ದಿಲ್ಲಿ ಮಾತು | ಅವಿಭಜಿತ ಪಂಜಾಬಿನ ಶೇಕ್ಸ್‌ಪಿಯರ್ ವಾರಿಸ್‌ ಶಾಹ್ ಹಾಗೂ ಪಿತೃತ್ವವನ್ನು ಧಿಕ್ಕರಿಸಿದ ʼಹೀರ್ ರಾಂಝಾʼ

Date:

ಪಂಜಾಬಿ ಕವಿ ಅಮರ್ಜಿತ್ ಚಂದನ್ ಒಂದೆಡೆ ಹೇಳುತ್ತಾರೆ: “ಆಧ್ಯಾತ್ಮಿಕ–ಲೌಕಿಕ ಅರ್ಥದಲ್ಲಿ ವಾರಿಸ್ ಶಾಹ್ ಪಂಜಾಬಿನ ಮಹಾನ್ ಕವಿ ಎಂದು ಹೇಳಬಹುದು. ‘ಹೀರ್’ ಮತ್ತು ‘ರಾಂಝಾ’ ಇಲ್ಲದೆ ನಾವು ಪಂಜಾಬಿಗಳು ಅಪೂರ್ಣರು. ಮಹಾನ್ ಕವಿ ಪೂರಣ್ ಸಿಂಗ್ ಅವರು ವಾರಿಸ್ ಶಾಹ್ ರನ್ನು ತಮ್ಮ ಬಂಧು ಬಳಗ ಎಂದು ಗುರುತಿಸುತ್ತಾರೆ. 50ಕ್ಕೂ ಹೆಚ್ಚು ಕವಿಗಳು ಈ ‘ಕಿಸ್ಸಾ’ವನ್ನು ಬರೆದಿದ್ದಾರೆ; ಆದರೆ ಪಂಜಾಬಿನ ಈ ಎಲ್ಲಾ ಕವಿಗಳನ್ನು ಕವಿಗಳಾಗಿಸಿ ಅವರನ್ನು ಅಮರಗೊಳಿಸಿದವರು ವಾರಿಸ್ ಶಾಹ್.”

- Advertisement -

ಅವಿಭಜಿತ ಪಂಜಾಬಿನ ಶೇಕ್ಸ್‌ಪಿಯರ್ ಎಂದು ಕರೆಯಲ್ಪಡುವ ಸೂಫಿ ಸಂತ ಕವಿ ವಾರಿಸ್ ಶಾಹ್ ಅವರ ಹೆಸರನ್ನು ಕೇಳದವರೇ ಇಲ್ಲವೆನ್ನಬಹುದು. ದೇಶದ ವಿಭಜನೆಯ ಕಾಲದ ಕರಾಳ ದಿನಗಳಲ್ಲಿ ಎಲ್ಲೆಲ್ಲೂ ನರಮೇಧ, ಹಿಂಸೆ ತಾಂಡವವಾಡುತ್ತಿರುವ ಹೊತ್ತಿನಲ್ಲಿ ದುಃಖ –ಹತಾಶೆಯಲ್ಲಿ ಪಂಜಾಬಿನ ಕವಯತ್ರಿ ಅಮೃತಾ ಪ್ರೀತಂ ವಾರಿಸ್ ಶಾಹ್ ಅವರಲ್ಲಿ ಮೊರೆಯಿಟ್ಟಿದ್ದರು. ಆಕೆ ಬರೆದ ವಾರಿಸ್ ಶಾಹ್ ಕವಿತೆ ಆ ದಿನಗಳಲ್ಲಿ ಮನೆಮನೆಯ ಮಾತಾಗಿತ್ತು. ಜನರು ಮೌನವಾಗಿ ತಮ್ಮ ಹುದುಗಲಾರದ ದುಃಖವನ್ನು ಹೊತ್ತುಕೊಂಡು ಹಿಡಿ ಬದುಕಿಗಾಗಿ ದೊಡ್ಡ ಸಂಘರ್ಷಮಯ ದಿನಗಳನ್ನು ಕಳೆಯುತ್ತಿದ್ದಾಗ ಅಮೃತಾರ ಈ ಕವಿತೆ ತಪ್ತ ಎದೆಗಳಿಗೆ ತುಸು ತಂಪೆರೆಯುತ್ತಿತ್ತೇನೋ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಏಳು ವಾರಿಸ್ ಶಾಹ್
ನಿನ್ನ ಗೋರಿಯೊಳಗಿಂದಲೇ ಮಾತಾಡು
ಮತ್ತು ಪ್ರೇಮದ ಪುಸ್ತಕದಿಂದ
ಹೊಸ ಪುಟವನ್ನು ತೆರೆ
ಪಂಜಾಬದ ಒಬ್ಬ ಮಗಳು ಅತ್ತಿದ್ದಳು
ನೀನು ಒಂದು ಮಹಾಕಾವ್ಯವನ್ನೇ ಬರೆದೆ
ಇಂದು ಲಕ್ಷಾಂತರ ಹೆಣ್ಣುಮಕ್ಕಳು ಅಳುತ್ತಿರುವರು

ವಾರಿಸ್ ಶಾಹ್ ನಿನಗೇ ಹೇಳುತ್ತಿರುವೆ
ಪ್ರೇಮದ ಉಸಿರಿಗೆ ಉಸಿರಾಗುತ್ತಿದ್ದ
ಕೊಳಲು ಎಲ್ಲೋ ಕಳೆದುಹೋಯಿತು
ರಾಂಝನ ಎಲ್ಲ ಸೋದರರೂ
ಕೊಳಲು ನುಡಿಸುವುದನ್ನೇ ಮರೆತಿರುವರು…

ಎಂದು ಬರೆದಾಗ ಪಂಜಾಬ್ ಹಾಗೂ ಪಾಕಿಸ್ತಾನಕ್ಕೆ ಹಂಚಿಹೋದ ಪಂಜಾಬಿನ ಜನರು ಬಿಕ್ಕಳಿಸಿ ಅತ್ತಿದ್ದರು. ದೇಶ ವಿಭಜನೆಯಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ಹತಾಶರಾಗಿದ್ದ ಎರಡು ಹೋಳಾಗಿ ಎರಡು ದೇಶವಾಗಿ ಇಬ್ಬಾಗಗೊಂಡ ಒಂದೇ ನೆಲದ ಜನರು ಆ ಕವಿತೆಯನ್ನು ಕಣ್ಣಿಗೊತ್ತಿಕೊಂಡು ಜೇಬಿನಲ್ಲಿಟ್ಟುಕೊಂಡು ನಡೆದಾಡುತ್ತಿದ್ದರೆಂಬುದು ಇಂದು ಇತಿಹಾಸವಾಗಿದೆ. ಆದರೆ ದೀನ ದುಃಖಿತರ ಬಂಧುವಾಗಿದ್ದ ಸೂಫಿ ಸಂತ ವಾರಿಸ್ ಶಾಹ್ ಇವತ್ತಿಗೂ ಜನಮನದಲ್ಲಿ ಅಜರಾಮರವಾಗಿರುವರು.  

ವಾರಿಸ್ ಶಾಹ್ ಅವರು 1722ರ ಜನವರಿ 23ರಂದು ಪಾಕಿಸ್ತಾನದ ಜಂದಿಯಾಲಾ ಶೇರ್‌ಖಾನ್‌ನಲ್ಲಿ ಜನಿಸಿದರು. ಅವರು ಚಿಶ್ತಿ ಪಂಥದ ಪಂಜಾಬಿ ಸೂಫಿ ಕವಿ; ಬಹುಶಃ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, “ಹೀರ್ ರಾಂಝಾ” ಎಂಬ ಪ್ರೇಮಕಾವ್ಯವನ್ನು ಬರೆದ ಕವಿ ಇದೇ ವಾರಿಸ್ ಶಾಹ್. ಪಂಜಾಬಿ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ‘ಹೀರ್’ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದು ಅವರು ಪಂಜಾಬಿ ಸಾಹಿತ್ಯಕ್ಕೆ ನೀಡಿದ ಅಪ್ರತಿಮ ಕೊಡುಗೆ. 1766 ರಲ್ಲಿ ಸುಮಾರು 6,600 ಛಂದಗಳಲ್ಲಿ ಈ ಅಪ್ರತಿಮ ‘ಹೀರ್ ರಾಂಝಾ’ ಎಂಬ ಶಾಶ್ವತ ಪ್ರೇಮಕಾವ್ಯವನ್ನು ರಚಿಸಿದರು. ಇಂದಿಗೆ 260 ವರುಷಗಳ ಹರೆಯದ ಈ ಪ್ರೇಮಕಾವ್ಯ ಇಂದಿಗೂ  ಓದುಗರ, ಪಂಡಿತರ ಮತ್ತು ಚಿತ್ರರಂಗದವರಲ್ಲಿ ಅತ್ಯಂತ ಜನಪ್ರಿಯವಾಗಿದೆ. ‘ಹೀರ್’ ದೇಶ-ವಿದೇಶಗಳಲ್ಲಿ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಆಶ್ಚರ್ಯಕರ ಸಂಗತಿ ಏನೆಂದರೆ, ಪಾಕಿಸ್ತಾನ ಅಥವಾ ಭಾರತದಲ್ಲಿನ ಯಾವುದೇ ವಿಶ್ವವಿದ್ಯಾಲಯ ಅಥವಾ ಸಾಹಿತ್ಯ ಅಕಾಡೆಮಿ ಈ ಮಹತ್ವದ ಸಂದರ್ಭವನ್ನು ಸ್ಮರಿಸುವ ಕನಿಷ್ಠ ಕಾರ್ಯಕ್ರಮವನ್ನೂ ಆಯೋಜಿಸಿಲ್ಲ. ಕೇಬಿನೆಟ್ ಹುದ್ದೆ ಹೊಂದಿದ ಅಧ್ಯಕ್ಷರಾಗಿರುವ ಸುರಜಿತ್ ಪತಾರ್ ಅವರಂತಹ ಕವಿಯಿದ್ದಾಗಲೂ ವಾರಿಸ್ ಶಾಹ್ ನನ್ನು ಮರೆತೇಬಿಟ್ಟರೇ? ಅಥವಾ ಹೀರ್–ರಾಂಝಾ ಇಂದಿನ ಕಾಲದಲ್ಲಿ ಅಪ್ರಸ್ತುತವೇ?

ಆದರೆ, “ವಾರಿಸ್ ಶಾಹ್ ಅವರ ಮಹತ್ವ ಅಥವಾ ಅವರ ಬರಹಗಳ ಮೌಲ್ಯ ಯಾವತ್ತೂ ಕಡಿಮೆಯಾಗಿಲ್ಲ. ‘ಹೀರ್’ ಶಾಶ್ವತವಾಗಿ ಜೀವಂತವಾಗಿರುತ್ತದೆ. ವಾರಿಸ್ ಶಾಹ್ ಅಲ್ಲದೇ ಪ್ರೀತಿ, ಮಾನವೀಯತೆ, ಸಮಾನತೆಯನ್ನು ಸಾರಿದ ಪಂಜಾಬಿನ ಸೂಫಿ ಸಂತರುಗಳ ಒಂದು ಪಟ್ಟಿಯೇ ಇದೆ. ಪಂಜಾಬಿ ಭಾಷೆಯ ಮೊದಲ ಸೂಫಿ ಕವಿಗಳಾದ ಬಾಬಾ ಫರೀದ್ (ಅವರ ವಚನಗಳು ಗುರು ಗ್ರಂಥ ಸಾಹಿಬ್‍ನಲ್ಲಿ ಸೇರಿವೆ), ಮಾನವತಾವಾದ ಅಂಧಶ್ರದ್ಧೆಗಳ ವಿರುದ್ಧ  ದನಿ ಎತ್ತಿದ  – ಬುಲ್ಲೇ ಶಾ, ಕಾಫಿ ಶೈಲಿಯ ಕಾವ್ಯಕ್ಕಾಗಿ ಪ್ರಸಿದ್ಧರಾದ –ಶಾಹ್ ಹುಸೇನ್ ಮತ್ತು ಆತ್ಮಜ್ಞಾನ, ದೈವಪ್ರೀತಿಯ ಕುರಿತು ಕಾವ್ಯ ರಚಿಸಿದ – ಸುಲ್ತಾನ್ ಬಹು ಇವರು ಪ್ರಮುಖರು. “ದೇವರ ಪ್ರೀತಿಯಲ್ಲಿ ಲೀನವಾಗಿ ಮಾನವೀಯತೆ ಸಾರಿದ ಆಧ್ಯಾತ್ಮಿಕ ಸಂತರು. ಪಂಜಾಬಿ ಕವಿಯತ್ರಿ ಅಮೃತಾ ಪ್ರೀತಂ ಅವರ ಮೇಲೆ ಈ ಸೂಫಿಗಳ ಪ್ರಭಾವ ಅಪಾರವಾಗಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ.    

ಪಂಜಾಬಿ ಕವಿ ಅಮರ್ಜಿತ್ ಚಂದನ್  ಒಂದೆಡೆ ಹೇಳುತ್ತಾರೆ:

“ಆಧ್ಯಾತ್ಮಿಕ–ಲೌಕಿಕ ಅರ್ಥದಲ್ಲಿ ವಾರಿಸ್ ಶಾಹ್ ಪಂಜಾಬಿನ ಮಹಾನ್ ಕವಿ ಎಂದು ಹೇಳಬಹುದು. ‘ಹೀರ್’ ಮತ್ತು ‘ರಾಂಝಾ’ ಇಲ್ಲದೆ ನಾವು ಪಂಜಾಬಿಗಳು ಅಪೂರ್ಣರು — ಮಹಾನ್ ಕವಿ ಪೂರಣ್ ಸಿಂಗ್ ಅವರು ವಾರಿಸ್ ಶಾಹ್ ರನ್ನು ತಮ್ಮ ಬಂಧು ಬಳಗ ಎಂದು ಗುರುತಿಸುತ್ತಾರೆ. 50ಕ್ಕೂ ಹೆಚ್ಚು ಕವಿಗಳು ಈ ‘ಕಿಸ್ಸಾ’ವನ್ನು ಬರೆದಿದ್ದಾರೆ; ಆದರೆ ಪಂಜಾಬಿನ ಈ ಎಲ್ಲಾ ಕವಿಗಳನ್ನು ಕವಿಗಳಾಗಿಸಿ ಅವರನ್ನು ಅಮರಗೊಳಿಸಿದವರು ವಾರಿಸ್ ಶಾಹ್.”

ಲಾಹೋರ್‌ನ ಖ್ಯಾತ ಪಂಜಾಬಿ ಲೇಖಕ, ಧಹಾನ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ನೈನ್ ಸುಖ್ ಹೇಳುವಂತೆ “ವಾರಿಸ್ ಶಾಹ್ ಅವರು ʼಹೀರ್ʼ ರಚಿಸಿ ಮತಾಂಧ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ದುರಂತ ಪ್ರೇಮಕಥೆಯಾಗಿ ಪ್ರತಿಯೊಬ್ಬ ಪಂಜಾಬಿಯ ಹೃದಯಕ್ಕೆ ಹತ್ತಿರ ಮಾಡಿದರು. ಕಳೆದ 300 ವರ್ಷಗಳಲ್ಲಿ ಅವರ ಸಾಧನೆ ಅಪರೂಪದಾಗಿದೆ.”

ಈ ‘ಕಿಸ್ಸಾ’ ಪಂಜಾಬಿನ ಓದುಗರ ಹಾಗೂ ಅನಕ್ಷರಸ್ಥರ ಮನೆಯ ಭಾಗವಾಗಿದೆ; ಅದರ ಮೌಖಿಕ ಪರಂಪರೆಯ ಮೌಲ್ಯದಿಂದಾಗಿ. ಪಂಜಾಬನ್ನು ಅರ್ಥಮಾಡಿಕೊಳ್ಳಲು ವಾರಿಸ್ ಶಾಹ್ ಅವರ ‘ಹೀರ್’ ತಿಳಿದುಕೊಳ್ಳಬೇಕು; ಇಂಗ್ಲೆಂಡ್ ಅನ್ನು ಹೇಗೆ ಶೇಕ್ಸ್‌ಪಿಯರ್ ಇಲ್ಲದೆ ಅರ್ಥಮಾಡಿಕೊಳ್ಳಲಾಗದೋ ಅದರಂತೆ ವಾರಿಸ್ ಶಾಹ್ ಇಲ್ಲದೇ ಪಂಜಾಬನ್ನು ಅರ್ಥಮಾಡಿಕೊಳ್ಳಲಾಗದು. ದೇಶದ ಪ್ರತಿಯೊಬ್ಬ ಶ್ರೇಷ್ಠ ಗಾಯಕನೂ ಈ ಕತೆಯನ್ನು ಹಾಡಿದ್ದಾರೆ. ಪ್ರತಿಯೊಬ್ಬ ರಂಗಕರ್ಮಿಯ ಕನಸು ಇದನ್ನು ರಂಗಭೂಮಿಯಲ್ಲಿ ಮೂಡಿಸುವುದಾಗಿದೆ. ಅನೇಕ ಚಿತ್ರಗಳು ಈ ಪ್ರೇಮಕಥೆಯ ಆಧಾರದಲ್ಲಿ ನಿರ್ಮಾಣಗೊಂಡಿವೆ, ಅವುಗಳಲ್ಲಿ Waris Shah: Ishq da Waris (2006) ಕೂಡ ಸೇರಿದೆ.

maxresdefault 643

18ನೇ ಶತಮಾನದಲ್ಲಿ ರಚಿಸಿದ ಈ ಕಾವ್ಯವನ್ನು ಸಾಮಾನ್ಯವಾಗಿ ಶಾಶ್ವತ ಪ್ರೇಮಕಥೆಯಾಗಿ ಕೊಂಡಾಡಲಾಗುತ್ತದೆ. ಆದರೆ ‘ಹೀರ್’ ಕೇವಲ ಪ್ರೇಮದ ಕಾವ್ಯವಲ್ಲ. ಅದು ಅಂದಿನ ಆಂತರಿಕ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೂ ವ್ಯಾಖ್ಯಾನಿಸುತ್ತದೆ. ಸ್ತ್ರೀವಾದಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದಾಗ, ಇದು ಪಿತೃತ್ವಾಧಿಪತ್ಯ, ವರ್ಗಶಕ್ತಿ, ಧಾರ್ಮಿಕ ಕಪಟ ಮತ್ತು ಇಂದಿನ ಸಮಾಜದಲ್ಲಿ ಹೇಳಲಾಗುವ “ಕುಟುಂಬ ಗೌರವ” ರಾಜಕೀಯದ ವಿರುದ್ಧದ ಆಳವಾದ ವಿಮರ್ಶೆಯಾಗಿ ಕಾಣಿಸುತ್ತದೆ.

18ನೇ ಶತಮಾನದ ಪಂಜಾಬ್ ರಾಜಕೀಯ ಅಸ್ಥಿರತೆ, ಧಾರ್ಮಿಕ ಸಂಘರ್ಷಗಳು ಮತ್ತು ವರ್ಗಭೇದಗಳಿಂದ ಕೂಡಿತ್ತು. ಕುಟುಂಬದ ಗೌರವ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವ್ಯಕ್ತಿಯ ಆಯ್ಕೆ ಸ್ವಾತಂತ್ರ್ಯವನ್ನು ನಿಯಂತ್ರಿಸುವ ವ್ಯವಸ್ಥೆ ಸಾಮಾನ್ಯವಾಗಿತ್ತು. ಮಹಿಳೆಯ ಜೀವನ ನಿರ್ಧಾರಗಳು; ವಿಶೇಷವಾಗಿ ವಿವಾಹ — ಅವಳ ಇಚ್ಛೆಯ ಮೇಲೆ ಅಲ್ಲ, ಕುಟುಂಬದ ಹಿತಾಸಕ್ತಿಗಳ ಮೇಲೆ ಅವಲಂಬಿತವಾಗಿದ್ದವು. ಈ ಹಿನ್ನೆಲೆಯಲ್ಲೇ ‘ಹೀರ್’ ಕಥೆ ರೂಪುಗೊಳ್ಳುತ್ತದೆ.

ರಾಂಝಾ ತನ್ನ ಮನೆತನದ ಒಳಗಿನ ಕಲಹದಿಂದ ಮನೆ ಬಿಟ್ಟು ಹೊರಡುತ್ತಾನೆ. ಹೀರ್‌ನ ಊರಿಗೆ ಬಂದು ಅವಳ ದನಕರುಗಳನ್ನು ಮೇಯಿಸುವ ಕೆಲಸಕ್ಕೆ ಸೇರುತ್ತಾನೆ. ಹಸಿರು ಹೊಲಗಳು ಮತ್ತು ನದಿ ತೀರಗಳ ಮಧ್ಯೆ ಇಬ್ಬರ ನಡುವೆ ಪ್ರೀತಿ ಅರಳುತ್ತದೆ.

ಆದರೆ ಈ ಪ್ರೀತಿ ಸಮಾಜದ ನಿಯಮಗಳಿಗೆ ಸವಾಲಾಗುತ್ತದೆ. ಕುಟುಂಬದ “ ಮರ್ಯಾದೆ (ಇಜ್ಜತ್)” ಪ್ರಶ್ನೆಯಾಗುತ್ತದೆ. ಇಬ್ಬರು ಪ್ರೇಮಿಗಳು ಎಂದೂ ಒಂದಾಗಬಾರದೆಂದೇ ಹೀರ ಚಿಕ್ಕಪ್ಪ ಕೈದೋನ ಮಸಲತ್ತಿನಿಂದ ಹೀರ್‌ಳನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಬೇರೆ ವ್ಯಕ್ತಿಗೆ ವಿವಾಹಮಾಡಿಕೊಡಲಾಗುತ್ತದೆ. ಭಗ್ನಹೃದಯಿ ರಾಂಝಾ ತಪಸ್ಸಿನ ಮಾರ್ಗ ಹಿಡಿದು ಜೋಗಿಯಾಗುತ್ತಾನೆ. ದರ್ವೇಶನಂತೆ ಊರೂರು ಅಲೆಯುತ್ತಾನೆ. ಹೀರಳಿಗಾಗಿ ಹುಚ್ಚನಂತೆ ಪ್ರಲಾಪಿಸುತ್ತಾನೆ. ಅನೇಕ ವರ್ಷಗಳು ಉರುಳುತ್ತವೆ. ಕೊನೆಗೊಮ್ಮೆ ಹೀರ್ ತವರಿಗೆ ಬಂದಾಗ ಮತ್ತೊಮ್ಮೆ ರಾಂಝಾನ ಭೇಟಿಯಾಗುತ್ತದೆ. ಕಳೆದುಹೋದ ಪ್ರೇಮಿಗಳು ದಣಿದ ಕಣ್ಣುಗಳಲ್ಲಿ ಒಬ್ಬರನ್ನೊಬ್ಬರು ತುಂಬಿಕೊಳ್ಳುತ್ತಾರೆ. ಇಬ್ಬರಲ್ಲೂ ಪ್ರಶ್ನೆಗಳಿರಲಿಲ್ಲ ಕೇವಲ ಪ್ರೀತಿ. ಈಗ ಹೀರಳ ಕುಟುಂಬ , ಅವಳ ಚಿಕ್ಕಪ್ಪ ಒಂದು ನಾಟಕವಾಡುತ್ತಾನೆ. ಇಷ್ಟು ವರ್ಷಗಳ ಕಾಲ ನಿಮ್ಮನ್ನು ಅಗಲಿಸಿದ ಪಾಪಕ್ಕೆ ಪ್ರಾಯಶ್ಚಿತ ಮಾಡಿಕೊಳ್ಲಬೇಕಿದೆ. ನೊಂದಿದ್ದು ಸಾಕು ಇಬ್ಬರನ್ನೂ ಮದುವೆ ಮಾಡುತ್ತೇವೆ “ಎಂದು ನಂಬಿಸುತ್ತಾರೆ. ಅದರಂತೆ ಹೀರ ಮತ್ತು ರಾಂಝರ ವಿವಾಹವನ್ನು ಏರ್ಪಡಿಸಲಾಗುತ್ತದೆ. ಹೀರಳ ಸಂತೋಷಕ್ಕೆ ಪಾರವೇ ಇಲ್ಲ. ಮದುವೆಯ ದಿನ ಹೀರಳ ಚಿಕ್ಕಪ್ಪ ಹೀರಳಿಗೆ ಭೂರಿಭೋಜನದಲ್ಲಿ ವಿಷ ಸೇರಿಸಿ ಉಣಿಸುತ್ತಾರೆ.

ಮರಣದ ಅಂಚಿನಲ್ಲಿರುವ ಹೀರ್ ಹೇಳುತ್ತಾಳೆ…”ರಾಂಝಾ, ನಾವು ಈ ಲೋಕದಲ್ಲಿ ಒಂದಾಗಲಿಲ್ಲ, ಆದರೆ ಪ್ರೀತಿ ಸಾಯುವುದಿಲ್ಲ…” ಅಲ್ಲಿಗೆ ಓಡಿ ಬಂದ ರಾಂಝಾ ಆಕೆಯ ಕೈಹಿಡಿದು ಅದೇ ವಿಷಮಿಶ್ರಿತ ಆಹಾರವನ್ನು ತಾನೂ ಸೇವಿಸುತ್ತಾನೆ. ಅವರ ದೇಹಗಳು ಮಣ್ಣಾದವು. ಆದರೆ ಅವರ ಪ್ರೀತಿ ಇನ್ನೂ ಜೀವಂತವಾಗಿದ.

ಹೀಗೆ ಕುಟುಂಬದ ಗೌರವ, ಮರ್ಯಾದೆಯ ರಾಜಕೀಯದ ಪರಿಣಾಮವಾಗಿ ಹೀರ್ ರಾಂಝಾ ಇಬ್ಬರೂ ದುರಂತ ಅಂತ್ಯವನ್ನು ಕಾಣುತ್ತಾರೆ. ಈ ಕಥೆಯ ದುರಂತ ಅಂತ್ಯವು ಕೇವಲ ಪ್ರೇಮಿಗಳ ಸೋಲಲ್ಲ; ಅದು ವ್ಯವಸ್ಥೆಯ ಕ್ರೂರತೆಯ ಪ್ರತಿಫಲ.

ಇಂದಿನ ಸಮಾಜದಲ್ಲಿಯೂ ಜಾತಿ–ಧರ್ಮ ಆಧಾರಿತ ಪ್ರೇಮ ವಿರೋಧ, ಬಲವಂತದ ವಿವಾಹ ಮತ್ತು ಮಹಿಳೆಯ ಆಯ್ಕೆಯ ನಿರಾಕರಣೆ ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿಯೇ ‘ಹೀರ್’ ಕಾವ್ಯವು ಹೊಸ ಅರ್ಥ ಪಡೆಯುತ್ತದೆ.

ಇನ್ನು ಕಾವ್ಯದ ಕೇಂದ್ರಬಿಂದು ಹೀರ್ ಪಾತ್ರ. ಅವಳು  ಪಿತೃತ್ವಾಧಿಪತ್ಯದ ಸಮಾಜದಲ್ಲಿ ತನ್ನ ಪ್ರೀತಿಯನ್ನು ಆಯ್ಕೆಮಾಡುವ ಹಕ್ಕನ್ನು ಘೋಷಿಸುತ್ತಾಳೆ. ಅವಳು ಮೌನವಾಗುಳಿಯುವುದಿಲ್ಲ; ಪ್ರಶ್ನಿಸುತ್ತಾಳೆ, ವಿರೋಧಿಸುತ್ತಾಳೆ, ತನ್ನ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾಳೆ ಕುಟುಂಬದ ಎದುರು. ಇಲ್ಲಿ ಹೀರ್‌ಳ ಬಲವಂತದ ವಿವಾಹವು ಮಹಿಳೆಯ ದೇಹದ ಮೇಲಿನ ಕುಟುಂಬದ ನಿಯಂತ್ರಣವನ್ನು ತೋರಿಸುತ್ತದೆ. ಮಹಿಳೆಯ ದೇಹವನ್ನು ಕುಟುಂಬದ ಗೌರವದ ಸಂಕೇತವನ್ನಾಗಿ ಮಾಡುವ ಪ್ರಕ್ರಿಯೆ ಪಿತೃತ್ವದ ಮೂಲಭೂತ ತತ್ವ. ಈ ಹಿನ್ನೆಲೆಯಲ್ಲಿ ಹೀರ್‌ಳ ಪ್ರತಿರೋಧ  ಹದಿನೆಂಟನೇ ಶತಮಾನದಲ್ಲಿಯೇ ಪಿತೃತ್ವವನ್ನು ಧಿಕ್ಕರಿಸಿದ ಹೆಣ್ಣೊಬ್ಬಳ ದಿಟ್ಟ ನಡೆಯಾಗಿ ನೋಡಬೇಕಾಗುತ್ತದೆ.

“ಮೈ ರಾಂಝಾ ರಾಂಝಾ ಜಪತೇ ಜಪತೇ ಖುದ್ ಹೀ ರಾಂಝಾ ಬನ ಗಯಿ ಹೂಂ”
“ರಾಂಝಾ ರಾಂಜಾ…“ ಜಪಿಸುತ್ತಾ ನಾನೇ ರಾಂಝಾನಾಗಿ ಹೋಗಿರುವೆ
ಇನ್ನೆನಗೆ ಹೀರ್ ಎಂದು ಕರೆಯದಿರಿ, ರಾಂಜಾ ಎಂದೇ ಕರೆಯಿರಿ” 

ಪ್ರೇಮದಲ್ಲಿ ಜೀವಗಳು ಎರಡಲ್ಲ ಒಂದೇ, ದೇಹವೆರಡು ಆತ್ಮವೊಂದೇ ಎನ್ನುವ ಭಾವವಿಲ್ಲಿದೆ. 

“ಹೀರ್ ಆಖೇ  ರಾಂಝಾ ರಬ್ ದಾ ನಾಂ
ಸಾಹ್ ಸಾಹ್ ವಿಚ್ ವಸ್ಸೇ ಪ್ರಾಣ್
ಇಶ್ಕ್ ಬಿನಾ ಸಬ್ ಸೂನಾ ಲಾಗೇ
ಜಿವೇಂ ತನ್ ವಿಚ್ ನಾ ಹೋವೇ ಜಾನ್ “   

ಹೀರ್ ಹೇಳುತ್ತಾಳೆ – ರಾಂಜಾ ದೇವರ ಹೆಸರಿನಂತಿದ್ದಾನೆ
ಪ್ರತಿ ಉಸಿರಿನಲ್ಲೂ ಅವನೇ ನೆಲೆಸಿದ್ದಾನೆ
ಪ್ರೇಮವಿರದೇ ಎಲ್ಲವೂ ಶೂನ್ಯವೆನಿಸುವುದು
ದೇಹದಲ್ಲಿ ಪ್ರಾಣವೇ ಇಲ್ಲದಂತಾಗುತ್ತದೆ

ಈ ಪಂಕ್ತಿಗಳಲ್ಲಿ ಸೂಫಿ ತತ್ವ ಸ್ಪಷ್ಟವಾಗಿದೆ. ಪ್ರೇಮವೆಂದರೆ ಅದು ದೇವರನ್ನು ತಲುಪುವ ಮಾರ್ಗ. ಪ್ರೇಮವೆಂದರೆ  ಅದು ಕೇವಲ ಇಬ್ಬರ ನಡುವಿನ ಬಂಧವಲ್ಲ, ಅದು ಆತ್ಮ ಆತ್ಮಗಳು ಒಂದಾಗುವ, ಲೀನವಾಗುವ ಅನುಭವ.

ಅದೇ ಸೂಫಿ ತತ್ತ್ವದಲ್ಲಿ ಪ್ರೀತಿ ದೇವರತ್ತ ಕೊಂಡೊಯ್ಯುವ ಮಾರ್ಗ. ಆದರೆ ವಾರಿಸ್ ಶಾಹ್ ಈ ಆಧ್ಯಾತ್ಮಿಕ ಪ್ರೀತಿಯನ್ನು ಸಾಮಾಜಿಕ ಅರ್ಥಗಳೊಂದಿಗೆ ಜೋಡಿಸುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಕಪಟವನ್ನು ಅವರು ಸೂಕ್ಷ್ಮವಾಗಿ ವಿಮರ್ಶಿಸುತ್ತಾರೆ. ಹೀಗಾಗಿ ಪ್ರೀತಿ ಇಲ್ಲಿ ಮಾನವೀಯ ಸಮಾನತೆಯ ಘೋಷಣೆಯಾಗುತ್ತದೆ. ‘ಹೀರ್’ ಕಾವ್ಯವು ಈ ಪ್ರಶ್ನೆಯನ್ನು ಕಾವ್ಯಾತ್ಮಕವಾಗಿ ಎತ್ತುತ್ತದೆ.

ಹೀರ್ ರಾಂಝಾ ಇಬ್ಬರೂ ಜಾಟ್ ಸಮುದಾಯದವರೇ ಆಗಿದ್ದರೂ ಬೇರೆ ಬೇರೆ ಕುಲಗೋತ್ರ, ಸಾಮಾಜಿಕ ಸ್ತರಗಳು, ಕುಟುಂಬದ ಮಾನ ಮರ್ಯದೆ, ಸಾಮಾಜಿಕ ನಿಯಮಗಳ ಒತ್ತಡ ಅವರ ಪ್ರೀತಿಯನ್ನು ಅಲ್ಲಗಳೆಯುತ್ತದೆ, ಅಡ್ಡಿಪಡಿಸುತ್ತದೆ.  ಬಹುಮುಖ್ಯವಾಗಿ ಹೆಣ್ಣನ್ನು ನಿಯಂತ್ರಿಸುವ ಪಿತೃತ್ವ ವ್ಯವಸ್ಥೆ. ಅವಳ ಇಚ್ಛೆಗೆ ವಿರುದ್ಧವಾಗಿ ಜರುಗುವ ಹೀರಳ ಮದುವೆ. 

‘ಹೀರ್’ ಕಾವ್ಯದಲ್ಲಿ ಪ್ರೀತಿ ಕೇವಲ ವೈಯಕ್ತಿಕ ಅನುಭವವಾಗದೇ ಅದು ಸಾಮಾಜಿಕ ನಿಯಮಗಳ ವಿರುದ್ಧದ ಪ್ರತಿರೋಧ. ಜಾತಿ, ವರ್ಗ ಮತ್ತು ಕುಟುಂಬದ ಗಡಿಗಳನ್ನು ಮೀರುವ ಪ್ರೀತಿ ಇಲ್ಲಿ ಸ್ವಾತಂತ್ರ್ಯದ ರೂಪಕವಾಗುತ್ತದೆ. ಹೀರ್‌ನ ದುರಂತ ಅಂತ್ಯವನ್ನು ಇಂದಿನ ಗೌರವ ಹತ್ಯೆಗಳ ಪೂರ್ವರೂಪವಾಗಿ ಓದಬಹುದು. ಸಮುದಾಯದ ಗೌರವದ ಹೆಸರಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ನಿಗ್ರಹಿಸುವ ಕ್ರಮವು ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಗಂಭೀರ ಪ್ರಶ್ನೆ ಎತ್ತುತ್ತದೆ: ಸಮುದಾಯದ ಮಾನಕ್ಕಾಗಿ ವ್ಯಕ್ತಿಯ ಜೀವನವನ್ನು ಬಲಿಯಾಗಿಸುವುದು ನ್ಯಾಯಸಮ್ಮತವೇ?

ಇದನ್ನೂ ಓದಿ ದಿಲ್ಲಿ ಮಾತು | ಕಬ್ಬು ಕಟಾವು ಮತ್ತು ಮುಟ್ಟು ಎಂಬ ರಾಷ್ಟ್ರೀಯ ವಿದ್ಯಮಾನ!

ಹೀರ್ ಪಾತ್ರವು ಇಂದಿನ ಮಹಿಳಾ ಹೋರಾಟಗಳ ಪೂರ್ವರೂಪವಾಗಿ ಕಾಣುತ್ತದೆ. ಅವಳು ತನ್ನ ಆಯ್ಕೆಯ ಹಕ್ಕಿಗಾಗಿ ನಿಂತ ಮಹಿಳೆಯ ಸಂಕೇತ.

ವಾರಿಸ್ ಶಾಹ್ ಅವರ ‘ಹೀರ್’ ಕಾವ್ಯವು ಶಾಶ್ವತ ಪ್ರೇಮಕಾವ್ಯ ಮಾತ್ರವಲ್ಲ; ಅದು ಮಹಿಳಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಮಾನತೆಯ ಘೋಷಣೆ. ಹೀರ್ ಮೌನಕ್ಕೆ ತಲೆಬಾಗದ ಮಹಿಳೆ; ರಾಂಝಾ ಪ್ರೀತಿಯನ್ನು ಧರ್ಮ ಮತ್ತು ವರ್ಗಕ್ಕಿಂತ ಮೇಲಿಟ್ಟ ಮಾನವ. ಹೀಗೆ ‘ಹೀರ್’ ಕಾವ್ಯವು ಸಾಹಿತ್ಯದ ಮೀರಿದ ಅರ್ಥವನ್ನು ಹೊಂದಿದೆ. ಅದು ಪ್ರತಿ ಸಮಾಜ ಮಾಡಿಕೊಳ್ಳಬಹುದಾದ ಆತ್ಮಪರಿಶೀಲನೆ.    

ವಾರಿಸ್ ಶಾಹ್ ಕೇವಲ 18ನೇ ಶತಮಾನದ ಕವಿ ಅಲ್ಲ; ಅವರು ಇಂದಿಗೂ ಮಾತನಾಡುವ ಸ್ವರ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...

ಜಿಎಸ್‌ಟಿ ದಸ್ತಗಿರಿ ಅಧಿಕಾರ ಹಿಂಪಡೆಯುವ ಪ್ರಸ್ತಾಪ: ಆಡಂಬರದ ಜಾರಿಯೂ ಇಂದಿನ ಭ್ರಮನಿರಸನವೂ….

2017ರ ಜೂನ್ 30ರ ಮಧ್ಯರಾತ್ರಿ ಭಾರತದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಾಗಿತ್ತು....

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...

ಬೀದರ್‌ | ಯುವ ಸಂಸತ್‍ನಲ್ಲಿ ಮಹತ್ವದ ಚರ್ಚೆ

ಬೀದರ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಶನಿವಾರ...