ಶಾಲಾ ಮಕ್ಕಳನ್ನು ಅನಧಿಕೃತವಾಗಿ ಓಮ್ನಿ ಕಾರ್‌ಗಳಲ್ಲಿ ಕರೆದುಕೊಂಡು ಹೋಗುತ್ತಿದ್ದ 15ಕ್ಕೂ ಹೆಚ್ಚು ವಾಹನಗಳನ್ನು ಅರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಲಾ ಮಕ್ಕಳನ್ನು ಅನುಮತಿಯಿಲ್ಲದ ವೈಟ್‌ಬೋರ್ಡ್ ಕಾರ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆ, ಮಂಗಳವಾರ ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
“ಬೆಂಗಳೂರಿನಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಸಂಚಾರದ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಮಕ್ಕಳಿಗೆ ಸುರಕ್ಷತೆ ಇಲ್ಲದ ವಾಹನಗಳಲ್ಲಿ ಅವರನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ. ಅದಕ್ಕೆ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ಆರ್ಟಿಓ ಜಂಟಿ ಆಯುಕ್ತೆ ಶೋಭಾ ಹೇಳಿದರು.
“ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಹಲವಾರು ವಾಹನಗಳ ದಾಖಲಾತಿಗಳು ಸರಿಯಾಗಿ ಇಲ್ಲ. ಬಹುತೇಕ ವಾಹನಗಳ ಟ್ಯಾಕ್ಸ್ ಕಟ್ಟಿಲ್ಲ. ಎಫ್‌ಸಿ ಇಲ್ಲ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲದಿದ್ದರೂ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಸಾರಿಗೆಯೇತರ ವಾಹನಗಳನ್ನು ಅನಧಿಕೃತವಾಗಿ ಬಳಸಿದ್ದಾರೆ. ಮಕ್ಕಳನ್ನು ಇಂತಹ ವಾಹನಗಳಲ್ಲಿ ಕಳಿಸುವಾಗ ಪೋಷಕರು ಗಮನ ಹರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? 14 ಕಡೆ ಲೋಕಾಯುಕ್ತ ದಾಳಿ: ಐದು ಮದ್ಯದಂಗಡಿ ಹೊಂದಿದ್ದ ಭೂಮಾಪನ ಇಲಾಖೆ ಅಧೀಕ್ಷಕ
“ಕೊರೊನಾ ಸಾಂಕ್ರಾಮಿಕ ರೋಗದ ಬಳಿಕ ಈಗತಾನೇ ಪುನರ್ಜನ್ಮ ಪಡೆದಿದ್ದೇವೆ. ವಾಹನ ಚಾಲಕರಿಗೆ ಹಲವಾರು ಸಮಸ್ಯೆಗಳಿವೆ. ಇದೀಗ ಆರ್‌ಟಿಒ ಅಧಿಕಾರಿಗಳು ಇದ್ದಕ್ಕಿದ್ದಂತೆ ರೇಡ್ ಮಾಡಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲೋ ಬೋರ್ಡ್ ವಾಹನಗಳಿಗೆ ಅರ್ಜಿ ಹಾಕಿದ್ದೇವೆ. ಆದರೆ, ಅನುಮತಿ ನೀಡಿಲ್ಲ. ನಮ್ಮ ವಾಹನಗಳನ್ನು ಬಿಡದೆ ಇದ್ದರೆ, ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದರು.