ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. “ತಪ್ಪು ಮಾಡುವುದು ಮನುಷ್ಯ ಸಹಜ ಗುಣ.” ಆದರೆ ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ. ಆದರೆ ಕೆಲವರು ಇತರರಿಗಿಂತ ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ. ಪ್ರಜಾಪ್ರಭುತ್ವ ಬೇಕಿರುವುದೇ ಈ ಕಾರಣಕ್ಕೆ. ಬಹುಜನರ ಮೇಲೆ ಪ್ರಭಾವ ಬೀರುವ ನಿರ್ಧಾರಗಳನ್ನು ಕುರಿತಂತೆ ಚರ್ಚೆಯಾಗಬೇಕು. ಮತ್ತು ಅವುಗಳನ್ನು ನಿಯಂತ್ರಿಸುವುದಕ್ಕೂ ಸಾಧ್ಯವಾಗಬೇಕು. ಸರ್ವಾಧಿಕಾರಿ ಆಡಳಿತದ ಇತಿಹಾಸವನ್ನು ನೋಡಿದರೆ, ಅಲ್ಲಿನ ನಾಯಕರು ಮಾಡಿದ ತಪ್ಪುಗಳಿಂದ ಕೇವಲ ಅವರಿಗಷ್ಟೇ ಅಲ್ಲ, ಅವರು ಆಳುತ್ತಿದ್ದ ಇಡೀ ಸಮಾಜಕ್ಕೇ ಅನಾಹುತವಾಗಿದೆ. ಮತ್ತೊಂದು ದೇಶದ ಮೇಲೆ ಯುದ್ಧ ಸಾರುವುದಕ್ಕಿಂತ ದೊಡ್ಡ ನಿರ್ಧಾರ ಇಲ್ಲ. ಆದರೆ ಅಮೆರಿಕವು ತನ್ನದೇ ಆದ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಚರ್ಚೆಯೂ ಇಲ್ಲದೆ ಈ ಕೆಲಸ ಮಾಡಿದೆ. ಅಮೆರಿಕದ ಸುಳ್ಳ, ಹಠಮಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಹಳೆಕಾಲದ ರಾಜರಂತೆ ಯಾವುದೇ ಶಾಸಕಾಂಗದ ನಿಯಂತ್ರಣವೂ ಇಲ್ಲ. ಸುತ್ತಾ ಕೇವಲ ಹೊಗಳುಭಟ್ಟರೆ ಸೇರಿಕೊಂಡಿದ್ದಾರೆ. ಅವರೆಲ್ಲಾ ಟ್ರಂಪ್‌ಗೆ ಏನು ಇಷ್ಟವೋ ಅದನ್ನಷ್ಟೇ ಹೇಳುತ್ತಿರುತ್ತಾರೆ. ಅದರ ದುರಂತ ಫಲಿತಾಂಶ ಈಗ ಸ್ಪಷ್ಟವಾಗಿದೆ: ಅಮೆರಿಕ ಮತ್ತೊಮ್ಮೆ ಮಧ್ಯಪ್ರಾಚ್ಯದ ಯುದ್ಧದಲ್ಲಿ ಸಿಲುಕಿದೆ. ಈ ಯುದ್ಧದಲ್ಲಿ ಸಾವಿರಾರು ಜನ ಅದರಲ್ಲೂ ಹೆಚ್ಚಿನವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಹಲವಾರು ಯುದ್ಧಾಪರಾಧಗಳು ಸಂಭವಿಸಿರುವುದರಲ್ಲಿ ಅನುಮಾನವೇ ಇಲ್ಲ.

ಜೋಸೆಫ್ ಯುಜೀನ್ ಸ್ಟಿಗ್ಲಿಟ್ಜ್ (Joseph Eugene Stiglitz) ಅವರು ವಿಶ್ವಪ್ರಸಿದ್ಧ ಅಮೇರಿಕನ್ ಅರ್ಥಶಾಸ್ತ್ರಜ್ಞ, ಸಾರ್ವಜನಿಕ ನೀತಿ ವಿಶ್ಲೇಷಕ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ. ಮಾರುಕಟ್ಟೆಯಲ್ಲಿನ Asymmetric Information ಕುರಿತಾದ ಇವರ ಅದ್ಭುತ ಸಂಶೋಧನೆಗಾಗಿ ಇವರಿಗೆ 2001 ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ಯುಎಸ್ ಆರ್ಥಿಕ ಸಲಹೆಗಾರರ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇರಾನ್ ಜೊತೆಗಿನ ಈ ಯುದ್ಧ ಇನ್ನು ಎಷ್ಟು ದಿನ ಮುಂದುವರಿಯುತ್ತದೆ. ಇನ್ನೂ ಎಷ್ಟು ಯುದ್ಧಾಪರಾಧಗಳು ಸಂಭವಿಸುತ್ತವೆ. ಅಥವಾ ಇನ್ನೆಷ್ಟು ಮುಗ್ಧರು ಕೊಲ್ಲಲ್ಪಡುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಮೆರಿಕನ್ನರು ಮಾನವ ಹಕ್ಕುಗಳ ಉಲ್ಲಂಘನೆಗೆ ಮತ್ತು ನಿರಂತರವಾಗಿ ಹರಿದುಬರುತ್ತಿರುವ ಕೆಟ್ಟ ಸುದ್ದಿಗಳ ಪ್ರವಾಹಕ್ಕೆ ಎಷ್ಟು ಒಗ್ಗಿಹೋಗಿದ್ದಾರೆಂದರೆ ಅವರು ಪ್ರತಿಭಟಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ತೋರುತ್ತದೆ. ವಿಶ್ವವಿದ್ಯಾಲಯಗಳಲ್ಲೂ ಭಯದ ವಾತಾವರಣವಿದೆ. ಎಲ್ಲಾ ದಬ್ಬಾಳಿಕೆಯ ಆಡಳಿತದಲ್ಲಿ ಆಗುವಂತೆ ಇಲ್ಲಿಯೂ ಆರ್ಥಿಕ ದಂಡನೆ ಅಥವಾ ವೀಸಾ ಕಳೆದುಕೊಳ್ಳುವ ಅಥವಾ ದೇಶದಿಂದ ಹೊರಹಾಕುವ ಅಥವಾ ಅಪರಾಧ ವಿಚಾರಣೆಯ ಭಯ ಆವರಿಸಿಕೊಂಡಿದೆ. ಸರ್ಕಾರದ ಉದ್ದೇಶವೂ ಆದೆ. ಪ್ರತಿಭಟನೆಯ ಸೊಲ್ಲು ಆಡಗಿ ಹೋಗಿದೆ.
ಟ್ರಂಪ್ ಅವರ ಈ ‘ಸ್ವಯಂ ಪ್ರೇರಿತ ಯುದ್ಧ’ ಅಮೆರಿಕ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ, ಎಂದು ಅರ್ಥಶಾಸ್ತ್ರಜ್ಞನಾದ ನನ್ನನ್ನು ಅನೇಕರು ಕೇಳುತ್ತಿದ್ದಾರೆ. ಇದಕ್ಕೆ ಸರಳ ಉತ್ತರವೆಂದರೆ: ಯುದ್ಧವು ಸುದೀರ್ಘವಾದಷ್ಟೂ ಆರ್ಥಿಕ ಹಾನಿ ಹೆಚ್ಚಾಗಿರುತ್ತದೆ. ಯುದ್ದ ತಕ್ಷಣ ನಿಂತರೂ ಪರಿಣಾಮ ತಕ್ಷಣ ನಿಂತು ಹೋಗುವುದಿಲ್ಲ. ಈಗಾಗಲೇ ಪ್ರಮುಖ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿವೆ. ತೈಲ ಹಾಗೂ ಅನಿಲ ಉತ್ಪಾದನಾ ಸೌಲಭ್ಯಗಳು ನಾಶವಾಗಿವೆ. ಬಹುತೇಕ ಅಂದಾಜುಗಳು ಹೇಳುವಂತೆ ಇವುಗಳನ್ನು ಸರಿಪಡಿಸಲು ವರ್ಷಗಳೇ ಬೇಕಾಗಬಹುದು.
ಅಷ್ಟೇ ಅಲ್ಲದೆ, ತೊಂದರೆಯಾಗಿರುವುದು ಕೇವಲ ತೈಲ ಪೂರೈಕೆಗೆ ಮಾತ್ರವಲ್ಲ. 1970ರ ದಶಕದ ತೈಲ ನಿರ್ಬಂಧಗಳಿಗಿಂತ ಈಗಿನ ಪರಿಸ್ಥಿತಿ ಭಿನ್ನವಾಗಿದೆ: ಈಗ ಜಗತ್ತಿನ ಆಹಾರ ಪದ್ದತಿಗೆ ಅಗತ್ಯವಾದ ಗೊಬ್ಬರ ಉತ್ಪಾದನೆಯೂ ಸಂಕಷ್ಟದಲ್ಲಿದೆ. ಕೋವಿಡ್ ಸಾಂಕ್ರಾಮಿಕ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಟ್ರಂಪ್ ಅವರ ಸುಂಕದ ಸಮರದಿಂದಾಗಿ ಅಂತರರಾಷ್ಟ್ರೀಯ ವ್ಯಾಪಾರದ ನಿಯಮಗಳನ್ನಾಧರಿಸಿದ ವ್ಯವಸ್ಥೆಯೇ ಹಾಳಾಗಿವೆ. ಇವುಗಳ ಪರಿಣಾಮವಾಗಿ ಹಣದುಬ್ಬರ ಏರಿಕೆಯಾಗಿದೆ. ಮತ್ತು ಸಾಮಾನ್ಯ ಜನರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ.

ಟ್ರಂಪ್ ಶ್ವೇತಭವನಕ್ಕೆ ಮರಳಿ ಬರುವ ಮೊದಲು, ಹಣದುಬ್ಬರ ಇಳಿಕೆಯ ಹಾದಿಯಲ್ಲಿತ್ತು. ಆದರೂ, ಸೆಂಟ್ರಲ್ ಬ್ಯಾಂಕಿನವರ ನೆಚ್ಚಿನ ಗುರಿಯಾಗಿದ್ದ ಶೇಕಡ 2ಕ್ಕಿಂತ ಅದು ಬಹಳ ಮೇಲಿತ್ತು. ಆದರೆ ಸುಂಕದಿಂದಾಗಿ ಮತ್ತೆ ಜಗತ್ತಿನಾದ್ಯಂತ ಬೆಲೆ ರಭಸದಿಂದಲೇ ಏರುವುದಕ್ಕೆ ಪ್ರಾರಂಭವಾಗಿದೆ. ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈಗಾಗಲೇ ಜೀವನ ನಡೆಸುವುದು ದುಬಾರಿಯಾಗಿದೆ. ಅಮೇರಿಕೆಯ ನೀತಿಗಳಿಂದಾಗಿ ಬಿಕ್ಕಟ್ಟು ಇನ್ನಷ್ಟು ಹದಗೆಟ್ಟಿದೆ. ಅಪಾಯವೆಂದರೆ ಜಗತ್ತಿನ ಎಲ್ಲಾ ಕೇಂದ್ರ ಬ್ಯಾಂಕುಗಳು ಬಡ್ಡಿದರವನ್ನು ಹೆಚ್ಚಿಸುತ್ತವೆ ಅಥವಾ ಇಳಿಸುತ್ತಿರುವ ವೇಗವನ್ನು ಕಡಿಮೆ ಮಾಡುತ್ತಾರೆ. ಇದರಿಂದಾಗಿ ಬೆಲೆ ಏರಿಕೆಯ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಮನೆ ಖರೀದಿಸುವುದು ಅಥವಾ ಕ್ರೆಡಿಟ್ ಕಾರ್ಡ್ ಸಾಲ ತೀರಿಸುವುದು ಜನರಿಗೆ ಮೊದಲಿಗಿಂತ ಕಷ್ಟವಾಗುತ್ತದೆ. ಈಗಾಗಲೇ ಟ್ರಂಪ್ ಅವರ ವಿಚಿತ್ರವಾದ ವ್ಯಾಪಾರ ಮತ್ತು ವಲಸೆ ನೀತಿಗಳಿಂದ ನಲುಗಿಹೋಗಿರುವ ಅಮೆರಿಕಾದ ಆರ್ಥಿಕತೆ ಇನ್ನಷ್ಟು ಮಂದಗೊಳ್ಳುತ್ತದೆ.
ಒಂದು ವೇಳೆ ಕೃತಕ ಬುದ್ಧಿಮತ್ತೆ ಡೇಟಾ ಸೆಂಟರ್‌ಗಳ ಮೇಲೆ ವಿಪರೀತವಾಗಿ ಹಣ ಖರ್ಚು ಮಾಡದಿದ್ದಿದ್ದರೆ, ಅಮೆರಿಕಾದ ಆರ್ಥಿಕತೆ ತೀರಾ ಸತ್ವಹೀನವಾಗಿರುತ್ತಿತ್ತು. ಏಕೆಂದರೆ ಅಮೆರಿಕಾದ ಈಗಿನ ಆರ್ಥಿಕ ಬೆಳವಣಿಗೆಯಲ್ಲಿ ಮೂರನೇ ಒಂದು ಭಾಗದಷ್ಟು ಈ ಕೃತಕ ಬುದ್ದಿಮತ್ತೆಯ ಕ್ಷೇತ್ರದಿಂದಲೇ ಬರುತ್ತಿರುವುದು. ಇದರ ಜೊತೆಗೆ, ಟ್ರಂಪ್ ಅವರು ಬಿಲಿಯನೇರ್‌ಗಳಿಗೆ ಮತ್ತು ದೊಡ್ಡ ಕಂಪನಿಗಳಿಗೆ ನೀಡಿರುವ ರಿಯಾಯಿತಿ ತೆರಿಗೆ ನೀತಿಗಳಿಂದಾಗಿ ಸರ್ಕಾರದ ವಿತ್ತೀಯ ಸಾಮರ್ಥ್ಯ ಕುಂಠಿತಗೊಂಡಿದೆ. ಇದರಿಂದಾಗಿ, ಟ್ರಂಪ್ ಸೃಷ್ಟಿಸಿರುವ ಗೊಂದಲಗಳನ್ನು ಅಥವಾ ಮುಂದೆ ಕೃತಕ ಬುದ್ದಿಮತ್ತೆಯಿಂದ ಎದುರಾಗಬಹುದಾದ (ಉದ್ಯೋಗ ನಷ್ಟದಿಂದ ಹಿಡಿದು ತಂತ್ರಜ್ಞಾನ ಮಾರುಕಟ್ಟೆಯ ಕುಸಿತವರೆಗಿನ ) ತೊಂದರೆಗಳನ್ನು ಎದುರಿಸಲು ಅಮೆರಿಕಾ ಸರ್ಕಾರದ ಬಳಿ ಈಗ ಹಣದ ಬಲ ಅಥವಾ ಆರ್ಥಿಕ ಶಕ್ತಿ ಇಲ್ಲದಂತಾಗಿದೆ.
ಅಮೆರಿಕಾವು ತೈಲವನ್ನು ರಫ್ತು ಮಾಡುವುದರಿಂದ ದೇಶಕ್ಕೆ ಲಾಭವಾಗುತ್ತದೆ ಎಂಬ ಟ್ರಂಪ್ ಹೇಳಿಕೆ ನಿಜವಾಗಿ ಅರ್ಥಹೀನವಾದುದು. ನಿಜ, ಇದರಿಂದ ಎಕ್ಸಾನ್ ಅಂತಹ ದೊಡ್ಡ ಕಂಪನಿಗಳಿಗೆ ಲಾಭವಾಗುತ್ತದೆ. ಆದರೆ ಅಮೆರಿಕಾದ ಸಾಮಾನ್ಯ ಗ್ರಾಹಕರು ಮಾತ್ರ ಅಂತರರಾಷ್ಟ್ರೀಯ ಮಾರುಕಟ್ಟೆ ನಿಗದಿಪಡಿಸಿದ ಬೆಲೆಯನ್ನೇ ತೆರಬೇಕಾಗುತ್ತದೆ. ಇಂತಹ ಸಮಯದಲ್ಲಿ, ಸರ್ಕಾರವು ಈ ದೊಡ್ಡ ಕಂಪನಿಗಳ ಅತಿಯಾದ ಲಾಭದ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕಬೇಕಿತ್ತು. ಆದರೆ, ಪಳೆಯುಳಿಕೆ ಇಂಧನ (ತೈಲ ಮತ್ತು ಗ್ಯಾಸ್) ಕಂಪನಿಗಳ ಸಂಪೂರ್ಣ ಹಿಡಿತದಲ್ಲಿರುವ ಈ ಸರ್ಕಾರದಿಂದ ಇಂತಹ ಕ್ರಮವನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ.
ಟ್ರಂಪ್ ನಿರ್ಧಾರಗಳಿಂದಾಗಿ ಇಂದು ಇಂಧನದ ಬೆಲೆ ಏರಿದೆ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೊರತೆಯುಂಟಾಗಿದೆ. ಇದರಿಂದ ಅಮೇರಿಕೆಯ ಹಳೆಯ ಮಿತ್ರ ರಾಷ್ಟ್ರಗಳಾದ ಯುರೋಪ್ ದೇಶಗಳೂ ನಲುಗಿಹೋಗಿವೆ. ಒಂದು ವೇಳೆ ಯುರೋಪಿನ ನಾಯಕರು ಗ್ಯಾಸ್ ಬೆಲೆಗೆ ತಕ್ಕಂತೆ ವಿದ್ಯುತ್ ದರವನ್ನು ನಿಗದಿಪಡಿಸಿದರೆ (ಉಕ್ರೇನ್ ಯುದ್ಧದ ಆರಂಭದಲ್ಲಿ ಮಾಡಿದಂತೆ), ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಆದರೆ, ಯುರೋಪ್ ತನ್ನ ರಕ್ಷಣೆ ಮತ್ತು ತಂತ್ರಜ್ಞಾನಕ್ಕಾಗಿ ಅಮೆರಿಕಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಬೆಳೆಸಿಕೊಂಡರೆ, ಈಗ ಮತ್ತು ಮುಂದಿನ ದಿನಗಳಲ್ಲಿ ತನ್ನ ಸ್ಥಾನವನ್ನು ಅದು ಗಟ್ಟಿಗೊಳಿಸಿಕೊಳ್ಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಎರಡನೇ ಮಹಾಯುದ್ಧದ ನಂತರ ಕಟ್ಟಿದ ಶಾಂತಿ ಮತ್ತು ಸಹಕಾರದ ಜಗತ್ತು ಈಗ ಕಣ್ಮರೆಯಾಗುತ್ತಿದೆ. ಸ್ವತಃ ಅಮೇರಿಕ ಈ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ. ಚೀನಾದ ಜೊತೆಗಿನ ಶೀತಲ ಸಮರ ಮತ್ತು ಅಮೆರಿಕಾದಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿರುವುದು ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದೆ.
ಈ ಯುದ್ಧ ಮತ್ತು ಈಗಿನ ಆರ್ಥಿಕ ಸ್ಥಗಿತದುಬ್ಬರದ ಪರಿಸ್ಥಿತಿ (ಸ್ಪಾಗಪ್ಲೇಷನ್-ಬೆಲೆ ಏರಿಕೆ ಹಾಗೂ ನಿಧಾನಗತಿಯ ಬೆಳವಣಿಗೆ ಒಟ್ಟಿಗಿರುವ ಸ್ಥಿತಿ) ಎಷ್ಟು ದಿನ ಮುಂದುವರಿಯತ್ತದೆ ತಿಳಿಯದು. ಆದರೆ, ಅದರ ಪರಿಣಾಮಗಳು ಮಾತ್ರ ದೀರ್ಘಕಾಲದವರೆಗೆ ಕಾಡುತ್ತವೆ. ಸೌರಶಕ್ತಿ ಮತ್ತು ವಾಯುಶಕ್ತಿಯಂತಹ ನೈಸರ್ಗಿಕ ಶಕ್ತಿಗಳ ಪೂರೈಕೆಯಲ್ಲಿ ಏರುಪೇರಾಗುತ್ತಿರುತ್ತವೆ ಅನ್ನುವುದು ನಿಜ. ಆದರೆ ಪೆಟ್ರೋಲ್-ಡೀಸೆಲ್‌ಗಾಗಿ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರಂತಹ ಅನಿಶ್ಚಿತ ಮನಸ್ಥಿತಿಯ ಸರ್ವಾಧಿಕಾರಿಗಳ ಮರ್ಜಿಗೆ ಕಾಯುವ ಬದಲು, ಸೌರ ಹಾಗೂ ವಾಯುಶಕ್ತಿಯನ್ನು ನಿಭಾಯಿಸುವುದು ಹೆಚ್ಚು ಸುಲಭ. ಇದನ್ನು ಜಗತ್ತು ಅರ್ಥಮಾಡಿಕೊಂಡರೆ ಒಳ್ಳೆಯದು.
ಒಂದು ವೇಳೆ ಟ್ರಂಪ್ ಅವರ ಈ ನಿರ್ಧಾರಗಳಿಂದಾಗಿ ಜಗತ್ತು ಪರಿಸರಸ್ನೇಹಿ ಇಂಧನದ ಕಡೆಗಿನ ಪರಿವರ್ತನೆಯನ್ನು ತ್ವರಿತಗೊಳಿಸಿದರೆ, ಅದೇ ಇಂದು ಆವರಿಸಿಕೊಂಡಿರುವ ಕತ್ತಲಲ್ಲಿ ಕಾಣುವ ಒಂದು ಆಶಾಕಿರಣ.
ಒಟ್ಟಾರೆಯಾಗಿ ಹೇಳುವುದಾದರೆ, ಎರಡನೇ ಮಹಾಯುದ್ಧದ ನಂತರ ನಮ್ಮ ಹಿರಿಯರು ಶಾಂತಿಯುತ ಮತ್ತು ಗಡಿಗಳ ಹಂಗಿಲ್ಲದ ಜಗತ್ತನ್ನು ಕಟ್ಟಲು ಬಯಸಿದ್ದರು. ಆದರೆ ಈಗ ಆ ಆಸೆ ಬಹುತೇಕ ಮಣ್ಣುಪಾಲಾದಂತಾಗಿದೆ. ಯಾವ ಅಮೆರಿಕಾ ಅಂದು ಈ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿತ್ತೋ, ಅದೇ ಅಮೆರಿಕಾ ಈಗ ಟ್ರಂಪ್ ನಾಯಕತ್ವದಲ್ಲಿ ಅದನ್ನು ನಾಶಮಾಡುತ್ತಿದೆ. ಚೀನಾದ ಜೊತೆಗಿನ ಹೊಸ ಶೀತಲ ಸಮರ ಮತ್ತು ಜಾಗತಿಕ ಪೂರೈಕೆಯ ವ್ಯವಸ್ಥೆಯಲ್ಲಿ ಸುಧಾರಣೆ ಕಾಣದಿರುವುದನ್ನು ನೋಡಿದರೆ ಒಳ್ಳೆಯ ದಿನಗಳು ಬರುತ್ತವೆ ಎಂಬ ನಂಬಿಕೆ ಕಡಿಮೆ ಆಗುತ್ತಿದೆ. ಅಮೆರಿಕಾದಲ್ಲಿ ಪ್ರಜಾಪ್ರಭುತ್ವವೇ ದುರ್ಬಲಗೊಂಡಿರುವುದರಿಂದ, ಅಲ್ಲಿನ ನಾಯಕರು ಮಾಡುತ್ತಿರುವ ತಪ್ಪುಗಳು ಮತ್ತು ಅವುಗಳ ಕೆಟ್ಟ ಪರಿಣಾಮಗಳು ಒಂದರ ಮೇಲೊಂದರಂತೆ ಬೆಳೆಯುತ್ತಲೇ ಇವೆ.
Copyright: Project Syndicate, 2026. www.project-syndicate.org

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.






