ಭಾರತದ ಪ್ರಜಾಪ್ರಭುತ್ವದಲ್ಲಿ ‘ಚುನಾವಣಾ ಆಯೋಗ’ ಎಂಬುದು ಸಂವಿಧಾನಬದ್ಧವಾಗಿ ಅತ್ಯಂತ ಶಕ್ತಿಶಾಲಿ ಮತ್ತು ನಿಷ್ಪಕ್ಷಪಾತವಾಗಿ ಇರಬೇಕಾದ ಸಂಸ್ಥೆ. ಆದರೆ ಇತ್ತೀಚಿನ ಬೆಳವಣಿಗೆಗಳು, ವಿಶೇಷವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಯೋಗ ನೀಡಿದ 24 ಗಂಟೆಗಳ ಗಡುವು, ಈ ಸಂಸ್ಥೆಯ ಪಾರದರ್ಶಕತೆಯ ಬಗ್ಗೆ ಜನಸಾಮಾನ್ಯರಲ್ಲಿ ಅನುಮಾನ ಮೂಡಿಸುವಂತಿದೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರನ್ನು “ಟೆರರಿಸ್ಟ್” (ಭಯೋತ್ಪಾದಕ) ಎಂದು ಕರೆದಿದ್ದಾರೆ ಎಂದು ಬಿಜೆಪಿ ದೂರು ನೀಡಿದ ತಕ್ಷಣ, ಚುನಾವಣಾ ಆಯೋಗವು ಅತ್ಯಂತ ವೇಗವಾಗಿ ಕಾರ್ಯಪ್ರವೃತ್ತವಾಯಿತು. 24 ಗಂಟೆಯೊಳಗೆ ಉತ್ತರ ನೀಡಬೇಕು ಎಂದು ನೋಟಿಸ್ ಜಾರಿ ಮಾಡಿತು. ಆದರೆ ಖರ್ಗೆ ಅವರು ನಂತರ ಸ್ಪಷ್ಟನೆ ನೀಡಿ, “ಮೋದಿ ಅವರು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದವರನ್ನು ಹೆದರಿಸುತ್ತಿದ್ದಾರೆ, ಅಂದರೆ ಪ್ರಜಾಪ್ರಭುತ್ವಕ್ಕೆ ‘ಹೆದರಿಕೆ’ (Terrorizing) ಹುಟ್ಟಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದೇನೆಯೇ ಹೊರತು ವೈಯಕ್ತಿಕವಾಗಿಯಲ್ಲ” ಎಂದು ಹೇಳಿದ್ದರು. ಆದರೂ ಆಯೋಗದ ವೇಗ ಮಾತ್ರ ಅಚ್ಚರಿ ಮೂಡಿಸುವಂತಿತ್ತು.
ಈಗ ಪ್ರಶ್ನೆ ಇರುವುದು ಖರ್ಗೆ ಅವರಿಗೆ ನೋಟಿಸ್ ಕೊಟ್ಟಿದ್ದರ ಬಗ್ಗೆಯಲ್ಲ. ತಪ್ಪು ಮಾಡಿದ ಯಾರೇ ಆಗಲಿ ನೋಟಿಸ್ ಪಡೆಯಲೇಬೇಕು. ಆದರೆ, ಇದೇ ಆಯೋಗ ಕಳೆದ 2024ರ ಲೋಕಸಭಾ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಹಸಿ ಸುಳ್ಳುಗಳನ್ನು ಹೇಳಿದಾಗ ಎಲ್ಲಿ ಹೋಗಿತ್ತು? ಎಂಬುದು ಇವತ್ತು ಇಡೀ ದೇಶ ಕೇಳುತ್ತಿರುವ ಪ್ರಶ್ನೆ.
ಮೋದಿ ಅವರು ಅಂದು ಭಾಷಣಗಳಲ್ಲಿ ಬಳಸಿದ ಪದಗಳು ಇಂದಿಗೂ ಸಾರ್ವಜನಿಕ ದಾಖಲೆಗಳಲ್ಲಿವೆ
ಮಂಗಳಸೂತ್ರದ ಸುಳ್ಳು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಮಂಗಳಸೂತ್ರವನ್ನೂ ಮಾರಿ ಮುಸ್ಲಿಮರಿಗೆ ಹಂಚುತ್ತದೆ ಎಂದು ಮೋದಿ ರಾಜಸ್ಥಾನದ ಪ್ರಚಾರದಲ್ಲಿ ಹೇಳಿದ್ದರು. ಇದು ಕೇವಲ ಸುಳ್ಳಲ್ಲ, ಸಮಾಜದಲ್ಲಿ ಕೋಮು ದ್ವೇಷ ಬಿತ್ತುವ ಪ್ರಯತ್ನವಾಗಿತ್ತು.
ಪಿತ್ರಾರ್ಜಿತ ಆಸ್ತಿ ತೆರಿಗೆಯ ಭಯ: ನೀವು ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಕಾಂಗ್ರೆಸ್ ಲೂಟಿ ಮಾಡಿ ಅವರ ವೋಟ್ ಬ್ಯಾಂಕ್‌ಗೆ ಕೊಡುತ್ತದೆ ಎಂದು ಜನರನ್ನು ಹೆದರಿಸಿದ್ದರು.
ಕೋಣ ಮತ್ತು ಮೀಸಲಾತಿಯ ಗೊಂದಲ: “ನಿಮ್ಮ ಹತ್ತಿರ ಎರಡು ಕೋಣಗಳಿದ್ದರೆ ಒಂದನ್ನು ಕಾಂಗ್ರೆಸ್ ಕಿತ್ತುಕೊಳ್ಳುತ್ತದೆ” ಎಂಬಂತಹ ಹಾಸ್ಯಾಸ್ಪದ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನೂ ನೀಡಿದ್ದರು.
ಎಸ್‌ಸಿ, ಎಸ್‌ಟಿ, ಓಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಎಂಬ ಆರೋಪವನ್ನ ಕಾಂಗ್ರೆಸ್ ವಿರುದ್ಧ ಮಾಡಿದ್ದರು.
ಬುಲ್ಡೋಜರ್ ಮತ್ತು ಸೆಕೆಂಡ್ ಕ್ಲಾಸ್ ಸಿಟಿಜನ್: ಇಂಡಿಯಾ ಒಕ್ಕೂಟ ಬಂದರೆ ರಾಮಮಂದಿರವನ್ನು ಕೆಡವುತ್ತಾರೆ, ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುತ್ತಾರೆ ಎಂದು ಹೇಳುವ ಮೂಲಕ ಮೋದಿ ಅವರು ಚುನಾವಣಾ ನೀತಿ ಸಂಹಿತೆಯ (MCC) ಪ್ರತಿಯೊಂದು ನಿಯಮವನ್ನೂ ಗಾಳಿಗೆ ತೂರಿದ್ದರು.
ಗಮನಿಸಬೇಕಾದ ಅಂಶವೆಂದರೆ, ಮೋದಿ ಅವರ ಈ ಎಲ್ಲಾ ದ್ವೇಷಪೂರಿತ ಭಾಷಣಗಳ ವಿರುದ್ಧ ನೂರಾರು ದೂರುಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿದ್ದವು. ಆದರೆ ಆಯೋಗ ಮಾತ್ರ ಒಂದೇ ಒಂದು ನೋಟಿಸ್ ಅನ್ನೂ ಮೋದಿಯವರಿಗೆ ನೇರವಾಗಿ ನೀಡಲಿಲ್ಲ. ಆದರೆ ಇಂದು ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರ ಬಂದಾಗ, ಆಯೋಗವು ಕೆಂಡಕಾರುತ್ತಿದೆ. ಪ್ರಧಾನಿಯವರಿಗೆ ಒಂದು ನಿಯಮ, ವಿರೋಧ ಪಕ್ಷದ ನಾಯಕರಿಗೆ ಮತ್ತೊಂದು ನಿಯಮವೇ?
ಇವತ್ತು ಫೇಸ್‌ಬುಕ್, ಎಕ್ಸ್ (ಟ್ವಿಟ್ಟರ್) ಅಂತಹ ವೇದಿಕೆಗಳಲ್ಲಿ ಸಾಮಾನ್ಯ ಜನರೂ ಕೂಡ ಪ್ರಶ್ನೆ ಮಾಡುತ್ತಿದ್ದಾರೆ. “ಚುನಾವಣಾ ಆಯೋಗವು ಬಿಜೆಪಿಯ ಒಂದು ವಿಭಾಗದಂತೆ ಕೆಲಸ ಮಾಡುತ್ತಿದೆಯೇ?” ಎಂಬ ಅನುಮಾನ ದಟ್ಟವಾಗುತ್ತಿದೆ. ಕೇವಲ ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡು 24 ಗಂಟೆಗಳ ಗಡುವು ನೀಡುವುದು, ಆಡಳಿತ ಪಕ್ಷದವರು ಏನು ಹೇಳಿದರೂ ಕಣ್ಮುಚ್ಚಿ ಕುಳಿತುಕೊಳ್ಳುವುದು ಪ್ರಜಾಪ್ರಭುತ್ವದ ಅಧಃಪತನಕ್ಕೆ ಸಾಕ್ಷಿಯಾಗಿದೆ.
ಪತ್ರಕರ್ತರು ಮತ್ತು ಚಿಂತಕರು ಹೇಳುವಂತೆ, ಚುನಾವಣಾ ಆಯೋಗಕ್ಕೆ ವಿಶ್ವಗುರುವಿನ ‘ಡಿಗ್ರಿ’ ಕಾರ್ಡ್ ಬಗ್ಗೆ ಕೇಳುವ ಧೈರ್ಯವಿಲ್ಲದಿದ್ದರೂ ಪರವಾಗಿಲ್ಲ, ಕನಿಷ್ಠಪಕ್ಷ ತಾನು ಜಾರಿ ಮಾಡಿದ ನೀತಿ ಸಂಹಿತೆಯನ್ನು ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಧೈರ್ಯವಾದರೂ ತೋರಿಸಬೇಕಲ್ಲವೇ? ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಈ ಆಯೋಗದ ನಡೆಯು ಸಾಂವಿಧಾನಿಕ ಮೌಲ್ಯಗಳಿಗೆ ಮಾಡುತ್ತಿರುವ ದ್ರೋಹವಾಗಿದೆ.
“ಒಂದು ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವಾಗುತ್ತದೆ” ಎಂಬುದು ಹಿಟ್ಲರನ ಬಲಗೈ ಬಂಟ ಗೆಬೆಲ್ಸ್ ಹಾಕಿಕೊಟ್ಟ ದಾರಿ. ಇಂದು ಭಾರತದ ರಾಜಕಾರಣದಲ್ಲಿ ಈ ತಂತ್ರವು ಕೇವಲ ಸುಳ್ಳುಗಳನ್ನು ಸತ್ಯವಾಗಿಸಲು ಮಾತ್ರವಲ್ಲ, ಸತ್ಯವನ್ನು ಹೂತುಹಾಕಲು ಕೂಡ ಬಳಕೆಯಾಗುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ‘ಮೋಶಾ’ (ಮೋದಿ-ಶಾ) ಪ್ರಭುತ್ವವು ದ್ವೇಷದ ಪರದೆಯನ್ನು ಹೆಣೆದು ಜನರ ಕಣ್ಣಿಗೆ ಕಟ್ಟಿರುವುದಂತೂ ಸುಳ್ಳಲ್ಲ. ಆದರೆ ಈಗ ಕಾಲ ಬದಲಾಗುತ್ತಿದೆ. ಈವರೆಗೆ ವಿರೋಧ ಪಕ್ಷಗಳನ್ನು ಪ್ರಶ್ನಿಸುತ್ತಿದ್ದವರ ಮನೆಯಲ್ಲೇ ಈಗ ಬಿರುಗಾಳಿ ಎದ್ದಿದೆ.
ಇಷ್ಟು ದಿನ ಪ್ರಧಾನಿ ಮೋದಿಯವರನ್ನು ಕಣ್ಣುಮುಚ್ಚಿ ಸಮರ್ಥಿಸುತ್ತಿದ್ದ ಕಟ್ಟರ್ ಬೆಂಬಲಿಗರು ಮತ್ತು ಸಂಘ ಪರಿವಾರದ ಆಪ್ತರೇ ಈಗ ಪ್ರಧಾನಿಯವರ ಚಾರಿತ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಗ್ರ ಸಾಲಿನಲ್ಲಿ ನಿಂತಿರುವುದು ಮಧು ಪೂರ್ಣಿಮಾ ಕಿಶ್ವರ್.
ಸೋಷಿಯಲ್ ಮೀಡಿಯಾದಲ್ಲಿ ಕಿಶ್ವರ್ ಎಬ್ಬಿಸಿರುವ ಬಿರುಗಾಳಿ ಸಾಮಾನ್ಯವಾದುದಲ್ಲ. ಪ್ರಧಾನಿಯವರ ಖಾಸಗಿ ಬದುಕು ಮತ್ತು ಅವರ ಚಾರಿತ್ರ್ಯದ ಬಗ್ಗೆ ಈವರೆಗೆ ಕೇಳಿಬರದಂತಹ ಆಪಾದನೆಗಳನ್ನು ಅವರು ಮಾಡಿದ್ದರು. ಗಮನಿಸಬೇಕಾದ ಅಂಶವೆಂದರೆ, ಈ ಪ್ರಯತ್ನದಲ್ಲಿ ಕಿಶ್ವರ್ ಒಂಟಿಯಲ್ಲ; ಬಿಜೆಪಿಯ ಒಳಗಿರುವ ಕೆಲವು ‘ಅಗೋಚರ ಶಕ್ತಿಗಳು’ ಇವರ ಬೆನ್ನಿಗೆ ನಿಂತಿರುವ ಸೂಚನೆಗಳು ಸಿಗುತ್ತಿವೆ. ಇದು ಕೇವಲ ಒಬ್ಬ ವ್ಯಕ್ತಿಯ ಖಾಸಗಿ ಬದುಕಿನ ವಿಚಾರವಾಗಿ ಉಳಿದಿಲ್ಲ, ಬದಲಾಗಿ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯ ನೈತಿಕತೆಯ ಪ್ರಶ್ನೆಯಾಗಿದೆ.
ಇನ್ನು ದೇಶದ ಸಣ್ಣಪುಟ್ಟ ವಿಚಾರಗಳ ಬಗ್ಗೆಯೂ ಗಂಟೆಗಟ್ಟಲೆ ಭಾಷಣ ಮಾಡುವ ಪ್ರಧಾನಿಯವರು, ತಮ್ಮ ಚಾರಿತ್ರ್ಯದ ಬಗ್ಗೆ ಇಷ್ಟೊಂದು ದೊಡ್ಡ ಪುಕಾರುಗಳು ಎದ್ದಿದ್ದರೂ ‘ಮೌನ’ಕ್ಕೆ ಶರಣಾಗಿರುವುದು ಏಕೆ? ಎಪ್ಸ್ಟೀನ್ ಫೈಲ್‌ಗಳ (Epstein Files) ಕುರಿತು ಎದ್ದಿರುವ ಭುಗಿಲು ಮತ್ತು ಕಿಶ್ವರ್ ಅವರ ಗಂಭೀರ ಆರೋಪಗಳು ಸುಳ್ಳಾಗಿದ್ದರೆ, ಪ್ರಧಾನಿಯವರು ಬಹಿರಂಗವಾಗಿ ಬಂದು ಸ್ಪಷ್ಟನೆ ನೀಡಬೇಕಲ್ಲವೇ? ಅಧಿಕಾರ ಮತ್ತು ಅಹಂಕಾರದ ಮರೆಯಲ್ಲಿ ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ? ಒಂದೆಡೆ ಪ್ರಧಾನಿಯವರ ಮೇಲೆ ಇಂತಹ ಗಂಭೀರ ಆಪಾದನೆಗಳು ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ತನ್ನ ನಿಷ್ಪಕ್ಷಪಾತತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಂತೆ ವರ್ತಿಸುತ್ತಿದೆ.
ಇಷ್ಟೇ ಅಲ್ಲ, ಚುನಾವಣಾ ಆಯೋಗದ ಪಕ್ಷಪಾತದ ಪಟ್ಟಿ ಇನ್ನೂ ಉದ್ದವಿದೆ. ಇದೇ ಏಪ್ರಿಲ್ 18 ರಂದು ಪ್ರಧಾನಿ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವು ಅಪ್ಪಟ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಎಡಪಕ್ಷಗಳು ಸಾಕ್ಷ್ಯ ಸಮೇತ ಆಯೋಗಕ್ಕೆ ಪತ್ರ ಬರೆದಿದ್ದವು. ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸರಕಾರಿ ವೇದಿಕೆಯನ್ನು ರಾಜಕೀಯ ಲಾಭಕ್ಕೆ ಬಳಸುವುದು ತಪ್ಪು ಎಂದು ಎಡಪಕ್ಷಗಳು ಕ್ರಮಕ್ಕೆ ಆಗ್ರಹಿಸಿದ್ದವು. ಆದರೆ, ಸಾಮಾನ್ಯ ಪ್ರಜೆಯೊಬ್ಬ ಪ್ರಶ್ನೆ ಕೇಳಿದರೆ ಹಾರಿಕೆ ಉತ್ತರ ನೀಡುವ ಆಯೋಗ, ಪ್ರಧಾನಿಯವರ ಈ ಬಹಿರಂಗ ನೀತಿ ಸಂಹಿತೆ ಉಲ್ಲಂಘನೆಯ ದೂರಿನ ಬಗ್ಗೆ ಕಣ್ಣಿದ್ದೂ ಕುರುಡಾದಂತೆ ನಟಿಸಿತು. ವಿರೋಧ ಪಕ್ಷದವರ ಸಣ್ಣ ಹೇಳಿಕೆಯನ್ನೂ ಭೂತಗನ್ನಡಿ ಹಿಡಿದು ನೋಡಿ 24 ಗಂಟೆಯ ಗಡುವು ನೀಡುವ ಆಯೋಗಕ್ಕೆ, ಪ್ರಧಾನಿಯವರ ವಿರುದ್ಧ ಬಂದ ಅಧಿಕೃತ ದೂರುಗಳು ಯಾಕೆ ಕಸದ ಬುಟ್ಟಿಗೆ ಸೇರುತ್ತಿವೆ? ಇದು ಆಯೋಗದ ನಿಷ್ಪಕ್ಷಪಾತತೆಯನ್ನು ಅಣಕಿಸುವಂತಿಲ್ಲವೇ?
ಖರ್ಗೆ ಅವರಿಗೆ ನೋಟಿಸ್ ಜಾರಿ ಮಾಡಿರುವ ಆಯೋಗ, ಅದೇ ಉತ್ಸಾಹದಲ್ಲಿ ಮೋದಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಿ. ಇಲ್ಲದಿದ್ದರೆ, ಚುನಾವಣಾ ಆಯೋಗ ಎಂಬುದು ಕೇವಲ ಒಂದು ಪಕ್ಷದ ಕೈಗೊಂಬೆ ಎಂಬ ಹಣೆಪಟ್ಟಿ ಶಾಶ್ವತವಾಗುವುದರಲ್ಲಿ ಸಂಶಯವಿಲ್ಲ. ಆದರೆ ಒಂದಂತೂ ಸತ್ಯ. ಜನಸಾಮಾನ್ಯರ ನ್ಯಾಯಾಲಯದಲ್ಲಿ ಎಲ್ಲದಕ್ಕೂ ಉತ್ತರ ಸಿಕ್ಕೇ ಸಿಗುತ್ತದೆ. ಮೌನ ಮುರಿಯದಿದ್ದರೆ ಇತಿಹಾಸ ಪ್ರಧಾನಿಯ ಜೊತೆಗೆ ಚುನಾವಣಾ ಆಯೋಗವನ್ನು ಎಂದಿಗೂ ಕ್ಷಮಿಸುವುದಿಲ್ಲ.




