ನಗರ ಸ್ಥಳೀಯ ಸಂಸ್ಥೆ ಹಾಗೂ ವಿವಿಧ ಇಲಾಖೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟ ಅನುದಾನ ಸಮರ್ಪಕ ಬಳಕೆಯಾಗಬೇಕು. ಬಳಕೆಯಾದ ಅನುದಾನ ಸದ್ಬಳಕೆ ಆಗುವಂತಹ ಕೆಲಸಗಳಾಗಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ, ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುದಾನ ದುರ್ಬಳಕೆ, ಚರಂಡಿ ನೀರು ನಿಲ್ಲುವುದು, ಕುಂದು ಕೊರತೆ ಸಭೆ, ನಿವೇಶನ ಮಂಜೂರು, ಜಮೀನುಗಳಿಗೆ ದಾರಿ, ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
“2025-2026ನೇ ಸಾಲಿನಲ್ಲಿ 73 ದೌರ್ಜನ್ಯ ಪ್ರಕರಣಗಳಿಗೆ ₹1.28 ಕೋಟಿ ಪರಿಹಾರ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣಗಳ ತನಿಖೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ತಪ್ಪಿಸ್ತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣ ದಡಿ ಪ್ರಾರಂಭದಿಂದ ಇಲ್ಲಿಯವರೆಗೆ 196 ಪ್ರಕರಣಗಳ ಪೈಕಿ 46 ಬಿಡುಗಡೆಯಾಗಿದ್ದು, ಅದರಲ್ಲಿ 19 ಪ್ರಕರಣಗಳಿಗೆ ಶಿಕ್ಷೆಯಾಗಿರುತ್ತದೆ” ಎಂದರು.
113 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಪೊಲೀಸ್ ಠಾಣೆಯಲ್ಲಿ 2025- 26ನೇ ಸಾಲಿನಲ್ಲಿ 73,2026-2027 ಸಾಲಿನಲ್ಲಿ 25 ಪ್ರಕರಣಗಳು ದಾಖಲಾಗಿರುತ್ತವೆ. ನಿಗಮದಲ್ಲಿ 2023- 24 ನೇ ಸಾಲಿನಿಂದ ಯಾವುದೇ ಕೊಳವೆ ಬಾವಿ ಕೊರೆಯಲು ಟೆಂಡರ್ ಆಗಿರುವುದಿಲ್ಲ ಎಂದು ನಿಗಮದ ಅಧಿಕಾರಿಗಳು ತಿಳಿಸಿದಾಗ, ಮಾತನಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ, “ರಾಜ್ಯಮಟ್ಟದಲ್ಲಿ ಟೆಂಡರ್ ಆಗಿಲ್ಲ ಎಂದು ಅಧಿಕಾರಿಗಳು ಹೇಳಿ ಕುಳಿತರೆ ಸಾಲದು. ಕೇಂದ್ರ ಕಚೇರಿ ಹಂತದಲ್ಲಿಯೂ ಪ್ರಯತ್ನ ಮಾಡಬೇಕು. ಆದಾಗ ಮಾತ್ರ ಕೆಲಸವಾಗುತ್ತದೆ” ಎಂದರು.
“ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಸ್ಮಶಾನದ ಬಗ್ಗೆ ಸಭೆಗೆ ಸಮಿತಿ ಸದಸ್ಯರು ತಿಳಿಸಿದಾಗ ಶಾಸಕ ಉಮೇಶ ಮೇಟಿ ಮಾತನಾಡಿ, ಈ ಬಗ್ಗೆ ಪರಿಶೀಲಿಸುವುದಾಗಿ ಹೇಳುತ್ತಾರೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆ ಯಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸ್ಮಶಾನಗಳಿಲ್ಲದ ಕಾಲೋನಿಗಳ ಪಟ್ಟಿ ಮಾಡಿಕೊಂಡು ಸಮಾಜ ಕಲ್ಯಾಣ ಇಲಾಖೆ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಸ್ಮಶಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಸಿದ್ದಾರ್ಥ್ ಗೋಯಲ್, ಅಧಿಕಾರಿಗಳಾದ ಎನ್ ವೈ ಬಸರಗಿಡದ,ಸದಾಶಿವ ಬಡಗೇರ, ಎ ಸಿ ಮನ್ನಿಕೆರಿ, ರೇಣುಕಾ ಎಂ, ಸಮಿತಿ ಸದಸ್ಯರಾದ ಯಮನಪ್ಪ ಪೂಜಾರ, ಶಿವಾನಂದ ಮಾದರ, ಪಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕವಲಗಿ, ದ್ಯಾಮಣ್ಣ ಗಾಳಿ, ಶ್ರೀಕಾಂತಗೌಡ ಗೌಡ್ರ, ಅಕ್ಬರ್ ಸಾಬ್ ಇದ್ದರು.




