟಿದ್ದವು. ನಾವು ಕೂಡ ಅಧಿಕಾರದಲ್ಲಿ ಉಳಿಯಲು ಬಯಸಿದ್ದೆವು. ಚುನಾವಣೆಗಳು ನ್ಯಾಯಸಮ್ಮತವಾಗಿದ್ದಾಗ, ಸರ್ಕಾರ ಹೊಣೆಗಾರಿಕೆಯಿಂದ ನಡೆದುಕೊಂಡಾಗ ಹಾಗೂ ಅಧಿಕಾರಶಾಹಿ ಪಾರದರ್ಶಕವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ಪರಿಣಾಮಕಾರಿಯಾಗಿರುತ್ತದೆ. ಉತ್ತಮ ಪ್ರಜಾಪ್ರಭುತ್ವಕ್ಕೆ ವಿರೋಧ ಪಕ್ಷವೂ ಜವಾಬ್ದಾರಿಯುತವಾಗಿರಬೇಕು. ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಪರ್ಯಾಯ ಯೋಜನೆಯೊಂದಿಗೆ ಸಿದ್ಧವಾಗಿರಬೇಕು ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: SIR ಅಕ್ರಮ | ಕೂಡಲೇ ಗ್ಯಾನೇಶ್ ಕುಮಾರ್, ಮೋದಿ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
‘ಗಣರಾಜ್ಯ ನಂಬಿಕೆಯ ಮೇಲೆ ನಡೆಯುತ್ತದೆ’
“ಗಣರಾಜ್ಯ ನಂಬಿಕೆಯ ಮೇಲೆ ನಡೆಯುತ್ತದೆ” ಎಂದು ಹೇಳಿರುವ ಜೋಶಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಉದಾಹರಣೆಗಳನ್ನು ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತು ಊಟ ಬಿಡುವಂತೆ ಜನರಲ್ಲಿ ಮನವಿ ಮಾಡಿದಾಗ ಜನರು ಅವರ ಮೇಲೆ ನಂಬಿಕೆ ಇಟ್ಟಿದ್ದರು. ಸುಭಾಷ್ ಚಂದ್ರ ಬೋಸ್ ಅವರು “ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು ಕರೆ ನೀಡಿದಾಗಲೂ ಜನರು ಅವರನ್ನು ನಂಬಿದ್ದರು. ಸರ್ಕಾರದ ಮೇಲೆ ಜನರ ನಂಬಿಕೆ ಇಲ್ಲದಿದ್ದರೆ ಉತ್ತಮ ನಿರ್ಧಾರಗಳನ್ನೂ ಜನರು ಸ್ವೀಕರಿಸುವುದಿಲ್ಲ. ಜನರು ಧ್ವನಿ ಎತ್ತಿದರೆ ಅದಕ್ಕೆ ಸ್ಪಂದಿಸಬೇಕು. “ಕೈಯಲ್ಲಿ ಕೋಲು ಹಿಡಿದು ನಿಂತರೆ ಸಮಸ್ಯೆ ಪರಿಹಾರವಾಗುವುದಿಲ್ಲ” ಎಂದು ಜೋಶಿ ಹೇಳಿದ್ದಾರೆ.
‘Gen Zಗೆ ಉದ್ಯೋಗದ ಭರವಸೆ ನೀಡಿದ್ದೀರಿ; ಉದ್ಯೋಗ ಎಲ್ಲಿದೆ?’
ಜಂತರ್ ಮಂತರ್‌ನಲ್ಲಿ ನಡೆದ ಯುವಜನರ ಪ್ರತಿಭಟನೆ ಹಾಗೂ Gen Zನ ಅಸಮಾಧಾನದ ಕುರಿತು ಮಾತನಾಡಿದ ಜೋಶಿ, ಯುವಕರನ್ನು ದೂಷಿಸುವ ಬದಲು ಅವರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಹಿಂದಿನ ಅಷ್ಟಾವಕ್ರ ಕುರಿತ ಬರಹವನ್ನು ಅವರು ನೆನಪಿಸಿಕೊಂಡಿದ್ದಾರೆ. ಗುರು ಬೋಧಿಸುತ್ತಿದ್ದ ಸಂದರ್ಭದಲ್ಲಿ ತಾಯಿಯ ಗರ್ಭದಲ್ಲಿದ್ದ ಅಷ್ಟಾವಕ್ರನೇ ಗುರು ತಪ್ಪಾಗಿ ಬೋಧಿಸುತ್ತಿದ್ದಾರೆ ಎಂದು ಹೇಳಿದ ಕಥೆಯನ್ನು ಉಲ್ಲೇಖಿಸಿದ ಜೋಶಿ, ಅದಕ್ಕೆ ಕೋಪಗೊಂಡ ತಂದೆ ಮಗುವಿಗೆ ಶಾಪ ನೀಡಿದರೂ, ಅಷ್ಟಾವಕ್ರ ಮುಂದೆ ದೊಡ್ಡ ವಿದ್ವಾಂಸನಾಗಿ ಬೆಳೆದ ಕಥೆಯನ್ನು ವಿವರಿಸಿದ್ದಾರೆ. “ಯುವಕರು ಏಕೆ ಕೋಪಗೊಂಡಿದ್ದಾರೆ? ನಾವು ಸೃಷ್ಟಿಸಿದ ದಾರಿತಪ್ಪಿದ ನಿರೀಕ್ಷೆಗಳೇ ಅದಕ್ಕೆ ಕಾರಣ. ನೀವು ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದೀರಿ. ಉದ್ಯೋಗಗಳು ಎಲ್ಲಿವೆ?”. ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. “ಮಕ್ಕಳೇ, ನಾವು ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಆದರೆ ಅದರ ಮೇಲೆ ನಾವು ಕೆಲಸ ಮಾಡುತ್ತೇವೆ” ಎಂದು ಯುವಕರಿಗೆ ಹೇಳಬೇಕು. ಸ್ಥಾಪಿತ ಅಧಿಕಾರ ವ್ಯವಸ್ಥೆ ಇತಿಹಾಸದುದ್ದಕ್ಕೂ ಹೊಸ ಧ್ವನಿಗಳನ್ನು ಹತ್ತಿಕ್ಕಿದೆ. ಕೆಲವೊಮ್ಮೆ ಒಳ್ಳೆಯ ಉದ್ದೇಶದಿಂದ, ಕೆಲವೊಮ್ಮೆ ಕೆಟ್ಟ ಉದ್ದೇಶದಿಂದ. ಆದರೆ ಭಾರತೀಯ ಸಂಪ್ರದಾಯದಲ್ಲಿ ಯುವಕರು ಪ್ರಶ್ನೆಗಳನ್ನು ಎತ್ತುತ್ತಾರೆ; ಹಿರಿಯರು ಅವರಿಗೆ ಮಾರ್ಗದರ್ಶನ ನೀಡಿ ತಪ್ಪುಗಳನ್ನು ಸರಿಪಡಿಸಬೇಕು. ಅವರು ನಮ್ಮ ಮಕ್ಕಳು ಎಂದು ಜೋಶಿ ಹೇಳಿದ್ದಾರೆ.




