‘ಭಾರತದಲ್ಲಿ ಜಾತಿಗಳು’: ಅವುಗಳ ಉತ್ಪತ್ತಿ, ವಿಕಾಸ ಹೇಗಾಯಿತು?

Date:

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ 24ನೇ ವಯಸ್ಸಿನಲ್ಲಿ ಮಂಡಿಸಿದ ಪ್ರೌಢಪ್ರಬಂಧವೇ- 'ಭಾರತದಲ್ಲಿ ಜಾತಿಗಳು'. ಈ ಜಾತಿ ವ್ಯವಸ್ಥೆಯ ಮೂಲವನ್ನು ಹುಡುಕುತ್ತಾ ಹೋಗುವ ಅಂಬೇಡ್ಕರ್, 'ಸ್ವಜಾತಿ ವಿವಾಹವನ್ನು ಶಾಶ್ವತಗೊಳಿಸಿದ್ದೇ ಜಾತಿಯ ಮುಖ್ಯ ಸ್ವಭಾವ' ಎಂದು ಶೋಧಿಸುತ್ತಾರೆ. ಜೊತೆಗೆ ಸ್ವಜಾತಿ ವಿವಾಹಗಳನ್ನು ಜಾರಿಗೆ ತರಲು ಸತಿಪದ್ಧತಿ, ಬಾಲ್ಯವಿವಾಹ, ವೈಧವ್ಯವನ್ನು ಸಮಾಜದಲ್ಲಿ ಹೇಗೆ ಹೇರಲಾಯಿತು ಎಂಬುದನ್ನು ವಿಶ್ಲೇಷಿಸುತ್ತಾರೆ. ಇಷ್ಟಕ್ಕೆ ಜಾತಿ ವ್ಯವಸ್ಥೆಯು ಬಲವಾಯಿತೆ? ಇಲ್ಲ- ಮೇಲಿನ ಶ್ರೇಣಿಯಲ್ಲಿರುವವರನ್ನು ಅನುಕರಿಸುವ ಮೂಲಕ ಇತರ ಸಮುದಾಯಗಳು ಹೇಗೆ ಜಾತಿ ವ್ಯವಸ್ಥೆಗೆ ಬುನಾದಿ ಹಾಕಿದವು ಎಂಬುದನ್ನು ಅಂಬೇಡ್ಕರ್ ವಿಸ್ತೃತವಾಗಿ ನೋಡುತ್ತಾರೆ. ತಮ್ಮ ಜೀವತಾವಧಿಯುದ್ದಕ್ಕೂ ಜಾತಿಯ ಕುರಿತು ಆಳವಾಗಿ ಅಧ್ಯಯನ ಮಾಡಿರುವ ಬಾಬಾಸಾಹೇಬರು ಕಿರಿ ವಯಸ್ಸಿನಲ್ಲಿಯೇ ಜಾತಿಯ ಮೂಲಗಳನ್ನು ಖಚಿತವಾಗಿ ಗ್ರಹಿಸಿದ್ದರು ಎಂಬುದು ಈ ಕೃತಿಯಿಂದ ವೇದ್ಯವಾಗುತ್ತದೆ.

ಕೃತಿ: Castes in India: Their Mechanism, Genesis and Development (ಭಾರತದ ಜಾತಿಗಳು: ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸ)
ಮೊದಲ ಪ್ರಕಟಣೆ:
1917, ಮೇ Indian Antiquary, Vol. XLI
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ-
1979
ಇಂಗ್ಲಿಷ್ ಸಂಪುಟ- 1
ಕನ್ನಡ ಸಂಪುಟ- 1
Kalpaz Publications Edition- 2024

- Advertisement -

‘ಭಾರತದ ಜಾತಿಗಳು: ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸ’ (Castes in India: Their Mechanism, Genesis and Development) ಕೃತಿಯು ಅಂಬೇಡ್ಕರ್ ಅವರು ನಡೆಸಿದ ಮಹತ್ವದ ಸಂಶೋಧನೆಗಳಲ್ಲಿ ಒಂದು. ಈ ಪುಸ್ತಕದ ವಸ್ತುವಿನ ವಿವರಣೆ, ಚಾರಿತ್ರಿಕ ಹಿನ್ನೆಲೆ ಮತ್ತು ಅದರ ಸಮಕಾಲೀನ ಮಹತ್ವದ ಬಗ್ಗೆ ತಿಳಿಸಿಕೊಡುವ ಉದ್ದೇಶವನ್ನು ಈ ಕಿರುಲೇಖನ ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

1916ರ ಮೇ 9ರಂದು ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಮಾನವ ಕುಲಶಾಸ್ತ್ರೀಯ ಸಮ್ಮೇಳನದಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿಯ ಭಾಗವಾಗಿ ಈ ಪ್ರೌಢಪ್ರಬಂಧವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಮಂಡಿಸುತ್ತಾರೆ. ಜಾತಿ ವ್ಯವಸ್ಥೆಯ ಮೂಲದ ಕುರಿತು ಅಮೂಲಾಗ್ರವಾಗಿ ಈ ಪ್ರಬಂಧದಲ್ಲಿ ವಿಶ್ಲೇಷಿಸುತ್ತಾರೆ.

ಭಾರತದ ಜಾತಿಗಳು, ಅವುಗಳ ರಚನಾಕ್ರಮ, ಉತ್ಪತ್ತಿ ಹಾಗೂ ವಿಕಾಸವನ್ನು ಮಾನವಶಾಸ್ತ್ರೀಯ ದೃಷ್ಟಿಕೋನದಲ್ಲಿ ಪರಿಶೀಲಿಸಿದ್ದಾರೆ. ಭಾರತದ ಜನಸಂಖ್ಯೆಯು ಆರ್ಯ, ದ್ರಾವಿಡ, ಮಂಗೋಲಿಯನ್ನರು ಮತ್ತು ಸಿಥಿಯನ್ನರ ಮಿಶ್ರಣವಾಗಿದೆ. ಕುಲ ಸಂಬಂಧದಲ್ಲಿ ಎಲ್ಲರೂ ಭಿನ್ನತೆಯನ್ನು ಕಾಯ್ದುಕೊಂಡಿದ್ದಾರೆ. ಆದರೆ ಭಾರತ ಭೂ ಖಂಡದ ಜನರು ಸಾಂಸ್ಕೃತಿಕ ಏಕತೆಯಿಂದ ಒಂದುಗೂಡಿದ್ದಾರೆಯೇ ಎಂದು ಜಾತಿಯ ವಿವಿಧ ಅಧಿಕೃತ ಸಿದ್ಧಾಂತಗಳನ್ನು ಅಂಬೇಡ್ಕರ್ ಪರಿಶೀಲಿಸುತ್ತಾರೆ.

image 168

ಭಾರತದ ನಿಯಮಗಳಲ್ಲಿ ಭಿನ್ನಗೋತ್ರದ ವಿವಾಹ ನಿಯಮ ಪದ್ಧತಿಯು ಇಂದಿಗೂ ಸ್ಪಷ್ಟವಾದ ಕಟ್ಟಲೆಯಾಗಿದೆ. ಸಪಿಂಡರು ಮದುವೆಯಾಗಬಾರದೆಂದು, ಸಗೋತ್ರ ಮದುವೆ ಕೂಡ ದೈವ ದ್ರೋಹವೆಂದು ಪರಿಗಣಿಸಲಾಗಿದೆ ಎಂಬುದನ್ನು ಗಮನಿಸಬಹುದು. ಕುಲದೇವತಾರಾಧನೆಯ ಇತರ ಗುಂಪುಗಳು ಕೂಡ ಹೀಗೆ ಇದೆ. ಭಿನ್ನ ಗೋತ್ರ ವಿವಾಹ ನಿಯಮವನ್ನು ಮೀರಿದವರಿಗೆ ಕಠಿಣವಾದ ದಂಡವನ್ನು ವಿಧಿಸಲಾಗುತ್ತದೆ. ಆದರೆ ಭಿನ್ನ ಜಾತಿಯ ವಿವಾಹವು ಜಾತಿ ವ್ಯವಸ್ಥೆಯಲ್ಲಿ ನಿಶಿದ್ಧ. ಏಕೆ ಹೀಗೆ?

ವಿವಾಹ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಜಡ ಜಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಹೇಗೆಂದು ಬಾಬಾಸಾಹೇಬರು ತಮ್ಮ ಸಂಶೋಧನೆಯ ಮೂಲಕ ಹೊರಗೆಡುವುತ್ತಾರೆ. ಭಾರತದಲ್ಲಿ ಜಾತಿಯೆಂದರೆ- ಸ್ವಜಾತಿ ಮದುವೆಯ ಶಾಶ್ವತ ಆಚರಣೆ ಮತ್ತು ಅಂತರ್ಜಾತಿ ವಿವಾಹದ ನಿಷೇಧ; ಆ ಮೂಲಕ ಒಟ್ಟು ಜನಸಂಖ್ಯೆಯನ್ನು ಸ್ಥಿರ ಮತ್ತು ನಿರ್ದಿಷ್ಟ ಘಟಕಗಳ ನಡುವೆ ಕೃತಕವಾಗಿ ಕತ್ತರಿಸಿ ಹಂಚುವ ಪ್ರಕ್ರಿಯೆ. ಹೀಗಾಗಿ “ಸ್ವಜಾತಿ ವಿವಾಹವು ಜಾತಿಗೆ ವಿಶಿಷ್ಟವಾದ ಏಕೈಕ ಗುಣವೆಂದು ತೀರ್ಮಾನಿಸುವುದು ಅನಿವಾರ್ಯ” ಎಂದು ಅಭಿಪ್ರಾಯ ತಾಳುವ ಅಂಬೇಡ್ಕರ್ ಅವರು ಜಾತಿಗಳನ್ನು ಹೇಗೆ ಕಟ್ಟಲಾಗಿದೆ ಎಂಬುದನ್ನು ಶೋಧಿಸುತ್ತಾ ಹೋಗುತ್ತಾರೆ. ಜಾತಿಯನ್ನು ಉಳಿಸಬೇಕಾದರೆ ಸ್ವಜಾತಿಯೊಳಗೆ ಹೆಣ್ಣುಗಂಡಿನ ಸಂಖ್ಯೆ ಸಮನಾಂತರವಾಗಿರಬೇಕು, ಆದ್ದರಿಂದ ಗಂಡನನ್ನು ಕಳೆದುಕೊಂಡ ಪತ್ನಿಯರ ಸಂಖ್ಯೆ, ಹೆಂಡತಿಯನ್ನು ಕಳೆದುಕೊಂಡ ಪತಿಯರ ಸಂಖ್ಯೆ ಹೆಚ್ಚಳವಾಗದಿರುವಂತೆ ನೋಡಿಕೊಳ್ಳುವ ತೀರ್ಮಾನ ಮಾಡಲಾಯಿತು. ಆಗ ಮಾತ್ರ ಗಂಡ ಅಥವಾ ಹೆಂಡತಿಯನ್ನು ಕಳೆದುಕೊಂಡವರು ಜಾತಿಯನ್ನು ಮೀರಿ ದೇಹ ಸಹಜ ನೈಸರ್ಗಿಕ ಕಾಮನೆಗಳತ್ತ ಹೊರಳುವುದಿಲ್ಲ ಎಂದು ಯೋಚಿಸಿದರು. ಆದರೆ ಅಂದಿನ ಸಮಾಜದಲ್ಲಿ ಪುರುಷಪ್ರಧಾನ ವ್ಯವಸ್ಥೆಯು ಗಂಡಿನ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರಲಿಲ್ಲ. ನಿಯಮಗಳನ್ನು ರೂಪಿಸುತ್ತಿದ್ದದ್ದು ಗಂಡೇ ಆಗಿದ್ದರಿಂದ ಅವುಗಳು ಎಲ್ಲವೂ ಪುರುಷಾಧಿಕಾರದ ಮೇಲರಿಮೆಯನ್ನೇ ಎತ್ತಿಹಿಡಿದವು. ಅಂತರ್ಜಾತಿ ವಿವಾಹದ ಭೀತಿಯ ಕಾರಣಕ್ಕೆ ಹೆಣ್ಣಿನ ಮೇಲೆ ಅತಿಯಾದ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಇಂತಹ ಕೆಟ್ಟ ಆಲೋಚನೆಗಳ ಫಲವಾಗಿ ಚಾಲ್ತಿಗೆ ಬಂದಿದ್ದೇ ಸತಿ ಸಹಗಮನ ಪದ್ಧತಿ.

ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು

ಗಂಡ ಸತ್ತರೆ ಹೆಂಡತಿಯೂ ಚಿತೆಯೇರಬೇಕು ಎಂಬ ನಿಯಮವನ್ನು ತಂದು ಹೆಣ್ಣಿನ ಸಂಖ್ಯೆ ಹೆಚ್ಚಳವಾಗದಂತೆ ತಡೆಯಲಾಯಿತು. ಆದರೆ ಇದನ್ನು ಎಲ್ಲ ಕಡೆಯೂ ಚಾಲ್ತಿಗೆ ತರುವುದು ಕಷ್ಟವೂ ಆಯಿತು. ಸತಿ ಪದ್ಧತಿಯು ಕಷ್ಟವಾದ ಕಡೆಯಲ್ಲಿ ಹೆಣ್ಣಿನ ಅಸಹಜ ಹೆಚ್ಚಳದ ಭೀತಿಯೇನೂ ಕಡಿಮೆಯಾಗಲಿಲ್ಲ. ಗಂಡನನ್ನು ಕಳೆದುಕೊಂಡ ಹೆಣ್ಣು ಸ್ವಜಾತಿಯಲ್ಲೇ ಬೇರೊಂದು ಗಂಡನ್ನು ವರಿಸಿ, ಅಸಮತೋಲನ ಉಂಟಾಗಬಹುದು, ಸಮರ್ಥ ವಧುವಿಗೆ ಮೀಸಲಿದ್ದ ಗಂಡೊಬ್ಬನ ವಿವಾಹಕ್ಕೂ ಅಡಚಣೆಯಾಗಬಹುದು ಎಂದು ಯೋಚಿಸಿ, ಹೆಣ್ಣಿನ ಮೇಲೆ ಬಲವಂತವಾಗಿ ಜೀವನಪರ್ಯಂತ ಕಠಿಣ ವೈಧವ್ಯವನ್ನು ಹೇರಲಾಯಿತು. ಮುಂದುವರಿದು ಹೆಣ್ಣುಗಂಡು ವಯಸ್ಕರಾದ ಮೇಲೆ ತಮ್ಮ ಇಚ್ಛೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಜಾತಿಭ್ರಷ್ಟರಾಗುವುದನ್ನು ತಪ್ಪಿಸಲು ಬಾಲ್ಯ ವಿವಾಹವನ್ನು ಜಾರಿಗೆ ತರಲಾಯಿತು. ಹೀಗೆ ಸತಿಸಹಗಮನ ಪದ್ಧತಿ, ವೈಧವ್ಯ ಮತ್ತು ಬಾಲ್ಯವಿವಾಹಗಳು ಜಾತಿ ಸಂಕರ ಆಗದಂತೆ ತಡೆಯುವುದಕ್ಕಾಗಿ ಬಳಸಿದ ಪ್ರಬಲ ಅಸ್ತçಗಳಾದವು. ಮುಂದೆ ಈ ದುಷ್ಟ ಆಚರಣೆಗಳನ್ನು ವೈಭವೀಕರಿಸಲಾಯಿತು ಅರ್ಥಾತ್ ಜನರಲ್ಲಿ ಈ ಆಚರಣೆಗಳ ಕುರಿತು ಗಾಢವಾದ ನಂಬಿಕೆಯನ್ನು ಬಿತ್ತಲಾಯಿತು ಎಂಬುದು ಅಂಬೇಡ್ಕರ್ ಅವರ ವಿಶ್ಲೇಷಣೆ.

“ಭಾರತದಲ್ಲಿ ಜಾತಿಯ ಉಗಮದ ವಿಚಾರದಲ್ಲಿ ನಾನು ತಬ್ಬಿಬ್ಬಾಗುವುದಿಲ್ಲ. ನಾನು ಮೊದಲೇ ಸಾಬೀತುಪಡಿಸಿರುವಂತೆ ಜಾತೀಯ ಏಕೈಕ ಲಕ್ಷಣ ಸ್ವಜಾತಿ ವಿವಾಹಪದ್ಧತಿ. ಜಾತಿಯ ಹುಟ್ಟು ಎಂದು ನಾನು ಹೇಳುವಾಗ ಸ್ವಜಾತಿ ವಿವಾಹಪದ್ಧತಿಗಾಗಿ ಕಾರ್ಯವಿಧಾನದ ಉಗಮ ಎಂದೇ ನನ್ನ ಮಾತಿನ ಅರ್ಥ” ಎನ್ನುತ್ತಾರೆ.

ಜಾತಿಗಳು ಹೇಗೆ ರೂಪುಗೊಂಡವು ಎಂಬುದನ್ನು ಪ್ರತಿಪಾದಿಸಲು ಅಂಬೇಡ್ಕರ್ ಅವರು ಅನುಕರಣ ಸಿದ್ಧಾಂತದ ಮೊರೆಹೋಗುತ್ತಾರೆ. ಅಂದರೆ ಸಾಮಾಜಿಕ ಕಟ್ಟುಪಾಡುಗಳು ಆರಂಭದಲ್ಲಿ ಚಾಲ್ತಿಗೆ ಬಂದಿದ್ದು ಮೇಲಿನ ಶ್ರೇಣಿಯಲ್ಲಿದ್ದ ಸಮಾಜದಲ್ಲಿ. ಅದನ್ನು ಅಪ್ರಜ್ಞಾಪೂರ್ವಕವಾಗಿಯಾದರೂ ಕೆಳಗಿನ ಶ್ರೇಣಿಯಲ್ಲಿದ್ದ ಸಮಾಜಗಳು ಅನುಕರಣ ಮಾಡಿದವು. ಹೀಗಾಗಿ ಮೇಲಿನ ಶ್ರೇಣಿಯಲ್ಲಿದ್ದ ಬ್ರಾಹ್ಮಣರ ಸಮೀಪದ ಸಮುದಾಯಗಳಲ್ಲಿ ಹೆಚ್ಚಿನ ಅನುಕರಣೆ ಕಂಡು ಬರುತ್ತದೆ. ಸಮುದಾಯಗಳ ನಡುವಿನ ಸಂಪರ್ಕ ದೂರವಿದ್ದಷ್ಟು ಅನುಕರಣೆಯ ಪ್ರಮಾಣವೂ ಕಡಿಮೆ ಇರುತ್ತದೆ ಎಂಬ ನಿಲುವಿಗೆ ಅಂಬೇಡ್ಕರ್ ಬರುತ್ತಾರೆ.

image 169
ಅಸ್ಪೃಶ್ಯತೆ ಆಚರಣೆ (ಸಾಂದರ್ಭಿಕ ಚಿತ್ರ)

ಭಾರತದ ಸಾಮಾಜಿಕ ಸ್ಥಿತಿಯಲ್ಲಿನ ಅನುಕರಣಾತನದ ಬಗ್ಗೆ ಪ್ರಸ್ತಾಪಿಸುವ ಬಾಬಾಸಾಹೇಬರು, “ಬ್ರಾಹ್ಮಣನು ಅರೆ ದೇವತೆ ಹಾಗೂ ಬಹುಮಟ್ಟಿಗೆ ದೈವಾಂಶ ಸಂಭೂತ. ಆತ ಒಂದು ಮಾದರಿಯನ್ನು ತಯಾರಿಸಿ ಉಳಿದವುಗಳನ್ನು ಅದರ ಪಡಿಯಚ್ಚಿನಂತೆ ರೂಪಿಸುತ್ತಾನೆ. ಆತನ ಪ್ರತಿಷ್ಠೆ ಪ್ರಶ್ನಾತೀತವಾದದ್ದು. ಆತ ಪರಮಸುಖದ ಮತ್ತು ಉತ್ತಮವಾದುದರ ಉಗಮ ಸ್ಥಾನ. ಶಾಸ್ತçಗಳಿಂದ ದೈವಮೂರ್ತಿಯೆಂದು ಪುರಸ್ಕೃತನಾದ ಮತ್ತು ಪುರೋಹಿತರಿಂದ ತುಂಬಿಹೋದ ಜನಸಮುದಾಯದಿಂದ ಪೂಜಿತನಾದ ಆತ ತನ್ನ ಘನ ವ್ಯಕ್ತಿತ್ವವನ್ನು ಉಳಿದ ಯಃಕಶ್ಚಿತ್ ಮಾನವ ಸಮುದಾಯದ ಮೇಲೆ ಹರಿಸದೆ ಬಿಡುತ್ತಾನೆಯೇ? …ಆತ ಸ್ವಜಾತಿ ವಿವಾಹಪದ್ಧತಿಯ ಪರಿಧಿಯೊಳಗೆ ವಾಸಿಸಿದರೆ ಉಳಿದವರೂ ಆತನ ಮಾದರಿಯನ್ನು ಅನುಸರಿಸಬೇಡವೇ? ದುರ್ಬಲ ಮಾನವ ಕುಲವೇ!” ಎಂದು ಬಾಬಾಸಾಹೇಬರು ವ್ಯಂಗ್ಯವಾಗಿ ನುಡಿಯುತ್ತಾರೆ. ಜೊತೆಗೆ ಸಂಪ್ರದಾಯಗಳ ಅನುಕರಣೆಗೆ ಬಲವಾದ ಕಾರಣವೇನೂ ಬೇಕಿಲ್ಲ ಎಂಬುದಕ್ಕೆ ಒಂದು ಉಪಮೆಯನ್ನೂ ನೀಡುತ್ತಾರೆ: “ಇತಿಹಾಸದ ಬೆಳವಣಿಗೆಯಲ್ಲಿ ಸಂಪ್ರದಾಯಗಳು ಹಿಂದೂ ಬುದ್ಧಿಯಲ್ಲಿ ಗಟ್ಟಿಯಾಗಿ ಕುಳಿತುಬಿಟ್ಟವು, ಮತ್ತು ಇಂದಿಗೂ ಅವು ಕೆರೆಯ ನೀರಿನ ಮೇಲೆ ಕಳೆಗಿಡ ತೇಲುತ್ತಿರುವಂತೆ ಯಾವ ಸಹಾಯವೂ ಇಲ್ಲದೆ ಅಲ್ಲಿಯೇ ನೇತಾಡುತ್ತಿವೆ.”

ಅಂಬೇಡ್ಕರ್ ಅವರ ಪ್ರಕಾರ, ಜಾತಿಯು ಅನುಕರಣೆಯ ಜೊತೆಗೆ ಬಹಿಷ್ಕರಣೆಯಿಂದಲೂ ಹುಟ್ಟಬಲ್ಲದು. ಇಲ್ಲಿ ಜಾತಿಯಿಂದ ಹೊರಗಟ್ಟಲ್ಪವರೂ ಜಾತಿ ಅತೀತರಾಗಿ ಉಳಿಯುವುದಿಲ್ಲ. ಹಾಗೆ ಹೊರಹಾಕಲ್ಪಟ್ಟ ವರ್ಗವೇ ಮತ್ತೊಂದು ಜಾತಿಯಾಗಿ ಪರಿವರ್ತಿತವಾಗುತ್ತದೆ. ಅಂತಹ ಸಾಮಾಜಿಕ ವ್ಯವಸ್ಥೆ ಭಾರತೀಯ ಸಮಾಜದ್ದು ಎಂದು ಅಂಬೇಡ್ಕರ್ ವಿಶ್ಲೇಷಿಸುತ್ತಾರೆ.

[ಇನ್ನೂ ಬುಡಕಟ್ಟುಗಳ ಸಂದರ್ಭದಲ್ಲಿ ಈ ಜಾತಿ ವ್ಯವಸ್ಥೆಯ ಭಾಗವೇ ಆಗಿರದ ಇವರು ಯಾಂತ್ರಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಜಾತಿಯಾಗಿ ಮಾರ್ಪಾಡಾಗಿರುವುದು ಕಾಣಬಹುದು. ಉದಾಹರಣೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊರಗರ ಸಂದರ್ಭದಲ್ಲಿ ವಿವರಿಸುವುದಾದರೆ ಅಜಲು ಪದ್ಧತಿ ಮತ್ತು ಅಸ್ಪೃಶ್ಯತೆಯು ಈ ಜಾತಿ ಪದ್ಧತಿಯಿಂದ ಬಂದ ಬಳುವಳಿಯಾಗಿದೆ. ಮಧ್ಯ ಮತ್ತು ತಳಸ್ತರದ ಜನರು ತಮಗಿಂತ ಕೆಳಗಿನ ಸ್ತರಗಳನ್ನು ಉತ್ಪತ್ತಿ ಮಾಡಿದಂತೆ ಕಾಣುತ್ತದೆ. ಉದಾಹರಣೆ ಒಂದು ಘಟನೆ ಹಂಚಿಕೊಳ್ಳಬೇಕು. ನಾನು ಚಿಕ್ಕವಳಿದ್ದಾಗ ನಮ್ಮೂರಿನ ಅಗಸ (ಮಡಿವಾಳ) ಸಮುದಾಯ ನಮ್ಮ ಅಜ್ಜಿಯನ್ನು ತಮ್ಮ ಅಜಲಿಗೆ ಕರೆದಿದ್ದರು. ನಾನು ಅಜ್ಜಿಯ ಜೊತೆಗೆ ಹೋಗಿದ್ದೆ. ಈ ಅಗಸ ಸಮುದಾಯವು ತನಗಿಂತ ಮೇಲಿನ ಸ್ತರವಾದ ಬ್ರಾಹ್ಮಣ ಸಮುದಾಯಕ್ಕೆ ಅಜಲು ಚಾಕರಿಯವರಾಗಿದ್ದು ಅವರಿಂದ ಪಡೆದ ಮೈನೆರೆದ ಹೆಣ್ಣಿನ ಮುಟ್ಟಿನ ಬಟ್ಟೆಯನ್ನು ನಮ್ಮ ಅಜ್ಜಿಗೆ ವರ್ಗಾಯಿಸಿದರು. ಕೊರಗರಿಗಿಂತ ಕೆಳಗಿನ ಸ್ತರ ನಮ್ಮೂರಿನಲ್ಲಿ ಇಲ್ಲದ ಕಾರಣ ಬಿಟ್ಟಿ ಚಾಕರಿ, ಅಜಲು ಅಂತಿಮವಾಗಿ ಕೊರಗರಿಗೆ ಪುಕ್ಕಟೆಯಾಗಿ ಲಬಿಸುತ್ತಿತ್ತು. ಈ ಒಂದು ಪ್ರಕ್ರಿಯೆಯನ್ನು ಗಮನಿಸಿದಾಗ ಈ ಜಾತಿ ವ್ಯವಸ್ಥೆಯು ಏಣಿ ಶ್ರೇಣಿ ಸ್ತರವನ್ನು ಸಾಂಸ್ಥಿಕವಾಗಿ ಗಟ್ಟಿಗೊಳ್ಳುತ್ತಿರುವುದು ಪ್ರಸ್ತುತ ದಿನದಲ್ಲಿಯೂ ಕಾಣಬಹುದು.]

ಮಾನವ ನಾಗರಿಕತೆಯ ಒಟ್ಟು ಮೊತ್ತವನ್ನು ತಿಳಿಯಲು ರಾಷ್ಟ್ರೀಯ, ಅಂತರಾಷ್ಟ್ರೀಯ ಭೌತಿಕ ಬದಲಾವಣೆಗಳನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಮಾನವ ನಿರ್ಮಿತ ಸಾಮಾಜಿಕ ಏರ್ಪಾಡುಗಳನ್ನು ಯಾರು ಸ್ವೀಕರಿಸುವುದಿಲ್ಲ. ಜಾತಿ ನಿಗೂಢತೆಯ ಸಿಕ್ಕುಗಳನ್ನು ಬಿಡಿಸಲು ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಮಾನವ ಕುಲಶಾಸ್ತ್ರೀಯ ಅಧ್ಯಯನಕಾರರೇ ಮಾರ್ಗದರ್ಶಿಗಳು’ ಎಂಬ ಅಭಿಪ್ರಾಯ ತಾಳುತ್ತಾರೆ ಅಂಬೇಡ್ಕರ್. ಭಾರತದಲ್ಲಿ ಜಾತಿ ಒಂದು ಸ್ಥಳೀಯ ಸಮಸ್ಯೆಯಾಗಿದಾಗ್ಯೂ ಅದು ವ್ಯಾಪಕವಾಗಿ ಕೇಡನ್ನೂ, ಪರಿಣಾಮವನ್ನು ಬೀರಬಲ್ಲದು. ಭಾರತದಲ್ಲಿ ಜಾತಿ ಇರುವವರೆಗೆ ಹಿಂದೂಗಳು ಅಂತರ್ಜಾತಿ ವಿವಾಹವಾಗುವುದಿಲ್ಲ. ಸಾಮಾಜಿಕ ಸಂಬಂಧವನ್ನು ಮಾಡಲಾರರು. ಒಂದು ವೇಳೆ ಅಂತರಾಷ್ಟ್ರೀಯ ವಲಸೆ ಹೋಗುವುದರಿಂದಲೂ ಜಾತಿಯೊಂದು ಅಂತರಾಷ್ಟ್ರೀಯ ಸಮಸ್ಯೆಯಾಗಿ ಪರಿಣಾಮ ಬೀರಬಹುದು’. ಜನಾಂಗೀಯವಾಗಿ ಎಲ್ಲರೂ ವಿಭಿನ್ನ ಸ್ವರೂಪವನ್ನು ಹೊಂದಿದವರು, ಆದರೆ ಸಮಾನತೆಯ ಮಾಪನವೆಂದರೆ ಸಾಂಸ್ಕೃತಿಕ ಒಗ್ಗಟ್ಟು. ಹಾಗಾಗಿ ಸಾಂಸ್ಕೃತಿಕ ಅಖಂಡತೆಯೊಂದಿಗೆ ಹಿಂದೂ ಸಮಾಜವು ಪರಸ್ಪರ ಪ್ರತ್ಯೇಕವಾದ ಒಕ್ಕೂಟವಾಗಿದೆಯೇ ಎಂಬುದನ್ನು ನೋಡಬೇಕಾಗುತ್ತದೆ. ಆದರೆ ಹಿಂದೂ ಸಮಾಜವು ವಿಂಗಡನೆಯಿಂದ ಕೂಡಿದ್ದು ಜಾತಿ ವ್ಯವಸ್ಥೆಯ ಪ್ರಕ್ರಿಯೆಯೇ ಜಾತಿಯ ಬಗ್ಗೆ ವಿವರಣೆಯನ್ನು ನೀಡಬಲ್ಲದು ಎಂಬುದನ್ನು ಬಾಬಾ ಸಾಹೇಬರ ಸಂಶೋಧನೆ ಹೊರಗೆಡವುತ್ತದೆ.

123422
ಜಾತಿ ವ್ಯವಸ್ಥೆ ಕುರಿತ ಸಾಂದರ್ಭಿಕ ಚಿತ್ರ (ಕೃಪೆ: Wikimedia Commons)

ಪ್ರಮುಖವಾಗಿ ಫ್ರೆಂಚ್ ವಿದ್ವಾಂಸ ಮಿ.ಸೆರ್ನಾಟ್‌ರ ಪ್ರಕಾರ, ಜಾತಿಯು ಒಟ್ಟಾಗಿ ಹಣೆದ ಸಂಸ್ಥೆ ಹಾಗೂ ಸಾಂಸ್ಕೃತಿಕವಾದ ಸಂಘಟನೆ. ದಂಡ ಅಥವಾ ಬಹಿಷ್ಕಾರವನ್ನು ಹಾಕಬಹುದಾದ ಪರಮಾಧಿಕಾರವಿರುವ ಗುಂಪು.’ ಸರ್.ಎಚ್.ರಿಸ್ಲೇಯವರ ಪ್ರಕಾರ, ಜಾತಿ ಎನ್ನುವುದು ಹಲವು ಕುಟುಂಬಗಳ ಒಕ್ಕೂಟ, ಅದರ ಸದಸ್ಯತ್ವ ಪೂರ್ವಜರಿಂದ ಬಂದಿರುತ್ತದೆ.’ ಡಾ.ಕೇಟ್ಕರ್ ಅವರ ಪ್ರಕಾರ, ಜಾತಿಯ ಸದಸ್ಯತ್ವವನ್ನು ಹುಟ್ಟಿನಿಂದ ಪಡೆದು ಸಾಮಾಜಿಕ ಕಟ್ಟಲೆಗಳಿಂದ ನಿಷೇಧಗಳನ್ನು ಹೇರಲಾಗುತ್ತದೆ’. ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ, ಜಾತಿಯು ಪ್ರತ್ಯೇಕ ಘಟಕ ಹಾಗೂ ಮಡಿಯ ಪರಿಕಲ್ಪನೆಯು ಪೌರೋಹಿತಶಾಹಿ ವಿಧಿವಿಧಾನಗಳಿಂದ ಹುಟ್ಟುತ್ತದೆ. ಮಡಿ-ಮೈಲಿಗೆ ಮತ್ತು ಪುರಾಣ-ಪೌರೋಹಿತ ಜಾತಿಯ ಲಕ್ಷಣವಾಗಿದೆ. ಈ ಹಿನ್ನೆಲೆಯಲ್ಲಿ ಜಾತಿಯು ತನ್ನ ಸುತ್ತ ಬೇಲಿಯನ್ನು ಹಾಕಿಕೊಂಡು ಒಳಗೊಳ್ಳುವಿಕೆಗೆ ಅವಕಾಶ ಕಲ್ಪಿಸುವುದಿಲ್ಲ.’

ಸ್ವಜಾತಿ ವಿವಾಹಗಳಿದ್ದು, ಖಚಿತ ವಲಯವನ್ನು ಹೊಂದಿರುವ ವಿವಿಧ ಜನಾಂಗಗಳು ಪರಸ್ಪರ ಮಿಳಿತವಾಗಿದ್ದಾರೆ. ಸಾಂಸ್ಕೃತಿಕ ಐಕ್ಯತೆಯನ್ನು ಹೊಂದಿದ್ದಾರೆ. ಇದೊಂದು ಸಮತೆಯ ಅಳತೆಗೋಲೇ ಎಂಬುದನ್ನು ಪರಿಶೀಲಿಸಬೇಕು. ಸ್ವಜಾತಿಯ ವಿವಾಹದ ಸಮಾಜದಲ್ಲಿ ಹತ್ತಿರದ ರಕ್ತ ಸಂಬಂಧದಿಂದ ಮಾತ್ರ ರಚಿತವಾದ ಸಾಂಸ್ಕೃತಿಕ ಅಥವಾ ಬುಡಕಟ್ಟುಗಳಲ್ಲಿ ಕಾಣದಿರುವ ಗುಣಲಕ್ಷಣಗಳು ಜಾತಿಯನ್ನು ಹೊಸ ಸ್ವರೂಪದ ಸಮಸ್ಯೆಯನ್ನಾಗಿಸುತ್ತದೆ. ಸ್ವಜಾತಿಯ ವಿವಾಹವು ಜಾತಿಗೆ ವಿಶಿಷ್ಟವಾದ ಗುಣಲಕ್ಷಣ ಎನ್ನುವುದು ಅನಿವಾರ್ಯ. ಸ್ವಜಾತಿ ವಿವಾಹವನ್ನು ಹೇಗೆ ಕಾಪಾಡಲಾಗಿದೆ ಎನ್ನುವುದನ್ನು ತೋರಿಸುವುದರಲ್ಲಿ ಯಶಸ್ವಿಯಾದರೆ ಅಲ್ಲಿಗೆ ರಚನಾಕ್ರಮ ಮತ್ತು ಉತ್ಪತ್ತಿಯನ್ನು ವಾಸ್ತವವಾಗಿ ಸಾಧಿಸಿದಂತೆ.

ತಮ್ಮ 24ನೇ ವಯಸ್ಸಿನಲ್ಲಿ ಜಾತಿಯ ಮೂಲವನ್ನು ಕೆದಕಲು ಆರಂಭಿಸಿದ ಬಾಬಾಸಾಹೇಬರು, ತಮ್ಮ ಜೀವತಾವಧಿಯುದ್ದಕ್ಕೂ ಸಂಶೋಧನೆಗಳನ್ನು ನಿಲ್ಲಿಸಿದವರಲ್ಲ. ಅವರ ನಿಧನದ ನಂತರ ಪ್ರಕಟವಾದ ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲೂ ‘ಭಾರತದಲ್ಲಿ ಜಾತಿಗಳು’ ಪ್ರಬಂಧದಲ್ಲಿ ಮಂಡಿಸಿರುವ ಸಂಗತಿಗಳನ್ನು ಮತ್ತಷ್ಟು ಸ್ಪಷ್ಟವಾಗಿ, ಗಟ್ಟಿಯಾಗಿ ಪ್ರತಿಪಾದಿಸಿರುವುದನ್ನು ಕಾಣಬಹುದು. ಅಂಬೇಡ್ಕರ್ ಅವರ ಪ್ರಕಾರ, ಜಾತಿ ಸಂಕರದ ದೃಷ್ಟಿಯಲ್ಲಿ ಹೆಣ್ಣಿನ ಮೇಲೆ ಕಠಿಣ ನಿರ್ಬಂಧಗಳನ್ನು ಶಾಶ್ವತಗೊಳಿಸಿದ್ದೇ ಮನು ಸಂಹಿತೆ’. ಜಾತಿ ಆಧಾರಿತ ವ್ಯವಸ್ಥೆಗೆ ಗಟ್ಟಿಯಾದ ತಳಹಾಕಿದ್ದು ಮನು. ಆದರೆ ಮನುಸಂಹಿತೆಯ ಪೂರ್ವದಲ್ಲಿ ವರ್ಣವು ಚಲನಾಶೀಲತೆಯಿಂದ ಕೂಡಿತ್ತು. ಒಬ್ಬ ವ್ಯಕ್ತಿಯು ತನ್ನ ಗುಣಗಳಿಂದ ಯಾವುದೇ ವರ್ಣದವನಾಗಿ ಉನ್ನತಿ ಅಥವಾ ಅವನತಿ ಹೊಂದಬಹುದಿತ್ತು. ಅಂದರೆ ಹುಟ್ಟಿನ ಆಧಾರದಲ್ಲಿ ವರ್ಣವು ನಿರ್ಧಾರವಾಗುತ್ತಿರಲಿಲ್ಲ. ಇದಕ್ಕೆ ಉಪನಯನ ಪದ್ಧತಿಯನ್ನೇ ಒಂದು ಉದಾಹರಣೆಯನ್ನಾಗಿ ಅಂಬೇಡ್ಕರ್ ಉದಾಹರಿಸುತ್ತಾರೆ. ಮನು ಪೂರ್ವಕಾಲದಲ್ಲಿ ಉಪನಯನವು ‘ಪದವಿ ಪ್ರದಾನ’ಕ್ಕೆ ಸಮಾನ. ಇದನ್ನು ಪ್ರದಾನ ಮಾಡುತ್ತಿದ್ದದ್ದು ಗುರು. ತನ್ನಲ್ಲಿ ಕಲಿತ ಶಿಷ್ಯನ ಗುಣಾವಗುಣ, ಕಲಿಕೆಯ ಆಧಾರದಲ್ಲಿ ಆತ ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ ಎಂದು ನಿರ್ಧರಿಸಿ ಆತನಿಗೆ ಗುರುವು ಗ್ರೇಡ್ ನೀಡುತ್ತಿದ್ದನು. ಹೀಗೆ ಉನ್ನತ ಗ್ರೇಡ್ ಪಡೆಯುವ ಪ್ರಕ್ರಿಯೆಯೇ ಉಪನಯನವಾಗಿತ್ತು. ಮನುವಿನ ಕಾಲದಲ್ಲಿ ಉಪನಯನ ನೀಡುವ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲಾಯಿತು. ಮಗುವಿಗೆ ಈವರೆಗೆ ಗುರು ನೀಡುತ್ತಿದ್ದ ಉಪನಯನವನ್ನು ತಂದೆಗೆ ವರ್ಗಾಯಿಸಲಾಯಿತು. ತಂದೆಯು ತಾನು ಪಡೆದ ಉನ್ನತ ವರ್ಣವನ್ನೇ ತನ್ನ ಮಗುವಿಗೂ ಪ್ರದಾನ ಮಾಡಲಾರಂಭಿಸಿದ. ಹೀಗೆ ಉಪನಯನವು ತಂದೆಯ ಕೈಗೆ ವರ್ಗಾವಣೆಗೊಂಡ ಮೇಲೆ ವರ್ಣವು ಅನುವಂಶೀಯವಾಯಿತು. ವರ್ಣವು ಜಾತಿಯಾಗಿ ಬದಲಾಗಲು ಹೆಚ್ಚು ಕಾಲವೇನೂ ತೆಗೆದುಕೊಳ್ಳಲಿಲ್ಲ ಎಂಬ ಸಂಗತಿಗಳನ್ನು ಬಾಬಾಸಾಹೇಬರು ತಮ್ಮ ದೀರ್ಘಕಾಲದ ಸಂಶೋಧನೆಗಳಲ್ಲಿ ಕಂಡುಕೊಂಡರು ಮತ್ತು ಜಾತಿಯ ಉಗಮದ ಬಗ್ಗೆ ಮತ್ತಷ್ಟು ಖಚಿತತೆ ತೋರಿಸಿದರು.

ಜಾತಿಯ ಸಾಮಾಜಿಕ, ನೈತಿಕ ಮತ್ತು ಧಾರ್ಮಿಕ ಸಂಹಿತೆಯನ್ನು ಗಂಭೀರವಾಗಿ ವಿರೋಧಿಸುವ ಯಾವುದೇ ಹೊಸ ಬದಲಾವಣೆಯನ್ನು ಜಾತಿಯು ಸಹಿಸಲಾರದು. ಒಂದು ಜಾತಿಯಲ್ಲಿ ತನಗೆ ಮಣಿಯಲಾರದ ಸದಸ್ಯರನ್ನು ಹೊರಗೆ ಹಾಕುವ ಸಂಭವಿರುತ್ತದೆ. ಅಂಥವರಿಗೆ ಬೇರೆಯವರ ಜಾತಿಯೊಳಗೆ ಬರಮಾಡಿ ಕೊಳ್ಳುವ ವ್ಯವಸ್ಥೆ ಇಲ್ಲದೆ ಅವರ ಪಾಡಿಗೆ ಬಿಟ್ಟುಬಿಡಬಹುದು. ಅಂದರೆ ಅವರಿಗೆ ಬಹಿಷ್ಕಾರ ಹಾಕಬಹುದು. ಇದರ ಪರಿಣಾಮವಾಗಿ ಇನ್ನೊಂದು ಧರ್ಮದ ಅಥವಾ ಮಿಶ್ರ ಜಾತಿಯಾಗಿ ಮಾರ್ಪಾಡಾಗಬಹುದು ಎನ್ನುವುದನ್ನು ತರ್ಕಬದ್ಧವಾಗಿ ವಿವರಿಸುತ್ತಾರೆ.

ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ

ಅಂತಿಮವಾಗಿ ‘ಭಾರತದಲ್ಲಿ ಜಾತಿಗಳು’ ಪ್ರಬಂಧದಲ್ಲಿ ಮುಖ್ಯವಾಗಿ ನಾಲ್ಕು ಅಂಶಗಳ ಕುರಿತು ಅಂಬೇಡ್ಕರ್ ಅವರು ಬೆಳಕು ಚೆಲ್ಲಿದ್ದಾರೆ. 1. ಹಿಂದೂ ಜನ ಸಮುದಾಯ ಒಂದು ಸಂಕೀರ್ಣ ರಚನೆಯಾಗಿದ್ದರೂ ಅದರಲ್ಲೊಂದು ಆಳವಾದ ಸಾಂಸ್ಕೃತಿಕ ಏಕತೆ ಇದೆ. 2. ವ್ಯಾಪಕವಾದ ಸಾಂಸ್ಕೃತಿಕ ಘಟಕದ ಪ್ರತಿಯೊಂದು ಭಾಗವನ್ನೂ ಜಾತಿಯು ಹೆಣೆದು ಕಟ್ಟಿದೆ. ಪ್ರಾರಂಭದಲ್ಲಿದ್ದದ್ದು ಒಂದೇ ಜಾತಿ, ಮತ್ತು ಅನುಕರಣೆಯಿಂದಲೂ ಬಹಿಷ್ಕಾರದ ಕಾರಣದಿಂದಲೂ ವರ್ಗಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆ.

ಅಂಬೇಡ್ಕರ್ ಅವರು ಜಾತಿಯ ಮೂಲವನ್ನು ಖಚಿತವಾಗಿ ಶೋಧಿಸಿದ್ದಾರೆ. ಇಂದಿಗೂ ಜಾತಿಯ ಕಠೋರತೆಗಳು ಕಣ್ಣ ಮುಂದೆ ನಡೆಯುತ್ತಿವೆ. ಸ್ವಜಾತಿಯ ವಿವಾಹ ನಿಯಮಗಳು ಇನ್ನೂ ಜಟಿಲವಾಗುತ್ತಿದ್ದು ಮರ್ಯಾದೆಗೇಡು ಹತ್ಯೆಯಂತಹ ಘೋರ ಘಟನೆಗಳು ದಿನನಿತ್ಯ ಸಂಭವಿಸುತ್ತಿರುವುದನ್ನು ಕಾಣಬಹುದು. ಮೇಲ್ಜಾತಿಯ ಹೆಣ್ಣು ಕೆಳಜಾತಿಯ ಗಂಡು ಈ ಜಾತಿ ಸಂಕೋಲೆಯಲ್ಲಿ ಸಿಕ್ಕಿಕೊಂಡು ದಿನನಿತ್ಯ ಪರಿತಪಿಸುವಂತಾಗಿದೆ.

sabitha
ಡಾ ಸಬಿತಾ ಕೊರಗ
+ posts

ಡಾ.ಸಬಿತಾ ಅವರು ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯವರು. ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆಯಾಗಿದ್ದಾರೆ. ಮಂಗಳೂರು ವಿವಿಯಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ, 'ಇವ್ಯಾಲ್ಯುವೇಶನ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ರಾಮ್ಸ್ ಆಫ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ -ಎ ಸಿಚ್ಯುವೇಶನ್ ಅನಾಲಿಸಿಸ್' ಎಂಬ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹೊಸದಿಲ್ಲಿಯ ಜೆಎನ್‌ಯು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿವಿ, ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ಮಂಗಳೂರು ವಿವಿಯಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಡಾ ಸಬಿತಾ ಕೊರಗ
ಡಾ ಸಬಿತಾ ಕೊರಗ
ಡಾ.ಸಬಿತಾ ಅವರು ಉಡುಪಿ ಜಿಲ್ಲೆಯ ಸಾಸ್ತಾನ ಸಮೀಪದ ಗುಂಡ್ಮಿಯವರು. ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆಯಾಗಿದ್ದಾರೆ. ಮಂಗಳೂರು ವಿವಿಯಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ, 'ಇವ್ಯಾಲ್ಯುವೇಶನ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ರಾಮ್ಸ್ ಆಫ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ -ಎ ಸಿಚ್ಯುವೇಶನ್ ಅನಾಲಿಸಿಸ್' ಎಂಬ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹೊಸದಿಲ್ಲಿಯ ಜೆಎನ್‌ಯು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿವಿ, ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ. ಸದ್ಯ ಮಂಗಳೂರು ವಿವಿಯಲ್ಲಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’

ಕೃತಿ: ANNIHILATION OF CASTE (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...

‘ಅನಾಇಲೇಷನ್ ಆಫ್ ಕ್ಯಾಸ್ಟ್’- ಜಾತಿ ಮೂಲಗಳ ಶೋಧಿಸುತ್ತಾ…

ಕೃತಿ: Annihilation of Caste (ಜಾತಿ ನಿರ್ಮೂಲನೆ)ಮೊದಲ ಪ್ರಕಟಣೆ: 1936 (ಬಾಬಾಸಾಹೇಬ್...