ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಉದಯಿಸಿದ ಮಹಾನ್ ವ್ಯಕ್ತಿತ್ವಗಳಲ್ಲಿ ನೇತಾಜಿ ಮತ್ತು ಭಗತ್ ಸಿಂಗ್ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಸಂಗ್ರಾಮದ ನೈಜ ಗುರಿ ಕೇವಲ ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸುವುದು ಮಾತ್ರವಾಗಿರಲಿಲ್ಲ. ಬದಲಿಗೆ ಮೂಲಭೂತ ಬದಲಾವಣೆ, ಅಂದರೆ ಸಮಾಜವಾದಿ ಭಾರತ ನಿರ್ಮಿಸುವುದಾಗಿತ್ತು ಎಂದು ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ ಹೇಳಿದರು.
ಕೊಪ್ಪಳದ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿಕಾಸ ಶಿಬಿರ ಶಿಬಿರದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಬಡತನ, ನಿರುದ್ಯೋಗ ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ದಿನೇದಿನೇ ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು” ಎಂದು ಅವರು ಕರೆ ನೀಡಿದರು.
‘ವಿದ್ಯಾರ್ಥಿಗಳಿಗೆ ಯಾರು ಆದರ್ಶವಾಗಬೇಕು’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರವಿಕಿರಣ್ ಅವರು, ನಮ್ಮ ದೇಶದಲ್ಲಿ ಹಲವು ಕಾಲಘಟ್ಟಗಳಲ್ಲಿ ಅನೇಕ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳಾಗಿವೆ ಎಂದು ತಿಳಿಸಿದರು. ಪ್ರತಿಯೊಂದು ಹಂತದಲ್ಲೂ ನಡೆದ ದೌರ್ಜನ್ಯ, ಶೋಷಣೆ ಮತ್ತು ಸಾಂಸ್ಕೃತಿಕ ಅಧಃಪತನವನ್ನು ವಿರೋಧಿಸಿ ಆ ಕಾಲಘಟ್ಟದ ಮಹಾನ್ ನಾಯಕರು ಹೋರಾಡಿದ್ದಾರೆ.
ಈ ದೇಶದ ಪ್ರತಿಯೊಂದು ಮಗುವಿಗೂ ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ಸಿಗಬೇಕೆಂದು 200 ವರ್ಷಗಳ ಹಿಂದೆ ಜ್ಯೋತಿಬಾ ಫುಲೆ ಹೋರಾಡಿದರು. ಶಿಕ್ಷಣವು ವೈಜ್ಞಾನಿಕವಾಗಿ ಮತ್ತು ಧರ್ಮನಿರಪೇಕ್ಷವಾಗಿರಬೇಕೆಂಬುದು ಈಶ್ವರಚಂದ್ರ ವಿದ್ಯಾಸಾಗರ್ ಅವರ ಕನಸಾಗಿತ್ತು. ಭಗತ್ ಸಿಂಗ್, ನೇತಾಜಿ, ಖುದಿರಾಮ್ ಬೋಸ್, ಚಂದ್ರಶೇಖರ ಆಜಾದ್ ಮುಂತಾದ ಅನೇಕ ಮಹಾನ್ ವ್ಯಕ್ತಿಗಳು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದರು. ಈ ಎಲ್ಲಾ ಮಹಾನ್ ವ್ಯಕ್ತಿಗಳು ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂತಹ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಈ ವಿಚಾರಗಳಿಂದ ಸ್ಫೂರ್ತಿ ಪಡೆದು ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಅವರು ಹೇಳಿದರು.
ಶಿಬಿರದಲ್ಲಿ ಪವಾಡ ರಹಸ್ಯ ಬಯಲು, ಸಿನಿಮಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮಕ್ಕೆ ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ತುಳಜರಾಮ್ ಎನ್.ಕೆ. ಮತ್ತು ಎಐಡಿಎಸ್ಒ ರಾಜ್ಯ ಸಮಿತಿ ಸದಸ್ಯೆ ಸಿಂಧು ಕೌಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಜಿಲ್ಲಾ ಸಂಘಟನಾಕಾರರಾದ ಪ್ರದೀಪ್, ಶರಣಪ್ಪ ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.




