- ಎಕ್ಸ್‌ಪ್ರೆಸ್ ವೇ ಪ್ರವೇಶಿಸುವ ನಿರ್ಬಂಧಿತ ವಾಹನಗಳಿಗೆ ₹500 ದಂಡ
- ನಿರ್ಬಂಧಿತ ವಾಹನಗಳು ಸರ್ವೀಸ್ ರಸ್ತೆ ಬಳಸಿ ಪ್ರಯಾಣಿಸುವಂತೆ ಸೂಚನೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳು ಹೆಚ್ಚಾದ ಕಾರಣ ದ್ವಿಚಕ್ರ, ತ್ರಿಚಕ್ರ, ಟ್ಯಾಕ್ಟರ್ ಸೇರಿದಂತೆ ಇನ್ನಿತರ ವಾಹನಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಈ ನಿಯಮವು ಆಗಸ್ಟ್ 1ರಿಂದ ಜಾರಿಯಾಗಿದ್ದು, ಮೊದಲು ದಿನವೇ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸಿ ನಿರ್ಬಂಧಿತ ವಾಹನಗಳಿಂದ ₹68,500 ದಂಡ ಸಂಗ್ರಹಿಸಲಾಗಿದ್ದು, ಒಟ್ಟು 137 ಪ್ರಕರಣ ದಾಖಲಾಗಿವೆ.
ಎಕ್ಸ್‌ಪ್ರೆಸ್ ವೇಯಲ್ಲಿ ಸಂಚಾರ ನಡೆಸುತ್ತಿರುವ ವಾಹನಗಳನ್ನು ತಡೆದು ಸರ್ವೀಸ್ ರಸ್ತೆಯಲ್ಲಿ ಪ್ರಯಾಣಿಸುವಂತೆ ಪೊಲೀಸರು ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸವಾರರಿಗೆ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ, ಎಕ್ಸ್‌ಪ್ರೆಸ್ ವೇ ಪ್ರವೇಶ ಕೇಂದ್ರ ಮತ್ತು ಟೋಲ್ ಗೇಟ್‌ಗಳಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ನಿಷೇಧದ ಬಗ್ಗೆ ಬೋರ್ಡ್ ಹಾಕಲಾಗಿದೆ.
ಸ್ಕೂಟರ್‌ಗಳು, ಇತರ ದ್ವಿಚಕ್ರ ವಾಹನಗಳು, ಇ-ಕಾರ್ಟ್‌ಗಳು, ಇ-ರಿಕ್ಷಾಗಳು, ತ್ರಿಚಕ್ರ ವಾಹನಗಳು, ಮೋಟಾರುರಹಿತ ವಾಹನಗಳು, ಟ್ರ್ಯಾಕ್ಟರ್‌ಗಳು, ಮಲ್ಟಿ-ಆಕ್ಸಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು ಹಾಗೂ ಕ್ವಾಡ್ರಿಸೈಕಲ್‌ಗಳ ಸಂಚಾರಕ್ಕೆ ನಿರ್ಬಂಧಿಸಲು ಜುಲೈ 12ರಂದು ಎನ್‌ಎಚ್‌ಎಐ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 1 ರಿಂದ ಎಕ್ಸ್‌ಪ್ರೆಸ್ ವೇಯಲ್ಲಿ ಸಂಚರಿಸಲು ನಿರ್ಬಂಧಿಸಲಾಗಿದೆ.
ನಿರ್ಬಂಧದ ಅರಿವಿಲ್ಲದೆ ಅನೇಕ ದ್ವಿಚಕ್ರ ವಾಹನ ಸವಾರರು ಪಂಚಮುಖಿ ಗಣೇಶ ದೇವಸ್ಥಾನದ ಬಳಿ ನೈಸ್ ರಸ್ತೆ ಜಂಕ್ಷನ್ ನಂತರ ನಗರದ ಹೊರವಲಯದಲ್ಲಿ ಪ್ರಾರಂಭವಾಗುವ ಎಕ್ಸ್‌ಪ್ರೆಸ್ ವೇಗೆ ಪ್ರವೇಶಿಸಲು ಪ್ರಯತ್ನಿಸಿದರು. ಅವರನ್ನು ಪೊಲೀಸರು ಮತ್ತು ಎನ್‌ಎಚ್‌ಎಐ ಸಿಬ್ಬಂದಿ ತಡೆದು ಸರ್ವೀಸ್ ರಸ್ತೆಯಲ್ಲಿ ತೆರಳುವಂತೆ ಸೂಚನೆ ನೀಡಿದರು.
“ನಿಷೇಧವು ಮಂಗಳವಾರದಿಂದ ಜಾರಿಗೆ ಬಂದಿದೆ. ಅನೇಕ ವಾಹನ ಬಳಕೆದಾರರಿಗೆ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಈ ಸಂಚಾರ ನಿರ್ಬಂಧದ ಬಗ್ಗೆ ತಿಳಿದಿರಲಿಲ್ಲ. ನಿಷೇಧದ ಬಗ್ಗೆ ಅವರಿಗೆ ತಿಳಿಸಿದ್ದೇವೆ” ಎಂದು ಎನ್‌ಎಚ್‌ಎಐ ಸಿಬ್ಬಂದಿ ಹೇಳಿದರು.
ಇದೇ ವೇಳೆ, ದ್ವಿಚಕ್ರ ವಾಹನ ಸವಾರರು ಮತ್ತು ಗೂಡ್ಸ್ ಆಟೋಗಳ ಚಾಲಕರು ನಿರ್ಬಂಧದ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಿಷೇಧವು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆಯನ್ನು ಹೇಗೆ ತಡೆಯುತ್ತದೆ ಎಂದು ಪೊಲೀಸರನ್ನು ಪ್ರಶ್ನಿಸಿದರು.
“ದ್ವಿಚಕ್ರ ವಾಹನಗಳು ಮತ್ತು ಇತರ ವಾಹನಗಳು ಸರ್ವಿಸ್ ರಸ್ತೆಯನ್ನು ಬಳಸಲು ಹೇಳುತ್ತಿದ್ದಾರೆ. ಆದರೆ, ಸರ್ವೀಸ್ ರಸ್ತೆ ಎಲ್ಲಿದೆ? ಸರ್ವೀಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಿ ಸಂಚರಿಸುವುದು ಕಷ್ಟಕರವಾಗಿದೆ” ಎಂದು ಪ್ರಯಾಣಿಕ ಪ್ರಕಾಶ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಶೇ. 140 ಹೆಚ್ಚಳ
“ಎಕ್ಸ್‌ಪ್ರೆಸ್ ವೇ ಪ್ರವೇಶಿಸುವ ನಿರ್ಬಂಧಿತ ವಾಹನಗಳಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇಂದಿನಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪ್ರವೇಶ ಮತ್ತು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮಂಗಳವಾರ 137 ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಾಗಿವೆ. ₹68,500 ದಂಡ ವಿಧಿಸಲಾಗಿತದೆ. ಪ್ರವೇಶ ನಿರ್ಬಂಧವಿರುವ ಕಾರಣ ಸದರಿ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಪ್ರಯಾಣಿಸಬೇಕಾಗಿ ವಿನಂತಿ” ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಾರ್ತಿಕ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.