ಇರಾನ್‌ನಿಂದ ಎದುರಾಗಿದ್ದ ತೀವ್ರ ಹತ್ಯೆ ಬೆದರಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟರ್ಕಿಯಿಂದ ಅತ್ಯಂತ ರಹಸ್ಯ ಕಾರ್ಯಾಚರಣೆಯ ಮೂಲಕ ಅಮೆರಿಕಕ್ಕೆ ಮರಳಿರುವ ಅಚ್ಚರಿಯ ವಿಚಾರವನ್ನು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ. ಭದ್ರತೆಯ ದೃಷ್ಟಿಯಿಂದ ಅವರು ನಿಗದಿತ ‘ಏರ್ ಫೋರ್ಸ್ ಒನ್’ ವಿಮಾನದ ಬದಲಿಗೆ, ಬೇರೊಂದು ಮಿಲಿಟರಿ ವಿಮಾನದಲ್ಲಿ ಪ್ರಯಾಣ ಬೆಳೆಸಿರುವುದು ಭದ್ರತಾ ಪಡೆಯ ಕಟ್ಟೆಚ್ಚರವನ್ನು ತೋರಿಸುತ್ತದೆ.
ನ್ಯಾಟೋ ಶೃಂಗಸಭೆ ಮುಗಿಸಿ ಅಮೆರಿಕಕ್ಕೆ ವಾಪಸಾಗುವಾಗ ಶ್ವೇತಭವನವು ಈ ಗೌಪ್ಯ ತಂತ್ರವನ್ನು ರೂಪಿಸಿತ್ತು. ಟರ್ಕಿಯ ಅಂಕಾರ ವಿಮಾನ ನಿಲ್ದಾಣಕ್ಕೆ ಭದ್ರತೆಯ ನಡುವೆ ಆಗಮಿಸಿದ ಟ್ರಂಪ್, ಮಾಧ್ಯಮಗಳ ಕಣ್ಣಿಗೆ ಬೀಳುವಂತೆ ಅಧಿಕೃತ ನೀಲಿ-ಬಿಳಿ ಬಣ್ಣದ ‘ಏರ್ ಫೋರ್ಸ್ ಒನ್’ (ಬೋಯಿಂಗ್ 747) ವಿಮಾನದ ಮೆಟ್ಟಿಲೇರಿದ್ದರು. ತಾವೇ ಆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿ ಮಾಧ್ಯಮಗಳನ್ನು ಹಾಗೂ ಜಗತ್ತನ್ನು ನಂಬಿಸುವ ಪ್ರಯತ್ನ ಇದಾಗಿತ್ತು.
ಆದರೆ, ವಿಮಾನದೊಳಗೆ ಹೋದ ಬಳಿಕ ನಡೆದದ್ದೇ ಬೇರೆ. ವಿಮಾನದ ಮತ್ತೊಂದು ಬದಿಯಲ್ಲಿ ಆಹಾರ ಸರಬರಾಜು ಮಾಡುವ ಟ್ರಕ್ ಒಂದನ್ನು ತಂದು, ಹೈಡ್ರಾಲಿಕ್ ವ್ಯವಸ್ಥೆಯ ಮೂಲಕ ಅದರ ಕಂಟೇನರ್ ಅನ್ನು ವಿಮಾನದ ಬಾಗಿಲಿನ ಎತ್ತರಕ್ಕೆ ನಿಲ್ಲಿಸಲಾಯಿತು. ಕ್ಯಾಮೆರಾಗಳ ಗಮನ ಬೇರೆಡೆ ಇದ್ದಾಗ, ಟ್ರಂಪ್ ಹಾಗೂ ಅವರ ಆಪ್ತ ಸಹಾಯಕರು ಯಾರಿಗೂ ಕಾಣದಂತೆ ಆ ಕಂಟೇನರ್ ಒಳಗೆ ಸೇರಿಕೊಂಡರು ಎಂದು ವರದಿಯಾಗಿದೆ.
ಬಳಿಕ ಅದೇ ಊಟದ ಟ್ರಕ್ ಮೂಲಕ ವಿಮಾನ ನಿಲ್ದಾಣದ ಮತ್ತೊಂದು ತುದಿಯಲ್ಲಿ ನಿಲ್ಲಿಸಲಾಗಿದ್ದ ‘C-32A’ ಮಿಲಿಟರಿ ವಿಮಾನದ ಬಳಿಗೆ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು. ವಿಮಾನದಲ್ಲಿದ್ದ ಪತ್ರಕರ್ತರು ಹಾಗೂ ಶ್ವೇತಭವನದ ಕೆಲ ಸಿಬ್ಬಂದಿ ಟ್ರಂಪ್ ತಮ್ಮೊಂದಿಗೇ ಇದ್ದಾರೆ ಎಂದು ನಂಬಿದ್ದರು. ಆದರೆ, ಅಧ್ಯಕ್ಷರು ಯಾರಿಗೂ ತಿಳಿಯದಂತೆ ಬೇರೊಂದು ವಿಮಾನವೇರಿ ಅಮೆರಿಕದತ್ತ ಪ್ರಯಾಣ ಬೆಳೆಸಿದ್ದರು.
ಅಮೆರಿಕದ ಅಧ್ಯಕ್ಷರ ರಕ್ಷಣೆಗಾಗಿ ಇಂತಹ ತಂತ್ರಗಳನ್ನು ಬಳಸುವುದು ಹೊಸದೇನಲ್ಲ. ಈ ಹಿಂದೆಯೂ 2001ರ ಸೆಪ್ಟೆಂಬರ್ 11ರ ಉಗ್ರರ ದಾಳಿಯ ಸಂದರ್ಭದಲ್ಲಿ ಜಾರ್ಜ್ ಡಬ್ಲ್ಯು. ಬುಷ್ ಹಾಗೂ 2000ನೇ ಇಸವಿಯಲ್ಲಿ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಲೂ ಇದೇ ರೀತಿಯಾಗಿ ಬೇರೆ ವಿಮಾನ ಬಳಸಿ, ದಿಕ್ಕು ತಪ್ಪಿಸುವ ತಂತ್ರಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಬಳಸಿದ್ದವು ಎಂದು ವರದಿ ಉಲ್ಲೇಖಿಸಿದೆ.
ಇದೇ ವೇಳೆ, ಖತರ್ ದೇಶವು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನದಲ್ಲಿ ಹಳೆಯ ವಿಮಾನದಷ್ಟು ಭದ್ರತಾ ವ್ಯವಸ್ಥೆಗಳಿಲ್ಲ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಶ್ವೇತಭವನದ ಸಂವಹನ ನಿರ್ದೇಶಕ ಸ್ಟೀವನ್ ಚೆಯುಂಗ್, ಟ್ರಂಪ್ ಅವರ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಉನ್ನತ ಮಟ್ಟದ ರಕ್ಷಣಾ ವ್ಯವಸ್ಥೆಗಳನ್ನು ವಿಮಾನವು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.




