ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಹನುಮವ್ವ ತಾನು ದುಡಿದ ಕೂಲಿ ಕುಂಬಳಿಯಲ್ಲಿಯೇ ಇಬ್ಬರೂ ಗಂಡುಮಕ್ಕಳನ್ನು ಮ್ಯಾಟ್ರಿಕ್‌ವರೆಗೆ ಓದಿಸಿದ್ದಳು. ಒಬ್ಬನು ಯಲಗುರದಪ್ಪ, ಇನ್ನೊಬ್ಬವ ಲಕ್ಷ್ಮಣ. ಲಕ್ಷ್ಮಣ ಅಭ್ಯಾಸದಲ್ಲಿ ಚೂಟಿಯಾಗಿದ್ದ. ಯಲಗುರದಪ್ಪನಿಗೆ ಊಟದ ಕಡೆ ಒಲವು. ಊರಲ್ಲಿಯೇ ಅನ್ನದಾನ ಸ್ವಾಮಿಗಳ ಶಾಲೆ. ಓದಿಸುವುದಕ್ಕೆ ತೊಂದರೆಯಾಗಲಿಲ್ಲ. ಲಕ್ಷ್ಮಣ ಸರಕಾರದವರು ಕರೆದ ಎರಡನೇ ದರ್ಜೆಯ ಕಾರಕೂನ ಜಾಗೆಗೆ ಅರ್ಜಿ ಹಾಕಿ ಆಯ್ಕೆಯಾದ. ಯಲಗುರದಪ್ಪ ಬಹಳ ಕಷ್ಟಪಟ್ಟು ಡ್ರೈವರ್ ಲೈಸನ್ಸ್ ಪಡೆದ. ನೌಕರಿ ಕೊಡಿಸುವ ಮಧ್ಯವರ್ತಿಯೊಬ್ಬನನ್ನು ಹಿಡಿದುಕೊಂಡು ಡ್ರೈವರ್ ಆಗಿ ಆಯ್ಕೆಯಾದ. ಹನುಮವ್ವ ಮಕ್ಕಳ ಮದುವೆಯನ್ನು ಮಾಡಿದಳು. ಸೊಸೆಯಂದಿರು ಅಷ್ಟೇನೂ ಕಲಿತಿರಲಿಲ್ಲ. ಲಕ್ಷ್ಮಣನ ಹೆಂಡತಿ ಮ್ಯಾಟ್ರಿಕ್‌ವರೆಗೆ ಹಳ್ಳಿಯ ಶಾಲೆಯಲ್ಲಿ ಓದಿದ್ದಳು. ಯಲಗುರದಪ್ಪನ ಹೆಂಡತಿ ಆರನೇ ತರಗತಿಯವರೆಗೆ ಓದಿ ಶಾಲೆ ಬಿಟ್ಟಿದ್ದಳು. ನೌಕರದಾರ ಅಳಿಯರೆಂದು ಬೀಗರು ಉಂಗುರ, ಚೈನು, ಬಟ್ಟೆ ಹಾಗೂ ತುಸು ಕಾಸನ್ನೂ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ಇಬ್ಬರು ಮಕ್ಕಳಿಗೂ ಹುಬ್ಬಳ್ಳಿಗೆ ನೇಮಕಾತಿಯಾಗಿತ್ತು. ಹುಬ್ಬಳ್ಳಿಯ ಒಂದು ಚಾಳದಲ್ಲಿ ಮೂರು ಕೋಣೆಯ ಮನೆ ತೆಗೆದುಕೊಂಡು ಸಂಸಾರ ಹೂಡಿದರು. ಚಾಳದ ಸುತ್ತಲೂ ಕಂಪೌಂಡು, ಒಳಗಡೆ ಬಾವಿ, ಎಲ್ಲ ಅನುಕೂಲಗಳು ಇದ್ದವು.

- Advertisement -

ಮಕ್ಕಳಿಬ್ಬರಿಗೂ ನೌಕರಿಯಾಯ್ತು, ಮದುವೆಯಾಯ್ತು, ಇನ್ನು ಹನುಮವ್ವನನ್ನು ಹಿಡಿಯುವವರ್‍ಯಾರು ಎಂದು ಊರಲ್ಲಿ ಎಲ್ಲರೂ ಹನುಮವ್ವನನ್ನು ಹೊಗಳುವವರೇ. ಮಕ್ಕಳು ಮೆಟ್ಟಿಗೆ ಹತ್ತಿದ್ದು, ಮದುವೆಯಾದದ್ದು, ಮುದುಕಿಗೆ ಸಂತೋಷ ತಂದಿತ್ತು. ದೇವರು ಕೊನೆಗೂ ಕೈ ಬಿಡಲಿಲ್ಲ ಎಂದು ಕೃತಜ್ಞಳಾಗಿದ್ದಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

ಹುಬ್ಬಳ್ಳಿಯಲ್ಲಿ ಸಂಸಾರ ಸರಿಯಾಗಿಯೇ ನಡೆದಿತ್ತು. ಲಕ್ಷ್ಮಣ ತಾನು ತನ್ನ ಕೆಲಸಕ್ಕೆ ಹೋಗುತ್ತಿದ್ದ. ಕಚೇರಿ ಕೆಲಸ ಮುಗಿದ ತಕ್ಷಣ ಮನೆಗೆ ಬಂದು, ಮನೆಯಲ್ಲಿಯೂ ಕೂಡ ಕಚೇರಿಯ ಕೆಲಸ ಉಳಿದಿದ್ದರೆ ನೀಟಾಗಿ ಕುಳಿತು ಮಾಡುತ್ತಿದ್ದ. ಯಲಗುರದಪ್ಪನ ಡ್ಯೂಟಿ ಕೆಲವು ಸಲ ಹಗಲಿನಲ್ಲಿ, ಕೆಲವು ಸಲ ರಾತ್ರಿಯಲ್ಲಿ ಇರುತ್ತಿತ್ತು. ಅವನಿಗೆ ಹೀಗೆಯೇ ಎಂದು ನಿಗದಿಪಡಿಸಿದ ವೇಳೆ ಇರಲಿಲ್ಲ. ಇಬ್ಬರ ಹೆಂಡಂದಿರೂ ಒಬ್ಬರಿಗೊಬ್ಬರು ಆಸರೆಯಾದಂತೆ ಅಡಿಗೆ ಕೆಲಸ ಮಾಡುತ್ತಿದ್ದರು. ಒಬ್ಬರು ಮತ್ತೊಬ್ಬರಿಗೆ ಹೇಳಿಸಿಕೊಳ್ಳದ ರೀತಿಯಲ್ಲಿ ಅಣ್ಣ ತಮ್ಮಂದಿರಿಬ್ಬರೂ ಮನೆಯ ಸಾಮಾನುಗಳನ್ನು ತರುತ್ತಿದ್ದರು. ಯಲಗುರದಪ್ಪ ಹಳ್ಳಿಯ ಡ್ಯೂಟಿಗೆ ಹೋಗಿದ್ದರೆ ಅಲ್ಲಿ ಸಿಗುವ ತಾಜಾ ಕಾಯಿಪಲ್ಯ, ಹಣ್ಣು ಹಂಪಲ ತರುತ್ತಿದ್ದ. ಲಕ್ಷ್ಮಣ ಪೇಟೆಯ ಸಾಮಾನು ತರುತ್ತಿದ್ದ. ಲೆಕ್ಕ ಇಡದಿದ್ದರೂ ಮನೆಯ ಸಲುವಾಗಿ ಇಬ್ಬರೂ ಸಮಸಮವಾಗಿ ಸಾಮಾನುಗಳನ್ನು ತರುತ್ತಿದ್ದರು. ಸೂಟಿಯ ದಿನ ತಮ್ಮ ತಮ್ಮ ಹೆಂಡಂದಿರನ್ನು ಪೇಟೆಗೋ, ಸಿನೇಮಾಕ್ಕೋ ಕರೆದುಕೊಂಡು ಹೋಗುತ್ತಿದ್ದರು

ಯಲಗುರದಪ್ಪನ ಹೆಂಡತಿಗೆ ಪೌಡರು, ರಿಬ್ಬನ್ನು ಕೊಂಡುಕೊಳ್ಳುವ ಚಟ ಬಹಳ ಇತ್ತು. ಸ್ನಾನವಾದ ತಕ್ಷಣ ಮುಖಕ್ಕೆ ಕೈತುಂಬ ಪೌಡರು ಹಾಕಿ ಹಚ್ಚಿಕೊಳ್ಳುತ್ತಿದ್ದಳು. ಬಣ್ಣ ಬಣ್ಣದ ರಿಬ್ಬನ್ ಕಟ್ಟಿಕೊಳ್ಳುವದೆಂದರೆ ಎಲ್ಲಿಲ್ಲದ ಖುಷಿ. ಕಣ್ಣಿಗೆ ಕಾಡಿಗೆ, ಹಣೆಯಲ್ಲಿ ದೊಡ್ಡದಾದ ಬಿಂದಿ, ತಲೆಗೆ ಸಾಕಷ್ಟು ಕೊಬ್ಬರಿ ಎಣ್ಣೆ ಹಾಕಿ ಬೈತಲೆ ತೆಗೆದುಕೊಳ್ಳುವುದು ದಿನನಿತ್ಯದ ರೂಢಿಯಾಗಿತ್ತು. ದಿನದಲ್ಲಿ ಐದಾರು ಸಲವಾದರೂ ಕನ್ನಡಿ ಮುಂದೆ ನಿಂತು ಮುಖ ನೋಡಿಕೊಳ್ಳುವುದು ಆಕೆಗೆ ಸಂತೋಷ ತರುತ್ತಿತ್ತು. ಇಷ್ಟೆಲ್ಲಾ ಶೃಂಗರಿಸಿಕೊಳ್ಳುವ ಹೆಂಡತಿಯನ್ನು ನೋಡಿ ಯಲಗುರದಪ್ಪನಿಗೆ ಸಿನಿಮಾ ನಟಿಯನ್ನೇ ಮದುವೆಯಾದಂತೆನಿಸಿತ್ತು. ಮನೆಯಲ್ಲಿದ್ದಾಗ ಹೆಂಡತಿಯ ಹತ್ತಿರವೇ ಬಹಳ ಹೊತ್ತು ಕಾಲ ಕಳೆಯುತ್ತಿದ್ದ. ಆಕೆ ಗಂಡನನ್ನು ಕಣ್ಣು, ಮೂಗಿನ ಬೆದರಿಕೆಯಲ್ಲಿಟ್ಟುಕೊಳ್ಳಲು ಸಾವಕಾಶವಾಗಿ ಪ್ರಯತ್ನಿಸುತ್ತಿದ್ದಳು.

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಲಕ್ಷ್ಮಣ ಅರ್ಧ ಸನ್ಯಾಸಿಯ ರೀತಿಯಲ್ಲಿ ಇದ್ದ. ಯಾವಾಗಲೂ ಪೂಜೆ ಮಾಡುವವನಂತೆ ನೀಟಾಗಿ ಇರುತ್ತಿದ್ದ. ಮನೆಗೆ ಬಂದರೂ ಉಳಿದ ಕಚೇರಿಯ ಕೆಲಸ ಮಾಡುವದರಲ್ಲಿಯೇ ವೇಳೆ ಕಳೆಯುತ್ತಿದ್ದ. ಹೆಂಡತಿಯೊಡನೆ ಸಲುಗೆಯಿಂದ ಮಾತನಾಡಿದ್ದಾಗಲಿ ಖುಷಿಯಲ್ಲಿ ನಕ್ಕಿದ್ದಾಗಲಿ ಇಲ್ಲ. ಮನೆಗೆ ಬಂದು ಲುಂಗಿ ಹಚ್ಚಿಕೊಂಡು ಬನಿಯನ್ ಮೇಲೆಯೇ ಮೊದಲಿನ ಕೋಣೆಯಲ್ಲಿ ಬರೆಯಲು ಕೂಡುತ್ತಿದ್ದ. ಹೆಂಡತಿ ಅಲ್ಲಿಯೇ ಅಕ್ಕಿಯೊಳಗಿನ ಹರಳು ಆರಿಸುತ್ತಿದ್ದರೂ ಕಣ್ಣೆತ್ತಿ ನೋಡುತ್ತಿರಲಿಲ್ಲ.

ಹನುಮವ್ವ ಮುದುಕಿ ಮಕ್ಕಳು, ಸೊಸೆಯಂದಿರು ಹೇಗಿದ್ದಾರೆಂದು ನೋಡಿಕೊಂಡು ಹೋಗಲು ಒಂದು ದೊಡ್ಡ ಚೀಲದಲ್ಲಿ ಜೋಳ, ಹೆಸರು, ತೊಗರಿಬೇಳೆ ಕಟ್ಟಿಕೊಂಡು ಹುಬ್ಬಳ್ಳಿಗೆ ಬಂದಳು. ಉಂಡಿ, ಕರದಂಟು ಕಟ್ಟಿಸಿದ್ದಳು. ದೇವರು ಬೇಗ ಕಣ್ಣು ತೆಗೆಯಬಹುದು, ಮೊಮ್ಮಕ್ಕಳಾಗಬಹುದೆಂದು ಕನಸು ಕಾಣುತ್ತಿದ್ದಳು.

ಅವ್ವ ಮನೆಗೆ ಬಂದದ್ದನ್ನು ನೋಡಿ ಇಬ್ಬರೂ ಮಕ್ಕಳು ಖುಷಿಯಾಗಿದ್ದರು. ಸೊಸೆಯಂದಿರು ಗೆಲುವಾಗಿದ್ದರು. ಮುದುಕಿಗೆ ನಾಲೈದು ತಿಂಗಳು ಇಲ್ಲಿಯೇ ನಿಂತು ಹೋಗಬೇಕೆಂದು ಒತ್ತಾಯಿಸಿದರು. ಮುದುಕಿ ಏನೂ ಮಾತನಾಡಲಿಲ್ಲ. ಸಂತೋಷದಿಂದಿರುವ ಮಕ್ಕಳ ಮಧ್ಯೆ ಇರುವದೆಂದರೆ ಬೆಳದಿಂಗಳಲ್ಲಿ ಕಟ್ಟೆಯ ಮೇಲೆ ಕುಳಿತ ಹಾಗೆ. ಮೌನದಲ್ಲಿಯೇ ಆ ಸುಖ ಅನುಭವಿಸಿದಳು.

ಕಾಲ ಉರುಳುತ್ತಿತ್ತು. ಸಂಬಳ ಕೈಗೆ ಬರಲಾರಂಭಿಸಿ ಆಗಲೇ ತಿಂಗಳುಗಳು ಕಳೆದಿದ್ದವು. ಈಗಾಗಲೇ ಇಬ್ಬರು ಮಕ್ಕಳು ಹಣ ಎಣಿಸುವಲ್ಲಿ ನಿಷ್ಣಾತರಾಗಿದ್ದರು. ಸೊಸೆಯಂದಿರಿಗೂ ಸಂಬಳದ ದಿನ ವಿಶೇಷ ಹಬ್ಬದ ದಿನವಾಗಿತ್ತು. ಗಂಡಂದಿರು ತಂದ ಸಂಬಳದ ಹಣದ ಮೇಲೆ ಕೈಯಾಡಿಸಿದಾಗ ಅಲ್ಲಿಯ ನವಿರಾದ ಬಿಸಿ ಅವರನ್ನು ರೋಮಾಂಚನಗೊಳಿಸುತ್ತಿತ್ತು. ಈಗ ಇಬ್ಬರೂ ಮುಂದೆ ಬರುವ ಮಕ್ಕಳಿಗಾಗಿ, ಸ್ವಂತದ ಮನೆ ಕಟ್ಟಿಸುವುದಕ್ಕಾಗಿ, ನಿವೃತ್ತಿಯಾದ ಮೇಲೆ ಸರಿಯಾಗಿ ಬದುಕುವದಕ್ಕಾಗಿ ಪಗಾರದಲ್ಲಿ ಪ್ರಾವಿಡಂಟು ಫಂಡು, ಜೀವವಿಮೆ, ಫ್ಯಾಮಿಲಿ ಬೆನಿಫಿಟ್ ಫಂಡ್ ಅಂತ ಹಲವಾರು ಯೋಜನೆಗಳಿಗಾಗಿ ಹಣ ಮುರಿಯಲಾರಂಭಿಸಿದರು. ಯಲಗುರದಪ್ಪನ ಹೆಂಡತಿ ಚೀಟಿ ಕಟ್ಟಲು ಪ್ರಾರಂಭಿಸಿದಳು. ಮನೆತನ ನಡೆಸುವುದಕ್ಕೆ ಖರ್ಚು ಮಾಡಲು ಹಿಂದೆ ಮುಂದೆ ನೋಡಹತ್ತಿದರು. ಹೆಂಡತಿಯರ ಜೊತೆ ತಮ್ಮ ತಮ್ಮ ಕೋಣೆಯಲ್ಲಿ ರಹಸ್ಯ ಮಾತುಕತೆ ಪ್ರಾರಂಭವಾಯ್ತು. ಒಬ್ಬರು ಮತ್ತೊಬ್ಬರನ್ನು ಕಳ್ಳರಂತೆ ನೋಡಲು ಪ್ರಾರಂಭಿಸಿದರು. ಹನುಮವ್ವ ಮುದುಕಿ ಎಲ್ಲವನ್ನೂ ಸುಮ್ಮನೇ ಗಮನಿಸುತ್ತಿದ್ದಳು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಒಂದು ತಿಂಗಳು ಪಗಾರಾದ ಮರುದಿನ ಯಲಗುರದಪ್ಪ ಹೊಸದಾದ ಆರಾಮ ಕುರ್ಚಿಯೊಂದನ್ನು ಖರೀದಿ ಮಾಡಿಕೊಂಡು ಬಂದ. ಎಲ್ಲರೂ ವಹಿವಾಟು ಮಾಡುವ ಮನೆಯ ಮೊದಲಿನ ಕೋಣೆಯಲ್ಲಿಯೇ ಬಿಚ್ಚಿ ಇಟ್ಟ. ಆರಾಮ ಕುರ್ಚಿಯ ಮೇಲೆ ತಾಸುಗಟ್ಟಲೆ ಕುಳಿತು ಸುಖಪಟ್ಟ. ಆ ಮನೆಯಲ್ಲಿ ಇದು ಐಷಾರಾಮಿನ ಮೊದಲನೇ ವಸ್ತುವಾಗಿತ್ತು. ಎಲ್ಲರಿಗೂ ಕೂಡುವ ಆಶೆ ಆಯ್ತು. ಯಲಗುರದಪ್ಪ ಕುಳಿತು ಎದ್ದೊಡನೆ ಅವನ ಹೆಂಡತಿ ಪಾಳೆ ಹಚ್ಚಿದಂತೆ ಕುರ್ಚಿಯಲ್ಲಿ ಕುಳಿತಳು. ಆ ಕುರ್ಚಿಯಲ್ಲಿ ಕುಳಿತಾಗ ಸಲೀಸಾಗಿ ಬಿಚ್ಚಿಕೊಳ್ಳುವ ಅವಯವಗಳ ಪರಿ ನೋಡಿ ಬಹಳ ಖುಷಿಯಾಯ್ತು. ಒಂದೊಂದು ಅಂಗಾಂಗವೂ ಅವಳಿಗೆ ಹೇಳಿ ಹೇಳಿ ಆರಾಮು ಮಾಡುತ್ತಿದ್ದಂತೆ ದಿವ್ಯ ಅನುಭವವಾಯ್ತು. ಆರಾಮ ಕುರ್ಚಿಯಲ್ಲಿ ಕುಳಿತು, ಕಣ್ಣು ಮುಚ್ಚಿ ಎಲ್ಲಾ ಮರೆಯಬಹುದಾಗಿತ್ತು.

ಮನೆಯಲ್ಲಿಯ ಹೊಸ ವಸ್ತುವಿನ ಆಗಮನ ಎಲ್ಲರಲ್ಲಿ ಕುತೂಹಲ, ಪೈಪೋಟಿ ಹುಟ್ಟಿಸಿತ್ತು. ಯಲಗುರದಪ್ಪ ಕೆಲಸಕ್ಕೆ ಹೋದಾಗ, ಅವನ ಹೆಂಡತಿ ಬೇರೆ ಕೆಲಸದಲ್ಲಿ ತೊಡಗಿದಾಗ ಲಕ್ಷ್ಮಣನ ಹೆಂಡತಿ ಸಾವಕಾಶವಾಗಿ, ಯಾರಿಗೂ ಗೊತ್ತಾಗದಂತೆ ಬಂದು ಕೂಡುತ್ತಿದ್ದಳು. ಆಕೆಗಂತೂ ತೊಟ್ಟಿಲಲ್ಲಿ ಕುಳಿತು ತೂಗಿಸಿಕೊಂಡಂತಾಗುತ್ತಿತ್ತು. ರೊಟ್ಟಿ ಬಡೆದು ನೋವಾಗಿದ್ದ ಬೆನ್ನಿಗೆ ಆರಾಮ ಕುರ್ಚಿಯಲ್ಲಿ ಕುಳಿತಾಗ ಸಿಗುತ್ತಿದ್ದ ವಿಶ್ರಾಂತಿ ಸುಖವಾದ ನಿದ್ರೆಗೆ ಎಳೆಯುತ್ತಿತ್ತು.

ಇದನ್ನೆಲ್ಲ ಗುಟ್ಟಾಗಿಯೇ ನೋಡುತ್ತಿದ್ದ ಹನುಮವ್ವ ಮುದುಕಿಗೆ ಆರಾಮ ಕುರ್ಚಿಯಲ್ಲಿ ಕೂಡುವ ಬಯಕೆಯಾಯ್ತು. ಸೊಸೆಯಂದಿರು, ಮಕ್ಕಳು ಇರಲಾರದ ವೇಳೆ ನೋಡಿ ಆರಾಮ ಕುರ್ಚಿಯಲ್ಲಿ ಕುಳಿತಳು. ಮಡಿಚಿಟ್ಟ ಚಾಪೆಯನ್ನು ಬಿಚ್ಚಿ ಹಾಸಿದಂತೆ ಸುಖಪಟ್ಟಳು. ವಯಸ್ಸಾಗಿದ್ದ ದೇಹದ ಮೂಲೆ ಮೂಲೆಯೂ ಪದ ಹಾಡುತ್ತಿತ್ತು. ದೇಹದ ಸಂದು ಸಂದುಗಳಲ್ಲಿನ ನೋವು ಮಾಯವಾಗಿತ್ತು.

ಈ ಬಗ್ಗೆ ಲಕ್ಷ್ಮಣ ಬಹಳ ತಲೆ ಕೆಡಿಸಿಕೊಳ್ಳದಿದ್ದರೂ, ಎಲ್ಲರ ಎದುರಿಗೆ ಗಂಭೀರವಾಗಿಯೇ ಕುರ್ಚಿಯಲ್ಲಿ ಕುಳಿತು, ಎದ್ದು ಬರುತ್ತಿದ್ದ.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಆರಾಮ ಕುರ್ಚಿ ಮನೆಗೆ ಬಂದಾಗಿನಿಂದ ಮನೆಯ ಶಾಂತಿಯೇ ಕದಡಿ ಹೋಗಿತ್ತು. ಕುರ್ಚಿಯ ಮೇಲೆ ಕೂಡ್ರುವ ಪೈಪೋಟಿ ದಿನೇ ದಿನೇ ಬೆಳೆಯುತ್ತಾ ಹೋಯ್ತು. ಆರಾಮ ಕುರ್ಚಿ ಯಲಗುರದಪ್ಪನ ಆಸ್ತಿ, ಅವನಿಗೆ ಹಾಗೂ ಅವನ ಹೆಂಡತಿಗೆ ಮಾತ್ರ ಅದರಲ್ಲಿ ಕೂಡ್ರುವ ಹಕ್ಕಿದೆ ಎನ್ನುವಂತೆ ಗಂಡ ಹೆಂಡತಿ ಬಹಿರಂಗವಾಗಿ ವ್ಯಕ್ತ ಮಾಡಹತ್ತಿದರು. ಲಕ್ಷ್ಮಣನ ಹೆಂಡತಿ, ಯಲಗುರದಪ್ಪನ ಹೆಂಡತಿ ನಡುವೆ ವಿಪರೀತ ಸಂಶಯ ಬೆಳೆಯಲಾರಂಭಿಸಿತು. ಸುಖವಾಗಿದ್ದ ಮನೆಯಲ್ಲಿ ಹೆಜ್ಜೆಗೊಂದು ಗೋಡೆ ಎದ್ದು ನಿಂತಂತೆ ಅನಿಸಿತು. ಇದನ್ನೆಲ್ಲ ನೋಡಿ ಹನುಮವ್ವ ಮುದುಕಿ ಭಯಪಡಹತ್ತಿದಳು. ಸೊಸೆಯಂದಿರು ಒಬ್ಬರ ಮೇಲೆ ಒಬ್ಬರು ಹಾಕಿ ಬಯ್ಯುವದು, ಗಂಡಂದಿರನ್ನು ತಮ್ಮ ತಮ್ಮ ಕೋಣೆಗಳಲ್ಲಿ ಬಂದಿಯಾಗಿ ಇಟ್ಟಿರುವುದು, ಹನುಮವ್ವ ಮುದುಕಿಯನ್ನು ಒಬ್ಬಂಟಿಯಾಗಿ ಮಾಡಿತು. ಯಲಗುರದಪ್ಪನ ಹೆಂಡತಿ ಒಂದೊಂದು ದಿನ ಆರಾಮ ಕುರ್ಚಿಯಲ್ಲಿ ಕುಳಿತವಳು ಮೇಲೆಯೇ ಏಳುತ್ತಿರಲಿಲ್ಲ. ಲಕ್ಷ್ಮಣನ ಹೆಂಡತಿ ಪರೋಕ್ಷವಾಗಿ ಮೂದಲಿಸುತ್ತಿದ್ದಳು. ಯಲಗುರದಪ್ಪನ ಹೆಂಡತಿ ಕೇಳಿಯೂ ಕೇಳದವರಂತೆ ಕುರ್ಚಿಯಲ್ಲಿ ಕಣ್ಣುಮುಚ್ಚಿ ಕುಳಿತು ಸುಖಿಸುತ್ತಿದ್ದಳು.

ಈ ಕುರ್ಚಿಯ ಸಂಬಂಧವಾಗಿ ಮನೆಯಲ್ಲಿ ಈಗ ಬಹಿರಂಗವಾಗಿಯೇ ಜಗಳ ಪ್ರಾರಂಭವಾಗಹತ್ತಿತು. ತಾಯಿ ನಡುವೆಯಾಗಿ ಜಗಳ ಬಗೆಹರಿಸುತ್ತಿದ್ದಳು. ಶಾಂತಿಯಾಗುತ್ತಿದ್ದಂತೆಯೇ ಜಗಳ ಭುಗಿಲ್ಲೆನ್ನುತ್ತಿತ್ತು. ಇಬ್ಬರೂ ಗಂಡಂದಿರು ಮಜ್ಜಿಗೆ ಕಡಿಯುವ ಕಡಗೋಲಿಗೆ ಸುತ್ತಿದ ನೂಲಿನ ಹಗ್ಗವಾಗಿ ಬಿಟ್ಟಿದ್ದರು. ಹೆಂಡಂದಿರು ಎಳೆದ ಕಡೆ ಸರಿಯುತ್ತಿದ್ದರು.

ಒಂದು ದಿನ ಸೋಮವಾರ ಸಾಯಂಕಾಲ ಯಲಗುರದಪ್ಪ, ಲಕ್ಷ್ಮಣ ಮನೆಗೆ ಬರುವದರೊಳಗಾಗಿ ಅನಾಹುತ ನಡೆದುಹೋಗಿತ್ತು. ಯಲಗುರದಪ್ಪನ ಹೆಂಡತಿ ತನ್ನ ಕೋಣೆಯಲ್ಲಿ ಕುಳಿತು ಅಳುತ್ತಿದ್ದಳು. ಲಕ್ಷ್ಮಣನ ಹೆಂಡತಿ ಏನೂ ತಿಳಿಯದವಳಂತೆ ಅಡುಗೆ ಮಾಡುತ್ತಿದ್ದಳು. ಹನುಮವ್ವ ಮುದುಕಿ ಮೊದಲಿನ ಕೋಣೆಯಲ್ಲಿ ಖಿನ್ನ ಮನಸ್ಕಳಾಗಿ ಕುಳಿತಿದ್ದಳು. ಯಲಗುರದಪ್ಪ ಮನೆಗೆ ಬಂದು ಇದೆಲ್ಲ ಏನು ರಾದ್ಧಾಂತ ಎಂದು ವಿಚಾರಿಸುವುದರೊಳಗಾಗಿ ಮಧ್ಯಾಹ್ನದಿಂದ ಆರಾಮ ಕುರ್ಚಿ ಕಾಣಿಸುತ್ತಿಲ್ಲವೆಂದೂ ಆ ಬಗ್ಗೆ ಇಬ್ಬರು ಸೊಸೆಯಂದಿರ ನಡುವೆ ಘನ ಘೋರ ಕಾಳಗವಾಯ್ತಂದೂ ಹನುಮವ್ವ ಮುದುಕಿ ಮಗನಿಗೆ ತಿಳಿಸಿದಳು. ಯಲಗುರದಪ್ಪನೂ ದವಡಿ ಕಚ್ಚಿದ. ಏನೂ ಮಾಡಲು ಸಾಧ್ಯವಿಲ್ಲದ್ದರಿಂದ ಹೆಂಡತಿಯ ಹತ್ತಿರ ಹೋಗಿ ಸಮಾಧಾನ ಹೇಳಿದ. ಲಕ್ಷ್ಮಣ ಮನೆಗೆ ಬಂದಾಗ ವಿಷಯ ತಿಳಿದು ಹೆಚ್ಚಿನ ಚರ್ಚೆಗೆ ಇಳಿಯದೇ ಅವ್ವನ ಹತ್ತಿರ ಸುಮ್ಮನೆ ಕುಳಿತುಬಿಟ್ಟ.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಈ ಎಲ್ಲಾ ಗಲಾಟೆಯಲ್ಲಿ ನೊಂದುಕೊಂಡ ಹನುಮವ್ವ ಮುದುಕಿ ತನ್ನ ನೌಕರುದಾರು ಮಕ್ಕಳ ಜೊತೆ ಇರುವದಕ್ಕಿಂತ ಹಳ್ಳಿಗೇ ಹಿಂತಿರುಗಿ ಹೋಗುವುದು ಲೇಸೆಂದು, ಯಾರ ಮನಸ್ಸಿಗೂ ನೋವು ಮಾಡದೆ, ಊರ ಕಡೆ ಜೀವ ನೆನೆಸುತ್ತದೆ ಎಂದು ಹೇಳಿ ಮರುದಿನ ಬೆಳಿಗ್ಗೆ ತನ್ನ ಊರಿನ ಬಸ್ಸು ಹತ್ತಿದಳು.

ಆರಾಮ ಕುರ್ಚಿ ಎಲ್ಲಿ ಹೋಯಿತು ಎಂದು ಹುಡುಕುವ ಪತ್ತೇದಾರಿ ಕೆಲಸ ಪ್ರಾರಂಭವಾಯ್ತು. ಯಲಗುರದಪ್ಪನ ಹೆಂಡತಿಗೆ ತನ್ನ ನೆಗೆಣ್ಣಿಯೇ ಏನೋ ಮಾಡಿದ್ದಾಳೆ ಎನ್ನುವ ಸಂಶಯ ಇತ್ತು. ಹೊಟ್ಟೆಕಿಚ್ಚಿಗೆ ಯಾರಿಗಾದರು ಮಾರಿರಬಹುದು ಎಂದು ಗುಮಾನಿಪಟ್ಟಿದ್ದಳು. ಕುರ್ಚಿ ಕಳೆದ ಬಗ್ಗೆ ಚಾಳದಲ್ಲಿ ನೆರೆ ಮನೆಯ ಹೆಂಗಸರಿಗೆಲ್ಲ ತಿಳಿಸಿದಳು. ಎಲ್ಲಿಯಾದರೂ ನೋಡಿದರೆ, ಕಂಡರೆ, ತಿಳಿಸಬೇಕೆಂದು ಅದರ ಮಾಹಿತಿ ಕೊಟ್ಟಳು.

ಹೀಗೆಯೇ ಒಂದು ತಿಂಗಳು ಕಳೆಯಿತು. ಒಂದು ದಿನ ಬೆಳಿಗ್ಗೆ ಚಾಳದಲ್ಲಿಯ ಬಾವಿಯಲ್ಲಿ ಏನೋ ತೇಲುತ್ತಿದೆ ಎಂದು ಒಂದು ಸಣ್ಣ ಹುಡುಗಿ ಸುದ್ದಿ ತಂದಳು. ಈ ಸುದ್ದಿ ಚಾಳದಲ್ಲಿಯ ಎಲ್ಲರ ಕುತೂಹಲ ಕೆರಳಿಸಿತು. ಎಲ್ಲರೂ ಬಂದು ಬಾವಿಯಲ್ಲಿ ಹಣಿಕಿ ಹಾಕಿದರು. ಬಾವಿಯಲ್ಲಿ ಯಲಗುರದಪ್ಪನ ಆರಾಮ ಕುರ್ಚಿಯ ಕೈಕಾಲುಗಳು ತೇಲುತ್ತಿದ್ದವು. ಒಂದು ಮೂಲೆಯಲ್ಲಿ ಮುದುಡಿದ ಬಟ್ಟೆ ಸಾಕ್ಷಿ ಹೇಳಲು ಕುಳಿತಂತೆ ತೇಲುತ್ತಿತ್ತು. ಯಲಗುರದಪ್ಪನ ಹೆಂಡತಿಗೂ ಸುದ್ದಿ ಹತ್ತಿತು. ಆಕೆಯೂ ಬಂದು ನೋಡಿದಳು. ಅವು ತಮ್ಮದೇ ಆರಾಮ ಕುರ್ಚಿಯ ಕೈಕಾಲುಗಳು, ಬಟ್ಟೆಯೂ ಆ ಕುರ್ಚಿಯದೇ ಎಂದು ಖಾತ್ರಿಪಡಿಸಿದಳು. ಯಲಗುರದಪ್ಪನ ಬರುವಿಕೆಗಾಗಿಯೇ ಕಾಯ್ದು ಕುಳಿತಳು. ಗಂಡ ಬಂದ ತಕ್ಷಣ ಕುರ್ಚಿಯ ಕೈಕಾಲುಗಳು ಬಾವಿಯ ನೀರಲ್ಲಿ ತೇಲುತ್ತಿರುವುದಾಗಿ ಹೇಳಿ, ಯಾರನ್ನಾದರು ಕರೆದುಕೊಂಡು ಬಂದು ತೆಗೆಸಬೇಕೆಂದು ಒತ್ತಾಯಿಸಿದಳು. ಯಲಗುರದಪ್ಪ ಬಾವಿಯಲ್ಲಿ ಇಳಿಯುವವನನ್ನು ಕರೆದುಕೊಂಡು ಬಂದು ಕುರ್ಚಿಯನ್ನು ಬಾವಿಯಿಂದ ಹೊರಗೆ ತೆಗೆಸಿದ.

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ಬಿಚ್ಚಿ ಬೇರೆಬೇರೆಯಾಗಿದ್ದ ಆರಾಮ ಕುರ್ಚಿಯ ಕೈಕಾಲುಗಳಿಗೆ ಮಾಸಕಟ್ಟಿ ಬಿಟ್ಟಿತ್ತು. ಮನೆಗೆ ತಂದು ಬಟ್ಟೆಯಿಂದ ಸ್ವಚ್ಛವಾಗಿ ಒರೆಸಿದರು. ಎರಡು ದಿನ ಬಿಸಿಲಿನಲ್ಲಿ ಒಣಗಿಸಿದ ನಂತರ ಒಬ್ಬ ಬಡಿಗೆಯನ್ನು ಕರೆ ತಂದು ಕುರ್ಚಿಗೆ ಹೊಸ ಬಟ್ಟೆ ಹಾಕಿ ಮೊದಲಿನ ಸ್ಥಿತಿಗೇ ಜೋಡಿಸಿದರು. ಮೊದಲಿದ್ದ ಜಾಗೆಯಲ್ಲಿಯೇ ಆರಾಮ ಕುರ್ಚಿ ವಿರಾಜಮಾನವಾಯಿತು.

ಲಕ್ಷ್ಮಣನ ಹೆಂಡತಿಗೆ ಮಾತ್ರ ಆರಾಮ ಕುರ್ಚಿಯ ಕಡೆ ಕಣ್ಣು ಹಾಯಿಸಿ ನೋಡುವ ಧೈರ್ಯ ಬರಲಿಲ್ಲ. ಅದನ್ನು ಮರಳಿ ಮನೆಯಲ್ಲಿ ನೋಡಲು ಹೆದರಿದಳು. ಒಳಗೊಳಗೇ ಸಂಕಟ ಪಡುತ್ತಿದ್ದಳು.

ಮನೆಯಲ್ಲಿ ಒಬ್ಬರಿಗೊಬ್ಬರು ಮಾತನಾಡುವ ಪರಿಸ್ಥಿತಿ ಉಳಿಯಲಿಲ್ಲ. ಬೇರೆ ಬೇರೆ ಸ್ಟೋವ ಇಟ್ಟು ತಮ್ಮ ತಮ್ಮ ಕೋಣೆಯಲ್ಲಿಯೇ ಪ್ರತ್ಯೇಕ ಅಡಿಗೆ ಮಾಡಿಕೊಳ್ಳಹತ್ತಿದರು. ಅಣ್ಣ ತಮ್ಮಂದಿರ ನಡುವಿನ ಗೋಡೆ ಅವರ ಕಣ್ಣಿನ ಎತ್ತರಕ್ಕಿಂತಲೂ ಮೇಲೆ ಬೆಳೆದಿತ್ತು.

ತಾಯಿ ಊರಿಗೆ ಹೋಗಿ ನಾಲ್ಕು ತಿಂಗಳಾಯ್ತು, ಮಕ್ಕಳ ಹಾಗೂ ಸೊಸೆಯಂದಿರ ಜೀವ ನೆನಸಹತ್ತಿತು. ಈ ವೇಳೆಗಾಗಲೇ ಎಲ್ಲಾ ಸರಿಯಾಗಿರಬಹುದು, ಜಗಳ ಜಾಪತ್ರಿ ಇರಲಿಕ್ಕಿಲ್ಲ ಎಂದು ಭಾವಿಸಿದಳು. ಮಕ್ಕಳಿಗೆ, ಸೊಸೆಯಂದಿರಿಗೆ ಬುತ್ತಿ ಮಾಡಿಕೊಂಡು ಬಸ್ಸು ಹತ್ತಿದಳು.

ಹನುಮವ್ವ ಮುದುಕಿ ಹುಬ್ಬಳ್ಳಿಗೆ ಬಂದು ಮಕ್ಕಳ ಮನೆಗೆ ಮುಟ್ಟಿದಾಗ ರಾತ್ರಿ ಎಂಟು ಗಂಟೆಯಾಗಿತ್ತು. ಮನೆಯ ಒಳಗಡೆ ಬಂದಾಗ ಯಲಗುರದಪ್ಪನ ಹೆಂಡತಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದಳು. ಯಲಗುರದಪ್ಪ ಗೋಡೆಗೆ ಬೆನ್ನು ಹಚ್ಚಿ ಕುಳಿತಿದ್ದ. ಲಕ್ಷ್ಮಣ, ಲಕ್ಷ್ಮಣನ ಹೆಂಡತಿ ಅವರ ಕೋಣೆಯಲ್ಲಿದ್ದರು. ಮನೆಯಲ್ಲಿಯ ವಾತಾವರಣ ಹೊತ್ತಿ ಉರಿಯುತ್ತಿತ್ತು. ಮನೆಯಲ್ಲಿ ಒಲೆಗಳು ಬೇರೆಯಾದದ್ದನ್ನು ನೋಡಿ ಮುದುಕಿ ಕಂಬನಿ ಇಟ್ಟಳು. ತನ್ನ ಒಡಹುಟ್ಟಿದ ಮಕ್ಕಳು ತನ್ನ ಕಣ್ಣೆದುರಿಗೇ ವೈರಿಗಳಾದದ್ದನ್ನು ನೋಡಿ ಮಮ್ಮಲ ಮರುಗಿದಳು. ಎಲ್ಲಾ ಕೊಟ್ಟೂ ಕಸಿದುಕೊಂಡ ದೇವರಿಗೆ ಶಾಪ ಹಾಕಿದಳು. ಮಕ್ಕಳು ಸೊಸೆಯಂದಿರ ನಡುವೆ ಹನುಮವ್ವ ಮುದುಕಿ ಒಬ್ಬಂಟಿಯಾಗಿದ್ದಳು. ಯಾರನ್ನೇ ಮಾತನಾಡಿಸಿದರೂ ಒಬ್ಬೊಬ್ಬರ ಒಳಿಗೇ ಹೋಗಿ ಮಾತನಾಡಿಸಬೇಕು. ಮಾತುಗಳೂ ಅಷ್ಟಕಷ್ಟೆ. ಕರುಳು ಹಂಚಿಕೊಳ್ಳುವ ಮನಸ್ಸು ಯಾರಿಗೂ ಇರಲಿಲ್ಲ. ಬಟ್ಟೆಗೆ ಬೆಂಕಿ ಬಿದ್ದ ರೀತಿಯಲ್ಲಿ ಮನಸ್ಸು ಸುಟ್ಟು ಹೋಗಿದ್ದವು. ಏನೂ ತಿಳಿಯದಂತಾಗಿ ಭಾರವಾದ ಹೃದಯದಿಂದ ಕೈಗೆ ಹತ್ತಿದ ನಾಲ್ಕು ತುತ್ತು ಅನ್ನ ಉಂಡು ಹನುಮವ್ವ ಮುದುಕಿ ಮಲಗಿದಳು.

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

ಬೆಳಿಗ್ಗೆ ಇಬ್ಬರೂ ಮಕ್ಕಳು ತಮ್ಮ ತಮ್ಮ ನೌಕರಿಗೆ ಹೋದರು. ಹನುಮವ್ವ ಮುದುಕಿ ಸೊಸೆಯಂದಿರನ್ನು ಬೇರೆ ಬೇರೆಯಾಗಿ ಮಾತನಾಡಿಸಿ, ಈ ರೀತಿ ಜಗಳಾಡಬಾರದೆಂದು, ಇಬ್ಬರೂ ಅಕ್ಕತಂಗಿಯರಂತೆ ಇರಬೇಕೆಂದು ಬುದ್ದಿ ಮಾತು ಹೇಳಿದಳು. ಸೊಸೆಯಂದಿರು ಅತ್ತೆ ಹೇಳಿದ ಎಲ್ಲವನ್ನೂ ಕೇಳಿಸಿಕೊಂಡರೆ ಹೊರತಾಗಿ ಮೌನವಾಗಿದ್ದೇ ತಮ್ಮ ಅಸಮ್ಮತಿ ತೋರ್ಪಡಿಸಿದ್ದರು.

ಮುದುಕಿ ಎರಡು ಗಂಟೆಯ ಹೊತ್ತಿಗೆ ಸ್ವಲ್ಪ ಊಟ ಮಾಡಿ ಆರಾಮ ಕುರ್ಚಿಯಲ್ಲಿ ಹೋಗಿ ಕುಳಿತಳು. ಸೊಸೆಯಂದಿರು ಅವರವರ ಕೋಣೆಗಳಲ್ಲಿದ್ದರು. ಆರು ಗಂಟೆಯ ಹೊತ್ತಿಗೆ ಇಬ್ಬರೂ ಮಕ್ಕಳು ಮನೆಗೆ ಬಂದರು. ಯಲಗುರದಪ್ಪ ಒಳಗಡೆ ಬಂದು ತಾಯಿಯನ್ನು ಮಾತನಾಡಿಸಿದ. ಮುದುಕಿ “ಓ” ಎನ್ನಲಿಲ್ಲ. ಒಂದಿಷ್ಟು ಜೋರಾಗಿ ಮಾತನಾಡಿಸಿದ. ಮುದುಕಿಯಿಂದ ಏನೂ ಉತ್ತರವಿರಲಿಲ್ಲ. ಗಂಡನ ಬಾಯಿಗೆ ಯಲಗುರದಪ್ಪನ ಹೆಂಡತಿ ಹೊರಗೆ ಬಂದಳು. ಅತ್ತೆಯ ಮೈ ಮುಟ್ಟಿ ಮಾತನಾಡಿಸಿದಳು. ಲಕ್ಷ್ಮಣ, ಲಕ್ಷ್ಮಣನ ಹೆಂಡತಿಯೂ ಹೊರಗಡೆ ಬಂದರು. ಯಾರು ಮಾತನಾಡಿಸಿದರೂ ಮುದುಕಿ “ಓ” ಎನ್ನಲಿಲ್ಲ. ಆರಾಮ ಕುರ್ಚಿಯಲ್ಲಿ ತೆರೆದ ಕಣ್ಣು ತೆರೆದಂತೆ ಜೀವ ಬಿಟ್ಟಿದ್ದಳು. ಮಕ್ಕಳು ಸೊಸೆಯಂದಿರು ಆರಾಮ ಕುರ್ಚಿಯ ಸುತ್ತ ಕುಸಿದು ಬಿಕ್ಕಹತ್ತಿದರು. ಆರಾಮ ಕುರ್ಚಿಯಲ್ಲಿ ತಾಯಿ ಹೆಣವಾಗಿದ್ದಳು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ಎಸ್.ಎಫ್. ಯೋಗಪ್ಪನವರ್

ಸಣ್ಣಪ್ಪ ಫಕೀರಪ್ಪ ಯೋಗಪ್ಪನವರ್(1949-2021): ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್, ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಬಿಎ ಪದವಿ, ಗುಲ್ಬರ್ಗಾ ವಿವಿಯಲ್ಲಿ ಇಂಗ್ಲಿಷ್ ಎಂಎ ಪದವಿ ಪಡೆದಿದ್ದರು. ನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 1974ರಲ್ಲಿ ಕೆಎಎಸ್ ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎನಿಸಿಕೊಂಡಿದ್ದರು. ಹಲವು ಸಚಿವರಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾದ ಅವರು, ಸೃಜನಶೀಲ ಬರವಣಿಗೆ ಮೂಲಕ ಗುರುತಿಸಿಕೊಂಡಿದ್ದರು. ‘ಲಂಕೇಶ್ ಪತ್ರಿಕೆ’ಯಲ್ಲಿ ಅಂಕಣಕಾರರಾಗಿ ಪ್ರಸಿದ್ಧರಾಗಿದ್ದರು. ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ’, ‘ಪ್ರೀತಿ ಎಂಬುದು ಚಂದ್ರನ ದಯೆ’, ‘ಶೋಧ’ ಎಂಬ ಕಾದಂಬರಿಗಳನ್ನು; ‘ಆರಾಮ ಕುರ್ಚಿ ಮತ್ತು ಇತರ ಕತೆಗಳು’, ‘ಮ್ಯೂಟೇಶನ್’ ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ‘ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು’, ಜೆ.ಡಿ. ಸಾಲಿಂಜರ್‌ನ ಕಾದಂಬರಿ ‘ಹದಿಹರೆಯದ ಒಬ್ಬಂಟಿ ಪಯಣ’, ‘ರೂಪಕ ಲೇಖಕರು’ ಅವರ ಅನುವಾದಿತ ಪುಸ್ತಕಗಳು. ‘ಒಂದು ಶಹರದ ಸುತ್ತ’ ನಾಟಕ; ‘ನೀಲು ಮಾತು ಮೀರಿದ ಮಿಂಚು’ ಅವರ ಇತರ ಕೃತಿಗಳು. 2021ರಲ್ಲಿ ಕರೋನಾ ಸೋಂಕು ತಗುಲಿ, ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಚ್. ನಾಗವೇಣಿ ಅವರ ಕತೆ | ಧಣಿಗಳ ಬೆಳ್ಳಿಲೋಟ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...