ಬೆಂಗಳೂರು | ಬಸವನಗುಡಿಯಲ್ಲಿ ಭರ್ಜರಿ ಜಾತ್ರೆ: ಕಡಲೆಕಾಯಿ ಪರಿಷೆಯಲ್ಲಿ ವಾರಾಂತ್ಯದ ಸಂಭ್ರಮ

Date:

ಭಾರತದ ಸಿಲಿಕಾನ್‌ ವ್ಯಾಲಿಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಡಲೆಕಾಯಿ ಪರಿಷೆ ನಡೆಯುತ್ತಿದ್ದು, ಜನಸಾಗರವೇ ಬುಲ್ ಟೆಂಪಲ್‌ ಕಡೆಗೆ ಹರಿದುಬರುತ್ತಿದೆ. ಕಡಲೆಕಾಯಿ ಪರಿಷೆಗೆ ಅಧಿಕೃತವಾಗಿ ಸೋಮವಾರ ಚಾಲನೆ ಸಿಗಲಿದೆ. ಆದರೂ, ಶನಿವಾರವೇ ಜನರು ಬುಲ್‌ಟೆಂಪಲ್‌ ರಸ್ತೆಯಲ್ಲಿ ಜಮಾಯಿಸಿದ್ದಾರೆ.

ಪ್ರತಿ ವರ್ಷ ಕೊನೆಯ ಕಾರ್ತೀಕ ಸೋಮವಾರದಂದು ಈ ಕಡಲೆಕಾಯಿ ಪರಿಷೆ ನಡೆಯುತ್ತದೆ. ಆದರೆ, ಈ ವರ್ಷ ಶನಿವಾರದಿಂದಲೇ ಪರಿಷೆ ಆರಂಭವಾಗಿದ್ದು, ಚುಮು-ಚುಮು ಚಳಿಯಲ್ಲಿ ಬಡವರ ಬಾದಾಮಿಯೆಂದೇ ಹೆಸರಾದ ಕಡಲೆಕಾಯಿಯನ್ನು ತಿನ್ನುತ್ತಾ ಕುಟುಂಬ, ಗೆಳೆಯರ ಜತೆಗೆ ಬಸವನಗುಡಿಯಲ್ಲಿ ಸುತ್ತಾಡುವುದು ಈ ಪರಿಷೆಯ ಒಂದು ವಿಶೇಷ.

ಇನ್ನೊಂದು ವಿಶೇಷ ಏನೆಂದರೆ, ಈ ಪರಿಷೆ ಬೆಳೆಗಾರ ಹಾಗೂ ಗ್ರಾಹಕನನ್ನು ಒಂದುಗೂಡಿಸುತ್ತದೆ. ಬೆಂಗಳೂರಿನ ರಾಮಕೃಷ್ಣ ಆಶ್ರಮದಿಂದ ಆರಂಭವಾಗಿ ಕಾಮತ್ ಬ್ಯೂಗಲ್‌ರಾಕ್ ಹೋಟೆಲ್ ತನಕ ರಸ್ತೆಯ ಪಕ್ಕದಲ್ಲಿ ಹಸಿ ಕಡಲೆಕಾಯಿ, ಹುರಿದ ಕಡಲೆಕಾಯಿ, ಬೇಯಿಸಿದ ಕಡಲೆಕಾಯಿ ಸೇರಿದಂತೆ ರಾಶಿರಾಶಿ ಕಡಲೆಕಾಯಿ ಹಾಕಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಂಗಳೂರಿನ ಸುತ್ತಮುತ್ತಲ ಕಡಲೆಕಾಯಿ ಬೆಳೆಗಾರರು ತಮ್ಮ ಬೆಳೆಯನ್ನು ಬಸವಣ್ಣನಿಗೆ ಅರ್ಪಿಸಿ ಬೆಳೆದ ಶ್ರಮಕ್ಕೆ ಪ್ರತಿಫಲ ಪಡೆಯಲು ರಸ್ತೆ ಪಕ್ಕದಲ್ಲಿ ಕಡಲೆಕಾಯಿ ರಾಶಿ ಸುರಿದು ಮಾರಾಟ ಮಾಡುತ್ತಾರೆ.

7-min (1)

ಸ್ವಚ್ಛತೆಗೆ ಆದ್ಯತೆ

ಈ ವರ್ಷದ ಪರಿಷೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ ನಡೆಸಲು ತೀರ್ಮಾನಿಸಲಾಗಿದೆ. ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳಲು ಹಾಗೂ ಭದ್ರತೆಯ ದೃಷ್ಟಿಯಿಂದ ಹೆಚ್ಚು ಪೊಲೀಸ್ ನಿಯೋಜನೆ ಮಾಡಲಾಗಿದೆ. ಜತೆಗೆ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಬೆಂಗಳೂರು ನಗರ ಸಂಚಾರ ಪೊಲೀಸ್ ಪರ್ಯಾಯ ಮಾರ್ಗ ಕಲ್ಪಿಸಿದೆ.

200ಕ್ಕೂ ಹೆಚ್ಚು ಮಳಿಗೆ

ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದ ಸುತ್ತ-ಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ. ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ‌ 200ಕ್ಕೂ ಹೆಚ್ಚು ವ್ಯಾಪಾರಸ್ಥರು, ರೈತರು ಕಡಲೆಕಾಯಿ ಮಳಿಗೆಗಳನ್ನು ಹಾಕಿದ್ದು, ವ್ಯಾಪಾರದಲ್ಲಿ ತೊಡಗಿದ್ದಾರೆ.

ಈ ಬಾರಿ ಪರಿಷೆಯಲ್ಲಿ ಆಂಧ್ರ, ತಮಿಳುನಾಡು, ಬೆಳಗಾವಿ, ಚಿಕ್ಕಬಳ್ಳಾಪುರ ನಾಟಿ, ಸೇಲಂ ಸೇರಿದಂತೆ ನಾನಾ ತಳಿಗಳ ಕಡಲೆಕಾಯಿಗಳು ಪರಿಷೆಯಲ್ಲಿ ಸಿಗಲಿದೆ. ಈ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನ ಪರಿಷೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಈ ವರ್ಷದ ಪರಿಷೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಲಿದ್ದು, ದೊಡ್ಡ ಬಸವಣ್ಣನಿಗೆ ಹಾಗೂ ದೊಡ್ಡ ಗಣೇಶನಿಗೆ ಕಡಲೆಯಿಂದ ಅಭಿಷೇಕ ಮಾಡುವ ಮೂಲಕ ಮುಜರಾಯಿ ಸಚಿವರಿಂದ ಉದ್ಘಾಟನೆ ಮಾಡುವ ಪ್ರತೀತಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಪರಿಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

6-min (2)

ಈ ಬಾರಿ ಮಳೆ ಕೈ ಕೊಟ್ಟ ಹಿನ್ನೆಲೆ, ಕಡಲೆಕಾಯಿ ಬೆಲೆ ಕೊಂಚ ಏರಿಕೆಯಾಗಿದೆ. ಒಂದು ಸೇರು ಕಡಲೆಕಾಯಿಗೆ ₹60 ರಿಂದ ₹100 ವರೆಗೆ ದರ ಇದೆ.

ಪರಿಷೆಯಲ್ಲಿ ಕೇವಲ ಕಡಲೆ ಕಾಯಿ ಮಾತ್ರವಲ್ಲದೇ ಆಟಿಕೆಯ ರಾಟೆ, ಉಯ್ಯಾಲೆಗಳು, ಜೋಕಾಲಿ, ಮಹಿಳೆಯರ ಆಭರಣ ವಸ್ತುಗಳು, ಮನೆ ಅಲಂಕಾರಿಕ ವಸ್ತುಗಳು, ಆಹಾರ ಮಳಿಗೆಗಳು, ಮಕ್ಕಳಿಗೆ ಆಟಿಕೆಗಳು ಸೇರಿದಂತೆ ಹಲವು ವಸ್ತುಗಳು ಇವೆ. ಜತೆಗೆ, ಕಡ್ಲೆಪುರಿ, ಬೆಂಡು-ಬತ್ತಾಸು ಕೂಡ ಇದೆ.

ಈ ಸುದ್ದಿ ಓದಿದ್ದೀರಾ? ನಮ್ ಜೀವನ | ಕಷ್ಟ ಕೋಟಲೆಯಿಂದ ಬದುಕಿನ ಬೆಳಕಿನ ದಾರಿ ತೋರಿದ ಕ್ಯಾಬ್ ಡ್ರೈವಿಂಗ್

ಕಡಲೆಕಾಯಿ ಪರಿಷೆ ಇತಿಹಾಸ

ಬೆಂಗಳೂರು ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ರೈತರು ಪ್ರತಿ ವರ್ಷ ಕಡಲೆ ಕಾಯಿ ಬೆಳೆಯುತ್ತಿದ್ದರು. ಆದರೆ, ಕಟಾವಿಗೆ ಸಿದ್ಧವಾದ ಕಡಲೆಕಾಯಿಯನ್ನು ಹೊಲಕ್ಕೆ ದಾಳಿ ಇಡುತ್ತಿದ್ದ ಬಸವ ನಾಶಪಡಿಸುತ್ತಿತ್ತು. ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವನನ್ನು ಪ್ರಾರ್ಥಿಸಲು ಆರಂಭಿಸಿದರು.

ಇದೇ ಸಂದರ್ಭದಲ್ಲಿ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ಈ ಸ್ಥಳದಲ್ಲಿ ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ಸುತ್ತಲೂ ದೇವಾಲಯ ನಿರ್ಮಿಸಿದರು. ಇದನ್ನು ದೊಡ್ಡ ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಲು ಪ್ರಾರಂಭವಾಯಿತು.

ಕಡಲೆಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ. ರೈತರು ಅರ್ಪಿಸಿದ ಕಡಲೆಕಾಯಿಯನ್ನು ಬಸವ ಸ್ವೀಕರಿಸಿ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ರೈತರಲ್ಲಿದೆ.

ಕಡಲೆಕಾಯಿ ಪರಿಷೆ  ಸಮಯದಲ್ಲಿ ಗ್ರಾಹಕರು ರೈತರಿಂದ ನೇರವಾಗಿ ಕಡಲೆಕಾಯಿಯನ್ನು ಖರೀದಿ ಮಾಡಬಹುದು. ಮಾರುಕಟ್ಟೆ ದರಕ್ಕಿಂತ ಅಗ್ಗದ ದರದಲ್ಲಿ ಕಡಲೆಕಾಯಿ ದೊರೆಯುತ್ತದೆ. ಕಡಲೆಕಾಯಿ ಪರಿಷೆಯ ಸಂದರ್ಭದಲ್ಲಿ ಬಸವನ ಗುಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯುತ್ತದೆ.

1-min

ವ್ಯಾಪರಸ್ಥರು ಏನಂತಾರೆ?

ಕಳೆದ 35 ವರ್ಷಗಳಿಂದ ಕಡಲೆಕಾಯಿ ಪರಿಷೆಗೆ ಬರುತ್ತಿದ್ದೇನೆ. ಪ್ರತಿ ವರ್ಷವೂ ವ್ಯಾಪಾರ ಚೆನ್ನಾಗಿ ಆಗುತ್ತದೆ. ಆದರೆ, ಈ ವರ್ಷ ಮಳೆಯ ಕೊರತೆ ಕಾರಣ ಚೆನ್ನಾಗಿ ಬೆಳೆ ಬಂದಿಲ್ಲ. ಸೋಮವಾರದಿಂದ ಪರಿಷೆ ಆರಂಭವಾಗುತ್ತದೆ. ಇವತ್ತು ಅಷ್ಟಾಗಿ ವ್ಯಾಪಾರ ಇಲ್ಲ” ಎಂದು ಸೇಲಂನಿಂದ ಕಡಲೆಕಾಯಿ ವ್ಯಾಪಾರಕ್ಕೆ ಬಂದ ರೈತ ಕೃಷ್ಣಪ್ಪ ಈ ದಿನ.ಕಾಮ್‌ಗೆ ಹೇಳಿದರು.

ಇನ್ನೋರ್ವ ರೈತ ಶಂಕರ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕಳೆದ ಎರಡು ವರ್ಷದಿಂದ ಬೆಂಗಳೂರಿನ ಕಡಲೆಕಾಯಿ ಪರಿಷೆಗೆ ಬರುತ್ತಿದ್ದೇನೆ. ಕಳೆದ ವರ್ಷವೂ ವ್ಯಾಪಾರ ಚೆನ್ನಾಗಿ ಆಗಿತ್ತು. ಈ ವರ್ಷ ವ್ಯಾಪಾರ ಚೆನ್ನಾಗಿ ಆಗುತ್ತದೆ ಎಂಬ ಭರವಸೆಯಲ್ಲಿದ್ದೇನೆ. ಬೆಳೆ ಇಲ್ಲದ ಕಾರಣ ಕಡಲೆಕಾಯಿ ದರ ಹೆಚ್ಚಳವಾಗಿದೆ. ಕೆಜಿ ಕಡಲೆಕಾಯಿಗೆ ₹150 ದರವಿದೆ. ಒಂದು ಸೇರು ಕಡಲೆಕಾಯಿಗೆ ₹30 ಇದೆ. ಹುರಿದ ಮತ್ತು ಬೇಯಿಸಿದ ಕಡಲೆಕಾಯಿ ದರ ವ್ಯತ್ಯಾಸವಿದೆ” ಎಂದು ತಿಳಿಸಿದರು.

“ಕಡಲೆಕಾಯಿ ಪರಿಷೆ ಅಧಿಕೃತವಾಗಿ ಸೋಮವಾರದಿಂದ ಆರಂಭವಾಗುತ್ತದೆ. ಮಳಿಗೆ ಹಾಕಲು ಜಾಗ ಹಿಡಿಯುವ ಸಲುವಾಗಿ ಸೇಲಂನಿಂದ ಬೆಂಗಳೂರಿಗೆ ಎಂಟು ದಿನಗಳ ಹಿಂದೆ ಬಂದಿದ್ದೀವಿ. ಇಲ್ಲಿಯೇ ಮಲಗುತ್ತೇವೆ. ಊಟ-ತಿಂಡಿ ಎಲ್ಲ ಹೋಟೆಲ್‌ನಲ್ಲಿ ಮಾಡುತ್ತೇವೆ. ಇನ್ನೂ ನಾಲ್ಕು ದಿನ ಕಡಲೆಕಾಯಿ ಪರಿಷೆ ಇರುತ್ತದೆ. ಅಲ್ಲಿಯವರೆಗೂ ಇರುತ್ತೇವೆ” ಎಂದು ಈ ದಿನ.ಕಾಮ್‌ಗೆ ಸೇಲಂ ವ್ಯಾಪಾರಿ ವಿಜಯನ್ ಹೇಳಿದರು.

ಜನರು ಏನಂತಾರೆ?

“ಕಡಲೆಕಾಯಿ ಪರಿಷೆಯಲ್ಲಿ ಜಾತ್ರೆಯ ವಾತಾವರಣ ತುಂಬಿದೆ. ತುಂಬಾ ಖುಷಿಯಾಗುತ್ತಿದೆ. ಸ್ನೇಹಿತರ ಜತೆಗೆ ಪರಿಷೆಯಲ್ಲಿ ಸುತ್ತಾಡುವುದು ಒಂದು ರೀತಿ ಚೆನ್ನಾಗಿದೆ. ಎಷ್ಟು ಬೇಕೋ ಅಷ್ಟು ಕಡಲೆಕಾಯಿ ತಿನ್ನಬಹುದು. ಸುತ್ತಾಡಬಹುದು” ಎಂದು ಕಾಲೇಜು ವಿದ್ಯಾರ್ಥಿನಿ ರಶ್ಮಿ ಈ ದಿನ.ಕಾಮ್‌ಗೆ ಹೇಳಿದರು.

“ಕಳೆದ ಹಲವು ವರ್ಷಗಳಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಪ್ರತಿ ವರ್ಷವೂ ಪರಿಷೆಗೆ ಕುಟುಂಬದ ಸಮೇತ ಬರುತ್ತೇವೆ. ಬಸವಣ್ಣ ಆಶಿರ್ವಾದ ಪಡೆದು ಕಡಲೆಕಾಯಿ ಪ್ರಸಾದ ತೆಗೆದುಕ್ಕೊಳ್ಳುತ್ತೇವೆ. ಈ ವರ್ಷ ಕಡಲೆಕಾಯಿ ದರ ಜಾಸ್ತಿ ಆಗಿದೆ. ನನಗೆ ಹುರಿದ ಕಡಲೆಕಾಯಿ ತುಂಬಾ ಇಷ್ಟ. ಅಲ್ಲದೇ, ಮನೆಯ ಅಲಂಕಾರಿಕ ವಸ್ತುಗಳು ಸಹ ಚೆನ್ನಾಗಿವೆ. ಕಡಲೆಕಾಯಿ ಪರಿಷೆ ಖುಷಿ ನೀಡುತ್ತದೆ. ಹಾಗೇ ಎಲ್ಲ ಟೆನ್ಶನ್ ಕೂಡ ಮರೆಯುತ್ತದೆ” ಎಂದು ಈ ದಿನ.ಕಾಮ್‌ಗೆ ರಾಜಾಜಿನಗರದ ನಿವಾಸಿ ಸಂಗೀತಾ ತಿಳಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಟ ದ್ವಾರಕೀಶ್ ನಿಧನಕ್ಕೆ ಶಿವರಾಜ್‌ಕುಮಾರ್ ಸಂತಾಪ

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಮಂಗಳವಾರ ನಿಧನರಾದರು....

ದಾವಣಗೆರೆ | ಲೋಕಸಭಾ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಿಪಿಐ ಬೆಂಬಲ ಘೋಷಣೆ

ದೇಶಾದ್ಯಂತ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಇಂಡಿಯಾ ಒಕ್ಕೂಟದ...

ವಿಜಯೇಂದ್ರ, ಸಿಟಿ ರವಿ, ಪಿ.ರಾಜೀವ್‌ನಿಂದ ಬಿಜೆಪಿ ಹಾಳಾಗುತ್ತಿದೆ: ಮಾಲೀಕಯ್ಯ ಗುತ್ತೇದಾರ ಕಿಡಿ

ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ...