ಗಲ್ಫ್ ಸಂಘರ್ಷ ಹಿನ್ನೆಲೆ ಹರ್ಮುಜ್ ಜಲಮಾರ್ಗದ ಮೇಲೆ ಇರಾನ್ ಹೇರಿರುವ ದಿಗ್ಬಂಧನ ಭಾರತದ ಇಂಧನ ಹಾಗೂ ಇತರೆ ಕೈಗಾರಿಕ ವಲಯದ ಬಿಕ್ಕಟ್ಟಿಗೆ ಕಾರಣವಾಗಿರುವ ಜೊತೆಗೆ ಸಮುದ್ರಯಾನಿಗಳ ಸುರಕ್ಷತೆಗೂ ಸವಾಲಾಗಿ ಪರಿಣಮಿಸಿದೆ.
ಇದುವರೆಗೂ ಹರ್ಮುಜ್ ಜಲಮಾರ್ಗದಲ್ಲಿ ಅನ್ಯ ರಾಷ್ಟ್ರದ ಧ್ವಜ ಹೂಡಿದ ಹಡಗುಗಳಲ್ಲಿದ್ದ ಭಾರತದ ಮೂವರು ಸಮುದ್ರಯಾನಿಗಳ ಹತ್ಯೆಯಾಗಿದೆ. ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಾರತ ಹರ್ಮುಜ್ ಜಲಮಾರ್ಗವನ್ನು ಮುಕ್ತವಾಗಿಸಲು ಕರೆ ನೀಡಿದೆ, ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ದಿನದಿಂದಲೂ ಹರ್ಮುಜ್ ಅಂತರಾಷ್ಟ್ರೀಯ ಜಲಮಾರ್ಗವನ್ನು ಇರಾನ್ ತನ್ನ ಹಿಡಿತಕ್ಕೆ ಒಳಪಡಿಸಿದೆ. ಈ ಜಲಮಾರ್ಗದಲ್ಲಿ ಸಮುದ್ರಯಾನಿಗಳನ್ನು ಕಳೆದುಕೊಂಡ ಏಖೈಕ ರಾಷ್ಟ್ರ ಭಾರತವಾಗಿದೆ.
ಇದನ್ನು ಓದಿ ಕೊಲ್ಲಿಯಲ್ಲಿ ಹಡಗು ಸಂಚಾರಕ್ಕೆ ಜಿ7 ಬೆಂಗಾವಲು
ಬ್ರಿಟನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಭೆಯಲ್ಲಿ ಭಾರತ ಈ ಕುರಿತು ಕಳವಳ ವ್ಯಕ್ತಪಡಿಸಿದೆ. ಮಧ್ಯಪ್ರಾಚ್ಯ ಸಂಘರ್ಷ ಸೃಷ್ಟಿಸಿರುವ ಜಾಗತಿಕ ತುರ್ತಿನ ಕರಿತು ಚರ್ಚಿಸಲು ಬ್ರಿಟನ್ ಈ ಸಭೆಯನ್ನು ಆಯೋಜಿಸಿತ್ತು. ಭಾರತ ಸಮುದ್ರಯಾನಿಗಳ ಸುರಕ್ಷತೆಯ ಕುರಿತ ಪ್ರಾಮುಖ್ಯತೆಯನ್ನು ಈ ಸಭೆಯಲ್ಲಿ ಒತ್ತಿ ಹೇಳಿತು.
ವಿಶ್ವದ ಪ್ರಮುಖ 60 ರಾಷ್ಟ್ರಗಳು ಒಟ್ಟುಗೂಡಿದ ಸಭೆಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಭಾರತವನ್ನು ಪ್ರತಿನಿಧಿಸಿದರು. ಉದ್ವಿಗ್ನ ಸ್ಥಿತಿಯನ್ನು ಸುಧಾರಿಸಿ ಶಾಂತಿ ಸ್ಥಾಪನೆಗೆ ಇರುವ ಪರಿಣಾಮಕಾರಿ ಮಾರ್ಗಗಳನ್ನು ಕೈಗೊಳ್ಳುವ ನಿಲುವನ್ನು ಭಾರತ ಸಾದರ ಪಡಿಸಿತು.
ಸಂಘರ್ಷದ ಪರಿಣಾಮ ಭಾರತ ಎದುರಿಸುತ್ತಿರುವ ಇಂಧನ ಅಭದ್ರತೆಯನ್ನು ಪ್ರಸ್ತಾಪಿಸಿದ ವಿಕ್ರಂ ಮಿಸ್ರಿ, ವಾಣಿಜ್ಯ ಹಡುಗಗಳ ಮೇಲಿನ ಗಲ್ಫ್ ದಾಳಿಯಿಂದಾಗಿ ಸಮುದ್ರಯಾನಿಗಳನ್ನು ಕಳೆದುಕೊಂಡ ಏಖೈಕ ರಾಷ್ಟ್ರ ಭಾರತ ಎಂದು ಉಲ್ಲೇಖಿಸಿದರು.
ಪ್ರಸ್ತುತ ಸಂಘರ್ಷದ ನೇರ ಪರಿಣಾಮಗಳ ಕುರಿತು ಗಮನ ಸೆಳೆದ ಅವರು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಅತಂತ್ರಗೊಂಡ ಭಾರತದ ಇಂಧನ ಭದ್ರತೆಯ ಕುರಿತು ಪ್ರಸ್ತಾಪಿಸಿದ ಅವರು ಕೊಲ್ಲಿಯ ಅಸ್ಥಿರತೆ ಭಾರತದ ಮೇಲೆ ತಂದೊಡ್ಡಿರುವ ಸವಾಲುಗಳನ್ನು ಪ್ರಮುಖವಾಗಿ ಭಾರತದ ಸಮುದ್ರ ವ್ಯಾಪಾರದ ಅಸುರಕ್ಷತೆಯನ್ನು ಮುನ್ನೆಲೆಗೆ ತಂದರು.
ಪರಿಸ್ಥಿತಿ ಸುಧಾರಿಸಲು ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ನೀತಿಯನ್ನು ಅನುಸರಿಸಲಾಗುವುದು, ಸಂಬಂಧಿತ ರಾಷ್ಟ್ರಗಳೊಂದಿಗೆ ಮಾತುಕತೆಗೆ ಮುಂದಾಗುವುದು ಎಂದು ಹೇಳಿದ್ದಾರೆ.
ಬ್ರಿಟನ್ ಆಯೋಜಿಸಿದ್ದ ಈ ಸಭೆಯಲ್ಲಿ ಭಾರತವನ್ನು ಒಳಗೊಂಡಂತೆ ವಿಶ್ವದ 60 ರಾಷ್ಟ್ರಗಳು ಹಾರ್ಮುಜ್ ಜಲಸಂಧಿಯ ಮುಕ್ತತೆಗೆ ಆಗ್ರಹಿಸಿದ್ದು, ಜಲಮಾರ್ಗದ ಮೇಲಿನ ನಿರ್ಬಂಧ ಜಾಗತಿಕ ವಲಯದಲ್ಲಿ ತೈಲ ಬೆಲೆಯ ಏರಿಳಿತಕ್ಕೆ ಕಾರಣವಾಗಿದೆ, ಜೊತೆಗೆ ಸಂಘರ್ಷವು ಪರ್ಷಿಯನ್ ಗಲ್ಫ್ ಪ್ರಾಂತ್ಯದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ. ಆದ್ದರಿಂದ ಶೀಘ್ರವಾಗಿ ಸಮಸ್ಯೆಯ ತಿಳಿಗೊಳ್ಳುವಿಕೆಗೆ ಪರಿಹಾರ ಹುಡುಕಬೇಕು ಎಂದು ಸಭೆ ನಿರ್ಣಯಿಸಿದೆ.




