ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
“ಗೋಲ್ಡನ್ ಫ್ರೇಂ ವರ್ಕ್ಸ್”ನ ಗಂಗಾಧರ ತನ್ನ ವಾರ್ಷಿಕ ವಾಡಿಕೆಯಂತೆ ಅಂಗಡಿಯೊಳಗಿನ ಎಲ್ಲಾ ಸಾಮಾನುಗಳನ್ನು ಹೊರಗೆ ತೆಗೆದು ಅಂಗಡಿಯನ್ನು ಫಿನೈಲ್ನಿಂದ ತೊಳೆದು ಎಲ್ಲವನ್ನೂ ಝಾಡಿಸಿ ಒರೆಸಿ ಓರಣವಾಗಿ ಶಿಸ್ತಿನಿಂದ ಫ್ರೇಮು, ಗಾಜು, ಪ್ಲೈವುಡ್ ಶೀಟುಗಳನ್ನು ಹೊಂದಿಸಿಡುವ ಕಾರ್ಯಕ್ರಮದಲ್ಲಿ ನಿರತನಾಗಿದ್ದ. ಅವನ ಅಸಿಸ್ಟೆಂಟ್ ಹುಡುಗ ವಿಕ್ಕಿ ಜಂಗು ಹಿಡಿದ ಮೊಳೆಗಳನ್ನು ಎಸೆದು ಫಳಫಳ ಹೊಸ ಮೊಳೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದ. ಅಪ್ಪನ ಕಾಲದಿಂದಲೂ ನಡೆದುಬಂದ ಫ್ರೇಮಿನಂಗಡಿ ಇದು. ಹೆಂಗಸರ ಕಸೂತಿ, ಹೆಣಿಗೆ, ನಟನಟಿಯರು, ಗಾಂಧಿ ನೆಹರು, ಶಾಲೆಯ ಗ್ರೂಪ್ ಫೋಟೋಗಳು, ಪ್ಲಾಸ್ಟಿಕ್ ಹೂಕುಂಡದ ಇಬ್ಬದಿಗೆ ಕೈಮೇಲೆ ಕೈ ಇಟ್ಟು ನಿಂತ ಹಳೆ ಮದುವೆಯ ದಂಪತಿಗಳು-ಇವೆಲ್ಲವುಗಳಿಗೊಂದು ಚೌಕಟ್ಟು ದಯಪಾಲಿಸಲೆಂದೇ ಇದ್ದ ಈ ಇಕ್ಕಟ್ಟಿನ ಅಂಗಡಿಯಲ್ಲಿ ಕರಗಸದ ಪುಡಿ ಯಾವಾಗಲೂ ಕಾಲಿಗೆ ಅಂಟುತ್ತಿತ್ತು. ಅಪ್ಪನ ಕಾಲದಲ್ಲಿ ಬರೇ ಕಟ್ಟಿಗೆಯ ಫ್ರೇಮುಗಳಿದ್ದವು. ಈಗಲೋ ಅಲ್ಯುಮಿನಿಯಂ, ಪ್ಲಾಸ್ಟಿಕ್- ಹೀಗೆ ತರತರಹದ, ಬಣ್ಣದ ಫ್ರೇಮುಗಳು, ಗಾಜುಗಳು, ರಸ್ತೆಯಲ್ಲಿ ನಡೆಯುವ ಗಿರಾಕಿಗಳ ಗಮನವನ್ನು ಸೆಳೆಯುವ ನೇತು ಹಾಕಿದ ಸೀನು ಸೀನರಿ, ದೇವದೇವತೆಗಳು, ರಾಧಾಕೃಷ್ಣನ್, ತಿರುಪತಿ ವೆಂಕಟೇಶ್ವರ, ನಡುವೆ ತನ್ನ ವಿಶೇಷ ಫ್ರೇಮಿನಿಂದ ಮತ್ತು ನೆತ್ತಿಯಲ್ಲಿ ಸಣ್ಣಗೆ ಕೆಂಡದಂತೆ ಉರಿಯುತ್ತಿರುವ ಝೀರೋ ಬಲ್ಬಿನಿಂದ ಎದ್ದುಕಾಣುವ ಫೋಟೋ ಗಂಗಾಧರನ ಅಪ್ಪನದು. ಇದೇ ಜಾಗದಲ್ಲಿ ಎಷ್ಟೋ ವರುಷಗಳಿಂದ ಫ್ರೇಮು ಹಾಕುವ ಕೆಲಸ ಮಾಡಿಕೊಂಡು ಬಂದಿದ್ದ ಗಂಗಾಧರನ ಅಪ್ಪ ಒಂದು ದಿನ ಥಟ್ಟಂತ ಕೆಲಸ ನಿಲ್ಲಿಸಿ ಮೇಲೆ ಫ್ರೇಮಿನೊಳಗೆ ಹೋಗಿ ಕೂತುಬಿಟ್ಟಂತೆ ಅನಿಸುತ್ತಿತ್ತು ರಸ್ತೆಯವರಿಗೆ.
ಹೊರಗೆ ಬಿಸಿಲೇರುವದರೊಳಗೆ ಎಲ್ಲ ಕಟ್ಟುಕಾಜುಗಳನ್ನು ಒಳಗೆ ತಂದಿಡಬೇಕೆಂದು ಗಂಗಾಧರ ಅವಸರ ಮಾಡತೊಡಗಿದ. ಕಟ್ಟು ಹಾಕಿಸಿಕೊಂಡು ಡೆಲಿವರಿಗೆ ಸಿದ್ಧವಾಗಿದ್ದ ಎಲ್ಲ ಚಿತ್ರಗಳನ್ನು ಈಗ ಒಂದೊಂದಾಗೇ ವಿಕ್ಕಿ ಎತ್ತಿಕೊಂಡ. ಗಂಗಾಧರ ಅವುಗಳನ್ನು ವಿಂಗಡಿಸಿ ಜೋಡಿಸಿಟ್ಟ. ಕಸೂತಿ, ವೆಲಕಮ್, ಬಟನ್ ಬಾತು, ನಾಣ್ಯದ ನವಿಲುಗಳು ಒಂದು ಕಡೆಗೆ, ಮದುವೆ ಫೋಟೋಗಳು ಒಂದು ಕಡೆಗೆ, ದೇವದೇವತೆಯರವು ಒಂದು ಕಡೆ ಮತ್ತು ಬ್ಲೋಅಪ್ ಮಾಡಿಸಿದ ವೈಯಕ್ತಿಕ ಭಾವಚಿತ್ರಗಳು ಒಂದು ಕಡೆ. ಆ ವೈಯಕ್ತಿಕ ಭಾವಚಿತ್ರಗಳ ಬಗ್ಗೆ ಮಾತ್ರ ಗಂಗಾಧರ ತುಂಬ ಜಾಗರೂಕನಾಗಿರುತ್ತಿದ್ದ. ಸಾಮಾನ್ಯವಾಗಿ ಐವತ್ತು ದಾಟಿದವರ, ಹಿರಿಯರ ಇಂಥ ಚಿತ್ರಗಳನ್ನು ತರುಣರು ತಂದುಕೊಡುತ್ತಿದ್ದರು. ಬಹುತೇಕವಾಗಿ ಸಾವಿನನಂತರವೇ ಆಯ್ದು ಸಿದ್ಧಪಡಿಸಿದ ಚಿತ್ರಗಳು ಇವು ಎಂದು ನೋಡಿದ ತಕ್ಷಣ ತಿಳಿಯುತ್ತಿತ್ತು. ಕೆಲವರು ಮದುವೆಯದೋ ಯಾವುದೋ ಗ್ರೂಪು ಫೋಟೋದಿಂದಲೋ ಪ್ರತ್ಯೇಕಿಸಿ ಹಿಗ್ಗಿಸಿ ಟಚ್ ಅಪ್ ಮಾಡಿಸಿಕೊಡುತ್ತಿದ್ದರು. ಈ ಫೋಟೋಗಳಿಗೊಂದು ಬೆಳ್ಳನೆ ಸೂತಕಬಾಧೆ ಇರುತ್ತಿತ್ತು. ಕೆಲವೊಮ್ಮೆ ಇಂಥ ಫೋಟೋಗಳಲ್ಲಿ ಹದಿಹರೆಯದವರೂ ಎನ್ಸಿಸಿ ಡ್ರೆಸ್ ಹಾಕಿಕೊಂಡ ತರುಣರೂ ಇರುತ್ತಿದ್ದರು ಮತ್ತು ಇವುಗಳನ್ನು ಪರತ್ ಒಯ್ಯಲು ಬಂದ ತಂದೆತಾಯಿಗಳ ಕೈಗಳು ಹಣಕೊಡುವಾಗ ಥರಥರ ಕಂಪಿಸುತ್ತಿದ್ದವು.
ಮುಕ್ಕಾಲು ಪಾಲು ಸಾಫು ಸಫಾಯಿಯ ಕೆಲಸ ಮುಗಿದಾದ ಮೇಲೆ ವಿಕ್ಕಿ ಬಟ್ಟೆಯಲ್ಲಿ ಕಟ್ಟಿಟ್ಟ ಕೆಲವು ಚಿತ್ರಗಳನ್ನು ಗಂಗಾಧರನ ಎದುರಿಟ್ಟು “ಇವನ್ನೇನು ಮಾಡುವದು?” ಎಂದು ಕೇಳಿದ. ಅದು ಪ್ರತಿ ವರುಷವೂ ಶೇಖರವಾಗುವ ಡೆಲಿವರಿ ಆಗದೇ ಉಳಿದ ಚಿತ್ರಗಳ ಕಟ್ಟು. ವರ್ಗಾವರ್ಗಿ ಆಗಿಯೋ, ಮರೆವಿನಿಂದಲೋ, ಹಣಕಾಸಿನ ತೊಂದರೆಯಿಂದಲೋ ಅಥವಾ ಮತ್ಯಾವುದೋ ಕಾರಣದಿಂದಲೋ ಗಿರಾಕಿಗಳು ಒಯ್ಯದೇ ಇರುವ ಅಂಥ ಚಿತ್ರಗಳಲ್ಲಿ ಕಸೂತಿ, ಕಲೆ, ಸೀನು ಸೀನರಿ, ದೇವತೆಗಳದೇ ಸಿಂಹಪಾಲು. ನಂತರ ನಟನಟಿಯರು, ಆಟಗಾರರು. ವಾಡಿಕೆಯಂತೆ ಗಂಗಾಧರ “ಮಾರಾಟಕ್ಕಿದೆ” ಎಂಬ ಚೀಟಿಯನ್ನು ಅವುಗಳಿಗೆ ಹಚ್ಚಲು ತೊಡಗಿದ. ಏಕೆಂದರೆ ಬರೇ ಫ್ರೇಮಿನ ದರದಲ್ಲಿ ಇಡೀ ಚಿತ್ರ ಸಿಕ್ಕುವುದರಿಂದ ಹೊಸದಾಗಿ ಖೋಲಿ ಕೊಂಡವರು, ಜೋಪಡಿಯಿಂದ ಚಾಳಿಗೆ ಭಡ್ತಿ ಪಡೆದವರು ಇಂಥ ಚಿತ್ರಗಳನ್ನು ಕೊಳ್ಳುತ್ತಾರೆ. ಗಂಗಾಧರನಿಗೂ ಭಾರ ಕಡಿಮೆ. ಆದರೆ ಈ ಸಲ ಚೀಟಿ ಅಂಟಿಸುತ್ತ ಹೋದಂತೆ ಗಂಗಾಧರ ಬೆಚ್ಚಿ ಕೂತುಬಿಟ್ಟ. ಏಕೆಂದರೆ ಇವುಗಳ ನಡುವೆ ಐವತ್ತು ದಾಟಿದ ಮಹಿಳೆ, ಮುದಿ ಗಂಡಸು, ಮಧ್ಯವಯಸ್ಸಿನ ಒಬ್ಬ- ಹೀಗೆ ಮೂರು ಭಾವಚಿತ್ರಗಳು ಇದ್ದವು. ಮೂರೂ ಒಂದಕ್ಕೊಂದು ಸಂಬಂಧಪಡದವು. ಯಾರ್ಯಾರೋ ಎಂದೆಂದೋ ಫ್ರೇಮಿಗೆಂದು ಕೊಟ್ಟವು. ಕೊಟ್ಟವರು ಮಾತ್ರ ಬರಲಿಲ್ಲ. ಭೇಟಿಗೆ ಯಾರೂ ಬರದ ಕೈದಿಗಳಂತೆ ಅವು ಇಲ್ಲಿ ಉಳಿದಿದ್ದವು. ಗಂಗಾಧರ ಮತ್ತೆ ಅವನ್ನು ನೋಡಿದ. ಹೆಂಗಸಿನ ಫೋಟೋದಲ್ಲಿ ತುಂಬಾ ಟಚ್ ಅಪ್ ಇತ್ತು. ಮುಡಿದ ಹೂವು, ಕುಂಕುಮ, ಸೀರೆಯ ಮೇಲಿನ ಹೂವುಗಳನ್ನು ಬ್ರಶ್ಯಿನಿಂದ ಸರಿಪಡಿಸಿ ಸಿದ್ಧಮಾಡಿದ ಚಿತ್ರ. ಉಳಿದಿಬ್ಬರು ಗಂಡಸರವು ಹಿಗ್ಗಿಸಿದಂಥ ಚಿತ್ರಗಳು. ಕಾಗದದಲ್ಲಿ ಸುತ್ತಿಟ್ಟರೂ ಕಳೆದ ಒಂದು ವರ್ಷದಿಂದ ಅವರ ಕಣ್ಣುಗಳು ಮುಚ್ಚೇ ಇಲ್ಲವಲ್ಲ ಅನಿಸಿ ಗಂಗಾಧರನಿಗೆ ವಿಚಿತ್ರವಾದ ಸಣ್ಣ ಭಯ ಆಯಿತು. ಹೆಂಗಸಿನ ಫೋಟೋಕ್ಕಂತೂ ದುಬಾರಿ ಫ್ರೇಮು ಇತ್ತು. ಹಾಗಾದರೆ ಈ ಫೋಟೋಗಳನ್ನು ಕೊಟ್ಟು ಹೋದವರು ಮರಳಿ ಯಾಕೆ ಬರಲಿಲ್ಲ. ವಿಕ್ಕಿ “ಇವಕ್ಕೂ ‘ಫಾರ್ ಸೇಲ್’ ಚೀಟಿ ಹಚ್ಚಿಬಿಡೋಣವೆ?” ಎಂದು ಚೇಷ್ಟೆಯಿಂದ ನಕ್ಕಾಗ ಗಂಗಾಧರ ಗಂಭೀರವಾಗಿ ಛೇ, ಛೇ ಎಂದ. ಅಳುಕಿನಿದೆಂಬಂತೆ ಮೇಲಿನ ಅಪ್ಪನ ಫೋಟೋ ನೋಡಿದ. ಊದುಬತ್ತಿಯ ಭಸ್ಮ, ಮಾಲೆಯ ಮೇಲೆ ಅಲ್ಲಲ್ಲಿ ಬಿದ್ದಿತ್ತು.
ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ
ಮಧ್ಯಾಹ್ನವಿಡೀ ಗಂಗಾಧರ ಆ ಫೋಟೋಗಳನ್ನು ಯಾರು ಕೊಟ್ಟಿರಬಹುದು ಎನ್ನುವುದರಲ್ಲಿಯೇ ತಲೆಯನ್ನು ತೇಯತೊಡಗಿದ. ಫೋಟೋ ಕೊಟ್ಟವರಿಗೆ ಮತ್ತೆ ಇವುಗಳ ಅವಶ್ಯಕತೆಯೇ ಬರಲಿಲ್ಲವೆ ಅಥವಾ ಅವರಿಗೂ ಈ ಬದುಕಿನಿಂದ ನಿರ್ಗಮಿಸುವ ಪ್ರಮೇಯ ಬಂತೆ ಅಥವಾ ಕೊಟ್ಟ ಕ್ಷಣಕ್ಕೆ ಇದ್ದ ತೀವ್ರತೆ ನಂತರ ಉಡುಗಿಹೋಯಿತೆ. ವಿಕ್ಕಿ “ಇವರ ಫ್ರೇಮು, ಕಾಜು ತೆಗೆದು ಬಳಸಿಕೊಳ್ಳುವ, ಫೋಟೋ ಹರಿದು ಹಾಕಿದರಾಯಿತು” ಎಂದದ್ದಕ್ಕೆ ಗಂಗಾಧರ “ಅಷ್ಟು ಅವಸರ ಯಾಕೆ ನಿನಗೆ?” ಎಂದು ರೇಗಿದ. ರಾತ್ರಿ ಮನೆಗೆ ಮರಳಿದ ನಂತರ ಮಾಯಿಯನ್ನು ಕೇಳುವದು, ಮಾಯಿ ಹೇಳಿದ ಹಾಗೆ ಮಾಡುವದು ಎಂದು ನಿರ್ಧರಿಸಿದ. ತಂದೆಯ ನಿರ್ಗಮನದ ನಂತರ ಮಾಯಿಯನ್ನು ಕೇಳದೆ ಗಂಗಾಧರ ಯಾವ ಹೆಜ್ಜೆಯನ್ನೂ ಇಡುತ್ತಿರಲಿಲ್ಲ. ತಂದೆಯನ್ನು ಹೊರತುಪಡಿಸಿದರೆ ಗಂಗಾಧರನನ್ನೊಳಗೊಂಡು ಚಾಳಿನವರು ಕೇರಿಯವರು ಎಲ್ಲರೂ ಆಕೆಯನ್ನು ಮಾಯಿ ಎಂದೇ ಕರೀತಿದ್ದರು. ಈ ಮಾಯಿ ಮನೆಯಲ್ಲಿರುವುದೇ ಕಮ್ಮಿ. ಈಗ ಅಂತ ಅಲ್ಲ. ಗಂಗಾಧರನ ಬಾಲ್ಯದಿಂದಲೂ ಆಕೆ ಮನೆಗಿಂತ ಮನೆಯ ಹೊರಗೇ ಹೆಚ್ಚು ಇರುತ್ತಿದ್ದಳು. ಗಂಗಾಧರ ಹುಟ್ಟಿದಾಗ ಅವಳ ಎದೆಯಲ್ಲಿನ ಹಾಲು ಬರೇ ಗಂಗಾಧರನಿಗಷ್ಟೇ ಅಲ್ಲ, ಅದೇ ಆಸ್ಪತ್ರೆಯಲ್ಲಿ ಅದೇ ಹೊತ್ತಿಗೆ ಹುಟ್ಟಿದ್ದ ಎಷ್ಟೋ ಶಿಶುಗಳಿಗೆ ಆಗುತ್ತಿತ್ತಂತೆ. ಮನೆಗೆ ಬಂದ ನಂತರವೂ ಆಕೆ ಮತ್ತೆ ಮತ್ತೆ ಆ ಹೆರಿಗೆ ಆಸ್ಪತ್ರೆಗೆ ಹೋಗಿ ಹಾಲು ಸಾಲದ ಮಕ್ಕಳಿಗೆ ಕುಡಿಸಲು ಮುಂದಾಗುತ್ತಿದ್ದಳಂತೆ. ಇವಳಿಗಿದೆಂಥ ಹುಚ್ಚು ಎಂದು ಗಂಗಾಧರನ ಅಪ್ಪನಿಗೆ ಪೀಕಲಾಟವಾಗಿತ್ತಂತೆ. ಎಷ್ಟೋ ಶಿಶುಗಳಿಗೆ ಹಾಲು ಕುಡಿಸಿದ ಮಾಯಿಗೆ ಕೆಲವೊಂದು ವರುಷಗಳ ನಂತರ ಪೇಟೆಯ ಸಂತೆಯಲ್ಲಿ ‘ಇದರಲ್ಲಿ ನನ್ನ ಹಾಲು ಕುಡಿದ ಕಂದಮ್ಮರು ಎಷ್ಟು ಇದ್ದಾರೆ?’ ಎಂದೆಲ್ಲಾ ಅನಿಸುವದಂತೆ. ಕೇರಿಯ ಯಾವದೋ ಹುಡುಗನ ಜಾಂಡಿಸ್ಸಿನ ಆರೈಕೆ, ಯಾರೋ ಹುಡುಗಿಯ ಪ್ಲಾಸ್ಟರ್, ಚಾತುರ್ಮಾಸ ಅವರ ಮನೇಲಿ ಜಾಗ ಇಲ್ಲವೆಂದು ಇಲ್ಲಿ- ಹೀಗೆ ಗಂಗಾಧರನಿಗೆ ತಾನು ಒಬ್ಬನೇ ಎಂದು ಅನಿಸಲೇ ಇಲ್ಲ. ಇದೊಂದು ಅವಿಭಕ್ತ ಕುಟುಂಬ ಅನಿಸತೊಡಗಿತು. ಇನ್ನು ಮಾಯಿಯ ಅಮೃತಬಳ್ಳಿ ಕಷಾಯದ ಕೀರ್ತಿ ಬೇರೆ. ಯಾರಿಗೆ ಹೇಳಿ ಎಲ್ಲಿಂದ ಹೇಗೆ ತಂದು ಸಂಗ್ರಹಿಸುತ್ತಾಳೋ, ಪುನರ್ನವ, ಅಮೃತಬಳ್ಳಿ ಇವುಗಳನ್ನು ಭರಣಿಯಲ್ಲಿ ಒಣಗಿಸಿಟ್ಟು ಕಷಾಯ ಮಾಡುತ್ತಾಳೆ. ಎಲ್ಲ ಜ್ವರಕ್ಕೂ ಮಾಯಿಯ ಅಮೃತಬಳ್ಳಿ ಕಷಾಯ ಬೇಕು. ಅದರ ರುಚಿ ಹತ್ತಿದವರು ಸುಳ್ಳು ಸುಳ್ಳೇ ಬೆನ್ನುನೋವು ಅದೂ ಇದೂ ಎಂದು ಬಂದು ಕಷಾಯ ಮಾಡಿಸಿಕೊಂಡು ಕುಡಿದು ಹೋಗುತ್ತಾರೆ. ಈ ಎಲ್ಲಾ ಸರಭರದಲ್ಲಿ ತಮಗೊಂದಿಷ್ಟು ಜಾಗ ತುತ್ತು ಆಕೆ ದಯಪಾಲಿಸಿದರೆ ಸಾಕು ಅನ್ನುವಂತಾಗಿತ್ತು ಗಂಗಾಧರನಿಗೆ ಮತ್ತು ಅಪ್ಪನಿಗೆ. ನಂತರದ ವರ್ಷಗಳಲ್ಲಿ ಆಕೆಗೆ ಬೇರೊಂದು ಚಾಳಿ ಶುರುವಾಯಿತು. ಅದೇನೆಂದರೆ ಶಹರದ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ದಾಖಲಾಗಿರುವ ಬಂಧುಬಳಗ ಇಲ್ಲದ ಒಂಟಿ ಜೀವಿಗಳನ್ನು ಹುಡುಕಿ ಅವರಿಗೆ ಗಂಜಿ ಕೊಡುವುದು. ಲಕ್ಷಗಟ್ಟಲೆ ಅರ್ತಶ್ವಾಸಗಳ ನೂಲು ನೇಯುವ ಈ ಶಹರದ ಮಗ್ಗ ಮಾಯಿಗೊಂದು ವರವಾಯಿತು. ತುಸು ಬಿಡುವು ಸಿಕ್ಕರೆ ಸಾಕು, ಉಗ್ಗದಲ್ಲಿ ಗಂಜಿ, ಉಪ್ಪಿನಕಾಯಿ ತಕೊಂಡು ಮುನಿಸಿಪಲ್ ಆಸ್ಪತ್ರೆಗಳ ವಾರ್ಡುಗಳನ್ನರಸಿ ಹೊರಟೇಬಿಟ್ಟಳು. ಅಪ್ಪ ತೀರಿಕೊಂಡ ಮಾರನೇ ದಿನವೂ ಆಕೆ ತನ್ನ ಈ ಸಂಚಾರ ನಿಲ್ಲಿಸಲಿಲ್ಲ.
ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆ | ಒಂದು ತುಂಡು ಗೋಡೆ
ರಾತ್ರಿ ಗಂಗಾಧರ ಮೆಲ್ಲಗೆ ಮಾಯಿಯ ಬಳಿ ತನ್ನ ಈ ಲಾವಾರಿಸ್ ಫೋಟೋಗಳ ಪ್ರಸ್ತಾಪ ಎತ್ತಿದ. “ಕೆಲಸಕ್ಕೆ ಬಾರದ ಹಣ್ಣು ಹೂವು ದೇವರುಗಳ ಫೋಟೋ ತೂಗಲು ನಿನ್ನ ಅಂಗಡಿಯಲ್ಲಿ ಜಾಗ ಇದೆ. ಪಾಪ ಈ ಮೂರು ನೆನಪುಗಳಿಗೆ ಜಾಗ ಇಲ್ಲವೇನೋ” ಎಂದುಬಿಟ್ಟಳು ಮಾಯಿ. ನಂತರ “ಅಂಗಡಿಯಲ್ಲಿ ಬೇಡ ಅನಿಸಿದರೆ ಇಲ್ಲಿ ತಂದಿಡು” ಎಂದಳು. “ಇಲ್ಲ, ಅಲ್ಲೇ ಇರಲಿ” ಎಂದ. ಅಪ್ಪ ಸತ್ತಾಗ ಅಪ್ಪನ ಫೋಟೋಕ್ಕೆ ಹಾರ ಹಾಕುವುದನ್ನು ಕಟುವಾಗಿ ವಿರೋಧಿಸಿದ್ದ ಮಾಯಿಗೆ ಈ ಫ್ರೇಮಿನ ವ್ಯವಹಾರ ಉತ್ತರಕ್ರಿಯೆಯ ಒಂದು ಭಾಗದಂತೆ ಅನ್ನಿಸುತ್ತಿತ್ತು. ನೆನಪಿಗೂ ಯಾಕೆ ಚೌಕಟ್ಟು ಎಂಬುದು ಅವಳ ತರ್ಕ. ಹಾಗಂತ ಅವಳು ಹಟವಾದಿಯೂ ಅಲ್ಲ. ಅಪ್ಪ ತೀರಿದ ಒಂದು ವರ್ಷದ ನಂತರ “ಅವರ ಫೋಟೋ ಒಂದು ಮನೇಲಿ ಇರಲಿ, ಬರೇ ಮನಸ್ಸಲ್ಲಿ ಇಟ್ಟುಕೊಂಡರೆ ಸಾಕೆ, ಅವರನ್ನು ಹೊರಗಿಂದ ನೋಡುವದು ಬೇಡವೇ?” ಎಂದಳು. ಗಂಗಾಧರನಿಗೆ ಆ ಫೋಟೋಗಳನ್ನು ರಸ್ತೆಯಲ್ಲಿ ಹೋಗುವವರಿಗೆ ಕಾಣುವಂತೆ ಡಿಸ್ಪ್ಲೇ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ಅದಕ್ಕೆ ಮಾಯಿ “ಅವರು ಸತ್ತಿದ್ದಾರೆಂದೇ ಯಾಕಪ್ಪ ತಿಳೀತಿ. ಸ್ವತಃ ಅವರೇ ಬಂದು ಅದನ್ನು ಒಯ್ದಾರು” ಎಂದಳು.
ಮರುದಿನ ಅಂಗಡಿಗೆ ಹೋದವನೇ ಆ ಮೂರೂ ಫೋಟೋಗಳನ್ನು ಚೆನ್ನಾಗಿ ಒರೆಸಿ ಜಂಗು ತಳೆದ ಮೊಳೆಗಳನ್ನು ಬದಲಿಸಿ ಫ್ರೇಮಿನ ಮಾದರಿಗಳ ನಡುವೆ ತೂಗುಹಾಕಿದ. ರಸ್ತೆಯಲ್ಲಿ ನಡೆಯುವ ಲಕ್ಷೋಪಲಕ್ಷ ಜೀವಿಗಳಲ್ಲಿ ಯಾರಾದರೂ ಸಂಬಂಧಪಟ್ಟವರು ಇದ್ದೇ ಇರುತ್ತಾರೆ ಮತ್ತು ಅವರನ್ನು ಇವು ಖಂಡಿತ ಸೆಳೆಯಬಹುದು. ಒಂದೆರಡಾದರೂ ತಮ್ಮ ಮನೆ ತಲುಪಬಹುದು ಎಂದು ಆಸೆ ತಳೆದ. ವಿಕ್ಕಿಗೆ ಇದು ಸರಿ ಬರಲಿಲ್ಲ. “ಸತ್ತವರ ಫೋಟೋ ಡಿಸ್ಪ್ಲೇದಲ್ಲಿ ಯಾಕೆ?” ಎಂದ. ಅದಕ್ಕೆ ಗಂಗಾಧರ ಮಾಯಿಯದೇ ಧಾಟಿಯಲ್ಲಿ “ಅವರು ಸತ್ತಿದ್ದಾರೆಂದೇ ಯಾಕೆ ತಿಳೀತಿ ನೀನು. ಅವರೇ ಖುದ್ದು ಬಂದು ಫೋಟೋ ಒಯ್ಯಬಹುದು” ಎಂದ. ವಿಕ್ಕಿ ನಕ್ಕುಬಿಟ್ಟ. ಗಾಳಿ ಬಿಸಿಲು ಧೂಳು ಎನ್ನದೇ ರಸ್ತೆಯನ್ನೇ ನೋಡುತ್ತ ತೂಗುತ್ತಿದ್ದ ಈ ಮೂವರು ವ್ಯಕ್ತಿಗಳು ಈಗ ಗಂಗಾಧರನಿಗೆ ತುಂಬ ಪರಿಚಿತರಂತೆ ಅನಿಸತೊಡಗಿತು. ಆ ಮೂವರ ನಡುವೆಯೂ ಒಂದು ಸಂಬಂಧ ಇರುವಂತೆ ಭಾಸವಾಯಿತು. ವೃದ್ಧ ಗಂಡ, ಮುತ್ತೈದೆ ಹೆಂಡತಿ, ಮತ್ತೊಬ್ಬ ಅವಳ ತಮ್ಮ- ಹೀಗೆಲ್ಲ ತಂತುಗಳನ್ನು ಕಲ್ಪಿಸುತ್ತ ಗಂಗಾಧರ ತನ್ನ ಫ್ರೇಂ ವರ್ಕ್ಸ್ ಮುಂದುವರೆಸಿದ. ಅಂಗಡಿಗೆ ಬಂದವರು ತಮ್ಮ ಫ್ರೇಮಿನ ಆರ್ಡರ್ ಕೊಡುವಾಗ ಈ ಮೂರು ಮಾದರಿಗಳನ್ನು ಮಿಕಿ ಮಿಕಿ ಅಂತ ನೋಡುತ್ತಿದ್ದರು. ಅವರ ಮನಸ್ಸಿನಲ್ಲಿ ಅವು ಎಂತೆಂಥ ಭಾವಗಳನ್ನು ಎಬ್ಬಿಸುತ್ತಿದ್ದವೋ ಏನೋ. ಒಬ್ಬನಂತೂ ಗಂಗಾಧರನನ್ನು “ಅವರು ನಿಮ್ಮ ಸಂಬಂಧಿಕರೇ? ಎಷ್ಟೋ ದಿನದಿಂದ ಇಲ್ಲೇ ಇವೆ ಫೋಟೋಗಳು” ಎಂದು ಕೇಳಿಬಿಟ್ಟ. ಗಂಗಾಧರ, “ಛೇ, ಛೆ, ಛೆ, ಅಲ್ಲ ಅಲ್ಲ” ಎಂದ. ನಂತರ ಅವನಿಗೆ ತಾನಿಷ್ಟು ಆವೇಶದಿಂದ ಯಾಕೆ ಅಲ್ಲಗಳೆದೆ ಎಂದು ಆಶ್ಚರ್ಯವಾಯಿತು. ಹೀಗೆಯೇ ಒಂದು ದಿನ ಯಾವುದೋ ಕೆಲಸಕ್ಕೆಂದು ಬಂದು ಹರಟೆ ಹೊಡೆಯುತ್ತಾ ನಿಂತಿದ್ದ ವಿಕ್ಕಿಯ ಗೆಳೆಯ, ನಾಟಕದ ಬಂಡ್ಯಾ “ಅರೇ ಈ ಫೋಟೋ ಎಷ್ಟು ದೊಡ್ಡದಿದೆ, ಎಷ್ಟು ಕ್ಲಿಯರ್ ಇದೆ. ಬಾಲ್ಕನಿಯಿಂದಲೂ ಕಾಣುವಂತಿದೆ. ನಾಟಕದಲ್ಲಿ ಸ್ಟೇಜಿನಮೇಲೆ ಬಳಸಲಿಕ್ಕೆ ಫಸ್ಟ್ ಕ್ಲಾಸಾಗಿದೆ” ಎಂದೆಲ್ಲಾ ಶುರುಮಾಡಿ “ಈ ಶಹರದ ನಾಟಕ ಕಂಪನಿಯವರಿಗೆ ಇಂಥ ಫೋಟೋಗಳು ಬೇಕಾಗುತ್ತದೆ. ದಿವಂಗತ ತಂದೆತಾಯಿಗಳ ಫೋಟೋ ಸಾಮಾಜಿಕ ನಾಟಕಗಳ ಸ್ಟೇಜ್ಗೆ ಬೇಕೇಬೇಕಾಗುತ್ತದೆ. ನಾನು ಒಯ್ಯಲೆ?” ಎಂದು ದುಂಬಾಲು ಬಿದ್ದುಬಿಟ್ಟ. ಈಗಾಗಲೇ ಡಿಸ್ಪ್ಲೇನಲ್ಲಿ ಅವು ದಿನಗಟ್ಟಲೆ ತೂಗಿ ಆಗಿರುವುದರಿಂದ ಗಂಗಾಧರನಿಗೆ ಅವುಗಳ ವಿಷಯದಲ್ಲಿ ಆವೇಶ ತಂತಾನೇ ಕಮ್ಮಿ ಆಗಿತ್ತು. ‘ಇರಲಿ, ಇವುಗಳಿಗೆ ಹೊಸ ದಾರಿ ಸಿಕ್ಕರೆ ಸಿಕ್ಕಿಬಿಡಲಿ’ ಎಂದು ಹೂಂ ಅಂದುಬಿಟ್ಟ. ಬಂಡ್ಯಾ “ಇದರ ಚಾರ್ಜ್ ಕೊಡ್ತೇನೆ” ಎಂದಾಗ “ಅದೆಲ್ಲಾ ಬೇಡಪ್ಪಾ, ಆದರೆ ಒಂದು ಕಂಡೀಶನ್ನು. ಈ ಫೋಟೋಕ್ಕೆ ಸಂಬಂಧಪಟ್ಟವರ್ಯಾರಾದರೂ ಬಂದು ಕೇಳಿದರೆ ಕೊಟ್ಟುಬಿಡಬೇಕು” ಎಂದ. ಬಂಡ್ಯಾ ಉತ್ಸಾಹದಿಂದ “ಖಂಡಿತ” ಎಂದು ದಿನಪತ್ರಿಕೆಯ ಕಾಗದದಲ್ಲಿ ಅವುಗಳನ್ನು ಕಟ್ಟಿಕೊಂಡ. ಪರಸ್ಪರ ಮುಖ ಮಾಡುವಂತೆ ಇಟ್ಟ ಗಂಡಸು, ಹೆಂಗಸು ಮತ್ತು ಮತ್ತೊಬ್ಬ- ಹೀಗೆ ಮೂರೂ ಫೋಟೋಗಳನ್ನು ಕಟ್ಟಿಕೊಂಡು ಬಂಡ್ಯಾ ಹೊಂಟಿದ್ದೇ ಗಂಗಾಧರನಿಗೆ ಏನೋ ಅನಿಸಿ “ಒಂದ್ ನಿಮಿಷ” ಎಂದ. ನಂತರ “ಏನಿಲ್ಲ, ಹೋಗು” ಎಂದು ಸುಮ್ಮನೆ ಕೂತುಬಿಟ್ಟ.
ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ
ರಾತ್ರಿ ಮಾಯಿಯ ಬಳಿ ಧೈರ್ಯ ವಹಿಸಿ ಇದನ್ನು ಹೇಳಿದ. ಮಾಯಿ “ಅಲ್ಲೋ, ನೀನು ನಿನ್ನ ಅಂಗಡಿಯಲ್ಲಿಟ್ಟುಕೊಂಡು ಏನು ಮಹಾ ಆಗುತ್ತಿತ್ತೋ ಸ್ಟೇಜಿನ ಮೇಲೂ ಅದೇ ಆಗುತ್ತದೆ. ಇಷ್ಟಕ್ಕೂ ನಿನ್ನ ಈ ಫೋಟೋ ಫ್ರೇಮಿನ ವ್ಯವಹಾರಕ್ಕೂ ಮತ್ತು ಆ ಬಡಪಾಯಿಗಳಿಗೂ ಸಂಬಂಧವೇ ಇಲ್ಲ. ನಿನ್ನದೊಂದೇ ಅಂಗಡಿಯ ಈ ಶಹರದಲ್ಲಿ, ಸಾವಿರಾರು ಇರಬಹುದು. ಅಂದರೆ ಪ್ರತಿ ಅಂಗಡಿಯಲ್ಲೂ ಇಂಥ ಬೇವಾರಸಿ ಫೋಟೋಗಳು. ವಿಚಾರ ಮಾಡು ಎಷ್ಟಾಗಬಹುದು ಎಲ್ಲಾ. ಇನ್ಮುಂದೆ ಅಡ್ವಾನ್ಸ್ ಹಣ ತಕೊಳ್ಳಿ ನೀವೆಲ್ಲ. ಆಗ ಇಷ್ಟೊಂದು ಬೇವಾರ್ಸಿಗಳು ನಿಮ್ಮ ಉಡಿಯಲ್ಲಿ ಬರಲಿಕ್ಕಿಲ್ಲ” ಎಂದು ವಿಚಿತ್ರ ನಗೆ ನಕ್ಕಳು. ಬಂಡ್ಯಾ ತಕೊಂಡು ಹೋದ ಇಂದಿನ ಫೋಟೋಗಳು ಯಾವ ಸ್ಟೇಜಿನ ಮೇಲೆ ಯಾವ ಪಾತ್ರದ ತಂದೆಯೋ ತಾಯಿಯೋ ಆಗುವವೋ ಎಂಬ ಕುತೂಹಲವನ್ನು ಮೆಟ್ಟಿ ಹಾಕುವಂಥ ಮಾಯಿಯ ನಗೆ ಗಂಗಾಧರನನ್ನು ಹಿಡಿದು ನಿಲ್ಲಿಸಿತು. ರಾತ್ರಿ ಕನಸಿಗೂ ಮುನ್ನ ಸಾವಿರಾರು ಫೋಟೋಗಳಿಗೆ ನಗರಚೌಕದಲ್ಲಿ ನಿಂತು ಯಾರೋ ಬೆಂಕಿ ಇಡುತ್ತಿರುವಂತೆ ಕಂಡಿತು. ಮುತ್ತೈದೆಯ ಹೂವಿನ ಸೀರೆಯ ಟಚ್ ಅಪ್, ವೃದ್ಧನ ಹಣೆಯ ಮೇಲಿನ ಉಬ್ಬುನರಗಳಿಗೆ ಬೆಂಕಿ ತಾಗುತ್ತಲೇ ಇರಲಿಲ್ಲ. ಬೆಚ್ಚಿ ಎದ್ದು ಕೂತ ಗಂಗಾಧರ ಬೆವರಿಕೊಂಡ. ದೀಪ ಉರಿಯುತ್ತಿತ್ತು. ಒಲೆಯ ಮೇಲೆ ಮಾಯಿ ಕುದಿಯುವ ನೀರಿನಲ್ಲಿ ಅಮೃತಬಳ್ಳಿ ಒಣಚೂರುಗಳನ್ನು ಹಾಕುತ್ತಿದ್ದಳು.
ಮರುದಿನ ಶಹರದ ಕೆಲಭಾಗದಲ್ಲಿ ಕೋಮು ದಂಗೆಯ ಕಾಳ್ಗಿಚ್ಚು ಹೊತ್ತಿಕೊಂಡಿತು. ಎರಡು ಕೋಮಿನವರನ್ನು ಪರಸ್ಪರ ತಿನ್ನಲು ಛೂಬಿಟ್ಟು ನಾಯಕರು ತಮ್ಮ ತಮ್ಮ ಮನೆಯ ಗದ್ದುಗೆಗಳಲ್ಲಿ ಕೂತು ಟೀವಿಯಲ್ಲಿ ಮೃತರ ಸಂಖ್ಯೆ ಸ್ಕೋರು ಆಸ್ವಾದಿಸಿದರು. ಮನೆಮಠ ಇದ್ದವರು ಕೆಲಸ ಗಿಲಸ ಬಿಟ್ಟು ಬಾಗಿಲ ಒಳಗೇ ಭದ್ರವಾಗಿ ಉಳಿದರೆ ಬೀದಿಪಾಲಾಗಿರುವ ನರಜೀವಿಗಳು ಇರಿತಕ್ಕೆ ಒಡಲನ್ನು ಕೊಟ್ಟರು. ಹೆಸರು ಕೇಳಿದರೆ ಹೆಸರು ಹೇಳಲು ಹೆದರಿದರು. ಒಂದೇ ಇರಿತದಲ್ಲಿ ಕರುಳನ್ನೆಲ್ಲ ಕತ್ತರಿಸುವಂತೆ ಹಿಡಿಯನ್ನು ತಿರುಗಿಸುವ ಕಲೆಯನ್ನು ಕಲಿತುಕೊಂಡರು. ಆಸ್ಪತ್ರೆಗಳಲ್ಲಿ ಆಪರೇಶನ್ನಿಗೆ ಮುಂಚೆ ನುಣ್ಣಗೆ ಕೂದಲು ಬೋಳಿಸಲು ಸ್ಪಿರಿಟ್ ವಾಸನೆಯ ನಾಪಿತರು ಕಾದು ಕೂತರು. ಆಸ್ಪತ್ರೆಯ ಶವಾಗಾರದಲ್ಲಿ ಬಿದ್ದ ದೇಹಗಳನ್ನು ವಾರ್ಡುಗಳಲ್ಲಿ ಬೇಯುತ್ತಿದ್ದವರನ್ನು ಹುಡುಕಿಕೊಂಡು ಯಾರೂ ಬರಲಿಲ್ಲ. ಏಕೆಂದರೆ ಅಲ್ಲಿ ಮತ್ತೆ ಹೆಸರು ಬೇಕು. ಹೆಸರಿನ ಜತೆ ಕೋಮು, ವಿಳಾಸ, ಮತ್ತೆ ಒಡಲು ಮತ್ತೆ ಇರಿತ. ಸಭ್ಯನಾಗರಿಕರು ಫೋನಿನಲ್ಲಿ ಪರಸ್ಪರರ ಕುಶಲ ಕೇಳಿದರೆ, ವಲಸೆಯ ವಕ್ಕಲುಮಕ್ಕಳು ಆಕಾಶದ ಕೆಳಗೆ ಕಣ್ಣು ತೆರೆದುಕೊಂಡೇ ಪಿಶಾಚಿಗಳಂತೆ ರಾತ್ರಿಯನ್ನು ಕಳೆದರು. ಬೀದಿಗಳಲ್ಲಿ ನಗುವನ್ನು ನಿಷೇಧಿಸಿದರು. ಕಣ್ಣಲ್ಲಿ ಕಣ್ಣಿಟ್ಟು ನೋಡುವದನ್ನು ನಿಷೇಧಿಸಿದರು. ಶಾಲೆಗಳು ಆಸ್ಪತ್ರೆಯ ಮೌನ ಧರಿಸಿದುವು. ವಾರ್ಡುಗಳಲ್ಲಿ ಜಾಗವಿಲ್ಲ. “ಸಂಬಂಧಪಟ್ಟವರು ಗಾಯಾಳುಗಳನ್ನು ಒಯ್ಯಿರೀ” ಎಂದು ಅರಚುತ್ತ ಅಂಬ್ಯುಲೆನ್ಸುಗಳು ರಾತ್ರಿಯ ಬೀದಿಗಳಲ್ಲಿ ಓಡಿದವು.
ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು
ಕದ್ದು ಕದ ತೆರೆದಂತೆ ಅಂಗಡಿಗಳು ಕಣ್ಣುಬಿಟ್ಟವು. ಗಂಗಾಧರನಿಗೆ ಏನೂ ತೋಚುತ್ತಿರಲಿಲ್ಲ. ಉಪನಗರದ ಸ್ಟೇಷನ್ನಿನ ಹೊರಗೆ ಎಲ್ಲ ಆಸ್ಪತ್ರೆಗಳ ಅಂಕಿ ಸಂಖ್ಯೆಗಳ ಕಾಗದ ಹಚ್ಚಿದ್ದರು. ಜನ ಮಕ್ಕಳ ಎಸ್ಸೆಲ್ಸಿ ರಿಸಲ್ಟು ನೋಡುವಂತೆ ಮುಗಿಬಿದ್ದು ನೋಡುತ್ತಿದ್ದರು. ಏನು ನೋಡುತ್ತಿದ್ದರೋ. ಮಾಯಿ ಮಾತ್ರ ಉಗ್ಗದಲ್ಲಿ ಗಂಜಿ, ಕಷಾಯ ತುಂಬಿಕೊಂಡು ಯಾರ ಮಾತನ್ನೂ ಕೇಳದೇ ವಾರ್ಡಿನಿಂದ ವಾರ್ಡಿಗೆ ಅಲೆಯುತ್ತಿದ್ದಳು. ಇಂಥ ಥರಗುಟ್ಟುವ ಕರ್ಫ್ಯೂದಲ್ಲಿ ಗಂಗಾಧರನ ಅಂಗಡಿಗೆ ಒಬ್ಬ ಹುಡುಗ ಬಂದ. “ನಮಸ್ಕಾರ, ನನಗೊಂದು ಸಹಾಯ ಬೇಕು” ಎಂದ. ಅವನನ್ನು ಕೂಡ್ರಿಸಿ ಗಂಗಾಧರ ವೃತ್ತಾಂತ ಕೇಳಿದ. ದಂಗೆಯಲ್ಲಿ ಯಾರನ್ನೋ, ಏನನ್ನೋ ಕಳಕೊಂಡಿದ್ದಾನೆ; ಏನನ್ನೋ ಅರಸುತ್ತಿದ್ದಾನೆ-ಎನ್ನುವ ಅವನ ಎಣಿಕೆ ಸುಳ್ಳಾಯಿತು. ಅವನ ಕಥೆ ಇಷ್ಟೆ- ಅವನೊಬ್ಬ ಏಕಲವ್ಯ. ಈ ಶಹರದ ಕಂಕುಳಲ್ಲೇ ಕಣ್ತೆರೆದು ತಂದೆ ತಾಯಿ ಗೊತ್ತಿಲ್ಲದೆ ಬೆಳೆದವ. ದೈನಿಕದ ನಾಡಿ ಹಿಡಿದವ. ಗೋಪುರದ ಗಡಿಯಾರದ ಮುಳ್ಳುಗಳನ್ನು ನೋಡುತ್ತಲೇ ತನ್ನ ನಡಿಗೆಯನ್ನು ರೂಪಿಸಿಕೊಂಡವ. ಈಗ ರಿಕ್ಷಾ ನಡೆಸುತ್ತಾನೆ. ಚಂದದ ಹುಡುಗಿಯೊಬ್ಬಳನ್ನು ಮೋಹಿಸುತ್ತಾನೆ. ಅವಳಿಗಾಗಿ ಏನನ್ನೂ ಮಾಡಲು ಸಿದ್ದನಿದ್ದಾನೆ. ಅವಳನ್ನು ಮದುವೆಯಾಗಬಯಸುತ್ತಾನೆ. ಅವಳಿಗಾಗಿ ಈಗಾಗಲೇ ಅಸಲೀ ಮಂಗಳಸೂತ್ರ ಖರೀದಿಸಿದ್ದಾನೆ. ಸುಭಾಷ್ ನಗರದಲ್ಲಿ ನಳ ಇರುವ ಜೋಪಡಿ ಕೊಂಡಿದ್ದಾನೆ. ಆಕೆಗೆ ಗೊತ್ತು ಈತ ಹಿಂದಿಲ್ಲದವನು ಅಂತ. ಆದರೆ ಆಕೆಯದು ಒಂದೇ ಷರತ್ತು. ಆಕೆ ಅವಳ ತಂದೆತಾಯಿಗೆ ಹೇಳಿದ್ದಾಳಂತೆ: ಈತನಿಗೆ ತಂದೆ ತಾಯಿ ಇದ್ದರು, ಈಗ ಇಲ್ಲ ಅಂತ. ಇಲ್ಲವಾದರೆ ಅವಳ ತಂದೆ ತಾಯಿ ಈ ಮದುವೆಗೆ ಒಪ್ಪುವುದಿಲ್ಲವಂತೆ. ಹೀಗಾಗಿ ಅವರು ಬಂದಾಗ ತೋರಿಸಲು ಇವನ ಜೋಪಡಿಯಲ್ಲಿ ಒಂದು ವೃದ್ಧ ಮತ್ತು ವೃದ್ಧೆಯ ಫೋಟೋ ಬೇಕಂತೆ. ಬೇಕಿದ್ದರೆ ಅದನ್ನು ತಾನು ಖಾಯಂ ಇಟ್ಟುಕೊಳ್ಳಲು ಸಿದ್ದ ಎಂದು ಆತ ಹೇಳಿದ. ಗಂಗಾಧರ ಬೆಚ್ಚಿಬಿದ್ದ. ಇಂಥ ತಿರುವನ್ನು ಆತ ಎಣಿಸಿಯೇ ಇರಲಿಲ್ಲ. ಹುಡುಗ ತುಂಬ ಪ್ರಾಮಾಣಿಕವಾದ ನಿರುಪಾಯತೆಯಲ್ಲಿ ನಿಂತಿದ್ದ. “ಒಂದು ವಾರದ ಹಿಂದೆ ಬಂದಿದ್ದರೆ ನಿನ್ನ ಕೆಲಸ ಆಗುತ್ತಿತ್ತಲ್ಲಪ್ಪ, ಛೆ” ಎಂದು ಕೈಕೈ ಹಿಸುಕಿಕೊಂಡ. “ಇರು ನೋಡುವಾ” ಎಂದು ವಿಕ್ಕಿಯ ಜೊತೆ ಬಂಡ್ಯಾನ ಕುರಿತು ಕೇಳಿದ. ವಿಕ್ಕಿ “ಬಂಡ್ಯಾನ ಕೈಗೆ ಹೋದ ಫೋಟೋ ಪರತ್ ಹೇಗೆ ಬಂದಾವು? ಈ ಶಹರದಲ್ಲಿ ಯಾವ ನಾಟಕ ಕಂಪನಿಗೆ ಅವು ಸೇರಿದ್ದಾವೋ, ಸ್ಟೇಷನ್ನಿನ ಪಶ್ಚಿಮ ಬದಿಗಿರುವ ಫ್ರೇಮಿನವನನ್ನು ಕೇಳಿದರೆ ಹೇಗೆ?” ಎಂದು ಸೂಚಿಸಿದ. ಗಂಗಾಧರನಿಗೂ ಹಾಗೇ ಅನಿಸಿತು. ಗಂಗಾಧರ ಅವನನ್ನು ಕರೆದುಕೊಂಡು ಸೇತುವೆ ದಾಟಿ ಪಶ್ಚಿಮಕ್ಕೆ ಹೋದ. ಆ ಅಂಗಡಿಯವ “ಇಲ್ಲ ಮಹರಾಯಾ, ಇಂಥ ಲಫಡಾದಲ್ಲಿ ಬೀಳುವದು ನಮ್ಮ ಧಂದೆಗೆ ಸರಿಯಲ್ಲ. ಮೇಲಾಗಿ ಈಗ ದಂಗೆಯ ಸಮಯ. ಸಾವಿನ ಸಮಯ. ನಮ್ಮ ಧಂದೆಯ ಪೀಕ್ ಸಮಯ, ಇನ್ನೊಂದೆರಡು ತಿಂಗಳು ನೋಡು ಎಷ್ಟೊಂದು ಫ್ರೇಮುಗಳನ್ನು ನಾವು ಮಾಡಬೇಕಾಗಬಹುದು. ಇಂಥದರಲ್ಲಿ ಈ ಕಿರಿಕಿರಿ ಯಾಕೆ?” ಎಂದು ಪಚಪಚ ರಕ್ತಸಿಕ್ತ ಪಾನಿನ ಬಾಯಲ್ಲಿ ಕೀರಾಡಿದ.
ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ
ಗಂಗಾಧರನಿಗೆ ಸುಮ್ಮಸುಮ್ಮನೆ ಫೋಟೋಗಳನ್ನು ನಾಟಕ ಕಂಪನಿಗೆ ಕೊಟ್ಟೆನಲ್ಲ ಎಂಥ ಒಳ್ಳೆ ಸ್ಥಳ ಅವರಿಗೆ ಒದಗಿ ಬಂದಿತ್ತು ಅನಿಸಿತು. ಹುಡುಗನ ಎದೆಗುಂದದಂತೆ “ಕಾಳಜಿ ಮಾಡಬೇಡ, ನಿನ್ನ ಮದುವೆ ಖಂಡಿತ ಆಗುತ್ತದೆ” ಎಂದ. ಹುಡುಗ “ಫೋಟೋಗಳನ್ನು ನಾನು ತುಂಬ ಜತನದಿಂದ ಕಾಪಾಡುತ್ತೇನೆ. ಫೋಟೋದ ಸಮ್ಮುಖದಲ್ಲಿಯೇ ನಮ್ಮ ಮದುವೆ ಆಗುವದು. ಫೋಟೋಗೆ ಎಲ್ಲ ಮಾನಸನ್ಮಾನ ಮದುವೆಯಲ್ಲಿ ಕೊಡುತ್ತೇವೆ” ಎಂದು ಆರ್ತನಾಗಿ ಹೇಳಿದ. ಗಂಗಾಧರನಿಗೆ ಏನೋ ಹೊಳೆದಂತಾಗಿ ಮತ್ತೆ ಪೂರ್ವಕ್ಕೆ ಬಂದು ತರಕಾರಿ ಮಾರ್ಕೆಟ್ಟಿನಲ್ಲಿ ಮಹಡಿಯ ಮೇಲಿನ ಫೋಟೋ ಸ್ಟುಡಿಯೋ ತಲುಪಿದ. ಸ್ಟುಡಿಯೋದವ ಏನೂ ಕೇಳಿಸಿಕೊಳ್ಳಲೇ ಇಲ್ಲ. “ನಾಳೆ ಫೋಟೋದವರು ಬಂದು ಮಾನ ಹಾನಿ ಖಟ್ಲೆ ಹಾಕಿದರೆ ಏನು ಮಾಡುವದು?” ಎಂದ ತಾರ್ಕಿಕವಾಗಿ ಕೇಳಿದ. ಗಂಗಾಧರ “ನೋಡಿ ಸಾರ್, ಶುಭ ಕಾರ್ಯಕ್ಕೆಂದು ಅದನ್ನು ಬಳಸ್ತಾ ಇದ್ದೇವೆ. ಯಾರೂ ತಕರಾರು ಮಾಡೋ ಹಾಗಿಲ್ಲ” ಎಂದು ಪುಸಲಾಯಿಸಿದರೂ ಸ್ಟುಡಿಯೋದವ ಒಪ್ಪಲಿಲ್ಲ. ಹುಡುಗನ ಜತೆ ಅಂಗಡಿಗೆ ಮರಳಿದ. “ನಾಳೆ ಬೆಳಿಗ್ಗೆ ಬಾ. ಹೇಗಾದರೂ ವ್ಯವಸ್ಥೆ ಮಾಡುತ್ತೇನೆ” ಎಂದ. ಹುಡುಗ ಎರಡೂ ಕೈಗಳನ್ನು ಮುಂದು ಮಾಡಿ ಗಂಗಾಧರನ ಕೈಕುಲುಕಿ ಹೊರಟುಹೋದ. ಕತ್ತಲಾಗುವ ಮೊದಲೇ ಅಂಗಡಿ ಮುಚ್ಚಿ ಮನೆಗೆ ಹೊರಟಾಗ ಅಕ್ಕಪಕ್ಕ ಅಂಗಡಿಯವರು ಸಂಜೆಯ ಪತ್ರಿಕೆಯಲ್ಲಿ ಬಂದ ಸಾವುನೋವುಗಳ ಸುದ್ದಿಯೊಂದಿಗೆ ಸದ್ದುಮಾಡುತ್ತಿದ್ದರು.
ಮನೆಗೆ ಬಂದರೆ ಮಾಯಿ ದೊಡ್ಡ ದೊಡ್ಡ ಎರಡು ಉಗ್ಗಗಳಲ್ಲಿ ಗಂಜಿ ತುಂಬಿಕೊಳ್ಳುತ್ತಿದ್ದಳು. ಥರ್ಮಾಸಿನಲ್ಲಿ ಕಷಾಯ ತುಂಬಿದ್ದಳು. “ನಾನು ರಾತ್ರಿ ಬರುವುದಿಲ್ಲ. ಜೆ.ಜೆ. ಆಸ್ಪತ್ರೆಗೆ ಹೋಗುತ್ತಿದ್ದೇನೆ. ಅಲ್ಲೊಬ್ಬ ನಿನ್ನದೇ ವಯಸ್ಸಿನವ ಇದ್ದಾನೆ. ಪೇಶಂಟ್ ನಂಬರು 2132. ವಾರದ ಹಿಂದೆಯೇ ಎಡ್ಮಿಟ್ ಆದವನು. ಎಂಥಾ ಕೇಸೆಂದರೆ ಹದಿಮೂರು ಇರಿತಗಳಿದ್ದವಂತೆ. ದಾದಿ ಹೇಳುತ್ತಿದ್ದಳು. ಮೂರು ಫ್ರಾಕ್ಚರ್, ತಲೆಯಲ್ಲೂ ಒಂದು. ಎರಡು ಗಂಟೆ ರಕ್ತ ಸೋರಿ ಹೋದ ಮೇಲೆ ಯಾರೋ ಆಸ್ಪತ್ರೆಗೆ ತಂದು ಹಾಕಿದರಂತೆ. ಎಂಥ ಅದೃಷ್ಟ ನೋಡು. ಎಷ್ಟೋ ಆಪರೇಷನ್ನುಗಳ ನಂತರ ಜೀವ ಉಳಿಯಿತು. ಆದರೆ ಅವನ ನೆನಪೇ ಹಾರಿಹೋಗಿದೆ. ಹೆಸರು ಕುಲ ವಯಸ್ಸು ವಿಳಾಸ ಏನೇನೂ ಅವನಿಗೆ ನೆನಪಿಲ್ಲ. ಈಗಷ್ಟೇ ಹುಟ್ಟಿದ ಶಿಶುವಂತೆ ಇದ್ದಾನೆ. ಒಂದು ನಮೂನೆ ನೋಡುತ್ತಾನೆ. ಬೆನ್ನಿನ ಮೇಲೆ ಕೈಯಾಡಿಸಿ ಕಣ್ಣಲ್ಲಿ ಕಣ್ಣಿಟ್ಟರೆ ನಕ್ಕಂತೆ ಭಾಸವಾಗುತ್ತದೆ” ಎಂದು ಹೇಳಿ ಮಾಯಿ ಗಂಗಾಧರನ ಪೈಜಾಮ, ಅಂಗಿಯೊಂದನ್ನು ಚೀಲದಲ್ಲಿ ಹಾಕಿಕೊಂಡಳು. “ನಾನು ಅಲ್ಲಿ ಈವತ್ತು ಇದ್ದಿರದಿದ್ದರೆ, ಹೊಸ ಎಡ್ಮಿಷನ್ಗೆ ಜಾಗ ಇಲ್ಲ ಎಂದು ಅವನನ್ನು ಹಾಗೇ ಡಿಸ್ಛಾರ್ಜ್ ಮಾಡುತ್ತಿದ್ದರೋ ಏನೋ. ಗೋರಿಯಂಥ ಈ ಶಹರದಲ್ಲಿ ಎಲ್ಲಿ ಹೋಗಬೇಕು ಆ ಕಂದ” ಎಂದವಳು “ನೋಡು ಸಂತ್ರಸ್ತರಿಗಾಗಿ ಬಟ್ಟೆಬರೆ ಕೇಳುವವರು ಬಂದರೆ ಮೀನ-ಮೇಷ ಮಾಡುತ್ತ ಕೂರಬೇಡ. ಹರಕು ಬಟ್ಟೆ ಕೊಡಬೇಡ. ನಿನ್ನ ಅಪ್ಪನ ಮದುವೆಯ ಕೋಟು ಇದೆ ನೋಡು. ಗಟ್ಟಿಮುಟ್ಟಾಗಿದೆ. ಅದನ್ನೂ ಕೊಡು. ಚಳಿಗೆ ಯಾರಿಗಾದರೂ ಪ್ರಯೋಜನಕ್ಕೆ ಬಂದೀತು. ನನ್ನ ಸೀರೆಗಳು ಇಲ್ಲಿವೆ” ಎಂದು ತೋರಿಸಿ ಹೊರಬಿದ್ದು ಹೋದಳು. ಆ ರಾತ್ರಿ ಮಾಯಿ ಮನೆಗೆ ಬರಲಿಲ್ಲ. ಗಂಗಾಧರ ಒಂದೊಂದಾಗೇ ಮನೆಯ ಉಡುಪುಗಳನ್ನು ಸಂತ್ರಸ್ತರಿಗೆಂದು ತೆಗೆದಿಟ್ಟ. ಕಪಾಟಿನಿಂದ ಅಪ್ಪನ ಉಡುಪು ತೆಗೆದು ಇಡುತ್ತಿದ್ದಂತೆ ಅವುಗಳಿಗೆಲ್ಲ ಹೊಸ ಜೀವ ಬಂದಂತೆ ಅವನಿಗೆ ಭಾಸವಾಯಿತು. ನಿದ್ದೆಗೆಂದು ಅಡ್ಡಾದರೆ ಪೇಷಂಟ್ ನಂಬರ್ 2132 ಕಣ್ಣೆದುರು ಮೂಡತೊಡಗಿತು. ಎಲ್ಲ ಕೋಮು ವಿಳಾಸ ತೂಕ ವಯಸ್ಸು ಹೆಸರು ಅಡ್ಡಹೆಸರು ಕಳೆದುಕೊಂಡು ಮತ್ತೆ ಶುದ್ಧ ಮನುಷ್ಯಶಿಶುವಾಗಿರುವ ಈ 2132ನನ್ನು ಮಾಯಿ ಹಾಸಿಗೆಯ ಮೇಲೆ ಕೂಡ್ರಿಸಿ ಉಣ್ಣಿಸುತ್ತಿದ್ದಾಳೆ. ಹಟವೂ ಗೊತ್ತಿರದ ಅವನು ಪಿಳಿಪಳಿ ನೋಡುತ್ತ ಗುಳುಕ್ ಗುಳುಕ್ಎಂದು ಗಂಜಿ ನುಂಗುತ್ತಿದ್ದಾನೆ. ಅವನ ತುಟಿಯ ಬದಿಯಿಂದ ಒಂದು ಬಗೆಯ ಸಿಪ್ಪೆಯಂಥ ನಗು ಜಾರಿ ಬೀಳುತ್ತಿದೆ. ಅವನು ಗಂಗಾಧರನ ನೀಲಿ ಅಂಗಿ ಹಾಕಿಕೊಂಡಿದ್ದಾನೆ.
ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ
ಗಂಗಾಧರನಿಗೆ ಎಂದು ಬೆಳಗಾಗುವುದೋ ಎಂದು ಅಂಗಡಿ ತೆರೆಯುವೆನೋ ಎಂದು ಆ ಫೋಟೋ ಬೇಡುವ ಹುಡುಗನನ್ನು ಕಾಣುವೆನೋ ಎಂಬ ತೀವ್ರ ಉತ್ಸುಕತೆ ಆಯಿತು. ಬೆಳಿಗ್ಗೆ ಎದ್ದವನೇ ಸಂತ್ರಸ್ತರಿಗಾಗೆಂದು ಕಟ್ಟಿದ ಉಡುಪಿನ ಮೂಟೆಯನ್ನು ಪಕ್ಕದ ಮನೆಯಲ್ಲಿ ಇಟ್ಟು ಓಟದ ನಡಿಗೆಯಲ್ಲಿ ಅಂಗಡಿ ತಲುಪಿದ. ರಾತ್ರಿಯಿಂದಲೇ ಅಲ್ಲಿದ್ದವನಂತೆ ಆ ಹುಡುಗ ಅಲ್ಲೇ ಕಾದಿದ್ದ. ಅವಸರದಲ್ಲಿ ಬಾಗಿಲು ತೆಗೆದ ಗಂಗಾಧರ ಅವನು ನೋಡುತ್ತಿದ್ದಂತೆಯೇ ಸ್ಟೂಲು ಹತ್ತಿದ. ಅಪ್ಪನ ಫೋಟೋದ ಮಾಲೆಗಳನ್ನು ತೆಗೆದ ಮತ್ತು ಅತ್ಯಂತ ಸಹಜವಾಗಿ ಆ ಫೋಟೋ ಮೊಳೆಯಿಂದ ತೆಗೆದು ಕೆಳಗಿಳಿದು ಕಾಗದದಲ್ಲಿ ಸುತ್ತಿ ಹುಡುಗನ ಕೈಗಿತ್ತ. ನಿಧಿ ಸಿಕ್ಕಿದವನಂತೆ ಹುಡುಗ “ಇಷ್ಟು ಸಿಕ್ಕರೆ ಸಾಕು ಸರ್, ಅಮ್ಮ ಇದ್ದೇ ಇರ್ತಾಳೆ ಅಂತ ಯಾರಿಗಾದರೂ ಅರ್ಥ ಆಗುತ್ತದೆ. ಅಷ್ಟು ಅಂಡರ್ಸ್ಟಾಂಡಿಂಗ್ ಇರಬೇಕಲ್ಲ…” ಎಂದು ತೊದಲಿ ಗಂಗಾಧರನ ಕೈಕುಲುಕಿ ಶರವೇಗದಲ್ಲಿ ಓಡಿಹೋದ.
(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಜಯಂತ ಕಾಯ್ಕಿಣಿ (1955): ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತರು ಎಂ.ಎಸ್ಸಿ. ಬಯೋಕೆಮಿಸ್ಟ್ರಿ ಓದಿ ಮುಂಬಯಿಯ ಫಾರ್ಮಸ್ಯೂಟಿಕಲ್ ಕಂಪನಿಯೊಂದರಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದರು. ಅವರ ತಂದೆ ಕನ್ನಡದ ಹಿರಿಯ ಮಾನವತಾವಾದಿ ಸಾಹಿತಿ ಗೌರೀಶ ಕಾಯ್ಕಿಣಿ. ಕವಿ, ಕತೆಗಾರ, ನಾಟಕಕಾರ, ಅಂಕಣ/ ಪ್ರಬಂಧಕಾರರಾಗಿ ಓದುಗರಿಗೆ ಪರಿಚಿತರಾಗಿದ್ದ ಜಯಂತರು 2006ರ ಈಚೆಗೆ ಕನ್ನಡ ಚಿತ್ರ ಗೀತರಚನೆಕಾರರಾಗಿ ಹೆಸರಾಗಿದ್ದಾರೆ. ಈಟಿವಿಯಲ್ಲಿ ನಾಡಿನ ಶ್ರೇಷ್ಠರನ್ನು ಪರಿಚಯಿಸಿಕೊಡುವ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈಟಿವಿ ವಾಹಿನಿಯ ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ಎಸ್ ಪಿ ಬಿ ಅವರ “ಎದೆ ತುಂಬಿ..” ವೇದಿಕೆಯ ಸ್ಪಂದಕರಾಗಿ, “ಭಾವನಾ” ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳು: ಕಥಾಸಂಕಲನ: ತೆರೆದಷ್ಟೇ ಬಾಗಿಲು (1982), ದಗಡೂ ಪರಬನ ಅಶ್ವಮೇಧ (1989), ಅಮೃತಬಳ್ಳಿ ಕಷಾಯ (1996), ಬಣ್ಣದ ಕಾಲು (1999), ತೂಫಾನ್ ಮೇಲ್ (2005), ಚಾರ್ ಮಿನಾರ್ (2012), ನೋ ಪ್ರೆಸೆಂಟ್ಸ್ ಪ್ಲೀಸ್ (2018), ಅನಾರ್ಕಲಿಯ ಸೇಫ್ಟಿಪಿನ್ (2021). ಕವನ ಸಂಕಲನ: ರಂಗದಿಂದೊಂದಿಷ್ಟು ದೂರ (1974), ಕೋಟಿತೀರ್ಥ (1982), ಶ್ರಾವಣ ಮಧ್ಯಾಹ್ನ (1987), ನೀಲಿಮಳೆ (1997), ಒಂದು ಜಿಲೇಬಿ (2008), ವಿಚಿತ್ರ ಸೇನನ ವೈಖರಿ(2021), ಎಲ್ಲೋ ಮಳೆಯಾಗಿದೆ -ಚಿತ್ರ ಗೀತೆ (2012 ). ಅಂಕಣ ಬರಹ: ಬೊಗಸೆಯಲ್ಲಿ ಮಳೆ (2001), ಶಬ್ದ ತೀರ (2004), ಟೂರಿಂಗ್ ಟಾಕೀಸ್ (2009), ಗುಲ್ ಮೊಹರ್ (2018), ತಾರಿ ದಂಡೆ (2024). ನಾಟಕ: ಸೇವಂತಿ ಪ್ರಸಂಗ (1997), ಜತೆಗಿರುವನು ಚಂದಿರ (2004), ಅಂಕದ ಪರದೆ ( 2025). ತಮ್ಮ ಕವನ ಮತ್ತು ಕಥಾ ಸಂಕಲನಗಳಿಗೆ ನಾಲ್ಕು ಬಾರಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು, ಗೀತರಚನೆಗಾಗಿ ಐದು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ತೇಜಸ್ವಿನಿ ನಿರಂಜನ ಅನುವಾದಿಸಿರುವ ಇವರ ಆಯ್ದ ಮುಂಬೈ ಕೇಂದ್ರಿತ ಕಥೆಗಳ “ನೋ ಪ್ರೆಸೆಂಟ್ಸ್ ಪ್ಲೀಸ್” ಕೃತಿಗೆ 2018ರ ಅಂತಾರಾಷ್ಟ್ರೀಯ ಡಿ ಎಸ್ ಸಿ ಪುರಸ್ಕಾರ ಬಂದಿದೆ. 2000ರಿಂದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.





