ತುಮಕೂರು ವಿಷ ಮುಕ್ತ ಆಹಾರ ಮತ್ತು ಮಾಲಿನ್ಯ ಮುಕ್ತ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡುವ ಸಲುವಾಗಿ ರಾಸಾಯನಿಕ ಕೃಷಿ ಪದ್ದತಿಯನ್ನು ಬದಿಗೊತ್ತಿ, ದೇಶಿಯ ಗೋ ಆಧಾರಿತ ಸಾವಯವ ಅಥವಾ ನೈಸರ್ಗಿಕ ಕೃಷಿ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏ.26ರಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಬಸವೇಶ್ವರ ಚಲನಚಿತ್ರ ಮಂದಿರದಲ್ಲಿ ನೈಸರ್ಗಿಕ ಕೃಷಿ ತರಬೇತಿಯನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಸಂಘದ ರಾಜ್ಯಾಧ್ಯಕ್ಷ ಬಿ ಎಲ್ ರಘುರಾಮ್ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನರಿಗೆ ನೈಸರ್ಗಿಕ ಕೃಷಿಯ ಅಗತ್ಯತೆಗಳ ಜೊತೆಗೆ ವಾಣಿಜ್ಯ ಬೆಳೆಯಾಗಿ ಶ್ರೀಗಂಧ ಬೆಳೆಯುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಶ್ರೀಗಂಧದ ಉತ್ಪನ್ನಗಳ ಮೌಲ್ಯ ವರ್ಧನೆ, ಯುವಜನರಿಗೆ ಕೃಷಿಯ ಜೊತೆಗೆ ವಿವಿಧ ಆದಾಯದ ಮೂಲಗಳ ಪರಿಚಯ, ದೇಶಿಯ ಗೋ ಆಧಾರಿತ ಕೃಷಿ ಹಾಗೂ ಗೋವಿನ ಸಗಣಿ ಮತ್ತು ಗಂಜಲದಿಂದ ಔಷಧಿ ತಯಾರಿಕೆ ಹೀಗೆ ಹತ್ತು ಹಲವು ಅಯಾಮಗಳಲ್ಲಿ ಯುವಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಅವರನ್ನು ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗದಂತೆ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ” ಎಂದರು.
ನೈಸರ್ಗಿಕ ಕೃಷಿ
ಸಾವಯವ ಮತ್ತು ನೈಸರ್ಗಿಕ ಕೃಷಿ ವ್ಯವಸ್ಥೆಗಳು ರಸಾಯನಿಕ ಕೃಷಿಯಿಂದ ಜನರನ್ನು ಹೊರ ತರುವ ಮಾರ್ಗೋಪಾಯಗಳಾಗಿವೆ. ಬೆಳೆಗಳಲ್ಲಿ ವೈವಿಧ್ಯತೆ, ಜಮೀನಿನಲ್ಲಿ ಜೀವರಾಶಿ ನಿರ್ವಹಣೆ, ನೈಸರ್ಗಿಕ ಪೋಷಕಾಂಶಗಳ ಮರುಬಳಕೆಯ ಪುನರುಜ್ಜೀವನ, ಬೆಳೆ ಸರದಿ, ಬಹು ಬೆಳೆ ಮತ್ತು ಪರಿಣಾಮಕಾರಿ ಸಂಪನ್ಮೂಲ ಮರುಬಳಕೆ ಇವು ನೈಸರ್ಗಿಕ ಅಥವಾ ಸಾವಯವ ಕೃಷಿಯ ಪ್ರಮುಖ ಅಂಶಗಳಾಗಿವೆ. ಜೊತೆಗೆ ಸಾವಯವ ವ್ಯವಸ್ಥೆಗಳು ಕೃಷಿಯಿಂದ ಹೊರಗೆ ಖರೀದಿಸಿದ ಸಾವಯವ ಮತ್ತು ಜೈವಿಕ ಒಳಹರಿವುಗಳ ಬಳಕೆಗೆ ಮತ್ತು ನೈಸರ್ಗಿಕ ಗಣಿಗಾರಿಕೆ ಮಾಡಿದ ಖನಿಜಗಳ ಮೂಲಕ ಅಗತ್ಯ ಮಣ್ಣಿನ ಉಪಚಾರಕ್ಕೆ ಮುಕ್ತವಾಗಿವೆ.
ನೈಸರ್ಗಿಕ ಕೃಷಿ ವ್ಯವಸ್ಥೆಗಳು ಜೈವಿಕ ಗೊಬ್ಬರ ಹಾಕುವಿಕೆ, ವರ್ಷಪೂರ್ತಿ ಹಸಿರು ಹೊದಿಕೆ ಇರುವಂತೆ ನೋಡಿಕೊಳ್ಳುವುದು, ಹಸುವಿನ ಸಗಣಿ ಮತ್ತು ಮೂತ್ರವನ್ನು ಆಧರಿಸಿವೆ. ಎಲ್ಲಾ ಸಾವಯವ ಅಥವಾ ಉಪ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಯಾವ ದುಷ್ಪರಿಣಾಮವನ್ನು ಬೀರದು ಬದಲಿಗೆ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಇರಿಸುತ್ತವೆ. ಅಲ್ಲದೆ ರಸಾಯನಿಕ ಕೃಷಿ ಪದ್ಧತಿಯ ಅತಿಯಾದ ಕೀಟನಾಶಕ, ರಸಗೊಬ್ಬರ ಬಳಕೆಯಿಂದ ಹಾನಿಯಾಗಿರುವ ಮಣ್ಣಿನ ಫಲವತ್ತತೆ ರಕ್ಷಿಸುವುದರ ಜೊತೆಗೆ, ಭೂಮಿಯಲ್ಲಿ ನೈಸರ್ಗಿಕ ಸೂಕ್ಷಾಣು ಜೀವಿಗಳನ್ನು ಉದ್ದೀಪನ ಗೊಳಿಸಿ ಕೃಷಿ ಖರ್ಚು ಕಡಿಮೆ ಮಾಡುವ ಮೂಲಕ ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ನೀಡಲು ಸಾವಯವ ಕೃಷಿ ಒಂದು ಅತ್ಯುತ್ತಮ ಕೃಷಿ ಪದ್ದತಿಯಾಗಿದೆ.
ಶ್ರೀಗಂಧ ಬೆಳೆ
ಕನ್ನಡ ನಾಡು, ಶ್ರೀಗಂಧದ ಬೀಡು ಎಂಬ ಹಿರಿಯರ ಮಾತುಗಳನ್ನು ನಾವು ಕೇಳಿದ್ದೇವೆ. ಶ್ರೀಗಂಧ ಒಂದು ಪರಾವಲಂಬಿ ಸಸ್ಯ. ಇದನ್ನು ಬೆಳೆಯುವುದರಿಂದ ರೈತರು ಹೆಚ್ಚಿನ ಖರ್ಚಿಲ್ಲದೆ, ಉತ್ತಮ ಲಾಭ ಗಳಿಸಬಹುದಾಗಿದೆ.ಪ್ರಸ್ತುತ ಅರಣ್ಯ ಇಲಾಖೆಯ ಅಧೀನದಲ್ಲಿರುವ ಶ್ರೀಗಂಧವನ್ನು ತೋಟಗಾರಿಕೆ ಇಲಾಖೆಯ ಪರಿಧಿಗೆ ತಂದು, ಶ್ರೀಗಂಧ ಬೆಳೆಯನ್ನು ಎಲ್ಲರೂ ಬೆಳೆಯುವಂತೆ ಮತ್ತು ಕೊಯ್ಲು ಮಾಡಿ ಮಾರಾಟ ಮಾಡಲು ಅನುಕೂಲವಾಗುವಂತೆ ನಿಯಮಗಳ ಬದಲಾವಣೆಯತ್ತ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ> ತುಮಕೂರು | ತಾಯಿಯ ಅಂತಃಕರಣ, ಬುದ್ದನ ಕಾರುಣ್ಯ ಇರಬೇಕು : ಉಗಮ ಶ್ರೀನಿವಾಸ್
ಹೊನ್ನೆ, ತೇಗ, ಮಹಾಘನಿ ಇನ್ನಿತರ ಬೆಲೆ ಬಾಳುವ ಮರಗಳಿಗಿಂತಲೂ ಶ್ರೀಗಂಧ ರೈತರಿಗೆ ಹೆಚ್ಚಿನ ಲಾಭ ತಂದುಕೊಡಲಿದೆ. ಇಂದು ಒಂದು ಕೆ.ಜಿ. ಶ್ರೀಗಂಧದ ಮರಕ್ಕೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ.ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಹ ವಾತಾವರಣ ಸೃಷ್ಟಿಯಾಗಬೇಕೆಂಬುದು ಶ್ರೀಗಂಧ ಬೆಳೆಗಾರರ, ಬಳಕೆದಾರರ ಅಭಿವೃದ್ದಿ ಸಂಶೋಧನ ಸಂಘದ ಒತ್ತಾಯವಾಗಿದ್ದು, ಈ ನಿಟ್ಟಿನಲ್ಲಿ ಸಂಸದರ ಮೂಲಕ ಪ್ರಧಾನಮಂತ್ರಿಗಳ ಗಮನಕ್ಕೂ ತರುವುದಲ್ಲದೆ ಲೋಕಸಭೆಯಲ್ಲಿಯೂ ವಿಷಯ ಪ್ರಸ್ತಾಪವಾಗುವಂತೆ ನೋಡಿಕೊಳ್ಳಲಾಗಿದೆ.
ಶ್ರೀಗಂಧ ಬೆಳೆದು ಕಟಾವು ಮಾಡಲು ಹಲವಾರು ಕಠಿಣ ನಿಬಂಧನೆಗಳ ಇರುವ ಹಿನ್ನೆಲೆಯಲ್ಲಿ ಶ್ರೀಗಂಧದ ಮರಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಗಿದೆ.ಶ್ರೀಗಂಧ ಬಹುಪಯೋಗಿ ಔಷಧೀಯ ಮರವಾಗಿದ್ದು, ಅದರ ಎಲೆಗಳು, ತೊಗಟೆ, ಬೀಜಗಳು ಮತ್ತು ಮರವು ಅಮೂಲ್ಯವಾದ ಗುಣಗಳನ್ನು ಹೊಂದಿದೆ. ಶ್ರೀಗಂಧವನ್ನು ಬಳಸಿಕೊಂಡು 250 ಕ್ಕೂ ಹೆಚ್ಚು ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು ಎಂದು ನಂಬಲಾಗಿದೆ. ಸರಕಾರಿ ನಿಯಮಗಳಲ್ಲಿನ ಇತ್ತೀಚಿನ ಸಡಿಲಿಕೆಗಳು ರೈತರನ್ನು ಶ್ರೀಗಂಧವನ್ನು ಬೆಳೆಸಲು ಪ್ರೋತ್ಸಾಹಿಸಿದ್ದರೂ, ಅವರಿಗೆ ಇನ್ನೂ ಸಾಕಷ್ಟು ಬೆಂಬಲ ಗುಣಮಟ್ಟದ ಸಸಿಗಳ ಕೊರತೆಯಿದೆ ಮತ್ತು ಹೆಚ್ಚಿನ ಇಳುವರಿ ನೀಡುವ ಬೀಜಗಳನ್ನು ಕಂಡುಹಿಡಿಯುವುದು ಕಷ್ಟ. ಇದು ಭಾಗಶಃ ಪರಾವಲಂಬಿ ಮರವಾಗಿರುವುದರಿಂದ ಕೃಷಿ, ಕೊಯ್ಲು, ವಿವಿಧ ಭಾಗಗಳ ಬಳಕೆ ಮತ್ತು ಸರಿಯಾದ ಮಾರುಕಟ್ಟೆ ಬೆಂಬಲದ ಬಗ್ಗೆ ತಾಂತ್ರಿಕ ತರಬೇತಿಯ ಅಗತ್ಯವಿದೆ.
ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನೀಡಿದ ಮಾಹಿತಿ ಪ್ರಕಾರ ಸಂಸ್ಥೆ ನಡೆಯಲು ಒಂದು ವರ್ಷ ಕ್ಕೆ 600 ಕೆ.ಜಿ.ಶ್ರೀಗಂಧದ ಎಣ್ಣೆ ಬೇಕಾಗುತ್ತದೆ. ಇಷ್ಟು ಎಣ್ಣೆ ಬೇಕೆಂದರೆ 240 ಮೆಟ್ರಿಕ್ ಟನ್ ಶ್ರೀಗಂಧದ ಸಿದ್ದ ತುಂಡುಗಳು ದೊರೆಯಬೇಕಿದೆ. ಆದರೆ ಕರ್ನಾಟಕದಲ್ಲಿ ಕೇವಲ 25 ಮೆ.ಟನ್ ಮಾತ್ರ ಲಭ್ಯವಿದ್ದು,ಉಳಿದ ಕಚ್ಚಾವಸ್ತುವನ್ನು ನೆರೆಯ ಕೇರಳ ಮತ್ತಿತರ ಕಡೆಗಳಿಂದ ಪಡೆಯಲಾಗುತ್ತಿದೆ.ಒಂದು ಕೆ.ಜಿ.ಶ್ರೀಗಂಧದ ಎಣ್ಣೆಗೆ 6 ಲಕ್ಷ ರೂ ಇದೆ. ಕರ್ನಾಟಕದಲ್ಲಿ ಹೇರಳವಾಗಿ ಕಚ್ಚಾವಸ್ತು ದೊರೆಯುವಂತಾದರೆ ಇಷ್ಟು ಪ್ರಮಾಣದ ಆಥಿಕ ವಹಿವಾಟು ಕರ್ನಾಟಕ ಶ್ರೀಗಂಧ ಬೆಳಗಾರರಿಗೆ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಯುವಜನರು ಕೃಷಿಯತ್ತ ಮರಳಿದರೆ ಶ್ರೀಗಂಧ ಬೆಳೆಯನ್ನು ಅವರು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯುವಜನರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವುದು ತರಬೇತಿಯ ಉದ್ದೇಶವಾಗಿದೆ.
ಗೋ ಆಧಾರಿತ ಕೃಷಿ
ನಮ್ಮ ಪೂರ್ವಜರು ಕೃಷಿಯ ಜೊತೆಗೆ ಪಶುಪಾಲನೆಯನ್ನು ಮಾಡುತ್ತಿದ್ದರು. ಗೋವುಗಳ ಉಪ ಉತ್ಪನ್ನಗಳಿಗಿಂತ, ಗೋವುಗಳ ಬಳಕೆ ಕೃಷಿಯಲ್ಲಿ ಹೆಚ್ಚಾಗಿತ್ತು. ಆಧುನಿಕತೆ ಹೆಚ್ಚಾದಂತೆ ಕೃಷಿಯಲ್ಲಿ ಗೋವುಗಳ ಬಳಕೆ ಕಡಿಮೆಯಾಗಿ, ಯಂತ್ರೋಪಕರಣಗಳು ಹೆಚ್ಚಾದವು. ಹೈನುಗಾರಿಕೆಗೆ ದೇಶಿಯ ಗೋ ತಳಿಗಳ ಬದಲಾಗಿದೆ. ಅತಿ ಹೆಚ್ಚು ಹಾಲು ನೀಡುವ ಹೆಚ್.ಎಫ್. ಜಿರ್ಸಿ ಹಸುಗಳ ಬಳಕೆಯಿಂದ ಜನರಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ಅತಿಯಾದ ಬೊಜ್ಜು, ಸಂತಾನ ಹೀನತೆ ಮತ್ತಿತರರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜನರು ತುತ್ತಾಗುತಿದ್ದಾರೆ. ನಮ್ಮಲ್ಲಿರುವ ದನ, ಕರು, ಆಡು, ಕುರಿ,ಎಮ್ಮೆ ಸೇರಿದಂತೆ ಅನೇಕ ಸಾಕು ಪ್ರಾಣಿಗಳು ಸಸ್ಯಹಾರಿಗಳು.ಇಂದು ಅಭಿವೃದ್ದಿ ಹೆಸರಿನಲ್ಲಿ ಇದ್ದ ಗೋಮಾಳಗಳನ್ನು ಸರಕಾರಿ ಯೋಜನೆಗಳಿಗೆ, ಇಲ್ಲವೇ ಕೈಗಾರಿಕೆಗಳಿಗೆ ನೀಡಿ ಗ್ರಾಮಗಳ ಹತ್ತಿರ ದನ, ಕರುಗಳನ್ನು ಮೇಯಿಸಲು ಜಾಗವೇ ಇಲ್ಲದಂತಾಗಿದೆ. ಅಲ್ಲದೆ ಕೃಷಿಯಲ್ಲಿ ಅತಿಯಾದ ರಾಸಾಯನಿಕ, ಕಳನಾಶಕಗಳ ಬಳಕೆಯಿಂದ ಕೃಷಿ ತ್ಯಾಜ್ಯಗಳು ಜಾನುವಾರುಗಳ ಮೇವಾಗಿ ಬಳಸಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಿದೆ.
ಹೊಲ, ಗದ್ದೆಗಳ ಬದುಗಳು ಸ್ವಚ್ಚತೆಯ ಹೆಸರಿನಲ್ಲಿ ಹಸನಾಗಿ, ಪಶು ಸಂಗೋಪನೆಗೆ ಪೂರಕ ವಾತಾವರಣವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಪಶು, ಪ್ರಾಣಿ, ಪಕ್ಷಿ ಸಕಲ ಜೀವರಾಶಿಗಳಿಗೂ ಆಹಾರ ಒದಗಿಸುವ ತಾಣವಾಗಿದ್ದ ಕಾಡು, ಮೇಡುಗಳಿಗೆ ಜಾನುವಾರುಗಳು ಮೇಯಲು ಹೋಗದಂತೆ ನಿಷೇಧ ಹೇರಿದರೆ ಪಾಪ ಮೂಕ ಪ್ರಾಣಿಗಳ ಗತಿ ಏನು? ಎಂಬ ಪ್ರಶ್ನೆ ಕಾಡುತ್ತದೆ.
ದನ, ಕರುಗಳಿಗೆ ಹೇಗೆ ಕಾಡು ಮುಖ್ಯವೋ, ಅದೇ ರೀತಿ ಕಾಡುಗಳಿಗೂ ದನ, ಕರುಗಳ ಸಗಣಿ, ಗಂಜಲ ಮುಖ್ಯ.ಕೇವಲ ಮರಗಳ ತರಗು ಎಲೆಗಳಿಂದ ಬರುವ ಗೊಬ್ಬರವೇ ಒಂದು ಮರಕ್ಕೆ ಬೇಕಾಗುವ ಪೋಷಕಾಂಶಗಳನ್ನು ಒದಗಿಸಲಾಗದು. ಜಾನುವಾರುಗಳ ಸಗಣಿ, ಗಂಜಲದಿಂದ ಲಕ್ಷಾಂತರ ಸೂಕ್ಷ್ಮ ಜೀವಾಣುಗಳು ಉತ್ಪತ್ತಿಯಾಗಿ ಅವುಗಳು ಮರಗಳ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತೇವೆ. ಒಂದು ವೇಳೆ ಅರಣ್ಯ ಸಚಿವರ ಆದೇಶದಂತೆ ಅರಣ್ಯಗಳಿಗೆ ದನ,ಕರುಗಳನ್ನು ನಿಷೇಧಿಸಿದರೆ ಹಂತ ಹಂತವಾಗಿ ಕಾಡು ತಾನು ಸಾವನ್ನಪ್ಪುವ ಜೊತೆಗೆ ಇಡೀ ಪರಿಸರವನ್ನೇ ಬೆಂಗಾಡಾಗಿ ಪರಿವರ್ತಿಸುತ್ತದೆ. ಇದನ್ನು ಅರಣ್ಯ ಸಚಿವರು, ಮತ್ತು ಸಚಿವರಿಗೆ ಈ ರೀತಿಯ ಸಲಹೆ ನೀಡಿದ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.
ಮನುಷ್ಯ ಈಗ ಉಪಯೋಗಿಸುತ್ತಿರುವ ವಿಷಮುಕ್ತ ಆಹಾರದಿಂದ ಬಿಡುಗಡೆ ಹೊಂದಬೇಕೆಂದರೆ ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಸಾವಯವ, ಇಲ್ಲವೇ ಸಹಜ ಕೃಷಿ. ಆದರೆ ಜಾನುವಾರುಗಳು ಇಲ್ಲದೆ ಸಹಜ ಕೃಷಿ ಎಂಬುದು ಹಾಸ್ಯಾಸ್ಪವಾಗಿದೆ. ಹೈನುಗಾರಿಕೆಯ ಹೆಸರಿನಲ್ಲಿ ಈಗಾಗಲೇ ವಿದೇಶಿ ತಳಿಯ ಎಚ್.ಎಫ್, ಜರ್ಸಿ ಹಸುಗಳು ಹಳ್ಳಿಗಳ ಕೊಟ್ಟಿಗೆ ಸೇರಿ, ಪರಿಪೂರ್ಣ ಆಹಾರವೆಂದು ಹೇಳುವ ಹಾಲು ಸಹ ವಿಷವಾಗುತ್ತಿದೆ. ಇಂತಹ ವೇಳೆಯಲ್ಲಿ ದೇಶಿಯ ತಳಿಯ ಹಸು, ಕರುಗಳ ಮೇವಿನ ಆಶ್ರಯತಾಣವಾಗಿರುವ ಕಾಡು, ಮೇಡುಗಳಿಗೆ ಅವುಗಳ ಪ್ರವೇಶ ನಿರಾಕರಿಸುವುದು ಅಡುಗೆ ಮಾಡುವ ತಾಯಿಯನ್ನೇ ಮನೆಯೊಳಗೆ ಸೇರಿಸದೆ ಜುಮ್ಯೋಟೋ, ಸುಗ್ಗಿಯಲ್ಲಿ ಆಹಾರ ಬುಕ್ ಮಾಡಿ ತಿಂದಂತಾಗುತ್ತದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಆಸಕ್ತ ಯುವಜನರಿಗೆ ಸಾವಯವ ಕೃಷಿ, ಶ್ರೀಗಂಧ ಬೆಳೆ ಮತ್ತು ದೇಶಿಯ ಗೋ ಆಧಾರಿತ ಹೈನುಗಾರಿಕೆಯನ್ನು ಕಲಿಸುವ ನಿಟ್ಟಿನಲ್ಲಿ ಉಚಿತವಾಗಿ ಕೃಷಿ ತರಬೇತಿ ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಏ. 26 ಭಾನುವಾರದಂದು ಚೇಳೂರಿನ ಬಸವೇಶ್ವರ ಚಲನಚಿತ್ರ ಮುಂದಿರದಲ್ಲಿ ನೈಸರ್ಗಿಕ ಕೃಷಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಕಾಡ ಸಿದ್ದೇಶ್ವರ ಮಠದ ಶ್ರೀಗಳು, ಚಿಕ್ಕಮಗಳೂರಿನ ಜಯ ಬಸವ ಸ್ವಾಮೀಜಿ, ಸಂಸದರಾದ ಡಾ. ಸಿ. ಎನ್. ಮಂಜುನಾಥ್, ಅರಕಲಗೂಡಿನ ಮಾಜಿ ಶಾಸಕರಾದ ಎ.ಟಿ. ರಾಮಸ್ವಾಮಿ, ಮಾಜಿ ಮುಖ್ಯ ಲೋಕಾಯುಕ್ತರಾದ ಸಂತೋಷ್ ಕುಮಾರ್ ಹೆಗಡೆ, ಕಾಂಗ್ರೆಸ್ ಅಧ್ಯಕ್ಷರಾದ ರಘುವೀರ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ, ಮಾಜಿ ಸಂಸದರಾದ ಮುದ್ದ ಹನುಮೇಗೌಡ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಪರಿಸರ ಕೃಷಿ ಪಂಡಿತರುಗಳಾದ ಚೇಳೂರಿನ ವೆಂಕಟೇಶ್ ಅಮ್ಮನಘಟ್ಟದ ಮಹೇಶ್ ಅವರನ್ನು ನಾಡಿನ ಶ್ರೇಷ್ಠ ಸಾಧಕರೆಂದು ಅಭಿನಂದಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಮ್ಮನಘಟ್ಟ ಮಹೇಶ್ ಉಪಸ್ಥಿತರಿದ್ದರು.




