ಕೃತಿ: Riddles in Hinduism (ಹಿಂದೂ ಧರ್ಮದ ಒಗಟುಗಳು’)
ಮಹಾರಾಷ್ಟ್ರ ಸರ್ಕಾರದ ಮೊದಲ ಪ್ರಕಟಣೆ: 1987, ಅಕ್ಟೋಬರ್ (ಈವರೆಗೆ ಅಪ್ರಕಟಿತವಾಗಿತ್ತು)
ಇಂಗ್ಲಿಷ್ ಸಂಪುಟ: 4
ಕನ್ನಡ ಸಂಪುಟ: 3
Navayana Publication, 2016: Riddles in Hinduism- The Annotated Critical Selection
ಹಿಂದೂ ಧರ್ಮಗ್ರಂಥಗಳು ಪ್ರತಿಪಾದಿಸುವ ವಾಸ್ತವಾಂಶಗಳಿಗೂ ಹಿಂದೂ ಧರ್ಮದ ಬಗ್ಗೆ ಹಬ್ಬಿರುವ ಜನಪ್ರಿಯ ನಂಬಿಕೆಗಳಿಗೂ ಇರುವ ವೈರುಧ್ಯಗಳನ್ನು ಶೋಧಿಸುತ್ತಾ ಅಂಬೇಡ್ಕರ್ ಅವರು ಬರೆದ ಬೃಹತ್ ಕೃತಿಯೇ `ಹಿಂದೂ ಧರ್ಮದ ಒಗಟುಗಳು’. ಅವರ ಮರಣದ ನಂತರ ಪ್ರಕಟಗೊಂಡ ಈ ಕೃತಿಯು ವೇದಗಳ ಕುರಿತು ವಿಶೇಷ ಒಳನೋಟಗಳನ್ನು ನೀಡುತ್ತದೆ. ವೇದಗಳು ಪ್ರಶ್ನಾತೀತವೆ? ಪ್ರಶ್ನಾತೀತ ಎನ್ನುವುದಾದರೆ ವೇದಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಕೃತಿಗಳನ್ನು ಬ್ರಾಹ್ಮಣರು ರಚಿಸಿದ್ದೇಕೆ? ವೇದಗಳು ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುತ್ತವೆಯೇ? ಉಪನಿಷತ್ತುಗಳು ವೇದಗಳನ್ನು ಒಪ್ಪಿಕೊಂಡಿವೆಯೇ? ಚಾತುರ್ವರ್ಣವನ್ನು ಹಿಂದೂ ಗ್ರಂಥಗಳು ಹೇಗೆ ಪ್ರತಿಪಾದಿಸಿವೆ? ಹಿಂದೂ ದೇವರುಗಳಲ್ಲಿ ಸಾಮರಸ್ಯವಿದೆಯೇ?- ಹೀಗೆ ಹಲವು ಪ್ರಶ್ನೆಗಳನ್ನು ಬೆನ್ನೇರುವ ಅಂಬೇಡ್ಕರ್, ಈ ಎಲ್ಲ ಗೊಂದಲಗಳ ಸೃಷ್ಟಿಗೆ ಕಾರಣವಾಗಿರುವ ಬ್ರಾಹ್ಮಣರನ್ನು ಪಾಟೀಸವಾಲಿಗೆ ಎಳೆಯುತ್ತಾರೆ. ಇಷ್ಟೇ ಅಲ್ಲದೆ, ದೇವರುಗಳಲ್ಲಿನ ಸಾಮರಸ್ಯದ ಕೊರತೆ, ಹಿಂದೂ ಧರ್ಮಗ್ರಂಥಗಳು ಪ್ರತಿಪಾದಿಸುವ ಅಹಿಂಸೆ, ವಿಪರೀತ ನರಬಲಿ, ಪ್ರಾಣಿಬಲಿ, ಮನುವಿನ ಹುಚ್ಚುತನಗಳು, ಮನಬಂದಂತೆ ಮಿಶ್ರಜಾತಿಗಳನ್ನು ಸೃಷ್ಟಿಸಿದ್ದು, ಯುಗಗಳ ಕುರಿತು ಇರುವ ಗೊಂದಲ, ಕಲಿಯುಗದ ಕುರಿತು ಇರುವ ಜಿಜ್ಞಾಸೆ, ಪ್ರಾಚೀನ ಕಾಲದಲ್ಲಿ ಆರ್ಯರ ಸಾಮಾಜಿಕ ಬದುಕಿನ ಅಧಃಪತನ, ಕುಡಿತ, ಜೂಜು, ವ್ಯಭಿಚಾರ- ಮೊದಲ ಸಂಗತಿಗಳ ಕುರಿತು ಅಂಬೇಡ್ಕರ್ ಮಾತನಾಡುತ್ತಾರೆ. ಹಿಂದೂ ಧರ್ಮದ ವೈರುಧ್ಯಗಳನ್ನು ಒಗಟುಗಳೆಂದು ಕರೆದಿರುವ ಅವರು, ಇವುಗಳನ್ನು ಬ್ರಾಹ್ಮಣರು ಬಿಡಸಬಲ್ಲರೇ ಎಂದು ನಿರೀಕ್ಷಿಸಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು 1950ರ ಅವಧಿಯಲ್ಲಿ ಬರೆದರೂ ಅವರ ಮರಣದ ನಂತರ, ಬಹು ವರ್ಷಗಳ ಬಳಿಕ (1987ರಲ್ಲಿ) ಮಹಾರಾಷ್ಟ್ರ ಸರ್ಕಾರದಿಂದ ಪ್ರಕಟಗೊಂಡ ‘ಹಿಂದೂ ಧರ್ಮದ ಒಗಟುಗಳು’ (Riddles in Hinduism) ನಿಸ್ಸಂಶಯವಾಗಿ ಬಾಬಾಸಾಹೇಬರ ಪ್ರಖರ ವಿದ್ವತ್ತಿಗೆ ಕನ್ನಡಿ ಹಿಡಿವ ಕೃತಿ. ಸರ್ಕಾರವು ಬಾಬಾಸಾಹೇಬರ ‘ಸಮಗ್ರ ಬರೆಹಗಳು ಮತ್ತು ಭಾಷಣಗಳು’ ಸರಣಿಯ ನಾಲ್ಕನೇ ಸಂಪುಟವಾಗಿ ಈ ಕೃತಿಯನ್ನು ಹೊರತಂದಾಗ ಮಹಾರಾಷ್ಟ್ರದಲ್ಲಿ ಬಹುದೊಡ್ಡ ವಿವಾದವೇ ಉಂಟಾಯಿತು. ಅದರಲ್ಲೂ ಕೃತಿಯ ಅನುಬಂಧದಲ್ಲಿ ಸೇರಿಸಲ್ಪಟ್ಟ ‘ರಾಮ-ಕೃಷ್ಣರ ಒಗಟು’ ಭಾಗಕ್ಕೆ ಹಿಂದುತ್ವವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ವಾಸ್ತವದಲ್ಲಿ ಇಡೀ ‘ಹಿಂದೂ ಧರ್ಮದ ಒಗಟುಗಳು’ ಕೃತಿಯೇ ಹಿಂದೂಧರ್ಮವನ್ನು ವಿಮರ್ಶಾತ್ಮಕವಾಗಿ ನೋಡಿದ ಸಂಶೋಧನಾಪೂರ್ಣ ಪ್ರತಿಕ್ರಿಯೆಯಾಗಿತ್ತು.
ಇಲ್ಲಿ ಅಂಬೇಡ್ಕರ್ ಅವರು ಹಿಂದೂ ಧರ್ಮಗ್ರಂಥಗಳಲ್ಲಿನ ವಿಚಾರಗಳನ್ನು ಟೀಕೆಗೆ ಒಳಪಡಿಸುವ ರೀತಿಯು ವೈಚಾರಿಕ ಮನೋಭಾವವನ್ನು ಉದ್ದೀಪಿಸುತ್ತದೆ. ಸಾಂಪ್ರದಾಯಿಕ ದೃಷ್ಟಿಕೋನಗಳಿಗೆ ನುಂಗಲಾರದ ತುತ್ತಾಗಿಯೂ ಇಲ್ಲಿನ ವಾದಗಳು ನಿಲ್ಲುತ್ತವೆ. ವೇದಗಳು ಅಪೌರುಷೇಯವೇ? ವೇದಗಳು ಪ್ರಶ್ನಾತೀತವೆ? ಪ್ರಶ್ನಾತೀತ ಎನ್ನುವುದಾದರೆ ವೇದಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ ಕೃತಿಗಳನ್ನು ಬ್ರಾಹ್ಮಣರು ರಚಿಸಿದ್ದೇಕೆ? ವೇದಗಳು ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುತ್ತವೆಯೇ? ದೇವರುಗಳಲ್ಲಿ ಸಾಮರಸ್ಯವಿತ್ತೆ? ದೇವರುಗಳಲ್ಲಿ ಪೈಪೋಟಿ ಇದ್ದದ್ದೇಕೆ?- ಹೀಗೆ ಹಲವು ಪ್ರಶ್ನೆಗಳನ್ನು ಬೆನ್ನೇರುವ ಅಂಬೇಡ್ಕರ್, ಜನಪ್ರಿಯ ನಂಬಿಕೆಗಳ ಎದುರು ವಾಸ್ತವಾಂಶಗಳನ್ನು ಶೋಧಿಸುತ್ತಾರೆ.
ಬಾಬಾಸಾಹೇಬರು ಬದುಕಿದ್ದ ಅವಧಿಯಲ್ಲೇ ಈ ಕೃತಿ ಪ್ರಕಟವಾಗಲಿಲ್ಲ. ಹೀಗಾಗಿಯೇ ಕೆಲವು ಕಡೆ ಅಪೂರ್ಣ ಪಠ್ಯಗಳು ಕಾಣಸಿಗುತ್ತವೆ. ಆದರೆ ಬಹುತೇಕ ಅಧ್ಯಾಯಗಳು ಪೂರ್ಣವಾಗಿ ಲಭ್ಯವಿವೆ. ಪ್ರತಿ ಅಧ್ಯಾಯವನ್ನು ಒಂದೊಂದು ‘ಒಗಟು’ ಎಂಬುದಾಗಿ ಅಂಬೇಡ್ಕರ್ ಚರ್ಚಿಸಿದ್ದಾರೆ. ಇಲ್ಲಿ ‘ಒಗಟು’ ಎಂದರೆ ಉತ್ತರ ಸಿಗದ ಸಂಗತಿಗಳು. ಹಿಂದೂಧರ್ಮದ ಪ್ರಬಲ ಪ್ರತಿಪಾದಕರ ಎದುರು ಒಟ್ಟು 24 ಒಗಟುಗಳನ್ನು ಅಂಬೇಡ್ಕರ್ ಮುಂದಿಡುತ್ತಾರೆ. ವೇದ, ಶಾಸ್ತ್ರ, ಪುರಾಣಗಳಲ್ಲಿನ ವಿರೋಧಾಭಾಸಗಳನ್ನು ತೆರೆದಿಟ್ಟು, ‘ಇವುಗಳೇಕೆ ಹೀಗೆ ಪ್ರತಿಪಾದಿಸುತ್ತಿವೆ?’ ಎಂದು ಸೋಜಿಗ ವ್ಯಕ್ತಪಡಿಸುತ್ತಾರೆ. ಇಲ್ಲಿ ‘ಒಗಟು’ ಎಂಬುದು ‘ವ್ಯಂಗ್ಯ’ ಎಂಬ ಅರ್ಥದಲ್ಲೂ ಬಳಕೆಯಾದಂತೆ ತೋರುತ್ತದೆ.

ಸಾಮಾನ್ಯ ಅರ್ಥದಲ್ಲಿ ‘ಒಗಟು’ ಎಂಬುದು ಉತ್ತರವನ್ನು ಒಳಗೊಂಡಿರುತ್ತದೆ ಮತ್ತು ಅದನ್ನು ಬಿಡಿಸಿ ಹೇಳುವಾತ ಬುದ್ಧಿವಂತನೂ ಆಗಿರುತ್ತಾನೆ. ಆದರೆ, ಬಾಬಾಸಾಹೇಬರು ಕೇಳುವ ‘ಹಿಂದೂಧರ್ಮ’ದ ಒಗಟುಗಳಿಗೆ ಉತ್ತರವನ್ನು ನೀಡಬಲ್ಲವರು ಯಾರು? ಈ ಒಗಟುಗಳನ್ನು ಸೃಷ್ಟಿಸಿದವರು ಬ್ರಾಹ್ಮಣರು ಎಂದು ಪ್ರತಿಪಾದಿಸುತ್ತಿರುವ ಅಂಬೇಡ್ಕರ್ ಅವರು ಬ್ರಾಹ್ಮಣ ವಿದ್ವಾಂಸರಿಂದ ಪ್ರತಿಕ್ರಿಯೆಗಳನ್ನು ಬಯಸಿದಂತೆ ಕಾಣುತ್ತದೆ.
ಇದನ್ನೂ ಓದಿರಿ: ‘ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ’: ಅದಕ್ಕೆ ಯಾರು ಕಾರಣ?’
‘ಹಿಂದೂ ಧರ್ಮದ ಒಗಟುಗಳು’ ಕೃತಿಯನ್ನು ‘ಧಾರ್ಮಿಕ’, ‘ಸಾಮಾಜಿಕ’ ಮತ್ತು ‘ರಾಜಕೀಯ’ ಎಂದು ಮೂರು ಭಾಗ ಮಾಡಲಾಗಿದೆ. ಮೂರು ಭಾಗಗಳಲ್ಲಿನ ಒಗಟುಗಳು ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ. ಹೀಗಾಗಿ ಇಲ್ಲಿನ ಒಗಟುಗಳನ್ನು ಅನುಕ್ರಮದಲ್ಲಿ ಓದುವುದೇ ಸೂಕ್ತ. ಯಾಕೆಂದರೆ ಒಂದು ಒಗಟಿನಲ್ಲಿ ಚರ್ಚಿತ ಸಂಗತಿಯು ಮುಂದಿನ ಒಗಟಿನಲ್ಲಿ ಬೇರೊಂದು ಚರ್ಚೆಯ ಭಾಗವಾಗಿ ಮುಂದುವರಿಯುತ್ತದೆ.
ವೇದಗಳಲ್ಲಿನ ಒಗಟುಗಳು
ಈ ಕೃತಿಯಲ್ಲಿ ಪ್ರಧಾನವಾಗಿ ಅಂಬೇಡ್ಕರ್ ಅವರು ಚರ್ಚಿಸುವುದೇ ವೇದಗಳ ಕುರಿತು. ‘ವೇದಗಳು ಮನುಷ್ಯನಿರ್ಮಿತವಲ್ಲ, ಅವುಗಳ ಮೂಲವು ಪ್ರಶ್ನಾತೀತ’ ಎಂಬ ಪ್ರತಿಪಾದನೆಗಳ ಹಿಂದಿನ ಅಸಲಿಯತ್ತನ್ನು, ದ್ವಂದ್ವಗಳನ್ನು ಅಂಬೇಡ್ಕರ್ ಮೊದಲಿಗೆ ತೆರೆದಿಡುತ್ತಾರೆ. “ವೇದಗಳನ್ನು ತನ್ನ ಧರ್ಮದ ಅತ್ಯಂತ ಪವಿತ್ರ ಗ್ರಂಥಗಳೆಂದು ಪರಿಗಣಿಸದ ಹಿಂದೂ ಪ್ರಾಯಶಃ ಎಲ್ಲೂ ಇರಲಾರ. ಆದರೂ ಯಾವ ಹಿಂದೂವನ್ನಾದರೂ ವೇದಗಳ ಮೂಲವೆಲ್ಲಿ ಎಂದು ಕೇಳಿದರೆ ಈ ಸರಳ ಪ್ರಶ್ನೆಗೆ ಒಂದು ಸ್ಪಷ್ಟ ಹಾಗೂ ಖಚಿತವಾದ ಉತ್ತರ ಹೇಳುವವರನ್ನು ಹುಡುಕುವುದು ಕಷ್ಟವಾಗುತ್ತದೆ…” ಎನ್ನುತ್ತಾರೆ ಅಂಬೇಡ್ಕರ್ (ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಕನ್ನಡಾನುವಾದ ಸಂಪುಟ: 3, ಪು.ಸಂ. 494; ಮುಂದಿನ ಉಲ್ಲೇಖಗಳನ್ನು ಇದೇ ಕೃತಿಯಿಂದ ಆಯ್ದುಕೊಳ್ಳಲಾಗಿದೆ).
ವೇದಗಳು ಮನುಷ್ಯ ನಿರ್ಮಿತವಲ್ಲ ಎಂಬುದನ್ನು ಸ್ವತಃ ವೇದಗಳೇ ಅಲ್ಲಗಳೆಯುತ್ತವೆ ಎಂಬುದಕ್ಕೆ ಅಂಬೇಡ್ಕರ್ ಪುರಾವೆಗಳನ್ನು ಒದಗಿಸುತ್ತಾರೆ. “ಋಗ್ವೇದಕ್ಕೆ ಸೇರಿರುವ ಕಾತ್ಯಾಯನ ರಚಿತ ಸರ್ವಾನುಕ್ರಮಣಿಕೆಯೇ ಪ್ರೊ. ಮ್ಯಾಕ್ಸ್ಮುಲ್ಲರ್ ಪ್ರಕಾರ ಅತ್ಯಂತ ಪರಿಪೂರ್ಣವಾದ ಅನುಕ್ರಮಣಿಕೆ” (ಪು.ಸಂ. 506) ಎಂಬ ಅಂಶವನ್ನು ಉಲ್ಲೇಖಿಸುವ ಅಂಬೇಡ್ಕರ್, ಋಗ್ವೇದದ ಋಕ್ಕುಗಳನ್ನು ರಚಿಸಿದವರು ಋಷಿಗಳೆಂದು ಪ್ರತಿಪಾದಿಸುವ ಸರ್ವಾನುಕ್ರಮಣಿಕೆಗಳ ಪಟ್ಟಿ ಕೊಡುತ್ತಾರೆ. ಉದಾಹರಣೆಯಾಗಿ ನೋಡುವುದಾದರೆ, “ಓ, ಅಶ್ವಿನರೇ, ನಿಮಗಾಗಿಯೇ ಗೃತ್ಸಮದರು ಈ ಮಹಾ ಪ್ರಾರ್ಥನೆಗಳನ್ನೂ, ಈ ಋಕ್ಕನ್ನೂ ರಚಿಸಿದ್ದಾರೆ”, “ಓ, ಇಂದ್ರನೇ, ಕುಶಿಕ ಋಷಿಗಳು ಸ್ವರ್ಗ ಸಂಪಾದಿಸುವ ಉದ್ದೇಶದಿಂದ, ನಿನ್ನನ್ನು ಶ್ಲಾಘಿಸುವಂತಹ ಒಂದು ಋಕ್ಕನ್ನು ರಚಿಸಿದ್ದಾರೆ”, “ಓ, ವೀರನೇ, ಮನುಷ್ಯರು ಕೆಲಸಗಳನ್ನು ಮಾಡುವಂತೆ, ಗೃತ್ಸಮದರು ಶಾಂತಿಯನ್ನು ಪಡೆಯುವುದಕ್ಕೋತ್ಸರ ಈ ಪ್ರಾರ್ಥನೆಯನ್ನು ರಚಿಸಿದ್ದಾರೆ” (ಪು.ಸಂ. 507)- ಈ ರೀತಿಯ ವಿವರಗಳು ವೇದಗಳ ರಚನೆಯಲ್ಲಿ ಋಷಿಗಳ ಪಾತ್ರವನ್ನು ದೃಢೀಕರಿಸುತ್ತವೆ. “ವೇದಗಳಿಗೆ ಮಾನವ ಮೂಲವಿದೆಯೆಂದು ಸಾಧಿಸಲು ಇಷ್ಟೊಂದು ಸಾಕ್ಷ್ಯಾಧಾರಗಳಿದ್ದರೂ, ವೇದಗಳು ಅಪೌರುಷೇಯವೆಂಬ ಅಭಿಮತವನ್ನು ಪ್ರಚುರಪಡಿಸಲು ಬ್ರಾಹ್ಮಣರು ಇಷ್ಟೊಂದು ಕಷ್ಟಪಡುತ್ತಿರುವುದು ಒಂದು ಒಗಟಾಗಿದೆ. ಬ್ರಾಹ್ಮಣರು ಅಂತಹ ಅಭಿಮತವನ್ನು ಪ್ರಚಾರ ಮಾಡಲು ಕಾರಣವಾದರೂ ಏನು?” (ಪು.ಸಂ. 509) ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ವೇದಗಳು ಪ್ರಶ್ನಾತೀತ ಎಂಬ ವಾದದಲ್ಲೂ ಹುರುಳಿಲ್ಲ. ಹಲವು ಧರ್ಮಸೂತ್ರಗಳ ಪ್ರಕಾರ, “ವೇದವು ಅಧಿಕಾರವುಳ್ಳ ಪುಸ್ತಕವೆಂದು ಪರಿಗಣಿಸಲಾಗಿರಲಿಲ್ಲ. ವಿದ್ವಜ್ಜನರು ಸಭೆಯಲ್ಲಿ ಕೈಗೊಂಡ ನಿರ್ಣಯವೇ ಅಧಿಕಾರ (ಪ್ರಮಾಣ)” ಆಗಿತ್ತು (ಪು.ಸಂ. 505). ಅಂದರೆ ವೇದಗಳೇ ಅಂತಿಮ ನಿರ್ಧಾರಗಳಾಗಿರಲಿಲ್ಲ ಎಂಬುದು ಸ್ಪಷ್ಟ.
ವೇದಗಳ ಹುಟ್ಟಿನ ಮೂಲದ ಬಗೆಗಿನ ಕತೆಗಳೂ ತರಹೇವಾರಿ ವಿವರಣೆಗಳನ್ನು ನೀಡುತ್ತವೆ.
ಋಗ್ವೇದ, ಶತಪಥ ಬ್ರಾಹ್ಮಣ, ತೈತ್ತಿರೀಯ ಬ್ರಾಹ್ಮಣ, ಛಾಂದೋಗ್ಯ ಉಪನಿಷತ್ತು, ಮನುಸ್ಮೃತಿ, ಭಾಗವತ ಪುರಾಣ- ಹೀಗೆ ವಿವಿಧ ವೈದಿಕ ಕೃತಿಗಳು ಒಂದೊಂದು ಮೂಲವನ್ನು ಹೇಳುತ್ತವೆ. ಒಟ್ಟಾರೆ ಅಂಬೇಡ್ಕರ್ ಅವರು ಪಟ್ಟಿ ಮಾಡುವಂತೆ ವೇದಗಳ ಹುಟ್ಟಿನ ಬಗ್ಗೆ ಹನ್ನೊಂದು ವಿಧದ ವಿವರಣೆ ಸಿಕ್ಕಿವೆ. “ವೇದಗಳು 1. ಪುರುಷನ ನಿಗೂಢ ರೀತಿಯ ಯಜ್ಞದಿಂದ ಹುಟ್ಟಿದವು, 2. ಸ್ಕಂಬನಲ್ಲಿ ಆಶ್ರಯ ಪಡೆದಿದ್ದವು, 3. ಸ್ಕಂಬನ ಕೂದಲು ಮತ್ತು ಬಾಯಿಗಳಿಂದ ಕತ್ತರಿಸಿ ತೆಗೆಯಲ್ಪಟ್ಟವು, 4. ಇಂದ್ರನಿಂದ ಪ್ರಕಟವಾದವು, 5. ಕಾಲನಿಂದ ಉತ್ಪತ್ತಿಯಾದವು, 6. ಅಗ್ನಿ, ವಾಯು ಮತ್ತು ಸೂರ್ಯರಿಂದ ಸೃಷ್ಟಿಯಾದವು, 7. ಪ್ರಜಾಪತಿ ಮತ್ತು ನೀರಿನಿಂದ ಉಂಟಾದವು, 8. ಬ್ರಹ್ಮನ ಉಸಿರು, 9. ಮಾನಸ ಸರೋವರದಿಂದ ದೇವದೇವತೆಯಿಂದ ಅಗೆದು ಹೊರತಗೆಯಲ್ಪಟ್ಟವು, 10. ಪ್ರಜಾಪತಿಯ ಗಡ್ಡದ ಕೂದಲು ಮತ್ತು 11. ವಾಚದಿಂದ ಹುಟ್ಟಿದವು” (ಪು.ಸಂ. 501- 502).
ವೇದಗಳ ಹುಟ್ಟಿನ ಮೂಲದ ಬಗ್ಗೆ ಇಷ್ಟು ಅಸಂಬದ್ಧಗಳು ಸೃಷ್ಟಿಯಾಗಿದ್ದೇಕೆ? ವೈದಿಕ ಸಾಹಿತ್ಯದ ರಕ್ಷಕರಾಗಿದ್ದ ಬ್ರಾಹ್ಮಣರು ಭಿನ್ನಭಿನ್ನ ಮೂಲಗಳನ್ನು ನಮ್ಮ ಮುಂದಿಟ್ಟಿದ್ದೇಕೆ?- ವೇದಗಳ ಮೂಲವು ಇಷ್ಟೊಂದು ಒಗಟಾಗಿ ಪರಿಣಮಿಸಿರುವುದೇಕೆ? ಎಂಬುದು ಅಂಬೇಡ್ಕರ್ ಅವರು ಕೇಳುವ ಒಗಟು.
ವೇದಗಳಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳಿವೆಯೇ?
ವೇದಗಳಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಹುಡುಕುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಅಂಬೇಡ್ಕರ್ ಬರುತ್ತಾರೆ. ವೇದಗಳಲ್ಲಿನ ತರ್ಕಹೀನ ಸಂಗತಿಗಳನ್ನು ಆ ಕಾಲದಲ್ಲೇ ಚಾರ್ವಾಕರು ಕಟುವಾಗಿ ಟೀಕಿಸಿದ್ದರು ಎಂಬುದನ್ನು ಅಂಬೇಡ್ಕರ್ ದಾಖಲಿಸುತ್ತಾರೆ. “ವೇದಗಳಲ್ಲಿ ಅಸತ್ಯ, ಸ್ವವಿರೋಧ (ವ್ಯಾಘಾತ) ಮತ್ತು ಪುನರುಕ್ತಿ ಎಂಬ ಮೂರುದೋಷಗಳಿವೆ. ಅಲ್ಲದೆ ತಮ್ಮನ್ನು ವೈದಿಕ ಪಂಡಿತರೆಂದು ಕರೆದುಕೊಳ್ಳುವ ಕೆಲ ಧೂರ್ತರು ಪರಸ್ಪರ ಖಂಡನೆಯಲ್ಲಿ ತೊಡಗುತ್ತಾರೆ. ಏಕೆಂದರೆ ಕರ್ಮಕಾಂಡ ಪ್ರಾಮಾಣ್ಯವಾದಿಗಳು ಜ್ಞಾನಕಾಂಡ ಪ್ರಾಮಾಣ್ಯವನ್ನು ಖಂಡಿಸುತ್ತಾರೆ ಹಾಗೂ ಜ್ಞಾನಕಾಂಡದ ಪ್ರಾಮಾಣ್ಯವಾದಿಗಳು ಕರ್ಮಕಾಂಡದ ಪ್ರಾಮಾಣ್ಯವನ್ನು ಅಲ್ಲಗಳೆಯುತ್ತಾರೆ. ಕೊನೆಯದಾಗಿ, ವೇದಗಳು ಧೂರ್ತರು ರಚಿಸಿದ ಅಸಂಬದ್ಧ ಪ್ರಲಾಪಗಳು” (ಪು.ಸಂ. 517) ಎನ್ನುತ್ತಾರೆ ಚಾರ್ವಾಕರು. “ಸ್ವರ್ಗ, ಮೋಕ್ಷ, ಪರಲೋಕಕ್ಕೆ ಹೋಗುವ ಆತ್ಮ ಇಲ್ಲ. ವರ್ಣಾಶ್ರಮ ಧರ್ಮದ ಕರ್ಮಗಳಿಗೆ ತಕ್ಕ ಫಲಗಳೂ ಇಲ್ಲ. ಅಗ್ನಿಹೋತ್ರ, ಮೂರು ವೇದಗಳು, ಸನ್ಯಾಸಾದಿಗಳು, ಭಸ್ಮಲೇಪನ ಇವನ್ನು ಬುದ್ಧಿಹೀನರೂ, ಪೌರುಷಹೀನರೂ ತಮ್ಮ ಜೀವಿಕೆಗೋಸ್ಕರ ಸೃಷ್ಟಿ ಮಾಡಿಕೊಂಡರು. ಜ್ಯೋತಿಷ್ಟೋಮಯಾಗದಲ್ಲಿ ಕೊಲ್ಲಲ್ಪಟ್ಟು ಸ್ವರ್ಗಕ್ಕೆ ಹೋಗುವುದಾದರೆ, ಯಜಮಾನರು ತನ್ನ ತಂದೆಯನ್ನೇ ಕೊಂದು ಆತನನ್ನು ಏಕೆ ಸ್ವರ್ಗಕ್ಕೆ ಕಳುಹಿಸಬಾರದು?” (ಪು. 517)- ಹೀಗೆ ಕಟುವಾಗಿ ಪ್ರಶ್ನಿಸುತ್ತಾರೆ ಚಾರ್ವಾಕರು.

“ನೈತಿಕತೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಋಗ್ವೇದದಲ್ಲಿ ಅದರ ಬಗ್ಗೆ ಯಾವುದೇ ಚರ್ಚೆಯು ಇಲ್ಲವೆಂದೇ ಹೇಳಬೇಕು” (520) ಎಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಲು ಅಂಬೇಡ್ಕರ್ ಯತ್ನಿಸುತ್ತಾರೆ. ಯಮ ಮತ್ತು ಯಮಿ ಎಂಬ ಅಣ್ಣ ತಂಗಿಯರ ಸಂಭಾಷಣೆಯೇ ಇದಕ್ಕೊಂದು ಉದಾಹರಣೆ. ಯಮಿಯು ತನ್ನ ಅಣ್ಣನೊಂದಿಗೆ ಲೈಂಗಿಕ ಆಸಕ್ತಿಗಳನ್ನು ವ್ಯಕ್ತಪಡಿಸುತ್ತಾಳೆ. “ಯಮಿ: ಸರ್ವರೂಪಿಯೂ, ದಿವ್ಯಜನಕನೂ ಆದ ತ್ವಷ್ಟ್ರೀಯು, ನಾವು ಗರ್ಭದಲ್ಲಿರುವಾಗಲೇ ನಮ್ಮನ್ನು ಗಂಡಹೆಂಡಿರನ್ನಾಗಿ ಮಾಡಿದನು. ಅವನ ಆಜ್ಞೆಯನ್ನು ಯಾರು ಮೀರಲು ಸಾಧ್ಯವಿಲ್ಲ. ನಮ್ಮ ಈ ಸಮಾಗಮಕ್ಕೆ ಪೃಥ್ವಿ ಮತ್ತು ಆಕಾಶಗಳೇ ಸಾಕ್ಷಿ” (ಪು.ಸಂ.521). ಯಮಿಯ ನಿಲುವನ್ನು ಯಮ ವಿರೋಧಿಸುತ್ತಾನೆ. ಅದಕ್ಕೆ ಯಮಿ, “ತನ್ನ ತಂಗಿಗೆ ಗಂಡನಿಲ್ಲದುದನ್ನು ನೋಡಿಯೂ (ಸುಮ್ಮನಿರುವವನನ್ನು) ಅಣ್ಣ ಎನ್ನಲಾದೀತೆ? ದುರದೃಷ್ಟ ಒದಗಿದ ಅಣ್ಣನುಳ್ಳ ತಂಗಿಯನ್ನು, ತಂಗಿಯೆಂದು ಕರೆಯಲಾದೀತೆ? ಕಾಮದಿಂದ ಸೋತ ನಾನು, ಬಲವಾದ ಮತ್ತು ಒತ್ತಾಯಪೂರ್ವಕವಾದ ಈ ಬೇಡಿಕೆಯನ್ನು ಮಾಡುತ್ತಿದ್ದೇನೆ. ನಿನ್ನ ದೇಹವನ್ನು ನನ್ನ ದೇಹದೊಂದಿಗೆ ಒಂದುಗೂಡಿಸು” ಎನ್ನುತ್ತಾಳೆ (ಪು.ಸಂ. 521). ಇಂತಹ ಕತೆಗಳು ಆ ಕಾಲದ ಸಾಮಾಜಿಕ, ಕೌಟುಂಬಿಕ ಸ್ಥಿತಿಗಳನ್ನು ಹೇಳುತ್ತಿದ್ದರೂ ವೇದಗಳನ್ನು ನೈತಿಕವಾಗಿ ಶ್ರೇಷ್ಠ ಎನ್ನುವ ವಾದವು ಇಂದಿಗೆ ಸರಿಯಾಗುವುದಿಲ್ಲ ಎಂಬುದು ಇಲ್ಲಿರುವ ಅಂಶ. “ಋಗ್ವೇದ ಮತ್ತು ಯಜುರ್ವೇದಗಳಲ್ಲಿ ಬರುವ ಅನೇಕ ಅಶ್ಲೀಲ ವಾಕ್ಯವೃಂದಗಳನ್ನು ಬೇಕೆಂದೇ ಬಿಟ್ಟಿದ್ದೇನೆ ಎಂಬುದನ್ನು ನಾನು ಇಲ್ಲಿ ಹೇಳಬಯಸುತ್ತೇನೆ. ಯಾರಿಗಾದರೂ ಈ ವಿಚಾರವಾಗಿ ಕುತೂಹಲ ಉಂಟಾದರೆ ‘ಋಗ್ವೇದ’, ಮಂಡಲ ಘಿ, 85-37ರಲ್ಲಿ ಬರುವ ಸೂರ್ಯ ಮತ್ತು ಪೂಷನರ ನಡುವಿನ ಸಂಭಾಷಣೆ ಮತ್ತು ‘ಋಗ್ವೇದ’ ಮಂಡಲ ಘಿ, 86.6ರಲ್ಲಿ ಬರುವ ಇಂದ್ರ ಮತ್ತು ಇಂದ್ರಾಣಿಯರ ನಡುವಿನ ಸಂಭಾಷಣೆಯನ್ನು ನೋಡಬಹುದು. ‘ಯಜುರ್ವೇದ’ದ ಅಶ್ವಮೇದ ವಿಭಾಗದಲ್ಲಿ ಇನ್ನೂ ಹೆಚ್ಚಿನ ಅಶ್ಲೀಲತೆಯನ್ನು ಕಾಣಬಹುದು” (ಪು.ಸಂ. 524) ಎನ್ನುತ್ತಾರೆ ಅಂಬೇಡ್ಕರ್.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ಋಗ್ವೇದದಲ್ಲಿ ಬರುವ ಪ್ರಾರ್ಥನೆಗಳು ಕ್ಷುಲ್ಲಕ ಬಯಕೆಗಳ ಈಡೇರಿಕೆಗಾಗಿ ನಡೆಯುತ್ತಿರುವಂತೆ ಭಾಸವಾಗುತ್ತವೆ: “ಎಲೈ ವಾಯುದೇವನೆ, ನೀನು ಎಷ್ಟು ಸುಂದರನಿರುವೆ! ನಾವು ಸಾಂಬಾರ ಪದಾರ್ಥಗಳನ್ನು ಹಾಕಿದ ಸೋಮರಸವನ್ನು ಮಾಡಿದ್ದೇವೆ. ದಯವಿಟ್ಟು ಬಂದು ಅದನ್ನು ಕುಡಿ ಮತ್ತು ನಮ್ಮ ಪ್ರಾರ್ಥನೆಗಳಿಗೆ ತಕ್ಕಂತೆ ವರಕೊಡು… ಎಲೈ ಇಂದ್ರದೇವನೇ, ನಮ್ಮನ್ನು ರಕ್ಷಿಸಲು ನಮಗೆ ಸಂಪತ್ತನ್ನು ಕೊಡು. ನೀನು ತಂದ ಸಂಪತ್ತು ನಮ್ಮನ್ನು ಸಂತೋಷವಾಗಿಡಲಿ, ವೃದ್ಧಿಸುತ್ತಿರಲಿ, ಶಾಶ್ವತವಾಗಿರಲಿ ಮತ್ತು ನಮ್ಮ ಶತ್ರುಗಳನ್ನು ಸಂಹರಿಸುವಲ್ಲಿ ಸಹಾಯ ಮಾಡಲಿ…” (ಪು.ಸಂ. 522). ವೇದಗಳಲ್ಲಿ ಮಾಟ-ಮಂತ್ರ, ವಾಮಾಚಾರ, ವಶೀಕರಣದಂತಹ ವಿಚಾರಗಳು ತುಂಬಿತುಳುಕುತ್ತಿರುವುದನ್ನು ಸುದೀರ್ಘವಾಗಿ ಪಟ್ಟಿ ಮಾಡುವ ಅಂಬೇಡ್ಕರ್ ಅವರು, “ವೇದದಲ್ಲಿ ಆಧ್ಯಾತ್ಮಿಕವಾಗಿಯಾಗಲಿ, ನೈತಿಕವಾಗಿಯಾಗಲಿ ಉದಾತ್ತೀಕರಿಸುವಂತಹದ್ದು ಏನೂ ಇಲ್ಲ ಎಂದು ತೋರಿಸಲು ಸಾಕಷ್ಟು ಉದ್ಧರಿಸಲಾಗಿದೆ. ವಸ್ತುವಿಷಯವಾಗಲಿ, ವಿಷಯಾನುಕ್ರಮಣಿಕೆಯಾಗಲಿ ವೇದಗಳಿಗೆ ಆರೋಪಿಸಲಾಗಿರುವ ದೋಷರಾಹಿತ್ಯವನ್ನು ಸಮರ್ಥಿಸಲಾಗುವುದಿಲ್ಲ. ಇಷ್ಟಾದರೂ ಬ್ರಾಹ್ಮಣರು ವೇದಗಳಿಗೆ ಪ್ರಾವಿತ್ರ‍್ಯವನ್ನೂ, ದೋಷರಾಹಿತ್ಯವನ್ನು ತೊಡಿಸಲು ಅಷ್ಟೇಕೆ ಶ್ರಮಪಟ್ಟರೋ?” (ಪು.ಸಂ.534) ಎಂಬ ಪ್ರಶ್ನೆಯನ್ನು ಕೇಳುತ್ತಾರೆ.
ವೇದಗಳ ಮೇಲೆ ಸವಾರಿ
ಯಾವ ಬ್ರಾಹ್ಮಣರು ವೇದಗಳು ಪ್ರಶ್ನಾತೀತ, ಅವುಗಳು ಹೇಳಿದ್ದೇ ಅಂತಿಮ ಸತ್ಯ ಎಂದು ಪ್ರತಿಪಾದಿಸಿದರೋ ಅದೇ ಬ್ರಾಹ್ಮಣರು ವೇದಗಳಿಗಿಂತ ಸ್ಮೃತಿಗಳನ್ನು ಆರಾಧಿಸುವ ಕಾಲಘಟ್ಟವನ್ನು ಅಂಬೇಡ್ಕರ್ ಗುರುತಿಸುತ್ತಾರೆ. ಹೀಗೇಕೆ ಆಯಿತು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ವೇದಕಾಲದ ಕಾನೂನುಗಳು ಸಾಂಪ್ರದಾಯಿಕ (ರೂಢಿಯಿಂದ ಬಂದಂತವುಗಳು) ಆಗಿದ್ದವು. ಪ್ರೊ.ಕಾಣೆಯವರು ತಿಳಿಸುವಂತೆ, “ಆಗ ರೂಢಿಗಳಿಗೆ ಮಾನ್ಯತೆ ನೀಡುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಅವುಗಳಿಗೆ ಜನರು ಆಗಲೇ ಮಾನ್ಯತೆ ನೀಡಿದ್ದರು. ಎರಡನೆಯದಾಗಿ, ಸ್ಮೃತಿಗಳು ವೇದಗಳಿಗಿಂತ ಹೆಚ್ಚು ಪ್ರಗತಿಪರವಾಗಿದ್ದವು ಎಂದು ಹೇಳಲು ಬರುವುದಿಲ್ಲ. ಚಾತುರ್ವರ್ಣ ಪದ್ಧತಿಯನ್ನೂ, ಪೂಜಾ ಪದ್ಧತಿಗಳನ್ನೂ ಬಿಟ್ಟರೆ ವೇದಗಳು ಸಮಾಜವನ್ನು ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದವು. ಸ್ಮೃತಿಗಳು ಮಾಡಿದ್ದೇನೆಂದರೆ ವೇದದಲ್ಲಿದ್ದ ಪ್ರಗತಿಪರವಲ್ಲದ ಅಂದರೆ ಚಾತುರ್ವರ್ಣ ಸಿದ್ಧಾಂತವನ್ನು ಪ್ರಚಾರ ಮಾಡಿ, ಜನರ ತಲೆಗೆ ತಿಕ್ಕಿದವು” (540- 541). ಅಂದರೆ ವೇದಗಳಿಗಿಂತ ಸ್ಮೃತಿಗಳಿಗೆ ಬ್ರಾಹ್ಮಣರು ಹೆಚ್ಚಿನ ಮಹತ್ವ ಕೊಟ್ಟಿದ್ದೇಕೆ ಎಂಬ ಒಗಟನ್ನು ಇಲ್ಲಿ ಸುಲಭವಾಗಿ ಬಿಡಿಸಬಹುದಲ್ಲವೇ?
ಸ್ಮೃತಿಗಳ ನಂತರ ಬಂದದ್ದು ಪುರಾಣಗಳು. ಆದರೆ ವೇದಗಳ ಮೇಲೆ ಪುರಾಣಗಳು ಸವಾರಿ ಮಾಡಲು ಯತ್ನಿಸಿದವು. ವಾಯುಪುರಾಣದ ಪ್ರಕಾರ, “ಎಲ್ಲ ಶಾಸ್ತ್ರಗಳಿಗಿಂತ ಮೊದಲು ಪುರಾಣವನ್ನೇ ಬ್ರಹ್ಮನು ಉಚ್ಚರಿಸಿದನು”. ಮತ್ಸ್ಯಾ ಪುರಾಣವು, “ವೇದಗಳಿಗಿಂತ ಮೊದಲು ಪುರಾಣವೇ ಹುಟ್ಟಿತು” (ಪು.ಸಂ. 541) ಎನ್ನುತ್ತದೆ. “ವೇದಗಳನ್ನು ದಮನ ಮಾಡುವ ಕತೆ ಇಲ್ಲಿಗೆ ಮುಗಿಯಲಿಲ್ಲ. ಇನ್ನೂ ಹೆಚ್ಚಿನ ಕೇಡು ಬರುವುದಿತ್ತು. ಪುರಾಣಗಳ ನಂತರ ತಂತ್ರಗಳೆಂಬ ಮತ್ತೊಂದು ವರ್ಗದ ಸಾಹಿತ್ಯ ಸೃಷ್ಟಿಯಾಯಿತು…” (542), “ತಂತ್ರಗಳ ಲೇಖಕರು ಇನ್ನೂ ಬಹಳ ಮುಂದೆ ಹೋದರು. ಅವರು, ವೇದಗಳೂ ಶಾಸ್ತ್ರಗಳೂ ಪುರಾಣಗಳೂ ಸಾಮಾನ್ಯ ಹೆಂಗಸರಂತೆ, ಆದರೆ ತಂತ್ರಗಳು ಕುಲೀನ ಸ್ತ್ರೀ ಎಂದು ಘೋಷಿಸುವ ಮೂಲಕ, ತಂತ್ರಗಳು ವೇದಗಳಿಗಿಂತ ಶ್ರೇಷ್ಠತರವೆಂಬುದನ್ನು ಸಾರಿದವು” (ಪು.ಸಂ. 543).
ವೇದಗಳ ಸ್ಥಾನಮಾನ ಪದೇಪದೇ ಪಲ್ಲಟವಾಗಿರುವುದನ್ನು ಗುರುತಿಸುವ ಅಂಬೇಡ್ಕರ್ ಅವರು ಹೀಗೆ ಹೇಳುತ್ತಾರೆ: “ಈ ಪರಿವೀಕ್ಷಣೆಯಿಂದ ಒಂದು ಅಂಶ ಸ್ಪಷ್ಟವಾಗಿದೆ. ಬ್ರಾಹ್ಮಣರು, ತಮ್ಮ ಧರ್ಮಗ್ರಂಥಗಳೆಂದು ಪರಿಗಣಿಸಿದ ಬರೆಹಗಳಲ್ಲಿ ಪಾವಿತ್ರ‍್ಯವಿದೆ ಎಂಬ ತಮ್ಮ ನಂಬಿಕೆಗೆ ಬಲವಾಗಿ ಅಂಟಿಕೊಂಡವರೇನಲ್ಲ. ಮೊದಲೇನೋ ವೇದಗಳು ಕೇವಲ ಪವಿತ್ರವಷ್ಟೇ ಅಲ್ಲ, ಅವು ದೋಷರಹಿತ ಕೂಡ ಎಂದು ಸಾಧಿಸಲು ಬಹಳ ಹೋರಾಡಿದರು. ದೋಷರಹಿತವೆಂಬುದನ್ನು ಸಾಧಿಸಿದರು. ಅಷ್ಟೇ ಅಲ್ಲ, ದೋಷರಾಹಿತ್ಯ ಸಿದ್ಧಾಂತವನ್ನು ಪುಷ್ಟೀಕರಿಸಲು ಅಪೂರ್ವ ವಾದಗಳನ್ನು ಸೃಷ್ಟಿಸಲೂ ತಮ್ಮ ಚಾತುರ್ಯವನ್ನೆಲ್ಲ ವ್ಯಯಿಸಿದರು. ಆದರೂ ವೇದಗಳನ್ನು ಮೇಲಿನ ಸ್ಥಾನದಿಂದ ಕೆಳಗಿಳಿಸಿ, ಅವುಗಳನ್ನು ಮೊದಲು ಸ್ಮೃತಿಗಳಿಗೂ, ನಂತರ ಪುರಾಣಗಳಿಗೂ, ನಂತರ ತಂತ್ರಗಳಿಗೂ ಅಧೀನ ಮಾಡಲು ಅವರಿಗೆ ಯಾವ ಅಳುಕೂ ಆಗಲಿಲ್ಲ. ಆದ್ದರಿಂದ ಎಲ್ಲ ಪ್ರಶ್ನೆಗಳಿಗಿಂತ ಮುಖ್ಯವಾದ ಪ್ರಶ್ನೆಯೆಂದರೆ ವೇದಗಳನ್ನು ಪರಮ ಪವಿತ್ರವೆಂದು ಪರಿಗಣಿಸಿದ್ದ ಬ್ರಾಹ್ಮಣರು, ಅವುಗಳನ್ನು ಪದಚ್ಯುತಗೊಳಿಸಿ, ಸ್ಮೃತಿ, ಪುರಾಣ ಮತ್ತು ತಂತ್ರಗಳಿಗಿಂತ ಕಡಿಮೆ ಮಾಡಿದ್ದೇಕೆ?” (ಪು.ಸಂ. 543).
ಉಪನಿಷತ್ತುಗಳು ವೇದಗಳಿಗೆ ಅಧೀನವೇ?
“ವೇದ ಮತ್ತು ಉಪನಿಷತ್ತುಗಳು ಒಂದೇ ಚಿಂತನೆಯ ಅವಿಭಾಜ್ಯ ಅಂಗಗಳು, ಅವುಗಳಲ್ಲಿ ಪರಸ್ಪರ ವಿರೋಧವಿಲ್ಲ” ಎಂಬುದು ಯಾವುದೇ ಹಿಂದೂವಿನ ಅಭಿಪ್ರಾಯ. ಉಪನಿಷತ್ತುಗಳಿಗೆ ‘(ವೇದಗಳ ಕೊನೆಯ ಭಾಗ) ಎಂಬ ಹೆಸರು ಇರುವುದರಿಂದ ಇಂತಹ ನಂಬಿಕೆ ಸಹಜ. ಆದರೆ ಪ್ರೊ.ಮ್ಯಾಕ್ಸ್ಮುಲ್ಲರ್ ಗಮನಿಸಿರುವಂತೆ, “…ಉಪನಿಷತ್ತುಗಳಲ್ಲಿ ವೇದಾಂತ ಎಂಬ ಪದವು ದರ್ಶನ ಎಂಬರ್ಥದಲ್ಲಿ ಪ್ರಯೋಗವಾಗಿದೆಯೇ ಹೊರತು, ‘ಪ್ರತಿ ವೇದದ ಕೊನೆಯ ಪುಸ್ತಕಗಳಲ್ಲಿ’ ಎಂಬರ್ಥದಲ್ಲಿ ಅಲ್ಲ..” (ಪು.ಸಂ. 545) ಎಂದು ಅಂಬೇಡ್ಕರ್ ಉಲ್ಲೇಖಿಸುತ್ತಾರೆ. ಆದರೆ ಉಪನಿಷತ್ತುಗಳನ್ನು ವೇದಗಳಿಗೆ ಅಧೀನ ಮಾಡುವ ಪ್ರಯತ್ನವು ಮುಂದೆ ಬಾದರಾಯಣನ ಕಾಲದಲ್ಲಿ ಜರುಗುತ್ತದೆ. “ಬಾದರಾಯಣನು ವೇದಾಂತ ಶಬ್ದವನ್ನು ಎರಡು ಅರ್ಥದಲ್ಲಿ ಬಳಸುತ್ತಾನೆ. ಉಪನಿಷತ್ತುಗಳು ವೈದಿಕ ಸಾಹಿತ್ಯದ ಭಾಗ ಎಂಬುದನ್ನು ಒತ್ತಿ ಹೇಳಲೂ ಆ ಶಬ್ದವನ್ನು ಬಳಸುತ್ತಾನೆ. ಉಪನಿಷತ್ತುಗಳ ವೇದಾಂತ ಅಥವಾ ಜ್ಞಾನಕಾಂಡ ವೇದಗಳ ಕರ್ಮಕಾಂಡಕ್ಕೆ ವಿರೋಧವಾದುದಲ್ಲ, ಅವೆರಡೂ ಪರಸ್ಪರ ಪೂರಕ ಎಂಬುದನ್ನು ಒತ್ತಿಹೇಳಲೂ ಆ ಶಬ್ದವನ್ನು ಬಳಸುತ್ತಾನೆ..” “ಉಪನಿಷತ್ತುಗಳು ವೇದಗಳ ಭಾಗಗಳೇ ಹೊರತು, ವೇದಗಳಿಗೂ ಉಪನಿಷತ್ತುಗಳಿಗೂ ವಿರೋಧವಿರುವುದಿಲ್ಲ ಎಂಬ ಬಾದರಾಯಣನ ಸಿದ್ಧಾಂತವು (ಆತನ) ವೇದಾಂತ ಸೂತ್ರಗಳ ತಳಹದಿ. ಈ ಸಿದ್ಧಾಂತವು ಉಪನಿಷತ್ತುಗಳ ಗತ್ತಿಗೂ, ವೇದಗಳೊಡನೆ ಇರುವ ತಮ್ಮ ಸಂಬಂಧಕ್ಕೂ ವಿರುದ್ಧವಾಗಿವೆ… ಆತ ತನ್ನ ವೇದಾಂತ ಸೂತ್ರಗಳಲ್ಲಿ ಉಪನಿಷತ್ತುಗಳಿಗೆ ದ್ರೋಹ ಬಗೆದಿದ್ದಾನೆ. ಅವನು ಹೀಗೇಕೆ ಮಾಡಿದ?” (ಪು.ಸಂ. 553) ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ.

ದೇವರುಗಳ ಜಟಾಪಟಿ
ತ್ರಿಮೂರ್ತಿಗಳೆಂದು ಪೂಜಿಸಲ್ಪಡುವ ಬ್ರಹ್ಮ, ವಿಷ್ಣು, ಮಹೇಶ್ವರ- ಈ ಮೂವರು ಸಮಾನರೆಂದೂ, ಜಗತ್ತನ್ನು ಪೊರೆಯುವ ಅವರ ಕಾರ್ಯಗಳು ಒಬ್ಬರಿಗೊಬ್ಬರಿಗೆ ಪೂರಕವಾಗಿವೆ ಹೊರತು ಸ್ಪರ್ಧೆಯಿಂದ ಕೂಡಿಲ್ಲ ಎಂದೂ, ಅವರು ಪರಸ್ಪರ ಸಹಕಾರಿಗಳೇ ಹೊರತು ವೈರಿಗಳಲ್ಲ ಎಂದೂ ಹಿಂದೂಗಳು ನಂಬುತ್ತಾರೆ. ಆದರೆ ಈ ದೇವರುಗಳ ಕುರಿತ ಸಾಹಿತ್ಯವನ್ನು ನೋಡಿದರೆ ‘ನಾ ಮೇಲು, ನೀ ಕೀಳು’ ಎಂದು ಕಿತ್ತಾಡಿರುವುದೇ ಎದ್ದುತೋರುತ್ತದೆ. “ಅವತಾರದ ವಿಷಯವಾಗಿ, ಬ್ರಹ್ಮ ಮತ್ತು ವಿಷ್ಣು ಇವರುಗಳ ಮಧ್ಯೆ ವೈಮನಸ್ಯವಿದೆ. ಮನುಕುಲವನ್ನು ಸರ್ವನಾಶದಿಂದ ರಕ್ಷಿಸಲೋಸ್ಕರ ಪರಮಾತ್ಮನು ಅವತಾರ ಮಾಡುತ್ತಾನೆಂಬ ಸಿದ್ಧಾಂತ ಬ್ರಹ್ಮನಿಂದ ಪ್ರಾರಂಭವಾಯಿತು. ಅವನು ಎರಡು ಅವತಾರಗಳನ್ನು ಮಾಡಿದನು (ಒಮ್ಮೆ ವರಾಹ ಅಥವಾ ಹಂದಿಯಾಗಿ, ಮತ್ತೊಮ್ಮೆ ಮತ್ಸ್ಯವಾಗಿ) ಎಂದು ಹೇಳಲಾಗಿದೆ. ಆದರೆ ವೈಷ್ಣವರು ಇದನ್ನು ಒಪ್ಪುವುದಿಲ್ಲ. ಅವರು ಈ ಅವತಾರಗಳು ಬ್ರಹ್ಮನ ಅವತಾರಗಳಲ್ಲವೆಂದೂ, ಅವು ವಿಷ್ಣುವಿನ ಅವತಾರಗಳೆಂದೂ ವಾದಿಸುತ್ತಾರೆ. ಹೀಗೆ ಅವರು ವಿಷ್ಣುವಿಗೆ ಈ ಎರಡು ಅವತಾರಗಳೇ ಅಲ್ಲದೆ ಇನ್ನೂ ಅನೇಕ ಅವತಾರಗಳನ್ನೂ ಆರೋಪಿಸಿದರು” (ಪು.ಸಂ. 555). ಇಷ್ಟೇ ಅಲ್ಲ ಬೇರೆಬೇರೆ ಪುರಾಣಗಳು, ಕೃತಿಗಳು ವಿವಿಧ ಅವತಾರಗಳನ್ನು ಹೇಳಿದವು. ಹರಿವಂಶದ ಪ್ರಕಾರ 6 ಅವತಾರ, ನಾರಾಯಣೀಯ ಅಖ್ಯಾನದ ಪ್ರಕಾರ 10, ವರಾಹ ಪುರಾಣದ ಪ್ರಕಾರ 10, ವಾಯುಪುರಾಣದ ಪ್ರಕಾರ 12, ಭಾಗವತ ಪುರಾಣದ ಪ್ರಕಾರ 22 ಅವತಾರಗಳನ್ನು ವಿಷ್ಣುವಿಗೆ ನೀಡಲಾಗಿದೆ. (ಅದರಲ್ಲಿ ವರಾಹಪುರಾಣದ ಪಟ್ಟಿ ಪ್ರಸಿದ್ಧವಾಗಿದೆ. ಇದರ ಪ್ರಕಾರ ವಿಷ್ಣುವು- ಕೂರ್ಮ, ಮತ್ಸ್ಯ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಅವತಾರ ಎತ್ತುತ್ತಾನೆ).
ಮುಂದೆ ಬ್ರಹ್ಮನನ್ನು ನಿಷ್ಕೃಷ್ಟಗೊಳಿಸುವ ಪ್ರಯತ್ನಗಳು ನಡೆದವು. ತನ್ನ ಮಗಳ ಜೊತೆ ಹಾದರ ಮಾಡಿದ ಎಂಬ ಅಪವಾದದ ಮೇಲೆ ಬ್ರಹ್ಮನಿಗೆ ಪೂಜೆಯೇ ಸಲ್ಲದಾಯಿತು. ಬ್ರಹ್ಮ ನಾಮಮಾತ್ರದ ತ್ರಿಮೂರ್ತಿಯಾದ. ಆದರೆ ಬ್ರಹ್ಮನಿಗೆ ಮಾತ್ರವೇ ಈ ಶಿಕ್ಷೆ ಏಕಾಯಿತು? “ಆರೋಪದ ಪ್ರಕಾರ, ಬ್ರಹ್ಮನು ತನ್ನ ಮಗಳೊಂದಿಗೆ ಬಲಾತ್ಕಾರ ಸಂಭೋಗ ಮಾಡಿದ ಕಾರಣ ಅವನು ಪೂಜೆ ಮತ್ತು ಭಕ್ತಿಗೆ ಅಯೋಗ್ಯನಾದನು. ಈ ಆರೋಪದಲ್ಲಿರುವುದು ಸತ್ಯವೇ ಇರಲಿ, ಅಸತ್ಯವೇ ಇರಲಿ. ಬ್ರಹ್ಮನ ಆರಾಧನೆಯನ್ನು ಕೈಬಿಡಲು ಇದೊಂದೇ ಸಾಕಷ್ಟು ಪ್ರಬಲವಾದ ಕಾರಣವಾಗಿರಲಾರದು. ಹೀಗೆ ಹೇಳಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಆ ಕಾಲದಲ್ಲಿ ಅಂತಹ ವರ್ತನೆ ಅಪರೂಪದ್ದೇನಾಗಿರಲಿಲ್ಲ. ಬ್ರಹ್ಮನ ಮೇಲಿನ ಆಪಾದನೆಗಿಂತ ಕೃಷ್ಣನ ಮೇಲೆ ಹೊರಿಸಿರುವ ಆಪಾದನೆಗಳು ಇನ್ನೂ ಹೆಚ್ಚು ಅನೈತಿಕವಾಗಿವೆ. ಆದರೂ ಜನರು ಅವನನ್ನು ಆರಾಧಿಸುತ್ತಲೇ ಇದ್ದಾರೆ…” (ಪು.ಸಂ. 570).
“ದೇವರುಗಳು ಹೆಚ್ಚು ಶಕ್ತಿಶಾಲಿಗಳಾಗಿದ್ದರಲ್ಲದೇ ಲೈಂಗಿಕತೆಯಲ್ಲಿ ಅನೈತಿಕ ಸಮುದಾಯವಾಗಿದ್ದರು. ಅವರು ಋಷಿಪತ್ನಿಯರನ್ನು ಕೆಡಿಸಿಯೂ ಇದ್ದರು. ಇಂದ್ರನು ಗೌತಮ ಋಷಿಯ ಪತ್ನಿ ಅಹಲ್ಯೆಯನ್ನು ಸಂಭೋಗಿಸಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಅವರು ಆರ್ಯರ ಹೆಣ್ಣುಮಕ್ಕಳ ಮೇಲೆ ನಡೆಸಿದ ಅನೈತಿಕತೆ ಹೇಳಲಸಾಧ್ಯ…”, “ಆರ್ಯ ಹೆಣ್ಣುಮಕ್ಕಳ ಮೇಲೆ ಮೊದಲನೆ ಹಕ್ಕು ಸೋಮನದು, ಎರಡನೆಯದು ಗಂಧರ್ವರದು, ಮೂರನೆಯದಾಗಿ ಅಗ್ನಿಯದು ಮತ್ತು ಕೊನೆಯದಾಗಿ ಆರ್ಯರದು. ಪ್ರತಿಯೊಬ್ಬ ಆರ್ಯ ಹೆಣ್ಣೂ ಋತುವಾದ ತಕ್ಷಣವೇ ದೇವತೆಗಳಿಗೆ ಅಡವಿಡಲ್ಪಡುತ್ತಿದ್ದಳು ಮತ್ತು ಅವಳೊಡನೆ ಸಂಭೋಗದ ಹಕ್ಕು ದೇವರುಗಳಿಗಿತ್ತು. ಆರ್ಯನು ಆ ಹೆಣ್ಣನ್ನು ಮದುವೆಯಾಗುವ ಮುನ್ನ ದೇವರಿಗೆ ಸರಿಯಾದ ರೀತಿಯಲ್ಲಿ ಕಾಣಿಕೆ ಸಲ್ಲಿಸಿ ಹಕ್ಕನ್ನು ಪಡೆದು ಬಿಡಿಸಿಕೊಳ್ಳಬೇಕಿತ್ತು..” (ಪು.ಸಂ. 776). ಹೀಗಿತ್ತು ದೇವರುಗಳ ಸಾಮಾಜಿಕ ವ್ಯವಸ್ಥೆ. ಹೀಗಿರುವಾಗ ಬ್ರಹ್ಮನಿಗಷ್ಟೇ ದುರ್ಗತಿ ಒದಗಿದ್ದು ಹೇಗೆ? ಎಂಬುದು ಇಲ್ಲಿರುವ ಪ್ರಮುಖ ಪ್ರಶ್ನೆ.
ಇದನ್ನೂ ಓದಿರಿ: ಬಾಬಾಸಾಹೇಬರು ಬಿಡಿಸಿಟ್ಟ ‘ರಾಮ-ಕೃಷ್ಣರ ಒಗಟು’ ವಿವಾದ ಹುಟ್ಟುಹಾಕಿದ್ದೇಕೆ?
ಮತ್ತೆ ತ್ರಿಮೂರ್ತಿಗಳ ವಿಚಾರಕ್ಕೆ ಬರುವುದಾದರೆ, ಪೈಪೋಟಿಯ ಕಣದಲ್ಲಿ ಶಿವ ಮತ್ತು ವಿಷ್ಣು ಮಾತ್ರವೇ ಉಳಿದರು. ಹೀಗಾಗಿ, “ಪುರಾಣಗಳು, ಶಿವ ಮತ್ತು ವಿಷ್ಣುಚರಿತ್ರೆಗಳು ಬ್ರಾಹ್ಮಣ ಅನುಯಾಯಿಗಳು ನಡೆಸಿದ ಪ್ರಚಾರ ಮತ್ತು ಅಪಪ್ರಚಾರಗಳಿಂದ ತುಂಬಿ ಹೋಗಿವೆ” (ಪು.ಸಂ. 558). “ಶಿವನು ವಿಷ್ಣುಗಿಂತ ಶ್ರೇಷ್ಠನಾಗಿರಬೇಕು ಮತ್ತು ವಿಷ್ಣುವು ಶಿವನಿಗಿಂತ ಕಡಿಮೆ ಇರಬಾರದು. ವಿಷ್ಣುವಿಗೆ ಸಹಸ್ರನಾಮಗಳಿವೆ, ಅದೇ ರೀತಿ ಶಿವನಿಗೂ ಸಹಸ್ರನಾಮಗಳಿವೆ…” (ಪು.ಸಂ. 559). “ಶಿವನ ಪರವಾಗಿ ಮಾಡಲಾಗಿರುವ ಮಹಾಕಾರ್ಯಗಳ ಪ್ರಚಾರವು ವಿಷ್ಣುವಿನ ಪರವಾಗಿ ಮಾಡಲಾಗಿರುವ ಪ್ರತಿಪ್ರಚಾರಕ್ಕೆ ಸರಿಸಾಟಿಯಾಗಿದೆ. ಪವಿತ್ರ ಗಂಗಾನದಿಯ ಹುಟ್ಟಿನ ಬಗೆಗಿನ ಕತೆಯು ಇದಕ್ಕೆ ಒಂದು ನಿದರ್ಶನ. ಶಿವಭಕ್ತರು ಅದರ ಹುಟ್ಟನ್ನು ಶಿವನಿಗೆ ಆರೋಪಿಸುತ್ತಾರೆ. ಅವರ ಪ್ರಕಾರ, ಅದು ಶಿವನ ಜಟೆಯಿಂದ ಹುಟ್ಟಿತು. ಆದರೆ ವೈಷ್ಣವರು ಇದನ್ನು ಒಪ್ಪುವುದಿಲ್ಲ. ಅವರು ಮತ್ತೊಂದು ಕತೆಯನ್ನು ತಯಾರಿಸಿದ್ದಾರೆ. ಈ ವೈಷ್ಣವ ಕಥೆಯ ಪ್ರಕಾರ, ಈ ಪವಿತ್ರ ಹಾಗೂ ಪಾವಿತ್ರ‍್ಯಕಾರಕ ಗಂಗೆಯು ಮೊದಲು ವಿಷ್ಣುವಿನ ಪಾದದಿಂದ ಹುಟ್ಟಿ ವೈಕುಂಠದಲ್ಲಿ ಹರಿದು ಕೈಲಾಸಕ್ಕಿಳಿದು ಕೊನೆಗೆ ಶಿವನ ತಲೆಯ ಮೇಲೆ ಬಿತ್ತು. ಈ ಕತೆಯಲ್ಲಿ ಎರಡು ಸೂಚನೆಗಳಿವೆ. ಮೊದಲನೆಯದೆಂದರೆ, ಶಿವನು ಗಂಗೆಯ ಮೂಲವಲ್ಲ; ಎರಡನೆಯದೆಂದರೆ ಶಿವನು ವಿಷ್ಣುವಿಗಿಂತ ಕೀಳಾದುದರಿಂದ ವಿಷ್ಣುವಿನ ಪಾದದಿಂದ ಹರಿದ ನೀರನ್ನು ಅವನು ತಲೆಯ ಮೇಲೆ ಧರಿಸುತ್ತಾನೆ” (ಪು.ಸಂ. 560- 561).

ವಿಷ್ಣು ಮತ್ತು ಶಿವ ಈ ಇಬ್ಬರಲ್ಲಿ ಯಾರು ಮೇಲು, ಯಾರು ಕೀಳು ಎಂದು ನಡೆದ ಜಟಾಪಟಿಗೆ, ದೇವತೆಗಳು, ಅಸುರರು ಸೇರಿ ಸಾಗರವನ್ನು ಮಂಥನ ಮಾಡಿದ ಕಥೆಯೂ ಒಂದು ಉದಾಹರಣೆ. ಈ ಎರಡು ದೇವರುಗಳ ಆರಾಧಕರು ತಮ್ಮ ಮೇಲರಿಮೆಯನ್ನು ಸಾಧಿಸಲು ಯತ್ನಿಸಿರುವುದು ಹೀಗೆ: “ಅವರು ಸಾಗರವನ್ನು ಕಡೆಯಲು ಮಂದರ ಪರ್ವತವನ್ನು ಕಡೆಗೋಲನ್ನಾಗಿಯೂ ಶೇಷನೆಂಬ ಮಹಾಸರ್ಪವನ್ನು ಹಗ್ಗವನ್ನಾಗಿಯೂ ಬಳಸಿದರು. ಇದರಿಂದ ಭೂಮಿಯು ನಡುಗತೊಡಗಿತು ಹಾಗೂ ವಿಶ್ವಪ್ರಳಯ ಸನ್ನಿಹಿತವಾಯಿತೆಂದು ಜನರು ಹೆದರಿದರು. ಆಗ ವಿಷ್ಣುವು ಕೂರ್ಮಾವತಾರ ಮಾಡಿ, ಭೂಮಿಯು ಮುಳುಗದಂತೆ ಅದನ್ನು ತನ್ನ ಬೆನ್ನ ಮೇಲಿರಿಸಿಕೊಂಡಾಗ, ಅದರ ಕಂಪನ ನಿಂತು ಕಡೆಯುವ ಕೆಲಸ ಮುಂದುವರಿಯುವಂತಾಯಿತು. ವಿಷ್ಣುವನ್ನು ವೈಭವೀಕರಿಸಲು ಈ ಕತೆಯನ್ನು ಹೇಳಲಾಗಿದೆ. ಇದಕ್ಕೆ ಶೈವರು ಒಂದು ಅನುಬಂಧವನ್ನು ಸೇರಿಸಿದ್ದಾರೆ. ಈ ಅನುಬಂಧದ ಪ್ರಕಾರ ಈ ಮಂಥನದಿಂದಾಗಿ ಸಾಗರದಾಳದಿಂದ ಹದಿನಾಲ್ಕು ವಸ್ತುಗಳು (ಇವುಗಳನ್ನು ಹದಿನಾಲ್ಕು ಆಭರಣಗಳೆಂದು ಕರೆಯಲಾಗುತ್ತದೆ) ಹುಟ್ಟಿದವು. ಅವುಗಳಲ್ಲಿ ಹಾಲಾಹಲವೆಂಬ ಘೋರ ವಿಷ ಸಹ ಒಂದು. ಈ ಘೋರ ವಿಷವನ್ನು ಯಾರೂ ಕುಡಿಯಲು ಸಿದ್ಧರಾಗದಿದ್ದರೆ ಅದು ಭೂಮಿಯನ್ನು ಸುಟ್ಟುಬಿಡುತ್ತಿತ್ತು. ಅದನ್ನು ಕುಡಿಯಲು ಮುಂದೆ ಬಂದವನೆಂದರೆ ಶಿವನೊಬ್ಬನೇ. ಇಲ್ಲಿ ದೇವ ದಾನವರಿಗೆ ಹಾಲಾಹಲವನ್ನು ಹುಟ್ಟಿಸಲು ಬಿಟ್ಟಿದ್ದು ವಿಷ್ಣುವಿನ ಮೂರ್ಖತನ ಎಂಬ ಸೂಚನೆ ಇದೆ. ಶಿವನಿಗೆ ಜಯವಾಗಲಿ! ಏಕೆಂದರೆ, ಅವನು ಅದನ್ನು ಕುಡಿದು ವಿಷ್ಣುವಿನ ತಪ್ಪಿನಿಂದಾದ ದುಷ್ಪರಿಣಾಮಗಳಿಂದ ವಿಶ್ವವನ್ನು ಉಳಿಸಿದ” (ಪು.ಸಂ. 561). ಹೀಗೆ ಒಬ್ಬರಿಗಿಂತ ಒಬ್ಬರು ಮೇಲೆಂದು ಪ್ರತಿಪಾದಿಸಲು ಪುರಾಣಗಳಲ್ಲಿ ಹಗ್ಗಜಗ್ಗಾಟ ನಡೆದಿದೆ.
ಮಹಾಭಾರತದಲ್ಲಿ ಕೃಷ್ಣನ ಸ್ಥಾನಮಾನಗಳಲ್ಲಿಯೂ ಏಳುಬೀಳುಗಳಿವೆ. ಕೆಲವು ಸಾರಿ ಶಿವನಿಗಿಂತ ಕೃಷ್ಣನನ್ನು ಕೀಳು ಮಾಡಲಾಗಿದೆ. ಶಿವನ ಘನತೆಯನ್ನು ಅವನು ಒಪ್ಪಿಕೊಳ್ಳುವಂತೆಯೂ ಮಾಡಲಾಗಿದೆ. ಉದಾಹರಣೆಗೆ ಈ ಪ್ರಸಂಗ ನೋಡಿ: ಜಯದ್ರತನನ್ನು ಕೊಲ್ಲಲು ಅರ್ಜುನ ಕೃಷ್ಣನ ಸಲಹೆ ಪಡೆಯಲು ಹೋಗುತ್ತಾನೆ. ಆಗ ಕೃಷ್ಣನು, ‘ಯಾವ ಪಾಶುಪತಾಸ್ತ್ರದಿಂದ ಮಹಾದೇವನು ಹಿಂದೆ ದೈತ್ಯರನ್ನು ಸಂಹಾರ ಮಾಡಿದನೋ, ಆ ಪಾಶುಪತಾಸ್ತ್ರಕ್ಕಾಗಿ, ನೀನು ಮಹಾದೇವನನ್ನು ಕುರಿತು ತಪಸ್ಸು ಮಾಡಬೇಕು ಮತ್ತು ಅದನ್ನು ಪಡೆದರೆ ಮಾತ್ರ ಜಯದ್ರಥನನ್ನು ಕೊಲ್ಲಬಹುದು’ ಎನ್ನುತ್ತಾನೆ. ಅಂದರೆ ಕೃಷ್ಣನಿಗಿಂತ ಶಿವನೇ ಶಕ್ತಿಶಾಲಿ! ಆದರೆ ಶಿವನಿಗಿಂತ ಕೃಷ್ಣನನ್ನು ಮೇಲೆ ಇರಿಸಿದ ಪ್ರಯತ್ನಗಳೂ ನಡೆದಿವೆ. ಉದಾಹರಣೆಗೆ ಅನುಶಾಸನ ಪರ್ವವನ್ನು ನೋಡಬೇಕಾಗುತ್ತದೆ. “ಕೃಷ್ಣನು ಸರ್ವದೇವತೆಗಳ ಆರಾಧ್ಯದೈವ. ಬ್ರಹ್ಮನು ಅವನ ನಾಭಿಯಿಂದಲೂ, ನಾನು (ಮಹಾದೇವ) ಅವನ ಶಿರಸ್ಸಿನಿಂದಲೂ, ನಕ್ಷತ್ರಗಳು ಅವನ ತಲೆಕೂದಲುಗಳಿಂದಲೂ, ಸುರಾಸುರರು ಅವನ ದೇಹದ ಕೂದಲುಗಳಿಂದಲೂ, ಋಷಿಗಳು ಮತ್ತು ಶಾಶ್ವತ ಲೋಕಗಳು ಅವನ ದೇಹದಿಂದ ಉತ್ಪತ್ತಿಯಾಗಿವೆ…” “ದೇವಾದಿದೇವನೂ ದೇವತೆಗಳ ಇಷ್ಟವನ್ನು ಪೂರೈಸುವವನೂ, ದೈವ ಮತ್ತು ಋಷಿಗಳಿಗೆ ಆಶ್ರಯದಾತನೂ ಆದ ಕೃಷ್ಣನ ದೇಹದಲ್ಲಿ ಬ್ರಹ್ಮನು ವಾಸವಾಗಿದ್ದಾನೆ. ಎಲ್ಲ ದೈವಗಳೂ ಅವನ ಶರೀರದಲ್ಲೇ ಆಶ್ರಯಪಡೆದಿವೆ” (ವಿವರಗಳಿಗೆ ನೋಡಿ: ಪು.ಸಂ. 577- 578).
ಇದಾದ ಮೇಲೆ ದೇವರುಗಳಿಗಿಂತ ದೇವತೆಗಳನ್ನು ಮೇಲಕ್ಕೇರಿಸುವ, ದೇವರುಗಳಿಗಿಂತ ದೇವತೆಗಳು ಬಲಶಾಲಿ ಎಂದು ಪ್ರತಿಪಾದಿಸುವ ಕಥೆಗಳು ಚಾಲ್ತಿಗೆ ಬಂದವು. ದೇವಿಯರನ್ನೇಕೆ ಬ್ರಾಹ್ಮಣರು ಉನ್ನತಿಗೇರಿಸಿದರು ಎಂಬುದು ಯಕ್ಷಪ್ರಶ್ನೆ. ಮುಖ್ಯವಾಗಿ ದುರ್ಗೆಯನ್ನು ದೇವರುಗಳಿಗಿಂತ ಮೇಲಿನ ಸ್ಥಾನದಲ್ಲಿ ಇರಿಸಲಾಯಿತು. “ದುರ್ಗೆ ಮಾತ್ರ ವೀರಳು, ಅವಳಿಗೆ ಮಾತ್ರ ರಾಕ್ಷಸರನ್ನು ನಾಶಮಾಡುವ ಸಾಮರ್ಥ್ಯವಿತ್ತು ಎಂದು ಹೇಳುವ ಮೂಲಕ, ತಮ್ಮ ದೇವರುಗಳನ್ನು ಹೇಡಿಗಳ ಗುಂಪನ್ನಾಗಿ ಮಾಡುತ್ತಿದ್ದೇವೆಂದು ಬ್ರಾಹ್ಮಣರಿಗೆ ಅನಿಸಲಿಲ್ಲವೆಂದು ಕಾಣುತ್ತದೆ. ಪ್ರಾಯಶಃ ದೇವರುಗಳು ರಾಕ್ಷಸರಿಂದ ತಮ್ಮನ್ನೂ ತಾವೇ ರಕ್ಷಿಸಿಕೊಳ್ಳಲಿಲ್ಲವೆಂದು ಕಾಣುತ್ತದೆ. ಆದ್ದರಿಂದಲೇ ಅವರು ತಮ್ಮ ಹೆಂಡತಿಯರನ್ನು ರಕ್ಷಣೆಗಾಗಿ ಯಾಚಿಸಬೇಕಾಯಿತು” (ಪು.ಸಂ. 593).
ಇಲ್ಲಿ ಇನ್ನೊಂದು ಸೋಜಿಗವಿದೆ. “ವೈದಿಕ ದೇವಿಯರಲ್ಲಿಲ್ಲದ, ಆದರೆ ಪೌರಾಣಿಕ ದೇವಿಯರಲ್ಲಿದ್ದ ಶಕ್ತಿಯ ಮೂಲ ಯಾವುದು? ಪೌರಾಣಿಕ ದೇವರುಗಳ ಶಕ್ತಿಯೇ ದೇವಿಯರಲ್ಲಿತ್ತು ಎಂಬುದು ಪುರಾಣಗಳ ಕರ್ತೃಗಳು ಈ ಪ್ರಶ್ನೆಗೆ ಕೊಡುವ ಉತ್ತರ. ಒಂದು ಸುಪರಿಚಿತ ಸಿದ್ಧಾಂತದ ಪ್ರಕಾರ, ‘ಪ್ರತಿಯೊಬ್ಬ ದೇವನಿಗೂ ಶಕ್ತಿ ಇತ್ತು. ಆ ಶಕ್ತಿ ಅವನ ಹೆಂಡತಿಯರಲ್ಲಿ ನೆಲೆಸಿತ್ತು’. ಈ ಸಿದ್ಧಾಂತ ಎಷ್ಟು ಸರ್ವಸಮ್ಮತವಾಯಿತೆಂದರೆ, ಪ್ರತಿಯೊಬ್ಬ ದೇವಿಯೂ ಶಕ್ತಿಯೆಂದೇ ಕರೆಯಲ್ಪಡುತ್ತಿದ್ದಾಳೆ ಹಾಗೂ ಆಕೆಯ ಭಕ್ತರನ್ನು ಶಾಕ್ತರೆಂದು ಕರೆಯಲಾಗುತ್ತಿದೆ…” (ಪು.ಸಂ. 592). “ಪುರಾಣಗಳಲ್ಲಿ ಉಕ್ತವಾಗಿರುವ ದೇವಿಯರ ಹೆಸರುಗಳು ಹಲವಾರಿದ್ದರೂ ನಿಜವಾಗಿಯೂ ಇರುವ ದೇವಿಯರ ಸಂಖ್ಯೆ ಐದೇ. ಅವರೆಂದರೆ, ಸರಸ್ವತಿ, ಲಕ್ಷಿö್ಮ, ಪಾರ್ವತಿ, ದುರ್ಗಾ ಮತ್ತು ಕಾಳಿ. ಸರಸ್ವತಿ ಮತ್ತು ಲಕ್ಷಿö್ಮ- ಬ್ರಹ್ಮ ಮತ್ತು ವಿಷ್ಣು ಇವರುಗಳ ಪತ್ನಿಯರು. ಬ್ರಹ್ಮ ಮತ್ತು ವಿಷ್ಣು ಇಬ್ಬರನ್ನೂ ಶಿವನೊಡಗೂಡಿ ಪೌರಾಣಿಕ ದೇವರುಗಳು ಎಂದು ಪರಿಗಣಿಸಲಾಗಿದೆ. ಪಾರ್ವತಿ, ದುರ್ಗಾ ಮತ್ತು ಕಾಳಿ ಶಿವನ ಹೆಂಡತಿಯರು. ಆದರೆ ಸರಸ್ವತಿ, ಲಕ್ಷಿö್ಮಯರು ಯಾವ ಅಸುರರನ್ನೂ ಕೊಂದಿಲ್ಲ. ಅವರ ಬಗೆಗೆ ಯಾವ ಶೌರ್ಯಕೃತಿಯನ್ನೂ ಹೇಳಲಾಗಿಲ್ಲ, ಏಕೆ? ಎಂಬುದೇ ಪ್ರಶ್ನೆ. ಈ ಸಿದ್ಧಾಂತದ ಪ್ರಕಾರ ಬ್ರಹ್ಮ ಮತ್ತು ವಿಷ್ಣು ಇವರುಗಳಲ್ಲಿನ ಶಕ್ತಿ ಅವರ ಹೆಂಡತಿಯರಲ್ಲಿ ನೆಲೆಸಿರಬೇಕಾಗಿತ್ತು. ಆದರೆ ಸರಸ್ವತಿ, ಲಕ್ಷಿö್ಮಯರು ಯಾಕೆ ರಾಕ್ಷಸರ ವಿರುದ್ಧ ಮಾಡಿದ ಯಾವ ಯುದ್ಧದಲ್ಲೂ ಭಾಗವಹಿಸಲಿಲ್ಲ? ಈ ಕೆಲಸವನ್ನು ಶಿವನ ಹೆಂಡತಿಯರಿಗೇ ಮೀಸಲಿಡಲಾಯಿತು. ಆದರೂ ಪಾರ್ವತಿ ಮತ್ತು ದುರ್ಗೆಯರು ವಹಿಸಿದ ಪಾತ್ರಗಳಲ್ಲಿ ಬಹಳ ವ್ಯತ್ಯಾಸವಿದೆ. ಪಾರ್ವತಿಯನ್ನು ಒಬ್ಬ ಸರಳ ಹೆಂಗಸಿನಂತೆ ಪ್ರತಿನಿಧಿಸಲಾಗಿದೆ. ದುರ್ಗೆ ಮಾಡಿದಂತಹ ಯಾವ ಶೌರ್ಯದ ಕೀರ್ತಿಯೂ ಆಕೆಗಿಲ್ಲ. ಆದರೆ ದುರ್ಗೆಯಂತೆ ಪಾರ್ವತಿಯೂ ಶಿವನ ಶಕ್ತಿಯೇ. ಪಾರ್ವತಿಯಲ್ಲಿ ನೆಲೆಸಿದ್ದ ಶಿವಶಕ್ತಿ ಅಸ್ತಿತ್ವದಲ್ಲಿಲ್ಲವೇನೋ ಎಂಬಂತೆ ಏಕೆ ಅಷ್ಟೊಂದು ಮಂಕಾಗಿ, ಸುಪ್ತವಾಗಿ ನಿಷ್ಕಿçಯವಾಗಿತ್ತು?” (ಪು.ಸಂ 592- 593) ಎಂದು ಅಂಬೇಡ್ಕರ್ ಸೋಜಿಗ ವ್ಯಕ್ತಪಡಿಸುತ್ತಾರೆ.
ಚಾತುರ್ವರ್ಣ: ವೈದಿಕರ ತರಹೇವಾರಿ ಪ್ರತಿಪಾದನೆ
ಯಾವುದೇ ವಿಚಾರದಲ್ಲಿ ಹಿಂದೂ ಧರ್ಮಗ್ರಂಥಗಳಲ್ಲಿ ಒಮ್ಮತವಿಲ್ಲ ಎಂಬುದು ಈವರೆಗಿನ ಉಲ್ಲೇಖಗಳಿಂದ ಸ್ಪಷ್ಟವಾಗಿದೆ. ಆದರೆ ಇದೇ ವೈರುಧ್ಯಗಳು ಚಾತುರ್ವರ್ಣ ಸೃಷ್ಟಿಗೆ ಸಂಬಂಧಿಸಿದ ವಿಷಯದಲ್ಲೂ ಮುಂದುವರಿದಿವೆ. ಚಾತುರ್ವರ್ಣವನ್ನು ಹಿಂದೂ ಧರ್ಮಗ್ರಂಥಗಳು ಒಪ್ಪಿಕೊಂಡರೂ ವರ್ಣವ್ಯವಸ್ಥೆಯ ಹುಟ್ಟಿನ ಮೂಲದ ಬಗ್ಗೆ ಅವುಗಳಲ್ಲಿ ಒಮ್ಮತ ಕಂಡುಬರುವುದಿಲ್ಲ. “ಋಗ್ವೇದವು ಚಾತುರ್ವರ್ಣಗಳನ್ನು ಸೃಷ್ಟಿಸಿದವನು ಪ್ರಜಾಪತಿ ಎನ್ನುತ್ತದೆ. ಆದರೆ ಯಾವ ಪ್ರಜಾಪತಿ ಎಂಬುದನ್ನು ಅದು ಹೇಳುವುದಿಲ್ಲ. ಹಲವಾರು ಪ್ರಜಾಪತಿಗಳಿರುವಾಗ ವರ್ಣಗಳ ಸೃಷ್ಟಿಕರ್ತನಾದ ಪ್ರಜಾಪತಿ ಯಾರೆಂಬುದಕ್ಕೆ ಸೂಕ್ತ ಉತ್ತರವಿಲ್ಲ. ಅಲ್ಲದೇ ಪ್ರಜಾಪತಿಯೇ ವರ್ಣಗಳನ್ನು ಸೃಷ್ಟಿಸಿದನೆಂಬ ಅಂಶವನ್ನು ಕುರಿತೂ ಏಕಾಭಿಪ್ರಾಯವಿಲ್ಲ. ಒಂದು ಮೂಲವು ವರ್ಣಗಳನ್ನು ಸೃಷ್ಟಿಸಿದವನು ಬ್ರಹ್ಮನೆಂದರೆ, ಇನ್ನೊಂದು ಕಶ್ಯಪನೆನ್ನುತ್ತದೆ, ಮತ್ತೊಂದು ಮನು ಎನ್ನುತ್ತದೆ. ಸೃಷ್ಟಿಕರ್ತ ಯಾರಾದರೂ ಆಗಿರಲಿ, ಕಡೆಯ ಪಕ್ಷ ವರ್ಣಗಳ ಸಂಖ್ಯೆಯನ್ನು ಕುರಿತು ಕೂಡ ಏಕಾಭಿಪ್ರಾಯವಿಲ್ಲ. ಋಗ್ವೇದದ ಪ್ರಕಾರ ನಾಲ್ಕು ವರ್ಣಗಳಿದ್ದರೆ ಉಳಿದ ಮೂಲಗಳು ಎರಡು ವರ್ಣಗಳನ್ನು ಕುರಿತು ಹೇಳುತ್ತವೆ. ಕೆಲವು ಮೂಲಗಳು ಆ ಎರಡು ವರ್ಣಗಳು ಬ್ರಾಹ್ಮಣ ಮತ್ತು ಕ್ಷತ್ರಿಯರೆಂದರೆ, ಇನ್ನು ಕೆಲವು ಮೂಲಗಳು ಬ್ರಾಹ್ಮಣ ಮತ್ತು ಶೂದ್ರರೆನ್ನುತ್ತವೆ. ಋಗ್ವೇದವು ವರ್ಣಗಳ ಹುಟ್ಟಿನ ಆಧಾರದ ಮೇಲೆ ಅಸಮಾನತೆಯನ್ನು ಪ್ರತಿಪಾದಿಸುತ್ತದೆ. ಆದರೆ ಶ್ವೇತ ಯಜುರ್ವೇದವು ಋಗ್ವೇದದ ಸಿದ್ಧಾಂತವನ್ನು ಅಲ್ಲಗಳೆಯುತ್ತದೆ. ಉಪನಿಷತ್ತು, ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ವ್ಯಾಖ್ಯಾನಗಳು ಭಿನ್ನವಾಗಿವೆ. ಅದರಲ್ಲೂ ವಾಯುಪುರಾಣವು ಶೂದ್ರರು ದ್ವಿಜರೆನ್ನುವ ಮಟ್ಟಕ್ಕೂ ಹೋಗುತ್ತದೆ. ಈ ಗೊಂದಲಗಳಿಗೆ ಮೂಲಕಾರಣ ಪ್ರಾಯಶಃ ಬ್ರಾಹ್ಮಣರು, ತಾವು ಕಲ್ಪಿಸಿ ಹುಟ್ಟುಹಾಕಿದ ಚಾತುರ್ವರ್ಣ ಸಿದ್ಧಾಂತವನ್ನು ಸ್ಥಾಪಿತ ಪರಂಪರೆಗೆ ವಿರುದ್ಧವಾಗಿ ಋಗ್ವೇದದೊಳಕ್ಕೆ ಸೇರಿಸಲೆತ್ನಿಸಿದ್ದೇ ಇರಬಹುದು ಎನಿಸುತ್ತದೆ. ಹಾಗಾದರೆ ಇಂಥ ಸಿದ್ಧಾಂತವನ್ನು ಹುಟ್ಟುಹಾಕಿದ ಬ್ರಾಹ್ಮಣರ ಉದ್ದೇಶವೇನು?” (ಪು.ಸಂ. 675)
ಇದನ್ನೂ ಓದಿರಿ: ಬಟವಾಡೆಯಾಗದ ಭಾಷಣ ‘ಅನಾಇಲೇಷನ್ ಆಫ್ ಕಾಸ್ಟ್’
ಹಿಂದೂ ಧರ್ಮಗ್ರಂಥಗಳು ಪ್ರತಿಪಾದಿಸುವ ಅಹಿಂಸೆ, ವಿಪರೀತ ನರಬಲಿ, ಪ್ರಾಣಿಬಲಿಗಳ ಚರಿತ್ರೆಯು ಇಂದು ಸೋಜಿಗದಂತೆ ಕಾಣುತ್ತವೆ. ಆದರೆ ಹಿಂದೂ ಗ್ರಂಥಗಳು ನೀಡುವ ವಿವರಣೆಗಳೇ ಬೇರೆ ಎಂಬುದನ್ನು ಅಂಬೇಡ್ಕರ್ ನಮ್ಮ ಗಮನಕ್ಕೆ ತರುತ್ತಾರೆ. ಮನುವಿನ ಹುಚ್ಚುತನಗಳು, ಮನಬಂದಂತೆ ಮಿಶ್ರಜಾತಿಗಳನ್ನು ಸೃಷ್ಟಿಸಿದ್ದು, ಯುಗಗಳ ಕುರಿತು ಇರುವ ಗೊಂದಲ, ಕಲಿಯುಗದ ಕುರಿತು ಇರುವ ಗೊಂದಲ, ಪ್ರಾಚೀನ ಕಾಲದಲ್ಲಿ ಆರ್ಯರ ಸಾಮಾಜಿಕ ಬದುಕಿನ ಅಧಃಪತನ, ಕುಡಿತ, ಜೂಜು- ಮೊದಲಾದ ಹತ್ತು ಹಲವು ಸಂಗತಿಗಳ ಕುರಿತು ಬಾಬಾಸಾಹೇಬರು ‘ಹಿಂದೂ ಧರ್ಮದ ಒಗಟುಗಳು’ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ಹಿಂದೂ ಧರ್ಮಗ್ರಂಥಗಳು ಪ್ರತಿಪಾದಿಸುವ ಸಿದ್ಧಾಂತಗಳಲ್ಲಿ ಏಕೆ ವಿರೋಧಾಭಾಸಗಳಿವೆ? ಈ ಗ್ರಂಥಗಳ ಹಿಂದೆ ಇದ್ದ ಬ್ರಾಹ್ಮಣರು ಈ ವೈರುಧ್ಯಗಳನ್ನೇಕೆ ಸೃಷ್ಟಿಸಿದರು? ಅವರ ಹಿತಾಸಕ್ತಿ ಏನಾಗಿತ್ತು? ಎಂಬ ಪ್ರಶ್ನೆಗಳನ್ನು ಮುಂದಿಡುತ್ತಾರೆ. ಬಿಡುಬೀಸಾಗಿ ಟೀಕೆಗಳನ್ನು ಮಾಡದೆ, ಅದಕ್ಕೆ ಪ್ರಾಚೀನ ಕೃತಿಗಳನ್ನೇ ಮೂಲಾಧಾರಗಳನ್ನಾಗಿ ತೋರಿಸಿ, ಈ ಒಗಟುಗಳನ್ನೇಕೆ ಸೃಷ್ಟಿಸಿದಿರಿ ಎಂದು ಸವಾಲು ಎಸೆಯುವುದು ಅಂಬೇಡ್ಕರ್ ಅವರ ವಿದ್ವತ್ತಿಗೆ ಸಾಕ್ಷಿ. ಬಾಬಾಸಾಹೇಬರ ಸಂಶೋಧನಾ ಶಿಸ್ತು, ಅವರು ಪ್ರತಿ ಒಗಟನ್ನು ಒಂದು ಚೌಕಟ್ಟಲ್ಲಿ ಓದುಗರಿಗೆ ದಾಟಿಸುವ ರೀತಿ ಬೆರಗು ಮೂಡಿಸುತ್ತವೆ ಮತ್ತು ‘ಹಿಂದೂ ಧರ್ಮ’ದ ಕುರಿತು ಮರುಚಿಂತನೆಗೆ ಅವಕಾಶ ಒದಗಿಸುತ್ತವೆ.
ಕೊನೆಯ ಮಾತು
ಇನ್ನೊಂದು ಸಂಗತಿಯನ್ನು ಇಲ್ಲಿ ದಾಖಲಿಸದಿದ್ದರೆ ತಪ್ಪಾದೀತು. ಬಾಬಾಸಾಹೇಬರು ಹಿಂದೂಧರ್ಮವನ್ನು ವಿಮರ್ಶಾತ್ಮಕವಾಗಿ ನೋಡುತ್ತಿದ್ದರೂ ಆ ಧರ್ಮದಲ್ಲಿನ ವೈವಿಧ್ಯತೆಯನ್ನು ಗಮನಿಸದೆ ಇರಲಿಲ್ಲ. ಅದಕ್ಕೆ ಮುಂದಿನ ಮಾತುಗಳೇ ಸಾಕ್ಷಿ: “ಗ್ರೀಕ್ ದಾರ್ಶನಿಕ ಜೇನೋಫೇನೀಸನು ಬಹುದೇವತಾವಾದವು ಸರ್ವಸಮ್ಮತವಲ್ಲವೆಂದೂ ಸ್ವವಿರೋಧವೆಂದೂ ತೀರ್ಮಾನಿಸಿದ್ದಾನೆ. ಏಕೈಕ ದೇವವಾದವೇ ನಿಜವಾದ ಸಿದ್ಧಾಂತ. ದಾರ್ಶನಿಕವಾಗಿ ನೋಡಿದರೆ ಪ್ರಾಯಶಃ ಜೇನೋಫೇನಿಸನ ವಾದ ಸಮಂಜಸವಾಗಿ ಕಾಣಬಹುದು. ಆದರೆ ಐತಿಹಾಸಿಕವಾಗಿ ನೋಡಿದರೆ ಎರಡೂ ಸಹಜವಾಗಿ ಕಾಣುತ್ತವೆ. ಸಮಾಜದಲ್ಲಿ ಒಂದೇ ಜನಾಂಗದವರು ಇದ್ದರೆ, ಅಲ್ಲಿ ಏಕದೇವವಾದ ಇರುವುದು ಸಹಜ. ಆದರೆ ಸಮಾಜವು ಎಲ್ಲಿ ಅನೇಕ ಜನಾಂಗಗಳ ಒಕ್ಕೂಟವಾಗಿರುತ್ತದೆಯೋ, ಅಲ್ಲಿ ಬಹುದೇವತಾವಾದವಿರುವುದು ಸಹಜವಷ್ಟೇ ಅಲ್ಲ, ಅನಿವಾರ್ಯ ಕೂಡ. ಏಕೆಂದರೆ, ಪ್ರತಿಯೊಂದು ಪುರಾತನ ಸಮಾಜದಲ್ಲಿಯೂ ಕೇವಲ ಮನುಷ್ಯರಷ್ಟೇ ಇರದೆ, ಅವರ ದೇವರುಗಳೂ ಇದ್ದರು. ಆಗ ಒಂದು ಜನಾಂಗದ ದೇವನನ್ನು ಉಳಿದ ಜನಾಂಗಗಳು ಒಪ್ಪಿಕೊಳ್ಳದೆ ವಿವಿಧ ಜನಾಂಗಗಳು ಒಂದಾಗಿ ಸಹಬಾಳ್ವೆ ನಡೆಸಲು ಸಾಧ್ಯವಿರಲಿಲ್ಲ. ಬಹುದೇವತಾವಾದ ಬೆಳೆದಿದ್ದು ಹೀಗೆಯೇ..” (563). “ಹೀಗೆ ಹಿಂದೂ ಧರ್ಮದಲ್ಲಿ ಅನೇಕ ದೇವರುಗಳಿರುವುದು ಅರ್ಥವಾಗುವ ವಿಷಯವೇ. ಏಕೆಂದರೆ ಹಿಂದೂ ಸಮಾಜವು ಅನೇಕ ಬಣಗಳ, ಅನೇಕ ಜನಾಂಗಗಳ ಒಕ್ಕೂಟ. ಪ್ರತಿಯೊಂದು ಬಣಕ್ಕೂ, ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ ಒಬ್ಬ ದೇವನಿದ್ದಾನೆ. ಆದರೆ ಇದರಲ್ಲಿ ವಿಚಿತ್ರವಾದ ಹಾಗೂ ಎದ್ದುಕಾಣುವ ಅಂಶವೆಂದರೆ, ಹಿಂದೂ ದೈವಗಳು ತಮ್ಮ ತಮ್ಮಲ್ಲೇ ಜಗಳವಾಡುವುದು, ಅವರ ಪರಸ್ಪರ ವೈಮನಸ್ಯ ಹಾಗೂ ಪರಸ್ಪರರನ್ನು ದೂಷಿಸುವುದು. ಇವೆಲ್ಲ ಸಾಧಾರಣ ಮನುಷ್ಯರಿಗೇ ನಾಚಿಕೆಗೇಡಿತನ ಮತ್ತು ಅಪಕೀರ್ತಿಯನ್ನುಂಟುಮಾಡುವ ಸಂಗತಿಗಳು. ಹೀಗೇಕಾಯಿತು ಎಂಬುದಕ್ಕೆ ಸ್ಪಷ್ಟೀಕರಣವಾಗಬೇಕು” (ಪು.ಸಂ. 562- 563) ಎಂದು ಅಂಬೇಡ್ಕರ್ ಬರೆಯುತ್ತಾರೆ.
ಕ್ರಿಶ್ಚಿಯನ್, ಇಸ್ಲಾಂ ಇತರೆ ಧರ್ಮಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವಿಚಾರಗಳ ಪ್ರತಿಪಾದನೆಯ ಧರ್ಮ ಗ್ರಂಥಗಳಿವೆ. ಹಿಂದೂಗಳು ವೇದ, ಶಾಸ್ತ್ರ, ಪುರಾಣಗಳನ್ನು ತಮ್ಮ ಧಾರ್ಮಿಕ ನಂಬಿಕೆಯ ತಳಹದಿಯಾಗಿ ಬಳಸುತ್ತಾರೆ. ಆದರೆ ಆಚರಣೆ, ದೇವತಾರಾಧನೆ, ಮದುವೆ, ಸಂಪ್ರದಾಯ- ಹೀಗೆ ಬಹುವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಮತ್ತು ಮುಸ್ಲಿಮರಲ್ಲಿ ನಿರ್ದಿಷ್ಟ ವಿಚಾರಗಳಿದ್ದರೂ ಹಿಂದೂಗಳ ವಿಚಾರದಲ್ಲಿ ಇದು ಸಾಧ್ಯವಿಲ್ಲ. ಇಲ್ಲಿ, ಜಾತಿಗೊಂದು ದೇವರು, ಜಾತಿಗೊಂದು ಪದ್ಧತಿ, ಒಂದು ಸ್ಥಳದ ಹಿಂದೂ ಸಂಸ್ಕೃತಿಗೂ ಮತ್ತೊಂದು ಸ್ಥಳದ ಹಿಂದೂ ಸಂಸ್ಕೃತಿಗೂ ವ್ಯತ್ಯಾಸ ಇದ್ದೇ ಇದೆ ಎಂಬುದನ್ನು ಬಾಬಾಸಾಹೇಬರು ಗಮನಿಸುತ್ತಾರೆ. ಆದರೆ ಇಷ್ಟೆಲ್ಲ ವೈರುಧ್ಯಗಳಿದ್ದರೂ ಅವುಗಳನ್ನು ಒಪ್ಪಿಕೊಳ್ಳದೆ, ಇಲ್ಲದ ಗುಣಗಳನ್ನು ಹಿಂದೂಧರ್ಮಕ್ಕೆ ಆರೋಪಿಸುವ ವಾದಗಳನ್ನಷ್ಟೇ ಅಂಬೇಡ್ಕರ್ ಈ ಕೃತಿಯಲ್ಲಿ ಕೆಣಕಿದ್ದಾರೆ ಮತ್ತು ಮೌಢ್ಯಗಳ ಕುರಿತು ವ್ಯಂಗ್ಯವಾಗಿ ಬರೆದಿದ್ದಾರೆ.
(ಈ ಕೃತಿಯ ಅನುಬಂಧದಲ್ಲಿ ಸೇರಿಸಲ್ಪಟ್ಟ ‘ರಾಮ ಮತ್ತು ಕೃಷ್ಣರ ಒಗಟು’ ಭಾರೀ ಚರ್ಚೆಗಳನ್ನೇ ಹುಟ್ಟಿಹಾಕಿತ್ತು. ಈ ಭಾಗದ ಕುರಿತು ಲೇಖಕ ಅರುಣ್ ಜೋಳದ ಕೂಡ್ಲಿಗಿಯವರು ಬರೆದಿರುವ ಲೇಖನವನ್ನು ‘ಅರಿವೇ ಅಂಬೇಡ್ಕರ’ ಸರಣಿಯಲ್ಲಿ ಗಮನಿಸಬಹುದು.)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



