ಕೊರೊನಾ ವೈರಾಣು ಭಾರತದಲ್ಲಿ ಆರೋಗ್ಯಕ್ಕಿಂತ ಆರ್ಥಿಕ ಬಿಕ್ಕಟ್ಟನ್ನು ಹೆಚ್ಚು ಭಯಾನಕವಾಗಿ ಸೃಷ್ಟಿಸಿದೆ. ಪ್ರತಿ ವರ್ಷ ಕ್ಷಯದಿಂದ 8 ಲಕ್ಷ ಮಂದಿ ಸಾಯುವ ದೇಶದಲ್ಲಿ ಕೊವಿಡ್ನ ಆರಂಭದ ಸಾವುಗಳು ಕೇವಲ ಕೈಬೆರಳೆಣಿಕೆಯಷ್ಟು ಇದ್ದರೂ, ಲಕ್ಷಾಂತರ ಜನರು ದಿನನಿತ್ಯ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ವಲಸೆ ಕಾರ್ಮಿಕರು, ರಸ್ತೆ ವ್ಯಾಪಾರಿಗಳು, ಅನೌಪಚಾರಿಕ ಕೆಲಸಗಾರರು ತೀವ್ರವಾಗಿ ಬಾಧಿತರಾಗಿದ್ದಾರೆ; ಫ್ಯಾಕ್ಟರಿಗಳು ಮುಚ್ಚಿ, ಕೂಲಿ ಸಿಗದೆ ಅತಂತ್ರರಾಗಿ ಊರುಗಳಿಗೆ ದೌಡಾಯಿಸುತ್ತಿದ್ದಾರೆ. ಬಡವರಿಗೆ ದುಡಿಮೆ ಇಲ್ಲದಿದ್ದರೆ ಬದುಕೇ ಇಲ್ಲದ ಸ್ಥಿತಿಯಲ್ಲಿ, ಪಡಿತರ, ಪಿಂಚಣಿ, ನರೇಗಾ ಯೋಜನೆಗಳನ್ನು ತುರ್ತಾಗಿ ಬಲಪಡಿಸಿ, ಸಾರ್ವಜನಿಕ ಸೇವೆಗಳನ್ನು ಸೃಜನಶೀಲತೆಯಿಂದ ಮುಂದುವರಿಸುವುದು ಅಗತ್ಯವಾಗಿದೆ.
ಹೊಸ ಕರೋನಾ ವೈರಾಣು ಭಾರತದಲ್ಲಿ ಎರಡು ರೀತಿಯ ಬಿಕ್ಕಟ್ಟು ಸೃಷ್ಟಿಸಿದೆ. ಒಂದು ಆರೋಗ್ಯದ ಬಿಕ್ಕಟ್ಟು ಮತ್ತೊಂದು ಆರ್ಥಿಕ ಬಿಕ್ಕಟ್ಟು, ಸತ್ತವರ ಸಂಖ್ಯೆಯ ದೃಷ್ಟಿಯಿಂದ (ಪ್ರತಿ ವರ್ಷ ಎಂಟು ಮಿಲಿಯನ್ ಜನ ಕ್ಷಯದಿಂದ ಸಾಯುವ ದೇಶದಲ್ಲಿ ಏಳು ಜನ ಕೋವಿಡ್‌ನಿಂದ ಸಾಯುತ್ತಿದ್ದಾರೆ.) ನೋಡಿದಾಗ ಆರೋಗ್ಯ ಬಿಕ್ಕಟ್ಟು ಅಷ್ಟೊಂದು ತೀವ್ರ ಅನ್ನಿಸದೇ ಇರಬಹುದು. ಆದರೆ ಹಾಗೆ ಸಾಯುವವರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಆರ್ಥಿಕ ಬಿಕ್ಕಟ್ಟು ತೀವ್ರ ರಭಸದಿಂದ ಅಪ್ಪಳಿಸುತ್ತಿದೆ. ಪ್ರತಿ ದಿನ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ಬಡವ ಬಲ್ಲಿದ ಅನ್ನದೆ ಎಲ್ಲರನ್ನೂ ಕಾಡುವ ಆರೋಗ್ಯದ ಬಿಕ್ಕಟ್ಟಿನಂತಲ್ಲ. ಬಡವರನ್ನು ಹೆಚ್ಚು ತೀವ್ರವಾಗಿ ಕಾಡುತ್ತದೆ.

ಜಾನ್ ಡ್ರೇಜ್ (Jean Drèze) ಅವರು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಅಭಿವೃದ್ಧಿ ಆರ್ಥಿಕ ತಜ್ಞರು ಹಾಗೂ ಸಾಮಾಜಿಕ ಚಿಂತಕರು. ಬೆಲ್ಜಿಯಂನಲ್ಲಿ ಜನಿಸಿದ ಅವರು ಭಾರತವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಬಡತನ, ಹಸಿವು, ಶಿಕ್ಷಣ ಮತ್ತು ಸಾರ್ವಜನಿಕ ಕಲ್ಯಾಣದ ವಿಷಯಗಳಲ್ಲಿ ಮಹತ್ವದ ಅಧ್ಯಯನ ನಡೆಸಿದ್ದಾರೆ. ಅಮರ್ತ್ಯ ಸೇನ್(Amartya Sen) ಅವರೊಂದಿಗೆ ಸಹಯೋಗದಲ್ಲಿ ಅವರು ಬರೆದ ಕೃತಿಗಳು ಮತ್ತು ಹಕ್ಕು ಆಧಾರಿತ ಕಲ್ಯಾಣ ನೀತಿಗಳ ಪರ ಮಾಡಿದ ಹೋರಾಟಗಳು ಭಾರತೀಯ ಸಾರ್ವಜನಿಕ ನೀತಿ ಚರ್ಚೆಗಳಿಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ.
ಭಾರತದ ಮಂದಗತಿ
ವಲಸೆ ಬಂದ ಕೆಲಸಗಾರರು, ರಸ್ತೆ ಬದಿಯ ವ್ಯಾಪಾರಿಗಳು, ಕಂಟ್ರಾಕ್ಟ್ ಕೆಲಸಗಾರರು, ಅನೌಪಚಾರಿಕ ವಲಯಗಳಲ್ಲಿ ಕೆಲಸ ಮಾಡುವ ಬಹುತೇಕ ಜನ ಹೀಗೆ ಎಲ್ಲರನ್ನು ಇದು ಕಾಡುತ್ತಿದೆ. ಬಹುತೇಕ ದುಡಿಯುವ ಜನ ಈ ಆರ್ಥಿಕ ಸುನಾಮಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಸಾಮೂಹಿಕ ಮುಚ್ಚಳದಿಂದ ವಲಸೆ ಕೆಲಗಾರರು ತಮ್ಮ ಊರುಗಳಿಗೆ ದೌಡಾಯಿಸಬೇಕಾಗಿದೆ. ಅವರಲ್ಲಿ ಎಷ್ಟೋ ಜನರಿಗೆ ಬರಬೇಕಾದ ಕೂಲಿಯೂ ಸಿಕ್ಕಿಲ್ಲ. ರೈಲುಗಳು ರದ್ದಾಗಿರುವುದರಿಂದ ಹಲವರಿಗೆ ಊರಿಗೆ ಹೋಗುವುದಕ್ಕೂ ಆಗುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಆಗುತ್ತಿರುವ ಆರ್ಥಿಕ ನಿಲುಗಡೆ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತಿದೆ. ಫ್ಯಾಕ್ಟರಿಗಳು, ಅಂಗಡಿಗಳು, ಕಛೇರಿಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಲಾಗುತ್ತಿವೆ. ತಕ್ಷಣದಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆಯೂ ಕಾಣುತ್ತಿಲ್ಲ. ಸಾರಿಗೆ ಸಂಪರ್ಕಗಳು ಅಸ್ತವ್ಯಸ್ತವಾಗಿರುವುದರಿಂದ ಬರಲಿರುವ ಗೋಧಿ ಸುಗ್ಗಿಯೂ ಜನರಿಗೆ ನೆಮ್ಮದಿ ತರದೇ ಇರಬಹುದು. ಇದು ಉತ್ತರ ಭಾರತದ ಲಕ್ಷಾಂತರ ಜನರಿಗೆ ಬದುಕಿನ ಆಸರೆ. ಇವೆಲ್ಲಾ ಮುಂಬರುವ ಕಷ್ಟದ ದಿನಗಳ ಒಂದು ತುಣಕು ಅಷ್ಟೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪರಿಹಾರ ಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ತುರ್ತಾಗಿ ತೆಗೆದುಕೊಳ್ಳಬೇಕಾಗಿದೆ. ರೋಗ ಹರಡುವುದನ್ನು ಕಡಿಮೆ ಮಾಡುವ ದೃಷ್ಟಿಯಿಂದ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಅವಶ್ಯಕವಾಗಿರಬಹುದು. ಆದರೆ ಬಡವರಿಗೆ ಕೆಲಸವಿಲ್ಲದೆ ಮನೆಯಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಹಾಗೆ ಉಳಿಯಲೇ ಬೇಕಾದರೆ ಅವ-ರಿಗೆ ನೆರವು ಬೇಕು. ಉತ್ತಮ ಸಾಮಾಜಿಕ ಸುರಕ್ಷತೆ ಇರುವ ಶ್ರೀಮಂತ ದೇಶಗಳಿಗೂ ಭಾರತಕ್ಕೂ ಒಂದು ದೊಡ್ಡ ವ್ಯತ್ಯಾವಿದೆ. ಉದಾಹರಣೆಗೆ ಕೆನಡಾ ಅಥವಾ ಇಟಲಿಯಲ್ಲಿ ಒಂದು ಸಾಮಾನ್ಯ ಕುಟುಂಬ ಕೆಲವು ಕಾಲವಾದರು ಅಭದ್ರತೆಯನ್ನು ತಾಳಿಕೊಳ್ಳಬಹುದು. ಆದರೆ ಭಾರತ ಬಡವರಿಗೆ ದುಡಿಮೆ ಇಲ್ಲದೆ ಬದುಕುವ ಸಾಮರ್ಥ್ಯ ಇಲ್ಲವೇ ಇಲ್ಲ ಅನ್ನಬಹುದು.
ಸಾಮಾಜಿಕ ಯೋಜನೆಗಳನ್ನು ಜಾರಿಗೊಳಿಸೋಣ
ಈಗ ಸಮಯ ಅನ್ನುವುದು ತುಂಬಾ ಮುಖ್ಯ. ಹಾಗಾಗಿ ಈಗಾಗಲೇ ಇರುವ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಬಳಸಿಕೊಳ್ಳಬೇಕು. ಬಡವರಿಗೆ ಬೆಂಬಲ ನೀಡಬೇಕು. ಪಿಂಚಣೆ, ಸಾರ್ವಜನಿಕ ಪಡಿತರ ಪದ್ಧತಿ, ಮಧ್ಯಾಹ್ನದ ಊಟ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ನಿಯಮ ಇತ್ಯಾದಿ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಪ್ರಾರಂಭಕ್ಕೆ ಪಿಂಚಣೆಯನ್ನು ಮುಂಗಡವಾಗಿ ನೀಡುವುದು, ಪಡಿತರ ಪದ್ಧತಿಯ ಪ್ರಮಾಣವನ್ನು ಹೆಚ್ಚಿಸುವುದು. ನರೆಗಾ ಯೋಜನೆಯಲ್ಲಿ ಬಾಕಿ ಇರುವ ಕೂಲಿಯನ್ನು ಪಾವತಿಸುವುದು ಇವೆಲ್ಲವನ್ನು ಮಾಡಬಹುದು. ಕೆಲವು ರಾಜ್ಯಗಳು ಈಗಾಗಲೇ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ತುರ್ತಾಗಿ ಇವುಗಳ ಪ್ರಮಾಣವನ್ನು ತುಂಬಾ ಹೆಚ್ಚಿಸಬೇಕಾಗಿದೆ. ಕಾರ್ಪೋರೇಟುಗಳನ್ನು ಪಾರುಮಾಡುವುದಕ್ಕೆ ಹಣವನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು. ಬಿಕ್ಕಟ್ಟಿಗೆ ತೀವ್ರವಾಗಿ ಸಿಲುಕಿರುವ ಈ ರೀತಿಯ ಸಂಸ್ಥೆಗಳು ರಕ್ಷಣೆಗಾಗಿ ಸರ್ಕಾರದ ಮೇಲೆ ಒತ್ತಾಯ ಹೇರುವ ಸಾಧ್ಯತೆಗಳಿವೆ.
ಅವಶ್ಯಕ ಸೇವೆಗಳನ್ನು ನಿಲ್ಲಿಸುವ ಪ್ರವೃತ್ತಿಯಿಂದ ಜನರ ಕಷ್ಟ ಕಾರ್ಪಣ್ಯಗಳು ಹೆಚ್ಚುವ ಅಪಾಯ ಇದೆ. ಸಾರ್ವಜನಿಕ ಸಾರಿಗೆ, ಆಡಳಿತ ಕಛೇರಿಗಳು, ನ್ಯಾಯಾಲಯಗಳ ವಿಚಾರಣೆ, ನರೇಗಾ ಯೋಜನೆಗಳು ಮತ್ತು ಇಮ್ಯುನೈಸೇಷನ್ ಕ್ರಮಗಳು ಕೂಡ ಕೆಲವು ರಾಜ್ಯಗಳಲ್ಲಿ ಸ್ಥಗಿತಗೊಂಡಿವೆ. ಇಂತಹ ಕೆಲವು ಕ್ರಮಗಳು ಖಂಡಿತಾ ಬೇಕು. ಸಮರ್ಥನೀಯ ಕೂಡ. ಆದರೆ ಉಳಿದ ಕೆಲವು ಕ್ರಮಗಳು ಪ್ರತಿಕೂಲ ಪರಿಣಾಮ ಉಂಟುಮಾಡಬಹುದು. ನಾವು ಕೇವಲ ಆರೋಗ್ಯದ ಬಿಕ್ಕಟ್ಟನ್ನು ಮಾತ್ರ ಎದುರಿಸುತ್ತಿಲ್ಲ ಜೊತೆಗೆ ಆರ್ಥಿಕ ಬಿಕ್ಕಟ್ಟನ್ನೂ ಎದುರಿಸುತ್ತಿದ್ದೇವೆ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಸಾರ್ವಜನಿಕ ಸೇವೆಯನ್ನು ನಿಲ್ಲಿಸುವುದರಿಂದ ಆರೋಗ್ಯದ ಬಿಕ್ಕಟ್ಟನ್ನು ಮಿತಗೊಳಿಸಬಹುದು. ಆದರೆ ಅದರ ಆರ್ಥಿಕ ಪರಿಣಾಮಗಳನ್ನೂ ಗಮನಿಸಬೇಕು.

ನಾವು ವಿವಿಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಾಗ ಎರಡೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮನೆಯಲ್ಲೇ ಉಳಿಯಲು ತೀರ್ಮಾನಿಸಿದರೆ ಅದಕ್ಕೆ ಎರಡು ಉದ್ದೇಶಗಳು ಇರಬಹುದು. ಒಂದು ಸ್ವ-ರಕ್ಷಣೆ. ಇನ್ನೊಂದು ಅದಕ್ಕಿರುವ ಸಾರ್ವಜನಿಕ ಉದ್ದೇಶ. ಮೊದಲನೆಯದರಲ್ಲಿ ನಿಮಗೆ ರೋಗ ತಗಲಿಬಿಡಬಹುದೆನ್ನುವ ಭೀತಿಯಿಂದ ನೀವು ಮನೆಯಲ್ಲಿ ಉಳಿಯುತ್ತೀರಿ. ಎರಡನೆಯದು ವೈರಾಣುವು ಹರಡುವುದನ್ನು ತಡೆಯಬೇಕೆನ್ನುವ ಸಾಮೂಹಿಕ ಪ್ರಯತ್ನದಲ್ಲಿ ನೀವು ಭಾಗಿಯಾಗುವ ಉದ್ದೇಶದಿಂದ ಮನೆಯಲ್ಲಿ ಉಳಿಯುತ್ತೀರಿ. ಮುನ್ನೆಚ್ಚರಿಕೆಯ ಕ್ರಮಗಳನ್ನು ಕೆಲವರು ಸ್ವ-ರಕ್ಷಣೆಯ ವಿಷಯವಾಗಿ ಯೋಚಿಸುತ್ತಾರೆ. ಆದರೆ ಹಾಗೆ ನೋಡಿದರೆ ವಯಸ್ಸಾದವರು ಮತ್ತು ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡವರನ್ನು ಬಿಟ್ಟರೆ ಉಳಿದವರು ವೈಯುಕ್ತಿವಾಗಿ ಖಾಯಿಲೆಗೆ ತುತ್ತಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಭಾರತದಲ್ಲಿ ಪ್ರತಿವರ್ಷ ಕ್ಷಯದಿಂದ ನಾಲ್ಕು ಲಕ್ಷ ಜನ ಸಾಯುತ್ತಾರೆ. ಆದರೂ ನಾವು ಆ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ. ಆದರೆ ಕೇವಲ 7 ಜನ ಕೋವಿಡ್-19ರಲ್ಲಿ ಸತ್ತಾಗ ಏಕೆ ಇಷ್ಟೊಂದು ಎಚ್ಚರ ವಹಿಸುತ್ತಿದ್ದೇವೆ? ಈ ಎಚ್ಚರ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕಲ್ಲ. ಬದಲಾಗಿ ಸಾಂಕ್ರಮಿಕ ಹರಡದಂತೆ ತಡೆಯುವ ಸಾಮೂಹಿಕ ಪ್ರಯತ್ನದ ಭಾಗವಾಗಿ ಈ ಎಚ್ಚರ.
ಸೃಜನಶೀಲತೆಯನ್ನು ಮೆರೆಯೋಣ
ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕ ಸೇವೆಯನ್ನು ಮುಚ್ಚುವುದರ ಬಗ್ಗೆಯೂ ನಾವು ಇದೇ ರೀತಿಯಲ್ಲಿ ಯೋಚಿಸಬಹುದು. ಕನಿಷ್ಠ ಸಧ್ಯಕ್ಕಾದರೂ ಸರ್ಕಾರಿ ನೌಕರನ ಸ್ವ-ರಕ್ಷಣೆ ಪ್ರಮುಖ ಕಾಳಜಿಯಲ್ಲ. ಸಾರ್ವಜನಿಕ ಕಾಳಜಿ ಮುಖ್ಯವಾಗಬೇಕು. ಸಾರ್ವಜನಿಕ ಕಾಳಜಿಯ ವಿಷಯದ ಬಗ್ಗೆ ಯೋಚಿಸುವಾಗ ಸಂಘಟನೆಗಳನ್ನು ಮುಚ್ಚುವುದ-ರಿಂದ ಆಗುವ ಆರ್ಥಿಕ ಪರಿಣಾಮಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಒಂದು ಸಂಘಟನೆಯನ್ನು ತೆರೆಯುವುದರಿಂದ ದೊಡ್ಡ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಅನ್ನುವುದಾದರೆ, ಸಾರ್ವಜನಿಕ ದೃಷ್ಟಿಯಿಂದ ಅದನ್ನು ಮುಚ್ಚುವುದು ಖಂಡಿತಾ ಅವಶ್ಯಕ. ಉದಾಹರಣೆಗೆ ಶಾಲಾ ಕಾಲೇಜುಗಳು. ಆದರೆ ಬಡವರಿಗೆ ಅವರ ಕಷ್ಟ ಕಾಲದಲ್ಲಿ ನೆರವಾಗುವ, ಅಂತಹ ಆರೋಗ್ಯದ ಸಮಸ್ಯೆಗಳನ್ನು ಸೃಷ್ಟಿಸದ ಸೇವೆಗಳನ್ನು ಮುಚ್ಚುವಾಗ ಯೋಚಿಸಬೇಕು. ಸಾಧ್ಯವಾದಷ್ಟು ಅವುಗಳನ್ನು ಮುಂದುವರಿಸುವುದು ಸೂಕ್ತ. ಇದು ಕೇವಲ ವೈದ್ಯಕೀಯ ಸೇವೆಗಳು, ಸಾರ್ವಜನಿಕ ಪಡಿತರ ಪದ್ಧತಿಗೆ ಮಾತ್ರ ಸೀಮಿತವಾಗಬಾರದು. ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಹಲವು ಆಡಳಿತ ಕಛೇರಿಗಳನ್ನು ತೆರೆಯಬೇಕು. ಬಡಜನ ಹಲವು ರೀತಿಯಲ್ಲಿ ಅವುಗಳನ್ನು ಅವಲಂಬಿಸಿದ್ದಾರೆ. ಅವುಗಳನ್ನು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಮುಚ್ಚುವುದರಿಂದ ಆರ್ಥಿಕ ಬಿಕ್ಕಟ್ಟು ತೀವ್ರವಾಗುತ್ತದೆ. ಹಾಗೆ ಮುಚ್ಚುವುದರಿಂದ ಆರೋಗ್ಯದ ಬಿಕ್ಕಟ್ಟನ್ನು ನಿವಾರಿಸುವ ದೃಷ್ಟಿಯಿಂದಲೂ ಅಂತಹ ಅನುಕೂಲ ಇಲ್ಲ.
ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸೇವೆಯನ್ನು ಮುಂದುವ-ರಿಸಿಕೊಂಡು ಹೋಗುವಲ್ಲಿ ಒಂದಿಷ್ಟು ಉತ್ಸಾಹ ಹಾಗೂ ಸೃಜನಶೀಲತೆ ಬೇಕು. ಕರೋನಾ ವೈರಾಣು ರಕ್ಷಣೆಗೆ ಸಿದ್ಧತೆಗೆ ಸಂಬಂಧಿಸಿದಂತೆ ಅವಶ್ಯಕ ಸೇವೆಗಳ ಮತ್ತು ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾರ್ಗದರ್ಶಿಗಳು ಲಭ್ಯವಿದೆ. ಅಲ್ಲಿಂದ ನಾವು ಪ್ರಾರಂಭಿಸಬಹುದು. ಉದಾಹರಣೆಗೆ ಅಂಗನವಾಡಿಗಳು-ಮಕ್ಕಳನ್ನು ಹೊರಗಿಟ್ಟು ಸಾರ್ವಜನಿಕ ಆರೋಗ್ಯ ಜನರನ್ನು ತಲುಪುವಲ್ಲಿ ಪ್ರಮುಖ ಪಾತ್ರವಹಿಸಬಹುದು. ಹಲವು ಸಾರ್ವಜನಿಕ ಸೇವೆಗಳನ್ನು ಕೂಡ ಈ ನಿಟ್ಟಿನಲ್ಲಿ ಬಳಸಿಕೊಳ್ಳಬಹುದು. ಬೇಕಾದ ಸೂಕ್ತ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ಮಾಹಿತಿಯನ್ನು ತಿಳಿಸುವುದಕ್ಕೆ, ಕೈತೊಳೆದುಕೊಳ್ಳುವ ಹಾಗೂ ದೂರ ಕಾಪಾಡಿಕೊಳ್ಳುವುದೇ ಮುಂತಾದ ಒಳ್ಳೆಯ ಅಭ್ಯಾಸಗಳನ್ನು ಪರಿಣಾಮಕಾ-ರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು. ಸಾಮಾಜಿಕ ಭದ್ರತಾ ಕ್ರಮಗಳನ್ನು ತಕ್ಷಣ ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಮೂಲಕ ಜನರಲ್ಲಿ ಭೀತಿಯನ್ನು ಕಡಿಮೆಮಾಡಬಹುದು. ಈಗ ನಡೆಯುತ್ತಿರುವುದನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಪಡಿತರ ಪದ್ಧತಿಯನ್ನು ನಡೆಸುವುದು ಅಥವಾ ಕುಡಿಯುವ ನೀರನ್ನು ಪೂರೈಸುವುದು ಕೂಡ ಕೆಲವು ರಾಜ್ಯ ಸರ್ಕಾರಗಳಿಗೆ ಕಷ್ಟವಾಗಬಹುದು. ಅದು ಇನ್ನಷ್ಟು ಜನರನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಆಗ ಕೇವಲ ಆರ್ಥಿಕ ಕಷ್ಟಗಳು ಮಾತ್ರವಲ್ಲ ವೈದ್ಯಕೀಯ ಬಿಕ್ಕಟ್ಟು ತೀವ್ರವಾಗಿಬಿಡಬಹುದು. ಭಾರತದ ದುರ್ಬಲವಾಗಿರುವ ಸುರಕ್ಷತೆಯ ಜಾಲ ನಾಶವಾಗುವುದಕ್ಕೆ ಬಿಡಬಾರದು.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




