ತೈವಾನ್ ಮೂಲದ ಲೇಖಕಿ ಯಾಂಗ್ ಶುಯಾಂಗ್-ಜಿ (Yáng Shuang-zi) ಹಾಗೂ ಅನುವಾದಕಿ ಲಿನ್ ಕಿಂಗ್ ಅವರು 2026ನೇ ಸಾಲಿನ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. 1930ರ ದಶಕದಲ್ಲಿ ಜಪಾನ್ ಆಡಳಿತದಲ್ಲಿದ್ದ ತೈವಾನ್ ಹಿನ್ನೆಲೆಯಲ್ಲಿ ರಚಿಸಲಾದ ‘ತೈವಾನ್ ಟ್ರಾವೆಲಾಗ್’ (Taiwan Travelogue) ಎಂಬ ಐತಿಹಾಸಿಕ ಕಾದಂಬರಿಗೆ ಮಂಗಳವಾರ (ಮೇ 19) ಈ ಗೌರವ ಒಲಿದಿದೆ.
ಇಂಗ್ಲಿಷ್‌ಗೆ ಅನುವಾದಗೊಂಡು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮ್ಯಾಂಡರಿನ್ ಚೈನೀಸ್ (Mandarin Chinese) ಭಾಷೆಯ ಮೊಟ್ಟಮೊದಲ ಕಾದಂಬರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದೆ. ಲಂಡನ್‌ನ ಟೇಟ್ ಮಾಡರ್ನ್ ಗ್ಯಾಲರಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ತೀರ್ಪುಗಾರರ ಮಂಡಳಿಯ ಅಧ್ಯಕ್ಷೆ ಹಾಗೂ ಬ್ರಿಟಿಷ್ ಕಾದಂಬರಿಗಾರ್ತಿ ನತಾಶಾ ಬ್ರೌನ್ ಅವರು ಈ ಕೃತಿಯನ್ನು “ಮೋಹಕ ಹಾಗೂ ಚತುರತೆಯಿಂದ ಕೂಡಿದ ಕಾದಂಬರಿ” (captivating, slyly sophisticated novel) ಎಂದು ಬಣ್ಣಿಸಿದ್ದಾರೆ. ಭಾಷೆ ಮತ್ತು ಅಧಿಕಾರದ ಸೂಕ್ಷ್ಮಗಳೊಂದಿಗೆ ಆಟವಾಡುತ್ತಲೇ, ಓದುಗರಿಗೆ ಪ್ರತಿ ಹಂತದಲ್ಲೂ ಅಚ್ಚರಿಗಳನ್ನು ನೀಡುವ ಅದ್ಭುತ ಕೃತಿ ಇದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾದಂಬರಿಯ ವಸ್ತು ವಿಷಯ
1930ರ ದಶಕದ ಜಪಾನ್ ನಿಯಂತ್ರಿತ ತೈವಾನ್‌ನಲ್ಲಿ ನಡೆಯುವ ಈ ಕಥೆಯು, ಜಪಾನಿ ಕಾದಂಬರಿಗಾರ್ತಿಯೊಬ್ಬಳ ತೈವಾನ್ ಪ್ರವಾಸ ಮತ್ತು ಅಲ್ಲಿನ ಖಾದ್ಯಗಳ ಅನ್ವೇಷಣೆಯ (culinary tour) ಕಾಲ್ಪನಿಕ ಪ್ರವಾಸ ಕಥನವಾಗಿದೆ. ಈ ಪಯಣದಲ್ಲಿ ಸ್ಥಳೀಯ ಭಾಷಾಂತರಗಾರ್ತಿಯೊಂದಿಗೆ ಆಕೆ ಬೆಳೆಸುವ ಸಂಕೀರ್ಣ ಹಾಗೂ ಆಪ್ತ ಸಂಬಂಧವನ್ನು ಕಾದಂಬರಿ ಬಿಚ್ಚಿಡುತ್ತದೆ. “ಪ್ರೀತಿಯು ಅಧಿಕಾರದ ಅಸಮಾನತೆಯನ್ನು ಮೀರಿ ನಿಲ್ಲಬಲ್ಲದೇ?” ಎಂಬ ಪ್ರಶ್ನೆಯನ್ನು ಎತ್ತುವ ಈ ಕೃತಿ, ವರ್ಗ ಸಂಘರ್ಷ ಹಾಗೂ ವಸಾಹತುಶಾಹಿ ವ್ಯವಸ್ಥೆಯ ಆಯಾಮಗಳನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ ಎಂದು ತೀರ್ಪುಗಾರರು ವಿಶ್ಲೇಷಿಸಿದ್ದಾರೆ.
ಇದನ್ನು ಓದಿದ್ದೀರಾ? ಇದು 140 ಕೋಟಿ ಜನರ ‘ಟೀಮ್ ಇಂಡಿಯಾ’ನೋ – ‘ಬಿಸಿಸಿಐ ಪ್ರೈವೇಟ್ ಲಿಮಿಟೆಡ್’ ಕಂಪನಿಯೋ?
ಬಹುಮಾನದ ವಿವರ ಮತ್ತು ಹಿನ್ನೆಲೆ
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯು 50,000 ಪೌಂಡ್ (ಅಂದಾಜು 65 ಲಕ್ಷ ರೂ.) ಬಹುಮಾನ ಮೊತ್ತವನ್ನು ಒಳಗೊಂಡಿದ್ದು, ನಿಯಮದ ಪ್ರಕಾರ ಲೇಖಕಿ ಯಾಂಗ್ ಶುಯಾಂಗ್-ಜಿ ಹಾಗೂ ಅಮೆರಿಕ-ತೈವಾನ್ ಮೂಲದ ಅನುವಾದಕಿ ಲಿನ್ ಕಿಂಗ್ ಈ ಮೊತ್ತವನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.
ಮೂಲತಃ ಈ ಕಾದಂಬರಿಯು 2020ರಲ್ಲಿ ಮ್ಯಾಂಡರಿನ್ ಭಾಷೆಯಲ್ಲಿ ಪ್ರಕಟವಾಗಿ, ತೈವಾನ್‌ನ ಅತ್ಯುನ್ನತ ಸಾಹಿತ್ಯ ಗೌರವವಾದ ‘ಗೋಲ್ಡನ್ ಟ್ರೈಪಾಡ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಬಳಿಕ, ಈ ಕೃತಿ 2024ರಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಅಮೆರಿಕದ ನ್ಯಾಷನಲ್ ಬುಕ್ ಅವಾರ್ಡ್ ಅನ್ನು ಸಹ ಗೆದ್ದಿತ್ತು. ಫ್ರೆಂಚ್ ಲೇಖಕಿ ಮೇರಿ ಎನ್‌ಡಿಯಾಯೆ (Marie NDiaye) ಮತ್ತು ಬ್ರೆಜಿಲ್‌ನ ಅನಾ ಪೌಲಾ ಮಾಯಾ ಅವರ ಕೃತಿಗಳು ಸೇರಿದಂತೆ ಅಂತಿಮ ಸುತ್ತಿನಲ್ಲಿದ್ದ ಐವರು ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ‘ತೈವಾನ್ ಟ್ರಾವೆಲಾಗ್’ ಈ ವರ್ಷದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು 2004ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಬ್ರಿಟನ್) ಸ್ಥಾಪಿಸಲಾಯಿತು ಹಾಗೂ 2005ರಲ್ಲಿ ‘ಮ್ಯಾನ್ ಬೂಕರ್ ಇಂಟರ್ನ್ಯಾಷನಲ್ ಪ್ರಶಸ್ತಿ’ ಎಂಬ ಹೆಸರಿನಲ್ಲಿ ಇದನ್ನು ಮೊದಲ ಬಾರಿಗೆ ಪ್ರದಾನ ಮಾಡಲಾಯಿತು. ಇದುವರೆಗೆ ಒಟ್ಟು ಮೂರು ಮಂದಿ ಭಾರತೀಯರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ; 2022ರಲ್ಲಿ ಹಿಂದಿಯ ‘ಟೋಂಬ್ ಆಫ್ ಸ್ಯಾಂಡ್’ ಕೃತಿಗಾಗಿ ಗೀತಾಂಜಲಿ ಶ್ರೀ ಅವರು ಮೊದಲ ಭಾರತೀಯ ಲೇಖಕಿಯಾಗಿ ಈ ಗೌರವ ಪಡೆದರೆ, 2025ರಲ್ಲಿ ಕನ್ನಡದ ‘ಹಾರ್ಟ್ ಲ್ಯಾಂಪ್: ಸೆಲೆಕ್ಟೆಡ್ ಸ್ಟೋರೀಸ್’ ಕೃತಿಗಾಗಿ ಭಾನು ಮುಷ್ತಾಕ್ ಅವರು ಎರಡನೇ ಭಾರತೀಯ ಲೇಖಕಿಯಾಗಿ ಹಾಗೂ ಅದೇ ಕೃತಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ದೀಪಾ ಭಸ್ತಿ ಅವರು ಮೊದಲ ಭಾರತೀಯ ಅನುವಾದಕಿಯಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.




