ಕರ್ನಾಟಕದಲ್ಲಿ ಮೀಸಲಾತಿ ಕೋಟಾ ಶೇ. 56ಕ್ಕೆ ಹೆಚ್ಚಿಸಿದಾಗ, ಅದು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಉಚ್ಚ ನ್ಯಾಯಾಲಯ ಶೇ. 50ಕ್ಕೆ ಇಳಿಸಲು ಸರ್ಕಾರಕ್ಕೆ ಆಜ್ಞಾಪಿಸಿತು. ಸರ್ಕಾರ ಇಳಿಸಿತು. ಇಲ್ಲಿ ಗಮನಹರಿಸಬೇಕಾದ ವಿಚಾರವೆಂದರೆ, ನ್ಯಾಯಾಲಯ ಶೇ.50ಕ್ಕೆ ಕಡಿತಗೊಳಿಸಿ ಎಂದಿದೆಯೇ ವಿನಾ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಟಾದಲ್ಲಿಯೇ ಕಡಿಮೆಗೊಳಿಸಿ ಎಂದು ಹೇಳಿಲ್ಲ. ಸರ್ಕಾರ ಈ ವಿಷಯದಲ್ಲಿ ಎಡವಿದೆ ಅನ್ನಿಸುವುದಿಲ್ಲವೇ?
ಪರಿಶಿಷ್ಟ ಜಾತಿಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ಉದ್ದೇಶಕ್ಕೆ ಒಳ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಗೆ ದಶಕಗಳ ಇತಿಹಾಸವೇ ಇದೆ. ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದ ಕಾರಣ ಬೇಡಿಕೆ ಈಡೇರಿರಲಿಲ್ಲ. ಆನಂತರದಲ್ಲಿ ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಆಜ್ಞಾಪಿಸಿ ಖಚಿತ ಪಡಿಸಿದ ನಂತರ ಆ ದಿಸೆಯಲ್ಲಿ ರಾಜ್ಯಗಳು ಕ್ರಮಕ್ಕೆ ಮುಂದಾದವು. ಅದಿರಲಿ.
ಏತನ್ಮಧ್ಯೆ, ಕರ್ನಾಟಕದಲ್ಲಿ ಮೀಸಲಾತಿ ಕೋಟಾವನ್ನು ಸಾಂವಿಧಾನಿಕವಾಗಿ ಜನಸಂಖ್ಯಾನುಸಾರ ಹೆಚ್ಚಿಸಬೇಕು ಎಂಬ ಕೂಗು ಪ್ರಬಲವಾಗತೊಡಗಿತು. ಅದನ್ನನುಸರಿಸಿ ಅಂದಿನ ಭಾಜಪ ಸರ್ಕಾರ ನ್ಯಾ.ನಾಗಮೋಹನ ದಾಸ್ ಆಯೋಗವನ್ನು ರಚಿಸಿತು. ಆಯೋಗವು ವಿಮರ್ಶಾತ್ಮಕ ಅಧ್ಯಯನ ನಡೆಸಿ, ಪರಿಶಿಷ್ಟ ಜಾತಿಗಳಿಗೆ ಶೇಕಡ 17ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇಕಡ 7ರಷ್ಟು ಮೀಸಲಾತಿ ನೀಡಬಹುದೆಂದು ಸರ್ಕಾರಕ್ಕೆ ಸಲಹೆ ನೀಡಿತು. ಸರ್ಕಾರ ಆಯೋಗದ ಸಲಹೆಯನ್ನು ಮಾನ್ಯ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಿತು. ಕೋಟಾ ಹೆಚ್ಚುವಿಕೆಯಿಂದಾಗಿ ಒಟ್ಟಾರೆ ಮೀಸಲಾತಿ ಶೇ.56ಕ್ಕೇರಿತು. ಇದು ಸರ್ವೋಚ್ಚ ನ್ಯಾಯಾಲಯ ವಿಧಿಸಿದ ಕೋಟಾ ಮಿತಿ ಶೇ. 50ಕ್ಕಿಂತ ಹೆಚ್ಚಾಯಿತು.
ಸರ್ಕಾರ ಬದಲಾಯಿತು. ಅದೇ ಸಮಯಕ್ಕೆ, ಸರ್ವೋಚ್ಚ ನ್ಯಾಯಾಲಯದ ಆದೇಶವು ಬಂತು. ಆನಂತರ ಒಳ ಮೀಸಲಾತಿಗಾಗಿ ಪ್ರಬಲ ಹೋರಾಟದ ಅಲೆ ಎದ್ದಿತು. ಬೇರೆ ದಾರಿ ಕಾಣದ ಸರ್ಕಾರ ನ್ಯಾ. ನಾಗಮೋಹನ ದಾಸ್ ಏಕವ್ಯಕ್ತಿ ಆಯೋಗವನ್ನು ರಚಿಸಿತು. ಆಯೋಗ ಪರಿಶಿಷ್ಟ ಜಾತಿಗಳ ಸುಮಾರು 27 ಲಕ್ಷ ಕುಟುಂಬಗಳನ್ನು ಸಮೀಕ್ಷೆ ನಡೆಸಿ, ಸರ್ಕಾರ ಮತ್ತು ಸರ್ಕಾರದ ಅಂಗ ಸಂಸ್ಥೆಗಳಿಂದ ದ್ವಿತೀಯ ಮೂಲದ ಮಾಹಿತಿಗಳನ್ನೂ ಪಡೆದು ಸಮೀಕ್ಷೆ ಮತ್ತು ಮಾಹಿತಿಗಳನ್ನು ಕಟ್ಟುನಿಟ್ಟಿನ ಪರಾಮರ್ಶೆಗೆ ಒಳಪಡಿಸಿ, ಇಡೀ ಪರಿಶಿಷ್ಟ ಜಾತಿಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಿತ್ತು.
ಇದನ್ನು ಓದಿದ್ದೀರಾ?: ಒಳಮೀಸಲಾತಿ ಅಳವಡಿಸಿ ಮಂತ್ರಾಲಯಗಳಲ್ಲಿ ಖಾಲಿ ಇರುವ ಉದ್ಯೋಗಗಳ ಭರ್ತಿ ಮಾಡಿ: ಪಿಎಂ ಮೋದಿಗೆ ಅಹಿಂದ ಸಂಘಟನೆ ಮನವಿ
ನ್ಯಾ. ನಾಗಮೋಹನ ದಾಸ್ ವರದಿಯನ್ನು ಸರ್ಕಾರ ಸ್ವೀಕರಿಸಿದರೂ ಯಥಾವತ್ ಜಾರಿಗೊಳಿಸಲಿಲ್ಲ. ಆಯೋಗ ನಿಗದಿಗೊಳಿಸಿದ್ದ ಮೀಸಲಾತಿ ಪ್ರವರ್ಗಗಳನ್ನು 5ಕ್ಕೆ ಬದಲಾಗಿ 3ಕ್ಕೆ ಇಳಿಸಿ ಕ್ರಮವಾಗಿ ಎಡಗೈ ಗುಂಪಿಗೆ ಶೇ. 6, ಬಲಗೈ ಗುಂಪಿಗೆ ಶೇ.6, ಸ್ಪೃಶ್ಯ ಜಾತಿಗಳಿಗೆ ಶೇ.5 ಎಂದು ನಿಗದಿಗೊಳಿಸಿತು.
ಮತ್ತೊಂದು ಕಡೆ, ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನ್ವಯಿಸುವಂತೆ ಶೇ.24ಕ್ಕೆ ಮೀಸಲಾತಿ ಕೋಟಾ ಹೆಚ್ಚಿಸಿರುವುದರಿಂದ ಸರ್ವೋಚ್ಚ ನ್ಯಾಯಾಲಯ ವಿಧಿಸಿದ ಶೇ.50ರ ಮಿತಿ ಮೀರಿರುವ ಕುರಿತು ವಿಚಾರಣೆ ನಡೆದು ಉಚ್ಚ ನ್ಯಾಯಾಲಯ ಮೀಸಲಾತಿ ಕೋಟಾವನ್ನು ಶೇ.56ರಿಂದ 50ಕ್ಕೆ ಇಳಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿತು. ನ್ಯಾಯಾಲಯದ ಈ ಆದೇಶದಿಂದ ಸರ್ಕಾರ ಹಿನ್ನಡೆಯ ಜೊತೆಗೆ ಪೇಚಿಗೆ ಸಿಕ್ಕಿ ಹಾಕಿಕೊಂಡಿತು. ನ್ಯಾಯಾಲಯದ ಆದೇಶವನ್ನು ಸ್ವಲ್ಪವೂ ವಿಚಾರ – ವಿಮರ್ಶೆಗೆ ಒಳಪಡಿಸದೆ ‘ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು’ ಎಂಬ ಗಾದೆಯಂತೆ, ದಿಢೀರ್ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿಸಿದ್ದ ಮೀಸಲಾತಿ ಕೋಟಾದಲ್ಲಿಯೇ ‘ಹಾವು ಏಣಿ ಆಟ’ದಲ್ಲಿ ತೊಡಗಿಸಿಕೊಂಡಿತು. ಹೆಚ್ಚಿಸಿದ್ದ ಶೇ.17ರ ಬದಲು 15ಕ್ಕೆ ಮೀಸಲಾತಿ ನಿಗದಿಗೊಳಿಸಲು ಸರ್ಕಾರ ಶುರುವಿಟ್ಟುಕೊಂಡಿದ್ದು, ಅತ್ಯವಸರದ ಮತ್ತು ವಿಚಾರಹೀನ ನಡೆಯಾಗಿತ್ತು.
ಇಂಥ ಕಟುವಾದ ಮಾತುಗಳನ್ನು ಉಲ್ಲೇಖಿಸಲು ಇಲ್ಲಿ ಗಹನವಾದ ವಿಷಯವೊಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೋಟಾವನ್ನು ವಿನಾಕಾರಣ ಸರ್ಕಾರ ಹೆಚ್ಚಿಸಿದೆಯೇ? ಉತ್ತರ, ಇಲ್ಲ! ಹಾಗಾದರೆ ಅದು ಯಾವ ಆಧಾರದಿಂದ ಹೆಚ್ಚಿಸಿದೆ ಎಂಬುದರ ಬಗ್ಗೆ ಗಮನವಿಯೋಣ- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕೋಟಾವನ್ನು ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಕಾಲಕಾಲಕ್ಕೆ ಹೆಚ್ಚಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಸರ್ಕಾರ ಕ್ರಮ ಕೈಗೊಳ್ಳಲು ಆಯೋಗವನ್ನೇ ರಚಿಸಿ, ಅದರ ವರದಿ ಆಧಾರದ ಮೇಲೆ ಹೆಚ್ಚಿಸಿದೆ. ಅಂದಮೇಲೆ ಇದು ಸಂವಿಧಾನಬದ್ಧ ಎಂದಾಯಿತು.

ಕರ್ನಾಟಕದಲ್ಲಿ ಮೀಸಲಾತಿ ಕೋಟಾ ಶೇ. 56ಕ್ಕೆ ಹೆಚ್ಚಿದೆ. ಅದು ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂಬುದನ್ನು ಗಮನಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯ ಒಟ್ಟು ಮೀಸಲಾತಿ ಕೋಟಾವನ್ನು ಶೇ. 50ಕ್ಕೆ ಇಳಿಸಿ ಎಂದು ಸರ್ಕಾರಕ್ಕೆ ಆಜ್ಞಾಪಿಸಿತು. ಇಲ್ಲಿ ಗಮನಹರಿಸಬೇಕಾದ ಅಂಶವೊಂದಿದೆ. ನ್ಯಾಯಾಲಯ ಒಟ್ಟು ಮೀಸಲಾತಿ ಕೋಟಾವನ್ನು ಶೇ.50ಕ್ಕೆ ಕಡಿತಗೊಳಿಸಿ ಎಂದಿದೆಯೇ ವಿನಾ, ಕೋಟಾವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಟಾದಲ್ಲಿಯೇ ಕಡಿಮೆಗೊಳಿಸಿ ಎಂದು ಆಜ್ಞೆ ಹೊರಡಿಸಿರುವುದಿಲ್ಲ ಎಂಬುದು ನಿಚ್ಚಳ.
ಸರ್ಕಾರ ಈ ವಿಷಯದಲ್ಲಿ ಯಾಮಾರಿದೆ ಅಥವಾ ಎಡವಿದೆ ಅನ್ನಿಸುವುದಿಲ್ಲವೇ? ಒಂದು ವೇಳೆ, ಸರ್ಕಾರಕ್ಕೆ ಈ ವಿಷಯ ಗೊತ್ತಿದ್ದು ಈಗ ಅನುಸರಿಸಿರುವ ಕ್ರಮ ಜರುಗಿಸಿದೆಯೇ ಎಂಬುದು ತಿಳಿದು ಬರುವುದಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೂ ಸರ್ಕಾರವೇ ಉತ್ತರಿಸಬೇಕಾಗಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ನೊಂದ ಯಾವುದೇ ಒಬ್ಬ ನಾಗರಿಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೋರಿಕೆ ಅರ್ಜಿ ಸಲ್ಲಿಸಬಹುದಾಗಿದೆ.
(ಲೇಖಕರು ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ)

ಕೆ.ಎನ್. ಲಿಂಗಪ್ಪ
ಲೇಖಕರು ನಿವೃತ್ತ ಕೆ.ಎ.ಎಸ್ ಅಧಿಕಾರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರು. ಮೀಸಲಾತಿ ಸಂಬಂಧಿತ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಬಲ್ಲವರು. 'ಮೀಸಲಾತಿಯ ಒಳನೋಟ', 'ಮೀಸಲಾತಿಯ ಅಂತರಂಗ', 'ಮೀಸಲಾತಿಯ ಒಳ ಮುಖ' ಮತ್ತು 'ಮೀಸಲಾತಿಯ ಅಂತರಾಳ' ಅವರ ಕೃತಿಗಳು.



